ವಿಮಾನ ಅಪಘಾತಗಳಲ್ಲಿ ಭಾಷೆ ಮತ್ತು ಪರಂಪರೆಯ ಪಾತ್ರ

This post was written by admin on September 11, 2009
Posted Under: Uncategorized

[ವಿಕ್ರಾಂತ ಕರ್ನಾಟಕದ ಸೆಪ್ಟೆಂಬರ್ 18,2009 ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ.
ಲೇಖನ ಸರಣಿಯ ಹಿಂದಿನ ಲೇಖನಗಳು:
ಮೊದಲನೆಯ ಲೇಖನ: "ಹೊರಗಣವರು" - ಯಶಸ್ಸಿಗೆ ಯಾರೆಲ್ಲಾ, ಏನೆಲ್ಲಾ ಕಾರಣ!
ಎರಡನೆಯದು: ಹುಟ್ಟಿದ ಘಳಿಗೆ ಸರಿ ಇರಬೇಕು...]
ಮೂರನೆಯದು: ದಶಸಹಸ್ರ ಗಂಟೆಯೆಂಬ ಪ್ರತಿಭಾ-ನಿಯಮ…
ನಾಲ್ಕನೆಯದು: ಯಾವುದಕ್ಕೂ “ಸಂಸ್ಕಾರ” ಇರಬೇಕ್ರಿ !]

ಅಡೆತಡೆಯಿಲ್ಲದೆ ಒಟ್ಟುಗೂಡುತ್ತ ಹೋಗುವ ಅವಕಾಶಗಳಿಂದಲೆ ಅಸಾಮಾನ್ಯ ಯಶಸ್ಸು ಹುಟ್ಟುತ್ತದೆ ಎನ್ನುವುದನ್ನು ಇಲ್ಲಿಯವರೆಗಿನ ಕೆಲವು ಉದಾಹರಣೆಗಳಿಂದ ನಾವು ನೋಡಿದ್ದೇವೆ. ಒಬ್ಬ ಮನುಷ್ಯ ಎಲ್ಲಿ ಮತ್ತು ಯಾವಾಗ ಹುಟ್ಟಿದ್ದು, ಆತನ ಹೆತ್ತವರು ಜೀವನೋಪಾಯಕ್ಕೆ ಮಾಡುತ್ತಿದ್ದ ಕೆಲಸ ಏನು, ಅವನು ಬೆಳೆದು ದೊಡ್ಡವನಾಗಿದ್ದು ಎಂತಹ ವಾತಾವರಣದಲ್ಲಿ ಎನ್ನುವಂತಹ ವಿವರಗಳು ಆತನ ಜೀವನದ ಯಶಸ್ಸಿನಲ್ಲಿ ಬಹಳ ಪ್ರಮುಖವಾದ ಪಾತ್ರ ವಹಿಸುತ್ತವೆ. ಇದೇ ವಾದವನ್ನು ಮುಂದುವರೆಸುತ್ತ ಮ್ಯಾಲ್ಕಮ್ ಗ್ಲಾಡ್‌ವೆಲ್ ಇನ್ನೊಂದು ಪ್ರಶ್ನೆಯನ್ನು ಹಾಕಿಕೊಳ್ಳುತ್ತಾನೆ. “ನಮ್ಮ ಪೂರ್ವಿಕರಿಂದ ನಾವು ವಂಶಪಾರಂಪರ್ಯವಾಗಿ ಪಡೆಯುವ ಸಂಪ್ರದಾಯಗಳು ಮತ್ತು ನಡವಳಿಕೆಗಳು ನಮ್ಮ ಯಶಸ್ಸಿನಲ್ಲಿ ಮೇಲಿನಂತಹುದೇ ಪ್ರಮುಖ ಪಾತ್ರವನ್ನು ವಹಿಸುತ್ತದೆಯೆ? ಜನ ಯಾಕೆ ಯಶಸ್ವಿಗಳಾಗುತ್ತಾರೆ ಎನ್ನುವುದನ್ನು ಈ ಸಾಂಸ್ಕೃತಿಕ ಪರಂಪರೆಯನ್ನು ಗಂಭೀರವಾಗಿ ತೆಗೆದುಕೊಂಡು ಅಧ್ಯಯನ ಮಾಡುವ ಮೂಲಕ ಕಂಡುಕೊಳ್ಳಲು ಸಾಧ್ಯವೆ? ಅದೇ ರೀತಿ, ತಮ್ಮ ಕೆಲಸವನ್ನು ಆ ಕೆಲಸಕ್ಕೆ ಯೋಗ್ಯವಾದ ರೀತಿಯಲ್ಲಿ ಮಾಡುವುದು ಹೇಗೆ ಎನ್ನುವ ವಿಚಾರಗಳನ್ನೂ ಈ ಮೂಲಕ ಅರಿತುಕೊಳ್ಳಲು ಸಾಧ್ಯವೆ?” “ಹೌದು,” ಎನ್ನುತ್ತಾನೆ ಗ್ಲಾಡ್‌ವೆಲ್.

ನಮ್ಮಲ್ಲಿ ಒಂದು ಗಾದೆ ಇದೆ, “ಹುಟ್ಟುಗುಣ ಸುಟ್ಟರೂ ಹೋಗದು.” ನಾನು ಇದನ್ನು ಪ್ರತಿಗಾಮಿ ಚಿಂತನೆಗೆ ಬಳಸಿಕೊಳ್ಳುವ ಅರ್ಥದಲ್ಲಿ, ಅಂದರೆ ಮನುಷ್ಯನ ಗುಣವನ್ನು ಆತನ ಜಾತಿ/ಸಮುದಾಯ/ಬಣ್ಣ ಮುಂತಾದುವಕ್ಕೆ ಹೊಂದಿಸಿ, ಒಬ್ಬರನ್ನು ಮೇಲುಕೀಳು ಮಾಡುವ, ಮತ್ತು ಆ ಮೂಲಕ ಅಸಮಾನ ವ್ಯವಸ್ಥೆಯನ್ನು ಹೇರುವ/ಪೋಷಿಸುವ ವಿಚಾರದ ಪರವಾಗಿ ಹೇಳುತ್ತಿಲ್ಲ. ಆದರೆ, ಆ ಗಾದೆ ಮಾತಿನಲ್ಲಿರುವ ಒಂದಂಶ ವಿಚಾರವನ್ನು, ಅಂದರೆ ’ಹುಟ್ಟುಗುಣ ಎನ್ನುವುದು ಇದೆ’ ಎನ್ನುವುದನ್ನು ಹೇಳಲಷ್ಟೆ ಇಲ್ಲಿ ಬಳಸುತ್ತಿದ್ದೇನೆ. ಈ ಹುಟ್ಟುಗುಣ ಎನ್ನುವುದೂ ಅಷ್ಟೆ, ನಮ್ಮ ಓದಿನಿಂದ, ವೈಯಕ್ತಿಕ ಅನುಭವದಿಂದ, ಜೀವನ ಕಲಿಸುವ ಪಾಠಗಳಿಂದ ಬದಲಾಗುತ್ತದೆ, ತೆಳುವಾಗುತ್ತದೆ, ಇಲ್ಲವೆ ಬಲವಾಗುತ್ತದೆ. ಆಗುವುದಿಲ್ಲ ಎನ್ನುವವರು ಮಾತ್ರ ಮೇಲಿನ ಗಾದೆಯನ್ನು ಪ್ರತಿಗಾಮಿ ಚಿಂತನೆಗೆ ಹಾಗು ಇನ್ನೊಬ್ಬರ ಅವಹೇಳನಕ್ಕೆ ಬಳಸುತ್ತಾರೆ.

’ನಮ್ಮ ಪರಂಪರೆಯಿಂದ ಅಥವ ಸಾಂಸ್ಕೃತಿಕ ಹಿನ್ನೆಲೆಯಿಂದ ಬರುವ ಕೆಲವು ನಡವಳಿಕೆಗಳು, ಹಾಗೆಯೆ ನಮ್ಮ ಪೂರ್ವಿಕರ ಭೌಗೋಳಿಕ ಪರಿಸರದಿಂದ ಪ್ರೇರಕವಾಗಿ ಬರುವ ಕೆಲವು ಮೂಲಪ್ರವೃತ್ತಿಗಳು ನಾವು ನಮ್ಮ ಪೂರ್ವಿಕರ ಪರಿಸರದಿಂದ ದೂರ ಇದ್ದರೂ ಅವು ಪ್ರಕಟವಾಗಬಹುದಾದ ಪರಿಸರದಲ್ಲಿ ಅಥವ ಸಮಯದಲ್ಲಿ ಪ್ರಕಟವಾಗುತ್ತವೆ,’ ಎನ್ನುವುದನ್ನು ಡೊವ್ ಕೊಹೆನ್ ಎನ್ನುವ ಮನೋವಿಜ್ಞಾನಿ ಅಧ್ಯಯನ ಮತ್ತು ಪ್ರಯೋಗದ ಮೂಲಕ ಸಾಬೀತು ಮಡುತ್ತಾನೆ. ಆ ಅಧ್ಯಯನವನ್ನು ಉಲ್ಲೇಖಿಸುತ್ತ ಗ್ಲಾಡ್‌ವೆಲ್ “ಹೊರಗಣವರು”ನಲ್ಲಿ ಬರೆಯುತ್ತಾನೆ: “ಸಾಂಸ್ಕೃತಿಕ ಸಂಪ್ರದಾಯಗಳು ಬಹಳ ಬಲಶಾಲಿಯಾದದ್ದು. ಅವುಗಳ ಬೇರು ಆಳವಾದದ್ದು ಮತ್ತು ಅವಕ್ಕೆ ಸುದೀರ್ಘವಾದ ಆಯಸ್ಸಿದೆ. ತಲೆಮಾರು ಕಳೆದು ತಲೆಮಾರು ಬಂದರೂ, ಆವು ತಲೆ ಎತ್ತಲು ಸಾಧ್ಯವಾಗಿದ್ದ ಆರ್ಥಿಕ, ಸಾಮಾಜಿಕ ಮತ್ತು ಜನಾಂಗೀಯ ಪರಿಸ್ಥಿತಿಗಳು ಈಗ ಇಲ್ಲದೇ ಹೋಗಿದ್ದರೂ, ಅವು ಬದುಕುಳಿಯುತ್ತವೆ. ಹಾಗೆಯೆ, ನಮ್ಮ ನಡವಳಿಕೆ ಮತ್ತು ಧೋರಣೆಗಳಲ್ಲಿ ಅವು ಎಷ್ಟು ಪ್ರಮುಖ ಪಾತ್ರ ವಹಿಸುತ್ತವೆ ಎಂದರೆ, ಅವನ್ನು ಅರ್ಥ ಮಾಡಿಕೊಳ್ಳದೆ ನಮಗೆ ನಮ್ಮ ಸುತ್ತಮುತ್ತಲ ಪ್ರಪಂಚ ಅರ್ಥವಾಗದು.”

ವಿಮಾನಯಾನ ಇದ್ದುದರಲ್ಲಿಯೆ ಸುರಕ್ಷಿತ ಪ್ರಯಾಣ ಎನ್ನುತ್ತವೆ ಅಂಕಿಅಂಶಗಳು. ನನ್ನ ಬಳಿ ಭಾರತದ ಅಂಕಿಅಂಶಗಳು ಇಲ್ಲದೆ ಇರುವುದರಿಂದ ಇಲ್ಲಿ ಅಮೆರಿಕದ ಅಂಕಿಅಂಶಗಳನ್ನು ಕೊಡುತ್ತೇನೆ. 2007ನೆ ಇಸವಿಯಲ್ಲಿ ಸುಮಾರು 7.7 ಕೋಟಿ ಅಮೆರಿಕನ್ನರು ವಿಮಾನಯಾನ ಮಾಡಿದ್ದರು. ಆ ವರ್ಷದ ಒಟ್ಟು ಪ್ರಯಾಣಿಕ ವಿಮಾನ ಅಪಘಾತಗಳ ಸಂಖ್ಯೆ 62. ಸತ್ತವರು, 44 ಜನ. ಆದರೆ, ಅದೇ ವರ್ಷ ಅಲ್ಲಿ ರಸ್ತೆ ಅಪಘಾತಗಳಲ್ಲಿ ಸತ್ತವರ ಸಂಖ್ಯೆ 44,000. ಇದನ್ನು ನಾವು ಬೇರೆಬೇರೆ ಕೋನದಿಂದ ವಿಶ್ಲೇಷಿಸಬಹುದು ಅಥವ ಟೀಕಿಸಬಹುದು. ಆದರೆ, ಬಹಳ ಗಂಭಿರ, ಮುತುವರ್ಜಿಯಿಂದ ಕೂಡಿದ ಉಸ್ತುವಾರಿಯಲ್ಲಿ ನಡೆಯುವ ವಿಮಾನ ಹಾರಾಟಗಳು ಇದ್ದುದರಲ್ಲಿಯೆ ಸುರಕ್ಷಿತ ಎನ್ನುವುದನ್ನು ಯಾವುದೂ ಅಲ್ಲಗಳೆಯದು.

ಅಮೆರಿಕದ ಯುನೈಟೆಡ್ ಏರ್‌ಲೈನ್ಸ್ ಪ್ರಪಂಚದ ಅತಿದೊಡ್ಡ ವಿಮಾನಯಾನ ಸಂಸ್ಥೆಗಳಲ್ಲಿ ಒಂದು. 1988 ರಿಂದ 1998 ರವರೆಗಿನ ಅವಧಿಯಲ್ಲಿ ಆ ಸಂಸ್ಥೆಯ ವಿಮಾನಗಳ ಅಪಘಾತದ ಅನುಪಾತ ಹೀಗಿದೆ: ನಲವತ್ತು ಲಕ್ಷ ಹಾರಾಟಗಳಿಗೆ ಒಂದು ಅಪಘಾತ. ಇದೇ ಅವಧಿಯಲ್ಲಿ ದಕ್ಷಿಣ ಕೊರಿಯಾ ದೇಶದ ಕೊರಿಯನ್ ಏರ್‌ಲೈನ್ಸ್‌ನ ಅಪಘಾತದ ಅನುಪಾತ, 2.3 ಲಕ್ಷ ಹಾರಾಟಗಳಿಗೆ ಒಂದು ಅಪಘಾತ. ಅಂದರೆ, ಯುನೈಟೆಡ್ ಏರ್‌ಲೈನ್ಸ್‌ನ 1 ಅಪಘಾತಕ್ಕೆ ಕೊರಿಯನ್ ಏರ್‌ಲೈನ್ಸ್ 17 ಅಪಘಾತಗಳನ್ನು ಕಾಣುತ್ತಿತ್ತು. 1999ರ ಸುಮಾರಿಗೆ ಕೊರಿಯನ್ ಏರ್‌ಲೈನ್ಸ್ ಯಾವ ಮಟ್ಟದ ಕುಖ್ಯಾತಿ ಪಡೆಯಿತೆಂದರೆ, ಹಲವು ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ಕೊರಿಯನ್ ಏರ್‌ಲೈನ್ಸ್‌ನೊಂದಿಗಿನ ತಮ್ಮ ಪಾಲುದಾರಿಕೆಯನ್ನು ಕಡಿದುಕೊಂಡವು. ಕೊರಿಯಾದಲ್ಲಿ ಅಮೆರಿಕ ಸರ್ಕಾರದ ಮಿಲಿಟರಿ ನೆಲೆ ಇದ್ದು, ಸುಮಾರು 28 ಸಾವಿರ ಅಮೆರಿಕದ ಸೈನಿಕರು ಅಲ್ಲಿರುತ್ತಾರೆ. ಆ ಯಾವ ಸೈನಿಕರೂ ಕೊರಿಯನ್ ಏರ್‌ಲೈನ್ಸ್‌ನಲ್ಲಿ ಪ್ರಯಾಣಿಸದಂತೆ ಅಮೆರಿಕದ ಮಿಲಿಟರಿ ಆದೇಶ ಹೊರಡಿಸಿ ನಿರ್ಬಂಧಿಸಿಬಿಟ್ಟಿತು. ಕೆನಡ ದೇಶವಂತೂ ಆ ಏರ್‌ಲೈನ್ಸ್‌ಗೆ ತನ್ನ ದೇಶದ ವಾಯುಪ್ರದೇಶದ ಮೇಲೆ ಹಾರಲು ಕೊಟ್ಟಿರುವ ಅನುಮತಿಯನ್ನು ಹಿಂತೆಗೆದುಕೊಳ್ಳುವ ಬಗ್ಗೆ ಯೋಚಿಸುತ್ತಿರುವುದಾಗಿ ತಿಳಿಸಿತು. ಸ್ವತಃ ದಕ್ಷಿಣ ಕೊರಿಯಾದ ಅಧ್ಯಕ್ಷ ತನ್ನ ಅಧ್ಯಕ್ಷೀಯ ವಿಮಾನವನ್ನು ಕೊರಿಯನ್ ಏರ್‌ಲೈನ್ಸ್‌ನಿಂದ ಅದರ ಪ್ರತಿಸ್ಪರ್ಧಿ ವಿಮಾನಯಾನ ಸಂಸ್ಥೆಗೆ ವರ್ಗಾಯಿಸಿಬಿಟ್ಟ.

ಈಗ? 2000 ದಿಂದೀಚೆಗೆ ಕೊರಿಯನ್ ಏರ್‌ಲೈನ್ಸ್ ಸುರಕ್ಷತೆಯ ವಿಚಾರದಲ್ಲಿ 180 ಡಿಗ್ರಿ ತಿರುವು ತೆಗೆದುಕೊಂಡಿದೆ. ಆ ವಿಚಾರದಲ್ಲಿ ಅದಕ್ಕೆ ಇತ್ತೀಚಿನ ವರ್ಷಗಳಲ್ಲಿ ಕೆಲವು ಪ್ರತಿಷ್ಠಿತ ಪ್ರಶಸ್ತಿಗಳೂ ಬಂದಿವೆ. ಇವತ್ತು ಇತರೆ ಯಾವುದೆ ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆಯ ವಿಮಾನಯಾನದಷ್ಟೆ ಸುರಕ್ಷಿತ ಕೊರಿಯಾ ಏರ್‌ಲೈನ್ಸ್‌ನಲ್ಲಿಯ ವಿಮಾನಯಾನ. ಅರೆ! ಇಷ್ಟು ಬೇಗ ಅದು ಹೇಗೆ ಅದು ಅಷ್ಟೊಂದು ಒಳ್ಳೆಯ ಹೆಸರು ಪಡೆಯಿತು? ಉತ್ತರ, ಕೊರಿಯನ್ ಏರ್‌ಲೈನ್ಸ್‌ನ ಸಿಬ್ಬಂದಿ ಮಾತನಾಡುವ ಭಾಷೆಯಲ್ಲಿದೆ. ಈಗ ಆ ವಿಮಾನಯಾನ ಸಂಸ್ಥೆಯ ಕಾಕ್‌ಪಿಟ್‌ನಲ್ಲಿ ಕೊರಿಯ ಭಾಷೆ ವರ್ಜ್ಯ. ಅಲ್ಲಿ ಇಂಗ್ಲಿಷ್ ಮಾತ್ರವೆ ಹೃದ್ಯಂ. ಆ ಒಂದೇ ಬದಲಾವಣೆ ಕೊರಿಯನ್ ಏರ್‌ಲೈನ್ಸ್‌ನ ಭವಿಷ್ಯವನ್ನೆ ಬದಲಾಯಿಸಿತು.

ಕೊರಿಯ ಸ್ಥಾನದಲ್ಲಿ ಇಂಗ್ಲಿಷ್? ಯಾಕೆ? ಮತ್ತು, ಅದು ಅಪಘಾತಗಳನ್ನು ನಿಯಂತ್ರಿಸುತ್ತದೆ ಎನ್ನುವ ಅಭಿಪ್ರಾಯಕ್ಕೆ ಆ ವಿಮಾನಯಾನ ಸಂಸ್ಥೆ ಬಂದದ್ದಾದರೂ ಹೇಗೆ?

ಈಗ ನಾವು ನಮ್ಮ ಕನ್ನಡ ಭಾಷೆಯ ಸಂಬೋಧನಾ ರೀತಿಗಳ ಬಗ್ಗೆ ಸ್ವಲ್ಪ ನೋಡೋಣ, ಮನೆಯ ಬಾಗಿಲಿನಲ್ಲಿರುವ ಒಬ್ಬ ವ್ಯಕ್ತಿಯನ್ನು ನಾವು ಹೇಗೆ ಒಳಗೆ ಕರೆಯುತ್ತೇವೆ? “ದಯವಿಟ್ಟು ಒಳಗೆ ಬನ್ನಿ”, “ಒಳಗೆ ಬನ್ನಿ”, “ಒಳಗೆ ಬಾ”, “ಬಾರೊ”, “ಬಾರೋ ಲೇ”,!!! ಹೊರಗಿರುವ ವ್ಯಕ್ತಿಯ ಸ್ಥಾನಮಾನ ಮತ್ತು ನಮ್ಮ ಸ್ಥಾನಮಾನ ಹಾಗು ಸಂಬಂಧದ ಮೇಲೆ ಇಬ್ಬರ ನಡುವೆ ಒಂದೆ ಕ್ರಿಯೆಗೆ ಬಳಸಲಾಗುವ ಪದಗಳು ಬದಲಾಗುತ್ತವೆ. ಕೊರಿಯ ಭಾಷೆಯಲ್ಲಿಯೂ ಹೀಗೆಯೆ. ಖಚಿತವಾಗಿ ಹೇಳಬೇಕೆಂದರೆ, ಇಬ್ಬರ ನಡುವಿನ ಮಾತುಕತೆಗೆ ಕೊರಿಯ ಭಾಷೆಯಲ್ಲಿ ಆರು ಸಂಬೋಧನಾ ರೀತಿಗಳಿವೆಯಂತೆ: ಔಪಚಾರಿಕ ಗೌರವ, ಅನೌಪಚಾರಿಕ ಗೌರವ, ಒರಟು, ಪರಿಚಿತ, ಸಲಿಗೆ, ಮತ್ತು ಸರಳ/ನೇರಮಾತು. ಇದರ ಜೊತೆಗೆ ಮೇಲುಕೀಳು, ದೊಡ್ಡವರು-ಚಿಕ್ಕವರು ಎನ್ನುವ ಅಂತರ ಕಾಯ್ದುಕೊಳ್ಳುವ, ತಗ್ಗಿಬಗ್ಗಿ ನಡೆಯುವ ಪಾಳೆಯಗಾರಿಕೆ ನಡವಳಿಕೆಯೂ ಇದೆ. ಇದನ್ನು ಕೊರಿಯಾದ ಭಾಷಾಶಾಸ್ತ್ರಜ್ಞ ಹೀಗೆ ವಿವರಿಸುತ್ತಾನೆ: “ಊಟಕ್ಕೆ ಕುಳಿತಾಗ ಹಿರಿಯ ಅಧಿಕಾರಿ ಕುಳಿತುಕೊಂಡು ಊಟ ಮಾಡಲು ಆರಂಭಿಸುವ ತನಕ ಕಿರಿಯ ಅಧಿಕಾರಿ ಕಾಯಬೇಕು. ಆದರೆ ಈ ನಿಯಮ ಹಿರಿಯ ಅಧಿಕಾರಿಗೆ ಅನ್ವಯಿಸುವುದಿಲ್ಲ. ಸಾಮಾಜಿಕವಾಗಿ ತನಗಿಂತ ಮೇಲಿರುವ ವ್ಯಕ್ತಿಯ ಮುಂದೆ ಕೆಳಗಿನವನು ಸಿಗರೇಟ್ ಸೇದುವ ಹಾಗಿಲ್ಲ. ಅದೇ ರೀತಿ, ತನಗಿಂತ ಮೇಲಿನವರ ಜೊತೆ ಮದ್ಯಪಾನಕ್ಕೆ ಕುಳಿತಾಗ ಕೆಳಗಿನ ವರ್ಗಕ್ಕೆ ಸೇರಿದ ವ್ಯಕ್ತಿ ತನ್ನ ಲೋಟವನ್ನು ಮುಚ್ಚಿಟ್ಟುಕೊಳ್ಳಬೇಕು ಮತ್ತು ಪಕ್ಕಕ್ಕೆ ತಿರುಗಿಕೊಂಡು ಕುಡಿಯಬೇಕು. ಮೇಲ್ವರ್ಗದವರನ್ನು ಎದುರುಗೊಂಡಾಗ ಬಾಗಿ ವಂದಿಸಬೇಕು. ಹಾಗೆಯೆ ತಾನಿರುವ ಸ್ಥಳದಲ್ಲಿ ಮೇಲಿನ ವರ್ಗಕ್ಕೆ ಸೇರಿದವನು ಕಾಣಿಸಿಕೊಂಡಾಗ ಎದ್ದು ನಿಲ್ಲಬೇಕು. ಅವರ ಮುಂದೆ ಹಾದುಹೋಗಬಾರದು. ಎಲ್ಲಾ ಸಾಮಾಜಿಕ ನಡವಳಿಕೆಗಳು ಹಿರಿತನ ಮತ್ತು ಸ್ಥಾನಮಾನಕ್ಕನುಗುಣವಾಗಿ ಜರುಗುತ್ತವೆ. ಕೊರಿಯಾದ ಗಾದೆಯೊಂದನ್ನು ಉದಾಹರಿಸುವುದಾದರೆ, ’ನೀರು ಕುಡಿಯಲು ಸಹ ರೀತಿನೀತಿಗಳಿವೆ’.”

ಇಷ್ಟೇ ಅಲ್ಲ. ಅಂತರ ಕಾಯ್ದುಕೊಳ್ಳುವ ಕಾರಣದಿಂದಾಗಿ ಅವರ ಮಾತುಗಳು ಸಹ ಸ್ಪಷ್ಟವಾಗಿ, ಸರಳವಾಗಿ ಇರುವುದಿಲ್ಲ. ಉದಾಹರಣೆಗೆ, ಒಬ್ಬ ಮೇಲಧಿಕಾರಿ ತನ್ನ ಕೆಳಗಿನವನ ಜೊತೆ ಮಾತಾಡುವ ರೀತಿ ಮತ್ತು ಅವರ ಮಾತುಕತೆಯನ್ನು ನಾವು ಅರ್ಥೈಸಿಕೊಳ್ಳಬೇಕಾದ ಬಗೆಯನ್ನು ಗಮನಿಸಿ:
ಮೇಲಧಿಕಾರಿ/ಯಜಮಾನ: ಓಹ್, ತುಂಬಾ ಚಳಿ. ಜೊತೆಗೆ ನನಗೆ ಹಸಿವೂ ಆಗುತ್ತಿದೆ.
[ಅರ್ಥ: ನೀನು ಯಾಕೆ ನನಗೆ ಏನಾದರು ಕುಡಿಸಲು ಅಥವ ತಿನ್ನಿಸಲು ಕರೆದುಕೊಂಡು ಹೋಗಬಾರದು?]
ಕೆಳಾಧಿಕಾರಿ/ನೌಕರ: ಸ್ವಲ್ಪ ಮದ್ಯ ಏನಾದರು ತೆಗೆದುಕೊಳ್ಳುತ್ತೀರ?
[ಅರ್ಥ: ನಿಮಗೆ ನಾನು ಮದ್ಯಪಾನ ಮಾಡಿಸಲು ಕರೆದುಕೊಂಡು ಹೋಗಬಯಸುತ್ತೇನೆ.]
ಮೇ.: ಪರವಾಗಿಲ್ಲ. ತೊಂದರೆ ತಗೊಬೇಡ.
[ಅರ್ಥ: ನೀನು ಇದನ್ನೆ ಮತ್ತೊಮ್ಮೆ ಹೇಳಿದರೆ ಒಪ್ಪಿಕೊಳ್ಳುತ್ತೇನೆ.]
ಕೆ.: ನಿಮಗೆ ಹಸಿವೂ ಆಗಿರಬೇಕು. ಊಟಕ್ಕೆ ಹೊರಗೆ ಹೋಗೋಣವೆ?
[ಅರ್ಥ: ನೀವು ನನ್ನಿಂದ ತಿಂಡಿ-ಪಾನ ತೆಗೆದುಕೊಳ್ಳುವಂತೆ ಒತ್ತಾಯಿಸುತ್ತಿದ್ದೇನೆ.]
ಮೇ.: ಹಾಗೇ ಮಾಡ್ಲಾ?
[ಅರ್ಥ: ನನಗೆ ಒಪ್ಪಿಗೆ ಇದೆ. ಇನ್ನು ಹೊರಡೋಣ.]

ಇದು ಕೇವಲ ಕೊರಿಯಾದ ಕತೆ ಅಲ್ಲ. ನಮ್ಮದೂ ಸೇರಿದಂತೆ ಅನೇಕ ಏಷ್ಯಾ ದೇಶಗಳ ಕತೆಯೂ ಇದೇ. ಹೀಗೆ ವಿವಿಧ ಅಧಿಕಾರಿಕ/ಸಾಮಾಜಿಕ ವರ್ಗಗಳಲ್ಲಿ ಕಾಯ್ದುಕೊಳ್ಳಲಾಗುವ ಅಂತರವನ್ನು “ಅಧಿಕಾರ-ಅಂತರ ಸೂಚಿ” (Power-Distance Index) ಎಂದು ಗುರುತಿಸಲಾಗುತ್ತದೆ. ಗ್ಲಾಡ್‌ವೆಲ್ “ಹೊರಗಣವರು”ನಲ್ಲಿ ಕೊರಿಯಾದ ವಿಮಾನವೊಂದು ಅಪಘಾತಕ್ಕೀಡಾಗುವ ಕೊನೆಯ ಕ್ಷಣಗಳಲ್ಲಿ ಕಾಕ್‌ಪಿಟ್‌ನಲ್ಲಿ ದಾಖಲಾದ ಸಂಭಾಷಣೆಯನ್ನು ಈ PDI ಆಧಾರದ ಮೇಲೆ ವಿಶ್ಲೇಷಿಸುತ್ತಾನೆ. ಜೊತೆಗೆ ಕೊಲಂಬಿಯಾ ದೇಶದ ವಿಮಾನವೊಂದು ನ್ಯೂಯಾರ್ಕ್ ಬಳಿ ಅಪಘಾತಕ್ಕೀಡಾದ ಘಟನೆಯನ್ನೂ ವಿಶ್ಲೇಷಿಸುತ್ತಾನೆ. ಈ ಎರಡೂ ಸಂದರ್ಭಗಳಲ್ಲಿ ಕೆಳಗಿನ ಅಧಿಕಾರಿ ತನಗಿಂತ ಹಿರಿಯ ಅಧಿಕಾರ ಸ್ಥಾನದಲ್ಲಿರುವ ಪೈಲಟ್‌ಗೆ ನೇರವಾಗಿ ಮತ್ತು ಸ್ಪಷ್ಟವಾಗಿ ಮಾಹಿತಿ ಕೊಡದೆ ಆತನ ಜ್ಯೇಷ್ಟತೆಯನ್ನು ಗೌರವಿಸುವುದು ಕಾಣುತ್ತದೆ. ಕೊಲಂಬಿಯಾದ ಫ್ಲೈಟ್-ಇಂಜಿನಿಯರ್ ಅಂತೂ ತನ್ನ ವಿಮಾನದಲ್ಲಿ ಇಂಧನ ಕಾಲಿ ಆಗಿದ್ದರೂ ಅದನ್ನು ಸ್ಪಷ್ಟವಾಗಿ ಏರ್‌ಪೋರ್‍ಟ್‌ನ ನಿಯಂತ್ರಣ ಗೋಪುರಕ್ಕೆ ತಿಳಿಸದೆ ಹೋಗುತ್ತಾನೆ. ಅಮೆರಿಕ ಮತ್ತಿತರ ಕೆಲವು ದೇಶಗಳಲ್ಲಿ ಈ ಅಧಿಕಾರಿಕ ಅಂತರ ಕಮ್ಮಿ. ಆದರೆ ಏಷ್ಯಾದ ಹಲವಾರು ರಾಷ್ಟ್ರಗಳಲ್ಲಿ ಮತ್ತು ಕೊಲಂಬಿಯಾ ಒಳಗೊಂಡಂತೆ ತೃತೀಯ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಈ ಅಂತರ ಜಾಸ್ತಿ. ಈ ಅಂತರವೆ ವಿಮಾನ ಅಪಘಾತಗಳಂತಹ ತುರ್ತು ಪರಿಸ್ಥಿಗಳಲ್ಲಿ ನಿರ್ಣಾಯಕವಾಗಿ ಪರಿಣಮಿಸುತ್ತದೆ.

ಈಗ ಮತ್ತೊಮ್ಮೆ ಕೊರಿಯನ್ ಏರ್‌ಲೈನ್ಸ್‌ನ ವಿಚಾರಕ್ಕೆ ಬರೋಣ. ತನ್ನ ಕುಖ್ಯಾತಿಯನ್ನು ತೊಲಗಿಸಿಕೊಳ್ಳಲು ಮತ್ತು ಅಪಘಾತಗಳಾಗದ ಹಾಗೆ ನೋಡಿಕೊಳ್ಳಲು ಆ ಏರ್‌ಲೈನ್ಸ್ ೨೦೦೦ರಲ್ಲಿ ಒಬ್ಬ ಯೂರೋಪಿಯನ್ ಅಧಿಕಾರಿಯನ್ನು ತನ್ನ ವಿಮಾನ ಹಾರಾಟ ವಿಭಾಗದ ಉಸ್ತುವಾರಿಗೆ ನೇಮಿಸಿತು. ಕೊರಿಯನ್ನರ ಸಂಪ್ರದಾಯಗಳು ಮತ್ತು ಅವರು ಭಾಷೆಯಲ್ಲಿಯೂ ಅಂತರ ಕಾಯ್ದುಕೊಳ್ಳುವ ವಿಚಾರವನ್ನು ಆತ ಗಮನಿಸಿದ. ಕೊರಿಯ ಏರ್‌ಲೈನ್ಸ್‌ನ ಬಹುತೇಕ ಸಿಬ್ಬಂದಿ ಯೋಗ್ಯರೂ, ವೃತ್ತಿಪರರೂ ಆಗಿದ್ದರು. ಆದರೆ ಅವರ ಅಂತರ ಕಾಯ್ದುಕೊಳ್ಳುವ ಪರಂಪರೆ ಮತ್ತು ಅದಕ್ಕಿರುವ ಭಾಷೆಯ ಒತ್ತಾಸೆ ಆತನಿಗೆ ಮುಖ್ಯ ಲೋಪವಾಗಿ ಕಾಣಿಸಿತು. ಪೈಲಟ್‌ಗಳ ಮತ್ತು ವಿಮಾನಚಾಲನಾ ಸಿಬ್ಬಂದಿಯ ಕರ್ತವ್ಯ ತಮ್ಮ ಸಂಪ್ರದಾಯಗಳನ್ನು ಪಾಲಿಸುವುದಲ್ಲ. ಸುರಕ್ಷಿತವಾಗಿ ವಿಮಾನ ಚಾಲನೆ ಮಾಡುವುದು. ಅದಕ್ಕಾಗಿ ಆ ಯೂರೋಪಿಯನ್ ಅಧಿಕಾರಿ ಅಂದಿನಿಂದ ಕೊರಿಯನ್ ವಿಮಾನದೊಳಗಿನ ಭಾಷೆಯನ್ನು ಇಂಗ್ಲಿಷ್‌ಗೆ ಬದಲಾಯಿಸಿಬಿಟ್ಟ. ಅದನ್ನು ಸ್ಪಷ್ಟವಾಗಿ ಕಾರ್ಯಕ್ಕಿಳಿಸಿದ. ತಮ್ಮ ವೃತ್ತಿ ಒತ್ತಾಯಿಸುವ ರೀತಿನೀತಿಗಳನ್ನು ಪಾಲಿಸಲು ಆಗದಂತೆ ತಮಗೆ ತಡೆಯೊಡ್ಡುತ್ತಿದ್ದ ಆ ಪೈಲಟ್‌ಗಳ ದೇಸಿ-ಸಂಪ್ರದಾಯಗಳಿಂದ ಅವರನ್ನು ಆಚೆಗೆ ತಂದು ಸುರಕ್ಷಿತ ವಿಮಾನಚಾಲನೆಗೆ ಅಗತ್ಯವಾದ ಶಿಕ್ಷಣ ಕೊಟ್ಟ. ಒಂದು ರೀತಿಯಲ್ಲಿ ಅವರ ಸಂಪ್ರದಾಯಗಳನ್ನು ಮಾರ್ಪಡಿಸಿದ. ಅಲ್ಲಿಂದೀಚೆಗೆ ಆ ಏರ್‌ಲೈನ್ಸ್‌ನ ದಿಕ್ಕೆ ಬದಲಾಯಿಸಿತು. ಒಬ್ಬ ವ್ಯಕ್ತಿಯ ಸಾಂಸ್ಕೃತಿಕ ಹಿನ್ನೆಲೆಯನ್ನು, ಆತ ಬೆಳೆದುಬಂದಿರುವ ಪರಂಪರೆ ಮತ್ತು ಆತನ ಸುತ್ತಮುತ್ತಲ ಸಂಪ್ರದಾಯಗಳನ್ನು ಅರ್ಥ ಮಾಡಿಕೊಂಡರೆ ಆಗ ಆತ ಕೈಗೊಂಡಿರುವ ವೃತ್ತಿಗೆ ಅವಶ್ಯವಾಗಿ ಬೇಕಾದ ಮಾರ್ಪಾಡುಗಳನ್ನು ಕಲಿಸುವುದು ಸುಲಭವಾಗುತ್ತದೆ.

(ಮುಂದುವರೆಯುವುದು…)

ಅಧಿಕಾರದ ಮುಂದೆ ಸತ್ಯ ನುಡಿಯಲಾಗದ ಪರಂಪರೆ ನಮ್ಮದು!

ಆಂಧ್ರದಲ್ಲಿ ಕಳೆದ ವಾರ ಘಟಿಸಿದ ಹೆಲಿಕಾಪ್ಟರ್ ಅಪಘಾತ ಅಲ್ಲಿ ರಾಜಕೀಯ ಮತ್ತು ಸಾಮಾಜಿಕ ವಿಪ್ಲವವನ್ನೆ ಸೃಷಿಸ್ಟಿದೆ. ಈ ಹೆಲಿಕಾಪ್ಟರ್ ಅಥವ ಸಣ್ಣ ವಿಮಾನಗಳ ಅಪಘಾತಗಳು ನಮ್ಮಲ್ಲಿ ಅಪರೂಪದ ವಿದ್ಯಮಾನ ಅಲ್ಲ. ಪ್ರತಿ ವರ್ಷ ಇಂತಹವು ಆಗುತ್ತಲೆ ಇವೆ. ವಿಶೇಷವಾಗಿ ಪ್ರಭಾವಶಾಲಿಗಳ ವಿಮಾನಗಳೆ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಕ್ಕೀಡಾಗುತ್ತಿವೆ. ನನ್ನ ಪ್ರಕಾರ ಈ ಅಪಘಾತಗಳಲ್ಲಿ ದೋಷದ ಹೆಚ್ಚಿನ ಪಾಲು ಇರುವುದು ನಮ್ಮ ಸಂಸ್ಕೃತಿಯಲ್ಲ್ಲಿ. ಅದು, ಅಧಿಕಾರವನ್ನು ಎದುರಿಸಲಾಗದ ಮತ್ತು ಅದರ ಮುಂದೆ ಸತ್ಯವನ್ನು ನುಡಿಯಲಾಗದ ನಮ್ಮ ಅಸಾಮರ್ಥ್ಯದ ಪರಂಪರೆಯಲ್ಲಿ.

ಇಲ್ಲೊಂದು ಉತ್ಪ್ರೇಕ್ಷೆ ಎನ್ನಬಹುದಾದ ವಾಕ್ಯ ಬರೆಯುತ್ತೇನೆ. ಬಹುಶಃ ಅಮೆರಿಕದಲ್ಲಿ ಒಂದು ದಿನ ಎಷ್ಟು ವಿಮಾನಗಳು ಹಾರಾಡುತ್ತವೊ, ಭಾರತದಲ್ಲಿ ಇಡೀ ವರ್ಷಕ್ಕೆ ಅಷ್ಟೊಂದು ವಿಮಾನಗಳು ಹಾರಾಡಲಾರವು. ಅಂಕಿಅಂಶಗಳಿಲ್ಲದ ಕಾರಣ ಇದನ್ನು ಉತ್ಪ್ರೇಕ್ಷೆ ಎನ್ನುತ್ತಿದ್ದೇನೆಯೆ ಹೊರತು ನನ್ನ ಸಾಮಾನ್ಯ ಜ್ಞಾನದ ಪ್ರಕಾರ ಇದು ಉತ್ಪ್ರೇಕ್ಷೆ ಅಲ್ಲ ಎಂತಲೆ ಭಾವಿಸುತ್ತೇನೆ. ಆದರೆ, ಅಮೆರಿಕದಲ್ಲಿ ಆಗುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನಮ್ಮಲ್ಲಿ ಅಪಘಾತಗಳಾಗುತ್ತಿವೆ. ನಮ್ಮ ಅಧಿಕಾರಸ್ಥರು, ಶ್ರೀಮಂತರು, ರಾಜಕಾರಣಿಗಳು, ಎಲ್ಲರಿಗೂ ತಮ್ಮ ಸ್ಥಾನಮಾನಕ್ಕನುಗುಣವಾಗಿ ಅಹಂಕಾರ ಆವರಿಸಿಕೊಂಡುಬಿಡುತ್ತದೆ. ಅವರ ಮರ್ಜಿಗೆ ಅನುಸಾರವಾಗಿ ಹವಾಮಾನ ಬಗಲಾಗಬೇಕೆಂದು, ನಿಯಮಗಳನ್ನು ಮುರಿಯಬಹುದೆಂದು, ವಿಮಾನಗಳು ಹಾರಾಡಬೇಕೆಂದು ಬಯಸುತ್ತಾರೆ. ಇನ್ನು ವಿಮಾನಯಾನ ಸಂಸ್ಥೆಗಳು ಮತ್ತು ಪೈಲಟ್‌ಗಳು ತಮ್ಮ ಹಣಗಳಿಕೆಯ ಸಂಬಂಧಗಳನ್ನು ಕೆಡಿಸಿಕೊಳ್ಳದೆ ಇರಲು ಮತ್ತು ಕೆಲಸ ಕಳೆದುಕೊಳ್ಳದೆ ಇರಲು ಪ್ರತಿಕೂಲ ಸ್ಥಿತಿಯಲೂ ಗುಲಾಮರಂತೆ ನಡೆದುಕೊಳ್ಳುತ್ತಾರೆ. ಅಧಿಕಾರ ಸ್ಥಾನದ ಮಹಿಮಾವಳಿಗೆ ಮತ್ತು ಹಾವಳಿಗೆ ಬೆದರಿ ಅವರ ಪ್ರಾಣವನ್ನೂ ಕಳೆಯುವುದಲ್ಲದೆ ತಮ್ಮ ಪ್ರಾಣವನ್ನೂ ಕಳೆದುಕೊಳ್ಳುತ್ತಾರೆ. ನಮಗೆ ಇಲ್ಲಿ ಭಾಷೆ ತೊಡಕಾಗಿದೆ ಎಂದು ನನಗನ್ನಿಸುತ್ತಿಲ್ಲ. ತೊಡಕಿರುವುದು, ಸತ್ಯವನ್ನು ನುಡಿಯುವ ನಮ್ಮ ಸಾಮರ್ಥ್ಯದಲ್ಲಿ. ಅಧಿಕಾರ ಸ್ಥಾನವನ್ನು ಎದುರಿಸಲಾಗದ ಭೀತ ಮನಸ್ಥಿತಿಯಲ್ಲಿ.

ಮುಂದಿನ ವಾರ: ಭತ್ತಕ್ಕೂ-ಗಣಿತಕ್ಕೂ ಏನು ಸಂಬಂಧ?

ಲೇಖನ ಸರಣಿಯ ಇದುವರೆಗಿನ ಲೇಖನಗಳು:

Reader Comments

Add a Comment

required, use real name
required, will not be published
optional, your blog address