ಆದರ್ಶವಾದಿಗಳೊಡನೆ ಒಂದು ಬೆಳಗ್ಗೆ…

This post was written by admin on April 1, 2007
Posted Under: Uncategorized

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಏಪ್ರಿಲ್ 13, 2007 ರ ಸಂಚಿಕೆಯಲ್ಲಿನ ಲೇಖನ)

ಈ ಸಲ ಶ್ರೀರಾಮನವಮಿ ಮಂಗಳವಾರವಿತ್ತು. ನಾನು ಅಮೇರಿಕದಿಂದ ಬಂದಿಳಿದಿದ್ದು ಅದರ ಹಿಂದಿನ ಭಾನುವಾರದ ರಾತ್ರಿ. ಸೋಮವಾರ ಬೆಳಗ್ಗೆ ಏಳಕ್ಕೆಲ್ಲ ಪತ್ರಿಕೆಯ ಕಚೇರಿಗೆ ಬಂದಾಗ ಗೊತ್ತಾಗಿದ್ದು, ನಮ್ಮ ಗೌರವ ಸಂಪಾದಕರಾದ ರೇಷ್ಮೆಯವರಿಗೆ ಅದರ ಹಿಂದಿನ ದಿನ ಮಾತೃವಿಯೋಗವಾಯಿತೆಂಬ ಸುದ್ದಿ. ಗದಗ್‌ನಲ್ಲಿದ್ದ ಅವರೊಡನೆ ಫೊನಿನಲ್ಲಿ ಮಾತನಾಡಿದೆ. ಅವರ ಸೂಚನೆ-ಆದೇಶದಂತೆ ನಮ್ಮ ಸಂಪಾದಕೀಯ ತಂಡ ಆ ವಾರದ ಸಂಚಿಕೆಯನ್ನು ರೂಪಿಸಿತು. ಮಾರನೆಯ ದಿನ ಬೆಳಗ್ಗೆ ಆರಕ್ಕೆಲ್ಲ ಪತ್ರಿಕೆಯ ಸಂಪಾದಕೀಯ ಬಳಗದೊಡನೆ, ರೇಷ್ಮೆಯವರ ಅನುಪಸ್ಥಿತಿಯಲ್ಲಿ ನಮ್ಮ ಪ್ರಯಾಣ ಆರಂಭವಾಯಿತು.

ನಾವು ಮೊದಲು ಹೊರಟಿದ್ದು ಮಂಡ್ಯ-ಮೈಸೂರು ಕಡೆಗೆ. ಮೊದಲ ನಿಲ್ದಾಣ, ರಾಮನಗರದಿಂದ 20 ಕಿಲೋಮೀಟರ್ ದೂರದ ಕುಗ್ರಾಮವೊಂದರಲ್ಲಿ. ನೆಂಟರೊಬ್ಬರ ಮನೆಗೆ ವೈಯಕ್ತಿಕ, ಸೌಜನ್ಯದ ಭೇಟಿಗೆ. ಚಿಟ್ಟನಹಳ್ಳಿ ಎನ್ನುವ ಹೆಸರಿನ ಆ ಊರು ಇರುವುದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ
ಮಾಗಡಿ ತಾಲ್ಲೂಕಿಲಿ . ಈಗೊಂದೆರಡು ತಿಂಗಳಿನಿಂದ ಆ ಊರಿನಲ್ಲಿ ಕಂಪ್ಯೂಟರ್ ಇಂಜಿನಿಯರಿಂಗ್‌ನಲ್ಲಿ ಮಾಸ್ಟರ್ಸ್ ಪದವಿ ಪಡೆದಿರುವ ದಂಪತಿ ವಾಸ ಮಾಡುತ್ತಿದ್ದಾರೆ. ಅವರು ನನ್ನ ಹೆಂಡತಿಯ ಅಕ್ಕ ಮತ್ತು ಆಕೆಯ ಗಂಡ. ನಮ್ಮ ಆನೇಕಲ್ ತಾಲ್ಲೂಕಿನ, ನಮ್ಮ ಪಕ್ಕದೂರಿನವನೆ ಆದ ನನ್ನ ಷಡ್ಡಕ ಈಗ ಇಲ್ಲಿಗೆ ವಾಸ ಬದಲಿಸಿದ್ದಾನೆ. ಆತ ಪ್ರಸಿದ್ಧ ವಿಪ್ರೊ ಕಂಪನಿಯಲ್ಲಿ ಲೀಡ್ ಆರ್ಕಿಟೆಕ್ಟ್. ಮಹಾನ್ ಆದರ್ಶವಾದಿ. ನೈಸರ್ಗಿಕ ಕೃಷಿಯ ಪರಮ ಆರಾಧಕನಾದ ಈತ ಬೆಂಗಳೂರಿನಿಂದ 80 ಕಿ.ಮೀ. ದೂರದ ಈ ಹಳ್ಳಿಯಲ್ಲಿ ನಾಲ್ಕೈದು ಎಕರೆ ಜಮೀನು ತೆಗೆದುಕೊಂಡಿದ್ದಾನೆ. ಪ್ರತಿದಿನ ಬೆಳ್ಳಂಬೆಳಗ್ಗೆ ಈ ಹಳ್ಳಿಯಿಂದ ಬೆಂಗಳೂರಿನ ದಕ್ಷಿಣದ ಎಲೆಕ್ಟ್ರಾನಿಕ್ಸ್ ಸಿಟಿಗೆ 70 ಕಿ.ಮೀ.ಗೂ ಹೆಚ್ಚು ದೂರ ಪ್ರಯಾಣ ಮಾಡುತ್ತಾನೆ!

2006 ರ ಜೂನ್‌ನಲ್ಲಿ ನಾನು “ವಿಕ್ರಾಂತ ಕರ್ನಾಟಕ” ದಂತಹ ಒಂದು ಪತ್ರಿಕೆಯ ಅವಶ್ಯಕತೆ ಕನ್ನಡಕ್ಕಿದೆ ಎಂದು ಬೆಂಗಳೂರಿಗೆ ಬಂದು, ಇದರ ಸಿದ್ಧತೆಗಳಿಗಾಗಿ ಸುಮಾರು ಎರಡು ತಿಂಗಳಿದ್ದೆ. ಆಗ ಒಂದು ಸಲವೂ ನಾನು ನನ್ನ ಷಡ್ಡಕ ಪರಸ್ಪರ ಭೇಟಿಯಾಗಲು ಆಗಿರಲಿಲ್ಲ. ಅದಕ್ಕೆ ಮುಖ್ಯ ಕಾರಣ ಆತ ಯಾವಾಗಲೂ ಬ್ಯುಸಿ ಇರುತ್ತಿದ್ದುದು. ಕರೆ ಮಾಡಿದಾಗಲೆಲ್ಲ, ಈ ನಮ್ಮ ಭ್ರಷ್ಟ ವ್ಯವಸ್ಥೆಯಲ್ಲಿ ಲಂಚ ಕೊಡದೆ ಜಮೀನು ನೊಂದಾವಣೆ ಮಾಡಿಸಿಕೊಳ್ಳಲು ಮಾಗಡಿಯ ತಾಲ್ಲೂಕು ಕಚೇರಿಯ ಕಂಬಗಳನ್ನು ಸುತ್ತುತ್ತಿದ್ದ. ಈಗಲೂ ಸಹ ಆತನ ಜಮೀನಿನ ರಿಜಿಸ್ಟ್ರೇಷನ್ ಆಗಿಲ್ಲ. ನಾನು ಈ ಹಿಂದೆ ಬರೆದಿದ್ದ ಮಾಹಿತಿ ಹಕ್ಕು ಕಾಯ್ದೆಯ ಪ್ರಕಾರ ಅರ್ಜಿ ಗುಜರಾಯಿಸಿ ಕುಳಿತಿದ್ದಾನೆ. ಅಂತಹ ಪರಮ ಆದರ್ಶವಾದಿ.

ದೇಶದ ಅತಿದೊಡ್ಡ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಉದ್ಯೋಗಕ್ಕಿರುವ ಈತನಿಗೆ ಮನೆಯಲ್ಲಿ ಇಂಟರ್‌ನೆಟ್ ಇರಲೇಬೇಕಿತ್ತು; ಇಲ್ಲ.ನಮ್ಮ ಟೆಲಿಕಾಮ್ ಇಲಾಖೆಯವರು ಕೇಳಿದ ಲಂಚವೆಂಬ ಅಮೇಧ್ಯ ಕೊಡಲು ಈತ ಒಪ್ಪಲಿಲ್ಲ.”ನಾನು ಅರ್ಜಿ ಸಲ್ಲಿಸಿ, ಹಣ ತುಂಬಿಸಿದ್ದೇನೆ. ಲಂಚ ಎಂದು ಒಂದು ಪೈಸೆಯನ್ನೂ ಕೊಡಲು ನಾನು ತಯ್ಯಾರಿಲ್ಲ, ನೀವು ಕೊಟ್ಟಾಗ ಕೊಡ್ರಿ.” ಎಂದು ಕುಳಿತಿದ್ದ. ಅವರು ಒಂದು ತಿಂಗಳು ಸತಾಯಿಸಿ,ನಂತರ ಕೊಟ್ಟರಂತೆ. ಆದರೆ ಅವರು ಕೊಟ್ಟ ಕನೆಕ್ಷನ್‌ನಲ್ಲಿ ಕೆಲವು ತಾಂತ್ರಿಕ ಕಾರಣಗಳಿಂದ ಅದೂ ಕೆಲಸ ಮಾಡುತ್ತಿಲ್ಲ!

ಈತನಿಗೆ ತಕ್ಕ ಜೊತೆ ಈತನ ಹೆಂಡತಿ,ಶಿಲ್ಪ. ಖ್ಯಾತ ಪರಿಸರವಾದಿ ಆ.ನ. ಯಲ್ಲಪ್ಪ ರೆಡ್ಡಿಯ ತಮ್ಮನ ಮಗಳು. ಕಂಪ್ಯೂಟರ್ ಇಂಜಿನಿಂಯರಿಂಗ್‌ನಲ್ಲಿ M.E. ಮಾಡಿದ್ದರೂ ಕೆಲಸದ ಬಗ್ಗೆ ತಲೆ ಕೆಡಿಸಿಕೊಳ್ಳದೆ ಇದೇ ಊರಿನ ಸರ್ಕಾರಿ ಕನ್ನಡ ಮೀಡಿಯಮ್‌ನ ಹೈಸ್ಕೂಲ್ ಮಕ್ಕಳಿಗೆ ರಾತ್ರಿ ಪಾಠ ಹೇಳಿಕೊಡುತ್ತ ಉಳಿದುಬಿಟ್ಟಿದ್ದಾಳೆ. ಈಕೆ ಹುಟ್ಟಿದ್ದು, ಬೆಳೆದದ್ದು, ಓದಿದ್ದು ಎಲ್ಲವೂ ಬೆಂಗಳೂರು ನಗರದಲ್ಲಿ! ಕಲಿತದ್ದು ಪೂರ್ತಿ ಇಂಗ್ಲಿಷ್ ಮೀಡಿಯಮ್‌ನಲ್ಲಿ. ಕನ್ನಡವನ್ನು ಕೇವಲ ಒಂದು ವಿಷಯವಾಗಿ ಕಲಿತಷ್ಟೆ ಪರಿಚಯ. ಈಗ ಇಂಗ್ಲಿಷ್-ಕನ್ನಡ ನಿಘಂಟು ಹಿಡಿದುಕೊಂಡು, ಕನ್ನಡ ಮೀಡಿಯಮ್‌ನಲ್ಲಿ ಪ್ರಾಥಮಿಕ ಶಾಲೆ ಓದಿರುವ ಗಂಡನಿಂದ ಕೆಲವೊಂದು ಅನುವಾದ ಮಾಡಿಸಿಕೊಂಡು, ನಮ್ಮ ಹಳ್ಳಿಗಳ ಬಹುಪಾಲು ಮಕ್ಕಳಿಗೆ ತಲೆನೋವಾಗಿರುವ ಇಂಗ್ಲಿಷ್ ಮತ್ತು ಗಣಿತವನ್ನು ರಾತ್ರಿ ಪಾಠ ಹೇಳಿಕೊಡುತ್ತಿದ್ದಾಳೆ!

ನೈಸರ್ಗಿಕ ಕೃಷಿಯ ಆರಾಧಕನಾದ ಶಶಿ ಜಪಾನಿನ ವಿಶ್ವವಿಖ್ಯಾತ ನೈಸರ್ಗಿಕ ಕೃಷಿ ತಜ್ಞ ಪುಕುವೊಕನ ಒಂದು ಹುಲ್ಲುಕಡ್ಡಿಯ ಕ್ರಾಂತಿಯ ಅನೇಕ ಪ್ರತಿಗಳನ್ನು ಅವರಿವರಿಗೆ ಕೊಡಲು ತನ್ನ ಲೈಬ್ರರಿಯಲ್ಲಿ ಇಟ್ಟಿದ್ದಾನೆ. ತನ್ನ ಸಾಫ್ಟ್‌ವೇರ್ ವೃತ್ತಿಗೆ ಸಂಬಂಧಿಸಿದ ತಂತ್ರಜ್ಞಾನದ ಮತ್ತು ಮ್ಯಾನೇಜ್‌ಮೆಂಟ್ ಪುಸ್ತಕಗಳ ಜೊತೆಗೆ, ಚಾರ್ಲ್ಸ್ ಡಾರ್ವಿನ್ನನ “Origin of Species” ನಿಂದ ಹಿಡಿದು, ವೇದಾಂತದವರೆಗೆ ಪುಸ್ತಕಗಳನ್ನಿಟ್ಟಿದ್ದಾನೆ ತನ್ನ ರೀಡಿಂಗ್ ರೂಮಿನಲ್ಲಿ. ಅದರಲ್ಲಿ ಅರ್ಧಕ್ಕರ್ಧ ಕನ್ನಡ ಪುಸ್ತಕಗಳೂ ಇವೆ. ಕುವೆಂಪು, ಎಚ್. ನರಸಿಂಹಯ್ಯ, ಎಸ್.ಎಲ್. ಭೈರಪ್ಪನವರ ಅನೇಕ ಪುಸ್ತಕಗಳಿವೆ. ಇಲ್ಲಿಯವರೆಗೆ ಪ್ರಕಟಗೊಂಡಿರುವ ತೇಜಸ್ವಿಯವರ ಪ್ರತಿಯೊಂದು ಪುಸ್ತಕವೂ ಇದೆ! ನಾಡಿನಿಂದ ಮತ್ತೆ ಕಾಡಿಗೆ ಮರಳಿದ ನಿಸರ್ಗದ ಸಾಹಿತಿ ತೇಜಸ್ವಿಯವರ ಎಲ್ಲಾ ಪುಸ್ತಕಗಳನ್ನು ಈ ನಿಸರ್ಗ ಪ್ರೇಮಿಯ ಮನೆಯಲ್ಲಿ ನೋಡಿ ನನಗೇನೂ ಆಶ್ಚರ್ಯವಾಗಲಿಲ್ಲ. ವಾರಾಂತ್ಯದಲ್ಲಿ ಈ ಹಳ್ಳಿಯ ಮಕ್ಕಳನ್ನು ಕೂರಿಸಿಕೊಂಡು, ಯಾವುದಾದರೂ ಒಂದು ಒಳ್ಳೆಯ ಪುಸ್ತಕವನ್ನು ಆರಿಸಿಕೊಂಡು ಅವರಿಗೆ ಶಶಿ ಬುಕ್‌ರೀಡಿಂಗ್ ಮಾಡುತ್ತಾನಂತೆ!

ಹಳ್ಳಿಗಳಲ್ಲಿನ ಜೀವನ ನಮ್ಮ “Feel Good” ಲೇಖನಗಳನ್ನು ಬರೆಯುವ ಲೇಖಕರು ಹೇಳಿದಷ್ಟು ಸರಳವಲ್ಲ; ಆದರ್ಶ, ಪ್ರೀತಿ, ಪ್ರೇಮಗಳಿಂದಲೇ ತುಂಬಿರುವುದೂ ಅಲ್ಲ. ಅದು ಬಹಳ ಸಂಕೀರ್ಣವಾದದ್ದು. ಶಶಿಯಂತಹ ಪರಮ ಆದರ್ಶವಾದಿಗೆ ಇಲ್ಲಿ ವಾಸ್ತವದ ಹೆಸರಿನಲ್ಲಿ ನಾನಾ ತರಹದ ಕಿರಿಕಿರಿ ಹುಟ್ಟಬಹುದು. ನಾವು ಹೋದಾಗ ಶಶಿ ಮನೆಯಲ್ಲಿ ಇರಲಿಲ್ಲ. ಆತನೂ ನಮ್ಮ ಹಾಗೆಯೆ ಬೆಳಗ್ಗೆ ಆರಕ್ಕೆಲ್ಲ ಮನೆ ಬಿಟ್ಟಿದ್ದ. ಶಿಲ್ಪ ಮನೆಯ ಸುತ್ತಮುತ್ತ ತೋರಿಸುತ್ತ, ಇಲ್ಲಿನ ಕಾಲ್ನಡಿಗೆಯ ದೂರದ ಸಾವನದುರ್ಗದ ಕಾಡುಗಳಲ್ಲಿ ಕರಡಿ ಇವೆಯೆಂದೂ, ಆಗಾಗ ತಮ್ಮ ಮನೆಯ ಬಾಗಿಲಿಗೇ ಬಂದು ಬಿಡುವ ನಾಗರ ಹಾವು, ಕೊಳಕು ಮಂಡಲಗಳ ಬಗ್ಗೆ ತನ್ನ ನಾಲ್ಕು ವರ್ಷದ ಮಗನ ಕೈ ಹಿಡಿದುಕೊಂಡು ಹೇಳಿದಳು. ಹಾಗೆ ಹಾವುಗಳು ಬಂದಾಗ ಸುತ್ತಮುತ್ತಲಿನ ಮನೆಯವರು ಅವನ್ನು ಕೊಲ್ಲಲು ಮುಂದಾಗುತ್ತಾರೆ ಎಂತಲೂ, ಆದರೆ ಶಶಿ ಬೇಡ ಎಂದು ತಡೆಯುತ್ತಾನೆ, ತಮ್ಮಂತೆಯೆ ನಿಸರ್ಗದ ಹಕ್ಕುದಾರರಾದ ಹಾವುಗಳನ್ನು ಕೊಲ್ಲಬಾರದೆಂದು ಹಳ್ಳಿಯವರೊಡನೆ ವಾದಿಸುತ್ತಾನೆ ಎಂದೂ ಹೇಳಿದಳು.

ನನ್ನ ಪಕ್ಕದ ಊರಿನವನೇ ಆದ ಶಶಿ ನನ್ನಂತೆಯೆ ಹಳ್ಳಿ ಗಮಾರ. ಆದರೂ ಪ್ರತಿನಿತ್ಯ ಹಳ್ಳಿಯಲ್ಲಿದ್ದುಕೊಂಡು ನಿಸರ್ಗದೊಡನೆ ಗುದ್ದಾಡುವರಿಗಿಂತ ಭಿನ್ನವಾಗಿ ಯೋಚಿಸುತ್ತಾನೆ. ಹಾವುಗಳನ್ನು ಕೊಲ್ಲಬಾರದೆಂದದ್ದನ್ನು ಕೇಳಿ ನಾನೆಂದೆ, “ಕೊಲ್ಲಬಾರದು, ಓಡಿಸಬಾರದು ಎಂದು ಅಷ್ಟೆಲ್ಲ ರಿಜಿಡ್ ಆದರೆ ಕಷ್ಟ. ಮನೆಯ ಹತ್ತಿರ ಹಾವುಗಳು ಬರದೆ ಇರಲು ನಮ್ಮ ಹಳ್ಳಿಗಳ ಕಡೆ ಬೆಳ್ಳುಳ್ಳಿಯ ಸಿಪ್ಪೆಯನ್ನು ಮನೆಯ ಸುತ್ತ ಎಸೆಯುತ್ತಾರೆ. ನೀನೂ ಹಾಗೇ ಮಾಡಮ್ಮ.” ಎಂದೆ.

ನಾಲ್ಕು ವರ್ಷದ ಇವರ ಮಗ ಇದೇ ಹಳ್ಳಿಯ ಅಂಗನವಾಡಿಯಲ್ಲಿ ಒಂದೆರಡು ದಿನ ಕುಳಿತು, ಅಲ್ಲಿನ ವಾತಾವರಣಕ್ಕೆ ಸರಿಯಾಗಿ ಹೊಂದಿಕೊಳ್ಳಲಾಗದೆ ಭಯದಿಂದ ಓಡಿ ಬಂದು ಬಿಟ್ಟಿದ್ದಾನೆ. ಮತ್ತೆ ಅಂಗನವಾಡಿಗೆ ಹೋಗಲು ತಯ್ಯಾರಿಲ್ಲ. ತಿಂಗಳಿಗೆ ಸರಿಸುಮಾರು ಆರಂಕಿಯ ಸಂಬಳ ಇರುವ ಇವರಿಗೆ ಮಗನನ್ನು ಬೆಂಗಳೂರಿನ ಯಾವುದೋ ಪ್ರತಿಷ್ಠಿತ ಶಾಲೆಗೆ ಸೇರಿಸುವ ಉಮೇದಿಲ್ಲ. ಮಗನಿಗೆ ಮನೆಯಲ್ಲಿಯೆ ಹೋಮ್ ಸ್ಕೂಲಿಂಗ್ ಮಾಡುತ್ತೇವೆ ಎನ್ನುತ್ತಿದ್ದರು!

M.E. ಮಾಡಿದ್ದರೂ ಸಾಫ್ಟ್‌ವೇರ್ ಕೆಲಸಕ್ಕಾಗಲಿ, ಲೆಕ್ಚರಿಂಗ್ ವೃತ್ತಿಗಾಗಲಿ ಹೋಗದ ಆಕೆಯ ಬಗ್ಗೆ ಯೋಚಿಸುತ್ತ, ಆಕೆಯ ವಿದ್ಯಾಭ್ಯಾಸಕ್ಕೆ ಖರ್ಚಾಗಿರುವ ಸಾರ್ವಜನಿಕ ಹಣ ಪೋಲಾಗಲಿಲ್ಲವೆ ಎನ್ನುವ ಸಂದೇಹದ ಮಧ್ಯೆ, ನನ್ನಂತಹ ಹಳ್ಳಿ ಗಮಾರರಿಗೆ ಆಕೆ ಪಾಠ ಹೇಳಿಕೊಡುತ್ತಿರುವುದರ ಬಗ್ಗೆ ಹೆಮ್ಮೆ ಪಡುತ್ತ, ನಗುವುದೊ ಅಳುವುದೊ ಗೊತ್ತಾಗದ ಸಂದಿಗ್ಧತೆಯಲ್ಲಿ ಆಕೆ ನೀಡಿದ ರಾಮನವಮಿಯ ಮೊದಲ ಪಾನಕ ಗುಟುಕರಿಸುತ್ತ, ದಾರಿ ಖರ್ಚಿಗೆಂದು ಆಕೆ ನೀಡಿದ ಸೀಬೆ, ಸಪೋಟ, ಮಾವಿನ ಕಾಯಿ ಮತ್ತು ಮಾಗುತ್ತಿದ್ದ ಹಲಸಿನ ಹಣ್ಣನ್ನು ಗಾಡಿಗೆ ಹಾಕಿಕೊಂಡು, ಹಾಲಿ ಮುಖ್ಯಮಂತ್ರಿಗಳು ಪ್ರತಿನಿಧಿಸುತ್ತಿರುವ ರಾಮನಗರದತ್ತ ನಮ್ಮ ಹುಡುಗರೊಂದಿಗೆ ಹೊರಟೆ…


ಆತ್ಮಶ್ರೀಗಾಗಿ ನಿರಂಕುಶಮತಿಗಳಾದವರು

ನಮ್ಮ ಪತ್ರಿಕೆಯ ಕಚೇರಿಯಲ್ಲಿ ಈ ಲೇಖನದ ಪುಟ ವಿನ್ಯಾಸ ಮಾಡುವುದಕ್ಕೆ ಒಂದೆರಡು ಘಂಟೆ ಮುಂಚೆ ನಾನು ಮತ್ತು ಶಶಿ ಎಲೆಕ್ಟ್ರಾನಿಕ್ಸ್ ಸಿಟಿಯ ಸಾಧಾರಣ ಹೋಟೆಲ್ ಒಂದರಲ್ಲಿ ಬೆಳಗ್ಗೆ ಏಳಕ್ಕೆಲ್ಲ ಇಡ್ಲಿ ತಿನ್ನಲು ಕುಳಿತಿದ್ದೆವು. ಮಾತು ನಾನಾ ದಿಕ್ಕಿನಲ್ಲಿ ಹರಿದಿತ್ತು. ಅದರಲ್ಲಿ ಒಂದನ್ನು ಆತ ಬಹಳ ಗಂಭೀರವಾಗಿ ಹೇಳಿದ: “ಈ ಕೋಮುವಾದಿಗಳು ತಮ್ಮ ಸಂಘಟನೆಗೆ ನನ್ನನ್ನು ಎಳೆದುಕೊಳ್ಳಲು, ನನ್ನಿಂದ ಚಂದಾ ವಸೂಲು ಮಾಡಲು ಬಂದಿದ್ದರು. ನಾನು ಹೇಳಿದೆ: ‘ನೋಡಿ, ನಿಮಗೂ ನನಗೂ ಸೈದ್ಧಾಂತಿಕ ಭಿನ್ನಾಭಿಪ್ರಾಯವಿದೆ. ಹಾಗಾಗಿ ಕೊಡುವುದಿಲ್ಲ.’ ಅದಕ್ಕೂ ಮುಂಚೆ ಅವರೊಡನೆ ಬೆರೆತು ಒಂದೆರಡು ಕಡೆ ಓಡಾಡಿದ್ದೆ. ಈ ಕೋಮುವಾದಿಗಳು ಸಮಾಜದ ಪ್ರತಿ ಸ್ತರದಲ್ಲಿ infiltrate ಮಾಡುತ್ತಿದ್ದಾರೆ. ಕಿಸಾನ್ ಸಂಘ, ವಿದ್ಯಾರ್ಥಿ ಸಂಘ, ಕಾರ್ಮಿಕರ ಸಂಘ; ಇದನ್ನು ಬಹಳ ವ್ಯವಸ್ಥಿತವಾಘಿ ಮಾಡುತ್ತಿದ್ದಾರೆ. ಇದನ್ನು ಹೇಗಾದರೂ ಮಾಡಿ ಈಗಲೇ ಎದುರುಗೊಳ್ಳಬೇಕು. ಕಾರ್ನಾಡರು ಭೈರಪ್ಪನವರ ವಿರುದ್ಧ ವಿಜಯ ಕರ್ನಾಟಕದಲ್ಲಿ ಬರೆದ ಲೇಖನ ಓದಿ ಭೈರಪ್ಪನವರ ಹಲವಾರು ಪುಸ್ತಕಗಳನ್ನು ಓದಿದೆ. ಒಳ್ಳೆಯ ಕತೆಗಾರ ಎನ್ನುವುದನ್ನು ಬಿಟ್ಟರೆ ಕಾರ್ನಾಡರು ಹೇಳಿದ ಎಲ್ಲವೂ ಕಾಣಿಸುತ್ತವೆ. ದೇಶದಲ್ಲಿ ಕೋಮುವಾದ ವಿಷ ಬೆರೆಸುತ್ತಿದೆ.”

ಸುಮಾರು 25 ಸಾಫ್ಟ್‌ವೇರ್ ಇಂಜಿನಿಯರ್‌ಗಳು ಶಶಿಗೆ ನೇರವಾಗಿ ರಿಪೋರ್ಟ್ ಮಾಡಿಕೊಳ್ಳುತ್ತಾರೆ. ಆದರೂ ಈತ ಹಾಕಿಕೊಂಡಿದ್ದು ಮಾತ್ರ ಸಾಧಾರಣ ಹವಾಯಿ ಚಪ್ಪಲಿ.ಆತ್ಮಶ್ರೀಗಾಗಿ ನಿರಂಕುಶಮತಿಗಳದವರ ನಡೆನುಡಿಯಲ್ಲಿ ದ್ವಂದ್ವಗಳು ಬಹಳ ಕಮ್ಮಿ….

ಮಕ್ಕಳ ವಿಯೋಗ ಶೋಕ ನಿರಂತರ

ಈ ಹಾವುಗಳು ಮತ್ತು ಅವನ್ನು ಕೊಲ್ಲುವುದರ ಬಗ್ಗೆ ಶಿಲ್ಪಳೊಂದಿಗೆ ಮಾತನಾಡುತ್ತಿದ್ದಾಗ ನಾನು ಐದಾರು ವರ್ಷದ ಹಿಂದೆ ಅಮೇರಿಕಕ್ಕೆ ಹೋಗುವ ಹಿಂದಿನ ತಿಂಗಳು ನಡೆದ ಘಟನೆ ನೆನಪಾಗುತ್ತಿತ್ತು. ಅಂದು ನನ್ನೂರಿನಿಂದ 20 ಕಿ.ಮೀ. ದೂರದ ತಮಿಳುನಾಡಿಗೆ ಸೇರಿದ ಸೋದರಮಾವನ ಊರಿಗೆ ಹೋಗಿದ್ದೆ. ಹೊಲದಲ್ಲಿ ಮನೆ ಮಾಡಿದ್ದ ಮಾವ. ಆತನ ನಾಲ್ಕು ವರ್ಷದ ಮೊಮ್ಮಗ ಬೆಳಗ್ಗೆ ಎದ್ದು ಮನೆಯ ಮುಂದಿನ ಬಯಲಿನಲ್ಲಿ ಬೆಳಗ್ಗೆ ಏಳರ ಸುಮಾರಿಗೆ ಎಂದಿನಂತೆ ಆಟವಾಡುತ್ತ ಪಾಯಖಾನೆಗೆ ಕುಳಿತಿದ್ದಾನೆ. ಆರಡಿ ಉದ್ದದ ಆ ನಾಗರಹಾವು ತಾನೆ ತಾನಾಗಿ ಇವನ ಬಳಿಗೆ ಬಂದಿತೊ, ಇಲ್ಲ ಈತನೇ ಹೋಗಿ ಅದರ ಪಕ್ಕದಲ್ಲಿ ಕುಳಿತನೊ, ಏನಾಯಿತೊ, ಅದು ಮಗುವನ್ನು ಕಚ್ಚಿ ಬಿಟ್ಟಿತು. ಅವನು ನೋವಿಗೆ ಕಿಟಾರನೆ ಕಿರುಚಿಕೊಂಡ.ಮನೆಯಲ್ಲಿದ್ದವರೆಲ್ಲ ಓಡಿ ಬಂದರು. ಮಗುವಿನ ಅಮ್ಮ ಪುಟ್ಟ ಪುಟ್ಟ ಹೆಜ್ಜೆಯಿಡುತ್ತ ತಾನು ಬರಬಾರದಷ್ಟು ವೇಗದಲ್ಲಿ ಬಂದಳು. ಯಾಕೆಂದರೆ ಆಕೆ ಒಂಬತ್ತು ತಿಂಗಳ ತುಂಬು ಗರ್ಭಿಣಿ. ಅಲ್ಲಿಯೇ ಗದ್ದೆಗೆ ನೀರು ಹಾಯಿಸುತ್ತಿದ್ದ ಮಗುವಿನ ಅಪ್ಪನಿಗೂ ಕರುಳಿನ ಕರೆ ಕೇಳಿ, ಆತ ಓಡಿ ಬಂದ. ಹಾವು ಇನ್ನೂ ಮನೆಯ ಮುಂದೆಯೇ ಇತ್ತು. ಅಪ್ಪನಿಗೆ ಕ್ಷಣಾರ್ಧದಲ್ಲಿ ವಷಯ ಗೊತ್ತಾಯಿತು. ತಕ್ಷಣವೆ ಕೈಗೆ ಬಡಿಗೆ ತೆಗೆದುಕೊಂಡ. ರೋಷತಪ್ತ ಅಪ್ಪನ ಏಟಿಗೆ ಆರಡಿ ಉದ್ದದ ಹಾವು ಹೆಣವಾಗಿ ಬಿತ್ತು. ಕೂಡಲೆ ಅಪ್ಪ ಮಗುವಿನ ಕಾಲಿಗೆ ವಿಷ ಮೇಲಕ್ಕೆ ಏರದಂತೆ ಪಟ್ಟಿಕಟ್ಟಿ, ಮೊಪೆಡ್‌ನಲ್ಲಿ ಮಗನನ್ನು ಕೂರಿಸಿಕೊಂಡು ಉಟ್ಟ ಬಟ್ಟೆಯಲ್ಲಿ ಎರಡು ಕಿ.ಮೀ. ದೂರದ ಆಸ್ಪತ್ರೆಗೆ ಹೊರಟ. ಅಲ್ಲಿ ಯಾರೂ ಇರಲಿಲ್ಲವೋ ಅಥವ ಅವರಲ್ಲಿ ಮದ್ದಿರಲಿಲ್ಲವೋ, ಅಲ್ಲಿಂದ ಹತ್ತು ಕಿ.ಮೀ. ದೂರದ ತಾಲ್ಲೂಕು ಕೇಂದ್ರವಾದ ಹೊಸೂರು ಆಸ್ಪತ್ರೆಗೆ ಹೋಗಲು ತಿಳಿಸಿದ್ದಾರೆ.

ಅಪ್ಪ ಹೊಸೂರಿನತ್ತ ಗಾಡಿ ತಿರುಗಿಸಿದ.ಕ್ಷಣಕ್ಷಣವೂ ಅಮೂಲ್ಯ. ನಿಧಾನಿಸಿದಷ್ಟು ವಿಷ ತಲೆಗೆ ಏರುವ ಭೀತಿ. ಬಹುಶಃ ಹಾವು ಕಡಿದ ಮುಕ್ಕಾಲು ಘಂಟೆಗೆ ಹೊಸೂರು ಆಸ್ಪತ್ರೆಯಲ್ಲಿರಬಹುದು. ಅಲ್ಲಿಗೆ ಬರುವಷ್ಟರಲ್ಲಿ ಮಗುವಿನ ಬಾಯಿಂದ ನೊರೆ ಬರಲು ಆರಂಭವಾಗಿದೆ. ವೈದ್ಯರು ಮಾಡಬಹುದಾದದ್ದನ್ನೆಲ್ಲ ಮಾಡಿದರು. ಮಗು ಅಪ್ಪನ ಮುಂದೆಯೆ ಭುವಿಗೆ ವಿದಾಯ ಹೇಳಿತು. ಅಮ್ಮ ಮನೆಯಲ್ಲಿ ಬೋರಾಡುತ್ತಿದ್ದಾಳೆ. ಇನ್ನೊಂದೆರಡು ವಾರದಲ್ಲಿ ತಂಗಿ ಭುವಿಯ ಮೇಲೆ ಅರಳಬೇಕಿದ್ದಾಗ ಅಣ್ಣ ಸ್ವಾಗತ ಕೋರದೆ ವಿದಾಯ ಹೇಳಿದ್ದ…

ಹೊಲದಿಂದ ಒಂದು ಕಿ.ಮೀ. ದೂರದ ಹಳ್ಳಿಯಲ್ಲಿ ಇನ್ನೊಬ್ಬ ಮಾವನ ಮನೆಯಲ್ಲಿದ್ದ ನನಗೆ ಮಗುವನ್ನು ಹಾವು ಕಚ್ಚಿದ, ಅವನನ್ನು ಹೊಸೂರಿಗೆ ಕರೆದುಕೊಂಡು ಹೋದ ವಿಷಯ ಗೊತ್ತಾಯಿತು. ನಾನು, ಮಗುವಿನ ಚಿಕ್ಕಪ್ಪ ಸಿಕ್ಕ ಗಾಡಿ ಹತ್ತಿಕೊಂಡು ಓಡಿದೆವು. ಆಸ್ಪತ್ರೆಗೆ ಹೋಗುವಷ್ಟರಲ್ಲಿ ಹೊರಗೆ ಕಣ್ಣೀರಿಡುತ್ತ ಕುಳಿತಿದ್ದ ಅಪ್ಪನನ್ನೂ, ಅಷ್ಟರಲ್ಲಿ ಅಲ್ಲಿ ನೆರೆದಿದ್ದ ನೆಂಟರ ಮುಖ ನೋಡಿದ ಮೇಲೆ ನಮಗೆ ಯಾರೂ ಏನೂ ಹೇಳಬೇಕಾಗಿರಲಿಲ್ಲ. ಪೋಸ್ಟ್ ಮಾರ್ಟಮ್ ಆಗದೆ ಶವ ತೆಗೆದುಕೊಂಡು ಹೋಗಲಾಗದು ಎಂದಿದ್ದರು ಆಸ್ಪತ್ರೆಯವರು. ಪೋಸ್ಟ್ ಮಾರ್ಟಮ್ ಮಾಡಬೇಕಾದ ಡಾಕ್ಟರ್ ಇಲ್ಲದೆ ಐದಾರು ಘಂಟೆ ಕಾಯಬೇಕಾಯಿತು. ಒಳಗೆ ಮಗುವಿನ ಪೋಸ್ಟ್ ಮಾರ್ಟಮ್ ಮಾಡುತ್ತಿದ್ದ ರೂಮಿನಲ್ಲಿದ್ದ ನೊಣಗಳ ಹಾರಾಟ ಮತ್ತು ಗುಂಯ್‌ಗುಟ್ಟುವಿಕೆ, ವೈದ್ಯರು ಉಪಯೋಗಿಸುತ್ತಿದ್ದ ಫಿನೈಲ್‌ನಂತಹ ದ್ರಾವಣದ ಘಾಟು ವಾಸನೆ ಸುದೀರ್ಘ ಕಾಲ ನಮ್ಮನ್ನು ಹಿಂಸಿಸಿತು. ಸಹಿ ಹಾಕಿಸಿಕೊಂಡು ಮಗುವಿನ ಶವವನ್ನು ಅಪ್ಪನ ಕೈಗೆ ಇತ್ತಾಗ ಅದರ ತಲೆ, ಮೈಯೆಲ್ಲಾ ಬ್ಯಾಂಡೇಜು, ರಾಸಾಯನಿಕಗಳ ಕಮಟು ವಾಸನೆ. ಅಪ್ಪ ಮಗನ ಹೆಣವನ್ನು ತೊಡೆಯ ಮೇಲೆ ಕೂರಿಸಿಕೊಂಡು ಜೀಪಿನ ಹಿಂದೆ ಕುಳಿತ. ಅವನ ಪಕ್ಕ ನಾನು ಕುಳಿತೆ. ಜೀಪಿನಲ್ಲಿ ಒಟ್ಟು ಆರೇಳು ಜನ ಇದ್ದಿರಬಹುದು. ಆದರೂ, ಹನ್ನೆರಡು ಕಿ.ಮೀ.ಗಳ ಆ ಪ್ರಯಾಣ ಒಂದೂ ಮಾತಿಲ್ಲದೆ ಮುಗಿಯಿತು…

ಮನೆಯ ಬಳಿಗೆ ಬರುವಷ್ಟರಲ್ಲಿ ಮಣ್ಣಿಗೆ ಬರಬೇಕಾದವರೆಲ್ಲ ಬಂದಿದ್ದರು. ಮೈಯೆಲ್ಲಾ ಪೋಸ್ಟ್‌ಮಾರ್ಟಮ್ ಮಾಡಿದ ಬ್ಯಾಂಡೇಜು ಇದ್ದಿದ್ದರಿಂದ ಮಗುವಿಗೆ ಸ್ನಾನ ಸಹ ಮಾಡಿಸುವ ಹಾಗೆ ಇರಲಿಲ್ಲ. ತುಂಬು ಗರ್ಭಿಣಿ ಮಗನನ್ನು ನೋಡಿದಳೋ ಇಲ್ಲವೋ ನನಗೆ ಗೊತ್ತಾಗಲಿಲ್ಲ. ಸೂರ್ಯ ಪಡುವಣದಲ್ಲಿ ಅಸ್ತಮಿಸುತ್ತಿದ್ದಾಗ ಮನೆಯ ಏಕೈಕ ಮೊಮ್ಮಗ ಮಣ್ಣಲ್ಲಿ ಮಣ್ಣಾಗಿ ಹೋದ. ಅಂದು ಆ ತಾಯಿಯನ್ನು ಮಾತನಾಡಿಸುವ ಧೈರ್ಯ ನನ್ನಲ್ಲಿರಲಿಲ್ಲ. ಒಂದೆರಡು ತಿಂಗಳಿಗೆ ಅಮೇರಿಕಕ್ಕೆ ಹೋದೆ. ಮತ್ತೊಮ್ಮೆ ಬಂದಾಗಲೆ ಆಕೆಯನ್ನು ಮಾತನಾಡಿಸಿದ್ದು. ಆಗಲೂ ನನಗೆ ಆಕೆಯ ಬಳಿ ಆ ವಿಷಯ ಮಾತನಾಡಲಾಗಲಿಲ್ಲ. ಈ ಲೇಖನ ಬರೆಯುತ್ತಿರುವುದಕ್ಕೆ ಅರ್ಧ ಘಂಟೆ ಮುಂಚೆ ತನ್ನ ಇನ್ನೊಬ್ಬ ಹೆಣ್ಣುಮಗಳೊಂದಿಗೆ ಆ ತಾಯಿ ನಮ್ಮ ಮನೆಗೆ ಬಂದಿದ್ದಳು. ಈಗ ಆ ವಿಷಯ ಎತ್ತುವುದು ಅಧಿಕ ಪ್ರಸಂಗಿತನ. ನಾನು ಅದರ ಬಗ್ಗೆ ಮಾತನಾಡಲಿಲ್ಲ. ಆಗಲೆ ನನಗೆ ಗೊತ್ತಾಗಿದ್ದು, ಮಕ್ಕಳ ವಿಯೋಗದ ನೋವನ್ನು ಕಾಲವೂ ಸಹ ಸಂಪೂರ್ಣವಾಗಿ ಮರೆಸುವುದಿಲ್ಲ ಎಂದು…

Add a Comment

required, use real name
required, will not be published
optional, your blog address