ಹಂಪಿ ವಿವಿ ತಂಡದಿಂದ ಪ್ರವಾಹೋತ್ತರ ವಿದ್ಯಮಾನಗಳ ವರದಿ.

This post was written by admin on January 29, 2010
Posted Under: Uncategorized

ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಉತ್ತರಕರ್ನಾಟಕಕ್ಕೆರಗಿದ ಪ್ರವಾಹ ಮತ್ತು ಅದು ಉಂಟುಮಾಡಿದ ಅಪಾರ ನೋವು-ನಷ್ಟ ಗೊತ್ತಿರುವುದೆ. ಲಕ್ಷಾಂತರ ಜನರ ಜೀವನ ಅಕ್ಷರಶಃ ಬೀದಿಗೆ ಬಿದ್ದ ಸಮಯ ಅದು. ನಾಡಿನ ಜನತೆಯೂ ಸಹಾನುಭೂತಿಯಿಂದ ಮತ್ತು ಸಹನಾಗರಿಕ ಜವಾಬ್ದಾರಿಯಿಂದ ನಡೆದುಕೊಂಡ ಗಳಿಗೆಯೂ ಹೌದು.

ನೈಸರ್ಗಿಗ ಪ್ರವಾಹ, ಕೆಲವು ಕಡೆಯ ಮಾನವಕೃತ ಅನೈಸರ್ಗಿಕ ಪ್ರವಾಹಗಳು (flash flodds), ಅದಕ್ಕೆ ಕಾರಣವಾದ ಅಂಶಗಳು, ಪರಿಹಾರ ಕಾರ್ಯಗಳು, ವಿವಿಧ ಸಮುದಾಯಗಳು ಜನ ಆ ಸಂದರ್ಭದಲ್ಲಿ ನಡೆದುಕೊಳ್ಳುವ ರೀತಿ, ದಲಿತರ ಮತ್ತು ಹೆಂಗಸರ ವಿಶೇಷ ಅನಾನುಕೂಲತೆಗಳು, ಇತ್ಯಾದಿಗಳ ಬಗ್ಗೆ ಹಂಪಿ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರದ ವತಿಯಿಂದ ಕೈಗೊಳ್ಳಲಾದ ಅಧ್ಯಯನದ ವರದಿ ಇತ್ತೀಚಿಗೆ ಕಣ್ಣಿಗೆ ಬಿತ್ತು. ಹೀಗೆಯೆ ಕನ್ನಡದ ಬ್ಲಾಗುಗಳನ್ನು ನೋಡುತ್ತಿದ್ದಾಗ ಕಾಣಿಸಿದ “ನೀಲಿಗ್ಯಾನ” (http://hulimurthygyaana.blogspot.com) ಎಂಬ ಬ್ಲಾಗಿನಲ್ಲಿ ಆ ವರದಿ ಲಭ್ಯವಿದೆ.

ಕಳೆದ ವರ್ಷದ ಮಾರ್ಚ್‌ನಲ್ಲಿ ಹಂಪಿಯ ವಿಶ್ವವಿದ್ಯಾಲಯಲಕ್ಕೆ ಹೋಗಿದ್ದಾಗ ಅಲ್ಲಿನ ಕುಲಪತಿಗಳಾದಿಯಾಗಿ ಅಲ್ಲಿಯ ಹಲವು ಅಧ್ಯಾಪಕರಿಗೆ ವಿಶ್ವವಿದ್ಯಾಲಯದ ಪ್ರಕಟಣೆಗಳನ್ನು, ಥೀಸೀಸ್‌ಗಳನ್ನು, ಅಧ್ಯಯನ ವರದಿಗಳನ್ನು ವಿಕಿಪೀಡಿಯಾ ಮಾದರಿಯಲ್ಲಿ ಅಂತರ್ಜಾಲದಲ್ಲಿ ಪ್ರಕಟಿಸಿ ಎಂದು ಕೋರಿದ್ದೆ. ಕೋರಿದ್ದೆ ಎನ್ನುವುದಕ್ಕಿಂತ ಒತ್ತಾಯಪಡಿಸಿದ್ದೆ ಮತ್ತು ಅದರ ಪರವಾಗಿ ವಾದ ಮಂಡಿಸಿದ್ದೆ ಎನ್ನುವುದೆ ಸೂಕ್ತ. ವಿಶ್ವವಿದ್ಯಾಲಯವೊಂದು ಇಂತಹ ವೆಬ್‌ಸೈಟ್ ನಡೆಸಲು ಏನೇನೂ ಖರ್ಚು ಬರುವುದಿಲ್ಲ. ಅವರಲ್ಲಿ ಈಗ ಲಭ್ಯವಿರುವ ಸೌಲಭ್ಯವನ್ನೆ ಬಳಸಿಕೊಂಡು Drupal, WordPress ನಂತಹ ಮುಕ್ತ ತಂತ್ರಾಂಶಗಳನ್ನು ಬಳಸಿಕೊಂಡು ಒಂದೆರಡು ವಾರದಲ್ಲಿ ನಿರ್ಮಿಸಬಹುದು. ಅಲ್ಲಿಯ ವಿಶ್ವವಿದ್ಯಾಲಯದಲ್ಲಿ ಇಂಟರ್ನೆಟ್ ಸೌಲಭ್ಯವೂ, ಮತ್ತು ಕಂಪ್ಯೂಟರ್‍ಗಳ ಲಭ್ಯತೆಯೂ ಸಾಕಷ್ಟು ಉತ್ತಮವಾಗಿಯೆ ಇದೆ. ಅದರೆ, ಆ ವಿಶ್ವವಿದ್ಯಾಲಯ ಅಂತರ್ಜಾಲದಲ್ಲೂ ಇಂತಹುದೊಂದು ಕನ್ನಡದ ಕೆಲಸ ಮಾಡಲು ಎಂದು ಸಾಧ್ಯವೊ ಗೊತ್ತಿಲ್ಲ.

ಈಗ ಅದೇ ವಿವಿಯ ಅಧ್ಯಯನ ತಂಡವೊಂದರ ವರದಿ ಓದಿ ಮತ್ತೆ ಅದನ್ನೆಲ್ಲ ನೆನಸಿಕೊಂಡು ಬೇಸರವಾಗುತ್ತಿದೆ. ನೀಲಿಗ್ಯಾನ ಬ್ಲಾಗಿನ ಹುಲಿಕುಂಟೆ ಮೂರ್ತಿ ಎನ್ನುವವರು ಇಂತಹ ವರದಿಯೊಂದನ್ನು ಅಂತರ್ಜಾಲದಲ್ಲಿ ಪ್ರಕಟಿಸಿದ್ದಕ್ಕಾಗಿಯೆ ವಿಶೇಷ ಅಭಿನಂದನೆಗಳಿಗೆ ಅರ್ಹರು.(ಅವರನ್ನು ಅಭಿನಂದಿಸುತ್ತಲೆ ಆ ಬ್ಲಾಗ್‌ಪೋಸ್ಟಿನ ತಾಂತ್ರಿಕ ಅಡಚಣೆಯ ಬಗ್ಗೆ ಒಂದು ಮಾತು. ಆ ವರದಿಯ ಪೋಸ್ಟ್ ಬರಹ ಫಾಂಟ್‌ನಲ್ಲಿದೆ. ತಮ್ಮ ಕಂಪ್ಯೂಟರ್‌ನಲ್ಲಿ ಬರಹ ಇಲ್ಲದ ಜನ ಅದನ್ನು ಓದಲಾರರು. ಬಹುಶಃ ಮೂರ್ತಿಯವರಿಗೆ ಇದು ಗೊತ್ತಿಲ್ಲದೆ ಇರಬಹುದು. ಗೊತ್ತಿದ್ದರೂ ಅದನ್ನು ಯೂನಿಕೋಡ್‌ಗೆ ಕನ್ವರ್ಟ್ ಮಾಡುವ ರೀತಿ ಗೊತ್ತಿಲ್ಲದೆ ಇರಬಹುದು. ಹೇಗಾದರೂ ಮಾಡಿ ಅದನ್ನು ಗೊತ್ತುಮಾಡಿಕೊಂಡು ಅವರು ಆ ವರದಿಯನ್ನು ಯೂನಿಕೋಡ್‌ಗೆ ಬದಲಾಯಿಸಲು ಈ ಮೂಲಕ ಒತ್ತಾಯಿಸುತ್ತೇನೆ. ಬರಹ ಕನ್ವರ್ಟ್ ನಲ್ಲಿ ಅದು ಅರ್ಧ ನಿಮಿಷದ ಕೆಲಸ.)

ಬರಹ ಫಾಂಟ್ಸ್ ಇರುವ ಓದುಗರು ಆ ವರದಿಯನ್ನು ಇಲ್ಲಿ ಓದಬಹುದು:
http://hulimurthygyaana.blogspot.com/2010/01/ege-aa-ajuaaa-aavaau-ajaga-czsaaaiaaa.html

ಬಹಳ ಗಂಭೀರವಾದ ಮತ್ತು ಮೌಲಿಕವಾದ ಅಧ್ಯಯನ. ವರದಿ ಅಕಾಡೆಮಿಕ್ ಪರಿಭಾಷೆಯಲ್ಲಿದ್ದರೂ ಓದಲು ಸರಳವಾಗಿಯೆ ಇದೆ. ಇಂತಹುದೊಂದು ಕ್ಷೇತ್ರಕಾರ್ಯವನ್ನು ಮಾಡಿದ ಮತ್ತು ಅದನ್ನು ದಾಖಲಿಸಿದ ತಂಡ ಅಭಿನಂದನಾರ್ಹ. ಆದರೆ, ಇಂತಹುದೊಂದು ಕೆಲಸ ವಿವಿಗಳು ಮಾಡುತ್ತವೆ ಎನ್ನುವುದೆ ಎಷ್ಟೋ ಜನಕ್ಕೆ, ಬರಹಗಾರರಿಗೆ, ಪತ್ರಕರ್ತರಿಗೆ, ವಿದ್ಯಾರ್ಥಿಗಳಿಗೆ, ಗೊತ್ತಾಗುವುದಿಲ್ಲ. ಅವರಿಗೆ ಗೊತ್ತಾಗದಿದ್ದರೆ ಇಂತಹ ವರದಿಗಳ ಪ್ರಯೋಜನವಾದರೂ ಏನು? ಇಂತಹ ವಿಷಯ ಮತ್ತು ಅಂಕಿಅಂಶಗಳು ವಿವಿ ವಿಭಾಗಗಳ ಖಾಸಗಿ ಪ್ರಚಾರಕ್ಕಷ್ಟೇ ಸೀಮಿತವಾಗಿಬಿಡಬಾರದು. ಇದನ್ನು ಗಮನದಲ್ಲಿಟ್ಟುಕೊಂಡೆ ನಾನು ಅಲ್ಲಿಯ ಕುಲಪತಿಗಳಿಗೆ ಮತ್ತು ಅಧ್ಯಾಪಕರಿಗೆ ಅವರ ಅಧ್ಯಯನ ಮತ್ತು ಸಂಶೋಧನೆಗಳನ್ನು ಅಂತರ್ಜಾಲದಲ್ಲಿ ಪ್ರಕಟಿಸಲು ಕೋರಿದ್ದು. ಆದರೆ….

ನನಗೆ ಈ ಹುಲಿಕುಂಟೆ ಮೂರ್ತಿಯವರ ಪರಿಚಯ ಇಲ್ಲ. ಆದರೆ ಅವರ ಬ್ಲಾಗಿನಲ್ಲಿ ಒಂದಷ್ಟು ಪದ್ಯಗಳು, ಒಳ್ಳೆಯ ಲೇಖನಗಳೂ ಇವೆ. ಮೇಲಿನ ವರದಿಯೊಂದಿಗೆ ಅವನ್ನೂ ಗಮನಿಸಿ. ಹಲವಾರು ಬರಹಗಳು ಯೂನಿಕೊಡ್‌ನಲ್ಲಿಯೆ ಇವೆ.

Add a Comment

required, use real name
required, will not be published
optional, your blog address