ಪಿ.ಬಿ.ಎಸ್.: ಅಣ್ಣಾವ್ರಂತೆ ಅಮರ.

This post was written by admin on May 20, 2007
Posted Under: Uncategorized

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಜೂನ್ 1, 2007 ರ ಸಂಚಿಕೆಯಲ್ಲಿನ ಲೇಖನ)


ಒಲವಿನಾ ಪ್ರಿಯಲತೆ, ಅವಳದೇ ಚಿಂತೆಽಽ
ಅವಳ ಮಾತೆ, ಮಧುರ ಗೀತೆ
ಅವಳೆ ಎನ್ನ ದೇವತೆ…

ರೇಡಿಯೋದಲ್ಲಿ ಪಿ.ಬಿ. ಶ್ರೀನಿವಾಸ್‌ರ ಹಾಡು ಬರುತ್ತಿದ್ದರೆ, ಕನ್ನಡದ ಜನತೆ ರಾಜ್‌ಕುಮಾರ್ ಅವರನ್ನು ಕಲ್ಪಿಸಿಕೊಂಡು, ತಮ್ಮ ಇನಿಯಳ ಬಗ್ಗೆ ನವಿರಾದ ಪ್ರೀತಿಯ ಭಾವನೆಗಳನ್ನು, ಆಕೆ ಪಕ್ಕದಲ್ಲಿ ಇರದೆ ಇದ್ದರೆ ಅಗಲಿಕೆಯ ನೋವನ್ನು ಹಾಗೂ ತಮ್ಮ ಜೀವನದಲ್ಲಿ ಆಕೆಯ ಪ್ರಾಮುಖ್ಯತೆಯ ಸತ್ಯ ಸಾಕ್ಷಾತ್ಕಾರವನ್ನು ಮಾಡಿಕೊಳ್ಳುತ್ತಿದ್ದ ಜಮಾನಾ ಒಂದಿತ್ತು. ಹದಿನೈದು ಇಪ್ಪತ್ತು ವರ್ಷಗಳ ಹಿಂದಿನ ಹೈಸ್ಕೂಲಿನ ದಿನಗಳಲ್ಲಿ ನನ್ನ ಪೀಳಿಗೆಗೂ ಪ್ರೀತಿ ಪ್ರೇಮದ ಬಗ್ಗೆ ಒಂದು ಮಧುರವಾದ ಭಾವನೆಗಳನ್ನು ಹುಟ್ಟಿಸಿದ್ದೇ ರೇಡಿಯೋದಲ್ಲಿ ಬರುತ್ತಿದ್ದ ಪಿ.ಬಿ. ಶ್ರೀನಿವಾಸ್ ಹಾಡಿದ್ದ ಹಾಡುಗಳು. ಆಗ ಈ “ಪ್ರೀತ್ಸೆ, ಪ್ರೀತ್ಸೆ” ಯಂತಹ ಭಯಂಕರ, ಭೀಭತ್ಸ ಕೋರಿಕೆಯ ಹಾಡುಗಳಾಗಲಿ, “ಉರುಳಿಸು ಬಾರೊ, ಕೆರಳಿಸು ಬಾರೊ, ಅರಳಿಸೊ ಬಾರೊ ನನ್ನನ್ನ” ಎನ್ನುತ್ತ “show me how you love your wife” ಎಂದು ಕೇಳುವ ಹಾಡುಗಳಾಗಲಿ ಇರಲಿಲ್ಲ. ಪಿ.ಬಿ ಶ್ರೀನಿವಾಸರ ಕಂಠ ಹೇಗಿತ್ತೊ ಅದೇ ರೀತಿ ಅಂದಿನ ಸಾಹಿತ್ಯವೂ ಚೆನ್ನಿತ್ತು. ಆ ಮಧುರಾತಿಮಧುರ ಸಾಹಿತ್ಯ; ಆ ಉದ್ವೇಗವಿಲ್ಲದ, ಪ್ರಶಾಂತ ಗಾಯನ; ಹಿನ್ನೆಲೆಯಲ್ಲಿ ಸಂಪನ್ನ, ಸಜ್ಜನ, ಆದರ್ಶವಂತ ರಾಜ್‌ಕುಮಾರ್‌ರ ಕಲ್ಪನೆ; ಇವೆಲ್ಲವುಗಳಿಂದಾಗಿಯೆ ಇರಬೇಕು, ನನ್ನ ಮೆಚ್ಚಿನ ಗಾಯಕನ ಪಟ್ಟಿಯಲ್ಲಿ ಪಿ.ಬಿ. ಶ್ರೀನಿವಾಸ್ ಬಿಟ್ಟರೆ ಬೇರೊಬ್ಬರು ಇಂದಿಗೂ ಬಂದಿಲ್ಲ. ಬಹುಶಃ ಇದು ನನ್ನೊಬ್ಬನದೇ ಕತೆಯಲ್ಲ ಅನ್ನಿಸುತ್ತದೆ.

ಯಾಕೆ ಇದು ನನ್ನೊಬ್ಬನದೆ ಕತೆಯಲ್ಲ ಎನ್ನಿಸುತ್ತದೆ ಅಂದರೆ, ಕರ್ನಾಟಕದ ಜನತೆ ಇವತ್ತಿಗೂ ಪಿ.ಬಿ.ಎಸ್.ರ ಬಗ್ಗೆ ತೋರಿಸುತ್ತಿರುವ ಪ್ರೀತಿಯನ್ನು ಗಮನಿಸಿ. ಎರಡು ವಾರದ ಹಿಂದೆ ಇಲ್ಲಿನ ಸಿಲಿಕಾನ್ ಕಣಿವೆಯಲ್ಲಿ ಪಿ.ಬಿ.ಎಸ್.ರ ಗಾಯನ ಕಾರ್ಯಕ್ರಮವೊಂದನ್ನು ಇಲ್ಲಿನ ಕನ್ನಡ ಕೂಟ ಏರ್ಪಡಿಸಿತ್ತು. ನಾನೂರಕ್ಕೂ ಹೆಚ್ಚು ಜನ ಹಿಡಿಸುವ ಸಭಾಂಗಣ ತುಂಬಿ ಹೋಗಿ, ನೂರಾರು ಜನ ಅಕ್ಷರಶಃ ಬಾಗಿಲಿಂದ ಹೊರಗೆ ನಿಂತಿದ್ದರು. ಇಂತಹ ಕಾರ್ಯಕ್ರಮದಲ್ಲಿ ಗಟ್ಟಿಯಾಗಿ ಹಾಡಬೇಕಾದ ಅನಿವಾರ್ಯತೆಯಿಂದಾಗಿ ಪಿ.ಬಿ.ಎಸ್.ರ ಧ್ವನಿ ಒಡೆಯುತ್ತದೆ. ಆದರೂ ಜನ ಅದ್ಯಾವುದನ್ನೂ ಲೆಕ್ಕಿಸದೆ, ಚಪ್ಪಾಳೆಯ ಮೇಲೆ ಚಪ್ಪಾಳೆ ಹೊಡೆಯುತ್ತ, ಅವರ ಹಾಡನ್ನು, ಮಾತನ್ನು, ಕನ್ನಡದಲ್ಲಿ ಅವರೇ ಬರೆದಿರುವ ಕವನಗಳನ್ನು ಆಸ್ವಾದಿಸುತ್ತ, ಮೈಮನದಲ್ಲೆಲ್ಲ ನಾಸ್ಟಾಲ್ಜಿಯ ತುಂಬಿಕೊಂಡು, ಕಳೆದು ಹೋಗಿದ್ದರು. ಅಂದಿನ ಆ ಕಾರ್ಯಕ್ರಮ ಒಂದರಲ್ಲಿಯೆ ಸುಮಾರು ಎರಡು ಲಕ್ಷ ರೂಪಾಯಿಗಳನ್ನು ಅನಿವಾಸಿ ಕನ್ನಡ ಜನತೆ ಪಿ.ಬಿ.ಎಸ್.ಗೆ ಸಂಗ್ರಹಿಸಿ ಕೊಟ್ಟರು! ಇದನ್ನೆಲ್ಲ ನೋಡಿದರೆ, ಅಣ್ಣಾವ್ರ ಬಗ್ಗೆಯ ಪ್ರೀತಿ ಮತ್ತು ನೆನಪನ್ನು ಜನ ಪಿ.ಬಿ.ಎಸ್.ರವರಲ್ಲಿ ಕಂಡುಕೊಳ್ಳುತ್ತಿದ್ದಾರೇನೊ ಎನ್ನಿಸುತ್ತದೆ.

30-40 ವರ್ಷದ ಹಿಂದೆ ಈಗಿನಷ್ಟು ಶೇಕಡಾವರು ಸಂಖ್ಯೆಯಲ್ಲಿ ಜನ ಅಕ್ಷರಸ್ಥರಾಗಿರಲಿಲ್ಲ. ಹಾಗಾಗಿ ಎಲ್ಲಾ ಸ್ತರದ ಜನರ ಮೇಲೆ ಪತ್ರಿಕೆ-ಪುಸ್ತಕಗಳ ಪ್ರಭಾವವೂ ಕಮ್ಮಿಯೆ ಇತ್ತು. ರೇಡಿಯೊ ಬಿಟ್ಟರೆ ಇನ್ಯಾವ ದೊಡ್ಡ ಸಮೂಹ ಮಾಧ್ಯಮಗಳೂ ಇರಲಿಲ್ಲ. ಅಂತಹ ಸಮಯದಲ್ಲಿ ಗ್ರಾಮ-ಪಟ್ಟಣ, ಬಡವ-ಬಲ್ಲಿದ, ಅಕ್ಷರಸ್ಥ-ಅನಕ್ಷರಸ್ಥ ಎಂಬ ಭೇದವಿಲ್ಲದೆ ಜನರನ್ನು ಮುಟ್ಟುತ್ತಿದ್ದದ್ದು ಸಿನೆಮಾಗಳು, ಸಿನೆಮಾ ಹಾಡುಗಳು. ರಾಜ್‌ಕುಮಾರ್ ಚಿತ್ರಗಳೆ ಆಗ ಒಳ್ಳೆಯತನ, ದೇಶಪ್ರೇಮ, ಜವಾಬ್ದಾರಿ, ಸರಳತೆ, ಸಜ್ಜನಿಕೆಯ ಬಗ್ಗೆ ಕನ್ನಡದ ಬಹುಪಾಲು ಜನತೆಗೆ ಇದ್ದ ನೀತಿಪಾಠಗಳು. ಪಿ.ಬಿ.ಎಸ್.ರ ಕಂಠವೆ ಅದನ್ನೆಲ್ಲ ಬೋಧಿಸುತ್ತಿದ್ದ ಅಶರೀರವಾಣಿ. ರಾಜ್‌ಕುಮಾರ್-ಚಿ.ಉದಯಶಂಕರ್-ಜಿ.ಕೆ.ವೆಂಕಟೇಶ್-ಪಿ.ಬಿ.ಶ್ರೀನಿವಾಸ್ ಇವರ ಕಾಂಬಿನೇಷನ್‌ನಲ್ಲಿ ಬಂದ ಅಸಂಖ್ಯ ಹಾಡುಗಳಿಗೆ ಲೆಕ್ಕವೇ ಇಲ್ಲ. ಈ ಸಿನೆಮಾದವರೇ ಆಗಿನ People’s Teachers. ಆಗ ಸಿನೆಮಾದವರಿಗೂ ಬದ್ಧತೆಯಿತ್ತು.

ಈಗ ಮೊದಲಿಗಿಂತಲೂ ಹೆಚ್ಚಿನ ಸಿನೆಮಾಗಳು ಬರುತ್ತಿವೆ; ಸಹಜವಾಗಿಯೆ ಸಿನೆಮಾ ಹಾಡುಗಳೂ ಹೆಚ್ಚಿಗೆ ಹುಟ್ಟುತ್ತಿವೆ. ಆದರೆ ಕಳೆದ ಇಪ್ಪತ್ತು ವರ್ಷಗಳಲ್ಲಿ ಬಂದ ಸಿನೆಮಾ ಹಾಡುಗಳಿಗಿಂತ ಹೆಚ್ಚಾಗಿ ಪಿ.ಬಿ. ಶ್ರೀನಿವಾಸರ ಹಾಡುಗಳನ್ನೇ ಕನ್ನಡಿಗರು ಈಗಲೂ ನೆನಪಿನಲ್ಲಿಟ್ಟಿರುವುದು. ಕೆಲವರು ಎಂತೆಂತದ್ದನ್ನೊ ಹಾಡು ಎಂದುಕೊಂಡು ಗೀಚಿ ಹಾಕುತ್ತಿದ್ದಾರೆ. ಅದನ್ನು ಹಾಡುವವರೂ ವಾದ್ಯಗಳ ಗದ್ದಲದಲ್ಲಿ ತಮ್ಮ ಸ್ವರ ಕೇಳಿಸದಂತೆ ಹಾಡುತ್ತಾರೆ. ಸಂಗೀತ ಮತ್ತು ಸಾಹಿತ್ಯ ಎಷ್ಟು ರಭಸವಾಗಿ, ಅಸಹ್ಯಕರವಾಗಿ ಇರುತ್ತವೆ ಅಂದರೆ ಅವಸರವಸರದಲ್ಲಿ ಹಸ್ತಮೈಥುನಕ್ಕೆ ಅಣಿಯಾಗುವವರಿಗೆ ಲಾಯಕ್ಕಾದ ಗತಿಯಲ್ಲಿ; ಚಿತ್ರಗಳೂ ಅಂತಹುದೇ ನೃತ್ಯದಿಂದ ಕೂಡಿರುತ್ತವೆ.


ಬಾರೆ, ಬಾರೆ, ಚೆಂದದ ಚೆಲುವಿನ ತಾರೆ,
ಬಾರೆ, ಬಾರೆ, ಒಲವಿನ ಚಿಲುಮೆಯ ತಾರೆ…

….

ನೀ ಮುಡಿದ ಮಲ್ಲಿಗೆ ಹೂವಿನ ಮಾಲೆ
ನಿನಗೆಂದೆ ಬರೆದ ಪ್ರೇಮದ ಓಲೆ
ಅದ ಓದಲು ಹರಿವುದು ಜೇನಿನಾ ಹೊಳೆ…

ಛೇ. ಎಲ್ಲಿ ಹೋದವೋ ಆ ದಿನಗಳು….

ನಮ್ಮ ಪತ್ರಿಕೆಯ ಹಿತೈಷಿ ಹಾಗೂ ನನ್ನ ಆತ್ಮೀಯ ಗೆಳೆಯ ಮಧುಕಾಂತ್ ಇಲ್ಲಿನ ಎಫ಼್.ಎಮ್. ರೇಡಿಯೊ ಒಂದರಲ್ಲಿ ಕಳೆದ ಕೆಲವು ತಿಂಗಳುಗಳಿಂದ ಪ್ರತಿ ತಿಂಗಳೂ ಒಂದೊಂದು ಕನ್ನಡ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಆ ಕಾರ್ಯಕ್ರಮ ಇಂಟರ್‌ನೆಟ್‌ನಲ್ಲೂ ನೇರಪ್ರಸಾರ ಆಗುವುದರಿಂದ ಬೆಂಗಳೂರಿನಲ್ಲೂ ಜನ ಇದನ್ನು ತಮ್ಮ ಕಂಪ್ಯೂಟರ್‌ನಲ್ಲಿ ಕೇಳುತ್ತಾರೆ. ಯಾವುದೊ ಒಂದು ಟಿವಿ/ರೇಡಿಯೋ ಕಾರ್ಯಕ್ರಮ ಇಷ್ಟವಾದರೆ ಮತ್ತೆ ಅದನ್ನು ನೋಡುವ/ಕೇಳುವ ಅನುಕೂಲ ನಮ್ಮಲ್ಲಿ ಇಲ್ಲವೇ ಇಲ್ಲ. ಆದರೆ ಈ ಇಂಟರ್‌ನೆಟ್‌ನ ಅಪರಿಮಿತ ಸಾಧ್ಯತೆಗಳಿಂದಾಗಿ ಮುಂದುವರಿದ ದೇಶಗಳಲ್ಲಿ ಅದು ಸಾಧ್ಯವಾಗಿದೆ. ಮಧುರವರು ಪಿ.ಬಿ.ಎಸ್.ರನ್ನು ಆಪ್ತವಾಗಿ ರೇಡಿಯೋ ಸಂದರ್ಶನ ಮಾಡಿದ, ಪಿ.ಬಿ.ಎಸ್. ಕನ್ನಡ ಚಿತ್ರರಂಗದಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಂಡ, ತಮ್ಮ ಸ್ವರಚಿತ ಕನ್ನಡ ಕವನಗಳನ್ನು ಹಾಡಿದ ಆ ಸಂದರ್ಶನ ಈಗ ಆನ್‌ಲೈನ್‌ನಲ್ಲಿ ಲಭ್ಯವಿದೆ. ಅದರ ವಿಳಾಸ: http://www.itsdiff.com

ಅದೇ ರೀತಿ, http://www.sampada.net/podcasts ವೆಬ್‌ಸೈಟಿನಲ್ಲಿ ತೇಜಸ್ವಿ, ಕಂಬಾರ, ಅನಂತಮೂರ್ತಿ, ಜಿಎಸ್ಸೆಸ್, ನಿಸಾರ್ ಅಹ್ಮದ್ ಮತ್ತಿತರ ಕನ್ನಡ ಸಾಹಿತಿಗಳ ಬಿಚ್ಚುಮಾತಿನ ಸಂದರ್ಶನಗಳ ಧ್ವನಿಮುದ್ರಣಗಳೂ ಇವೆ. ಓ.ಎಲ್.ಎನ್. ಸ್ವಾಮಿ, ಉದಯವಾಣಿಯ ಇಸ್ಮಾಯಿಲ್ ಮುಂತಾದವರು ಮಾಡಿರುವ ಈ ಕೆಲಸ ನಿಜಕ್ಕೂ ಶ್ಲಾಘನೀಯ. ಇದನ್ನೆಲ್ಲ ಇವರು ಮಾಡಿರುವುದು ತಮ್ಮ ಬಿಡುವಿನ ವೇಳೆಯಲ್ಲಿ. ಇಂಟರ್‌ನೆಟ್‌ನಲ್ಲಿ ಸುಮ್ಮನೆ ಬಡಬಡಿಸುವ, ಸ್ವರತಿಯಲ್ಲಿ ಮುಳುಗಿರುವ ಅನೇಕ ಕನ್ನಡಿಗರು ಮಾತಿಗಿಂತ ಕೃತಿಯಲ್ಲಿ ತೊಡಗಿಕೊಳ್ಳಲು ಇವೆಲ್ಲ ಪ್ರೇರಣೆಯಾಗಬೇಕಿದೆ. ಅಲ್ಲವೆ?

Add a Comment

required, use real name
required, will not be published
optional, your blog address