ಕರ್ನಾಟಕದ ರಾಜಕಾರಣದಲ್ಲಿ ಮೌಲ್ಯಗಳಿಗಾಗಿ…

This post was written by admin on October 10, 2010
Posted Under: Uncategorized

ಈ ಕೆಳಗಿನದನ್ನು ಈಗ ಚಾಲ್ತಿಯಲ್ಲಿರುವ ವಿಧಾನಸಭೆಗೆ ನಡೆದ ಚುನಾವಣೆಯ ಸಂದರ್ಭದಲ್ಲಿ ಬರೆದದ್ದು. ಈಗ ಮತ್ತೊಮ್ಮೆ ಸೂಕ್ತ ಎಂದು ಇಲ್ಲಿ ಹಾಕುತ್ತಿದ್ದೇನೆ.
ರವಿ…

ಇತ್ತೀಚಿನ ದಿನಗಳಲ್ಲಿನ ಕರ್ನಾಟಕದಲ್ಲಿನ ರಾಜಕಾರಣದ ಕೀಳುಮನರಂಜನೆಯ ನಾಟಕವನ್ನು ಮತ್ತು ಸಂಪೂರ್ಣವಾಗಿ ಇಲ್ಲವಾಗಿಬಿಟ್ಟಿರುವ ರಾಜಕೀಯ ಮೌಲ್ಯಗಳನ್ನು ನೀವೆಲ್ಲ ನೋಡಿಯೇ ಇರುತ್ತೀರ ಎನ್ನುವುದು ನನ್ನ ಖಚಿತ ಅಭಿಪ್ರಾಯ. ಅಧಿಕಾರಲಾಲಸೆ, ಹಣ, ಜಾತಿ, ಮತ್ತು ಕೋಮು ಉನ್ಮಾದಗಳು ಚುನಾವಣಾ ರಾಜಕಾರಣದ ಮುಖ್ಯ ಭಾಗಗಳಾಗಿ ಹೋಗಿವೆ. ಬೆಂಗಳೂರು ನಗರವಂತೂ ರಿಯಲ್ ಎಸ್ಟೇಟ್ ಮತ್ತು ಗಣಿ ದೊರೆಗಳ ಒಡ್ಡೋಲಗವಾಗಿ ಹೋಗಿದೆ.

ಇಂತಹ ಪರಿಸ್ಥಿತಿಯಲ್ಲಿ, ಬರಲಿರುವ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ, ಯಾವ ಅಭ್ಯರ್ಥಿ ಹತ್ತಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಿರುವನೊ ಅವನು ಮಾತ್ರ ಗೆಲ್ಲಲಿದ್ದಾನೆ. ಮತದಾರರಿಗೆ ಉಡುಗೊರೆಗಳನ್ನು ಕೊಟ್ಟರೆ ಮಾತ್ರ, ಕೀಳು ಮಟ್ಟದ ಜಾತಿ ಮತ್ತು ಕೋಮು ಭಾವನೆಗಳನ್ನು ಉದ್ಧೀಪಿಸಿದರೆ ಮಾತ್ರ, ಅಂತಿಮವಾಗಿ ನಮ್ಮನ್ನೆಲ್ಲ ಒಡೆದರೆ ಮಾತ್ರ ಅವನು ಗೆಲ್ಲಲಿದ್ದಾನೆ. ಅವನು ಚುನಾಯಿತನಾಗಲು ಇನ್ಯಾವುದೆ ಒಳ್ಳೆಯ ಸಕಾರಣಗಳು ಪರಿಗಣಿತವಾಗುವುದಿಲ್ಲ. ನಮ್ಮ ಜನರೇಷನ್ನಿನ ಮತ್ತು ನಮ್ಮ ಈ ಸಮಕಾಲೀನ ಸಂದರ್ಭದ ಸವಾಲುಗಳನ್ನು ಅರಿಯದ ಜನರೆ ಹೀಗೆ ಚುನಾಯಿತರಾಗಲಿದ್ದಾರೆ.

ಇವರು ಖರ್ಚು ಮಾಡಲಿರುವ ಪ್ರತಿಯೊಂದು ರೂಪಾಯಿಯೂ ಅನೈತಿಕವಾಗಿ ಸಂಪಾದಿಸಿದ, ಕಳ್ಳಮಾರ್ಗಗಳಿಂದ ಮಾಡಿದ, ಯಾವುದೆ ಲೆಕ್ಕಪತ್ರಗಳಿಲ್ಲದ, ಕಪ್ಪುಹಣ. ದುಡ್ಡಿರುವ ಜನ ಈ ಚುನಾವಣೆಯನ್ನು ಕೊಳ್ಳಲಿದ್ದಾರೆ. ಪ್ರತಿಯೊಂದು ರಾಜಕೀಯ ಪಕ್ಷವೂ ನೆಲದ ಕಾನೂನನ್ನು ಮತ್ತು ಜನಮತವನ್ನು ಉಲ್ಲಂಘಿಸಲಿವೆ ಮತ್ತು ಲೇವಡಿ ಮಾಡಲಿದೆ.

ಭಾರತ ದೇಶದ ಚುನಾವಣಾ ಆಯೋಗವು ವಿಧಾನಸಭೆಯ ಚುನಾವಣೆಗೆ ಒಬ್ಬ ಅಭ್ಯರ್ಥಿ ೧೦ ಲಕ್ಷ ರೂಪಾಯಿಗಳಗಿಂತ ಹೆಚ್ಚಿಗೆ ಖರ್ಚು ಮಾಡಬಾರದೆಂಬ ಕಾನೂನಿನ ಮಿತಿಯನ್ನು ವಿಧಿಸಿದೆ. ಅದರೆ, ಬಹುಪಾಲು ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಅದರ ಹತ್ತರಷ್ಟನ್ನು ಖರ್ಚು ಮಾಡಲಿದ್ದಾರೆ. ಮತ್ತು ಬೆಂಗಳೂರಿನಲ್ಲಂತೂ ಕೆಲವು ಅಭ್ಯರ್ಥಿಗಳು ಆ ಕಾನೂನು ಮಿತಿಯ ನೂರು ಪಟ್ಟಿಗಿಂತಲೂ ಹೆಚ್ಚಿನ ಹಣವನ್ನು ಖರ್ಚು ಮಾಡಲಿದ್ದಾರೆ. ಅನೈತಿಕವಾಗಿ ಮಾಡಿದ, ಲೆಕ್ಕಾಜಮಾ ಇಲ್ಲದ, ಕಪ್ಪುಹಣವನ್ನೆ ಇವರು ಖರ್ಚು ಮಾಡಲಿದ್ದಾರೆ ಮತ್ತು ಇನ್ನೂ ಹೆಚ್ಚಿಗೆ ಅದೇ ತರಹದ ಕೆಟ್ಟಹಣವನ್ನು ಸಂಪಾದಿಸುವ ಉದ್ದೇಶ ಹೊಂದಿದ್ದಾರೆ ಎನ್ನುವುದರ ಬಗ್ಗೆ ನೀವು ಯಾವುದೆ ಸಂಶಯ ಇಟ್ಟುಕೊಳ್ಳಬೇಡಿ. ಇದು ನ್ಯಾಯಯುತವಾದ ಚುನಾವಣೆಯಲ್ಲ. ಈ ವ್ಯವಸ್ಥೆಯಲ್ಲಿ, ಈ ಸಂದರ್ಭದಲ್ಲಿ, ಯಾವೊಬ್ಬ ಪ್ರಾಮಾಣಿಕ ಮನುಷ್ಯನೂ ಚುನಾವಣೆಗೆ ನಿಂತು ಗೆಲ್ಲಲಾರ.

ಮಾನವ ಇತಿಹಾಸದಲ್ಲಿ ಸಮಾನತೆ ಮತ್ತು ಪ್ರಜಾರಾಜ್ಯದ ಮೌಲ್ಯಗಳನ್ನು ಎತ್ತಿಹಿಡಿದ ಅತಿದೊಡ್ಡ ಮಹಾತ್ಮರಲ್ಲಿ ಒಬ್ಬನಾದ ಅಬ್ರಹಾಮ್ ಲಿಂಕನ್ ಒಮ್ಮೆ ಹೀಗೆ ಅಂದಿದ್ದಾನೆ: “ಪ್ರತಿಭಟಿಸಬೇಕಾದ ಸಮಯದಲ್ಲಿ ಮೌನವಾಗಿಬಿಡುವ ಪಾಪ ಕೆಲಸವನ್ನು ಮಾಡುವ ಮನುಷ್ಯರು ಹೇಡಿಗಳು.”

ಈ ಸಂದರ್ಭದಲ್ಲಿ, ಭಾರತದ ನಾಗರಿಕರಾಗಿ, ನಮ್ಮ ಜವಾಬ್ದಾರಿಗಳು ತಾನೆ ಏನು? ಈ ಸವಾಲಿಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ? ಕೇವಲ “ಬಾಯುಪಚಾರದ” ಮಾತುಗಳನ್ನು ಹೇಳುವ ಮೂಲಕವೆ? ಸಿನಿಕರಾಗಿ, ಸ್ವಾರ್ಥಿಗಳಾಗಿ ಇರುವುದರ ಮೂಲಕವೆ? ಅಥವ, ನಮ್ಮ ಹಕ್ಕುಗಳನ್ನು ಮತ್ತು ಜವಾಬ್ದಾರಿಗಳನ್ನು ತಿಳಿದುಕೊಂಡು, ಧರ್ಮಯುತವಾದ ಹಾದಿಯನ್ನು ತುಳಿಯುವುದರ ಮೂಲಕವೆ?

ನಾವು ಕೇವಲ ಸುಮ್ಮನೆ, ಸಂಬಂಧವಿಲ್ಲದ ರೀತಿಯಲ್ಲಿ ಇದ್ದುಬಿಡಲು ಸಾಧ್ಯವಿಲ್ಲ ಎಂದು ನಾನು ಖಚಿತವಾಗಿ ಭಾವಿಸುತ್ತೇನೆ. ಈಗ ನಾವು ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದೆ ಹೋದರೆ ಅದು ಬಹುದೊಡ್ಡ ಪಾಪಕಾರ್ಯ ಮತ್ತು ಅದು ನಾವು ಹುಟ್ಟಿಬೆಳೆದ, ನಾವು ದುಡಿದು ಜೀವನ ಸಾಗಿಸುತ್ತಿರುವ, ತೆರಿಗೆ ಕಟ್ಟುತ್ತಿರುವ, ನಮ್ಮ ಮಕ್ಕಳು ಬೆಳೆಯುತ್ತಿರುವ ಮತ್ತು ಅವರು ತಮ್ಮ ಜೀವನವನ್ನು ಕಳೆಯಲಿರುವ ಬೆಂಗಳೂರು ಮತ್ತು ಕರ್ನಾಟಕಕ್ಕೆ ಎಸಗುವ ದ್ರೋಹ ಎಂದು ನಾನು ಭಾವಿಸುತ್ತೇನೆ. ಕಳ್ಳರು, ಸುಳ್ಳರು, ಕ್ರಿಮಿನಲ್‌ಗಳು, ಸಮಾಜಘಾತುಕ ಶಕ್ತಿಗಳು, ಸಣ್ಣಮನಸ್ಸಿನ ಜನರೂ ನಮ್ಮ ಪ್ರತಿನಿಧಿಗಳಾಗುವುದನ್ನು ನಾವು ಭರಿಸಲು ಸಾಧ್ಯವೆ?


ಉಳಿದ ಲೇಖನ ಮತ್ತು ನನ್ನ ಆ ಸಮಯದ ಪ್ರಯತ್ನ/ಪ್ರಯೋಗಕ್ಕೆ ಸಿಕ್ಕ ಪ್ರತಿಕ್ರಿಯೆಯನ್ನು ತಿಳಿದುಕೊಳ್ಳುವ ಆಸಕ್ತಿಯುಳ್ಳವರು, ಇಲ್ಲಿ ನೋಡಬಹುದು.
http://www.ravikrishnareddy.com/kannada.html

Add a Comment

required, use real name
required, will not be published
optional, your blog address