ಕಂಪ್ಯೂಟರ್‌ನಲ್ಲಿ ಕನ್ನಡ – ಯಾಹೂ!!!!

This post was written by admin on February 4, 2007
Posted Under: Uncategorized

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಫ಼ೆಬ್ರವರಿ 16, 2007 ರ ಸಂಚಿಕೆಯಲ್ಲಿನ ಲೇಖನ)

ಜನವರಿ ತಿಂಗಳ ಕೊನೆಯ ಭಾಗದಲ್ಲಿ ಕನ್ನಡ ಸಾಫ಼್ಟ್‌ವೇರ್ ಕ್ಷೇತ್ರದಲ್ಲಿ ಕೆಲವು ಗಮನಾರ್ಹ ಬೆಳವಣಿಗಗಳಾದವು. ಮೊದಲನೆಯದಾಗಿ, ಕೇಂದ್ರ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆಯ (DIT) “ಭಾರತೀಯ ಭಾಷೆಗಳಿಗಾಗಿ ತಂತ್ರಜ್ಞಾನ ಅಭಿವೃದ್ಧಿ” ಸಂಸ್ಥೆಯವರು ಹಲವಾರು ಉಚಿತ ಕನ್ನಡ ತಂತ್ರಾಂಶಗಳನ್ನು ಕನ್ನಡದ ಬಳಕೆದಾರರಿಗೆ ಬಿಡುಗಡೆ ಮಾಡಿದ್ದು. ಅನೇಕ ಕನ್ನಡ ಫಾಂಟ್‌ಗಳು, ಫೈರ್‌ಫ಼ಾಕ್ಸ್, ಥಂಡರ್‌ಬರ್ಡ್‌ನಂತಹ ಇಂಟರ್‌ನೆಟ್ ಬ್ರೌಸರ್, ಇಮೇಯ್ಲ್ ಕ್ಲೈಂಟ್ ತಂತ್ರಾಂಶಗಳಿಗೆ ಕನ್ನಡದ ಮೆನು ಅಳವಡಿಸಿ, ಹಲವಾರು ದೈನಂದಿನ ಕನ್ನಡ ಡಿಟಿಪಿ ತಂತ್ರಾಂಶಗಳನ್ನು ಒಂದೆ ಕಡೆ ಒದಗಿಸಿದ್ದಾರೆ. ಇತರ ಭಾರತೀಯ ಭಾಷೆಗಳಲ್ಲಿ ತಿಂಗಳು, ವರ್ಷಗಳ ಹಿಂದೆಯೆ ಈ ತಂತ್ರಾಂಶಗಳನ್ನು ಒದಗಿಸಿದ್ದ ಈ ಸಂಸ್ಥೆ ಅವುಗಳನ್ನೆ ಕನ್ನಡಕ್ಕೆ ತರಲು ಸುದೀರ್ಘ ಸಮಯವನ್ನೆ ತೆಗೆದುಕೊಂಡಿದೆ!!

ಈ ತಂತ್ರಾಂಶಗಳ ಉಚಿತ ಲಭ್ಯತೆ ಆರಂಭವಾದ ತಕ್ಷಣ, ಇಂತಹ ಕನ್ನಡ ಸಂಬಂಧಿ ತಂತ್ರಜ್ಞಾನದ ಬಗ್ಗೆ ಒಂದು ಗಮನವಿಟ್ಟಿರುವ ಪತ್ರಕರ್ತ ಬೇಳೂರು ಸುದರ್ಶನರು ಈ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿ, ಆದರೆ ಆ ವೆಬ್‌ಸೈಟಿನ ಕನ್ನಡ ಬರವಣಿಗೆಯ ಬಗ್ಗೆ ಸಮರ್ಥನೀಯವಾದ ಆಕ್ಷೇಪಣೆಯೊಂದಿಗೆ ಅವರ ತರಹವೆ ಕಂಪ್ಯೂಟರ್‌ನಲ್ಲಿ ಕನ್ನಡದ ಬೆಳವಣಿಗೆಯ ಬಗ್ಗೆ ಆಸಕ್ತಿಯಿರುವ ಮಿತ್ರರಿಗೆ ಇಮೇಯ್ಲ್ ಕಳುಹಿಸಿದ್ದರು. ಆಕ್ಷೇಪಣೆ ಯಾಕೆ ಸಮರ್ಥನೀಯ ಎಂದರೆ ಆ ವೆಬ್‌ಸೈಟಿನಲ್ಲಿ (www.ildc.in) ಕಾಣಿಸುವ ಮೊದಲ ಕನ್ನಡ ಸಾಲೆ ಭಾರತೀಯ ಭಾಷೆಗಳಿಗಾಗಿ ತಾಂತ್ರಿಕ ವಿಕಸನ..!!? ಅಲ್ಲಿನ ‘ಪರಿಚಯ’ ವಿಭಾಗದಲ್ಲಿ ಮೊದಲ ಸಾಲೇ ಹೀಗಿದೆ:

“ಅತೀ ಬಹುಮುಖಿ ಮಾನವ ವ್ಯವಹಾರ ಮಾದರಿಗಳಲ್ಲಿ ದೃಷ್ಯ ಹಾಗು ಶ್ರವಣ ನಮೂನೆಗಳೇ ಪ್ರಾಥಮಿಕ. ಪ್ರಸ್ತುತ ಕಾಲಘಟ್ಟದಲ್ಲಿ ಲಭ್ಯವಿರುವ ಮಾನವ ಯಂತ್ರ ಅಂತರ್ ವ್ಯವಹಾರಗಳಲ್ಲಿ ಕಂಡುಬರುವ ವಕ್ರಗತಿ ಮಾನವನಿಗಿಂತ ಯಂತ್ರಗಳಿಗೇ ಅನುಕೂಲಕರ…..”

ಇಂಗ್ಲಿಷ್-ಕನ್ನಡ ನಿಘಂಟನ್ನು ಪಕ್ಕ ಇಟ್ಟುಕೊಂಡು, ಸಂದರ್ಭಕ್ಕೆ ಸೂಕ್ತವಾದ ಪದವನ್ನು ಆಯ್ಕೆ ಮಾಡದೆ ಇಂಗ್ಲಿಷ್ ಪಠ್ಯವನ್ನು ಕನ್ನಡಕ್ಕೆ ಅನುವಾದಿಸಿರುವ ಪರಿ ಇದು! ಕನ್ನಡದ ಮಟ್ಟಿಗಷ್ಟೆ ಆದ ದರಿದ್ರ, ಅಪಕ್ವ, ತಲೆಬುಡ ಅರ್ಥವಾಗದ ಅನುವಾದ. ಇದಕ್ಕೆ ಈಗಾಗಲೆ ಪವನಜ, ಶೇಖರ್‌ಪೂರ್ಣ, ನಾಗಭೂಷಣ ಸ್ವಾಮಿ ಮತ್ತಿತರ ಲೇಖಕರು ILDC ಗೆ ದೂರು ಸಲ್ಲಿಸಿದ್ದಾರೆ. ಅವರು ಇದನ್ನು ಆದಷ್ಟು ಬೇಗ ಸರಿಪಡಿಸಿ, ಅವರ ತಂತ್ರಾಂಶದಿಂದ ಏನೇನು ಮಾಡಬಹುದು ಎಂದು ಸರಳವಾಗಿ ವಿವರಿಸುತ್ತಾರೆ ಎಂದು ಆಶಿಸೋಣ.

ಕನ್ನಡ ಮತ್ತು ಕಂಪ್ಯೂಟರ್ ಎಂದಾಕ್ಷಣ ಬಹುಪಾಲು ಜನರಿಗೆ ತಕ್ಷಣ ನೆನಪಿಗೆ ಬರುವುದು ಬರಹ ತಂತ್ರಾಂಶ. ಇಂಗ್ಲಿಷ್ ಕೀಬೋರ್ಡ್ ಮತ್ತು ಆಪರೇಟಿಂಗ್ ಸಿಸ್ಟಮ್ ಇಟ್ಟುಕೊಂಡೆ ಸುಲಭವಾಗಿ ಕನ್ನಡವನ್ನು ಕಂಪ್ಯೂಟರ್‌ನಲ್ಲಿ ಟೈಪು ಮಾಡಬಹುದು ಎಂದು ತೋರಿಸಿ, ಕನ್ನಡ ಜನಸಾಮಾನ್ಯರನ್ನು ಕಂಪ್ಯೂಟರ್ ಬಳಿಗೆ ಕರೆತಂದವರು ಅದರ ಕರ್ತೃ ಶೇಷಾದ್ರಿವಾಸು. ಉಚಿತವಾದ ಅವರ ಬರಹ ತಂತ್ರಾಂಶ ಇಂದು ಕನ್ನಡಕ್ಕೆ ಮಾತ್ರ ಸೀಮಿತವಲ್ಲದೆ ಹಿಂದಿ (ದೇವನಾಗರಿ), ತಮಿಳು, ತೆಲುಗು, ಮಲಯಾಳಂ, ಗುಜರಾತಿ, ಪಂಜಾಬಿ, ಬೆಂಗಾಲಿ, ಮತ್ತು ಒರಿಯಾ ಭಾಷೆಗಳಲ್ಲೂ ಬಳಸಲಾಗುತ್ತಿದೆ. ಎರಡು ವಾರದ ಹಿಂದೆ ವಾಸುರವರು ಬರಹವನ್ನು ಮತ್ತೊಂದು ಮಜಲಿಗೆ ಏರಿಸಿದರು. ಈಗ ಯಾವುದೆ ಬರಹ ಫೈಲ್ ಅನ್ನು ಬ್ರೈಲ್ ಪ್ರಿಂಟರ್‌ಗೆ ಅನುಕೂಲವಾಗುವಂತೆ ಕನ್ವರ್ಟ್ ಮಾಡಬಹುದಾಗಿದೆ. ಮೊದಲೆಲ್ಲ ಕನ್ನಡವನ್ನು ಬ್ರೈಲ್ ಎಂಬಾಸ್ಸರ್‌ಗೆ ಒದಗಿಸಬೇಕಾಗಿದ್ದರೆ ಹಲವಾರು ತೊಂದರೆಗಳಿದ್ದವು. ಇನ್ನುಮೇಲೆ ಯಾವುದೆ ಲೇಖನ ಬ್ರೈಲ್‌ನಲ್ಲಿ ಬೇಕೆಂದರೆ, ಅದನ್ನು ಬರಹ, ನುಡಿಯಂತಹ ಉಚಿತ ತಂತ್ರಾಂಶದಲ್ಲಿ ಟೈಪ್ ಮಾಡಿ, ಅದನ್ನು ಬರಹ ತಂತ್ರಾಂಶದಿಂದ ಬ್ರೈಲ್‌ಗೆ ಎಕ್ಸ್‌ಫೋರ್ಟ್ ಮಾಡಿ, ಬ್ರೈಲ್ ಎಂಬಾಸ್ಸರ್ ಪ್ರಿಂಟರ್‌ಗೆ ಕೊಟ್ಟರಾಯಿತು. ಬ್ರೈಲ್ ಉಪಯೋಗಿಸುವ ಕಣ್ಣಿನ ಅಂಧತೆಯುಳ್ಳವರು ಕನ್ನಡ ಮತ್ತಿತರ ಭಾರತೀಯ ಭಾಷೆಗಳ ಬರಹಗಳನ್ನು ಪ್ರಿಂಟ್ ಮಾಡಿಕೊಳ್ಳುವುದು ಇನ್ನು ಮೇಲೆ ಮತ್ತಷ್ಟು ಸುಲಭ. ವಿನಯಿ ಮತ್ತು ಮಿತಭಾಷಿಕರಾದ ವಾಸುರವರನ್ನು ಮತ್ತೊಮ್ಮೆ ಅಭಿನಂದಿಸಬೇಕಾದ ಗಳಿಗೆ ಇದು.

ಬಹಳ ವರ್ಷಗಳಿಂದ ವೆಬ್‌ಸೈಟುಗಳಲ್ಲಿ ನಂಬರ್ ಒನ್ ಸ್ಥಾನ ಯಾಹೂ.ಕಾಮ್‌ನವರದೆ. ಮೈಕ್ರೊಸಾಫ್ಟ್‌ನವರ msn.com ಎರಡನೆ ಸ್ಥಾನದಲ್ಲಿದೆ. ಒಂದೆರಡು ತಿಂಗಳ ಹಿಂದೆ msn.com ನವರು ಕನ್ನಡದಲ್ಲೂ ತಮ್ಮ ನ್ಯೂಸ್ ವೆಬ್‌ಸೈಟ್ ಅನ್ನು ಹೊರತಂದರು. ಇಲ್ಲಿ ಕನ್ನಡ, ಕರ್ನಾಟಕಕ್ಕೆ ಸಂಬಂಧಿಸಿದ ವಾರ್ತೆಗಳಷ್ಟೆ ಅಲ್ಲದೆ ರಾಷ್ಟ್ರೀಯ, ಅಂತರರಾಷ್ಟ್ರೀಯ ಸುದ್ದಿಗಳನ್ನೂ ಒದಗಿಸಲಾಗುತ್ತಿದೆ. ಈಗ ಯಾಹೂ.ಕಾಮ್‌ನವರೂ ಕಳೆದ ವಾರವಷ್ಟೆ ಇಂತಹುದೆ ಕನ್ನಡ ವೆಬ್‌ಸೈಟ್ ಅಣಿ ಮಾಡಿದ್ದಾರೆ. ವಾಣಿಜ್ಯ ಸ್ಪರ್ಧೆಯಿಂದಾಗಿ ಸ್ಥಳೀಯ ಬಾಷೆಗಳು ಹೇಗೆ ಬಹುಬೇಗ ಕಂಪ್ಯೂಟರ್‌ನಲ್ಲಿ ಸ್ಥಾನ ಪಡೆದುಕೊಳ್ಳುತ್ತವೆ ಎನ್ನುವುದಕ್ಕೆ ಇದಕ್ಕಿಂತ ಒಳ್ಳೆಯ ಉದಾಹರಣೆ ಬೇಕೆ? ಹಾಗೆಯೆ, ಇಂತಹ ಸಂಸ್ಥೆಗಳಲ್ಲಿ ಕನ್ನಡವೂ ಕೆಲಸ ಕೊಡಿಸುತ್ತದೆ ಎನ್ನುವುದೂ ಒಳ್ಳೆಯ ವಿಚಾರವೆ.

ಈ ಬಹುರಾಷ್ಟ್ರೀಯ ಕಂಪನಿಗಳು ಕನ್ನಡದ ವೆಬ್‌ಸೈಟ್‌ಗಳನ್ನು ಹೊರತರುವುದಕ್ಕೆ ಮುಂಚೆಯೆ ಕನ್ನಡದ ಪೋರ್ಟಲ್‌ಗಳು, ದಿನಪತ್ರಿಕೆಗಳು, ಬ್ಲಾಗ್‌ಗಳಿಂದಾಗಿ ಪ್ರತಿದಿನವೂ ಸಾವಿರಾರು ಕನ್ನಡದ ಪುಟಗಳು ಇಂಟರ್‌ನೆಟ್‌ಗೆ ಸೇರ್ಪಡೆಯಾಗುತ್ತಿದ್ದವು. ಇನ್ನು ಮೇಲೆ ಇನ್ನೂ ಹಲವು ಸ್ಥಳೀಯ/ವಿದೇಶಿ ಮಾಧ್ಯಮ ಕಂಪನಿಗಳು ಕಾಲಿಡುವುದರಿಂದ ಕನ್ನಡ ಪುಟಗಳ ಸಂಖ್ಯೆ ದುಪ್ಪಟ್ಟ, ಮುಪ್ಪಟ್ಟು ಆಗುವುದರಲ್ಲಿ ಸಂಶಯವಿಲ್ಲ. ಇದೇ ಸಮಯದಲ್ಲಿ, ಕೇವಲ ಸುದ್ದಿ, ವರದಿಯಂತಹುದೆ ಅಲ್ಲದೆ ಸಂಸ್ಕಾರ, ಸಿಂಗಾರೆವ್ವ ಮತ್ತು ಅರಮನೆ, ಗೃಹಭಂಗ, ಅಕ್ಕ, ಯಾಪಿಲ್ಲು, ದ್ವೀಪ, ಊರುಕೇರಿ, ನೂರು ವರ್ಷದ ಏಕಾಂತದಂತಹ ಮಹತ್ವದ ನೂರಾರು ಮೌಲ್ಯಯುತ ಕತೆಕವನಕಾದಂಬರಿಗಳನ್ನು ಉಚಿತವಾಗಿ ಅಂತರ್ಜಾಲದಲ್ಲಿ ಒದಗಿಸಿದ ಕನ್ನಡಸಾಹಿತ್ಯ.ಕಾಮ್‌ನ ಕನ್ನಡ ಸೇವೆಯನ್ನೂ ನೆನೆಯಬೇಕು. ಇದರ ಸ್ಥಾಪಕ ಸಂಪಾದಕರಾದ ಶೇಖರ್‌ಪೂರ್ಣರವರು ಡಿಜಿಟಲ್ ಡಿವೈಡ್ ಬಗ್ಗೆ ಕಾಳಜಿಯಿಂದ ಯೋಚಿಸುವ, ಕಂಪ್ಯೂಟರ್‌ನಲ್ಲಿ ಕನ್ನಡ ಸುಲಭವಾಗಿ ಎಟುಕುವಂತೆ ಮಾಡಬೇಕು ಎಂದು ಬಯಸುವ, ಆ ನಿಟ್ಟಿನಲ್ಲಿ ಕೆಲಸವನ್ನೂ ಮಾಡುತ್ತಿರುವ, ಚರ್ಚೆ ಹುಟ್ಟುಹಾಕುತ್ತಿರುವ ಶ್ರಮಜೀವಿ. ಇತ್ತೀಚೆಗೆ ತಾನೆ ಲಘುಹೃದಯಾಘಾತವಾಗಿ ಜಯದೇವದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶೇಖರ್‌ಪೂರ್ಣರವರು ಬೇಗ ಗುಣವಾಗಲಿ ಎಂದು ಹಾರೈಸೋಣ.

ಹಾಗೆಯೆ, ಸಂಪದ.ನೆಟ್ ಎಂಬ ಇನ್ನೊಂದು ವೆಬ್‌ಸೈಟ್ ಮತ್ತು ತಂಡದ ಬಗ್ಗೆಯೂ ಹೇಳಬೇಕು. ಇನ್ನೂ 25-30 ದಾಟದ ಚುರುಕು ಕನ್ನಡ ಹುಡುಗರ ಈ ಗುಂಪಿನಲ್ಲಿ ಅನೇಕ ಮೌಲ್ಯಯುತ ಬರಹಗಳು, ಚರ್ಚೆಗಳು, ಕಂಪ್ಯೂಟರ್‌ನಲ್ಲಿ ಕನ್ನಡ ತಂತ್ರಾಂಶ ಅಭಿವೃದ್ಧಿ ದಿಸೆಯಲ್ಲಿನ ಕೆಲಸಗಳು ನಡೆಯುತ್ತಿವೆ. ಕನ್ನಡ ಪಂಡಿತರಲ್ಲದ, ಮಡಿಮೈಲಿಗೆ ಇಲ್ಲದ, ಹೊಸವಿಚಾರಗಳಿಗೆ, ಪ್ರಯೋಗಗಳಿಗೆ ಮೈಯೊಡ್ಡಿಕೊಳ್ಳುವ ಇಂತಹ ಒಂದು ಸಕ್ರಿಯ ಗುಂಪು ಇದೆ ಎನ್ನುವುದೆ ಹೆಮ್ಮೆಯ ವಿಚಾರ. ಇಷ್ಟೆಲ್ಲಾ ಆದರೂ ಸಂಪೂರ್ಣವಾಗಿ ಕನ್ನಡಮಯ ಕಂಪ್ಯೂಟರ್ ಅನ್ನು ನೋಡುವ ದಿನ ಇನ್ನೂ ದೂರವಿದೆ. ಆದಾಗ್ಯೂ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರ್ಕಾರ ಮಾಡಬೇಕಿರುವುದನ್ನು ವಾಸು, ಪವನಜ, ಶೇಖರ್‌ಪೂರ್ಣ, ನಾಡಿಗ್‌ರಂತಹ ವ್ಯಕ್ತಿಗಳು ಆ ದಿನ ದೂರವಾಗದಂತೆ ಶ್ರಮಿಸುತ್ತಿದ್ದಾರೆ ಎನ್ನುವುದೆ ಆಶಾದಾಯಕ; ಧನ್ಯವಾದಕ್ಕೆ ಅರ್ಹ.

Reader Comments

We hope so….good work by them…

#1 
Written By shashank on May 6th, 2008 @ 2:59 am

Add a Comment

required, use real name
required, will not be published
optional, your blog address