ಮಟಮಟ ಮಧ್ಯಾಹ್ನದಲ್ಲಿ ಏಕಾಂಗಿ
Posted Under: Uncategorized
(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಮಾರ್ಚ್ 23, 2007 ರ ಸಂಚಿಕೆಯಲ್ಲಿನ ಲೇಖನ)
ಅದು ಎರಡನೆ ಮಹಾಯುದ್ಧದ ಸರಿಸುಮಾರು. ಯೂರೋಪ್‌ನಲ್ಲಿ ಹಿಟ್ಲರ್‌ನ ನಾಟ್ಜಿಗಳು ಹತ್ಯಾಕಾಂಡ ಮಾಡುತ್ತ, ಜನಾಂಗೀಯ ದ್ವೇಷ ಬಿತ್ತುತ್ತ ವಿಶ್ವವನ್ನೆ ಆಪೋಶನ ತೆಗೆದುಕೊಳ್ಳಲು ರಣರಂಗಕ್ಕೆ ಇಳಿದಿದ್ದ ಸಮಯ. ಅಮೇರಿಕದಲ್ಲಿಯೂ ಹಿಟ್ಲರ್‌ನ ಪ್ರಭಾವ ಅಷ್ಟೊ ಇಷ್ಟೊ ಇಣುಕಲು ಪ್ರಾರಂಭವಾಗಿತ್ತು. ಯಾಕೆಂದರೆ, ಅಮೇರಿಕದಲ್ಲಿನ ಯೂರೋಪಿಯನ್ ವಲಸೆಗಾರರಲ್ಲಿ ಅಷ್ಟೊತ್ತಿಗೆ ಜರ್ಮನ್ ಮೂಲದವರೆ ಅಧಿಕವಾಗಿದ್ದರು. ಹಾಗಾಗಿ, ಅಮೇರಿಕದಲ್ಲಿನ ನಾಟ್ಜಿ ಪ್ರಭಾವವನ್ನು ಕಂಡುಹಿಡಿಯಲು ಮತ್ತು ಹಣಿಯಲು 1938 ರಲ್ಲಿ ಅಮೇರಿಕ ಅಥವ ಅಮೇರಿಕ ಪ್ರತಿಪಾದಿಸುವ ಮೌಲ್ಯಗಳನ್ನು ವಿರೋಧಿಸುವಂತಹ ವಿದ್ರೋಹಕಾರಿ ಚಟುವಟಿಕೆಗಳನ್ನು ಪತ್ತೆ ಮಾಡುವ ಸಂಸದೀಯ ಸಮಿತಿಯೊಂದರ (House Committee on Un-American Activities) ರಚನೆಯಾಯಿತು. ಆ ಸಮಿತಿ ಪ್ರಾರಂಭದಲ್ಲಿ ಅಷ್ಟೇನೂ ಸಾಧಿಸಲಿಲ್ಲ.
ಎರಡನೆ ವಿಶ್ವಯುದ್ಧ ಮುಗಿದ ಮೇಲೆ ಅಮೇರಿಕಕ್ಕೆ ವಿರುದ್ಧವಾಗಿ ಕಮ್ಯುನಿಸ್ಟ್ ರಷ್ಯ ಬಲವಾಯಿತು. ಅಮೇರಿಕದಲ್ಲಿ ಮೊದಲಿನಿಂದಲೂ ಪ್ರಜಾಪ್ರಭುತ್ವದ ಬಗ್ಗೆ ಸಕಾರಣವಾದ ಹೆಮ್ಮೆ ಹಾಗೂ ಯಾವುದೇ ತರಹದ ಸರ್ವಾಧಿಕಾರದ ಬಗ್ಗೆ, ವ್ಯಕ್ತಿ ಸ್ವಾತಂತ್ರ್ಯಕ್ಕೆ ಕಟ್ಟುಪಾಡು ಹಾಕುವ ವ್ಯವಸ್ಥೆಯ ಬಗ್ಗೆ ಹೀನಾಯ. ಕಮ್ಯುನಿಸಮ್‌ನಲ್ಲಿ ಪ್ರಜಾಪ್ರಭುತ್ವಕ್ಕೆ, ವ್ಯಕ್ತಿ ಸ್ವಾತಂತ್ರ್ಯಕ್ಕೆ ಆಸ್ಪದವೆ ಇಲ್ಲ. ಹಾಗಾಗಿ, ನಾಟ್ಜಿಗಳ ಮೇಲಿನ ಭಯ ಮತ್ತು ದ್ವೇಷ ರಷ್ಯ ಮತ್ತು ಅದರ ಕಮ್ಯುನಿಸಮ್‌ನ ಮೇಲೆ ಬಿತ್ತು. ಮೇಲಿನ ಸಂಸದೀಯ ಸಮಿತಿ ಆಗ ಅಮೇರಿಕದಲ್ಲಿ ಕಮ್ಯುನಿಸಮ್ ಪರ ಕೆಲಸ ಮಾಡುವವರ ಅಥವ ಸಹಾನುಭೂತಿ ತೋರಿಸುವವರ ವಿರುದ್ಧ ತನಿಖೆ ಮಾಡಲಾರಂಭಿಸಿತು.
ಪ್ರಪಂಚದ ಯಾವುದೆ ದೇಶದಲ್ಲಿನ ಸಿನೆಮಾ ಮಾಧ್ಯಮಕ್ಕಿಂತ ಅಮೇರಿಕದ ಹಾಲಿವುಡ್ ಸಿನೆಮಾಗಳು ಬಹಳ ಬಲಶಾಲಿ, ಪ್ರಭಾವಶಾಲಿ. ಇದಕ್ಕೆ ಕಾರಣ ಹಾಲಿವುಡ್ ಕನಸುಗಳನ್ನು ಮಾರುವ ಕಾರ್ಖಾನೆಯಾಗಿರುವುದಕ್ಕಲ್ಲ. ಬದಲಿಗೆ, ಅತ್ಯುತ್ತಮವಾದ, ಜನರ ಜೀವನವನ್ನು, ನಡತೆಯನ್ನು ಪ್ರತಿಬಿಂಬಿಸುವ ನೈಜ ಚಲನಚಿತ್ರಗಳಿಗಾಗಿ; ಆಶಾವಾದವನ್ನು, ಜೀವನಪ್ರೀತಿಯನ್ನು, ಸಹಿಷ್ಣುತೆಯನ್ನು ಹರಡುವಂತಹ ಚಿತ್ರಗಳಿಗಾಗಿ; ಸತ್ಯವನ್ನು ಕೆಲವೊಮ್ಮೆ ನೇರವಾಗಿ, ಕೆಲವೊಮ್ಮೆ ಕಲಾವಂತಿಕೆಯಿಂದ ಬಿಂಬಿಸುವುದಕ್ಕಾಗಿ. ನಮ್ಮಲ್ಲಿ ಈಗ ಜಾತಿವಾದಿಗಳಿಂದ, ಕೋಮುವಾದಿಗಳಿಂದ ಬುದ್ಧಿಜೀವಿಗಳೆಂದು ಗೇಲಿಗೊಳಗಾಗುವ ಎಲ್ಲಾ ತರಹದ ಉದಾರವಾದಿ ಚಿಂತಕರ, ವ್ಯವಸ್ಥೆಯ ಹುಳುಕಗಳ ಬಗ್ಗೆ ಮಾತನಾಡುವ ಬಂಡುಕೋರ ಜನ ಹಾಲಿವುಡ್ಡಿನಲ್ಲಿ ಮೊದಲಿನಿಂದಲೂ ಇದ್ದರು. ಸಂಸದೀಯ ಸಮಿತಿ 1947 ರಲ್ಲಿ ಹಾಲಿವುಡ್ಡಿನ ಇಂತಹವರನ್ನು ಅಮೇರಿಕನ್ ವಿರೋಧಿ ಹೆಸರಿನಲ್ಲಿ ವಿಚಾರಣೆ ಮಾಡಲು ಪ್ರಾರಂಭಿಸಿತು.
ಕೆಲವರು ವಿಚಾರಣಾ ಸಮಿತಿಯ ಜೊತೆ ಮಾತನಾಡಿದರು. ಕೆಲವರು ನಿರಾಕರಿಸಿದರು. ನಿರಾಕರಿಸಿದ ಹತ್ತು ಜನರಿಗೆ ಸಮಿತಿ ಜೈಲು ಶಿಕ್ಷೆ ವಿಧಿಸಿತು. “ಹಾಲಿವುಡ್ ಟೆನ್” ಎಂದು ಕರೆಸಿಕೊಂಡ ಆ ಹತ್ತು ಜನರನ್ನು ಅವರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದ ಸ್ಟುಡಿಯೋಗಳು ಕೆಲಸದಿಂದ ಕಿತ್ತು ಹಾಕಿದವು. ಮುಂದಿನ ದಿನಗಳಲ್ಲಿ ತಮ್ಮ ದೇಶಭಕ್ತಿಯನ್ನು ಸಾಬೀತು ಮಾಡಿಕೊಳ್ಳಲು ಕಮ್ಯುನಿಸಮ್ ಪರ ಎಂದುಕೊಂಡ ನೂರಾರು ಜನರನ್ನು ಸ್ಟುಡಿಯೋಗಳು ಕೆಲಸದಿಂದ ತೆಗೆದುಹಾಕಿದವು. ಸಿನೆಮಾ ರಂಗದಲ್ಲಿ ತೊಡಗಿಸಿಕೊಂಡಿದ್ದ ಅವರೆಲ್ಲ ಕೆಲಸವಿಲ್ಲದೆ ಬೀದಿ ಪಾಲಾಗಿ, ಅನೇಕ ರೀತಿಯ ಮಾನಸಿಕ, ಆರ್ಥಿಕ ಹಿಂಸೆ ಅನುಭವಿಸಿದ್ದು, ಅವರ ಜೊತೆ ಯಾರೂ ಗುರುತಿಸಿಕೊಳ್ಳದಂತೆ, ಮಾತನಾಡಲೂ ಆಗದಂತೆ ಆದದ್ದು ಇತಿಹಾಸ. ಹಾಲಿವುಡ್ಡಿನಲ್ಲಿ ಆಗ ಭಯ ಎಷ್ಟಿತ್ತೆಂದರೆ ಕಪ್ಪು ಪಟ್ಟಿಗೆ ಸೇರಿದ ಜನರ ಸ್ನೇಹಿತರು ರಾತ್ರೋರಾತ್ರಿ ಅಪರಿಚಿತರಾಗಿಬಿಟ್ಟರು. ಮೆಕಾರ್ಥಿಸಮ್ ಕಾಲ ಎಂದೆ ಕುಖ್ಯಾತಿ ಪಡೆದ ಆ ಸಮಯದಲ್ಲಿ ಕಮ್ಯುನಿಸಮ್ ಪರ ಸಹಾನುಭೂತಿಯಿದ್ದ ಚಾರ್ಲಿ ಚಾಪ್ಲಿನ್‌ನಂತಹ ಮೇರು ನಟನಿಗೂ ಕೆಲಸ ಕೊಡುವವರಿಲ್ಲದೆ ಆತ ಅಮೇರಿಕದಿಂದ ಇಂಗ್ಲೆಂಡ್‌ಗೆ ಮರಳಬೇಕಾಯಿತು. ಬ್ಲ್ಯಾಕ್ ಲಿಸ್ಟ್ ಆದವರ ಪರ ಮತ್ತು ವಿರೋಧವಾಗಿ ಹಾಲಿವುಡ್ ಮುಂದೆ ಹತ್ತಾರು ವರ್ಷಗಳ ಕಾಲ ಇಭ್ಭಾಗವಾಗಿಯೆ ಇತ್ತು.
ಆದರೆ ಈ ಕಲಾವಿದರ, ಸಾಹಿತಿಗಳ, ಚಿಂತಕರ ಗುಣವೆ ಒಂದು ತರಹ. ಭಾರತದಲ್ಲಿ 1975 ರ ತುರ್ತುಪರಿಸ್ಥಿತಿಯ ಸಮಯದಲ್ಲಿ ರಾಜಕಾರಣಿಗಳು ಹಾಗೂ ಕೆಲವು ಸಾಹಿತಿಗಳು ಬಹಿರಂಗವಾಗಿ ವಿರೋಧಿಸಿ ಜೈಲು ಪಾಲಾಗಿದ್ದರೆ, ಇನ್ನು ಕೆಲವು ಸಾಹಿತಿಗಳು, ಪತ್ರಕರ್ತರು ಗೊತ್ತೂ ಗೊತ್ತಿಲ್ಲದಂತೆ ಸೂಕ್ಷ್ಮವಾಗಿ ಎಮರ್ಜೆನ್ಸಿಯ ವಿಚಾರ ಎತ್ತುತ್ತಿದ್ದನ್ನು, ಜನರನ್ನು ಚಿಂತನೆಗೆ ಹಚ್ಚುತ್ತಿದ್ದದ್ದನ್ನು ನಾವು ನೋಡಿದ್ದೇವೆ. ಹಾಲಿವುಡ್ಡಿನಲ್ಲಿಯೂ ಮೆಕಾರ್ಥಿಸಮ್ ವಿರುದ್ದ ಇಂತಹುದೆ ಸದ್ದಿಲದ, ಕಲಾವಂತಿಕೆಯ ವಿರೋಧ ಆರಂಭವಾಯಿತು. 1952 ರಲ್ಲಿ ಅಂತಹ ಸಮುದ್ರಮಂಥನದಿಂದ ಉದಯಿಸಿದ್ದು “ಹೈ ನೂನ್” ಎಂಬ 85 ನಿಮಿಷಗಳ ಅಮೃತಧಾರೆ; ಜನರ ಕಪ್ಪು ಬಿಳುಪು ನಡತೆಯನ್ನು ಎತ್ತಿ ತೋರಿಸುವ ಕಪ್ಪು ಬಿಳುಪು ಚಿತ್ರ. ಇದನ್ನು ಬರೆದು, ನಿರ್ಮಿಸಿದವನು ಸಂಸದೀಯ ಸಮಿತಿಯಿಂದ ಸ್ವತಃ ವಿಚಾರಣೆಗೊಳಗಾಗಿದ್ದ ಕಾರ್ಲ್ ಫ಼ೋರ್‌ಮನ್ ಎನ್ನುವವನು. ಆ ಚಿತ್ರ ಹಾಲಿವುಡ್ಡಿನ ಆಗಿನ ಸ್ವಾರ್ಥ ಬುದ್ಧಿಯನ್ನು ಒಂದು ರೀತಿಯಲ್ಲಿ ಪ್ರತಿಬಿಂಬಿಸಿದ್ದರಿಂದ ಹಾಗೂ ಎಲ್ಲಾ ಕಾಲದಲ್ಲೂ ಎಲ್ಲಾ ಸ್ಥಳದಲ್ಲೂ ಒಮ್ಮೊಮ್ಮೆ ಜನರು ಅತೀವ ಸ್ವಾರ್ಥಪರತೆಯಿಂದ ಕೃತಘ್ನರಾಗಿಬಿಡುವ, ತಮ್ಮ ಜವಾಬ್ದಾರಿಗೆ ಜಾಣಕುರುಡಾಗಿಬಿಡುವ ಸಾರ್ವಕಾಲಿಕ ಸತ್ಯದ ಕತೆಯಿದ್ದುದ್ದರಿಂದ ಅದು ಬಿಡುಗಡೆಯಾದ 55 ವರ್ಷಗಳಾದರೂ ಇನ್ನೂ ಪ್ರಸ್ತುತವಾಗಿ, ಹಾಲಿವುಡ್ಡಿನ ಅತ್ಯುತ್ತಮ ಚಿತ್ರಗಳ ಸ್ಥಾನದಲ್ಲಿ ಜಾಗವನ್ನು ಪಡೆದುಕೊಂಡಿದೆ.
ಆಗ ಸಮಯ ಬೆಳಿಗ್ಗೆ 10:35. ಆ ಸಣ್ಣ ಪಟ್ಟಣದ ಪೋಲಿಸ್ ಮುಖ್ಯಸ್ಥನಾದ ವಿಲ್ ಕೇನ್ ಎಂಬುವವನ ಮದುವೆ ನಡೆಯುತ್ತಿದೆ. ಊರಿನ ಜನರ ಸಮ್ಮುಖದಲ್ಲಿ ಮದುವೆಯಾಗುವ ಕೇನ್, ತಾನು ಪೋಲಿಸ್ ಕೆಲಸವನ್ನು ಬಿಡುತ್ತಿದ್ದೇನೆಯೆಂತಲೂ, ಅಂದೇ ತನ್ನ ಕೆಲಸದ ಕೊನೆ ದಿನವೆಂತಲೂ ಘೋಷಿಸುತ್ತಾನೆ. ಅರಾಜಕವಾಗಿದ್ದ ಊರಿನಲ್ಲಿ ಕಾನೂನು ಮತ್ತು ಶಾಂತಿ ನೆಲೆಸಲು ಕೇನ್ ಕಾರಣನಾಗಿದ್ದಿದ್ದರಿಂದ, ಆತನನ್ನು ಗೌರವಿಸುತ್ತಿದ್ದ ಜನರೆಲ್ಲರೂ ಆತನ ಮುಂದಿನ ದಾಂಪತ್ಯ ಜೀವನ ಸುಮಧುರವಾಗಿರಲಿ ಎಂದು ಹಾರೈಸುತ್ತಾರೆ. ಆ ಸಮಯದಲ್ಲಿ ಒಂದು ಟೆಲಿಗ್ರಾಮ್ ಬರುತ್ತದೆ. ವಿಲ್ ಕೇನ್ ಈ ಹಿಂದೆ ಬಂಧಿಸಿದ್ದ, ವಿಚಾರಣೆಯ ಸಮಯದಲ್ಲಿ ಮರಣದಂಡನೆಯ ಶಿಕ್ಷೆಗೆ ಒಳಗಾಗಿದ್ದ ಖೈದಿಯೊಬ್ಬನಿಗೆ ಕ್ಷಮಾದಾನವಾಗಿದೆ ಎಂತಲೂ, ಬೇರೊಂದು ಊರಿನ ಜೈಲಿನಲ್ಲಿದ್ದ ಅವನು ಮಧ್ಯಾಹ್ನ 12 ಘಂಟೆಯ ರೈಲಿನಲ್ಲಿ ಈ ಊರಿಗೆ ಬರುತ್ತಿದ್ದಾನೆಂತಲೂ ಅದರಲ್ಲಿರುತ್ತದೆ. ಆ ಅಪರಾಧಿ ಹಿಂದೆ ಊರಿನ ಜನರಿಗೆ ದುಸ್ವಪ್ನವಾಗಿ ಕಾಡಿದ್ದ ರೌಡಿ. ಮದುವೆಗೆ ನೆರೆದಿದ್ದ ಜನರಿಗೆ ಅಷ್ಟರಲ್ಲಿ ಆ ರೌಡಿಯ ಸಹಚರರು ಆತನಿಗಾಗಿ ರೈಲ್ವೆ ಸ್ಟೇಷನ್‌ನಲ್ಲಿ ಕಾಯುತ್ತಿದ್ದಾರೆ ಎಂತಲೂ, ಅವನು ಇಳಿದ ತಕ್ಷಣ ವಿಲ್ ಕೇನ್‌ನನ್ನು ಕೊಂದು ಸೇಡು ತೀರಿಸಿಕೊಳ್ಳಲಿದ್ದಾರೆಂತಲೂ ತಿಳಿಯುತ್ತದೆ. ಕೇನ್ ಊರಿನಲ್ಲಿಯೆ ಉಳಿದರೆ ಗನ್ ಫೈಟ್ ಖಡಾಖಂಡಿತವೆಂದು ಎಲ್ಲರಿಗೂ ಅರಿವಾಗುತ್ತದೆ
ತಕ್ಷಣ ಊರಿನ ಜನರೆಲ್ಲರೂ ಕೇನ್ ಈ ಕೂಡಲೆ ಊರು ಬಿಟ್ಟು ಹೋಗಿ ಮುಂದಾಗುವ ಅಪಾಯದಿಂದ ತಪ್ಪಿಸಿಕೊಳ್ಳಬೇಕೆಂದು ಸಲಹೆ ನೀಡುತ್ತಾರೆ. ಆಗ ತಾನೆ ಅವನನ್ನು ಮದುವೆಯಾದ ಆತನ ಹೆಂಡತಿಯೂ ಅದನ್ನೆ ಹೇಳುತ್ತಾಳೆ. ಅವನು ಬರದಿದ್ದರೆ ಮಧ್ಯಾಹ್ನದ ಅದೇ ರೈಲಿನಲ್ಲಿ ತಾನು ಅವನನ್ನು ಬಿಟ್ಟು ಹೋಗಲಿರುವುದಾಗಿ ಹೇಳುತ್ತಾಳೆ. ಆದರೆ ಕೇನ್‌ನ ಮನಸ್ಸಾಕ್ಷಿ ಅದಕ್ಕೆ ಒಪ್ಪುವುದಿಲ್ಲ. ನಾಲ್ಕು ಜನರ ಆ ರೌಡಿ ಪಡೆಯನ್ನು ಎದುರಿಸುವುದಾಗಿ ನಿರ್ಧರಿಸುತ್ತಾನೆ.
ಸಮಯ ಬಂದಾಗ ಸಹಾಯ ಪಡೆದ ಜನ ಹೇಗೆ ಕೃತಘ್ನರಾಗುತ್ತಾರೆ ಹಾಗೂ ತನ್ನನ್ನು ಸಾಯಿಸಲೆಂದೆ ಬಂದವರನ್ನು ಕೇನ್ ಹೇಗೆ ಎದುರಿಸುತ್ತಾನೆ ಎನ್ನುವುದೆ ಮುಂದಿನ ಕತೆ. ರೌಡಿಗಳನ್ನು ಎದುರಿಸಲು ತನಗೆ ಸಹಾಯ ಮಾಡಬೇಕೆಂದು ಕೇನ್ ಗನ್ನು ಹಿಡಿಯುವ ಯೋಗ್ಯತೆಯಿರುವ ಊರಿನ ಪ್ರತಿಯೊಬ್ಬರನ್ನೂ ಕೇಳಿಕೊಳ್ಳುತ್ತಾನೆ. ಪ್ರಾಣಭಯದಿಂದ ಯಾರೂ ಆತನ ಸಹಾಯಕ್ಕೆ ಮುಂದಾಗುವುದಿಲ್ಲ. ಆತನ ಸಹಾಯಕ ಪೋಲಿಸ್ ಮುಖ್ಯಸ್ಥನೂ ತನ್ನ ಕೈಲಾಗದೆಂದು ಕೈಯೆತ್ತಿ ಬಿಡುತ್ತಾನೆ. ಅವನಿಂದಲೆ ರಕ್ಷಣೆ ಪಡೆದ ಯಾವೊಬ್ಬ ನಾಗರಿಕನೂ ಅವನಿಗಾಗಿ ಗನ್ನು ಹಿಡಿಯಲು ಮುಂದೆ ಬರುವುದಿಲ್ಲ. ಹೆಂಡತಿಯೂ ರೈಲಿಗೆ ಹೋಗಲು ಸಿದ್ದತೆ ಮಾಡಿಕೊಳ್ಳಲು ಹೋಗಿಬಿಡುತ್ತಾಳೆ. ಒಬ್ಬನೆ ಒಬ್ಬ ಗಂಡಸಿನ ಆಯುಧದ ನೆರವಾಗಲಿ, ನೈತಿಕ ಬೆಂಬಲವಾಗಲಿ ಇಲ್ಲದ ಕೇನ್ ಏಕಾಂಗಿಯಾಗಿ ಬಿಡುತ್ತಾನೆ. ಕೊನೆಗೂ ಮಧ್ಯಾಹ್ನ ಹನ್ನೆರಡು ಗಂಟೆ ಹೊಡೆಯುತ್ತದೆ. ಟ್ರೈನ್ ಬರುತ್ತದೆ. ರೌಡಿ ಇಳಿಯುತ್ತಾನೆ. ಇತರ ಮೂವರೊಡನೆ ಊರಿನೊಳಕ್ಕೆ ನಡೆದು ಬರುತ್ತಾನೆ. ತನ್ನನ್ನು ಕೊಲ್ಲಲೆಂದು ಬಂದ ಆ ನಾಲ್ವರನ್ನೂ ಸಮಯ ಸಂದರ್ಭ ಸಾಧಿಸಿ ಕೇನ್ ಏಕಾಂಗಿಯಾಗಿ ಸಾಯಿಸುತ್ತಾನೆ. ನಂತರ, ಇಡೀ ಊರಿನ ಕೃತಘ್ನ ಜನರತ್ತ ಹೀನಾಯವಾಗಿ ನೋಡಿ, ಪೋಲಿಸ್ ಕೆಲಸದ ಗುರುತಾಗಿ ಸಿಕ್ಕಿಸಿಕೊಂಡಿದ್ದ ನಕ್ಷತ್ರವನ್ನು ಮಣ್ಣಿಗೆಸೆದು, ತನ್ನ ಹೆಂಡತಿಯೊಡನೆ ಊರು ಬಿಟ್ಟು ಹೋಗುತ್ತಾನೆ.
ಸುಮಾರು ಒಂದೂ ಮುಕ್ಕಾಲು ಘಂಟೆಯ ಕತೆ 1 ಘಂಟೆ 25 ನಿಮಿಷಗಳ ಕಾಲ ರಿಯಲ್ ಟೈಮ್‌ನಲ್ಲಿ ನಡೆಯುತ್ತದೆ. ಗನ್ ಫ಼ೈಟ್ ಇರುವುದು ಸಹ ಕೊನೆಯ ಹತ್ತು ನಿಮಿಷಗಳು ಮಾತ್ರ. ಅದ್ಭುತವಾದ ಈ ಚಿತ್ರಕ್ಕೆ ನಾಲ್ಕು ಆಸ್ಕರ್ ಪ್ರಶಸ್ತಿಗಳೂ ದೊರೆತಿವೆ. ಕೇನ್‌ನ ಪಾತ್ರದಲ್ಲಿ ಹಾಲಿವುಡ್ಡಿನ ಪ್ರಖ್ಯಾತ ನಟ ಗ್ಯಾರಿ ಕೂಪರ್ ನಟಿಸಿದ್ದಾನೆ ಎನ್ನುವುದಕ್ಕಿಂತ ಜೀವಿಸಿಬಿಟ್ಟಿದ್ದಾನೆ.
ಇಲ್ಲೊಂದು ವಿಶಿಷ್ಟವಾದ ವಿಷಯವಿದೆ: ಕೂಪರ್‌ನ ಸಹಜ ನಟನೆಗೆ ಆಸ್ಕರ್ ಪ್ರಶಸ್ತಿ ದೊರಕಿತು. ಆದರೆ ಕಾರಣಾಂತರಗಳಿಂದ ಅದನ್ನು ಸ್ವೀಕರಿಸಲು ಆತನಿಗೆ ಸ್ವತಃ ಹೋಗಲಾಗಲಿಲ್ಲ. ಆತನ ಪರವಾಗಿ ಅದನ್ನು ಸ್ವೀಕರಿಸಿದ್ದು ಆತನ ಗೆಳೆಯನಾದ ಮತ್ತೊಬ್ಬ ಹಾಲಿವುಡ್ ಲೆಜೆಂಡ್ ಜಾನ್ ವೇಯ್ನ್. ಕಮ್ಯುನಿಸಮ್‌ನ ಬದ್ಧ ವಿರೋಧಿಯಾದ ಜಾನ್ ವೇಯ್ನ್ ಈ ಚಿತ್ರವನ್ನು ಮೆಚ್ಚಿಕೊಳ್ಳಲಿಲ್ಲ. ಇದೊಂದು ಅಪ್ಪಟ Un-American ಚಿತ್ರ ಎಂದು ಹೇಳಿದ. ಹೇಳಿ ಆತ ಸುಮ್ಮನೆ ಕೂಡಲಿಲ್ಲ. ಹೈ ನೂನ್‌ಗೆ ಉತ್ತರವಾಗಿ ಏಳು ವರ್ಷಗಳ ನಂತರ ತಾನೆ ಇನ್ನೊಂದು ಅಮೋಘವಾದ ಚಿತ್ರದಲ್ಲಿ ನಟಿಸಿಬಿಟ್ಟ. ಆ ಚಿತ್ರದ ಹೆಸರು ರಿಯೊ ಬ್ರಾವೊ. ಅದರಲ್ಲಿ ಪೋಲಿಸ್ ಮುಖ್ಯಸ್ಥ ತನ್ನ ಸಹೋದ್ಯೋಗಿಗಳ ಮತ್ತು ಇತರರ ನೆರವಿನಿಂದ ದುಷ್ಟರನ್ನು ಸದೆ ಬಡೆಯುತ್ತಾನೆ.
ಈಗ ಹೈ ನೂನ್ ಚಿತ್ರವನ್ನು ನೋಡಿದರೆ ನಮಗೆ ಮೇಲ್ನೋಟಕ್ಕೆ ಆಗಿನ ಕಾಲದ ಸೂಕ್ಷಗಳೇನೂ ಗೊತ್ತಾಗುವುದಿಲ್ಲ. ಸ್ವಾರ್ಥಿಗಳಾಗಿ ಬಿಟ್ಟ ಜನ ನ್ಯಾಯಯುತವಾದ ಕೆಲಸಕ್ಕಾಗಿ ಹೇಗೆ ಮುಂದೆ ಬರುವುದಿಲ್ಲ ಎನ್ನುವುದಷ್ಟೆ ಗೊತ್ತಾಗಬಹುದು. ಆದರೆ, ಕತೆ ಬರೆದ ಫ಼ೋರ್‌ಮನ್‌ನ ಪ್ರಕಾರ ಆ ಚಿತ್ರ ಆಗಿನ ಬುದ್ಧಿಜೀವಿಗಳ ನಿಷ್ಕ್ರಿಯತೆ ಮತ್ತು ಹಾಲಿವುಡ್ಡಿನ ಜನ ಹೇಗೆ ತಮ್ಮವರ ಬೆಂಬಲಕ್ಕೆ ನಿಲ್ಲದೆ ಮೂಕರಾಗಿಬಿಟ್ಟದ್ದರ ಸಾಂಕೇತಿಕ ನಿರೂಪಣೆ. ಆ ಇತಿಹಾಸದ ಸಂದರ್ಭದಲ್ಲಿ ಹೈ ನೂನ್ ಅನ್ನು ನೋಡಿದಾಗ ಅದು ಅನೇಕ ಒಳನೋಟಗಳನ್ನು ಕೊಡುತ್ತದೆ. ಚಿಂತನೆಗೆ ಹಚ್ಚುತ್ತದೆ. ಸಮಾಜಕ್ಕೆ ವಿಮುಖವಾಗಿ ಹಿಂದೆ ನಾವೂ ಸ್ವಾರ್ಥಿಗಳಾಗಿದ್ದರೆ ಅದನ್ನು ನೆನಪಿಸುತ್ತದೆ. ಮುಂದೆ ಎಂದಾದರೂ ಕೃತಘ್ನರಾಗುವ ಪರಿಸ್ಥಿತಿ ಬಂದರೆ ತಕ್ಷಣ ಏರು ಹೊತ್ತಿನಲ್ಲಿ ಏಕಾಂಗಿಯಾದವನ ನೆನಪಾಗುತ್ತದೆ; ಅವನನ್ನು ಏಕಾಂಗಿ ಮಾಡದ ತೀರ್ಮಾನ ಮೂಡುತ್ತದೆ.