ಮಾಧ್ಯಮ ಕರ್ನಾಟಕ : ಪರ್ಯಾಯ ಮಾಧ್ಯಮದ ಹುಡುಕಾಟದಲ್ಲಿ…

This post was written by admin on June 28, 2011
Posted Under: Uncategorized

ಕಳೆದ ಶನಿವಾರ ಮತ್ತು ಭಾನುವಾರ (ಜೂನ್ 25-26, 2011) ಚಿತ್ರದುರ್ಗದಲ್ಲಿ ’ಮಾಧ್ಯಮ ಕರ್ನಾಟಕ” ಎಂಬ ವಿಚಾರ ಸಂಕಿರಣ ನಡೆಯಿತು. ’ಬಯಲು ಸಾಹಿತ್ಯ ವೇದಿಕೆ, ಕೊಟ್ಟೂರು’, ಮತ್ತು ’ಗೆಳೆಯರ ಬಳಗ, ಚಿತ್ರದುರ್ಗ’, ’ನಾವು-ನಮ್ಮಲ್ಲಿ’ ಸಹಯೋಗದೊಂದಿಗೆ ಆ ಈ ಕಾರ್ಯಕ್ರಮವನ್ನು ಆಯೋಜಿಸಿದ್ದವು. ಇದಕ್ಕೆ ಹೆಚ್ಚಾಗಿ ಕನ್ನಡದ ಕೆಲವು ಪ್ರಮುಖ ಪ್ರಗತಿಪರ ವಿಚಾರಧಾರೆಯ ಪತ್ರಕರ್ತರು, ಬರಹಗಾರರು, ಆಸಕ್ತರು ಬಂದಿದ್ದರು. ಆಯೋಜಕರಲ್ಲಿ ಬಹುಪಾಲಿನವರು ಚಿತ್ರದುರ್ಗದ ಮತ್ತು ಅಕ್ಕಪಕ್ಕದ ಜಿಲ್ಲೆಗಳ ಯುವಕರೇ ಇದ್ದರು. (ಯುವಕರೇ ಅಂದರೆ ಯುವಕ ಮತ್ತು ಯುವತಿಯರು ಎಂದು ಭಾವಿಸಬೇಕಾಗಿ ವಿನಂತಿ.) ಆಯೋಜನೆ ಮತ್ತು ವ್ಯವಸ್ಥೆಯ ದೃಷ್ಟಿಯಿಂದ ಬಹಳ ಪ್ರೀತಿ, ಆಸಕ್ತಿ, ಮತ್ತು ಕಾಳಜಿಯಿಂದ ಸಂಯೋಜಿಸಲ್ಪಟ್ಟ ಕಾರ್ಯಕ್ರಮ. ಅವರೆಲ್ಲರಿಗೂ ನಾನು ಈ ಮೂಲಕ ಅಭಿಮಾನ, ಅಭಿನಂದನೆ ಮತ್ತು ಧನ್ಯವಾದ ತಿಳಿಸುತ್ತೇನೆ. ಈ ಗುಂಪಿನ ಮೇಲೆ ನನಗೆ ಬಹಳಷ್ಟು ಆಶಾವಾದವಿದೆ. ಇವರ ತಾಕತ್ತು ಅವರು ಹೊಂದಿರುವ ಪ್ರಾಮಾಣಿಕತೆ, ಕ್ರಿಯಾಶೀಲತೆ, ವೈಚಾರಿಕ ನಿಲುವುಗಳು, ಮತ್ತು ಆದರ್ಶಗಳಲ್ಲಿದೆ.

ಮೊದಲ ದಿನದದ ಗೋಷ್ಠಿಯಲ್ಲಿ ನನ್ನದೂ ಒಂದು ವಿಷಯ ಮಂಡನೆಯಿತ್ತು. ವಿಷಯ, “ಆದರ್ಶ ಪತ್ರಿಕೋದ್ಯಮ”. ಅದಕ್ಕೂ ಎರಡು ದಿನದ ಹಿಂದೆ ಬೆಂಗಳೂರಿನ ಗೆಳೆಯರಿಬ್ಬರ ಜೊತೆ ಗಂಭೀರವಾಗಿ ಮಾತನಾಡುತ್ತಿದ್ದಾಗ ನಾನು ಮಂಡಿಸಲಿರುವ ವಿಷಯವನ್ನು ಯಾವ ವಿಚಾರದ ಪ್ರಸ್ತಾಪದ ಮೂಲಕ ಕೊನೆಗೊಳಿಸಬೇಕು ಎನ್ನುವ ಸ್ಪಷ್ಟತೆ ಬಂದಿತ್ತು. ಅದು, ಕರ್ನಾಟಕದಲ್ಲಿ ಪರ್ಯಾಯ ಮಾಧ್ಯಮದ ಹುಡುಕಾಟದ ಮೂಲಕ ನಾವೊಂದು ಆದರ್ಶ ಮಾಧ್ಯಮ ಸಂಸ್ಥೆ/ಗುಂಪೊಂದರ ಸಾಕಾರ ಮಾಡಿಕೊಳ್ಳುವ ಸಾಧ್ಯತೆ ಇದೆ ಎನ್ನುವುದು. ಆ ಪರ್ಯಾಯ ಮಾಧ್ಯಮ internet ಆಧಾರಿತವಾಗಿರುತ್ತದೆ. ಈ ಮಾಧ್ಯಮ ಉತ್ತಮ ಜೀವನ ಮೌಲ್ಯಗಳ, ಸ್ವಾತಂತ್ರ್ಯದ, ಸಮಾನತೆಯ, ಪ್ರಜಾಪ್ರಭುತ್ವದ ಪರ ಇದ್ದುಕೊಂಡೆ ಸಬಲ ಧ್ವನಿಯಾಗಿಯೂ ಬೆಳೆಯಲು ಸಾಧ್ಯವಿದೆ. ಇದಕ್ಕೆ ಬೇಕಿರುವುದು ದುಡ್ಡಿಗಿಂತ ಹೆಚ್ಚಾಗಿ ಬದ್ಧತೆಯುಳ್ಳ ಮತ್ತು ಹೆಚ್ಚಿನ ಮಟ್ಟದ ಹಣದ ಅವಶ್ಯಕತೆಯಿರದ ಒಂದಿಷ್ಟು ಯುವ ಪತ್ರಕರ್ತರು ಮತ್ತು ಬರಹಗಾರರು. ಇದು ಈ ಕೂಡಲೆ ಸಾಧ್ಯವಾಗುವ ಸಂಗತಿಯಲ್ಲ. ನಮ್ಮ ಕನ್ನಡದ-ಕರ್ನಾಟಕದ ಸಂದರ್ಭದಲ್ಲಿ ಬಹುಶ: ಐದಾರು ವರ್ಷಗಳನ್ನೆ ತೆಗೆದುಕೊಳ್ಳಬಹುದು. ಇದನ್ನೆ ನಾನು ಅಲ್ಲಿ ಪ್ರಸ್ತಾಪಿಸಿದ್ದೆ.

ನನ್ನ ಮುಂದಿನ ದಿನಗಳ ಸುಮಾರು ನಾಲ್ಕನೆ ಒಂದು (ಎಚ್ಚರದ ಸ್ಥಿತಿಯ) ಸಮಯವನ್ನು ಮತ್ತು ನನ್ನ ಒಂದಷ್ಟು ಆದಾಯದ ಪಾಲನ್ನು ಇದರ ಸಾಕಾರಕ್ಕೆ ವಿನಿಯೋಗಿಸಲಿದ್ದೇನೆ. ಬಹುಶಃ ಕೈಗೆ ಸಿಗುವ ಸಮಾನಮನಸ್ಕರಿಗೆಲ್ಲ ಇದರ ಬಗ್ಗೆ ಪ್ರಸ್ತಾಪಿಸಲಿದ್ದೇನೆ. ಇದನ್ನು ಓದುವ ಗೆಳೆಯರು ಈ ನಿಟ್ಟಿನಲ್ಲಿ ನನಗೊಂದಿಷ್ಟು ಸಹಾಯ ಮಾಡಬಹುದು. ನೀವು ಈ ವಿಷಯದಲ್ಲಿ ಆಸಕ್ತರಾಗಿದ್ದರೆ ಮತ್ತು ಒಂದಿಷ್ಟು ಗಂಟೆಗಳ ಸಮಯವನ್ನು ಕೊಡಬಲ್ಲಿರಾದರೆ ದಯವಿಟ್ಟು ಸಂಪರ್ಕಿಸಿ (೯೬೮೬೦೮೦೦೦೫). ಅಥವ ನಿಮ್ಮ ಸ್ನೇಹಿತರ ಬಳಗದಲ್ಲಿ ಅಂತಹವರಿದ್ದರೆ ಅವರಿಗೆ ನನ್ನನ್ನು ಸಂಪರ್ಕಿಸಲು ತಿಳಿಸಿ. ಅವರು ಕರ್ನಾಟಕದ (ಅಥವ ದೇಶದ) ಯಾವುದೇ ಪ್ರದೇಶದಲ್ಲಿರಲಿ, ತೊಂದರೆಯಿಲ್ಲ. ಆದರೆ ಅವರಿಗೆ ಒಂದಿಷ್ಟು ಸವಲತ್ತುಗಳಿರಬೇಕು (ಕಂಪ್ಯೂಟರ್, ಇಂಟರ್ನೆಟ್). ಒಂದಿಷ್ಟು ಓದಿಕೊಂಡಿರಬೇಕು. ಹೊಸತನ್ನು ಓದುವ, ಹೊಸ ವಿಚಾರಗಳನ್ನು ತಿಳಿದುಕೊಳ್ಳುವ ಹಂಬಲ ಮತ್ತು ಅವುಗಳನ್ನು ವಿಮರ್ಶಿಸುವ ಬೌದ್ಧಿಕ ಸಾಮಗ್ರಿ ಇರಬೇಕು. ಅವರು ಹೇಳುವ ವಿಚಾರಕ್ಕೆ ಬದ್ಧರಾಗಿರಬೇಕು. ಪ್ರಾಮಾಣಿಕರಾಗಿರಬೇಕು. ಅವರ ಸಮಯಕ್ಕೆ ಮತ್ತು ಬರವಣಿಗೆಗೆ ಸೂಕ್ತ ಮಾಸಿಕ ಸಂಭಾವನೆಯನ್ನು ಕೊಡಲಾಗುವುದು. ಉಳಿದಂತೆ, ನನ್ನ ವಿಚಾರಗಳೇನು ಮತ್ತು ನಿಲುವುಗಳೇನು ಎಂದು ಈ ಬ್ಲಾಗ್ ಓದುವವರಿಗೆ ತಿಳಿದೇ ಇದೆ.

Add a Comment

required, use real name
required, will not be published
optional, your blog address