ಗಾಳಿಮಾತು ಮತ್ತು ಉದ್ಧೇಶಪೂರ್ವಕ ಸಂಚು

This post was written by admin on February 17, 2007
Posted Under: Uncategorized

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಮಾರ್ಚ್ 2, 2007 ರ ಸಂಚಿಕೆಯಲ್ಲಿನ ಲೇಖನ)

  • ಫರ್ನಿಚರ್ ಅಂಗಡಿಯಲ್ಲಿ ಹೆಂಗಸೊಬ್ಬಳು ಮಗುವನ್ನು ಎಡವಿ ತನ್ನ ಹಿಮ್ಮಡಿ ಮುರಿದುಕೊಳ್ಳುತ್ತಾಳೆ. ಇದಕ್ಕೆ ಅಂಗಡಿಯವರ ಬೇಜವಾಬ್ದಾರಿಯೆ ಕಾರಣ ಎಂದು ಅಂಗಡಿಯವರ ಮೇಲೆ ಕೇಸು ಹಾಕುತ್ತಾಳೆ. ಅವಳ ವಾದವನ್ನು ಪುರಸ್ಕರಿಸಿದ ಜ್ಯೂರಿ, ಅವಳಿಗೆ 7.8 ಲಕ್ಷ ಡಾಲರ್ ಪರಿಹಾರ ನೀಡಬೇಕೆಂದು ಅಂಗಡಿ ಮಾಲೀಕರಿಗೆ ಆದೇಶ ನೀಡುತ್ತದೆ. ಇಷ್ಟಕ್ಕೂ ತಾನು ಎಡವಿದ ಮಗು ಬೇರೆ ಯಾರದ್ದೂ ಆಗಿರದೆ ಆ ಹೆಂಗಸಿನದೆ ಆಗಿರುತ್ತದೆ!
  • ಲಾಸ್ ಏಂಜಲೀಸ್ ನಗರದಲ್ಲಿ ಒಬ್ಬ ಯುವಕ ತನ್ನ ಪಕ್ಕದ ಮನೆಯವನ ಕಾರಿನ ಚಕ್ರದ ಹಬ್‌ಕ್ಯಾಪ್ ಕದಿಯುತ್ತಿರುತ್ತಾನೆ. ಅದೇ ಸಮಯದಲ್ಲಿ ಹೊರಗೆ ಬಂದ ಕಾರಿನ ಮಾಲೀಕ ಕಾರನ್ನು ಸ್ಟಾರ್ಟ್ ಮಾಡಿ ಚಲಾಯಿಸಿ ಬಿಡುತ್ತಾನೆ. ಚಕ್ರ ಕಳ್ಳನ ಕೈ ಮೇಲೆ ಹರಿದುಬಿಡುತ್ತದೆ. ಕಳ್ಳ ಕೋರ್ಟಿಗೆ ಹೋಗುತ್ತಾನೆ. ಬೇಜವಾಬ್ದಾರಿಯಿಂದ ಕಾರನ್ನು ಓಡಿಸಿದ ಎಂದು ಹೇಳಿ, ಕಳ್ಳನ ವೈದ್ಯಕೀಯ ಚಿಕಿತ್ಸೆಗೆಂದು 74 ಸಾವಿರ ಪರಿಹಾರ ನೀಡಲು ಕೋರ್ಟು ಕಾರಿನ ಮಾಲೀಕನಿಗೆ ಆದೇಶಿಸುತ್ತದೆ!
  • ಮನೆಯೊಂದಕ್ಕೆ ನುಗ್ಗಿದ ಕಳ್ಳ, ತನಗೆ ಬೇಕಾದ್ದನ್ನು ದೋಚಿಕೊಂಡು ಗರಾಜಿನ ಬಾಗಿಲ ಮೂಲಕ ತಪ್ಪಿಸಿಕೊಂಡು ಹೋಗಲು ಗರಾಜಿನ ಷಟರ್ ಬಾಗಿಲನ್ನು ತೆರೆಯಲು ಪ್ರಯತ್ನಿಸುತ್ತಾನೆ. ಆದರೆ ಅದು ಏನೋ ರಿಪೇರಿಯಾಗಿ ತೆರೆಯುವುದಿಲ್ಲ. ಹೋಗಲಿ ಮನೆಯೊಳಗೆ ಹೋಗೋಣವೆಂದು ನೋಡಿದರೆ, ಅವನು ಒಳಗೆ ಬರುವಾಗ ಮನೆಯಿಂದ ಗರಾಜಿನೊಳಕ್ಕೆ ಪ್ರವೇಶವಿರುವ ಬಾಗಿಲನ್ನು ಎಳೆದುಕೊಂಡು ಬಂದಿದ್ದರಿಂದ ಅದೂ ಲಾಕ್ ಆಗಿಹೋಗಿರುತ್ತದೆ. ಕಳ್ಳ ಗರಾಜಿನಲ್ಲಿ ಬಂಧಿಯಾಗಿಬಿಡುತ್ತಾನೆ. ಪ್ರವಾಸ ಹೋಗಿದ್ದ ಮನೆಯವರು ಎಂಟು ದಿನಗಳ ನಂತರ ವಾಪಸಾಗುತ್ತಾರೆ. ಅಷ್ಟೂ ದಿನ ಆ ಕಳ್ಳ ಗರಾಜಿನಲ್ಲಿಟ್ಟಿದ್ದ ಪೆಪ್ಸಿ ಕುಡಿದುಕೊಂಡು, ಅಲ್ಲಿಯೆ ಇದ್ದ ನಾಯಿ-ತಿಂಡಿ ತಿಂದುಕೊಂಡು ಕಾಲ ಹಾಕುತ್ತಾನೆ. ಮನೆಯವರು ಬಂದು ಬಾಗಿಲು ತೆಗೆದ ಮೇಲೆ ಇವನು ಮನೆ ಮಾಲೀಕರ ಇನ್ಷೂರೆನ್ಸ್ ಕಂಪನಿಯ ವಿರುದ್ದ, ತಾನು ಹೀಗೆ ಸಿಕ್ಕಿಹಾಕಿಕೊಂಡು ಇರಬೇಕಾಗಿ ಬಂದಿದ್ದರಿಂದ ತನಗೆ ಮಾನಸಿಕವಾಗಿ ಅಘಾತವಾಗಿದೆ ಎಂದು ಕೇಸು ಹಾಕುತ್ತಾನೆ. ಅವನ ವಾದವನ್ನು ಪುರಸ್ಕರಿಸಿದ ನ್ಯಾಯಾಲಯ ಅವನಿಗೆ 5 ಲಕ್ಷ ಡಾಲರ್ ಪರಿಹಾರ ಕೊಡಿಸುತ್ತದೆ!
  • ಒಬ್ಬ ತನ್ನ ನೆರೆಮನೆಯವನ ನಾಯಿಗೆ ತನ್ನ ಆಟಿಕೆ ಗನ್ನಿನಿಂದ ಆಟದ ಗೋಲಿಗಳನ್ನು ಹೊಡೆದು ರೇಗಿಸುತ್ತಿರುತ್ತಾನೆ. ನಾಯಿಯನ್ನು ಚೈನುಗಳಿಂದ ಬೇರೆ ಕಟ್ಟಿಹಾಕಿರುತ್ತಾರೆ. ಹಾಗಾಗಿ ಅದಕ್ಕೆ ತಪ್ಪಿಸಿಕೊಳ್ಳಲೂ ಆಗುವುದಿಲ್ಲ. ಇವನು ಹುಡುಗಾಟಿಕೆ ಮಾಡುತ್ತ ಅದರ ಹತ್ತಿರ ಹೋಗಿಬಿಟ್ಟಾಗ ಅದು ಅವನು ಕುಂಡಿಯನ್ನು ಕಚ್ಚಿ ಬಿಡುತ್ತದೆ. ಇವನು ಸೀದಾ ಕೋರ್ಟಿಗೆ ಹೋಗುತ್ತಾನೆ. ನ್ಯಾಯಾಲಯ ಅವನ ವೈದ್ಯಕೀಯ ವೆಚ್ಚಕ್ಕಾಗಿ 14500 ಡಾಲರ್ ನೀಡಲು ನಾಯಿಯ ಮಾಲೀಕನಿಗೆ ಆದೇಶ ನೀಡುತ್ತದೆ.
  • ಹೋಟೆಲಿನಲ್ಲಿ ಹೆಂಗಸೊಂದು ನೆಲದ ಮೇಲೆ ಚೆಲ್ಲಿದ್ದ ಕೂಲ್‌ಡ್ರಿಂಕ್‌ನ ಮೇಲೆ ಕಾಲು ಜಾರಿ ಬಿದ್ದು ತನ್ನ ಬೆನ್ನುಮೂಳೆ ಮುರಿದುಕೊಳ್ಳುತ್ತಾಳೆ. ಅದಕ್ಕೆ ಪರಿಹಾರವಾಗಿ ಅವಳಿಗೆ 1,13,500 ಡಾಲರ್ ನೀಡಲು ಹೋಟೆಲ್‌ಗೆ ನ್ಯಾಯಾಲಯ ಆದೇಶಿಸುತ್ತದೆ. ಇಷ್ಟಕ್ಕೂ ನೆಲ ಯಾಕೆ ಒದ್ದೆಯಾಗಿತ್ತು ಅಂದರೆ, ಅದೇ ಹೆಂಗಸು ತಾನು ಬೀಳುವುದಕ್ಕೆ ಅರ್ಧ ನಿಮಿಷದ ಮೊದಲು ತನ್ನ ಬಾಯ್‌ಫ಼್ರೆಂಡ್ ಜೊತೆ ವಾದ ಮಾಡುತ್ತ ಕುಳಿತಿದ್ದಾಗ ಕೋಪ ಬಂದು ತಾನು ಕುಡಿಯುತ್ತಿದ್ದ ಪಾನೀಯವನ್ನು ಅವನ ಮುಖಕ್ಕೆ ರಾಚಿರುತ್ತಾಳೆ!

ಮೊದಲೇ ಅಮೇರಿಕ ಅಂದರೆ ಅಸಾಧ್ಯದ ನಾಡು. ಇಲ್ಲಿ ಜನ ಒಬ್ಬರನ್ನೊಬ್ಬರು ಸೂ ಮಾಡುವ ಬಗ್ಗೆ ದಂತಕತೆಗಳೇ ಇವೆ. ನಂಬಲೂ ಆಗದ, ಬಿಡಲೂ ಆಗದ ಮೇಲಿನ ಘಟನೆಗಳನ್ನು ಯಾರಾದರೂ ಹೇಳಿದರೆ, ಅದೂ ಪತ್ರಿಕೆಗಳಲ್ಲಿಯೊ, ವೆಬ್‌ಸೈಟುಗಳಲ್ಲಿಯೊ ಬಂದುಬಿಟ್ಟರೆ, ನಂಬದೆ ಇರಲು ಸಾಧ್ಯವೇ ಇಲ್ಲ. ಅಮೇರಿಕದ ಮೂರನೆ ಅತಿ ದೊಡ್ಡ ವಾರಪತ್ರಿಕೆಯಾದ U.S. News & World Report ದ ಮಾಲೀಕನೂ ಹಾಗೂ ಸ್ವತಃ ಪತ್ರಕರ್ತನಾದ ಮಾರ್ಟ್ ಜ಼ುಕರ್ಮನ್ ಒಮ್ಮೆ ಜನ ಹೇಗೆ ಲಾಸೂಟ್‌ಗಳನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ ಎಂದು ಬರೆಯುತ್ತ, ಮೇಲಿನ ಜಾರಿಬಿದ್ದ ಹೆಂಗಸಿನ ಕತೆಯನ್ನು ಉಲ್ಲೇಖಿಸಿದ್ದ. ಆದರೆ ಮೇಲಿನ ಯಾವುವೂ ನಿಜವಲ್ಲ. ಎಲ್ಲಾ ಗಾಳಿಕತೆಗಳೆ. ಯಾರದೋ ತಮಾಷೆಗೆ ಹುಟ್ಟಿಕೊಂಡವು. ಆದರೆ, ಇವುಗಳ ಸತ್ಯಾಸತ್ಯತೆ ಗೊತ್ತಿಲ್ಲದೆ, ಹೌದೇನೋ ಎಂದು ನಂಬಿರುವ, ನಂಬುತ್ತಿರುವ, ಬರೆಯುತ್ತಿರುವ, ಈ ಕತೆಗಳನ್ನು ಇಮೇಯ್ಲ್‌ಗಳಲ್ಲಿ ಕಳುಹಿಸುತ್ತಿರುವ ಲಕ್ಷಾಂತರ ಜನರು ಇದ್ದಾರೆ.

ನಮ್ಮಲ್ಲಿಯೂ ಅನೇಕ ವಿಚಾರಗಳಿಗೆ ಎಲ್ಲೆಲ್ಲಿಯೊ ಎಂತಂತಹುದೊ ಗಾಳಿಸುದ್ದಿಗಳು ಹಬ್ಬಿಬಿಡುತ್ತವೆ. ಕೋಳಿಬಲಿ ಕೊಡದಿದ್ದರೆ ಮಗನೊಬ್ಬನಿಗೆ ಅಪಾಯ ಕಾದಿದೆ ಎಂಬ ಸುದ್ದಿ ಹಬ್ಬಿ ಮೈಸೂರಿನ ಕಡೆ ಗಂಡು ಮಕ್ಕಳಿರುವವರು ಕೋಳಿ ಬಲಿ ನೀಡುತ್ತಿದ್ದಾರೆ, ಹಾಗಾಗಿ ಕೋಳಿಗಳ ಬೆಲೆ ಗಗನಕ್ಕೇರಿದೆ ಎಂದು ಪತ್ರಿಕೆಯೊಂದು ಕಳೆದ ವಾರ ವರದಿ ಮಾಡಿತ್ತು. ಇದು ಯಾರೊ ಕುಚೇಷ್ಟೆ ಮಾಡುವವರ ಇಲ್ಲವೆ ಕೋಳಿ ಫಾರಂ ಮಾಲೀಕರ ತಂತ್ರ ಎಂದು ಭಾವಿಸಬಹುದು. ಆದರೆ, ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಾದ ಪತ್ರಕರ್ತರು, ಸಾಹಿತಿಗಳು ಸಹ ಇಂತಹವೆ ಗಾಳಿಸುದ್ದಿ ಹಬ್ಬಿಸಲು ಪ್ರಯತ್ನಿಸುತ್ತಿರುವುದು ನಿಜಕ್ಕೂ ಶೋಚನೀಯ.

ಎಸ್.ಎಲ್. ಭೈರಪ್ಪನವರು ಕನ್ನಡದ ಜನಪ್ರಿಯ ಕಾದಂಬರಿಕಾರರಲ್ಲೊಬ್ಬರು. ಅವರ ಇತ್ತೀಚಿನ ಕಾದಂಬರಿ “ಆವರಣ” ಎರಡು ವಾರಗಳ ಹಿಂದೆಯಷ್ಟೆ ಬಿಡುಗಡೆಯಾಗಿದೆ. ಅದು ಬಿಡುಗಡೆಯಾದ ಮೇಲೆ ಅದನ್ನು ಓದಿದ ಕೆಲವರು ಕೂಡಲೆ, “ಸರ್ಕಾರ ಇದನ್ನು ಬ್ಯಾನ್ ಮಾಡುವ ಸಾಧ್ಯತೆಗಳಿವೆ, ಹಾಗಾಗಿ ಈಗಾಗಲೆ ಅನೇಕ ಪ್ರತಿಗಳು ಸದ್ದಿಲ್ಲದೆ ಮಾರಾಟವಾಗಿ ಹೋಗಿವೆ, ಕಾವೇರಿಯ ಶಾಖ ಕಮ್ಮಿಯಾದ ಮೇಲೆ ಆವರಣದ ಶಾಖ ಹಬ್ಬುವ ಸಾಧ್ಯತೆಗಳಿವೆ, ಆವರಣಕ್ಕೆ ಬೇಲಿ ಬೀಳುವ ಮುನ್ನ ಓದಿ ಬಿಡಿ,” ಎಂದೆಲ್ಲ ಬರೆಯುತ್ತ, ಅದನ್ನು ಪತ್ರಿಕೆಗಳಲ್ಲಿ, ವೆಬ್‌ಸೈಟುಗಳಲ್ಲಿ ಪ್ರಕಟಿಸುತ್ತ ಇಲ್ಲದ ಬೆಂಕಿಗೆ ಗಾಳಿ ಹಾಕಲು ಒದ್ದಾಡುತ್ತಿದ್ದಾರೆ! ಹೀಗೆ ಹೇಳುತ್ತಿರವವರೆಲ್ಲರೂ ಭೈರಪ್ಪನವರ ಅಭಿಮಾನಿಗಳೆ ಎಂಬುದು ಇಲ್ಲಿನ ವಿಚಿತ್ರ! ಅಥವ ಇದೂ ಒಂದು ತಂತ್ರವೆ? ಉದ್ಧೇಶಪೂರ್ವಕ ಸಂಚೆ? ಭೈರಪ್ಪ, ಮಾಸ್ತಿ, ಕೆ.ವಿ.ನಾರಾಯಣ, ಕಾರ್ನಾಡ್, ಯಾರಾದರೇನು? ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರಿಗೂ ಒಂದೇ ಅಲ್ಲವೆ?

Add a Comment

required, use real name
required, will not be published
optional, your blog address