ಸಲಿಂಗ ಕಾಮ ಮತ್ತು ಇತಿಹಾಸ

This post was written by admin on February 25, 2007
Posted Under: Uncategorized

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಮಾರ್ಚ್ 9, 2007 ರ ಸಂಚಿಕೆಯಲ್ಲಿನ ಲೇಖನ)

ಬಹುಶಃ ಈ ಕಾಮ ಎನ್ನುವುದು ಎಷ್ಟು ಪುರಾತನವೊ ಅಷ್ಟೇ ಪುರಾತನವಾದದ್ದು ಇರಬೇಕು ಸಲಿಂಗ ಕಾಮವೂ. ಯಾವಾಗ ಜನ ಗುಂಪುಗಳಲ್ಲಿ ಜೀವಿಸಲು ಪ್ರಾರಂಭಿಸಿ, ಆಗಾಗ ಊರಿನ, ಬುಡಕಟ್ಟಿನ ಗಂಡುಗಳೆಲ್ಲ ಬೇಟೆಗೊ ಇನ್ನೊಂದಕ್ಕೊ ಹೊರಟು ಹೆಂಗಸರಿಂದ ಬಹಳ ದಿನ ಅಗಲಿ ಇದ್ದ ಸಮಯದಲ್ಲೆ ಇದೂ ಪ್ರಾರಂಭವಾಗಿರಬಹುದೇನೊ! ಯಾಕೆಂದರೆ, ಗ್ರೀಕರ ಕ್ರಿಸ್ತಪೂರ್ವ ಇತಿಹಾಸದಲ್ಲಿ ಗಂಡಸರ ನಡುವಿನ ಸಲಿಂಗಕಾಮ ಪ್ರಚಲಿತದಲ್ಲಿತ್ತು. ಅದಕ್ಕೆ ಮುಖ್ಯ ಕಾರಣ ಅವರಲ್ಲಿ ಬಹುಪಾಲು ಜನ ಸೈನಿಕರಾಗಿದ್ದದ್ದು ಹಾಗು ಯಾವಾಗಲೂ ಒಂದಲ್ಲ ಒಂದು ಯುದ್ಧದಲ್ಲಿ ತೊಡಗಿರುತ್ತಿದ್ದದ್ದು ಮತ್ತು ಕೆಲವು ಸೈನಿಕ ಪಡೆಗಳಲ್ಲಿ ಅದಕ್ಕಿದ್ದ ಸಮ್ಮತಿ ಮತ್ತು ಪ್ರೋತ್ಸಾಹ. ತನ್ನ ಜೊತೆಯಿರುವ ಇನ್ನೊಬ್ಬ ಯುವಕನೆಡೆಗಿನ ಪ್ರೇಮ ಸೈನಿಕರನ್ನು ವೀರಾವೇಷದಿಂದ ಹೋರಾಡಲು ಹುರಿದುಂಬಿಸುತ್ತದೆ ಎಂದು ಆಗ ಭಾವಿಸಲಾಗುತ್ತಿತ್ತಂತೆ.

ಒಂದು ವಾದದ ಇತಿಹಾಸಕಾರರನ್ನು ಉಲ್ಲೇಖಿಸಬಹುದಾದರೆ ಅಲೆಕ್ಸಾಂಡರ್ ಸಹ ಸಲಿಂಗಕಾಮಿಯಾಗಿದ್ದ. ಆದರೆ ಅವನು ದ್ವಿಲಿಂಗಕಾಮಿಯೂ ಆಗಿದ್ದ. ಯುದ್ಧಗಳನ್ನು ಗೆದ್ದ ಸಮಯದಲ್ಲಿ ಸೋತ ರಾಜನ ಮಗಳನ್ನು ಒಂದೆರಡು ಬಾರಿ ಅವನು ವಿವಾಹವೂ ಆಗಿದ್ದ. ಮಕ್ಕಳೂ ಇದ್ದರು. ಆದರೆ, ಆತ ದಾರ್ಶನಿಕ ಅರಿಸ್ಟಾಟಲ್‌ನ ಕೆಳಗೆ ಓದುತ್ತಿದ್ದಾಗ ಅವನ ಸಹಪಾಠಿಯಾಗಿದ್ದಿರಬಹುದು ಎಂದು ಭಾವಿಸಲಾಗುವ ಹೆಫ಼ಾಸ್ಟಿಯನ್‌ನೊಂದಿಗಿನ ಅವನ ಸ್ನೇಹ ಮತ್ತು ಪ್ರೇಮ ಬಹಳ ಪ್ರಸಿದ್ಧವಾದದ್ದು. ತನಗಿಂತ ಎಂಟು ತಿಂಗಳ ಮೊದಲೆ ಕಾಯಿಲೆಯಿಂದಾಗಿ ಸತ್ತ ತನ್ನ ಆ ಪ್ರಿಯಕರನಿಗಾಗಿ ಅಲೆಕ್ಸಾಂಡರ್ ತಲೆ ಬೋಳಿಸಿಕೊಂಡ, ಅವನಿಗಾಗಿ ಪಿರಮಿಡ್ ಸಹ ಕಟ್ಟಬೇಕು ಎಂದುಕೊಂಡಿದ್ದ ಎನ್ನುತ್ತಾರೆ! ಆದರೆ, ಸ್ನೇಹಿತ ಮರಣದ ಎಂಟು ತಿಂಗಳ ನಂತರ, ಪೂರ್ಣಗೊಳಿಸಲಾಗದೆ ಹೋದ ಭಾರತದ ಮೇಲಿನ ದಂಡಯಾತ್ರೆಯಿಂದ ಬೇಸತ್ತು ವಾಪಸು ಉರಿಗೆ ಮರಳುವ ದಾರಿಯಲ್ಲಿ ಸ್ವತಃ ತಾನೆ ಕಾಯಿಲೆ ಬಿದ್ದು ಅಲೆಕ್ಸಾಂಡರ್ ತನ್ನ 33 ನೆ ವಯಸ್ಸಿನಲ್ಲಿಯೆ ಸಾಯುತ್ತಾನೆ.

ಕ್ರಿಶ್ಚಿಯನ್ ಮತದ ಪ್ರಭಾವ ಹರಡುತ್ತ ಹೋದಂತೆಲ್ಲ ಯೂರೋಪಿನಲ್ಲಿ ಸಲಿಂಗಕಾಮಕ್ಕೆ ಬೆಂಬಲ ಕಮ್ಮಿಯಾಗುತ್ತ ಹೋಯಿತು. ಚರ್ಚ್ ಅದನ್ನು ಪಾಪವೆಂದು ಪರಿಗಣಿಸುತ್ತದೆ. ಅರೇಬಿಯನ್ ನೈಟ್ಸ್‌ನಲ್ಲಿ ಸಲಿಂಗಕಾಮದ ಬಗ್ಗೆ ಅನೇಕ ಉಲ್ಲೇಖಗಳಿದ್ದರೂ ಇಸ್ಲಾಮಿನ ಪ್ರಭಾವದಿಂದ ಅರಬ್ ದೇಶಗಳಲ್ಲಿಯೂ ಅದು ನಿಷಿದ್ದ. ಇಸ್ಲಾಮ್ ಮತದಲ್ಲಿಯೂ ಸಲಿಂಗ ಕಾಮಕ್ಕೆ ನಿಷೇಧವಿದೆ. ಚೈನಾದಲ್ಲಿನ ಸಲಿಂಗಕಾಮದ ಬಗ್ಗೆ ಕ್ರಿಸ್ತಪೂರ್ವ 600 ರಲ್ಲಿ ರಚಿತವಾದ ಸಾಹಿತ್ಯದಲ್ಲಿಯೆ ಕೆಲವು ಉಲ್ಲೇಖಗಳಿವೆ.

ಇನ್ನು ಭಾರತದ ಇತಿಹಾಸಕ್ಕೆ ಬಂದರೆ, ಇಲ್ಲಿ ಸಲಿಂಗಕಾಮವನ್ನು ಸಮಾಜ ಎಂದೂ ಒಪ್ಪಿಕೊಂಡಿರಲಿಲ್ಲ ಹಾಗೂ ಈಗಲೂ ಒಪ್ಪಿಕೊಂಡಿಲ್ಲ. ಭಾರತದಲ್ಲಿ ಸೆಕ್ಷನ್ 377 ರ ಅಡಿಯಲ್ಲಿ ಸಲಿಂಗಕಾಮವನ್ನು ಅಪರಾಧ ಎಂದು ಪರಿಗಣಿಸಲಾಗುತ್ತದೆ. ಹಾಗೆಂದ ಮಾತ್ರಕ್ಕೆ ಭಾರತದಲ್ಲಿ ಸಲಿಂಗಕಾಮ ಇರಲಿಲ್ಲ ಎಂದಲ್ಲ. ರುಥ್ ವನಿತ ಮತ್ತು ಸಲಿಂ ಕಿದ್ವಾಯಿ ಎಂಬ ಇಬ್ಬರು ಲೇಖಕರು ವೇದಗಳ ಕಾಲದಿಂದ ಇಲ್ಲಿಯವರೆಗಿನ ಭಾರತದ ಇತಿಹಾಸ ಮತ್ತು ಸಾಹಿತ್ಯದಲ್ಲಿನ ಆಧಾರಗಳ ಮೇಲೆ “Same-Sex Love in India: Readings from Literature and History” ಎಂಬ ಪುಸ್ತಕ ಬರೆದಿದ್ದಾರೆ.

ಸುಮಾರು ಎರಡು ಸಾವಿರ ವರ್ಷಗಳಷ್ಟು ಹಳೆಯದು ಎನ್ನಲಾಗುವ ಮನುಸ್ಮೃತಿಯಲ್ಲಿ ಸಲಿಂಗಕಾಮದ ಬಗ್ಗೆ ಉಲ್ಲೇಖಗಳಿವೆ ಎಂದರೆ ಆಶ್ಚರ್ಯವಾಗದೆ ಇರದು. ಮನುವಿನ ಪ್ರಕಾರ, ಗಂಡಸೊಬ್ಬನನ್ನು ಕಾಮಿಸುವ ದ್ವಿಜನ ಅಪರಾಧ, ಹೆಂಗಸನ್ನು ಚಲಿಸುತ್ತಿರುವ ಎತ್ತಿನ ಗಾಡಿಯಲ್ಲಿ ಕೂಡುವ, ಇಲ್ಲವೆ ನೀರಿನಲ್ಲಿ ಕೂಡುವ, ಅಥವ ಹಗಲು ಹೊತ್ತಿನಲ್ಲಿ ಕೂಡುವ ಅಪರಾಧಕ್ಕೆ ಸಮನಾದದ್ದು. ಇಂತಹ ಮಾಡಬಾರದ ಸಮಯದಲ್ಲಿ ಹೆಂಗಸೊಬ್ಬಳನ್ನು ಸಂಭೋಗಿಸುವ ದ್ವಿಜ ಅಥವ ಗಂಡಸನ್ನು ಸಂಭೋಗಿಸುವ ದ್ವಿಜ ತನ್ನ ತಪ್ಪಿನ ಪ್ರಾಯಶ್ಚಿತ್ತವಾಗಿ ಉಟ್ಟ ಬಟ್ಟೆಯಲ್ಲಿ ಸ್ನಾನ ಮಾಡಬೇಕು. ಅಷ್ಟೆ ಸಾಕು. [ಅಧ್ಯಾಯ 11, ಸೂತ್ರ 175]

ಇದಕ್ಕಿಂತ ಘೋರ ಶಿಕ್ಷೆ ಎಂದರೆ (ಅಬ್ರಾಹ್ಮಣನಾದವನಿಗೆ?) ಜಾತಿಯಿಂದ ಬಹಿಷ್ಕಾರ ಹಾಕುವುದು; ಅದಕ್ಕೆ ಯಾರು ಅರ್ಹರೆಂದರೆ, ಬ್ರಾಹ್ಮಣನನ್ನು ಗಾಯಗೊಳಿಸುವವನು, ಮದ್ಯವನ್ನು ಅಥವ ಮೂಸಬಾರದ್ದನ್ನು ಮೂಸುವವನು, ವಂಚಕ, ಹಾಗೂ ಅಸಹಜವಾಗಿ ಇನ್ನೊಬ್ಬ ಗಂಡಸನ್ನು ಕೂಡುವವನು. [ಅಧ್ಯಾಯ 11, ಸೂತ್ರ 68]

ಇದು ಗಂಡಸರಿಗೆ ಮನು ವಿಧಿಸುವ ಶಿಕ್ಷೆ. ಇನ್ನು ಹೆಂಗಸರಿಗೆ? ಮನು ಗಂಡಸು ಪಕ್ಷಪಾತಿ ಎಂಬ ಆರೋಪ ಬೇರೆ ಇದೆಯಲ್ಲ? ಹೌದು. ಇಲ್ಲಿಯೂ ಮನು ಹೆಂಗಸರಿಗೆ ಉಗ್ರವಾದ ಶಿಕ್ಷೆಯನ್ನೆ ಹೇರುತ್ತಾನೆ: ಕನ್ಯೆಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಹಿರಿಯ ಹೆಂಗಸಿನ ತಲೆಯನ್ನು ಕೂಡಲೆ ಬೋಳಿಸಿ, ಇಲ್ಲವೆ ಅವಳ ಎರಡು ಬೆರಳುಗಳನ್ನು ತುಂಡರಿಸಿ, ಕತ್ತೆಯ ಮೇಲೆ ಕೂರಿಸಿ ಮೆರವಣಿಗೆ ಮಾಡಬೇಕು. [ಅಧ್ಯಾಯ 8, ಸೂತ್ರ 370]

ಕಳೆದ ಎರಡು ಸಾವಿರ ವರ್ಷಗಳಿಂದ ಹೆಚ್ಚುಕಮ್ಮಿ ವಿರಳವಾಗಿ, ಕದ್ದುಮುಚ್ಚಿ ಪ್ರಾಣಭಯದಿಂದ ನಡೆಯುತ್ತಿದ್ದ ಕ್ರಿಯೆ 19 ನೆ ಶತಮಾನದಿಂದೀಚೆಗೆ ಸ್ವಲ್ಪಸ್ವಲ್ಪವೆ ಬಯಲಿಗೆ ಬರುತ್ತಿದೆ. ಈ ನಡವಳಿಕೆಯ ಬಗ್ಗೆ ಸಮಾಜಗಳು ನಿಧಾನವಾಗಿ ಸಹಿಷ್ಣುವಾಗುತ್ತ ಹೋಗುತ್ತಿವೆ. ಸ್ಯಾನ್ ಫ಼್ರಾನ್ಸಿಸ್ಕೊ ಅಂತಹ ನಗರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಗಂಡಸರು ಗಂಡಸರಿಗೆ ಮುತ್ತಿಟ್ಟುಕೊಳ್ಳುವ, ಹೆಂಗಸರು ಹೆಂಗಸರಿಗೆ ಮುತ್ತಿಟ್ಟುಕೊಳ್ಳುವುದನ್ನು ಹಾಡುಹಗಲೆ ನೋಡಬಹುದು.

ನನಗೆ ಗೊತ್ತಿರುವ ಮಟ್ಟಿಗೆ, ಕನ್ನಡದ ಇಬ್ಬರು ಜ್ಞಾನಪೀಠ ಪ್ರಶಸ್ತಿ ವಿಜೇತರ ಕೃತಿಗಳಲ್ಲಿಯೂ ಸಲಿಂಗಕಾಮದ ಉಲ್ಲೇಖವಿದೆ. ಶಿವರಾಮ ಕಾರಂತರ ‘ಮೂಕಜ್ಜಿಯ ಕನಸುಗಳು’ ಕಾದಂಬರಿಯ ಕೊನೆಯಲ್ಲಿ ಸಲಿಂಗಕಾಮಿಯೊಬ್ಬನ ಮುಖವಾಡ ಮೂಕಜ್ಜಿಯ ನಿಷ್ಠುರ ಮಾತಿನಿಂದ ಬಯಲಾಗುತ್ತದೆ. ಇದೇನೊ ಕಾಲ್ಪನಿಕ ಕತೆ. ಹಾಗಾಗಿ, ಇದಕ್ಕಿಂತ ಆಘಾತಕಾರಿಯಾದದ್ದು ಕುವೆಂಪುರವರ ಆತ್ಮಕತೆಯಲ್ಲಿಯೆ ಬರುವ ಸಲಿಂಗಕಾಮದ ಉಲ್ಲೇಖ. ‘ನೆನಪಿನ ದೋಣಿ’ಯಲ್ಲಿ ತಾವು ಮೈಸೂರಿನಲ್ಲಿ ಓದುತ್ತಿದ್ದಾಗ ತಮ್ಮ ರೂಮಿನ ಮುಂದೆ ಇಸ್ತ್ರಿ ಮಾಡುತ್ತಿದ್ದ ಮನುಷ್ಯನೊಬ್ಬನ ತಮ್ಮೆಡೆಗಿನ ಅನಪೇಕ್ಷಿತ, ಅಸಹಜ ನಡವಳಿಕೆಯ ಬಗ್ಗೆ ಕುವೆಂಪು ವಸ್ತುನಿಷ್ಠವಾಗಿ ಬರೆಯುತ್ತಾರೆ.

Add a Comment

required, use real name
required, will not be published
optional, your blog address