…<–>ಹಾಯ್ -> ಲವ್ ಯು -> ಬೈ–><—…

This post was written by admin on January 27, 2007
Posted Under: Uncategorized

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಫ಼ೆಬ್ರವರಿ 9, 2007 ರ ಸಂಚಿಕೆಯಲ್ಲಿನ ಲೇಖನ)

ಆರ್ಥಿಕ ಸ್ವಾತಂತ್ರ್ಯ ಮತ್ತು ವ್ಯಕ್ತಿಸ್ವ್ವಾತಂತ್ರ್ಯಗಳಿಂದಾಗಿ ಮುಂದುವರೆದ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಜನ ಒಂಟಿಯಾಗಿ ಜೀವಿಸುವುದು, ಮದುವೆಯಾಗದೆಯೆ ಇನ್ನೊಬ್ಬರ ಜೊತೆ ಜೊತೆಯಾಗಿ ಬದುಕುವುದು, ಮದುವೆಯಾಗಿ ಕೆಲವೆ ಗಂಟೆ, ದಿನ, ವರ್ಷಗಳಲ್ಲಿ ವಿಚ್ಛೇದನ ನೀಡುವುದು, ಇವೆಲ್ಲವೂ ಸಾಮಾನ್ಯ. ಹೌದು, ಕೆಲವೊಮ್ಮೆ ಕೆಲವೇ ಗಂಟೆಗಳಲ್ಲೂ ವಿಚ್ಛೇದನ ನೀಡುತ್ತಾರೆ!! ಇದರಲ್ಲಿ ಬಹಳ ಪ್ರಸಿದ್ಧವಾದದ್ದು ಪಾಪ್ ಸಿಂಗರ್ ಬ್ರಿಟ್ನಿ ಸ್ಪಿಯರ್‍ಸ್‌ಳ ವಿಚ್ಛೇದನ. ಎರಡು ವರ್ಷಗಳ ಹಿಂದೆ ಆಕೆ ತನ್ನ ಬಾಲ್ಯ ಸ್ನೇಹಿತನನ್ನು ಮದುವೆಯಾಗಿ, ಕೇವಲ 55 ಗಂಟೆಗಳ ಒಳಗೆ ತನ್ನ ಮದುವೆಯನ್ನು ಅನೂರ್ಜಿತಗೊಳಿಸಿಕೊಂಡಳು.

ಅಮೇರಿಕಾದಲ್ಲಿ ಮದುವೆಯಾಗುವುದಕ್ಕಿಂತ ಮೊದಲು ಸಹಜವಾಗಿ ಡೇಟ್ ಮಾಡುತ್ತಾರೆ. ಕೆಲವೊಮ್ಮೆ ಈ ಡೇಟಿಂಗ್ ಎನ್ನುವುದು ವರ್ಷಗಟ್ಟಲೆ ನಡೆಯುತ್ತದೆ. ಗಂಡು-ಗೆಣ್ಣು ಇಬ್ಬರೂ ಮದುವೆಗೆ ಮೊದಲು ಜೊತೆಯಾಗಿ ವಾಸ ಮಾಡುವುದು ಸಹಜ. ಎಷ್ಟೋ ಜನ ವರ್ಷಗಟ್ಟಲೆ ಮದುವೆಯಾಗದೆ ಜೊತೆಯಾಗಿದ್ದುಕೊಂಡು ನಂತರ ಹಾಗೆಯೆ ಬೇರೆಯಾಗಿ ಬಿಡುತ್ತಾರೆ. ಇನ್ನು ಇಲ್ಲಿನ ವಿಚ್ಛೇದನದ ಶೇಕಡಾವಾರು ಅಂತೂ ಬಹಳ ಹೆಚ್ಚು. ಎಷ್ಟೋ ಮಕ್ಕಳಿಗೆ ತಮ್ಮ ತಾಯಿಗೆ ತಮ್ಮ ಅಪ್ಪನಲ್ಲದ ಬೇರೊಬ್ಬ ಗಂಡಸಿಂದ ಆದ ಸೋದರಸೋದರಿಯರು, ತಮ್ಮ ಅಪ್ಪನಿಗೆ ತಮ್ಮ ಅಮ್ಮನಿಂದಲ್ಲದೆ ಬೇರೊಬ್ಬ ಹೆಣ್ಣಿನಿಂದ ಆದ ಸೋದರಸೋದರಿಯರು ಸಾಮಾನ್ಯ. ತನ್ನ ತಾಯಿ-ತಂದೆಗೆ, ತನ್ನ ತಂದೆ-ತಾಯಿಗೆ ಹುಟ್ಟದ ಅಂತಹ ಸೋದರಸೋದರಿಯರನ್ನು ಇಲ್ಲಿ half-brother, half-sister ಎನ್ನುತ್ತಾರೆ. ಇನ್ನು, ಈಗ ಅಮೇರಿಕದಲ್ಲಿ ಶೇ. 51 ರಷ್ಟು ಮಹಿಳೆಯರು ಏಕಾಂಗಿಯಾಗಿ ಉಳಿಯುತ್ತಿದ್ದಾರೆ ಎಂದ ಮಾತ್ರಕ್ಕೆ ಅವರು ಪ್ರೇಮಜೀವನದಲ್ಲಿ ಸಕ್ರಿಯರಾಗಿಲ್ಲ, ಸಂಗಾತಿಗಳನ್ನು ಹುಡುಕಿಕೊಳ್ಳುತ್ತಿಲ್ಲ ಎನ್ನುವಂತಿಲ್ಲ.

ಹೀಗೆ ಗಂಡು-ಹೆಣ್ಣು ಜೊತೆಯಾಗಿರುವುದು, ಬೇರೆಯಾಗುವುದು ಹೆಚ್ಚಾಗಿರುವ ಇಲ್ಲಿನ ಸಮಾಜದಲ್ಲಿ, ‘ಬೇರೆಯಾಗೋಣ’ ಎನ್ನುವ ಮುಜಗರದ, ಕೆಲವೊಮ್ಮೆ ಅತೀವ ಧೈರ್ಯ, ಭಂಡತನ, ಎಲ್ಲವನ್ನೂ ಬಯಸುವ ಮಾತನ್ನು ಒಬ್ಬರು ಇನ್ನೊಬ್ಬರಿಗೆ ಹೇಗೆ ಹೇಳುತ್ತಾರೆ ಎನ್ನುವುದು ಬಹಳ ಕುತೂಹಲಕರ. ಇತ್ತೀಚೆಗೆ ವೆಬ್‌ಸೈಟ್ ಒಂದು ನೀವು ನಿಮ್ಮ ಸಂಗಾತಿಗೆ ಅದನ್ನು ಹೇಗೆ ಹೇಳಿದಿರಿ, ಅಥವ ನಿಮ್ಮ ಸಂಗಾತಿ ಅದನ್ನು ನಿಮಗೆ ಹೇಗೆ ತಿಳಿಸಿದರು, ಯಾವಾಗ ತಿಳಿಸಿದರು, ಹೇಗೆ ಬೇರೆಯಾದಿರಿ ಎಂದು ಬರೆಯಿರಿ ಎಂದು ಕೇಳಿದ್ದಕ್ಕೆ ಬಂದ ಉತ್ತರಗಳು ___… ಈ ಖಾಲಿ ಜಾಗದಲ್ಲಿ ಕುತೂಹಲಕಾರಿಯಾಗಿತ್ತು ಎಂದು ಬರೆಯುವುದೊ, ಆಘಾತಕಾರಿಯಾಗಿತ್ತೊ ಎಂದು ಬರೆಯುವುದೊ ಗೊತ್ತಾಗುತ್ತಿಲ್ಲ. ಯಾಕೆಂದರೆ, ಕಾಲ ಮತ್ತು ದೇಶಕ್ಕೆ ಅನುಗುಣವಾಗಿ ಆ ಪದ ಅದಲು ಬದಲಾಗುತ್ತದೆ. ಅದು ಹೇಗೆ ಎಂದು ನೀವೇ ನೋಡಿ:

  • ಅಂದು ನಮ್ಮ ಮದುವೆಯ ಆನ್ನಿವರ್ಸರಿ. ಸೆಲೆಬ್ರೇಟ್ ಮಾಡಲೆಂದು ಸಂಜೆ ಕೆಲಸದಿಂದ ಹೊರಟು ಮನೆಗೆ ಬಂದೆ. ಮನೆಗೆ ಬಂದರೆ ನನ್ನ ಹೆಂಡತಿ ಹಾಸಿಗೆಯ ಮೇಲೆ ತಲೆಕೆಡಿಸಿಕೊಂಡು ಕುಳಿತಿದ್ದಳು. ಯಾಕೆ, ಏನಾಯಿತು ಎಂದು ಕೇಳಿದೆ. ತನ್ನ ಹಳೆಯ ಬಾಯ್‌ಫ್ರೆಂಡ್ ಇರಾಕ್ ಯುದ್ಧದಿಂದ ವಾಪಸು ಬಂದಿದ್ದಾನೆ, ತನ್ನನ್ನು ಮದುವೆಯಾಗುವಂತೆ ಕೇಳಿಕೊಂಡಿದ್ದಾನೆ, ತಾನು ಅದಕ್ಕೆ ಒಪ್ಪಿಗೆ ಕೊಟ್ಟಿದ್ದೇನೆ ಎಂದು ಹೇಳಿದಳು! ಆಗ ನಮ್ಮ ಮನೆಯ ಮುಂದೆ ಕಾರಿನ ಹಾರ್ನ್ ಕೇಳಿಸಿತು. ನನ್ನ ಹೆಂಡತಿ ಎದ್ದು ಹೋದಳು.
  • ಅನ್ನನಾಳದ ಕ್ಯಾನ್ಸರ್ ಸರ್ಜರಿಗಾಗಿ ನಾನು ಆಸ್ಪತ್ರೆಗೆ ದಾಖಲಾಗಿದ್ದೆ. ಸರ್ಜರಿಯ ನಂತರ ಅಲ್ಲಿಯೇ ಒಂದು ತಿಂಗಳು ಇರಬೇಕಾಯಿತು. ಊಟ-ತಿಂಡಿ ಹೊಟ್ಟೆಗೆ ಹೋಗಲು ನನ್ನ ಜಠರಕ್ಕೆ ಟ್ಯೂಬ್ ತೂರಿಸಿದ್ದರು. ನಾನು ಇನ್ನೇನು ಆಸ್ಪತ್ರೆಯಿಂದ ಬಿಡುಗಡೆಯಾಗಬೇಕು ಎನ್ನುವ ಸಮಯದಲ್ಲಿ ನನ್ನ ಅಪ್ಪಅಮ್ಮ ನನ್ನ ಆಸ್ಪತ್ರೆಯ ಕೋಣೆಗೆ ಬಂದರು. ನನ್ನ ಅಮ್ಮ ಅಳುತ್ತಿದ್ದಳು. ಅವತ್ತು ಆಕೆಗೆ ನನ್ನನ್ನು ಮನೆಗೆ ಕರೆದುಕೊಂಡು ಬರಬೇಡ ಎಂದು ನನ್ನ ಹೆಂಡತಿ ಫೋನ್ ಮಾಡಿದ್ದಳಂತೆ. ಕಾರಣ ಕೇಳಿದರೆ, ಅವಳ ಕೈಯ್ಯಲ್ಲಿ ನನ್ನನ್ನು ನೋಡಿಕೊಳ್ಳಲು ಆಗುವುದಿಲ್ಲವೆಂತಲೂ, ತಾನು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸುತ್ತಿರುವುದಾಗಿಯೂ ಹೇಳಿದಳಂತೆ.
  • ನನಗೆ 2000 ದ ಇಸವಿಯಲ್ಲಿ ಲಕ್ವ ಹೊಡೆದಿತ್ತು. ನನ್ನನ್ನು ಕಾಣಲು ಆಸ್ಪತ್ರೆಗೆ ನನ್ನ ಹೆಂಡತಿ ಲಾಯರ್ ಜೊತೆ ಬಂದಳು! ನಾನು ಅಲ್ಲಿ ಮಲಗಿರಬೇಕಾದರೆ, ತಾನು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದೇನೆ ಎಂದು ಹೇಳಿದಳು. ಅವತ್ತು ಕ್ರಿಸ್‌ಮಸ್ ಈವ್! (ಕ್ರಿಸ್‌ಮಸ್‌ನ ಹಿಂದಿನ ದಿನ)
  • ನಾನು ಹಾಗು ನನ್ನ ಹೆಂಡತಿ ಕ್ರಿಸ್‌ಮಸ್‌ಗೆ ಅವಳ ಅಪ್ಪನ ಮನೆಗೆ ಹೋಗಲು ತಯಾರಾಗುತ್ತಿದ್ದೆವು. ಆಗ ನಾನು ಅವಳಿಗೆ, ನಾನು ಬರುವುದಿಲ್ಲ, ನಾನೀಗ ಬೇರೊಬ್ಬಳನ್ನು ನೋಡುತ್ತಿದ್ದೇನೆ ಎಂದು ಹೇಳಿದೆ.
  • ನಾವಿಬ್ಬರೂ ಕ್ಲಬ್ಬಿನಲ್ಲಿ ಇದ್ದೆವು. ನನ್ನ ಹೆಂಡತಿ ಹಾರ್ಡ್ ಲಿಕ್ಕರ್ ತೆಗೆದುಕೊಂಡಿದ್ದಳು. ನಾವಿಬ್ಬರೂ ಡ್ಯಾನ್ಸ್ ಫ್ಲೋರ್‌ನಲ್ಲಿ ಡ್ಯಾನ್ಸ್ ಮಾಡುತ್ತಿದ್ದಾಗ, ಇದ್ದಕ್ಕಿದ್ದಂತೆ ನನ್ನನ್ನು ಅಲ್ಲಿಯೇ ಬಿಟ್ಟು ಆಕೆ ಟೇಬಲ್ ಒಂದರ ಮೇಲೆ ಹತ್ತಿ, ಎರಡು ಹಾಡುಗಳಿಗೆ ಹಾಲ್‌ನಲ್ಲಿದ್ದ ಎಲ್ಲಾ ಜನರಿಗೂ ಬೆತ್ತಲೆ ನೃತ್ಯ ಮಾಡಿದಳು. ಹೀಗೆ ಎಲ್ಲವನ್ನೂ ತೋರಿಸಿದ ಬಳಿಕ ಯಾವನೋ ಒಬ್ಬನ ಮೇಲೆ ಮೇಲಿಂದ ಬಿದ್ದು, ಅವನೊಂದಿಗೆ ಶಾಶ್ವತವಾಗಿ ಹೊರಟು ಹೋದಳು.
  • ನಮ್ಮ ಮದುವೆಯ ಆನ್ನಿವರ್ಸರಿ ಡಿನ್ನರ್‌ಗೆ ಆತ ಬರಲಿಲ್ಲ. ಕೇವಲ ‘ಗುಡ್‌ಬೈ’ ಎಂದು ಮಾತ್ರ ಬರೆದಿದ್ದ ನೋಟ್ ಇಟ್ಟು ಹೂಗಳನ್ನು ಕಳುಹಿಸಿದ.
  • ನನ್ನ ಬಾಯ್‌ಫ್ರೆಂಡ್ ನನ್ನೊಂದಿಗೆ ಬ್ರೇಕ್‌ಅಪ್ ಮಾಡಿಕೊಳ್ಳುತ್ತಿರುವ ವಿಷಯವನ್ನು ಇಮೇಯ್ಲ್‌ನಲ್ಲಿ ಕಳುಹಿಸಿದ. ಅದಾದ ಸ್ವಲ್ಪ ಹೊತ್ತಿಗೆ ಆತನ ಹೊಸ ಗರ್ಲ್‌ಫ್ರೆಂಡ್ ನನಗೆ SMS ಕಳುಹಿಸಿದಳು: “ಎರಡು ವಾರಗಳ ಒಳಗೆ ನೀನು ಬೇರೆ ಜಾಗ ನೋಡಿಕೊ. ಯಾಕೆಂದರೆ ನಾನು ಅಲ್ಲಿಗೆ ಮೂವ್ ಆಗುತ್ತಿದ್ದೇನೆ.”
  • ನನ್ನ ಬಾಯ್‌ಫ್ರೆಂಡ್ ಒಂದು ದಿನ ಸಿನಿಮಾ ಹಾಲ್‌ನಲ್ಲಿ ಬೇರೊಬ್ಬ ಹುಡುಗಿಯೊಂದಿಗೆ ಚಕ್ಕಂದ ಆಡುತ್ತ ಸಿನೆಮಾ ನೋಡುತ್ತಿದ್ದಾಗ ಸಿಕ್ಕಿಬಿದ್ದ. ನಾನು ಮತ್ತು ನನ್ನ ಸ್ನೇಹಿತರು ಕುಳಿತಿದ್ದ ಸಾಲಿನ ಮುಂದಿನ ಸಾಲಿನಲ್ಲಿಯೆ ಅವರಿಬ್ಬರೂ ಕುಳಿತಿದ್ದರು!
  • ನಮ್ಮ ಮದುವೆ ಇನ್ನು ಆರು ತಿಂಗಳು ಇದೆ ಎನ್ನುವಾಗ ನನ್ನ ಭಾವಿಪತಿ ಫೊನ್ ಮಾಡಿ ತನಗೆ ಏನು ಬೇಕಾಗಿದೆ ಎಂತಲೆ ಗೊತ್ತಾಗುತ್ತಿಲ್ಲ, ಎಂದ. ಹಿನ್ನೆಲೆಯಲ್ಲಿ ಅವನಿಗೆ ಐ ಲವ್ ಯು ಎನ್ನುತ್ತಿದ್ದ ಹೆಂಗಸೊಬ್ಬಳ ಸ್ವರ ನನಗೆ ಕೇಳಿಸಿತು. ಅವನೂ ಅವಳಿಗೆ ಐ ಲವ್ ಯು ಎಂದ. ನಮ್ಮ ಮದುವೆ ಮುರಿಯಿತು. ಅವನು ಪ್ರಪೋಸ್ ಮಾಡುವಾಗ ಕೊಟ್ಟಿದ್ದ ಉಂಗುರವನ್ನು ನಾನು ಅವನಿಗೆ ವಾಪಸು ಮಾಡಲಿಲ್ಲ. ಅದಕ್ಕಾಗಿ ನನ್ನ ಮೇಲೆ ಕೇಸು ಹಾಕಿದ.
  • ‘ಇಲ್ಲಿಗೆ ಸಾಕು’ ಎಂದು ನನ್ನ ಬಾಯ್‌ಫ್ರೆಂಡ್ ನನಗೊಂದು ಎರಡು ಪದಗಳ SMS ಕಳುಹಿಸಿದ. ಅಷ್ಟೆ. ಅಲ್ಲಿಗೆ ನಮ್ಮ ಸಂಬಂಧ ಮುಗಿಯಿತು.

Add a Comment

required, use real name
required, will not be published
optional, your blog address