ಗಣಿತಕ್ಕೂ ಭಾಷೆಗೂ, ಗಣಿತಕ್ಕೂ ಭತ್ತದ ಕೃಷಿಗೂ ಎಲ್ಲಿಂದೆಲ್ಲಿಯ ಸಂಬಂಧ?

This post was written by admin on September 17, 2009
Posted Under: Uncategorized

[ವಿಕ್ರಾಂತ ಕರ್ನಾಟಕದ ಸೆಪ್ಟೆಂಬರ್ 25,2009 ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ.
ಲೇಖನ ಸರಣಿಯ ಹಿಂದಿನ ಲೇಖನಗಳು:
ಮೊದಲನೆಯ ಲೇಖನ: "ಹೊರಗಣವರು" - ಯಶಸ್ಸಿಗೆ ಯಾರೆಲ್ಲಾ, ಏನೆಲ್ಲಾ ಕಾರಣ!
ಎರಡನೆಯದು: ಹುಟ್ಟಿದ ಘಳಿಗೆ ಸರಿ ಇರಬೇಕು...]
ಮೂರನೆಯದು: ದಶಸಹಸ್ರ ಗಂಟೆಯೆಂಬ ಪ್ರತಿಭಾ-ನಿಯಮ…
ನಾಲ್ಕನೆಯದು: ಯಾವುದಕ್ಕೂ “ಸಂಸ್ಕಾರ” ಇರಬೇಕ್ರಿ !]
ಐದನೆಯದು: ವಿಮಾನ ಅಪಘಾತಗಳಲ್ಲಿ ಭಾಷೆ ಮತ್ತು ಪರಂಪರೆಯ ಪಾತ್ರ ]

ಕೆಲವೊಂದು ಕೆಲಸಗಳನ್ನು ಪರಿಣಾಮಕಾರಿಯಾಗಿ ಮಾಡುವಲ್ಲಿ ಕೆಲವು ಸಂಪ್ರದಾಯಗಳು ಮತ್ತು ಭಾಷೆಗಳು ಹೇಗೆ ಅನಾನುಕೂಲ ಒಡ್ಡುತ್ತವೆ ಮತ್ತೆ ಕೆಲವೊಂದು ಹೇಗೆ ಗುಣಾತ್ಮಕವಾಗಿ ಪರಿಣಮಿಸುತ್ತವೆ ಎನ್ನುವುದನ್ನು ಹಿಂದಿನ ಲೇಖನದಲ್ಲಿ ನೋಡಿದೆವು. ಒಂದು ಸಮುದಾಯದ ಅಥವ ಮನುಷ್ಯರ ಯಶಸ್ಸಿನಲ್ಲಿ ಅವರ ಸಾಂಸ್ಕೃತಿಕ ಹಿನ್ನೆಲೆ ಯಾ ಪರಂಪರೆ ಎಷ್ಟೊಂದು ಪ್ರಮುಖ ಪಾತ್ರ ವಹಿಸುತ್ತದೆ ಎನ್ನುವ ಒಂದು ಒಳನೋಟ ನಮಗೆ ಆ ಮೂಲಕ ಗೊತ್ತಾಯಿತು. ಇದೇ ಆಲೋಚನಾ ಸರಣಿಯನ್ನು ಗ್ಲಾಡ್‌ವೆಲ್ ತನ್ನ “ಹೊರಗಣವರು”ನಲ್ಲಿ ವಿಸ್ತರಿಸುತ್ತಾ, ಕೆಲವೊಂದು ಸಮುದಾಯಗಳು ಗಣಿತದಲ್ಲಿ ಇತರೆ ಸಮುದಾಯದವರಿಗಿಂತ ಹೆಚ್ಚಿನ ಅಥವ ಸುಲಭ ಸಾಧನೆ ಮಾಡುತ್ತಾರಲ್ಲ, ಯಾಕಿರಬಹುದು ಎಂದು ವಿಶ್ಲೇಷಿಸುತ್ತಾನೆ. ನಿಮಗೆ ಗೊತ್ತಿರಬಹುದು. ಏಷ್ಯನ್ನರು (ಅಂದರೆ ಚೀನಾದವರಂತೆ ಮುಖಚರ್ಯೆ ಇರುವ ಪೂರ್ವಏಷ್ಯನ್ನರು ಚೀನಾ, ಜಪಾನ್, ಕೊರಿಯ, ಸಿಂಗಪುರ್, ಇತ್ಯಾದಿ ದೇಶದವರು) ಸಾಮಾನ್ಯವಾಗಿ ಪ್ರಪಂಚದ ಬೇರೆಲ್ಲರಿಗಿಂತ ಗಣಿತದಲ್ಲಿ ಮುಂದು ಎನ್ನುವ ಒಂದು ಸಾಮಾನ್ಯ ನಂಬಿಕೆ ಜಾಗತಿಕ ವಲಯದಲ್ಲಿದೆ. ಅದನ್ನು ನಿರೂಪಿಸಲು ಅನೇಕ ಅಧ್ಯಯನಗಳೂ ಆಗಿವೆ. ಕೆಲವರು ಇದಕ್ಕೆ ಅವರ ಹೆಚ್ಚಿನ IQ ಕಾರಣ ಎನ್ನುತ್ತಾರೆ. ಮತ್ತೆ ಕೆಲವರು, ಈ ಏಷ್ಯನ್ನರ IQ ಇತರರಿಗಿಂತ ಹೇಳಿಕೊಳ್ಳುವಷ್ಟು ಹೆಚ್ಚೆನೂ ಅಲ್ಲ; ಆದರೆ ಅವರಿಗೆ ಗಣಿತ ಸುಲಭ ಎನ್ನುವುದು ನಿಜ, ಎಂದು ಒಪ್ಪಿಕೊಳ್ಳುತ್ತಾರೆ. ಆದರೆ ಮ್ಯಾಲ್ಕಮ್ ಗ್ಲಾಡ್‌ವೆಲ್ ಗಣಿತ ಮತ್ತು ಏಷ್ಯನ್ನರಿಗೆ ಇರುವ ಸಂಬಂಧವನ್ನು ಹುಡುಕುವುದು ಅವರ ವಂಶವಾಹಿನಿ ತಂತುಗಳಲ್ಲಿ ಅಥವ IQಗಳಲ್ಲಿ ಅಲ್ಲ. ಬದಲಿಗೆ ಅವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಂಪರೆಯಲ್ಲಿ.

ಈಗ ಕೆಳಗಿನ ಅಂಕಿಗಳನ್ನು ಒಮ್ಮೆ ಗಮನಿಸಿ: 4, 8, 5, 3, 9, 7, 6. ಇವನ್ನು ಗಟ್ಟಿಯಾಗಿ ಓದಿ. ನಂತರ ಆ ಅಂಕಿಗಳತ್ತ ನೋಡದೆ ಬೇರೆಡೆ ನೊಡುತ್ತ ಈ ಅಂಕಿಗಳನ್ನು ಅದೇ ಅನುಕ್ರಮದಲ್ಲಿ ಮೌನವಾಗಿ ಬಾಯಿಪಾಠ ಮಾಡಿಕೊಳ್ಳಿ. ನಂತರ ಒಮ್ಮೆ ಜೋರಾಗಿ ಹೇಳಿ.

ಈ ಉದಾಹರಣೆ ಕೊಡುತ್ತ ಗ್ಲಾಡ್‌ವೆಲ್ ಹೇಳುತ್ತಾನೆ: “ನೀವು ಇಂಗ್ಲಿಷ್ ಮಾತನಾಡುವವರಾದರೆ, ಮೇಲಿನ ಅಂಕಿಗಳನ್ನು ಅದೇ ಅನುಕ್ರಮದಲ್ಲಿ ನೆನಪಿಟ್ಟುಕೊಳ್ಳುವ ಸಾಧ್ಯತೆ ಶೇಕಡ ೫೦. ಅದೇ ನೀವು ಚೀನೀ ಅದರೆ, ನಿಮಗಿದು ಪ್ರತಿಯೊಂದು ಬಾರಿಯೂ ಸಾಧ್ಯ. ಯಾಕಿರಬಹುದು? ಅಂಕಿಗಳು ಸುಮಾರು ಎರಡು ಸೆಕೆಂಡುಗಳಷ್ಟು ಅವಧಿಯ ಜ್ಞಾಪಕ ಸುರುಳಿಯಲ್ಲಿ ನಮ್ಮ ಮೆದುಳಿನಲ್ಲಿ ಸಂಗ್ರಹಿಸಲ್ಪಡುತ್ತವೆ. ಆ ಎರಡು ಸೆಕೆಂಡುಗಳ ಅವಧಿಯಲ್ಲಿ ಹೇಳಬಹುದಾದದ್ದನ್ನು ಅಥವ ಓದಿದ್ದನ್ನು ನಾವು ಬಹಳ ಯಶಸ್ವಿಯಾಗಿ ನೆನಪಿಟ್ಟುಕೊಳ್ಳಬಲ್ಲೆವು. ಚೀನೀ ಭಾಷಿಕರು ಆ ಮೇಲಿನ ಅಂಕಿಗಳನ್ನು ಪ್ರತಿ ಸಲವೂ ತಪ್ಪಿಲ್ಲದೆ ಹೇಳಲು ಕಾರಣ, ಆ ಎಲ್ಲಾ ಏಳು ಅಂಕಿಗಳನ್ನು ಎರಡು ಸೆಕೆಂಡುಗಳ ಕಾಲಾವಧಿಯಲ್ಲಿ ಹೇಳಲು ಅವರಿಗೆ ಅವರ ಭಾಷೆಯಲ್ಲಿ ಸಾಧ್ಯವಿದೆ. ಆದರೆ ಅದು ಇಂಗ್ಲಿಷ್ ಭಾಷೆಯಲ್ಲಿ ಸುಲಭವಲ್ಲ.”

ಇಲ್ಲಿ ನಮ್ಮ ಕನ್ನಡವನ್ನೂ ನಾವು ಹೆಚ್ಚುಕಮ್ಮಿ ಇಂಗ್ಲಿಷ್‌ನೊಂದಿಗೆ ಸಮೀಕರಿಸಿಕೊಳ್ಳಬಹುದು. ನಮಗೂ ಮೇಲಿನ ಅಂಕಿಗಳನ್ನು ಒಂದೇ ಸಲಕ್ಕೆ ನೆನಪಿಟ್ಟುಕೊಳ್ಳುವುದು ಸುಲಭವಲ್ಲ. ನಮ್ಮಂತಲ್ಲದೆ, ಚೀನೀ ಅಂಕಿಗಳು ಬಹಳ ಸಣ್ಣ ಕಾಲಾವಧಿಯಲ್ಲಿ ಉಚ್ಚರಿಸಲ್ಪಡಬಲ್ಲವು. ಅವರ ಬಹುತೇಕ ಅಂಕಿಗಳು ಕಾಲು ಸೆಕೆಂಡಿನಲ್ಲಿ ಒಂದು ಅಂಕಿಯನ್ನು ಉಚ್ಚರಿಸುವಷ್ಟು ಸಣ್ಣ ಪದಗಳು. ನಮ್ಮ ಅಂಕಿಗಳ ಪದಗಳನ್ನು ಗಮನಿಸಿ: ಸೊನ್ನೆ, ಒಂದು, ಎರಡು, . . . ಒಂಬತ್ತು,… ಮಾತ್ರಾಗಣದ ಲೆಕ್ಕದಲ್ಲಿ ಹೇಳಬಹುದಾದರೆ ಸೊನ್ನೆಯಿಂದ ಒಂಬತ್ತರವರೆಗಿನ ಯಾವೊಂದು ಕನ್ನಡ ಅಂಕಿಯ ಮಾತ್ರೆ ಮೂರಕ್ಕಿಂತ ಕಮ್ಮಿ ಇಲ್ಲ. “ಒಂಬತ್ತು”ವಿನ ಮಾತ್ರಾಗಣ ಐದನ್ನು ಮುಟ್ಟುತ್ತದೆ. ಆದರೆ ಚೀನೀ ಭಾಷೆಯ ನಾಲ್ಕೈದು ಅಂಕಿಗಳ ಮಾತ್ರಾಗಣ ಒಂದಕ್ಕೇ ನಿಲ್ಲುತ್ತದೆ. ಹೆಚ್ಚೆಂದರೆ ಮೂರು. (ಉದಾ: 1 ಕ್ಕೆ ‘ಈ’, 4 ಕ್ಕೆ ‘ಸಿ’, 7 ಕ್ಕೆ ‘ಕಿ’, 9 ಕ್ಕೆ ‘ಜ್ಯೊ’,…) ನಮಗೂ ಮತ್ತು ಚೀನಾದವರೆಗೂ ಇರುವ ಜ್ಞಾಪಕಶಕ್ತಿಯ ವ್ಯತ್ಯಾಸ ಸಂಪೂರ್ಣವಾಗಿ ಈ ಅಂಕಿಗಳ ಉಚ್ಚಾರಣೆಯ ಕಾಲಾವಧಿಯ ಮೇಲೆ ತೀರ್ಮಾನವಾಗಿದೆ. ಅವರು ಅಂಕಿಗಳನ್ನು ಪ್ರಪಂಚದ ಇತರೆಲ್ಲರಿಗಿಂತ ಯಶಸ್ವಿಯಾಗಿ ನೆನಪಿಟ್ಟುಕೊಳ್ಳಬಲ್ಲರು.

ಇಷ್ಟೇ ಅಲ್ಲ. ಅವರಿಗೂ ಮತ್ತು ನಮಗೂ (ಹಾಗೆಯೆ ಇಂಗ್ಲಿಷಿಗೂ) ಇನ್ನೂ ಗಂಭೀರವಾದ ಭಿನ್ನತೆ ಒಂದಿದೆ. ಹತ್ತರ ನಂತರ ಹನ್ನೊಂದು, ಆಮೇಲೆ ಹನ್ನೆರಡು, ಆಮೇಲೆ? ಹದಿಮೂರು. ಯಾಕೆ ಅದು ಹನ್ಮೂರು ಅಲ್ಲ? ನಂತರ? ಹದಿನಾಲ್ಕು, ಹದಿನೈದು, ಹದಿನಾರು, ಹದಿನೇಳು, ಹದಿನೆಂಟು,… ಆಮೇಲೆ? ಹತ್ತೊಂಬತ್ತು. !? ಇಪ್ಪತ್ತರ ನಂತರ ಮಾತ್ರ ಒಂದು ಅನುಕ್ರಮ ಇದೆ. ಇಪ್ಪತ್ತೊಂದು, ಇಪ್ಪತ್ತೆರಡು, . . . ಇಪ್ಪತ್ತೊಂಬತ್ತು. ಆದರೆ ಹತ್ತರಿಂದ ಇಪ್ಪತ್ತರ ತನಕದ ಪದಗಳು ಒಂದು ರೀತಿಯಲ್ಲಿ ತರ್ಕವಿಲ್ಲದೆ ಹುಟ್ಟಿ ಹಾಕಿದ ಪದಗಳಂತಿವೆ. ನಾನು ಇಲ್ಲಿ ಪದಗಳ ಉತ್ಪತ್ತಿಯ ಬಗ್ಗೆ, ಅವುಗಳ ಮೇಲೆ ಆಗಿರಬಹುದಾದ ಇತರೆ ಭಾಷೆ-ಸಂಸ್ಕೃತಿಗಳ ಪ್ರಭಾವದ ಬಗ್ಗೆ ಚರ್ಚಿಸುತ್ತಿಲ್ಲ. ಈಗ ಬಳಕೆಯಲ್ಲಿ ಇರುವ ಪದಗಳ ಈಗಿನ ರೂಪದ ಬಗ್ಗೆ ಮಾತ್ರ. ಇಪ್ಪತ್ತರ ನಂತರ ಒಂದು ತರ್ಕದಲ್ಲಿ ಮುಂದುವರೆಯುವ ಸಂಖ್ಯೆಗಳು ಹತ್ತರಿಂದ ಇಪ್ಪತ್ತರ ತನಕ ‘ಸೂಕ್ತವಲ್ಲದ’ ರೂಪದಲ್ಲಿದ್ದಂತಿವೆ. ಹಾಗೆಯೆ, ನಲವತ್ತು, ಐವತ್ತು, ಅರವತ್ತರ ನಂತರ ಬರುವ ಪದಗಳು ಏಳತ್ತು, ಎಂಟತ್ತು, ಒಂಬತ್ತತ್ತು ಆಗಿಲ್ಲದೆ “ಎಪ್ಪತ್ತು”, “ಎಂಬತ್ತು”, “ತೊಂಬತ್ತು”, ಆಗಿವೆ. ಇಂಗ್ಲಿಷ್‌ನಲ್ಲಿಯೂ ಸರಿಸುಮಾರು ಇದೇ ಸ್ಥಿತಿ ಇದೆ. ಅಲ್ಲಿಯೂ ಹತ್ತರಿಂದ ಇಪ್ಪತ್ತರ ತನಕ ನಮ್ಮದೆ ತರಹದ ವೈವಿಧ್ಯತೆ ಇದೆ. fourteen, sixteen, seventeen, eighteen, ಗಳ ಅಕ್ಕಪಕ್ಕದಲ್ಲಿ neteen, twoteen, threeteen, fiveteen ಗಳು ಇಲ್ಲ. ಹಾಗೆಯೆ twoty, threety, fivety ಗಳಿಲ್ಲ. forty ಗೂ fourty ಗೂ ಸಾಮ್ಯತೆ ಇದೆ ಎಂದುಕೊಂಡರೆ ಪರವಾಗಿಲ್ಲ. ಇಲ್ಲವಾದರೆ, ಅದೂ ಸೂಕ್ತವಲ್ಲ.

ಆದರೆ, ಮೇಲೆ ನಾವು ‘ಅಸೂಕ್ತ’ ಎಂದು ಭಾವಿಸಬಹುದಾದ ಯಾವೊಂದು ದ್ವಂದ್ವಗಳೂ ಚೀನೀ ಭಾಷೆಯಲ್ಲಿ ಇಲ್ಲ. ಹನ್ನೊಂದು ಅವರಿಗೆ ಹತ್ತು-ಒಂದು, ಹನ್ನೆರಡು ಹತ್ತು-ಎರಡು, ಹದಿಮೂರು ಹತ್ತು-ಮೂರು ಆಗುತ್ತದೆ. ಹೀಗೆ ದ್ವಂದ್ವವಿಲ್ಲದೆ ಅವರ ಸಂಖ್ಯೆಗಳು ಬೆಳೆಯುತ್ತವೆ. ಅಧ್ಯಯನಗಳ ಪ್ರಕಾರ ನಾಲ್ಕನೆ ವಯಸ್ಸಿನ ಚೀನಿ ಬಾಲಕ ನಲವತ್ತರ ತನಕ ಎಣಿಸಬಲ್ಲನಂತೆ. ಆದರೆ ಅಮೆರಿಕದ ಬಹುತೇಕ ಹುಡುಗರು ತಮ್ಮ ಐದನೆಯ ವಯಸ್ಸಿನ ತನಕ ಆ ಮಟ್ಟ ಮುಟ್ಟುವುದಿಲ್ಲವಂತೆ.

ಈಗ ಮೇಲಿನ “ಸಮಸ್ಯೆ”ಯ ಹಿನ್ನೆಲೆಯಲ್ಲಿ ಒಂದು ಸಣ್ಣ ಲೆಕ್ಕ. ನಾಲ್ಕನೆ ತರಗತಿಯಲ್ಲಿರುವ ನಮ್ಮ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯೊಬ್ಬನನ್ನು ‘ಮುವ್ವತ್ತೇಳು ಮತ್ತು ಇಪ್ಪತ್ತೆರಡು’ ಇವುಗಳನ್ನು ಮನಸ್ಸಿನಲ್ಲಿಯೆ ಕೂಡಿ ಉತ್ತರ ಹೇಳು ಎಂದು ಕೇಳಿದರೆ ಆತ ಏನು ಮಾಡುತ್ತಾನೆ? ಮೊದಲಿಗೆ ಆ ಪದಗಳನ್ನು ಅಂಕಿಗಳಿಗೆ ಬದಲಾಯಿಸಿಕೊಳ್ಳುತ್ತಾನೆ. 37+22. ನಂತರ ಏಳು ಮತ್ತು ಎರಡನ್ನು ಕೂಡುತ್ತಾನೆ. ನಂತರ ದಶಮಾನ ಸ್ಥಾನದ ಮೂರು ಮತ್ತು ಎರಡನ್ನು ಕೂಡುತ್ತಾನೆ. ಕೊನೆಗೆ ಐವತ್ತೊಂಬತ್ತು ಎನ್ನುತ್ತಾನೆ. ಅದೇ, ಅವನದೇ ವಯಸ್ಸಿನ ಚೀನೀ ಬಾಲಕ? ಮೂರು-ಹತ್ತು-ಎರಡು ಮತ್ತು ಎರಡು-ಹತ್ತು-ಏಳು; ಅವನಿಗೆ ಸಮಸ್ಯೆಯಲ್ಲಿಯೆ ಉತ್ತರವೂ ಇದೆ.

ಸರಿ, ಚೀನೀ ಜನರ ಭಾಷೆ ಅವರಿಗೆ ಗಣಿತವನ್ನು ಚಿಕ್ಕಂದಿನಿಂದಲೆ ಸುಲಭವಾಗಿ ಕಲಿಯಲು ಸಹಾಯ ಮಾಡುತ್ತದೆ ಎಂದಾಯಿತು. ಆದರೆ ಅದೊಂದೆ ಸಾಕೆ? ಸಾಲದು. ಯಾಕೆಂದರೆ, ‘ಗಣಿತಕ್ಕೂ ಸೋಮಾರಿಗಳಿಗೂ ಆಗಿಬರುವುದಿಲ್ಲ’. ಮತ್ತೆಮತ್ತೆ ಅಭ್ಯಾಸ ಮಾಡುವುದರಿಂದ ಮಾತ್ರ ಗಣಿತ ಒಲಿಯುತ್ತದೆ. ಒಂದು ಗಣಿತದ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಒಂದು ಹಂತವನ್ನು ಯಶಸ್ವಿಯಾಗಿ-ತಪ್ಪಿಲ್ಲದೆ ಮುಗಿಸಿದರೆ ಮಾತ್ರ ನೀವು ಇನ್ನೊಂದು ಹಂತಕ್ಕೆ ತಪ್ಪಿಲ್ಲದೆ ಹೋಗಲು ಸಾಧ್ಯ. ಇಲ್ಲವೆಂದರೆ ನೀವು ಮತ್ತೆ ಮೊದಲಿನಿಂದ ಪ್ರಾರಂಭಿಸಬೇಕು. ಹಾಗೆ ತಪ್ಪಿಲ್ಲದೆ ಮಾಡುತ್ತ ಹೋಗುವುದು ಹೇಗೆ? ಏಕಾಗ್ರಚಿತ್ತದಿಂದ, ನಿರಂತರ ಅಭ್ಯಾಸದಿಂದ. ಗಣಿತದಲ್ಲಿ ಮುಂದಿರುವ ಚೀನೀ/ಜಪಾನಿ/ಕೊರಿಯನ್ನರು ತಮ್ಮ ಪರಂಪರೆಯಿಂದಲೆ ಕಠಿಣ ಪರಿಶ್ರಮಿಗಳು ಎನ್ನುತ್ತಾನೆ ಗ್ಲಾಡ್‌ವೆಲ್. ಅದಕ್ಕೆ ಆತ ಅವರ ಭತ್ತದ ಕೃಷಿಯಲ್ಲಿ, ಅವರ ಗಾದೆಗಳಲ್ಲಿ, ಅವರ ಜೀವನಕ್ರಮದಲ್ಲಿ ಆಧಾರ ಹುಡುಕುತ್ತಾನೆ.

ಭತ್ತದ ಕೃಷಿ? ಅದನ್ನು ಚರ್ಚಿಸುವುದಕ್ಕಿಂತ ಮೊದಲು ನಾವು ಕರ್ನಾಟಕದ ಮಳೆಯಾಧಾರಿತ ಬೇಸಾಯ ಮಾಡುವ ಬಯಲುಸೀಮೆಯತ್ತ ಒಮ್ಮೆ ನೋಡೋಣ. ನಮ್ಮ ಖುಷ್ಕಿ-ಹೊಲಗಳು ವರ್ಷಕ್ಕೆ ಎಷ್ಟು ಕಾಲ ಬೀಳು ಬಿದ್ದಿರುತ್ತವೆ? ಆರು ತಿಂಗಳಿಗೂ ಹೆಚ್ಚಿನ ಕಾಲ. ಅಂದರೆ, ಕೆರೆಗಳಿಲ್ಲದ, ನೀರಾವರಿ ಇಲ್ಲದ ಹಳ್ಳಿಗಳಲ್ಲಿ ಖುಷ್ಕಿ-ಬೇಸಾಯ ಮಾತ್ರ ಮಾಡುವ ಜನ ವರ್ಷದಲ್ಲಿ ಅರ್ಧಕ್ಕಿಂತ ಹೆಚ್ಚಿನ ದಿನಗಳನ್ನು ಕೆಲಸವಿಲ್ಲದೆ ಕಳೆಯುತ್ತಾರೆ. ಹಾಗೆಯೆ, ತಮ್ಮ ಐದಾರು ತಿಂಗಳ ಸೀಮಿತ ದುಡಿಮೆಯನ್ನು ವರ್ಷಪೂರ್ತಿ ಉಣ್ಣುತ್ತಾರೆ. ವರ್ಷಕ್ಕೆ ಆರು ತಿಂಗಳು ಕೆಲಸವಿಲ್ಲದೆ, ಅಂದರೆ “ಅವಕಾಶ”ಗಳಿಲ್ಲದೆ ಮಳೆಯನ್ನು ಕಾಯುತ್ತ ಕಳೆಯುವ ಜನ ಆರ್ಥಿಕವಾಗಿಯೂ ಹಿಂದುಳಿದಿರುವುದರಲ್ಲಿ ಆಶ್ಚರ್ಯ ಇದೆಯೆ?

ಈಗ ಭತ್ತದ ಕೃಷಿ ಮಾಡುವ ಮಲೆನಾಡು, ಕರಾವಳಿ, ಮತ್ತು ನೀರಾವರಿ ಸೌಲಭ್ಯ ಇರುವ ಬಯಲುಸೀಮೆ ಪ್ರದೇಶಗಳನ್ನು ನೋಡೋಣ. ಅಲ್ಲಿನ ಜನರ ಸರಾಸರಿ ಆದಾಯ ಖುಷ್ಕಿ ಬೇಸಾಯ ಮಾಡುವ ಬಯಲುಸೀಮೆಯವರಿಗಿಂತ ಹೆಚ್ಚು. ಮತ್ತೆ ಇನ್ನೇನು ಹೆಚ್ಚು? ಅವರ ಕೆಲಸದ ಅವಧಿ. ಮೈಮುರಿದು ದುಡಿಯುವುದಕ್ಕೆ ಅವರು ಕೊಡುವ ಪ್ರಾಮುಖ್ಯತೆ. ಸೂರ್ಯಪ್ರಿಯ ಬಯಲುಸೀಮೆಯ ಬಹುತೇಕ ಹಳ್ಳಿಗಳಲ್ಲಿ ಅರಳಿಕಟ್ಟೆಯ ಮೇಲೆ, ಪಂಚಾಯಿತಿ ಕಟ್ಟಡದ ಬಳಿ, ಟೀ ಅಂಗಡಿಯ ಬೆಂಚುಗಳ ಮೇಲೆ, ಸಿನೆಮಾ ಟೆಂಟುಗಳಲ್ಲಿ ಕಾಣುವಷ್ಟು ಸಂಖ್ಯೆಯ ರೈತರನ್ನು ನೀವು ಕರಾವಳಿ ಮತ್ತು ಮಲೆನಾಡಿನ ಹಳ್ಳಿಗಳಲ್ಲಿ ಕಾಣಲಾರಿರಿ. ಹಾಗೆಯೆ, ಬಯಲುಸೀಮೆಯ ಪಾಳೆಯಗಾರಿಕೆ ವ್ಯವಸ್ಥೆಯನ್ನೂ, ಅದರೆಲ್ಲ ಕರಾಳಮುಖಗಳನ್ನೂ ಸಹ.

ಈ ಖುಷ್ಕಿ ರೈತರಿಗೂ ಮತ್ತು ಕರಾವಳಿ-ಮಲೆನಾಡು-ನೀರಾವರಿ ಇರುವ ರೈತರಿಗೂ ಇರುವ ಪ್ರಮುಖ ವ್ಯತ್ಯಾಸ ಏನು? ಅದು ಅವರು ಬೆಳೆಯುವ ಬೆಳೆ. ಭತ್ತ. ದಕ್ಷಿಣ ಕರ್ನಾಟಕದ ಬಯಲುಸೀಮೆಯ ಬೆಳೆಗಳಾದ ರಾಗಿ ಮತ್ತು ಭತ್ತದ ಬೇಸಾಯ ಪದ್ಧತಿಗಳನ್ನು ನನ್ನ ಬಾಲ್ಯದಲ್ಲಿ ಕಂಡಿರುವುದರಿಂದ ಅವುಗಳನ್ನು ನನ್ನದೆ ಅನುಭವದ ಮೇಲೆ ವಿವರಿಸುತ್ತೇನೆ. ಹೊಲಗಳಲ್ಲಿ ಬೆಳೆಯುವ ರಾಗಿ ಸಂಪೂರ್ಣವಾಗಿ ಮಳೆಯಾಧಾರಿತ. ಮಳೆ ಸ್ವಲ್ಪ ಹೆಚ್ಚುಕಮ್ಮಿ ಆದರೂ ಬೆಳೆ ಒಂದಿಷ್ಟು ಕೈಗೂಡಬಹುದು. ಹಾಗೆಯೆ ಅದಕ್ಕೆ ತೀರಾ ಮುತುವರ್ಜಿ ಬೇಕಾಗಿಲ್ಲ. ಸಾಧ್ಯವಾದರೆ ಕೊಟ್ಟಿಗೆ ಗೊಬ್ಬರ, ಜೂನ್-ಜುಲೈನಲ್ಲಿ ಮಳೆ ಬಂದ ಮೇಲೆ ಒಮ್ಮೆ ಉತ್ತು ರಾಗಿ ಚೆಲ್ಲುವುದು, ಚೆಲ್ಲಿದ ರಾಗಿ ಮಣ್ಣಲ್ಲಿ ಬೆರೆಯಲು ಒಮ್ಮೆ ಹಲಗೆ. ಮೊಳಕೆಒಡೆದ ರಾಗಿಪೈರನ್ನು ತೆಳು ಮಾಡಲು ಒಮ್ಮೆ ಕುಂಟೆ, ಕಳೆ ಹೆಚ್ಚಾದರೆ ಕಳೆ ತೆಗೆಯುವುದು, ಒಂದೆರಡು ಸಲ ಮಳೆ ನೊಡಿಕೊಂಡು ರಾಸಾಯನಿಕ ಗೊಬ್ಬರ. ನಂತರ ಎಲ್ಲಾ ವರುಣನ ಕೃಪೆ. ಫಸಲು ಬಂದ ನಂತರ ಕಟಾವು. ಕಟಾವು ಆದ “ಒಂದೆರಡು ತಿಂಗಳ ನಂತರ” ಬಿಸಿಲು-ಗಾಳಿ ನೋಡಿಕೊಂಡು ಕಣ ಮಾಡುವುದು. ಅಬ್ಬಬ್ಬ ಎಂದರೆ ವರ್ಷಕ್ಕೆ ಇಪ್ಪತ್ತು-ಮುವ್ವತ್ತುದಿನ ಹೊಲದಲ್ಲಿ ಕೆಲಸ ಮಾಡಿದರೆ ಮುಗಿಯಿತು. ಎಲ್ಲೂ “ಕೈ ಕೆಸರಾಗುವುದಿಲ್ಲ”. ಅಂದ ಹಾಗೆ, ಹೊಲ ಮಟ್ಟವಾಗಿಲ್ಲದಿದ್ದರೂ ನಡೆಯುತ್ತದೆ. ಏರುತಗ್ಗುಗಳಿದ್ದರೂ ಸಮಸ್ಯೆ ಇಲ್ಲ. ಮುಖ್ಯವಾಗಿ ಮಳೆ ನೀರು ಹೊಲದಲ್ಲಿ ನಿಲ್ಲಬಾರದು. ಅಷ್ಟೇ.

ಆದರೆ ಭತ್ತದ ಕೃಷಿ ಹಾಗಲ್ಲ. ಮಳೆಗಾಲದಲ್ಲಿ ಬೆಳೆಯುವ ಮಳೆಯಾಧಾರಿತ ಭತ್ತವಾದರೆ, ರಾಗಿ ಬೆಳೆಯುವ ಕೆಲಸಕ್ಕಿಂತ ಸ್ವಲ್ಪ ಜಾಸ್ತಿ ಮಾಡಬೇಕಾಗಬಹುದು. ಕೈಕಾಲುಗಳು “ಕೆಸರೂ ಆಗಬಹುದು”. ಜೊತೆಗೆ, ಕಟಾವು ಸಮಯ ಹತ್ತಿರವಾದಂತೆ ಕಣ ಸಿದ್ಧ ಮಾಡಿಕೊಳ್ಳಬೇಕು. ಕಟಾವು ಆದ ಭತ್ತದ ಪೈರು ಮಾತ್ರ ನೇರ ಕಣಕ್ಕೆ ಬರಬೇಕು. ಅಲ್ಲಿಂದ ನಾಲ್ಕೈದು ದಿನಗಳ ಒಳಗೆ ಭತ್ತವನ್ನು ವಿಂಗಡಿಸಿ ಕಣಜ-ಗೋದಾಮುಗಳಿಗೆ ತುಂಬಬೇಕು.

ನೀರಾವರಿ ಇರುವ ಗದ್ದೆ ಆದರೆ, ರೈತನಿಗೆ ಮತ್ತೆ ಬಿಡುವಿಲ್ಲ. ನಿಜವಾದ ಕೆಲಸ ಆರಂಭವಾಗುವುದೆ ಆಗ. ತಮ್ಮ ಎಲ್ಲಾ ಗದ್ದೆಗಳಿಗಾಗುವಷ್ಟು ಪೈರುಗಳಿಗಾಗಿ ಕೂಡಲೆ ಭತ್ತದ ಮಡಿಗದ್ದೆ ಮಾಡಬೇಕು. ಮಡಿಕೆಯಲ್ಲಿ ನೆನಸಿಟ್ಟ ಭತ್ತ ಮೊಳಕೆ ಹೊಡೆದ ನಂತರ ಅದನ್ನು ಮಡಿಗದ್ದೆಯಲ್ಲಿ ಚೆಲ್ಲಬೇಕು. ಅದು ಚೆನ್ನಾಗಿ ಬೆಳೆಯುವಂತೆ ನೋಡಿಕೊಳ್ಳಬೇಕು. ಅದೇ ಸಮಯದಲ್ಲಿ ಸೊಪ್ಪು-ಸದೆ-ಕೊಟ್ಟಿಗೆ ಗೊಬ್ಬರ ಎಲ್ಲವನ್ನೂ ಭತ್ತದ ಪೈರು ನಾಟಿ ಮಾಡಲಿರುವ ಗದ್ದೆಗಳಿಗೆ ಹಾಕಿ, ಅವುಗಳಲ್ಲಿ ನಾಲ್ಕೈದು ಅಂಗುಲ ನೀರು ನಿಲ್ಲಿಸಿ ಗದ್ದೆ ಉಳಬೇಕು. ಅದು ಗದ್ದೆಯನ್ನು “ಕೆಸರು ಗದ್ದೆ” ಮಾಡುವ ರೀತಿ. ಅದೇ ಸಮಯದಲ್ಲಿ ಗದ್ದೆಯ ನಾಲ್ಕೂ ಕಡೆ ಬದು ಸರಿಮಾಡಬೇಕು. ಕೆಸರು ಗದ್ದೆ ಸಂಪೂರ್ಣವಾಗಿ ಮಟ್ಟವಾಗಿರಬೇಕು. ಎಲ್ಲಾ ಕಡೆ ನೀರು ಸಮಾನವಾಗಿ ನಿಲ್ಲುವಂತಿರಬೇಕು. ಗದ್ದೆಗೆ ನೀರು ಹಾಯಿಸಲು ಇರುವ ಎಲ್ಲಾ ಕಾಲುವೆಗಳನ್ನೂ ಒಮ್ಮೆ ಹೂಳೆತ್ತಿ ಸರಿ ಮಾಡಿಕೊಳ್ಳಬೇಕು. ಅಷ್ಟರಲ್ಲಿ ಪೈರು ನಾಟಿಗೆ ಬಂದಿರುತ್ತದೆ. ಆಗ ಎಲ್ಲಾ ಗದ್ದೆಗಳಲ್ಲಿ “ಒಂದೊಂದೇ ಭತ್ತದ ಪೈರನ್ನು” ಸುಮಾರು ಅರ್ಧ ಅಡಿ ಅಂತರದಲ್ಲಿ ನಾಟುತ್ತ ಬರಬೇಕು. ನಂತರ ಒಂದಷ್ಟು ದಿನಗಳ ನಂತರ ಕಳೆ ತೆಗೆಯಬೇಕು. ಸಮಯಕ್ಕೆ ಸರಿಯಾಗಿ ರಾಸಾಯನಿಕ ಗೊಬ್ಬರವನ್ನು ಹಾಕುತ್ತಿರಬೇಕು. ಪೈರು ಬೆಳೆದು, ತೆನೆಹೊಡೆದು, ಕಾಳು ಗಟ್ಟಿಯಾಗಿ, ಪೈರು ಹಳದಿಬಣ್ಣಕ್ಕೆ ತಿರುಗುವ ತನಕದ ಎರಡು-ಮೂರು ತಿಂಗಳುಗಳ ಕಾಲ ಒಮ್ಮೆಯೂ ಗದ್ದೆಯಲ್ಲಿ ನೀರು ಕಮ್ಮಿಯಾಗದಂತೆ, ಯಾವಾಗಲೂ ಮೂರ್ನಾಲ್ಕು ಅಂಗುಲ ನೀರು ನಿಂತಿರುವಂತೆ ನೋಡಿಕೊಳ್ಳಬೇಕು. ಕಟಾವಿಗೆ ಬರುವ ಸಮಯಕ್ಕೆ ಕಣ ಸಿದ್ಧ ಮಾಡಿಕೊಳ್ಳಬೇಕು. ಕಟಾವು ಆದ ಪೈರು ನೇರ ಕಣಕ್ಕೆ ಬರಬೇಕು. ಒಂದೆರಡು ದಿನದಲ್ಲೇ ಕಣ ಮುಗಿಯಬೇಕು. ಇಲ್ಲದಿದ್ದರೆ ಪೈರಿನಲ್ಲಿಯ ಭತ್ತ ಮುಗ್ಗುಲು ಹಿಡಿಯುತ್ತದೆ. ಈ ಎಲ್ಲಾ ಸಮಯದಲ್ಲಿ ಏನಾದರು ಒಂದು ಹೆಚ್ಚುಕಮ್ಮಿ ಆದರೂ ಆ ಬೆಳೆ ಇಲ್ಲ. ಹಾಕಿದ ಎಲ್ಲಾ ಪರಿಶ್ರಮ, ದುಡ್ಡು, ದುಡಿಮೆ, ಎಲ್ಲವೂ ನಾಶ ವ್ಯರ್ಥ. ಗಣಿತದ ಸಮಸ್ಯೆಗಳನ್ನು ಬಿಡಿಸುವ ರೀತಿಯಲ್ಲಿಯೇ ಒಂದು ಹಂತವನ್ನು ಯಶಸ್ವಿಯಾಗಿ ದಾಟಿದರೆ ಮಾತ್ರ ಮುಂದಿನ ಹಂತಕ್ಕೆ ಪ್ರವೇಶ. ಅಂದ ಹಾಗೆ, ನಮ್ಮ ಈ ಕೆಸರುಗದ್ದೆಗಳ ಹೆಚ್ಚಿನಪಾಲು ಕೆಲಸ ಸಾಗುವುದೆ ಚಳಿಗಾಲದಲ್ಲಿ.

ಚೀಣೀಯರು ಮತ್ತು ಇತರೆ ಭತ್ತ ಬೆಳೆಯುವ ಏಷ್ಯನ್ನರೂ ವರ್ಷಕ್ಕೆ ಎರಡು “ಕೆಸರುಗದ್ದೆ” ಬೆಳೆಗಳನ್ನು ತೆಗೆಯುತ್ತಾರೆ. ಮೇಲೆ ಹೇಳಿದಂತೆ ಅಪಾರ ಪರಿಶ್ರಮದಿಂದ, ಲೆಕ್ಕಾಚಾರವಾಗಿ ಮಾಡಬೇಕಾದ ಕೆಲಸ ಅದು. ಇನ್ನು ಅವರ ಜೀವನದ ದೃಷ್ಟಿಕೋನವೂ ಹಾಗೆಯೆ ಇದೆ. ಅವರ ಗಾದೆಗಳನ್ನೆ ಗಮನಿಸಿ. ಯಾವುದನ್ನೂ ಅವರು ದೇವರ ಮೇಲೆ, ವಿಧಿಯ ಮೇಲೆ ಹಾಕುವುದಿಲ್ಲ.
“ನೆತ್ತರು ಮತ್ತು ಬೆವರು ಹರಿಸದೆ ಊಟ ಸಿಗುವುದಿಲ್ಲ.”
“ಅನ್ನಕ್ಕಾಗಿ ದೇವರನ್ನು ಅವಲಂಬಿಸಬೇಡ. ಬದಲಿಗೆ ದುಡಿಯಬಲ್ಲ ನಿನ್ನೆರಡೂ ಕೈಗಳನ್ನು ಅವಲಂಬಿಸು.”
“ಚಳಿಗಾಲದಲ್ಲಿ ಸೋಮಾರಿ ಮನುಷ್ಯ ಮರಗಟ್ಟಿ ಸಾಯುತ್ತಾನೆ.”
“ಬೆಳೆಯ ಬಗ್ಗೆ ಮಾತನಾಡಿ ಪ್ರಯೋಜನ ಇಲ್ಲ. ಅದೆಲ್ಲವೂ ಕಠಿಣದುಡಿಮೆ ಮತ್ತು ಗೊಬ್ಬರದ ಮೇಲೆ ಅವಲಂಬಿತ.”
“ಮನುಷ್ಯ ಕಷ್ಟಪಟ್ಟು ದುಡಿದರೆ ನೆಲ ಸೋಮಾರಿಯಾಗುವುದಿಲ್ಲ.”

ಇದು ಎಲ್ಲಕ್ಕಿಂತ ಮುಖ್ಯವಾದದ್ದು:
“ಯಾರು ವರ್ಷಕ್ಕೆ ಮುನ್ನೂರ ಅರವತ್ತು ದಿನ ಸೂರ್ಯ ಹುಟ್ಟುವುದಕ್ಕೆ ಮೊದಲು ಏಳಬಲ್ಲನೊ, ಅವನು ತನ್ನ ಕುಟುಂಬವನ್ನು ಶ್ರೀಮಂತ ಮಾಡುವಲ್ಲಿ ಸೋಲುವುದಿಲ್ಲ.”

ಇಂತಹ ‘ಮುನ್ನೂರ ಅರವತ್ತು ದಿನಗಳೂ ದುಡಿಯುವ’ ಶ್ರಮಜೀವಿಗಳ ಪರಂಪರೆಯಿಂದ ಪ್ರಭಾವಿಸಲ್ಪಟ್ಟ ಜನ ಅಪಾರ ಪರಿಶ್ರಮವನ್ನೂ, ನಿರಂತರ ಅಭ್ಯಾಸವನ್ನೂ, ಏಕಾಗ್ರತೆಯನ್ನೂ ಬಯಸುವ ಗಣಿತದಲ್ಲೂ ಮುಂದಿರುತ್ತಾರೆ. ಚೀನೀ ಮೂಲದ ಏಷ್ಯನ್ನರನ್ನು ನೋಡಿ. ನಮ್ಮದೇ ಭಾರತದ ಉದಾಹರಣೆ ಕೊಡಬಹುದಾದರೆ, ಸುಮಾರು ಎರಡು ಸಾವಿರ ವರ್ಷಗಳ ಹಿಂದೆಯೆ ತಿರುಚಿನಾಪಳ್ಳಿಯ ಬಳಿ ಕಾವೇರಿ ನದಿಗೆ ಅಡ್ಡವಾಗಿ “ಕಲ್ಲಣೆ” (ಕಲ್ಲಿನ ಅಣೆಕಟ್ಟು) ಕಟ್ಟಿಕೊಂಡು ವರ್ಷಪೂರ್ತಿ ಭತ್ತದ ಕೃಷಿ ಮಾಡುತ್ತ ಬಂದ ಕಾವೇರಿ ಮುಖಜ ಭೂಮಿಯ ತಮಿಳರನ್ನು ಮತ್ತು ಈಗ ದೇಶವಿದೇಶಗಳಲ್ಲಿ ಇರುವ ತಮಿಳು ಗಣಿತಜ್ಞರನ್ನು ನೋಡಿ. ಗಣಿತ ಕಬ್ಬಿಣದ ಕಡಲೆ ಆಗಿರುವ (ಅಥವ ಆಗಿದ್ದ) ನಮ್ಮ ಬಯಲುಸೀಮೆಯ ಮಳೆಯಾಧಾರಿತ ಕೃಷಿ-ಸಮುದಾಯಗಳನ್ನು, ಆಯಾಯ ಜಿಲ್ಲೆಗಳ ಶೈಕ್ಷಣಿಕ ಫಲಿತಾಂಶಗಳನ್ನು ನೋಡಿ. ಗ್ಲಾಡ್‌ವೆಲ್‌ನ ವಾದವನ್ನು ಒಪ್ಪದೇ ಇರಲು ನನಗೆ ಯಾವ ಕಾರಣಗಳೂ ಕಾಣಿಸುತ್ತಿಲ್ಲ.

(ಮುಂದುವರೆಯುವುದು…)

ನಮ್ಮ ಗದ್ದೆ ಕಂಡ ಕೊನೆಯ ಭತ್ತದ ಫಸಲು

ಕೆಸರು ಗದ್ದೆ ಮತ್ತು ಭತ್ತದ ಕೃಷಿಯ ಬಗ್ಗೆ ನನ್ನದೆ ಒಂದು ವೈಯಕ್ತಿಕ ಅನುಭವವನ್ನು ಹೇಳಬಯಸುತ್ತೇನೆ. ಸುಮಾರು ಹದಿನೈದು ವರ್ಷಗಳ ಹಿಂದೆ ನಮ್ಮ ಕುಟುಂಬವೂ ಇಲ್ಲಿ ಹೇಳಿರುವಂತಹುದೇ ಕೆಸರು ಗದ್ದೆಯ ಕೃಷಿ ಮಾಡಿತ್ತು. ಕೆರೆಯ ನೀರು ಕೊನೆಯದಾಗಿ ಬರುತ್ತಿದ್ದ ಕೊನೆಯಲ್ಲಿದ್ದ ಗದ್ದೆ ನಮ್ಮದು. ತಮ್ಮ ಗದ್ದೆಗಳು ತುಂಬಿದರೆ ಮಾತ್ರ ಮೇಲಿನವರು ಕೆಳಗಿನ ಗದ್ದೆಗಳಿಗೆ ನೀರು ಬಿಡುತ್ತಿದ್ದರು. ಆ ತಾಪತ್ರಯಗಳ ಮಧ್ಯೆಯೂ ನಮ್ಮ ಪೈರು ಚೆನ್ನಾಗಿ ಬಂದಿತ್ತು. ಸಮಸ್ಯೆ ಆರಂಭವಾಗಿದ್ದೆ ನೀರು ಇನ್ನು ಬೇಕಾಗಿರುವುದೆ ಏಳೆಂಟು ದಿನ ಎನ್ನುವ ಕೊನೆಯ ದಿನಗಳಲ್ಲಿ. ಅಷ್ಟೊತ್ತಿಗೆ ಕೆರೆಯಲ್ಲಿ ನೀರೂ ಮುಗಿಯುತ್ತ ಬಂದಿತ್ತು. ಕಾಲುವೆ ಬೇರೆ ನಮ್ಮ ಗದ್ದೆಗಿಂತ ತಗ್ಗಿನಲ್ಲಿ ಇತ್ತು. ಜೊತೆಗೆ ಅದು ಸ್ವಲ್ಪ ಅಗಲವಾದ, ಉದ್ದದ ಕಾಲುವೆ. ನೀರು ನಮ್ಮ ಗದ್ದೆಗೆ ಏರಬೇಕಾದರೆ ಮೇಲಿನಿಂದ ಹೊಸನೀರು ಹೆಚ್ಚಿನಮಟ್ಟದಲ್ಲಿ ಬರಬೇಕಿತ್ತು. ಬರಲಿಲ್ಲ. ಕೈಗೆಬಂದ ತುತ್ತು ಬಾಯಿಗಿಲ್ಲದ ಸ್ಥಿತಿ. ಸುಮಾರು ನಾಲ್ಕು ತಿಂಗಳ ದುಡಿಮೆ, ಬಂಡವಾಳ, ಕನಸು, ಖುಷಿ, ಸಂತೃಪ್ತಿ, ಎಲ್ಲವೂ ಒಣಗಿಹೋಗುವ ಸಂದರ್ಭ. ಆಗ ನನ್ನಣ್ಣ ಮತ್ತು ನಾನು ಕೈಯಲ್ಲಿ ಬಕೆಟ್ಟು ಮತ್ತು ಬಾಂಡ್ಲಿ ಹಿಡಿದುಕೊಂಡು ಕಾಲುವೆಗೆ ಇಳಿದೆವು. ಮುಂದಿನ ಮೂರ್ನಾಲ್ಕು ದಿನಗಳ ಕಾಲ ತಗ್ಗಿನಕಾಲುವೆಯಿಂದ ನೀರನ್ನು ನಮ್ಮ ಗದ್ದೆಯ ತೂಬಿಗೆ ಚಿಮ್ಮುವುದೆ ನಮ್ಮ ಕೆಲಸ. ಅದೊಂದು ಅಸಹಾಯಕ ಪರಿಸ್ಥಿತಿ. ಆದರೆ ನಮ್ಮ ಬೆಳೆಯನ್ನು ಕಾಪಾಡಿದ್ದೆ ನಾವು ಆ ಮುರ್ನಾಲ್ಕು ದಿನ ಒಣಗಲಾರಂಭಿಸಿದ್ದ ಗದ್ದೆಗೆ ಉಣಿಸಿದ ಹನಿಹನಿ ನೀರು. ಆ ಸಲ ಒಳ್ಳೆಯ ಫಸಲು ಬಂತು. ಅದು ಬಹುಶಃ ಆ ಗದ್ದೆಗಳು ಕಂಡ ಅತ್ಯುತ್ತಮ ಫಸಲೂ ಇರಬಹುದು. ಹಾಗೆಯೆ ಕೊನೆಯ ಫಸಲೂ ಸಹ. ಅದಾದ ನಂತರ ನಾವು ಆ ಗದ್ದೆಗಳನ್ನು ಉಳಲಿಲ್ಲ. ವಿರೋಧಾಭಾಸಗಳಿಂದ ಕೂಡಿದ ಬೇಸರದ ವಿಷಯ ಏನೆಂದರೆ ಆ ತೀರ್ಮಾನ ಒಳ್ಳೆಯ ತೀರ್ಮಾನವೂ ಆಗಿದ್ದು….

ಇಂದು ಅಲ್ಲಿ ಗದ್ದೆಯಿದ್ದ ಕುರುಹುಗಳೂ ಇಲ್ಲ. ಕೆರೆಯಿಂದ ನೀರೂ ಬರುತ್ತಿಲ್ಲ.

ಮುಂದಿನ ವಾರ: ನಮ್ಮ ಸರ್ಕಾರಿ ಶಾಲಾ ಮಕ್ಕಳಿಗೆ ಬೇಸಿಗೆ ರಜೆಗಳು ಬೇಕೆ?

ಲೇಖನ ಸರಣಿಯ ಇದುವರೆಗಿನ ಲೇಖನಗಳು:

Reader Comments

Add a Comment

required, use real name
required, will not be published
optional, your blog address