ಇಂಟರ್‍ನೆಟ್‍ನಲ್ಲಿ ನವಗ್ರಹ ಕಾಟ!!!

This post was written by admin on January 12, 2007
Posted Under: Uncategorized

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಜನವರಿ 26, 2007 ರ ಸಂಚಿಕೆಯಲ್ಲಿನ ಲೇಖನ)

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಹಾಲಿ ಅಧ್ಯಕ್ಷರಾದ ದಲಿತಕವಿ ಸಿದ್ದಲಿಂಗಯ್ಯನವರು ತಮ್ಮ ಆತ್ಮಕತೆಯಾದ ಊರುಕೇರಿಯ ‘ಉಡುಪಿಗೆ ಹೋದದ್ದು’ ಅಧ್ಯಾಯದಲ್ಲಿ ಹೀಗೆ ಬರೆಯುತ್ತಾರೆ:

“ಉಡುಪಿಯ ಒಂದು ಸಂಘದವರು ವಿಚಾರಸಂಕಿರಣ ಮಾಡಿದ್ದರು. ವಿಚಾರಸಂಕಿರಣದಲ್ಲಿ ನಾವು ವೇದಿಕೆಯ ಮೇಲೆ ಕುಳಿತಿದ್ದೆವು. ಪೇಜಾವರ ಶ್ರೀಗಳು ಆಶೀರ್ವಾದ ಮಾಡಬೇಕಾಗಿತ್ತು. ಅವರು ಬಂದ ಕೂಡಲೇ ಇಡೀ ಸಭೆ ಎದ್ದು ನಿಂತು ಗೌರವ ಸೂಚಿಸಿತು. ವೇದಿಕೆಯಲ್ಲಿದ್ದವರೂ ಎದ್ದು ನಿಂತರು. ಕುಳಿತಿದ್ದವನು ನಾನೊಬ್ಬನೇ. ಈಗ ನನಗೆ ಆ ಬಗ್ಗೆ ಪಶ್ಚಾತ್ತಾಪವಾಗುತ್ತಿದೆ. ಆದರೆ ಆಗ ನಾನು ಮಾಡಿದ್ದು ಸರಿ ಎನ್ನಿಸುತ್ತದೆ. ಹಾಗೆ ಕುಳಿತಿದ್ದರಿಂದ ನಾನು ಸ್ವಾಮಿಗಳು ಮತ್ತು ಸಭಿಕರ ಗಮನ ಸೆಳೆದೆ. ಅತ್ಯಂತ ಚಿಕ್ಕವನಂತೆ ಕಾಣುತ್ತಿದ್ದ ನನ್ನನ್ನು ಯಾರೂ ಲಘುವಾಗಿ ತೆಗೆದುಕೊಳ್ಳದ ಪರಿಸ್ಥಿತಿ ನಿರ್ಮಾಣವಾಯಿತು. ಪೇಜಾವರ ಸ್ವಾಮಿಗಳು ದಲಿತರ ಕೇರಿಗಳಿಗೆ ಭೇಟಿ ಕೊಟ್ಟಿದ್ದರು. ಸುಧಾರಣೆಯ ಮಾತುಗಳನ್ನು ಆಡುತ್ತಿದ್ದರು. ಆ ವ್ಯವಸ್ಥೆಯಲ್ಲಿ ಅವರು ಅಷ್ಟು ಮಾಡಿದ್ದೇ ಹೆಚ್ಚಾಗಿತ್ತು. ಆದರೂ ಆಗ ಉಗ್ರ ಕ್ರಾಂತಿಕಾರಿಯಾದ ನಾನು ಪೇಜಾವರರನ್ನು ಕುರಿತು ನಿಮಗೆ ನಿಜವಾಗಿ ದಲಿತರ ಬಗ್ಗೆ ಕಾಳಜಿ ಇದ್ದರೆ ಒಬ್ಬ ಅಸ್ಪೃಶ್ಯನನ್ನು ನಿಮ್ಮ ಮಠಕ್ಕೆ ಮಠಾಧಿಪತಿಯಾಗಿ ಮಾಡಿ ಎಂದು ಬಹಿರಂಗವಾಗಿ ಕೇಳಿದೆ. ಸ್ವಾಮಿಗಳು ಇದಕ್ಕೆ ಸ್ಪಷ್ಟವಾದ ಉತ್ತರ ಹೇಳದಿದ್ದರೂ ಸುಧಾರಣೆಯ ಬಗ್ಗೆ ಅವರಿಗಿರುವ ಕಳಕಳಿಯನ್ನು ವಿವರಿಸಿದರು. ಸಂಘದವರು ನಾನು ಉಡುಪಿ ಬಿಡುವವರೆಗೂ ತುಂಬಾ ಚೆನ್ನಾಗಿ ನೋಡಿಕೊಂಡರು.””

ಹೀಗೆ, ಇದ್ದುದರಲ್ಲೆ ಪ್ರಗತಿಪರರೆಂದು ಹೆಸರಾಗಿದ್ದವರು ಪೇಜಾವರ ಶ್ರೀಗಳು. ಆದರೆ ಇತ್ತೀಚಿನ ಹತ್ತಾರು ವರ್ಷಗಳಲ್ಲಿ ಅವರ ಪರಧರ್ಮ ಅಸಹಿಷ್ಣುತೆ ನಾನಾ ತರಹ ಕಾಣಿಸುತ್ತಿತ್ತು. ಹಿಂದೂ ಮತೀಯರಲ್ಲಿನ ಅಸಮಾನತೆಯನ್ನು, ತಾರತಮ್ಯವನ್ನು ಹೋಗಲಾಡಿಸಲು ಪ್ರಯತ್ನಿಸಿ, ಒಳಗಿನಿಂದ ಅದನ್ನು ಕಟ್ಟಲು ಪ್ರಯತ್ನಿಸದೆ, ಹಿಂದೂ ಮತೀಯರಿಗೆ ನಿಜವಾದ ಅಪಾಯವಿರುವುದು ಮುಸ್ಲಿಮರಿಂದ, ಕ್ರಿಶ್ಚಿಯನ್ನರಿಂದ, ಜಾತ್ಯತೀತರಿಂದ ಎನ್ನುವಂತೆ ಮಾತನಾಡುತ್ತಿದ್ದರು. ಕರಸೇವೆ, ಬಾಬರಿ ಮಸೀದಿ ಧ್ವಂಸ ಮುಂತಾದ ಸಂಘಪರಿವಾರದ ಚಟುವಟಿಕೆಗಳಲ್ಲಿ ಮಂಚೂಣಿಯಲ್ಲಿ ಪಾಲ್ಗೊಂಡಿದ್ದರಿಂದ ಬಹಳಷ್ಟು ಪ್ರಚಾರ ಸಿಕ್ಕಿ,ಕರ್ನಾಟಕದ ಮಠಾಧೀಶರಲ್ಲೆಲ್ಲ ರಾಜಕಾರಣಿಗಳ ಮಟ್ಟದಲ್ಲಿ ಅತಿಯಾದ ಪ್ರಭಾವ ಪಡೆದುಕೊಂಡು ಬಿಟ್ಟರು.

ಹಾಗೆ ನೋಡಿದರೆ, ಪೇಜಾವರರಿಗಿಂತ ಹೆಚ್ಚಿನ ಧಾರ್ಮಿಕ, ಸಾಮಾಜಿಕ ಜಾಗೃತಿಯಲ್ಲಿ ತೊಡಗಿಕೊಂಡು, ತಮ್ಮ ಮಠಗಳನ್ನು ದೊಡ್ಡ ಶೈಕ್ಷಣಿಕ ಸಂಸ್ಥೆಗಳನ್ನಾಗಿ, ಸಾಮಾಜಿಕ ಸಾಮರಸ್ಯದ ಕೇಂದ್ರಗಳನ್ನಾಗಿ ಮಾಡಿರುವ ಅನೇಕ ಮಠಾಧೀಶರು ಇವತ್ತು ಕರ್ನಾಟಕದಲ್ಲಿದ್ದಾರೆ. ಅದರೆ ಅವರ್‍ಯಾರಿಗೂ ಪೇಜಾವರರಿಗಿರುವಷ್ಟು ರಾಷ್ಟ್ರೀಯ, ರಾಜ್ಯ ಮಟ್ಟದ ಪ್ರಭಾವ ಇಲ್ಲ. ವಿಜಯ ಕರ್ನಾಟಕ ದಿನಪತ್ರಿಕೆಯ ವಿಶ್ವೇಶ್ವರ ಭಟ್ಟರೆ ಹೇಳುವಂತೆ, “ರಾಜ್ಯದ ಕೆಲವು ಮಠಾಧೀಶರು ಎಷ್ಟೊಂದು ವಿಶ್ವಾಸ, ಪ್ರಭಾವ ಬೆಳೆಸಿಕೊಂಡಿದ್ದಾರೆಂದರೆ ಅವರು ರಾಷ್ಟ್ರಪತಿ, ಪ್ರಧಾನಿಯನ್ನು ನೇರವಾಗಿ ಪೋನಿನಲ್ಲಿ ಸಂಪರ್ಕಿಸಿ ಮಾತನಾಡಬಲ್ಲರು. ಪೇಜಾವರದ ವಿಶ್ವೇಶತೀರ್ಥ ಸ್ವಾಮೀಜಿಯವರು ವಾಜಪೇಯಿ ಪ್ರಧಾನಿಯಾಗಿದ್ದಾಗ ನೇರವಾಗಿ ಮಾತನಾಡುತ್ತಿದ್ದರು. ಪ್ರಧಾನಿ ಮನೆಗೆ ಅವರಿಗೆ ಮುಕ್ತ ಪ್ರವೇಶವಿತ್ತು. ಅಡ್ವಾಣಿಯವರೊಂದಿಗೆ ಸಹ ಅವರದೊಂದು ಸಲುಗೆಯಿತ್ತು.” ಬಹುಶಃ ಅವರ ಆ ಸಲುಗೆ ಮತ್ತು ಪ್ರಭಾವ ವಾರದ ಹಿಂದೆಯೂ ಕೆಲಸ ಮಾಡಿ, ಕರ್ನಾಟಕದ ಉಪಮುಖ್ಯಮಂತ್ರಿಗಳಿಂದ ದೂರು ಕೊಟ್ಟವರನ್ನೆ ವಿಚಾರಣೆ ಮಾಡಿಸುವುದಾಗಿ ಹೇಳಿಸಿರಬೇಕು!

ಇದೊಂದು ಹಣಕ್ಕೆ ಸಂಬಂಧಿಸಿದ ವಿಷಯ. ಮೇಲುನೋಟಕ್ಕೆ ಕಾಣಿಸುವ ವಿಚಾರ ಏನೆಂದರೆ, ಬೆಳಿಗ್ಗೆ ಸಾಲ ತೆಗೆದುಕೊಂಡು ಹೋದವರು ಮಧ್ಯಾಹ್ನಕ್ಕೆ ಏನೋ ಮೋಸವಾಗಿ ಬಿಟ್ಟಿತು ಎಂದಿದ್ದಾರೆ. ಸಾಲ ಕೊಟ್ಟವರು ಅವರಿಗೆ ಒಂದು ದಿನವೂ ಸಮಯ ಕೊಡದೆ, ಕಾನೂನನ್ನು ಕೈಗೆತ್ತಿಕೊಂಡು ತಮಗೆ ಸೇರಿದ ಆವರಣವೊಂದರಲ್ಲಿ ಕೂಡಿಹಾಕಿಕೊಂಡು ಹೊಡೆದು, ಬೆದರಿಸಿ, ಸಾಲ ತೀರಿಸದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದಿದ್ದಾರೆ. ಹೊಡೆಸಿಕೊಂಡವರು ಕಾನೂನು, ಹಕ್ಕುಗಳನ್ನು ಬಲ್ಲವರು. ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಲೆಕ್ಚರರ್. ಹೀಗಾಗಿ, ಅವರು ದೈಹಿಕ ಹಿಂಸೆಯ ಬಗ್ಗೆ ದೂರು ನೀಡಲು ಪ್ರಯತ್ನಿಸಿದರೂ ಯಾರೂ ಸ್ವೀಕರಿಸಿಲ್ಲ. ಆದ್ದರಿಂದ ನೇರವಾಗಿ ಕೋರ್ಟಿಗೆ ಹೋಗಿದ್ದಾರೆ. ಕೋರ್ಟು ತನಿಖೆಗೆ ಆದೇಶಿಸುತ್ತದೆ. ಆ ಆದೇಶದಂತೆ ಪೋಲಿಸರು ಮಾಡಬೇಕಾಗಿರುವುದು, ಹಿಂಸೆ ಕೊಟ್ಟಿದ್ದು ನಿಜವೆ ಅಲ್ಲವೆ ಎಂದು ಕಂಡುಹಿಡಿಯುವುದು ಮಾತ್ರ. ಹೌದಾದರೆ, ಕಾನೂನಿನ ಪ್ರಕಾರ ಅದರಲ್ಲಿ ಪಾಲ್ಗೊಂಡವರಿಗೆ ತಪ್ಪಿಗೆ ಅನುಗುಣವಾಗಿ ಶಿಕ್ಷೆಯಾಗುತ್ತದೆ. ಹಾಗೆಂದು, ಸಾಲ ತೆಗೆದುಕೊಂಡವರ ಸಾಲವೇನೂ ಮನ್ನಾ ಆಗುವುದಿಲ್ಲ. ಸಾಲ ತೆಗೆದುಕೊಂಡಿರುವುದನ್ನು ಅವರೂ ಒಪ್ಪಿಕೊಂಡಿರುವುದರಿಂದ ಸಾಲವನ್ನು ಅವರು ತೀರಿಸಲೇಬೇಕಾಗುತ್ತದೆ.

ಇಷ್ಟು ಸರಳವಾದ ಕೇಸು ಇದು. ಆದರೆ ಯಾವಾಗ ಇದು ಬೇರೆ ಯಾವ ಪತ್ರಿಕೆಯಲ್ಲೂ ಬರದೆ, ನಮ್ಮ ಪತ್ರಿಕೆಯಲ್ಲಿ ಮಾತ್ರ ಬಂದಿತೊ, ತಕ್ಷಣ ಸ್ವಯಂಘೋಷಿತ ಹಿಂದೂ ರಕ್ಷಕರು ನಮಗೆ ಮೇಲಿಂದ ಮೇಲೆ ದೇಶವಿದೇಶಗಳಿಂದ ಕೆಟ್ಟದಾಗಿ ಪತ್ರ ಬರೆಯಲು ಆರಂಂಭಿಸುತ್ತಾರೆ. ನಮ್ಮ ಪತ್ರಿಕೆಯಲ್ಲಿ ಇಲ್ಲಿಯವರೆಗೆ ಬಂದ ಯಾವುದೆ ಜನಪರ ಕಾಳಜಿಯ ವಿಷಯವೂ, ಸಂಚಿಕೆಯೂ ಅವರಿಗೆ ಮುಖ್ಯವಾಗುವುದಿಲ್ಲ. ಮುಖ್ಯವಾಗುವುದು ಪೇಜಾವರರ ಬಗ್ಗೆ ಬರೆದ ಒಂದೇ ಒಂದು ಲೇಖನ ಮಾತ್ರ! ನಮ್ಮನ್ನು ತೆಗಳುವುದರ ಜೊತೆಗೆ, “ನೀವು ಹೇಳಿರುವುದೆಲ್ಲ ಸುಳ್ಳು. ನಿಜ ಇಲ್ಲಿದೆ ನೋಡಿ,” ಎಂದು ಇಂಟರ್ನೆಟ್ಟಿನಲ್ಲಿರುವ ಒಂದು ಪಬ್ಲಿಕ್ ಫೋರಮ್‌ನ ಲಿಂಕ್ ಕಳುಹಿಸುತ್ತಾರೆ.

ಇಂತಹ ಫೋರಂಗಳಲ್ಲಿ ಬಹಳ ಜನ ತಮ್ಮ ನೈಜ ಹೆಸರನ್ನು ಮರೆಮಾಡಿ, ಯಾವುದೊ ನಿಕ್‌ನೇಮ್ ಇಟ್ಟುಕೊಂಡಿರುತ್ತಾರೆ. ನಮ್ಮ ಪತ್ರಿಕೆಗೆ ನೋಡಿ ಎಂದು ಕಳುಹಿಸಿದ ಫೋರಂನ ಹೆಸರು “ಹಿಂದುತ್ವದ ಸೈನಿಕರು” ಎಂದು. ಅದರಲ್ಲಿ ಹಿಂದು ವಿರೋಧಿ ಎನ್ನಿಸುವ ಒಂದು ಪದವೂ ಇರಲು ಸಾಧ್ಯವಿಲ್ಲ. ಅದರಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರ ಅರ್ಹತೆ ಬಹುಶಃ ಹಿಂದೂ ಮತೋನ್ಮತ್ತರಾಗಿರಬೇಕು ಎಂದಷ್ಟೆ ಇರಬೇಕು! ಇವರಿಗೆ ಪರಧರ್ಮ ಸಹಿಷ್ಣುತೆ ಎಂದರೆ ಏನೆಂದೇ ಗೊತ್ತಿಲ್ಲ. ಅದರಲ್ಲಿ ಪ್ರಕಟವಾಗಿರುವ ಪೇಜಾವರ ಶ್ರೀಗಳ ಮೇಲಿನ ದೂರಿನ ಕುರಿತಾದ ಚರ್ಚೆಯ ಕನ್ನಡ ಭಾವಾನುವಾದ ಹೀಗಿದೆ:

ಡಿಫೆಂಡರ್: ಸಂಸ್ಕೃತ ಅಧ್ಯಾಪಕನೊಬ್ಬ ಪೇಜಾವರ ಶ್ರೀಗಳ ಮೇಲೆ ದೂರು ನೀಡಿದ್ದಾನಂತೆ. ಯಾರಾದರೂ ಅದರ ಬಗ್ಗೆ ಪ್ರಕಟವಾಗಿರುವ ಆನ್‌ಲೈನ್ ಲಿಂಕ್‌ಗಳನ್ನು ಕೊಡುತ್ತೀರಾ?

ಹರ್ ಹರ್ ಮಹಾದೇವ್: ಇದೇನಾದರೂ ನಿಜ ಎಂದಾದರೆ, ಇದರಲ್ಲಿ ಹೈದರಾಬಾದಿನ ವ್ಯಾಟಿಕನ್ ಕ್ಲಬ್ ಮತ್ತು 10 ಜನಪಥ್‌ನ ಕೈವಾಡ ಇದೆ ಎನ್ನುವುದು ಗ್ಯಾರಂಟಿ.

ಹರ್ ಹರ್ ಮಹಾದೇವ್: ಇದರ ಬಗ್ಗೆ ಕೆಲವು ವಿಷಯ ಸಂಗ್ರಹಿಸಿದೆ. ಸ್ವಾಮೀಜಿ ಒಳ್ಳೆಯ ಮನಸ್ಸಿನಿಂದ ದುಡ್ಡು ಕೊಟ್ಟಿದ್ದು ನಿಜವಂತೆ, ಆದರೆ ಆ ಖದೀಮನ ಮನಸ್ಸಿನಲ್ಲಿ ಬೇರೇನೊ ಇತ್ತಂತೆ. ಮೂಲಗಳು ಹೇಳುವ ಪ್ರಕಾರ, ವೆಂಕಟೇಶನನ್ನು ಛೂಬಿಟ್ಟವರು ಲಂಕೇಶ್ ಪತ್ರಿಕೆಯ ಪ್ರಕಾಶಕರಾದ ಇಂದ್ರಜಿತ್ ಲಂಕೇಶ್ ಮತ್ತು ರವೀಂದ್ರ ರೇಷ್ಮೆ. ಆ ಪತ್ರಿಕೆ ಕಮ್ಯುನಿಸ್ಟರ ಮತ್ತು ಹಿಂದೂವಿರೋಧಿಗಳ ಮುಖವಾಣಿ. ಇಂದ್ರಜಿತ್ ಲಂಕೇಶ್‌ರ ಸೋದರಿ ಗೌರಿ ಲಂಕೇಶ್ ನಕ್ಸಲಿಸಂ ಅನ್ನು ಬೆಂಬಲಿಸಿದ್ದಾರೆ. ಕೆಲವು ವರದಿಗಳು ಆಕೆ ಇಸ್ಲಾಮಿಕ್ ಜಿಹಾದ್ ಅನ್ನು ಬೆಂಬಲಿಸಿದ್ದನ್ನು ಕನ್ಫರ್ಮ್ ಮಾಡಿವೆ.

ಹರ್ ಹರ್ ಮಹಾದೇವ್: ಅದರೆ ಪೇಜಾವರ ಸ್ವಾಮೀಜಿ ಅಷ್ಟೊಂದು ದುಡ್ಡನ್ನು ಸಾಲ ಕೊಟ್ಟ ಬಗ್ಗೆ ನನಗೆ ಆಶ್ಚರ್ಯವಾಗುತ್ತಿದೆ. ಅವರು ಪ್ರಾಮಾಣಿಕರು ಎಂದುಕೊಂಡಿದ್ದೆ. ತಿರುಪತಿಯ ಕ್ರಿಶ್ಚಿಯನ್ ಮತಾಂತರದ ಬಗ್ಗೆ ವರದಿ ಮಾಡಲು ಹೋಗಿದ್ದ ‘ಹಿಂದು ಟೈಗರ್‌’ನನ್ನು ಪೋಲಿಸರು ಬಂಧಿಸಿ, ಬಿಡುಗಡೆ ಮಾಡಿದ ಬಳಿಕ, ಹಿಂದು ಟೈಗರ್ ಸಹಾಯಕ್ಕಾಗಿ ಇದೇ ಸ್ವಾಮೀಜಿ ಬಳಿಗೆ ಹೋದರೆ ಅವರು ಸಹಾಯ ಮಾಡಲು ನಿರಾಕರಿಸಿದರು. ಸ್ವಾಮೀಜಿ, ಇವತ್ತು ಏನಾಯಿತು? ಪ್ರವಚನ್ ದೇನಾ ಬಹುತ್ ಬಡಾ ಬಾತ್ ಹೈ.

ಬಿಂದುಮಾಧವ್: ನಾನು ಬೆಂಗಳೂರಿನವನು ಹಾಗೂ ಪೂರ್ಣಪ್ರಜ್ಞಾ ವಿದ್ಯಾಪೀಠದೊಂದಿಗೆ ನಿಕಟ ಸಂಪರ್ಕ ಇರುವವನು. ಇದೇ ವಿಷಯದ ಬಗ್ಗೆ ಹೆಚ್ಚಿನ ವಿವರ ತಿಳಿದುಕೊಳ್ಳಲು ಕಳೆದ ಎರಡು ದಿನಗಳಿಂದ ವಿದ್ಯಾಪೀಠದಲ್ಲಿಯೆ ಇದ್ದೆ. ಕೊಲೆ ಪ್ರಯತ್ನದ ಆಪಾದನೆ ‘ಅಪ್ಪಟ ಸುಳ್ಳು’. ಈ ಕೇಸಿನ ಹಿಂದೆ ಬಹಳಷ್ಟು ಹಿಂದುವಿರೋಧಿ ಶಕ್ತಿಗಳಿವೆ. ಸ್ವಾಮೀಜಿ ದುಡ್ಡು ಕೊಟ್ಟಿದ್ದು ನಿಜ. ಆರೋಪಿ ವೆಂಕಟೇಶ್ ದುಡ್ಡು ವಾಪಸು ಕೊಡಲು ನಿರಾಕರಿಸಿ, ಹಿಂದೂವಿರೋಧಿಗಳೊಂದಿಗೆ ಸೇರಿಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾನೆ. ಹಿಸ್ ಹೋಲಿನೆಸ್ ಸ್ವಾಮೀಜಿ ತಮ್ಮ ಶಿಷ್ಯರಿಗೆಲ್ಲ ಯಾವುದೆ ಡ್ರಾಸ್ಟಿಕ್ ಆಕ್ಷನ್ ತೆಗೆದುಕೊಳ್ಳದಿರಲು ಕೇಳಿಕೊಂಡಿದ್ದಾರೆ. ಯಾರಿಗಾದರೂ ವಿವರಣೆ ಬೇಕಿದ್ದರೆ ನನಗೆ ತಿಳಿಸಿ. ನಾನು ಅದನ್ನು ನೇರವಾಗಿ ಹಿಸ್ ಹೋಲಿನೆಸ್ ಇಂದ ಪಡೆಯುತ್ತೇನೆ.

ಡಿಫೆಂಡರ್: ನನ್ನದು ಕೆಲವು ಪ್ರಶ್ನೆಗಳಿವೆ: ಮಠದಿಂದ ದುಡ್ಡನ್ನು ಸಾಲ ಕೊಡುವುದು ಸ್ವಾಮೀಜಿಗಳಿಗೆ ಸಹಜವಾಗಿ ಅಭ್ಯಾಸವಾಗಿರುವ ಪರಿಪಾಠವೇ? ಅದೂ ಇಷ್ಟೊಂದು ದುಡ್ಡನ್ನು? ವೆಂಕಟೇಶ್ ಫ್ರಾಡ್ ಆದಲ್ಲಿ, ಅದು ಹೇಗೆ ಸ್ವಾಮೀಜಿಗೆ ಗೊತ್ತಾಗಲಿಲ್ಲ? ಆತನ ಪೂರ್ವಾಪರ ಗೊತ್ತಿಲ್ಲದೆ ಸ್ವಾಮೀಜಿಗಳು ಅಷ್ಟೊಂದು ಹಣವನ್ನು ಆತನಿಗೆ ಕೊಟ್ಟುಬಿಟ್ಟರೆ? ಇದು ಯಾಕೊ ಸಂಶಯಾಸ್ಪದವಾಗಿ ಕಾಣುತ್ತದೆ. ಗೊತ್ತಿಲ್ಲದ ಮನುಷ್ಯನಿಗೆ ಅವರು ಲಕ್ಷಾಂತರ ರೂಪಾಯಿ ಕೊಡಬಲ್ಲರು, ಆದರೆ ತನ್ನ ಜೀವವನ್ನೆ ತ್ಯಾಗ ಮಾಡಲು ಸಿದ್ಧವಾಗಿದ್ದ ಹಿಂದೂ ಟೈಗರ್‌ಗೆ ಏಕೆ ಸ್ವಾಮೀಜಿ ಸಹಾಯ ಮಾಡಲಿಲ್ಲ? ಈ ದುಡ್ಡು ಮಠಕ್ಕೆ ಸೇರಿದ್ದು. ವಿದ್ಯಾಪೀಠ, ದೇವಸ್ಥಾನ, ಸಮಾಜಸೇವೆಗೆ ಮುಡಿಪಾಗಿರುವ ದುಡ್ಡು ಇದು. ಅದು ಹೇಗೆ ಒಬ್ಬ ವ್ಯಕ್ತಿ ಇಷ್ಟೊಂದು ದುಡ್ಡನ್ನು ಇಷ್ಟು ಸುಲಭವಾಗಿ ಪಡೆದುಕೊಂಡ?

ಕೌಶಿಕ್777: ತಿರುಪತಿ ದೇವಾಲಯವನ್ನು ಕ್ರಿಶ್ಚಿಯನ್ನರಿಂದ ವಿಮೋಚನೆಗೊಳಿಸಲು ಹೋರಾಟ ಪ್ರಾರಂಭಿಸಿದವರೆ ಪೇಜಾವರ ಸ್ವಾಮೀಜಿಗಳು. ತಮ್ಮ ಹಿರಿತನ ಮತ್ತು ಜನ ಅವರ ಮೇಲೆ ಇಟ್ಟುಕೊಂಡಿರುವ ಗೌರವದಿಂದ ಸಹಜವಾಗಿ ಅವರೇ ಆ ಹೋರಾಟದ ನಾಯಕರಾದರು. ಕೆಲವು ನಿವೃತ್ತ ಸರ್ಕಾರಿ ಅಧಿಕಾರಿಗಳನ್ನು ಒಳಗೊಂಡ ಗೌರವಾನ್ವಿತ ಜನರ ಸತ್ಯಶೋಧನಾ ಮಿತಿಯನ್ನು ರಚಿಸಿ, ಅದರ ಬಗ್ಗೆ ಮಾಹಿತಿ ನೀಡಲು ಅವರನ್ನು ಇವರೆ ತಿರುಪತಿಗೆ ಕಳುಹಿಸಿದ್ದರು. ಆ ಸಮಿತಿ ಸ್ವಾಮೀಜಿಗೆ ಕ್ರಿಶ್ಚಿಯನ್ನರು ಅನಧಿಕೃತವಾಗಿ ದೇವಸ್ಥಾನಕ್ಕೆ ಸೇರಿರುವ ನೆಲವನ್ನು ಆಕ್ರಮಿಸಿಕೊಂಡಿರುವ ಬಗ್ಗೆ ವರದಿ ನೀಡಿತು. ನಿಯಮಗಳಿಗೆ ವಿರುದ್ಧವಾಗಿ ಅನೇಕ ಕ್ರಿಶ್ಚಿಯನ್ನರು ಟಿಟಿಡಿಯಲ್ಲಿ ಕೆಲಸಕ್ಕಿದ್ದರು. ಇದಾದ ನಂತರ ಟಿಟಿಡಿ ಚರ್ಚೆಗಾಗಿ ಪೇಜಾವರ ಸ್ವಾಮೀಜಿಯನ್ನು ಕರೆಯಿತು. ಆ ಚರ್ಚೆಯ ನಂತರ ಸ್ವಾಮೀಜಿ ತಮ್ಮ ಹೋರಾಟವನ್ನು ನಿಲ್ಲಿಸಿದರು. ಈಗ ಅದರ ಬಗ್ಗೆ ಸುದ್ದಿಯೇ ಇಲ್ಲ. ಯಾಕೆ? ಯಾಕೆ? ಯಾಕೆ? ನಮ್ಮವನಿಗೆ ಸಹಾಯ ಮಾಡಲು ಸ್ವಾಮೀಜಿ ನಿರಾಕರಿಸಿದ್ದು ಯಾಕೆ? ಶುರುವಿನಲ್ಲಿ ಗದ್ದಲ ಎಬ್ಬಿಸಿದ ಬಳಿಕ ಚೆಡ್ಡಿವಾಲಾಗಳು ಹಿಂದೂಗಳ ಬೆನ್ನಿಗೆ ಇರಿಯುವುದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಆದರೆ, ಭಗವದ್ಗೀತೆಯ ಮೇಲೆ ಅಥಾರಿಟಿ ಇರಬೇಕಾದ ಒಬ್ಬ ಗೌರವಯುತ ಸ್ವಾಮೀಜಿ ಯಾಕೆ ಈ ರೀತಿ ನಡೆದುಕೊಳ್ಳುತ್ತಿರುವುದು? ಕೃಷ್ಣ ಅರ್ಜುನನಿಗೆ ನೀಡಿದ ಉಪದೇಶದಿಂದ ಇವರು ಏನನ್ನು ಕಲಿತಿದ್ದಾರೆ?

ಶಿವೋಹಮ್: ಇಂತಹ ದೊಡ್ಡ ಸ್ವಾಮೀಜಿಗಳಿಗೆ ಕೊಡುವ ‘ಸಂತ’ ಪದವಿಯನ್ನು ನಾವು ಒಪ್ಪದೆ ಇರಲು ಇಂತಹ ಘಟನೆಗಳು ಸಹಾಯ ಮಾಡುತ್ತವೆ. ಆದರೆ ಇವರು ನಮ್ಮವರೆ ಆದ ಸನಾತನಿ ಸಾಧು ಆಗಿರುವುದರಿಂದ ನಮಗೆ ಸಂತೋಷವೇನೂ ಆಗಿಲ್ಲ. ಇತ್ತೀಚೆಗೆ ಬಹುಶಃ ಸ್ವಾಮೀಜಿಗಳು ಕೂಡ ನವಗ್ರಹಗಳ ದುಷ್ಟ ಪ್ರಭಾವಕ್ಕೆ ಒಳಗಾಗುತ್ತಾರೆ ಅನ್ನಿಸುತ್ತದೆ.

ಬಿಂದುಮಾಧವ್: ನಾನು ಸ್ವಾಮೀಜಿಗಳೊಂದಿಗೆ ಮಾತನಾಡಿ ಮುಂದಿನ ಎರಡು ವಾರಗಳಲ್ಲಿ ಉತ್ತರಗಳನ್ನು ಪಡೆಯಲು ಪ್ರಯತ್ನಿಸುತ್ತೇನೆ.”

* * *

ಈ ಲೇಖನ ಬರೆಯುತ್ತಿರುವ ಹೊತ್ತಿನಲ್ಲಿ ಅಂತರ್ಜಾಲದಲ್ಲಿನ ಈ ಬಹಿರಂಗ ಸಾರ್ವಜನಿಕ ಚರ್ಚೆ ಸದ್ಯಕ್ಕೆ ಇಲ್ಲಿಗೆ ನಿಂತಿದೆ. ಬಿಂದು ಮಾಧವರು ಮತ್ತೇನನ್ನು ಹೊರಗೆಡವುತ್ತಾರೊ ಗೊತ್ತಿಲ್ಲ!

ಗಾಂಧಿಯನ್ನು ‘ಹಂದಿ’ ಎಂದ ಹುಂಬ!

ಇದೇ ಫೋರಮ್‌ನಲ್ಲಿ, ಅಮೇರಿಕದಲ್ಲಿರುವ ಭಾರತೀಯ ಮೂಲದ ವಿದೂಷಕನೊಬ್ಬ ಮಹಾತ್ಮ ಗಾಂಧಿಯ ವೇಷ ಧರಿಸಿ, ಸ್ಟ್ರಿಪ್‌ಡ್ಯಾನ್ಸರ್ಸ್ ಮಾಡುವ ಲೈಂಗಿಕ ಪ್ರಚೋದನೆಯ ಪೋಲ್‌ಡ್ಯಾನ್ಸ್ ಮಾಡಿದ್ದರ ಬಗ್ಗೆಯೂ ಚರ್ಚೆಯಾಗುತ್ತಿದೆ:

ಎಚ್‌ಟಿಗಜ್ಜರ್: ನಾನು ಗಾಂಧಿಯ ಯಾವುದೆ ನೀತಿಗಳನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ ಯಾರೂ ಸಹ ಇಂತಹ ಅಶ್ಲೀಲ ವಿಡಿಯೊ ಮಾಡಬಾರದು.

ಅಭಿ: ಗಾಂಧಿ ಎಂಬ ಹಂದಿ ಸ್ವಾತಂತ್ರ್ಯ ಬರುವುದಕ್ಕೆ ಮೊದಲು ಹಿಂದೂಗಳ ನಂಬರ್ 1 ಶತ್ರುವಾಗಿದ್ದ. ಅವನಿಂದಲೆ ನೀನು ಈ ಫೋರಮ್‌ಗೆ ಬರುತ್ತಿರುವುದು. ಗಾಂಧಿ ಇಲ್ಲದೆ ಇದ್ದರೆ ನೀನು ಬೇರೆ ಏನನ್ನಾದರು ಮಾಡುತ್ತಿದ್ದೆ. ಹಹ್ಹಾ! ನೂರು ಕೋಟಿ ಜನ ಮಾಡದ್ದನ್ನು ಈ ಜೋಕರ್ ಮಾಡಿದ! ”

ಪ್ರತಿದಿನವೂ ‘ರಘುಪತಿ ರಾಘವ ರಾಜಾರಾಮ್’, ‘ವೈಷ್ಣವ ಜನತೊ’ ಭಜನೆ ಮಾಡುತ್ತಿದ್ದ, ಭಗವದ್ಗೀತೆಯ ಸಾರವನ್ನೆಲ್ಲ ಅರಿತಿದ್ದ, ಮಹಾತ್ಮ ಎಂದು ತನ್ನ ವಾರಿಗೆಯವರಿಂದಲೆ ಕರೆಸಿಕೊಂಡ ಗಾಂಧಿ ಈ ಹಿಂದೂ ಮತೋನ್ಮತ್ತರ ಪ್ರಕಾರ ಒಂದು ಹಂದಿ; ಅವರ ನಂಬರ್ 1 ಶತ್ರು! ಸಂಘ ಪರಿವಾರದವರು ಎಷ್ಟೇ ಪತ್ರಿಕಾ ಹೇಳಿಕೆಗಳನ್ನು ನೀಡಿದರೂ ಅವರಿಗೆ ಗಾಂಧಿಯ ಬಗ್ಗೆ ಯಾವುದೇ ಪ್ರೀತಿಯಿಲ್ಲ ಹಾಗು ಅವರು ಗಾಂಧಿ ಕೊಲೆಯನ್ನು ಸಮರ್ಥಿಸುತ್ತಾರೆ ಎನ್ನಲು ಅವರು ಒಳಕೋಣೆಯಲ್ಲಿ ಮಾತನಾಡಿಕೊಳ್ಳುವ ಇಂತಹ ಮಾತುಗಳಿಗಿಂತ ಬೇರೆ ಉದಾಹರಣೆ ಬೇಕೆ? ಇಲ್ಲಿನ ಫೋರಮ್‌ನಲ್ಲಿ ಪಾಲ್ಗೊಳ್ಳುವವರು ‘ನಾನು ಹಿಸ್ ಹೋಲಿನೆಸ್ ಪೇಜಾವರರಿಂದಲೆ ನೇರ ಉತ್ತರ ಪಡೆಯುತ್ತೇನೆ,’ ಎನ್ನುವ ಪೇಜಾವರರ ಅಂತರಂಗದ ಶಿಷ್ಯರು! ಇವರ ಈ ಪರಿಯ ಮಿಲಿಟೆಂಟ್ ಮೂಲಭೂತವಾದ ತಾಲಿಬಾನಿಗಳಿಗಿಂತ ಹೇಗೆ ಭಿನ್ನ? ಯಾವುದೇ ಮತದ ಮೂಲಭೂತವಾದಿಗಳ ಕೈಗೆ ಅಧಿಕಾರ ಸಿಕ್ಕಿದರೆ ದೇಶವಾಸಿಗಳ ಜೀವನ ಹೇಗಿರುತ್ತದೆ ಎನ್ನಲು ತಾಲಿಬಾನ್ ಆಡಳಿತದಲ್ಲಿದ ಅಫ್ಘಾನಿಸ್ತಾನವನ್ನು ನೆನಪಿಸಿಕೊಂಡರೆ ಸಾಕು. ದಿನಕ್ಕೊಂದರಂತೆ ಜಾತಿ ಸಮಾವೇಶಗಳು, ಹಿಂದೂ ವಿರಾಟ್ ಯಾತ್ರೆಗಳು, ಆತ್ಮಾಹುತಿ ಮಾಡಿಕೊಂಡರೆ ಸ್ವರ್ಗದಲ್ಲಿ ಮಜಾ ಮಾಡಲು 72 ಕನ್ಯೆಯರು ಸಿಗುತ್ತ್ತಾರೆ ಎಂದುಕೊಳ್ಳುವ ಜಿಹಾದಿಗಳು, ಸಾಮೂಹಿಕ ಸನ್ನಿ ಸೃಷ್ಟಿಸುವ ಬೆನ್ನಿಹಿನ್‌ಗಳು ಹೆಚ್ಚಾಗುತ್ತಿರುವ ಈ ಹೊತ್ತಿನಲ್ಲಿ, ಪ್ರಜ್ಞಾವಂತ ಜನ ಹೆಚ್ಚೆಚ್ಚು ವೈಚಾರಿಕರಾಗಬೇಕಿದೆ. ಇಲ್ಲದಿದ್ದರೆ, ಭವಿಷ್ಯ ಈಗಿರುವುದಕ್ಕಿಂತ ಹೆಚ್ಚು ಮಂಕಾಗುತ್ತದೆ

Add a Comment

required, use real name
required, will not be published
optional, your blog address