ಬಿಟಿ ಬದನೆ – ಒಂದೆರಡು ಉತ್ತರಗಳು…

This post was written by admin on February 10, 2010
Posted Under: Uncategorized

ಪ್ರಜಾಪ್ರಭುತ್ವ. ಅದರ ಮುಂದೆ ನನಗೆ ಮಿಕ್ಕೆಲ್ಲವೂ ಚಿಕ್ಕದೆ. ಜೈರಾಮ್ ರಮೇಶ್ ಸದ್ಯಕ್ಕೆ ಭಾರತದಲ್ಲಿ ಬಿಟಿ ಬದನೆ ಇಲ್ಲ ಎಂದಿದ್ದಾರೆ. ಅದಕ್ಕೆ ಬೇರೆಲ್ಲ ಕಾರಣಗಳಿಗಿಂತ ಬಹುಸಂಖ್ಯಾತ ಜನರ ವಿರೋಧವಿದ್ದದ್ದೆ ಪ್ರಮುಖ ಕಾರಣ ಎಂದು ನನ್ನ ಭಾವನೆ. ಮಾತುಕತೆ ಮತ್ತು consensus ಇಲ್ಲದ ಪ್ರಜಾಪ್ರಭುತ್ವ ಒಳ್ಳೆಯದಲ್ಲ. ಹಾಗಾಗಿ ಬಿಟಿ ಬದನೆ ನಿಷೇಧದಿಂದ ನನಗೆ ತೀರ ಬೇಸರವೇನೂ ಇಲ್ಲ. ಮತ್ತು GE ಮತ್ತು ಜೈವಿಕ ಸಂಶೋಧನೆಗಳ ಬಾಗಿಲು ಇದರಿಂದೇನೂ ಮುಚ್ಚಿಲ್ಲ. ಜನ ಹೆಚ್ಚುಹೆಚ್ಚು ತಿಳಿದುಕೊಂಡಂತೆ ಅಕಾರಣ ಭಯಗಳೂ ಕಮ್ಮಿಯಾಗುತ್ತ ಹೋಗುತ್ತದೆ.

ನನಗೆ ಅನ್ನಿಸಿದ ಹಾಗೆ ಬಹಳ ಜನ 200-300 ಪದಗಳ ಲೇಖನಗಳನ್ನು ಓದಿ ತಮ್ಮ ಅಭಿಪ್ರಾಯಗಳನ್ನು ರೂಪಿಸಿಕೊಂಡುಬಿಡುತ್ತಾರೆ. ಇಂತಹ ಸಣ್ಣ ಲೇಖನ-ವರದಿಗಳು ಸಂಪೂರ್ಣವಾದ ಮತ್ತು ವಸ್ತುನಿಷ್ಟವಾದ ಮಾಹಿತಿ ಹೊಂದಿರುವುದು ಅಪರೂಪ. ಅವು ಲೇಖನವಾಗಿ ಓದುಗರ ಗಮನ ಸೆಳೆಯಬೇಕಾದರೆ ಅವು ಸಾಕಷ್ಟು ಘೋಷಣಾತ್ಮಕವಾಗಿ, ಸಂವೇದನಾತ್ಮಕವಾಗಿ ಇರಬೇಕು. ಅಪಾಯ ಇರುವುದು ಅಲ್ಲಿಯೆ. ಅಷ್ಟರಿಂದಲೆ ರೂಪಿಸಿಕೊಳ್ಳುವ ಅಭಿಪ್ರಾಯ ಯಾರಿಗೂ ಒಳ್ಳೆಯದು ಮಾಡುವುದಿಲ್ಲ.

ಬಿಟಿ ಬದನೆ ಬಗ್ಗೆ ಬರೆದ ಲೇಖನಕ್ಕೆ ಇಲ್ಲಿ ಎರಡು ಪ್ರಶ್ನೆ-ಪ್ರತಿಕ್ರಿಯೆಗಳು ಬಂದಿವೆ. churumuri.com ಯಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ಅಭಿಪ್ರಾಯಗಳು ಬಂದಿವೆ. ಇಲ್ಲಿ ಬಂದಿರುವ ಪ್ರತಿಕ್ರಿಯೆಗಳನ್ನು ಮೂಲವಾಗಿಟ್ಟುಕೊಂಡು ಒಂದೆರಡು ಸೃಷ್ಟೀಕರಣ ಕೊಡುತ್ತೇನೆ.

ಸಲ್ಲಾಪ ಬ್ಲಾಗಿನ ಸುನಾಥ ಹೀಗೆ ಬರೆದಿದ್ದಾರೆ:

ನಮ್ಮ ರೈತರು ಬಿಟಿ ಬೆಳೆಗಳಿಗೆ ಹೆದರುತ್ತಿರಲು ಬೇರೊಂದು ಕಾರಣವಿದೆ. ಅದು ಸಂಪೂರ್ಣವಾಗಿ ವ್ಯಾಪಾರೀ ಕಾರಣ. ಸಾಂಪ್ರದಾಯಕ ಬೆಳೆಗಳ ಬೀಜಗಳನ್ನು ನಮ್ಮವರೇ ಹಿಡಿದಿಟ್ಟುಕೊಳ್ಳಬಹುದು, ಆದರೆ ಬಿಟಿ ಬೆಳೆಗಳನ್ನು ಒಮ್ಮೆ ಬೆಳೆದರೆ ಸಾಕು, ನಿರಂತರವಾಗಿ ಈ ಬಿಟಿ ಕಂಪನಿಗಳನ್ನು ಬೀಜಗಳಿಗಾಗಿ ಅವಲಂಬಿಸಬೇಕಾಗುತ್ತದೆ. ಈ ಕಂಪನಿಗಳು ಕೆಲ ಕಾಲಾನಂತರ ಅಂದರೆ ನಮ್ಮ ಸಾಂಪ್ರದಾಯಕ ಕೃಷಿಯ ನಷ್ಟದ ನಂತರ ನಮ್ಮನ್ನು ಶೋಷಿಸಲು ಪ್ರಾರಂಭಿಸುವರು ಎಂದು ಹೇಳಲಾಗುತ್ತಿದೆ. ಇದು ಸರಿ ಇರಬಹುದೆ?

ನನ್ನ ಪ್ರಕಾರ ಇದು ರೈತನಿಗೆ ಗಂಭೀರ ಸಮಸ್ಯೆಯೆ ಅಲ್ಲ. ನನ್ನ ಅನುಭವದ ಪ್ರಕಾರ, ಇಂದು ಬೆಳೆಯುವ ಬಹುಪಾಲು ಕಮರ್ಷಿಯಲ್ ಬೆಳೆಗಳನ್ನು ಬೆಳೆಯಲು ರೈತ ತನ್ನ ಬೀಜಗಳನ್ನು ಉಪಯೋಗಿಸುವುದಿಲ್ಲ. ಅದಕ್ಕೆ ಆತ ಒಳ್ಳೆಯ ಗುಣಮಟ್ಟದ ಬೀಜಗಳನ್ನು ಮಾರುವ ಕಂಪನಿಗಳಿಂದ ಬೀಜಗಳ ಪಾಕೆಟ್/ಚೀಲಗಳನ್ನು ಕೊಳ್ಳುತ್ತಾನೆ. ಬೆರಕೆ ಆಗಿರದ, ಒಂದೆ ಗುಣಮಟ್ಟ ಇರುವ ಬೀಜಗಳಷ್ಟೆ ರೈತನಿಗೆ ಮುಖ್ಯ. ತಾನೆ ಬೀಜಗಳನ್ನು ಸಂಸ್ಕರಿಸಿಕೊಳ್ಳುವುದು ಸ್ವಲ್ಪ ತ್ರಾಸದಾಯಕ ಕೆಲಸ ಮತ್ತು ಅದು ಗುಣಮಟ್ಟದ ಖಾತ್ರಿ ಕೊಡುವುದಿಲ್ಲ. ತಾನೆ ಸಂಸ್ಕರಿಸಿಕೊಂಡ ಬೀಜಗಳಿಂದಾಗಿ ಇಳುವರಿ ಕಡಿಮೆ ಮಾಡಿಕೊಳ್ಳುವುದನ್ನು ಕಮರ್ಷಿಯಲ್ ಬೆಳೆಗಳ ಬೆಳೆಗಾರ ಇಷ್ಟಪಡುವುದಿಲ್ಲ.

(ರಾಗಿ-ಜೋಳದಂತಹ ಕೆಲವೆ ಮಳೆಯಾಧಾರಿತ ಬೆಳೆಗಳಿಗೆ ರೈತ ತನ್ನಲ್ಲಿರುವ ಬೀಜಗಳನ್ನು ಉಪಯೋಗಿಸುತ್ತಾನೆ. ಈ ಬೆಳೆಗಳು ನೀರಾವರಿ ಬೆಳೆಗಳಲ್ಲ. ಮತ್ತು ಈ ಬೆಳೆಗಳಿಗೆ inputs ಸಹ ಕಡಿಮೆ.)

ಇನ್ನು ಶೋಷಣೆಯ ಪ್ರಶ್ನೆ: ತನಗೆ ಬೇಕಾದದ್ದನ್ನು ಬೆಳೆಯಲು ರೈತ ಸ್ವತಂತ್ರ. ಇಂತಹ ಬೀಜ/ಬೆಳೆ ಬೆಳೆಯುವುದು ಬೇಡ ಎಂದು ಆತ ಅಂದುಕೊಂಡರೆ ಯಾರೂ ಆತನನ್ನು ಬಲಾತ್ಕರಿಸಲಾಗದು. ಇನ್ನು ಮೊನ್ಸಾಂಟೊದಂತಹ ಕಂಪನಿಗಳು ಬೆಲೆ ಹೆಚ್ಚಿಸುವುದೊ ಇನ್ನೆಂತಹುದೊ ಶೋಷಣೆ ಆರಂಭಿಸಿದರೆ ಸರ್ಕಾರ ಒಂದು ಕಾಯ್ದೆ/ತಿದ್ದುಪಡಿ ತಂದರೆ ಸಾಕು. ಇಂತಹ ಕಂಪನಿಗಳ ವಿರುದ್ಧ ಸರ್ಕಾರಕ್ಕಿಂತ, ನೆಲದ ಕಾನೂನಿಗಿಂತ ಬಲಶಾಲಿಯಾದ ಆಯುಧ ಇನ್ನೊಂದಿಲ್ಲ. ಸರ್ಕಾರ ಯಾರದು? ಜನರದ್ದೆ. (ಕನಿಷ್ಠ, ಜನರ ಪಾತ್ರವಿರುವ ಉತ್ತಮ ಪ್ರಜಾಪ್ರಭುತ್ವಗಳಲ್ಲಿ). ಹಿಂದೆ ಹಲವಾರು MNCಗಳನ್ನು ನಮ್ಮ ನೆಲದಿಂದ ಉಚ್ಚಾಟಿಸಲಾಗಿದೆ. ಕಂಪನಿಗಳು ಜನವಿರೋಧಿ ಕೆಲಸ ಮಾಡಿದರೆ ಸರ್ಕಾರವೆ ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು. ಹಾಗಾಗಿ, ಇವೆಲ್ಲ clerical ಹಂತದಲ್ಲಿಯೆ ನಿವಾರಿಸಬಹುದಾದ ಸಮಸ್ಯೆಗಳು. (ಅದು ಹೇಳಿದಷ್ಟು ಸುಲಭವಲ್ಲ ಎಂದು ಗೊತ್ತು. ಆದರೆ ಅಸಾಧ್ಯವಲ್ಲವಲ್ಲ.)

ಹುಡುಗುಮನ ಬ್ಲಾಗಿನ ಶ್ರೀಹರ್ಷ ಸಾಲಿಮಠರ ಅಬಿಪ್ರಾಯ ಇದು:

ಬಿ.ಟಿ.ಬದನೆಯ ಬೀಜಗಳನ್ನು ಒಂದು ಸಾರಿ ಕೊಂಡರಾಯಿತು, ಮತ್ತೆ ಕೊಳ್ಳುವ ಅವಶ್ಯಕತೆಯಿಲ್ಲ. ಬದನೆಯ ಬೀಜಗಳ ಮರುಬಳಕೆ ಮಾಡಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ.
ಇಲ್ಲಿ ಎರಡು ಮುಖ್ಯ ಅಂಶಗಳಿವೆ,
೧. ಒಮ್ಮೆ ಜೀನನ್ನು ಬದಲಾಯಿಸಿ ಪ್ರಕೃತಿಯಲ್ಲಿ ಬಿಟ್ಟರೆ ಅದು ಮುಂದೆ ಅನಿಯಂತ್ರಿತವಾಗುತ್ತದೆ. ರಸಾಯನಿಕ ಗೊಬ್ಬರವನ್ನು ಹಾಕುವುದು ನಿಲ್ಲಿಸಿದರೆ ರಸಾಯನಿಕ ಗೊಬ್ಬರದ ಹಾನಿಯನ್ನು ತಡೆಯಬಹುದು. ಜೀನ್ ಬದಲಾದರೆ ಅದು ಶಾಶ್ವತ! ಅದರ ಮೇಲೆ ಯಾವ ನಿಯಂತ್ರಣವೂ ಇರುವುದಿಲ್ಲ. ಎಲ್ಲೇ ಚಿಕ್ಕ ತಪ್ಪಾಗಿದ್ದರೂ ಅದನ್ನು ಸರಿಪಡಿಸುವ ಪ್ರಮೇಯವೇ ಇರುವುದಿಲ್ಲ. It’s a permanent blunder!
೨. ಒಂದೇ ಜಾತಿಯ ಬೇರೆ ಬೇರೆ ತಳಿಯ ಗಿಡಗಳ ನಡುವೆ ಜೀನ್ ಬದಲಾವಣೆ ಸಾಮಾನ್ಯ. ಆದರೆ ಬ್ಯಾಕ್ಟೀರಿಯಾ ಅಥವಾ ಪ್ರಾಣಿ ಸಸ್ಯಗಳ ನಡುವೆ ಜೀನ್ ಬದಲಾವಣೆ ಎಷ್ಟರ ಮಟ್ಟಿಗೆ ಸರಿ? Ethically how far it is correct? ಎಂಬುದೂ ಪ್ರಶ್ನೆ.

ನಾನು ಇತ್ತೀಚೆಗೆ ಓದಿದ ಎರಡು ಪುಸ್ತಕಗಳನ್ನು ನೀವೂ ಓದಿದರೆ ಮೇಲಿನ ಪ್ರಶ್ನೆಗಳಿಗೆ ಉತ್ತರ ಸಿಗಬಹುದು ಅಥವ ಇವು ಅನಗತ್ಯ ಭಯಗಳು ಎನಿಸಬಹುದು. ಮೇಲೆ ಹೇಳಿದಂತೆ ಸಣ್ಣಪುಟ್ಟ ಲೇಖನಗಳು ಅಥವ ನನ್ನ ಒಂದೆರಡು ಪ್ಯಾರಾದ ವಿವರಣೆಗಳು ವಿಷಯವನ್ನು ಸಮಗ್ರವಾಗಿ ತಿಳಿಸಲು ಸಹಾಯ ಮಾಡುವುದಿಲ್ಲ. ಮೊದಲ ಪುಸ್ತಕ, ರಿಚರ್ಡ್ ಡಾಕಿನ್ಸ್‌ನ “The Greatest Show on Earth: The Evidence for Evolution”. ಎರಡನೆಯದು, ನಾನು ಹಿಂದಿನ ಲೇಖನದಲ್ಲಿ ಪ್ರಸ್ತಾಪಿಸಿದ್ದ ಸ್ಟ್ಯುವರ್ಟ್ ಬ್ರಾಂಡ್‌ನ “Whole Earth Discipline: An Ecopragmatist Manifesto”.

ಬಿಟಿ ಬದನೆ ವಿಷಯ ಏನೇ ಇರಲಿ, GM/GE ಬೆಳೆಗಳಂತೂ ಹೆಚ್ಚಲಿವೆ. ನನ್ನ ಸಣ್ಣಪುಟ್ಟ ಓದಿನಿಂದ ಸದ್ಯಕ್ಕೆ ನನಗೆ ಕಾಣಿಸುತ್ತಿರುವುದು ಇದು. ಮುಂದಿನ ಐದು-ಹತ್ತು ವರ್ಷಗಳಲ್ಲಿ ಪ್ರಪಂಚದ ಬಹುತೇಕ ಜನರ ಊಟದಲ್ಲಿ ಒಂದು ತರಕಾರಿ/ಬೇಳೆ/ಅಕ್ಕಿ/ಹಣ್ಣಾದರೂ GM ಮೂಲದ್ದಾಗಿರುತ್ತದೆ. ಇದೇ ಸರಿ ಎಂದಾಗಲಿ ಅಥವ ಆಗಿಯೇ ತೀರುತ್ತದೆ ಎಂದಾಗಲಿ ಘೋಷಿಸಲಾರೆ. ಮಿಕ್ಕ ವಿಷಯ/ಪುಸ್ತಕ/ಸಂದರ್ಭಗಳ ಸಂಪರ್ಕಕ್ಕೆ ಬಂದಾಗ ಈ ಅಭಿಪ್ರಾಯಗಳು ಬದಲಾಗಬಹುದು. ಸದ್ಯಕ್ಕಿಲ್ಲ.

Stewart Brand ಎರಡು ದಿನಗಳ ಹಿಂದೆ ಬೇ ಏರಿಯಾದ KQED ರೇಡಿಯೋದ Forum ಚರ್ಚೆಯಲ್ಲಿ ಪಾಲ್ಗೊಂಡಿದ್ದ. ಅದರ ಧ್ವನಿಮುದ್ರಿಕೆ ಕೇಳಲು ಇಲ್ಲಿ ಲಭ್ಯವಿದೆ. http://www.kqed.org/epArchive/R201002081000. ಆತ ವಂದನಾ ಶಿವ ಬಗ್ಗೆ ಸ್ವಲ್ಪ ತೀಕ್ಷ್ಣವಾದ ಕಾಮೆಂಟ್ ಮಾಡುತ್ತಾನೆ. “ಮಾತಿನ ಮಲ್ಲಿ/ವಾಚಾಳಿ (loquacious),” ಎನ್ನುತ್ತಾನೆ! ಮಾನವಹಕ್ಕುಗಳ ಪರ ಹೋರಾಡುವ ವಂದನಾ ಶಿವ ಬಗ್ಗೆ ನನಗೆ ಗೌರವವೆ ಇದೆ. ಆದರೆ ಆಕೆ ಎತ್ತುವ ಎಲ್ಲಾ ವಿಚಾರಗಳಿಗೂ ಸಮ್ಮತ ಇರಲೇಬೇಕು ಎಂದೇನೂ ಇಲ್ಲ. ಇದು ಅಂತಹುದೊಂದು ವಿಷಯ. ನಾವು ಜೀವಿಸುತ್ತಿರುವ ಅರ್ಥವ್ಯವಸ್ಥೆ ವಿಭಿನ್ನವಾದದ್ದು. ಹಕ್ಕುರಕ್ಷಣೆ ಮುಖ್ಯ. ಹಾಗೆಂದು ಆಚೆ ಹೋಗದ ಹಾಗೆ ಗೋಡೆ ಕಟ್ಟಿಕೊಳ್ಳಬೇಕಿಲ್ಲ. ಇದು ಜಂಗಮ ಪ್ರಪಂಚ.

ಚುರುಮುರಿಯಲ್ಲಿ ಓದುಗರೊಬ್ಬರು ಈ ವಿಡಿಯೊ ಹಂಚಿಕೊಂಡಿದ್ದಾರೆ. (ಕೊನೆಯಲ್ಲಿ) ಸ್ವಲ್ಪ ಅತಿರೇಕದ ಮಾತು ಎನ್ನಿಸಿದರೂ ಗಮನಿಸಲು ಅರ್ಹವಾದ ವಿಡಿಯೊ:

ಹಾಗೆಯೆ, ಈ ವಿಚಾರದ ಬಗ್ಗೆ ಹಲವಾರು ಕಡೆ ಓದುಗರು Food Inc. ಡಾಕ್ಯುಮೆಂಟರಿಯನ್ನು ಉಲ್ಲೇಖಿಸುತ್ತಾರೆ. ನಾನು ಇದನ್ನು ಸುಮಾರು ಆರು ತಿಂಗಳ ಹಿಂದೆಯೆ ನೋಡಿದ್ದೆ. ಸಾವಯವ ತರಕಾರಿಗಳನ್ನು ಕೊಳ್ಳುವುದು ಹೆಚ್ಚುಮಾಡಿದ್ದೆ ನಾನು ಇದು ಮತ್ತು ಇಂತಹುದೆ ಹಲವಾರು ಡಾಕ್ಯುಮೆಂಟರಿಗಳನ್ನು ನೋಡಿದ ಮೇಲೆ. ಆದರೆ ಅಲ್ಲಿ ಬರುವ ಮೊನ್ಸಾಂಟೊ ಬಗ್ಗೆ ನನಗೆ ಭಯ ಇಲ್ಲ. MNC ಗಳು ಪ್ರಜಾಡಳಿತದ ಸರ್ಕಾರಗಳಿಗಿಂತ ಬಲಶಾಲಿಯಲ್ಲ. ಅಮೇರಿಕದ ರೈತರನ್ನು ಕೋರ್ಟಿಗೆಳೆದಂತೆ ಭಾರತದ ಸಣ್ಣಪುಟ್ಟ ರೈತರನ್ನು ಕೋರ್ಟಿಗೆಳೆಯುವುದು ಸುಲಭವಲ್ಲ. ಸಾಧ್ಯವೂ ಅಲ್ಲ.

Add a Comment

required, use real name
required, will not be published
optional, your blog address