ಕಲಿಯುಗದಿಂದ ಕೃತಯುಗಕ್ಕೆ
Posted Under: Uncategorized
(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಜನವರಿ 19, 2007 ರ ಸಂಚಿಕೆಯಲ್ಲಿನ ಲೇಖನ)
ಅವರು ದೆಹಲಿಯ ಹೊರವಲಯದ ಹೈಟೆಕ್ ಸಿಟಿ ನೋಯ್ಡಾದ ಶ್ರೀಮಂತರ ಮನೆಗಳಲ್ಲಿ ಕಸಮುಸುರೆ ತೊಳೆಯುವ, ಬಟ್ಟೆ ಒಗೆಯುವ, ಟಾಯ್ಲೆಟ್, ಚರಂಡಿ ಸ್ವಚ್ಛ ಮಾಡುವ ಬಡವರು. ಅವರ ವಾಸ ನೋಯ್ಡಾದ ಪಕ್ಕದ ನಾಥಾರಿಯಲ್ಲಿ. ಅವರು ಆ ಕ್ಷೇತ್ರದ ಮತದಾರರೂ ಅಲ್ಲ. ಯಾಕೆಂದರೆ, ಅವರಲ್ಲಿ ಬಹುಪಾಲು ಜನ ಬೇರೆ ಕಡೆಗಳಿಂದ ಉದ್ಯೋಗಗಳನ್ನು ಹುಡುಕಿಕೊಂಡು ಬಂದ ಬಡಬಗ್ಗರು. ಅವರಿಗೆ ಮೇಲೆ ಹೇಳಿದ್ದಕ್ಕಿಂತ ಒಳ್ಳೆಯ ಕೆಲಸಗಳು ಸಿಕ್ಕರೆ ಅದು ಲಾಟರಿ ಹೊಡೆದಂತೆ! ಇಂತಹ ಸ್ಥಿತಿಯಲ್ಲಿ, ಸರಿಯಾಗಿ ಇಪ್ಪತ್ತೊಂದು ತಿಂಗಳ ಹಿಂದೆ ನಾಥಾರಿಯಿಂದ ಬೀನಾ ಎಂಬ ಹುಡುಗಿ ನಾಪತ್ತೆಯಾಗುತ್ತಾಳೆ. ಆ ಹುಡುಗಿಯ ಅಪ್ಪಅಮ್ಮ ಪೋಲಿಸರಿಗೆ ಆ ವಿಚಾರವಾಗಿ ದೂರು ಕೊಡಲು ಹೋದರೆ, ‘ಈ ದರಿದ್ರರಿಗೆ ಮಗಳು ನಾಪತ್ತೆಯಾಗಿದ್ದಾಳೆ ಎಂದು ದೂರು ಕೊಡಲು ಎಷ್ಟು ಧೈರ್ಯ, ಇವರೇನು ಅಧಿಕಾರಸ್ಥರೆ, ರಾಜಕಾರಣಿಗಳೆ, ಅಡೋಬಿ ಸಾಪ್ಟ್‍ವೇರ್ ಸಂಸ್ಥೆಯ ಎಮ್.ಡಿ.ಯೆ, ಚಹಾ ಕೊಡಿಸಲೂ ಯೋಗ್ಯತೆಯಿಲ್ಲದವರಿಂದ ದೂರು ದಾಖಲಿಸುವಷ್ಟು ಚೀಪಾಗಿ ಹೋದೆವೆ ನಾವು?’ ಎಂದುಕೊಂಡು, ಬಹುಶಃ ಸಾಕಷ್ಟು ಮರ್ಯಾದೆ ಮಾಡಿ, ದೂರು ಸ್ವೀಕರಿಸದೆ ಪೋಲಿಸರು ಕಳುಹಿಸಿರುತ್ತಾರೆ.
ಅಲ್ಲಿಂದೀಚೆಗೆ ಇದೇ ಏರಿಯಾದಿಂದ 38 ಕ್ಕೂ ಹೆಚ್ಚು ಹೆಣ್ಣುಮಕ್ಕಳು ನಾಪತ್ತೆಯಾದ ಬಗ್ಗೆ ಪೋಷಕರು ದೂರು ನೀಡಲು ಪ್ರಯತ್ನಿಸುತ್ತಲೆ ಇರುತ್ತಾರೆ. ಅದು ಹೇಗೊ, ಇತ್ತೀಚೆಗೆ ತಾನೆ ನಾಪತ್ತೆಯಾದ 16 ವರ್ಷದ ಹುಡುಗಿಯ ಬಗ್ಗೆ ತನಿಖೆ ನಡೆಸುತ್ತಿದ್ದಾಗ ಆಕೆಯ ಸೆಲ್‌ಫೋನ್ ಉಪಯೋಗಿಸುತ್ತಿರುವ ವ್ಯಕ್ತಿಯ ಸುಳಿವು ಪೋಲಿಸರಿಗೆ ಸಿಗುತ್ತದೆ. ಆತ ಅದೇ ಏರಿಯಾದ ಶ್ರೀಮಂತನೊಬ್ಬನ ಮನೆಯ ಸೇವಕ. ಹಾಳಾಗಿ ಹೋಗಲಿ ಎಂದು ತನಿಖೆ ಪ್ರಾರಂಭಿಸಿದರೆ, ಆತನ ಒಡೆಯನ ಮನೆಯ ಹತ್ತಿರದ ಚರಂಡಿಯಲ್ಲಿ ಸುಮಾರು 15 ಮಕ್ಕಳ ಮೂಳೆ, ತಲೆಬುರುಡೆಗಳು ಸಿಗುತ್ತವೆ. ಇಷ್ಟು ದಿನ ತಮ್ಮ ದೂರು ಸ್ವೀಕರಿಸದೆ ತಮ್ಮನ್ನು ಪ್ರಜೆಗಳಾಗಿ ಪರಿಗಣಿಸದೆ ಕ್ರಿಮಿಗಳಂತೆ ನಡೆಸಿಕೊಂಡ ಪೋಲಿಸರು, ಮಕ್ಕಳು ನಾಪತ್ತೆಯಾದಾಗಿನಿಂದ ಅಸಹಾಯಕವಾಗಿ ನರಳಿದ ಹೆತ್ತಕರುಳಿಗೆ ನೀಡಿದ ಒಂದೆ ಒಂದು ಪ್ರಾಮಾಣಿಕ ಉತ್ತರ, “ಆ ತಲೆಬುರುಡೆಗಳಲ್ಲಿ ನಿಮ್ಮದೂ ಒಂದಾಗಿರಬಹುದು” ಎಂದನಿಸುತ್ತದೆ.
ಬೀನಾ ನಾಪತ್ತೆಯಾದ ಕೂಡಲೆ ತನಿಖೆ ಆರಂಭಿಸಿದ್ದರೆ ಹತ್ತಿಪ್ಪತ್ತು ಇರಲಿ, 2 ನೆಯ ಮಗು ನಾಪತ್ತೆಯಾಗುವುದೆ ಅಸಂಭವವಾಗಿತ್ತು. ವಿಪರ್ಯಾಸ ಏನೆಂದರೆ, ಕಳೆದು ಹೋದವರಲ್ಲಿ ಬಹುಪಾಲು ಜನ ಕೇವಲ ಮುನ್ನೂರು ಅಡಿಯ ಸುತ್ತಳೆಯಲ್ಲಿ ವಾಸ ಮಾಡುತ್ತಿದ್ದವರು! ಇಲ್ಲಿ ಏನೋ ಒಂದು ಪ್ಯಾಟರ್ನ್ ಇದೆ ಎಂದು ಪೋಲಿಸರು ಯೋಚಿಸಲು ಈ ಮಕ್ಕಳೇನು ದೇವಪುತ್ರರೆ? ಆ ರಾಜ್ಯಕ್ಕೊಬ್ಬ ಮಹಾತ್ಮ ಮಂತ್ರಿಯಾಗಿದ್ದಾನೆ.’ಇದೇನು ಈ ಸೀರಿಯಲ್ ಕೊಲೆಗಳ ವಿಷಯ ಮಹಾಪ್ರಭುಗಳೆ?’ ಎಂದರೆ, ‘ಇದೆಲ್ಲಾ ಮಾಮೂಲಿ ಕಣ್ರಿ, ರೂಟಿನ್.’ ಎನ್ನುತ್ತಾನೆ.
ಇಷ್ಟೆಲ್ಲ ಆದರೂ, ಆ ರಾಜ್ಯದ ಸಮಾಜವಾದಿ ಮುಖ್ಯಮಂತ್ರಿ ಆ ಊರಿಗೆ ಕಾಲಿಡುವುದಿಲ್ಲ. ನೋಯ್ಡಾಗೆ ಹೋದ ಮುಖ್ಯಮಂತ್ರಿ ಮುಂದಿನ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಳ್ಳುತ್ತಾನಂತೆ! ಪಾಪ, ಅಲ್ಲಿಗೆ ಹೋಗದವರು ಇಲ್ಲಿಯ ತನಕ ಅಧಿಕಾರವನ್ನೆ ಕಳೆದುಕೊಳ್ಳದೆ, ಸಾಯುವ ತನಕ ಉತ್ತರ ಪ್ರದೇಶವನ್ನು ಆಳಿದಂತಿದೆ!
ಕರ್ನಾಟಕದಲ್ಲಿಯೂ ಅಂತಹ ಪವಿತ್ರ, ಪಾವನ ನಗರಗಳು ಒಂದೆರಡಿವೆ. ಇಡೀ ಚಾಮರಾಜನಗರವೆ ಹತ್ತಿ ಉರಿದರೂ, ಸಾವಿರಾರು ಜನ ಲಿಂಗೈಕ್ಯರಾದರೂ ಕರ್ನಾಟಕದ ಮುಖ್ಯಮಂತ್ರಿ ಅಲ್ಲಿಗೆ ಹೋಗುವುದು ಸಾಧ್ಯವೇ ಇಲ್ಲ. ತಮ್ಮೂರಿಗೆ ಮುಖ್ಯಮಂತ್ರಿ ಬರಲೇ ಬೇಕೆಂದರೆ ಚಾಮರಾಜನಗರದವರು ಮೊದಲು ಮಾಡಬೇಕಾದ ಕೆಲಸ, ಆ ಪಟ್ಟಣವನ್ನೆ ಒಂದು ರಾಜ್ಯವನ್ನಾಗಿ ಮಾಡಿಕೊಳ್ಳುವುದು. ಆಗಲಾದರೂ ಅವರೂರಿನವರೆ ಯಾರೊ ಒಬ್ಬರು ಮುಖ್ಯಮಂತ್ರಿಯಾಗುತ್ತಾರೆ! ಕರ್ನಾಟಕದ ಮುಖ್ಯಮಂತ್ರಿಗಳಿಂದಂತೂ ಇದಕ್ಕೆ ಯಾವುದೇ ವಿರೋಧ ಬರುವುದು ಸಂದೇಹ! ಶಾಪಗ್ರಸ್ತನಾಗಿ ಅಧಿಕಾರ ಕಳೆದುಕೊಳ್ಳುವುದಕ್ಕಿಂತ ಯಾವುದೋ ಮೂಲೆಯಲ್ಲಿನ ಮೂಲಾನಕ್ಷತ್ರದ ಊರನ್ನು ಗಡಿಪಾರು ಮಾಡುವುದೇ ಒಳ್ಳೆಯದು! ಕಲಿಯುಗ, ಕಲಿಯುಗ!! ಹಾಳಾದ್ದು ಮುಗಿಯುವುದೇ ಇಲ್ಲ.
ಇಲ್ಲ, ಮುಗಿಯುತ್ತಿದೆ! ಯಾಕೆಂದರೆ, ಕಲಿಯುಗ ಕೃತಯುಗವಾಗುವ ಸಂಧಿಕಾಲ ಇದು. ಇದೆಲ್ಲ ಆರಂಭವಾಗುವುದು ಯಾರೊ ಯಾರಿಗೊ ದುಡ್ಡು ಕೊಡುವುದರ ಮೂಲಕ. ಅದು ಹೇಗಾಯಿತೆಂದರೆ…
ಕೊಟ್ಟವನು ಕೋಡಂಗಿ, ಇಸ್ಕೊಂಡೊನು ಈರಭದ್ರ! ಆದರೆ, ಈ ಕೇಸಿನಲ್ಲಿ ಕೊಟ್ಟವನು ಉಗ್ರನಾಗಿ, ರುದ್ರನಾಗಿ, ತನ್ನ ಗಣಕ್ಕೆ ವೀರಭದ್ರನ ಉಸ್ತುವಾರಿಯಲ್ಲಿ ತಾಂಡವ ನೃತ್ಯ ಮಾಡಲು ಆಜ್ಞಾಪಿಸುತ್ತಾನೆ. ಆಗ ಇಸ್ಕೊಂಡವನ ತಿಥಿ ಚೆನ್ನಾಗಿ ಆಗುತ್ತದೆ. ಆದರೆ, ಇದು ಇನ್ನೂ ಕಲಿಯುಗ ಸ್ವಾಮಿ! ಇಲ್ಲಿನ ವ್ಯವಸ್ಥೇನೆ ಬೇರೆ!! ಪ್ರಜಾಪ್ರಭುತ್ವವಂತೆ, ಹಕ್ಕುಗಳಂತೆ, ಎಲ್ಲರೂ ಸಮಾನರಂತೆ, ಮಣ್ಣುಮಸಿಯಂತೆ!!! ಈ ವ್ಯವಸ್ಥೆಯಲ್ಲಿ, ಹೊಡೆಸಿಕೊಂಡವನು ದೂರು ಕೊಟ್ಟರೆ ಪೋಲಿಸರು ಹೊಡೆದವರನ್ನು ವಿಚಾರಣೆ ಮಾಡಿ, ‘ವಸೂಲಿ ಮಾಡುವುದಕ್ಕೆ ರೀತಿನೀತಿ ಹೀಗೀಗಿದೆ ಸ್ವಾಮಿ, ನಿಮ್ಮದು ಸ್ವಲ್ಪ ತಪ್ಪಾಯಿತು, ಅದಕ್ಕೆ ಇಷ್ಟು ದಂಡ, ಒಂದಿಷ್ಟು ಶಿಕ್ಷೆ’ ಎಂದು ಹೇಳಿ, ಹೊಡಿಸಿಕೊಂಡವನ ಪರವಾಗಿ ಖುದ್ದಾಗಿ ತಾವೆ ಪಬ್ಲಿಕ್
ಪ್ರಾಸಿಕ್ಯೂಟರ್ ನೇಮಿಸಬೇಕಂತೆ. ಆದರೂ ಕಾಲ ಅಷ್ಟೇನೂ ಕೆಟ್ಟಿಲ್ಲ ನೋಡಿ!! ‘ಹೊಡೆಸಿಕೊಂಡವನು ದೂರು ಕೊಡಬಾರದಾಗಿತ್ತು, ಇಡೀ ರಾಜ್ಯಸರ್ಕಾರವೆ ಧರ್ಮಸಂಧರ ಪರ ನಿಲ್ಲುತ್ತದೆ.’ ಎಂದು ಉಪಮುಖ್ಯಮಂತ್ರಿಗಳೆ ವೇದಘೋಷಗಳ ನಡುವೆ ಘೋಷಿಸಿ, ತಮ್ಮ ದೈವವಾದ ಶ್ರೀರಾಮನ ತ್ರೇತಾಯುಗಕ್ಕೆ ಇರಲಿ, ಅದಕ್ಕಿಂತ ಉಚ್ಚವಾದ, ಪೂರ್ವವಾದ, ಆದಿಯಾದ ಕೃತಯುಗಕ್ಕೇ ನೇರವಾಗಿ ಕಲಿಯುಗವನ್ನು ಹೊತ್ತೊಯ್ದು ಧರ್ಮಸಂಸ್ಥಾಪನೆ ಮಾಡುತ್ತಾರೆ.
ಆ ಸಂದರ್ಭದಲ್ಲಿ, ಸಂವಿಧಾನವೆಂಬ ಒಂದು ಕಾಗದದ ತುಂಡು ಕಲಿಯುಗದಲ್ಲಿ ಶಿಷ್ಟರಕ್ಷಣೆ ಮಾಡದೆ ದುಷ್ಟ ರಕ್ಷಣೆ ಮಾಡಿತ್ತಾದ್ದರಿಂದ, ಅದರ ಸಂಹಾರ ಮಾಡಲು ಬ್ರಹ್ಮರ್ಷಿ ಪೇಜಾವರರು ತಮ್ಮ ಪ್ರಿಯಶಿಷ್ಯ ಯಡಿಯೂರಪ್ಪನಿಗೆ ‘ಹೊಯ್ ಯಡ್ಡಿ’ ಎಂದು ಆದೇಶಿಸುತ್ತಾರೆ. ಆಗ ಶಿಷ್ಯ ಯಡಿಯೂರಪ್ಪನು ತನ್ನ ಓರೆಯಿಂದ ಕತ್ತಿಯನ್ನು ಹೊರಸೆಳೆದು ಸಂವಿಧಾನವನ್ನು ಸಹಸ್ರಸಹಸ್ರ ತುಂಡುಗಳಾಗಿ ತುಂಡರಿಸಿ ಗುರುಗಳ ಪ್ರೀತಿಗೆ ಪಾತ್ರನಾಗಿ ‘ಹೊಯ್ಯಡಿ ಯಡಿಯೂರಪ್ಪನವರು’ ಎಂದು ಬಿರುದಾಂಕಿತರಾಗುತ್ತಾರೆ.
ಇದಾದ ಹತ್ತು ತಿಂಗಳ ನಂತರ, ಹಿಂದೆ ಆದ ಒಡಂಬಡಿಕೆಯಂತೆ, ಹೊಯ್ಯಡಿ ರಾಜವಂಶದ ಯಡಿಯೂರಪ್ಪನವರ ಪಟ್ಟಾಭಿಷೇಕ ರಾಜಗುರುಗಳಾದ “ಶ್ರೀಶ್ರೀಶ್ರೀ ಬ್ರಹ್ಮರ್ಷಿ ಪೇಜಾವರ ವಿಶ್ವೇಶ್ವರತೀರ್ಥ ಯತೀಂದ್ರರ” ದಿವ್ಯ ಸಾನಿಧ್ಯದಲ್ಲಿ ನೇರವೇರಿತು.
ಪಟ್ಟಾಭಿಷೇಕದ ನಂತರ, “ಶಿಷ್ಯ ಹೊಯ್ಯಡಿ, ಪಕ್ಕದ ಯವನ ದೇಶವಾದ ಪಾಕಿಸ್ತಾನವು ಖುರಾನ್ ಎಂಬ ಅವರ ಪುರಾಣಗ್ರಂಥದ ಆಧಾರದ ಮೇಲೆ ರಾಜ್ಯಭಾರ ನಡೆಸುತ್ತಿದೆ; ಅವರನ್ನು ಎದುರಿಸಲು, ಅವರಿಗೆ ಸರಿಸಮನಾಗಿ ನೀನೂ ಸಹ ನಮ್ಮ ಧಾರ್ಮಿಕ ಗ್ರಂಥವಾದ ಮನುಸ್ಮೃತಿಯ ಆಧಾರದ ಮೇಲೆ ರಾಜ್ಯವನ್ನು ನಡೆಸು. ಅಯೋಗ್ಯರು ತಮ್ಮ ಜನ್ಮಯೋಗ್ಯವಲ್ಲದ ಮಾತನ್ನು ಆಡಿದರೆ, ಕೇಳಿದರೆ, ಅವರಿಗೆ ಶಿಕ್ಷೆ ನೀಡಲು ನಾನು ನನ್ನ ತಪೋಬಲದಿಂದ ಸೀಸವನ್ನು ತಯಾರಿಸುತ್ತೇನೆ,” ಎಂದು ತಮ್ಮ ಶಿಷ್ಯನಿಗೆ ಉಪದೇಶಿಸಿ, ಬ್ರಹ್ಮರ್ಷಿಗಳು ವಾಯುಮಾರ್ಗದಲ್ಲಿ ಉಡುಪಿ ಕ್ಷೇತ್ರದಲ್ಲಿನ ತಮ್ಮ ಆಶ್ರಮಕ್ಕೆ ತೆರಳಿದರು. ನಂತರ ವರ್ಣೀಯರು, ಅವರ್ಣೀಯರು ತಮ್ಮ ತಮ್ಮ ಜನ್ಮಯೋಗ್ಯತಾನುಸಾರ ಇಹಲೋಕವನ್ನು ಕಳೆದು, ಪುನರಪಿ ಜನನಂ ಪುನರಪಿ ಮರಣಂ ಹೊಂದುತ್ತ, ಕಲಿಯುಗ ಕಳೆದು ಕೃತಯುಗ ಅಥವ ಸತ್ಯಯುಗ ಪ್ರಾರಂಭವಾಯಿತು.