ದೇವರೆ, ಸ್ನೇಹಿತರಿಂದ ನನ್ನನ್ನು ಕಾಪಾಡು!

This post was written by admin on May 5, 2007
Posted Under: Uncategorized

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಮೇ 18, 2007 ರ ಸಂಚಿಕೆಯಲ್ಲಿನ ಲೇಖನ)

ಜನವರಿ 19 ರ ಸಂಚಿಕೆಯಲ್ಲಿ ನಮ್ಮ ಪತ್ರಿಕೆಯ ಅಂಕಣಗಾರರಾದ ಮಂಗಳೂರಿನ ನರೇಂದ್ರ ಪೈ ಹೀಗೆ ಬರೆದಿದ್ದರು:

“ಕಾಲ, ದೇಶದ ಪ್ರಜ್ಞೆ ಇಲ್ಲ. ಯುಕ್ತಾಯುಕ್ತ ವಿವೇಚನೆಯೂ ಇಲ್ಲ. ಸಾಮಾನ್ಯರ ಭಾವುಕತೆಯನ್ನು ಬಂಡವಾಳ ಮಾಡಿಕೊಂಡು ಬದುಕುವ ಒಂದು ದುಷ್ಟ ವರ್ಗ ತೆಲೆಯೆತ್ತುತ್ತಿದೆ. ಭಾವುಕ ಮಂದಿ ಉಘೇ ಉಘೇ ಎನ್ನುತ್ತಿದೆ. ಇದು ಇವತ್ತಿನ ನಮ್ಮ ಸ್ಥಿತಿ.”


ಕನ್ನಡದ ಪತ್ರಿಕೆಗಳನ್ನು ಮತ್ತು ಬೆಂಗಳೂರಿನಿಂದಲೆ ಪ್ರಕಟವಾಗುವ ಇಂಗ್ಲಿಷ್ ಪತ್ರಿಕೆಗಳನ್ನು ಎದುರಿಗಿಟ್ಟುಕೊಂಡು ಕೂತರೆ ನಮಗೆ ನರೇಂದ್ರರು ಹೇಳುವ ಮಾತು ಇನ್ನೂ ಸ್ಪಷ್ಟವಾಗಿ ಅರ್ಥವಾಗಿ ಹೋಗುತ್ತದೆ. ಇವತ್ತು (ಬಹುಶಃ ಯಾವತ್ತೂ) ಬಹುಪಾಲು ಕನ್ನಡ ಪತ್ರಿಕೆಗಳ ಜೀವಾಳ ವಸ್ತುನಿಷ್ಠ ವರದಿ, ವಿಷಯಮಂಡನೆ ಎನ್ನುವುದಕ್ಕಿಂತ ನಾವು ಅದನ್ನು ಎಷ್ಟು ಚಮತ್ಕಾರಿಕವಾಗಿ, ರೋಚಕವಾಗಿ, ಭಾವನಾತ್ಮಕವಾಗಿ, ಕಾಮ-ಕ್ರೋಧ-ಕ್ರೈಮ್ ರಸಭರಿತವಾಗಿ ಹೇಳುತ್ತೇವೆ ಎನ್ನುವುದರ ಮೇಲೆ ನಿಂತಿದೆ ಎನ್ನಿಸುತ್ತದೆ. ಇದರ ಹೊರತಾಗಿ ಇರುವವರೂ ಇದ್ದಾರೆ. ಆದರೆ ಅವರ ಮಾರುಕಟ್ಟೆ ವಿಜಯ, ಬ್ರ್ಯಾಂಡ್ ನೇಮ್, ಕ್ರೋನಿಯಿಸಮ್, ಉಳಿದಂತಹವರ ತರಹ ಇಲ್ಲ.

ಕನ್ನಡ ಬರಹ ಎಂದರೆ ಭಾವನಾತ್ಮಕ ವಿಷಯಗಳಿಗೆ, ರೋಚಕ, ಟೈಮ್‌ಪಾಸ್ ವಿಷಯಗಳಿಗಷ್ಟೆ ಸೀಮಿತ, ಗಂಭೀರವಾದ ರಾಷ್ಟ್ರೀಯ, ಜಾಗತಿಕ, ಆರ್ಥಿಕ, ವಿಜ್ಞಾನ, ತಂತ್ರಜ್ಜಾನ, ಆಡಳಿತದ ವಿಷಯಗಳಿಗೆ ಇಂಗ್ಲಿಷ್ ಎನ್ನುವಂತಾಗಿದೆ. ಈ ನಿಟ್ಟಿನಲ್ಲಿ ಈಗಲೂ ಬಹುಸಂಖ್ಯಾತರಾಗಿರುವ ಕನ್ನಡ ಪತ್ರಿಕೆಗಳ ಓದುಗರು ಓದುವುದು ಮಾತ್ರ ಭಾವುಕತೆಯನ್ನೆ ಬಂಡವಾಳ ಮಾಡಿಕೊಂಡವರು ಕೊಡುವ ರಸಭರಿತ ಸುದ್ದಿಗಳನ್ನು ಮಾತ್ರ.

ನಮ್ಮ ಪತ್ರಿಕೆಗಳ ವಿಶ್ವಾಸಾರ್ಹತೆಯೆ ದೊಡ್ಡ ಪ್ರಶ್ನೆ ಇಲ್ಲಿ. ಈಗ ತಾನೆ ಒಂದು ತೆಲುಗು ವೆಬ್‌ಸೈಟ್ ಮೇಲೆ ಕಣ್ಣಾಡಿಸುತ್ತಿದ್ದೆ. ತೆಲುಗಿನ ಮೂರ್ನಾಲ್ಕು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ, ಅಲ್ಲಿಯೂ ಪರಿಚಿತೆಯಾಗಿರುವ ಕನ್ನಡದ ನಟಿ ರಕ್ಷಿತಾಳ ಬಗೆಗಿನ ಸುದ್ಧಿ ಅದು. ಅದರಲ್ಲಿ, “ಹಿರೋಯಿನ್ ರಕ್ಷಿತ ನಿರ್ಮಾಪಕಿಯಾಗುತ್ತಿದ್ದಾಳೆ. ’ಪ್ರೀತಿ ಏಕೆ ಭೂಮಿ ಮೇಲಿದೆ’ ಎನ್ನುವ ಹೆಸರಿನಲ್ಲಿ ಆ ಚಿತ್ರ ತಯಾರಾಗುತ್ತಿದೆ. ಇದರಲ್ಲಿ ಆಕೆಯ ಭಾವಿ ಪತಿ ಪ್ರೇಮ್‌ನ ಸಹೋದರ ಅರುಣ್ ನಾಯಕನಾಗಿ ನಟಿಸಲಿದ್ದಾನೆ. ಈ ಚಿತ್ರಕ್ಕೆ ಪ್ರೇಮ್ ನಿರ್ದೇಶನ ವಹಿಸಿಕೊಂಡಿದ್ದಾರೆ.” ಎಂದಿದೆ. ನಿಜವೆ??? ಈ ಅರುಣ್ ಎಂಬ ಪ್ರೇಮ್‌ರ ಸೋದರ ಆ ಚಿತ್ರದ ನಾಯಕನೆ? ನೋಡಿದರೆ ಕನ್ನಡ ಪತ್ರಿಕೆಗಳ ಜಾಹಿರಾತಿನಲ್ಲಿ ಪ್ರೇಮ್‌ರೇ ಮಿಂಚುತ್ತಿದ್ದಾರಲ್ಲ? ನಾನು ಇಂಜಿನಿಯರಿಂಗ್ ಮಾಡುತ್ತಿದ್ದಾಗ ಪತ್ರಿಕೆಯೊಂದರಲ್ಲಿ ಮಾಯಾವತಿ ಮತ್ತು ಕಾಂಶಿರಾಮ್ ಗಂಡಹೆಂಡತಿ ಎಂದು ವರದಿಯಾಗಿತ್ತು. ಅದನ್ನು ನಂಬಿಕೊಂಡು ಸ್ನೇಹಿತರ ಬಳಿ ಅವರಿಬ್ಬರೂ ಗಂಡಹೆಂಡತಿ ಎಂದು ವಾದಿಸಿ, ನಂತರ ಅಲ್ಲವೆಂದು ಗೊತ್ತಾಗಿ ಮುಖಭಂಗವಾಗಿತ್ತು!!!

ನೀವು ಕನ್ನಡದ ಎರಡುಮೂರು ದಿನಪತ್ರಿಕೆಗಳನ್ನು ನೋಡುವಿರಾದರೆ ಒಂದೇ ಸುದ್ದಿ ಆ ಮೂರ್ನಾಲ್ಕು ಪತ್ರಿಕೆಗಳಲ್ಲಿ ಬೇರೆ ಬೇರೆಯಾಗಿಯೇ ಬರುತ್ತಿದೆಯಲ್ಲ ಎಂದು ನಿಮಗೆ ಗೊತ್ತಾಗಿರುತ್ತದೆ. ಇದು ಸುದ್ದಿ ವಿಶ್ಲೇಷಣೆಯ ಮಾತಲ್ಲ. ಮೂಲ ಸುದ್ದಿಯೇ ಬೇರೆಬೇರೆ ರೂಪ ತಾಳಿ ಬಿಟ್ಟಿರುತ್ತದೆ. ಇದು ಹೇಗೆ? ಜನವರಿಯಲ್ಲಿ ಪೇಜಾವರರ ಮೇಲೆ ದಾಖಲಾದ ಕೋರ್ಟ್ ಮೊಕದ್ದಮೆಯ ಬಗ್ಗೆ ಪತ್ರಿಕೆಗಳಲ್ಲಿ ಓದುತ್ತಿದ್ದೆ. ಒಂದು ಪತ್ರಿಕೆ ಅಡಳಿತಾರೂಢ ಮಂತ್ರಿ-ಪೋಲಿಸರ ಪ್ಲಾಂಟೆಡ್ ಸುದ್ದಿಗಳನ್ನು ಮಾತ್ರ ಬಿತ್ತರಿಸುತ್ತಿತ್ತು. ಯಾವುದೆ ಕಾರಣಕ್ಕೂ ಬ್ಯಾಕ್‌ಗ್ರೌಂಡ್ ಚೆಕ್ ಮಾಡುತ್ತಿರಲಿಲ್ಲ. ಕೇಸಿನ ಇಡೀ ಹಿನ್ನೆಲೆ ಗೊತ್ತಿದ್ದ ಇನ್ನೊಂದು ಪತ್ರಿಕೆ ಒಂದು ವರದಿಯಲ್ಲಿ ಅಕ್ಕ ತಮ್ಮನನ್ನು ಗೊತ್ತಿದ್ದೂ ಗೊತ್ತಿದ್ದೂ ಗಂಡ ಹೆಂಡತಿ ಎಂದು ವಿಕೃತವಾಗಿ ವರದಿ ಮಾಡಿತು. ಕನ್ನಡದ ಒಂದೆರಡು ದಿನಪತ್ರಿಕೆಗಳಂತೂ ಯಡಿಯೂರಪ್ಪನವರಿಗೆ ಮರ್ಯಾದೆ ಕಳೆಯುವಂತಹ, ಭಯ ಹುಟ್ಟಿಸುವಂತಹ ಯಾವ ಸುದ್ದಿಯನ್ನೂ ಒಳಗಿನ ಪುಟಗಳಿಗೆ ತಳ್ಳುವುದಿಲ್ಲ. ಆ ಪತ್ರಿಕೆಗಳು ಸತ್ಯವನ್ನು ಹೇಳುತ್ತಿವೆ ಎನ್ನುವುದಕ್ಕಿಂತ ಇಲ್ಲಿನ ಒಳ ಸತ್ಯ ಬೇರೆಯದೇ ಇದೆ. ಬಿಜೆಪಿಯಲ್ಲಿನ ಯಡಿಯೂರಪ್ಪ ವಿರೋಧಿ ಗುಂಪು ಹೇಗಾದರೂ ಮಾಡಿ ಈ ಸರ್ಕಾರವನ್ನು ಬೀಳಿಸುವಂತೆ, ಯಡಿಯೂರಪ್ಪ ಮುಂದಿನ ಮುಖ್ಯಮಂತ್ರಿ ಆಗದಂತೆ ಮಾಡಲು ನಡೆಸುತ್ತಿರುವ ಶತಾಯಗತಾಯ ಪ್ರಯತ್ನ ಅದು; Ongoing, Organized Conspiracy!

ಇದನ್ನು ಆರನೆ ಶತಮಾನದ ಮುಸಲ್ಮಾನ ನಾಯಕ ಇಮಾಮ್ ಅಲಿ ಹೇಳಿದ್ದು ಎನ್ನುತ್ತಾರೆ: “ದೇವರೆ, ನನ್ನನ್ನು ನನ್ನ ಸ್ನೇಹಿತರಿಂದ ಕಾಪಾಡು. ನನ್ನ ಶತ್ರುಗಳಿಂದ ನನ್ನನ್ನು ನಾನು ರಕ್ಷಿಸಿಕೊಳ್ಳಬಲ್ಲೆ.” ಯಡಿಯೂರಪ್ಪ ಮತ್ತು ಗ್ಯಾಂಗ್, ಗೌಡರು ತಮಗೆ ಅಧಿಕಾರ ಬಿಡುತ್ತಾರೊ ಇಲ್ಲವೊ ಎನ್ನುವುದಕ್ಕಿಂತ ತಮ್ಮ ಪಕ್ಷದ ಸ್ನೇಹಿತರೆ ಹೇಗೆ ತಮಗೆ ನೇಣಿನ ಕುಣಿಕೆ ಸಿದ್ದಪಡಿಸಿಕೊಂಡು ಸಮಯ ಕಾಯುತ್ತಿದ್ದಾರೆ ಎನ್ನುವುದನ್ನು ಗಮನಿಸಬೇಕು. ಬಹುಶಃ ಅದನ್ನು ಗಮನಿಸಿಯೇ ಇರಬೇಕು ಅವರೂ ಈ ತಮ್ಮ ಸ್ನೇಹಿತರಿಂದ ರಕ್ಷಣೆ ಕೋರಿ ದೇವಾಲಯಗಳಿಗೆ ಹೋಗಿ ಬರುತ್ತಿರುವುದು ಹಾಗೂ ಮಠ-ಮಂದಿರಗಳಿಗೆಲ್ಲ ಅವರ ಮನೆಯ ತಿಜೋರಿಯಿಂದಲೂ ನೀಡದಷ್ಟು ಉದಾರದಿಂದ ಜನರ ದುಡ್ಡನ್ನು ಕಾಣಿಕೆ ಒಪ್ಪಿಸುತ್ತಿರುವುದು.

ಈಗಿನ ಕಾಲದ ಮನುಷ್ಯನಿಗೆ ಕೇವಲ ತಾನು ಮಾಡಿಕೊಂಡ ಸ್ನೇಹಿತರಷ್ಟೆ ಇರುವುದಿಲ್ಲ. ಆತ ಮೆಚ್ಚುವ ರಾಜಕಾರಣಿ, ಮಠಾಧೀಶ, ಶಿಕ್ಷಕರು, ಅವನ ಜಾತಿಯ ಮುಖಂಡ, ಅವನು ಓದುವ ಪತ್ರಿಕೆ, ಪತ್ರಕರ್ತ, ಲೇಖಕ; ಹೀಗೇ ಅನೇಕರಿರುತ್ತಾರೆ. ಅವರು ಹೇಳಿದ್ದನ್ನು ಎಷ್ಟೋ ಸಲ ವಿವೇಚನೆ ಮಾಡದೆ ಒಪ್ಪಿಕೊಂಡುಬಿಡುತ್ತಾನೆ. ಈ ಇಡೀ ಗುಂಪಿನಲ್ಲಿ ವ್ಯವಸ್ಥಿತವಾಗಿ ಸುಳ್ಳು ಹೇಳಬಲ್ಲವರು ಸರ್ಕಾರದಲ್ಲಿರುವ ರಾಜಕಾರಣಿಗಳು ಹಾಗೂ ಪತ್ರಕರ್ತರು. ಒಬ್ಬ ಸಾಮಾನ್ಯ ನಾಗರಿಕ ದೇವರಲ್ಲಿ ಕೇಳಿಕೊಳ್ಳಬೇಕಿರುವುದು ಇವರ ಸುಳ್ಳುಗಳನ್ನು ನೋಡುವ ಶಕ್ತಿ ನೀಡು ಎಂದು. ನಿಮಗೀಗಾಗಲೆ ಗೊತ್ತಿರುವಂತೆ, ರೌಡಿಗಳು ಸುಪಾರಿ ತೆಗೆದುಕೊಂಡು ಯಾರು ಯಾರನ್ನೊ ಕೊಲ್ಲುವಂತೆ ಗುಜರಾತಿನ ಪೋಲಿಸರು ಸುಪಾರಿ ಪಡೆದು ಒಂದಷ್ಟು ಜನರನ್ನು ಗುಂಡಿಟ್ಟು ಕೊಂದಿದ್ದಾರಂತೆ. ಹಾಗೆ ಕೊಲೆ ಮಾಡಿದವರನ್ನೆಲ್ಲ, ಭಯೋತ್ಪಾದಕರು, ದೇಶದ್ರೋಹಿಗಳು ಎಂದು ಪ್ರಚಾರ ಕೊಟ್ಟು ಮೊದಲು ಬಚಾವಾಗಿದ್ದಾರೆ. ಆದರೆ, ಒಬ್ಬ ಒಳ್ಳೆಯ ಪತ್ರಕರ್ತ ಈ ಸುದ್ದಿಗಳ ಹಿಂದೆ ಬಿದ್ದು ಇದನ್ನೆಲ್ಲ ಬಯಲಿಗೆಳೆದಿದ್ದಾನೆ. ಒಂದಷ್ಟು ಒಳ್ಳೆಯ ಪೋಲಿಸರು ಈ ದೇಶಭಕ್ತ ಪೋಲಿಸರನ್ನೆಲ್ಲ ಹಿಡಿದುಹಾಕಿದ್ದಾರೆ. ವಿಚಾರಣೆ ನಡೆಯುತ್ತಿದೆ.

ಈ ಘಟನೆ ಗುಜರಾತಿನಲ್ಲಿ ಕಂಪನಗಳನ್ನು ಎಬ್ಬಿಸಿದೆ. ಅಲ್ಲಿ ಈ ವರ್ಷವೇ ವಿಧಾನಸಭೆ ಚುನಾವಣೆ ನಡೆಯಲಿದೆ. ಹೀಗಾಗಿ, ಈ ನಕಲಿ ಎನ್‌ಕೌಂಟರ್ ತನಗೆ ಉರುಳಾಗದಂತೆ ನೋಡಿಕೊಳ್ಳುವುದು ನರೇಂದ್ರ ಮೋದಿಗೆ ಅತ್ಯವಶ್ಯಕ. ಈ ವಿಷಯದ ಬಗ್ಗೆ ಮೋದಿಯ ಹತ್ತಿರದ ಸ್ನೇಹಿತರು ಹೇಳಿದ್ದಾರೆ ಎನ್ನಲಾದ ಒಂದು ವರದಿಯನ್ನು ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿತ್ತು. ಅದರ ಸಾರಾಂಶ:

“ಶೇಕ್ ಒಬ್ಬ ಭಯೋತ್ಪಾದಕ; ಅವನನ್ನು ಕೊಲ್ಲಲೇ ಬೇಕಿತ್ತು ಎಂದು ಜನರಿಗೆ ಹೇಳುತ್ತೇವೆ. ಟೆರ್ರರಿಸ್ಟ್ ಅನ್ನು ಕಾಂಗ್ರೆಸ್ ಪಕ್ಷ ಬೆಂಬಲಿಸುತ್ತಿದೆ ಎಂದು ಹೇಳುತ್ತೇವೆ. ಶೇಕ್‌ನ ಪಿ.ಎ. ಆಗಿದ್ದ ಪ್ರಜಾಪತಿಯ ಬಗ್ಗೆ ನಾವು ಏನೂ ಮಾತನಾಡಲೂ ಹೋಗುವುದಿಲ್ಲ. ಯಾಕೆಂದರೆ ಅವನೊಬ್ಬ ಹಿಂದು. ಹಾಗೆಯೆ ಶೇಕ್‌ನ ಹೆಂಡತಿ ಎನ್ನಲಾಗುತ್ತಿರುವ ಕೌಸರ್‌ಬಿ, ನಿಜವಾಗಲೂ ಆತನ ಹೆಂಡತಿ ಹೌದೊ ಅಲ್ಲವೊ ಎನ್ನುವುದು ನಮ್ಮ ಸಂಶಯ. ಆ ಸಂದೇಹವನ್ನೆ ದೊಡ್ಡದು ಮಾಡಿ ಜನರಿಗೆ ಹೇಳುತ್ತೇವೆ.”

ಹೀಗೆ ಅಧಿಕಾರಸ್ಥರ ಮತ್ತು ಕೆಲವು ಪತ್ರಕರ್ತರ ದುಷ್ಟಕೂಟ ವ್ಯವಸ್ಥಿತವಾಗಿ ಸುದ್ದಿಯನ್ನು ಸದಾ ಪ್ಲಾಂಟ್ ಮಾಡುತ್ತಿರುತ್ತಾರೆ. ಈ ನಮ್ಮ ಸ್ನೇಹಿತರಿಂದ ನಮ್ಮನ್ನು ಆ ಭಗವಂತನೇ ಕಾಪಾಡಬೇಕು!

Add a Comment

required, use real name
required, will not be published
optional, your blog address