ಅಲ್ಲಿ ಪ್ರತಿಭಾ ಶೋಧ, ಇಲ್ಲಿ ಪ್ರತಿಭಾ ಸಮಾಧಿ???
Posted Under: Uncategorized
(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಏಪ್ರಿಲ್ 6, 2007 ರ ಸಂಚಿಕೆಯಲ್ಲಿನ ಲೇಖನ)
“ನೀವು ಏನು ಮಾಡಬೇಕು ಎಂದುಕೊಂಡಿದ್ದೀರೊ ಅದು ಅಸಾಧ್ಯ ಎಂದು ನಿಮಗನ್ನಿಸಿದರೂ, ಅದನ್ನು ಮಾಡಲು ಮುಂದಾಗಿ. ಯಾಕೆಂದರೆ, ನೀವು ಏನೇನು ಸಾಧಿಸಲು ಸಾಧ್ಯ ಎಂದು ಎಷ್ಟೋ ಸಲ ಗೊತ್ತೇ ಇರುವುದಿಲ್ಲ.”
ಎರಡು ಮೂರು ವಾರದ ಹಿಂದೆ ಹೀಗೆ ಹೇಳಿದ್ದು ಯಾರೊ ವಯಸ್ಸಾದ ದೊಡ್ಡ ಮನುಷ್ಯರಾಗಲಿ, ಪರ್ಸನಾಲಿಟಿ ಡೆವಲಪ್‌ಮೆಂಟ್ ಗುರುವಾಗಲಿ, ಅಥವ ಆಧ್ಯಾತ್ಮದ ಹುಸಿ ವೇಷಗಳಲ್ಲಿರುವ ದೊಡ್ಡಬುದ್ಧಿಯವರಾಗಲಿ ಅಲ್ಲ! ಆಕೆಯ ಹೆಸರು ಮೇರಿ ಮಾಸ್ಟರ್‌ಮನ್. ಆಕೆಯ ವಯಸ್ಸು ಇನ್ನೂ 17. ಈ ಲಂಗದಾವಣಿ ವಯಸ್ಸಿನ ಹೆಣ್ಣುಮಗಳು ಕಳೆದ ವರ್ಷ ಅಮೇರಿಕದ ಖಗೋಳಶಾಸ್ತ್ರ ಸೊಸೈಟಿಯ ವಾರ್ಷಿಕ ಸಮ್ಮೇಳನದಲ್ಲಿ, ಭಾರತೀಯ ವಿಜ್ಞಾನಿ ಕುಲಕ್ಕೆ ಹೆಮ್ಮೆ ಉಂಟುಮಾಡುವ ‘ರಾಮನ್ ಎಫ಼ೆಕ್ಟ್’ ಮೇಲೆ ಪ್ರೆಸೆಂಟೇಷನ್ ಕೊಟ್ಟವಳು! ಹಾಗೆಯೆ, 2006 ರ “ರಾಷ್ಟ್ರೀಯ ಕಿರಿಯ ಖಗೋಳಶಾಸ್ತ್ರಜ್ಞ” ಪ್ರಶಸ್ತಿಯನ್ನೂ ಪಡೆದಾಕೆ. ಈಗ, ತೀರಾ ಇತ್ತೀಚೆಗೆ, ಇದೇ ಮಾರ್ಚ್‌ನಲ್ಲಿ, ಇಂಟೆಲ್‌ನ 2007 ರ ಪ್ರತಿಷ್ಠಿತ ವಿಜ್ಞಾನ ಪ್ರತಿಭಾ ಶೋಧದಲ್ಲಿ ಮೊದಲ ಸ್ಥಾನ ಪಡೆದಿದ್ದಾಳೆ.
ಸ್ಪೆಕ್ಟ್ರೊಗ್ರ್ಯಾಫ಼್ ಎನ್ನುವುದು ವರ್ಣಪಟಲ ದರ್ಶಕದಲ್ಲಿ (spectroscope) ಕಾಣಿಸುವ ವಿದ್ಯುದಯಸ್ಕಾಂತ ತರಂಗಗಳ ಛಾಯಾಚಿತ್ರ ತೆಗೆಯುವ ವೈಜ್ಞಾನಿಕ ಉಪಕರಣ. ಅಪರಾಧ ತನಿಖೆ, ವೈದ್ಯಕೀಯ, ಚಿತ್ರಕಲಾ ವಿಶ್ಲೇಷಣೆ, ಹೀಗೆ ಅನೇಕ ಪ್ರಾಕಾರಗಳಲ್ಲಿ ಸ್ಪೆಕ್ಟ್ರೊಗ್ರ್ಯಾಫ಼್ ಅನ್ನು ಉಪಯೋಗಿಸಲಾಗುತ್ತದೆ. ವಾಣಿಜ್ಯ ಬಳಕೆಗಳಿಗೆಗೆ ಉಪಯೋಗಿಸುವ ಒಂದು ಉತ್ತಮ ಉಪಕರಣಕ್ಕೆ ಸುಮಾರು 10 ಲಕ್ಷದಿಂದ ಹಿಡಿದು 45 ಲಕ್ಷ ರೂಪಾಯಿಯ ತನಕ ಬೆಲೆಯಿದೆ. ಆದರೆ, ಅಂತಹುದೇ ಉಪಕರಣವನ್ನು ಮೇರಿ ತಯಾರಿಸಿದ್ದು ಮಾತ್ರ ಕೇವಲ 13 ಸಾವಿರ ರೂಪಾಯಿ ಆಜುಬಾಜಿನಲ್ಲಿ!
ತಾನು ತಯಾರಿಸಿದ ಸ್ಪೆಕ್ಟ್ರೋಗ್ರ್ಯಾಫ಼್‌ಗೆ ಬೇಕಾದ ಮೆಕಾನಿಕಲ್ ಬಿಡಿ ಭಾಗಗಳನ್ನು ಸ್ವತಃ ಮೇರಿಯೆ ತಯಾರಿಸಿಕೊಂಡಿದ್ದು! ಹಾಗೆಯೆ ಅದರಲ್ಲಿ ಆಪ್ಟಿಕ್ಸ್ ಭಾಗಗಳನ್ನು ಸೂಕ್ತವಾಗಿ ಕೂರಿಸಿದ್ದು ಸಹ ಆಕೆಯೆ. ಮಾಮೂಲಿ ಕ್ಯಾಮೆರಾ ಒಂದರ ಲೆನ್ಸ್, ಮೈಕ್ರೊಸ್ಕೋಪ್, ಮತ್ತು ಬೆಳಕಿಗಾಗಿ ಲೇಸರ್ ಉಪಯೋಗಿಸಿ ಪರಮಾಣುವಿನ ಫೋಟಾನ್‌ಗಳನ್ನು ಬೇರ್ಪಡಿಸಿ, ಅವುಗಳ ತರಂಗಾಂತರಗಳನ್ನು ಮಾಪನ ಮಾಡುವಲ್ಲಿ ಯಶಸ್ವಿಯಾದಳು. ಈಗಾಗಲೆ ಪ್ರಕಟವಾಗಿರುವ ಕೆಲವೊಂದು ದಿನಬಳಕೆಯ ವಸ್ತುಗಳ ತರಂಗಾಂತರ ಮಾಪನಗಳ ಜೊತೆ ತನ್ನ ಉಪಕರಣದಿಂದ ಕಂಡುಹಿಡಿದ ಮೌಲ್ಯಗಳನ್ನು ಮೇರಿ ಪರೀಕ್ಷಿಸಿದಾಗ ಅವು ಸರಿಯಾಗಿಯೇ ಇದ್ದವು. ಒಂದೇ ವ್ಯತ್ಯಾಸ ಏನೆಂದರೆ, ವಿಜ್ಞಾನಿಗಳು ಈ ಮಾಪನಗಳನ್ನು ಮೇರಿ ತಯಾರಿಸಿದ ಉಪಕರಣಕ್ಕಿಂತ ನೂರಿನ್ನೂರು ಪಟ್ಟು ಹೆಚ್ಚಿನ ಬೆಲೆಯ ಉಪಕರಣದಲ್ಲಿ ಕಂಡುಹಿಡಿದಿದ್ದರು!
“ಸೈನ್ಸ್ ಸರ್ವಿಸ್” ಎಂಬ ಅಮೇರಿಕದ ಲಾಭರಹಿತ ಸಂಸ್ಥೆ 1942 ರಲ್ಲಿ ಪ್ರಾರಂಭಿಸಿದ ವಿಜ್ಞಾನ ಪ್ರತಿಭಾ ಶೋಧ, 1998 ರಲ್ಲಿ ಇಂಟೆಲ್ ಕಂಪನಿ ಪ್ರಾಯೋಜಕತ್ವ ವಹಿಸಿಕೊಂಡ ಮೇಲೆ ಇಂಟೆಲ್ ವಿಜ್ಞಾನ ಪ್ರತಿಭಾ ಶೋಧ ಎಂದಾಯಿತು. ಇದನ್ನು ಅನಧಿಕೃತವಾಗಿ ಜೂನಿಯರ್ ನೋಬೆಲ್ ಪ್ರಶಸ್ತಿ ಎಂದೂ ಕರೆಯುತ್ತಾರೆ. ಪ್ರತಿ ವರ್ಷ ಈ ಸ್ಪರ್ಧೆಗೆ ಸುಮಾರು 1500 ಕ್ಕೂ ಹೆಚ್ಚು ಹೈಸ್ಕೂಲ್ ವಿದ್ಯಾರ್ಥಿಗಳು ತಮ್ಮ ಸಂಶೋಧನಾ ಪೇಪರ್‌ಗಳು ಕಳುಹಿಸುತ್ತಾರೆ. ಅದರಲ್ಲಿ ಅತ್ಯುತ್ತಮ 40 ಜನರನ್ನು ಜನವರಿ ತಿಂಗಳಿನಲ್ಲಿ ಫೈನಲ್‌ಗೆ ಆರಿಸಲಾಗುತ್ತದೆ. ಮಾರ್ಚ್‌ನಲ್ಲಿ ಈ ನಲವತ್ತೂ ಜನರನ್ನು ಅಮೇರಿಕದ ರಾಜಧಾನಿಗೆ ಕರೆಸಿಕೊಂಡು ಇಂಟರ್‌ವ್ಯೂ ಮಾಡಿ, ಮೊದಲ ಹತ್ತು ಸ್ಥಾನಗಳಿಗೆ ಆಯ್ಕೆ ಮಾಡುತ್ತಾರೆ. ಮೊದಲ ಸ್ಥಾನ ಪಡೆದವರಿಗೆ 1 ಲಕ್ಷ ಡಾಲರ್‌ಗಳ ಕಾಲೇಜು ವಿದ್ಯಾರ್ಥಿವೇತನವಾದರೆ ಉಳಿದ ಒಂಬತ್ತು ವಿದ್ಯಾರ್ಥಿಗಳಿಗೆ 75000 ದಿಂದ 20000 ಡಾಲರ್ ತನಕ ವಿದ್ಯಾರ್ಥಿವೇತನ ಪ್ರಶಸ್ತಿಗಳಿರುತ್ತವೆ.
ಈ ಸ್ಪರ್ಧೆಯಲ್ಲಿ ಅಮೇರಿಕದಲ್ಲಿನ ಭಾರತೀಯ ಮೂಲದವರೂ ಇಲ್ಲದೆ ಇಲ್ಲ. 2006 ರಲ್ಲಿ 40 ಜನ ಫೈನಲಿಸ್ಟ್‌ಗಳಲ್ಲಿ ಮೂವರು ವಿದ್ಯಾರ್ಥಿಗಳು ಭಾರತೀಯ ಮೂಲದವರಾಗಿದ್ದರೆ, ಈ ವರ್ಷ 4 ವಿದ್ಯಾರ್ಥಿಗಳಿದ್ದರು!
ಆದರೆ, ಇದೇ ಸಮಯದಲ್ಲಿ ಭಾರತದಲ್ಲಿಯೂ ಇಂತಹ ವಿಜ್ಞಾನ ಪ್ರತಿಭಾ ಶೋಧಗಳು, ಸ್ಪರ್ಧೆಗಳು ಇವೆಯೆ ಎನ್ನುವುದು ಸಂದೇಹ. ಇದ್ದರೂ ಅವುಗಳ ಗುಣಮಟ್ಟ ಮತ್ತು ಅವಕ್ಕೆ ಸಿಗುವ ಪ್ರಚಾರ ಸಂದೇಹಾಸ್ಪದ. ಯಾಕೆಂದರೆ, ಅಮೇರಿಕದ ಪ್ರತಿಭಾ ಸ್ಪರ್ಧೆಯಲ್ಲಿ ವಿಜೇತರಾದವರ ಬಗ್ಗೆ ಇಲ್ಲಿನ ರಾಷ್ಟ್ರೀಯ ಟಿವಿ, ರಾಷ್ಟ್ರೀಯ ಪತ್ರಿಕೆಗಳೆಲ್ಲ ಸುದ್ದಿ ಬಂದರೆ, ನಮ್ಮಲ್ಲಿ ಇಂತಹ ಸ್ಪರ್ಧೆಯಲ್ಲಿ ಗೆದ್ದವರು ತಾವೆ ತಮ್ಮ ಸ್ನೇಹಿತರಿಗೆ ಮುಜುಗರದಲ್ಲಿ ಹೇಳಿಕೊಳ್ಳಬೇಕೇನೊ!!? ಅದೂ ಅಲ್ಲದೆ, ಗಣಿತ ಅಥವ ವಿಜ್ಞಾನದಲ್ಲಿ ಆಸಕ್ತಿಯಿರುವ ಭಾರತದಲ್ಲಿನ ಪ್ರತಿ ಯೋಗ್ಯ ವಿದ್ಯಾರ್ಥಿಯ ತಂದೆತಾಯಿಯರ ಪರಮ ಗುರಿ, ತಮ್ಮ ಮಗುವನ್ನು ಡಾಕ್ಟರ್ ಇಲ್ಲವೆ ಇಂಜಿನಿಯರ್ ಮಾಡುವುದು!
ಇದರಿಂದ ಏನಾಗುತ್ತಿದೆ ಅಂದರೆ, ಭೌತಶಾಸ್ತ್ರದಲ್ಲಿ ನೊಬೆಲ್ ಪಡೆದ ಸಿ.ವಿ. ರಾಮನ್‌ರ ಸಂಶೋಧನೆಯ ಮೇಲೆ ಅಮೇರಿಕದ ಹೈಸ್ಕೂಲ್ ವಿದ್ಯಾರ್ಥಿಗಳು ಮರುಸಂಶೋಧನೆ ಮಾಡುತ್ತಿದ್ದರೆ, ನಮ್ಮಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ರ್‍ಯಾಂಕ್ ಬರುವ ವಿದ್ಯಾರ್ಥಿಗಳೆಲ್ಲ ಉದ್ಯೋಗ ಖಾತರಿಯ ಇಂಜಿನಿಯರಿಂಗ್ ಸೇರುತ್ತಿದ್ದಾರೆ. ಕಳೆದ ಮೂರ್ನಾಲ್ಕು ದಶಕಗಳಲ್ಲಿ ಹೀಗೆ ಇಂಜಿನಿಯರಿಂಗ್ ಸೇರಿಕೊಂಡ ರ್‍ಯಾಂಕ್ ವಿಜೇತರಲ್ಲಿ ಕೆಲವರು ಅದೃಷ್ಟದಿಂದ, ಕೆಲವರು ಪರಿಶ್ರಮದಿಂದ, ಮತ್ತೆ ಕೆಲವರು ಚಾಣಾಕ್ಷತನದಿಂದ ದುಡ್ಡು ಮಾಡಿದ್ದು ಬಿಟ್ಟರೆ, ಬಹುತೇಕ ಜನ ಈಗಲೂ ಅಲ್ಲಿಗಲ್ಲಿಗೆ ಸರಿಹೋಗುವ ಉದ್ಯೋಗದಲ್ಲಿ ಕಾಲ ಹಾಕುತ್ತಿದ್ದಾರೆ. ಸಂಶೋಧನೆಗೆ ಇಳಿದು ನಿಜಕ್ಕೂ ಹೆಸರು ಮಾಡಿದ ಭಾರತೀಯರು ಬೆರಳೆಣಿಕೆಯಷ್ಟು. ಇದೇ ಸಮಯದಲ್ಲಿ, ಇಂಟೆಲ್ ವಿಜ್ಞಾನ ಪ್ರತಿಭಾ ಶೋಧದಲ್ಲಿ ಪಾಲ್ಗೊಂಡವರಲ್ಲಿ ಆರು ವಿದ್ಯಾರ್ಥಿಗಳು ಮುಂದಕ್ಕೆ ಸಂಶೋಧನೆ ಮುಂದುವರೆಸಿ ನೋಬೆಲ್ ಪಡೆದರೆ, ಹತ್ತು ಜನ ಪ್ರತಿಷ್ಠಿತ ಮೆಕಾರ್ಥರ್ ಫೆಲೋಷಿಪ್ ಪಡೆದಿದ್ದಾರೆ. ಜೊತೆಗೆ 30 ಜನ ಅಮೇರಿಕದ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಗೆ ಚುನಾಯಿತರಾಗಿದ್ದಾರೆ!
ಎಸ್ಸೆಸ್ಸೆಲ್ಸಿಯಲ್ಲಿ, ಪಿಯುಸಿಯಲ್ಲಿ ರ್‍ಯಾಂಕ್ ಬರಬೇಕೆಂದರೆ ನಿಜಕ್ಕೂ ಕಷ್ಟ ಪಡಬೇಕು. ಬರುವುದು ನಿಜವಾಗಲೂ ಹೆಮ್ಮೆಯ ವಿಷಯ. ಆದರೆ, ಕೇವಲ ಇಂಜಿನಿಯರಿಂಗ್ ಇಲ್ಲವೆ ಮೆಡಿಕಲ್ ಸೀಟು ಗಿಟ್ಟಿಸಿಕೊಳ್ಳಬೇಕೆಂಬ ಒಂದೇ ಉದ್ದೇಶದಿಂದ ವಿಜ್ಞಾನದ ಮೇಲೆ ಆಸಕ್ತಿ ಕರಗಿ ಹೋಗಿ ರ್‍ಯಾಂಕ್ ಗಳಿಸುವವರು ಕೇವಲ ಹೈಟೆಕ್ ಕೂಲಿಗಳಾಗುತ್ತಾರೆ. ವಿಜ್ಞಾನಿಗಳಾಗುವ ಯೋಗ್ಯತೆಯುಳ್ಳ ಕೆಲವರು ಹೀಗೆ ಅಯೋಗ್ಯರಾಗುತ್ತಿದ್ದಾರೆ. ರಾಷ್ಟ್ರದ ಬೌದ್ಧಿಕ ಅಥವ ವೈಜ್ಞಾನಿಕ ಸಂಪತ್ತಿಗೆ ಇದರಿಂದ ನಷ್ಟ. ಅದು ಅವರಿಗಾಗಲಿ, ನಾಡಿಗಾಗಲಿ ಹೆಮ್ಮೆಯ ವಿಚಾರವೇನಲ್ಲ.
ಇನ್ನು ವಿದೇಶಗಳಲ್ಲಿ ಇಂಟೆಲ್‌ನಂತಹ ಸಂಸ್ಥೆಗಳು ಅವರವರ ನಾಡಿನ ಬೌದ್ಧಿಕ ಸಂಪತ್ತನ್ನು ಹೆಚ್ಚಿಸಲು ಹೀಗೆ ತೊಡಗಿರುವಾಗ ನಮ್ಮಲ್ಲಿನ ಹೆಮ್ಮೆಯ ಕಂಪನಿಗಳಿಗೆ ಚೆನ್ನಾಗಿ ಕೋಡ್ ಕುಟ್ಟುವ ಇಂಜಿನಿಯರ್‌ಗಳು ಬೇಕೆ ಹೊರತು ಸ್ವತಃ ತಾವೆ ಸ್ಕಾಲರ್‌ಶಿಪ್ ಕೊಟ್ಟು ವಿಜ್ಞಾನ ಮತ್ತು ಸಂಶೋಧನೆಯತ್ತ ಒಂದಷ್ಟು ಬುದ್ಧಿವಂತ ಮನಸ್ಸುಗಳನ್ನು ತಿರುಗಿಸಿ, ಅವರನ್ನು ಹುರಿದುಂಬಿಸುವ ಉಸಾಬರಿ ಯಾಕೆ ತಾನೆ ಬೇಕು? ಅವರಿಗೆ ಬೇಕಾಗಿರುವ ಇಂಜಿನಿಯರ್‌ಗಳನ್ನು ಸರ್ಕಾರ ಮತ್ತು ಸಮಾಜ ಸ್ವತಃ ಉತ್ಪಾದಿಸಿ ಕೊಡುತ್ತಿರುವಾಗ ಲಾಭವನ್ನೆಲ್ಲ ಮಹಲು ಕಟ್ಟಲು ಉಪಯೋಗಿಸದೆ ವೈಜ್ಞಾನಿಕ ಮನಸ್ಸತ್ವ ಕಟ್ಟಲು ಉಪಯೋಗಿಸುವುದು ಒಳ್ಳೆಯ ಇನ್‌ವೆಸ್ಟ್‌ಮೆಂಟ್ ಅಲ್ಲ, ಅಲ್ಲವೆ?