ಲಿಂಗಾಯತ ಸಮಾವೇಶದಲ್ಲಿ ಆನು “ಹೊರಗಣವನು”
Posted Under: Uncategorized
ನನ್ನ ಇನ್ನಿತರೆ ವ್ಯವಹಾರಗಳಲ್ಲಿ ವ್ಯಸ್ತನಾಗುವುದಕ್ಕಿಂತ ಮುಂಚೆ ಇದನ್ನು ಇಲ್ಲಿ ದಾಖಲಿಸೋಣ ಎಂದು ಬರೆಯುತ್ತಿದ್ದೇನೆ.
ಕಳೆದ ವಾರ (ಜುಲೈ 3-4, 2010) ಕೆನಡಾದ ಟೊರಾಂಟೋದಲ್ಲಿ ಲಿಂಗಾಯತ (ಮತ್ತು/ಅಥವ ವೀರಶೈವ) ಸಮುದಾಯದ ಸಮಾವೇಶ ನಡೆಯಿತು. “ಉತ್ತರ ಅಮೆರಿಕದ ವೀರಶೈವ ಸಮಾಜ” ವರ್ಷಕ್ಕೊಮ್ಮೆ ನಡೆಸುವ ಸಮಾವೇಶ ಅದು. ಯಾವುದೇ ಜಾತಿಯ ಸಮಾವೇಶ ಅಥವ ಸಭೆಗಳಲ್ಲಿ ಪಾಲ್ಗೊಳ್ಳುವುದು ಜಾತ್ಯತೀತ ಮತ್ತು ಪ್ರಗತಿಪರ ನಿಲುವಿನ ಮತ್ತು ಬದ್ಧತೆಯ ಯಾರೊಬ್ಬರಿಗೂ ಕಷ್ಟ. ಅದು ತಪ್ಪೂ ಕೂಡ. ಸಮಾನತೆ ಮತ್ತು ಸಹಬಾಳ್ವೆಗಾಗಿ ಹೋರಾಡುತ್ತ, 12ನೇ ಶತಮಾನದಲ್ಲಿಯೆ ಜಾತ್ಯತೀತವಾದ (casteless) ಸಮಾಜವೊಂದನ್ನು ಕಟ್ಟುತ್ತ ಬೆಳೆದ ಸಮುದಾಯದವರ ಈಗಿನ ತಲೆಮಾರಿನ ಜನರ ಸಮಾವೇಶದಲ್ಲಿ ಪಾಲ್ಗೊಳ್ಳಲು ಯಾವುದೇ ಹಿಂಜರಿಕೆ ಇರಕೂಡದು. ಆದರೆ ವಾಸ್ತವ ಹಾಗೆ ಇಲ್ಲ ಎಂದು ಎಲ್ಲರಿಗೂ ಗೊತ್ತು. ಲಿಂಗಾಯತ ಸಮುದಾಯ ಎನ್ನುವುದು ಬೇರೆಯದೇ ಮತವೋ ಅಥವ ಅದೂ ಒಂದು ಜಾತಿಯೋ ಎನ್ನುವುದೇ ಬಹುಸಂಖ್ಯಾತರಿಗೆ ಸ್ಪಷ್ಟವಾಗಿಲ್ಲ. ಬಸವಣ್ಣಾದಿ ಶರಣರ ಆದರ್ಶದ ಹಿನ್ನೆಲೆಯಿಂದ ನೋಡಿದರೆ ಅದು ಅವೆರಡೂ ಆಗಬಾರದು. ಅದೊಂದು ಜಾತ್ಯತೀತ ಮತ್ತು ಪ್ರಗತಿಪರ ಚಿಂತನೆಯ, ಆಚರಣೆಯಲ್ಲಿ ತೊಡಗಿಕೊಂಡ ಜನಸಮೂಹವಾಗಬೇಕು. ವಾಸ್ತವ ಮತ್ತೊಮ್ಮೆ ಎದುರು ನಿಲ್ಲುತ್ತದೆ. ಯಾರಿಗೆ ಅಲ್ಲದಿದ್ದರೂ ಕರ್ನಾಟಕದ ಜನತೆಗೆ ವೈಚಾರಿಕ ಮಾರ್ಗದರ್ಶನ ನೀಡಬಹುದಾಗಿದ್ದ ಸಮುದಾಯವೊಂದು ಅಂತಹ ಅವಕಾಶವನ್ನು ಕಳೆದುಕೊಂಡಿದ್ದು ಮತ್ತು ಜವಾಬ್ದಾರಿ ಮರೆತದ್ದು ಚಾರಿತ್ರಿಕ ವ್ಯಂಗ್ಯ. ವಿಶಾಲವಾಗಬೇಕಾಗಿದ್ದದ್ದು ಮನುಷ್ಯನ ಸ್ವಾರ್ಥ ಮತ್ತು ಸ್ವಹಿತಾಸಕ್ತಿಯ ಸಂಚಿಗೆ ಬಲಿಯಾಗಿ ಸಂಕುಚಿತವಾದದ್ದಂತೂ ಮೂಲಚಳವಳಿಗೆ ಮತ್ತು ಹಿರಿಯರಿಗೆ ಬಗೆದ ದ್ರೋಹ.
ಹೀಗಿದ್ದರೂ, ಒಂದಿಷ್ಟು ಆಗ್ರಹ ಮತ್ತು ಪ್ರೀತಿಗೆ, ಈ ಸಮುದಾಯದ ಕೆಲವರನ್ನಾದರೂ ಅನುಸಂಧಾನದಲ್ಲಿ ತೊಡಗಿಸಿಕೊಳ್ಳಬಹುದಾದ ಅವಕಾಶಕ್ಕಾಗಿ ಈ ಸಮಾವೇಶಕ್ಕೆ ಆಹ್ವಾನಿತನಾಗಿ ಹೋಗಿದ್ದೆ. ವಚನ ಸಾಹಿತ್ಯದ ವಿದ್ವಾಂಸರಲ್ಲೊಬ್ಬರಾದ ರಮ್ಜಾನ್ ದರ್ಗಾ ಮುಖ್ಯ ಭಾಷಣಕಾರರಾಗಿ ಬಂದಿದ್ದರು. ನಾಡಿನ ಕೆಲವೇ ಪ್ರಗತಿಪರ ಮಠಾಧೀಶರರಲ್ಲಿ ಒಬ್ಬರಾದ ಚಿತ್ರದುರ್ಗದ ಶಿವಮೂರ್ತಿ ಶರಣರಿದ್ದರು. ಪ್ರಸ್ತಾಪಿಸಲು ಅನೇಕ ವಿಷಯಗಳಿದ್ದವು. ಕೊಟ್ಟಿರುವ ಅವಧಿಯಲ್ಲಿ ಈ ಎಲ್ಲಾ ವಿಚಾರಗಳನ್ನು ಪ್ರಸ್ತಾಪಿಸಬೇಕಾಗಿದ್ದಿದ್ದರಿಂದ ಒಂದು ಸಣ್ಣ ಲೇಖನವನ್ನು ಬರೆದುಕೊಳ್ಳೋಣ ಎಂದುಕೊಂಡಿದ್ದೆ. ಆದರೆ ಸಮಯಾಭಾವ ಮತ್ತು ಅದರ ಹಿಂದಿನ ದಿನಗಳ ಜೆಟ್ ಲ್ಯಾಗ್‌ನಿಂದಾಗಿ ಸಾಧ್ಯವಾಗಲಿಲ್ಲ. ಅದು ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತು. ಒಂದೇ ವಿಷಯದ ಮೇಲೆ ಯಾವುದೆ ಸಂಕೋಚ ಮತ್ತು ಪೊಲಿಟಿಕಲಿ ಕರೆಕ್ಟ್ ಆಗಿರಬೇಕಾದ ಹಿಂಜರಿಕೆಗಳಿಲ್ಲದೆ ಮಾತನಾಡಿದೆ. ಯಾರೊಬ್ಬರ ಜಾತಿಅಹಂ ಅನ್ನು ತೃಪ್ತಿಪಡಿಸಲು ನಾನಲ್ಲಿ ಹೋಗಿರಲಿಲ್ಲ. ಹಾಗೇನಾದರೂ ಆಗಿದ್ದಲ್ಲಿ ನನ್ನನ್ನೇ ನಾನು ಕ್ಷಮಿಸಿಕೊಳ್ಳುವ ಹಾಗಿರಲಿಲ್ಲ. ನನ್ನ ಇತರೆ ಪ್ರಗತಿಪರ ಮಿತ್ರರಿಗೆ ನನ್ನ ಬಗ್ಗೆ ನಾಚಿಕೆ ಮತ್ತು ಅಸಹ್ಯ ಅಗದ ಹಾಗೆ ನಡೆದುಕೊಂಡೆ ಎಂದು ಹೇಳಿದರೆ ಎಲ್ಲವನ್ನೂ ಹೇಳಿದಂತಾಗುತ್ತದೆ ಎಂದು ಭಾವಿಸುತ್ತೇನೆ. ಒಂದೆರಡು ಸಲ ಸಣ್ಣಪುಟ್ಟ ವಿವರಣೆ ಮತ್ತು ಪ್ರತಿರೋಧ ಬಂದರೂ, ಒಟ್ಟಾರೆಯಾಗಿ ಬಹಳಷ್ಟು ಜನ ನನ್ನ ಮಾತಿನ ಅರ್ಥ ಮತ್ತು ವಾಸ್ತವವನ್ನು ಗಮನಿಸಿದ್ದು ಗೊತ್ತಾಯಿತು. ಹಲವಾರು ಅಂತರ್ಜಾತಿ, ಅಂತರ್ಮತೀಯ, ಅಂತರ್ಜನಾಂಗ ಮದುವೆಗಳಾಗಿದ್ದ ಜನ ಅಲ್ಲಿದ್ದರು. ಅವರಿಗೆ ಅಪಥ್ಯವಾಗುವಂತಹುದೇನನ್ನೂ ನಾನು ಹೇಳಲಿಲ್ಲ. (ಸಾಧ್ಯವಾದಾಗ ಅದರ ಆಡಿಯೊ ಹಾಕುತ್ತೇನೆ.)
ಪ್ರಜಾವಾಣಿಯ ವರದಿಗಾರರಾಗಿದ್ದ ಮತ್ತು ಈಗ ಟೊರಾಂಟೋದಲ್ಲಿಯೇ ವಾಸವಾಗಿದ್ದು ಅಲ್ಲಿಂದಲೇ ಸ್ಥಳೀಯ ಭಾರತೀಯ ಸಮುದಾಯದವರಿಗಾಗಿ ಒಂದು ಪತ್ರಿಕೆಯನ್ನೂ ಹೊರತರುತ್ತಿರುವ ನಾಗರಾಜ್ ಈ ಸಮಾವೇಶದ ಆಯೋಜಕರಿಗೆ ಕೆಲವೊಂದು ಸಲಹೆಗಳನ್ನು ಕೊಟ್ಟರು. ಬಸವಾನುಯಾಯಿಗಳು ಎಂದು ಎದೆತಟ್ಟಿ ಹೇಳಿಕೊಳ್ಳುವವರಿಗೆ ಬಹಳ ಸೂಕ್ತವಾದ ಮತ್ತು ಅವರು ಮಾಡಲೇಬೇಕಾದ ಸಲಹೆಗಳವು. ಅದನ್ನು ಅನುಮೋದಿಸುತ್ತ ನಾನೂ ಒಂದು ಮಾತು ಸೇರಿಸಿದೆ: ಬಾಗಿಲು ತೆರೆದಿಡಿ; ಮುಚ್ಚಿಡಬೇಡಿ. ಈ ಸಮುದಾಯ ಸಂಸ್ಥೆಯ ಮುಂದಿನ ನಡೆಗಳು ಗಮನಿಸಲು ಅರ್ಹ.