ಕನ್ಯೆ ಕುಂತಿಗೆ ಕರ್ಣ ಹುಟ್ಟಿದ್ದು ನಿಜವೇ? ಯಾಕಾಗಿರಬಾರದು?
Posted Under: Uncategorized
(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಜೂನ್ 8, 2007 ರ ಸಂಚಿಕೆಯಲ್ಲಿನ ಲೇಖನ)
ಮಹಾಭಾರತದ ಮೇಲಿನ ಆ ಕನ್ನಡ ಕಾದಂಬರಿಯಲ್ಲಿ “ಬೀಜ” ಗಣಿತಕ್ಕೆ ಹೆಚ್ಚಿನ ಪ್ರಾಶಸ್ತ್ಯ. ಬೀಜ ಎನ್ನುವ ಪದ ಇಲ್ಲದ ಪ್ಯಾರಾಗಳಾಗಲಿ, ಪುಟಗಳಾಗಲಿ ಅದರಲ್ಲಿ ಅಪರೂಪ. ಅದರಲ್ಲಿ ಸೂರ್ಯ, ಯಮ, ವಾಯು, ಮತ್ತು ಇಂದ್ರರ ಜೊತೆ ಸಂತಾನಕ್ಕಾಗಿ ಕುಂತಿ ಸಂಭೋಗ ಮಾಡುವುದಷ್ಟೇ ಅಲ್ಲ, ಅದನ್ನು ಮನಃಪೂರ್ವಕವಾಗಿ ಆಸ್ವಾದಿಸುತ್ತಾಳೆ ಎಂದು ಲೇಖಕರು ಬರೆಯುತ್ತಾರೆ. ಆದರೆ ಇವತ್ತು ಅಂತಹವರೆ ಮಹಾಭಾರತದ ಬಗ್ಗೆ ಕೇವಲ ಬಹಿರಂಗ ಹೆಮ್ಮೆ ತೊರಿಸುವ ಕೋಮುವಾದಿಗಳ ಆರಾಧ್ಯ ಲೇಖಕರಾಗಿರುವುದು ನಗೆಪಾಟಲೊ, ಕ್ರೂರ ವ್ಯಂಗ್ಯವೊ ಗೊತ್ತಾಗುತ್ತಿಲ್ಲ. ಪುರಾಣವನ್ನು ಇತಿಹಾಸವಾಗಿ ಪರಿವರ್ತಿಸಿದೆ ಎಂಬ ಅಹಂಕಾರ ಇನ್ನು ಇತಿಹಾಸಕ್ಕೆ ಏನೇನು ಮಾಡಬಹುದು? ಯಾವೊಂದು ಜೀವದ ಮೇಲೂ ಪ್ರೀತಿಯಿಲ್ಲದ, ಇತಿಹಾಸದ ಬಗ್ಗೆ ಗೌರವ, ವಿನಯ ಇಲ್ಲದ ಜನ ಎಲ್ಲವನ್ನೂ ತಮ್ಮ ಕಾಮಾಲೆ ಕಣ್ಣಿನಿಂದ ನೋಡುತ್ತಾರೆ ಎನ್ನುವುದು ಇತ್ತೀಚೆಗೆ ತಾನೆ ಮತ್ತೊಮ್ಮೆ ಸಾಬೀತಾಗಿದೆ. ಬೀಜದ ಮೇಲಿನ ಕುತೂಹಲ ಬೀಜ ಒಡೆಯುವ ಕತೆ ಹೇಳುವ ತನಕ ಮುಂದುವರೆದಿದೆ! ಒಗ್ಗೂಡಿಸುವುದಕ್ಕಿಂತ ಭಾಷೆ-ಪಂಗಡ-ಜಾತಿ-ಮತ-ನೆಲ-ನೀರು ಇತ್ಯಾದಿಗಳ ಆಧಾರದ ಮೇಲೆ ಜನರನ್ನು ಒಡೆಯುವುದರಲ್ಲಿ ನಮ್ಮಲ್ಲಿ ಕೆಲವರು ನಿಸ್ಸೀಮರು.
ಹಳ್ಳಿಗಾಡಿನ ನನ್ನಂತಹ ಬಹುಪಾಲು ಭಾರತೀಯರು ರಾಮಾಯಣ, ಮಹಾಭಾರತದ ಕತೆಗಳನ್ನು ಕೇಳುತ್ತ ಬೆಳೆದವರು. ನಾನು ಎಂಟೊಂಭತ್ತು ವರ್ಷದವನಿದ್ದಾಗ ನನ್ನ ಹಳ್ಳಿ ಜನ ಆಡಿದ “ದಾನ ಶೂರ ವೀರ ಕರ್ಣ” ನಾಟಕದ ಪ್ರತಿಯೊಂದು ಡೈಲಾಗ್ ಮತ್ತು ಮಟ್ಟು ನನಗೆ ಬಾಯಿಪಾಟ ಆಗಿಬಿಟ್ಟಿತ್ತು. ಸಹಸ್ರಾರು ವರ್ಷಗಳಿಂದ ಭಾರತದ ಆಳದಲ್ಲಿ ಇಳಿದು ಹೋದ ರಾಮ, ಕೃಷ್ಣರ ಕತೆಯನ್ನು ಮೆಚ್ಚಲು, ನಮ್ಮ ಈ ಪ್ರಾಚೀನ ಪುರಾಣಗಳ ಪರಂಪರೆಯ ಬಗ್ಗೆ ಹೆಮ್ಮೆ ತಾಳಲು ನಮಗೆ ಇತರ ಮತ, ಕೋಮುಗಳ ಮೇಲಿನ ದ್ವೇಷ ಮೂಲವಾಗಿರಲಿಲ್ಲ. ಆಗ ಕೂಡದು. ಆದರೆ ಇಂದಿನ ದುರ್ದೈವ ಏನೆಂದರೆ, ಪರಮತ ಸಹಿಷ್ಣುಗಳನ್ನು ರಾಮನ ಮೌಲ್ಯಗಳನ್ನು ನಿರಾಕರಿಸುವವರು ಎಂದು ಕೋಮುವಾದಿಗಳು ಆರೋಪಿಸುತ್ತಾರೆ. ಇನ್ನೊಂದು ಪಂಗಡವಿದೆ; ರಾಮ, ಕೃಷ್ಣರ ಉಲ್ಲ್ಲೇಖ ತೆಗೆದುಕೊಂಡ ಮಾತ್ರಕ್ಕೆ ಅವರನ್ನು ಕೋಮುವಾದಿಗಳು ಎಂದು ಬಿಡುವ ಗುಂಪಿದು; ಗಾಂಧಿಯ ಭಾರತ ಅರ್ಥವಾಗಿಲ್ಲದ ಗುಂಪಿದು. ಇವರಿಬ್ಬರ ಅತಿರೇಕವನ್ನು ನಮ್ಮ ಸಮಾಜ ಮೀರಬೇಕಿದೆ.
ರಾಮಾಯಣ, ಮಹಾಭಾರತದಲ್ಲಿನ ಘಟನೆಗಳು ವಾಲ್ಮೀಕಿ, ವ್ಯಾಸ ಬರೆದ ಹಾಗೆಯೆ ಅಕ್ಷರಶಃ ನಡೆದದ್ದು ಎಂದು ಒಪ್ಪಲು ಎಷ್ಟು ಕಷ್ಟವೊ ಕೆಲವು ಅವಾಸ್ತವ ಎನ್ನಿಸುವ ಘಟನೆಗಳ ಹೊರತಾಗಿ ಅಂತಹುದೊಂದು ಪಾತ್ರಗಳು, ಘಟನೆಗಳು ನಡೆದೇ ಇಲ್ಲ ಎನ್ನುವುದೂ ಕಷ್ಟವೆ. ಭೂಮಿಗೆ ಶತಶತ ಕೋಟಿ ವರ್ಷಗಳ ಇತಿಹಾಸವಿದೆ. ಆದರೆ ನಮಗೆ ಅಷ್ಟಿಷ್ಟು ಗೊತ್ತಿರುವ ಇತಿಹಾಸ ಮಾತ್ರ ಸುಮಾರ ಎರಡೂವರೆ ಸಾವಿರ ವರ್ಷಗಳದ್ದು. ಹೀಗಾಗಿ ಕೆಲವೊಂದು ಪುರಾಣಗಳ ಐತಿಹಾಸಿಕತೆಯನ್ನು ನಿರಾಕರಿಸುವುದು ಕಷ್ಟ. ಅದೇ ರೀತಿ ಕೆಲವು ಪುರಾಣಗಳ ವಾಸ್ತವತೆಯನ್ನು ಇವತ್ತಿನ ವಿಜ್ಞಾನದ ಬೆಳಕಿನಲ್ಲಿ ಒಪ್ಪುವುದೂ ಅಸಾಧ್ಯ.
ಭಾರತೀಯ ಪುರಾಣಗಳ ವಿಷಯಕ್ಕೆ ಬಂದರೆ, ಮಹಾಭಾರತ ರಾಮಾಯಣಕ್ಕಿಂತ ಹೆಚ್ಚು ಸಂಕೀರ್ಣವಾದದ್ದು, ವಿಸ್ತಾರವಾದದ್ದು. ಗೊಂದಲ ಹುಟ್ಟಿಸುವುದರ ಜೊತೆಗೆ ಕೆಲವೊಂದು ವೈಜ್ಞಾನಿಕ ಜಿಜ್ಞಾಸೆಗೂ ತಳ್ಳುತ್ತದೆ. ಈಗಿನ ಕಾಲದ ಟೆಸ್ಟ್‌ಟ್ಯೂಬ್ ಬೇಬಿಗಳು, ಸ್ಪರ್ಮ್ ಇಂಜೆಕ್ಷನ್, ಕ್ಲೋನಿಂಗ್ ಇವನ್ನೆಲ್ಲ ಗಮನಿಸಿದರೆ ಗಾಂಧಾರಿಯ ಶತಪುತ್ರ ಹಾಗು ಏಕಪುತ್ರಿ ಸಂತಾನ ಅಸಾಧ್ಯ ಎಂದೇನೂ ಅನ್ನಿಸುವುದಿಲ್ಲ. ಆದರೆ, ಇಲ್ಲಿಯತನಕವೂ ಕನ್ಯೆ ಕುಂತಿಗೆ ಸಂಭೋಗವಿಲ್ಲದೆ ಕೇವಲ ದೈವ ಪವಾಡದಿಂದ ಕರ್ಣ ಹುಟ್ಟಿದ ಎಂಬ ಕತೆ ನಂಬಲು, ಒಪ್ಪಿಕೊಳ್ಳಲು ವೈಜ್ಞಾನಿಕ ಹಿನ್ನೆಲೆಯಿಂದ ನೋಡುವ ಜನರಿಗೆ ಕಷ್ಟವಾಗುತ್ತಿತ್ತು. ಕೆಲವೊಂದು ಕ್ರಿಸ್ತ ಪುರಾಣಗಳು ಏಸು ಕ್ರಿಸ್ತ ಸಹ ಮಹಾಭಾರತದ ಕರ್ಣನ ರೀತಿ ಕಾನೀನ, ಕನ್ಯೆ ಮೇರಿಗೆ ಜನಿಸಿದವನು ಎನ್ನುತ್ತವೆ.
ಅಮೇರಿಕಾದಲ್ಲಿನ ಒಮಾಹ ನಗರದ ಮೃಗಾಲಯವೊಂದರಲ್ಲಿ 2001 ರಲ್ಲಿ ಶಾರ್ಕ್ ಮೀನೊಂದು ಮರಿಯೊಂದಕ್ಕೆ ಜನನ ನೀಡಿತು. ವಿಚಿತ್ರ ಏನೆಂದರೆ ಅಲ್ಲಿನ ನೀರುಕೊಳದಲ್ಲಿ ಇದ್ದದ್ದೆ ಮೂರು ಹೆಣ್ಣು ಶಾರ್ಕ್‌ಗಳು. ಅವು ಅಲ್ಲಿಗೆ ಬಂದದ್ದೆ ಚಿಕ್ಕಮರಿಗಳಾಗಿದ್ದಾಗ. ಜೊತೆಗೆ, ಅವು ಯಾವುವೂ ಮೂರು ವರ್ಷಗಳಿಂದ ಯಾವುದೇ ಗಂಡು ಶಾರ್ಕಿನ ಸಂಪರ್ಕಕ್ಕೆ ಬಂದಿರಲಿಲ್ಲ. ಇಂತಹ ಸ್ಥಿತಿಯಲ್ಲಿ ಮರಿ ಶಾರ್ಕ್‌ನ ಜನನ ಎಲ್ಲರನ್ನೂ ಅಚ್ಚರಿ ಪಡಿಸಿತು. ಇಲ್ಲಿಯತನಕ ಇದ್ದ ನಂಬಿಕೆ ಏನೆಂದರೆ, ಮೊಲೆ ಹಾಲುಡಿಸುವ ಸಸ್ತನಿ ಪ್ರಾಣಿಗಳಂತೆ ಶಾರ್ಕ್‌ಗಳಲ್ಲೂ ಸಹ ಸಂತಾನೋತ್ಪತ್ತಿಗೆ ಗಂಡು ಹೆಣ್ಣಿನ ಮಿಲನ ಅತ್ಯವಶ್ಯ ಎನ್ನುವುದು. ಹಾಗಾಗಿ, ವಿಜ್ಞಾನಿಗಳು ಮರಿ ಶಾರ್ಕಿನ ಡಿ.ಎನ್.ಎ. ಪರೀಕ್ಷೆ ಮಾಡಲು ನಿರ್ಧರಿಸಿದರು.
ಐದಾರು ವರ್ಷಗಳ ಪರೀಕ್ಷೆಯ ನಂತರ ಕಳೆದ ವಾರ ಫಲಿತಾಂಶ ಪ್ರಕಟವಾಗಿದೆ. ಮರಿ ಶಾರ್ಕ್ ಕಾನೀನ!!! ಅದರ ಡಿ.ಎನ್.ಎ. ನಲ್ಲಿ ಪಿತೃಮೂಲದ ಡಿ.ಎನ್.ಎ. ಇಲ್ಲವೇ ಇಲ್ಲ. ಇರುವುದು ಕೇವಲ ತಾಯಿಯ ಡಿ.ಎನ್.ಎ. ಮಾತ್ರ. ಸಂಭೋಗವಿಲ್ಲದೆ, ಗಂಡಸಿನ ಪ್ರತ್ಯಕ್ಷ-ಪರೋಕ್ಷ ಪಾತ್ರವಿಲ್ಲದೆ ಕೆಲವೊಂದು ಜಾತಿಯ ಕ್ರಿಮಿ ಕೀಟಗಳು ಗರ್ಭ ಧರಿಸಬಲ್ಲವು. ಉರಗ ಜಾತಿಗೆ ಸೇರಿದ ಹಾವು, ಹಲ್ಲಿ, ಮೊಸಳೆಗಳಲ್ಲಿ, ಮೀನಿನ ಜಾತಿಯಲ್ಲಿ ಇಂತಹುದು ಅಪರೂಪವಾದರೂ ಆಗಾಗ ಘಟಿಸುತ್ತವೆ. ಆದರೆ ಮನುಷ್ಯನೂ ಸೇರಿದಂತೆ ಯಾವ ಸಸ್ತನಿ ಪ್ರಾಣಿಗಳಲ್ಲಿಯೂ ಇಲ್ಲಿಯತನಕ ಇದು ದಾಖಲಾಗಿಲ್ಲ. ಶಾರ್ಕ್ ಮೀನಿನ ಜಾತಿಗೆ ಸೇರಿದ್ದರೂ ಅವೂ ಸಹ ಗರ್ಭ ಧರಿಸಲು ಗಂಡಸಿನ ಅವಶ್ಯಕತೆ ಬೇಕೇ ಬೇಕು ಎಂದೆ ಇಲ್ಲಿಯತನಕ ನಂಬಲಾಗಿತ್ತು. ಈಗ ಕಾನೀನ ಶಾರ್ಕ್ ಆ ನಂಬಿಕೆಯನ್ನು ಬುಡಮೇಲು ಮಾಡಿದೆ. ಅಂದ ಹಾಗೆ, ಆ ಕಾನೀನ ಶಾರ್ಕ್ ಈಗ ಬದುಕಿಲ್ಲ. ಹುಟ್ಟಿದ ಕೆಲವೇ ಗಂಟೆಗಳಲ್ಲಿ ಸ್ಟ್ರಿಂಗ್‌ರೆ ದಾಳಿಗೆ ತುತ್ತಾಗಿ ಅದು ಅಂದೇ ಸತ್ತಿತು.
ವಿಜ್ಞಾನಿಗಳು ಮಾತ್ರ ಗಂಡಸಿನ ಪಾತ್ರವಿಲ್ಲದ ಇಂತಹ ಜನನ ಒಳ್ಳೆಯ ಬೆಳವಣಿಗೆಯಲ್ಲ ಎನ್ನುತ್ತಾರೆ. ಹೀಗೆ ಹುಟ್ಟಿದ ಮರಿಗಳಲ್ಲಿ ಅನುವಂಶಿಕ ವೈವಿಧ್ಯತೆ ಕಮ್ಮಿ ಇರುತ್ತದೆ; ಪ್ರಾಣಿಗಳ ಜೆನೆಟಿಕ್ ವೈವಿಧ್ಯತೆಯೆ ಅವು ಕಾಯಿಲೆ, ಹವಾಮಾನ ವೈಪರೀತ್ಯದಂತಹ ಅಪಾಯಗಳಿಗೆ ಹೊಂದಿಕೊಳ್ಳುವ ತಾಕತ್ತನ್ನು ನೀಡುತ್ತದೆ ಎನ್ನಲಾಗುತ್ತದೆ.
ಈಗ ಮತ್ತೊಮ್ಮೆ ಪುರಾಣದ ಮೂಲ ಪ್ರಶ್ನೆಗೆ ಬರೋಣ. ಇಲ್ಲಿಯ ತನಕ ಶಾರ್ಕ್‌ಗಳ ಕಾನೀನ ಸಾಧ್ಯತೆಯನ್ನು ನಿರಾಕರಿಸಲಾಗುತ್ತಿತ್ತು. ಅದೇ ರೀತಿ ಮನುಷ್ಯನೂ ಸೇರಿದಂತೆ ಸಸ್ತನಿಗಳ ಕಾನೀನ ಕತೆಯನ್ನೂ. ಇಲ್ಲಿಯತನಕ ಅದು ವೈಜ್ಞಾನಿಕವಾಗಿ ಸಾಬೀತಾಗಿಲ್ಲ ಎಂದ ಮಾತ್ರಕ್ಕೆ ಎಂದೂ ಆಗಿಲ್ಲ ಎನ್ನುವುದೂ, ಮುಂದೆ ಆಗುವುದೂ ಇಲ್ಲ ಎನ್ನುವುದು ಅಹಂಕಾರದ ಮಾತಾಗುತ್ತದೆ. ಈ ಜಗತ್ತು ಎಷ್ಟು ಕೌತುಕಮಯ ಎಂದರೆ ಅತ್ತ ಪುರಾಣವನ್ನು ಸಂಪೂರ್ಣವಾಗಿ ನಂಬಲಾಗದು; ಇನ್ನೊಂದೆಡೆ ವಿಜ್ಞಾನ ಎಲ್ಲವನ್ನೂ ಹೇಳುತ್ತಿಲ್ಲ. ಆದರೆ ಪುರಾಣಗಳ ಅನೇಕಾನೇಕ ಸುಳ್ಳುಗಳನ್ನು ಆಧಾರಸಹಿತವಾಗಿ ಅವು ಸುಳ್ಳು ಎಂದು ವಿಜ್ಞಾನ ಸಾಬೀತು ಪಡಿಸಿದೆ. ಹಾಗಾಗಿ ನಾವು ಪುರಾಣಗಳಲ್ಲಿ ತೆಗೆದು ಕೊಳ್ಳಬೇಕಿರುವುದು ಅವುಗಳಲ್ಲಿನ ನೀತಿ, ಆಧ್ಯಾತ್ಮವನ್ನಷ್ಟೆ ಹೊರತು ಈಗಾಗಲೆ ಸುಳ್ಳೆಂದು ಸಾಬೀತಾಗಿರುವ ಕುರುಡು ನಂಬಿಕೆಗಳನ್ನಲ್ಲ. ಸಾಬೀತಾಗುವ ತನಕ ಆರೋಗ್ಯಕರ ಸಂಶಯ ಇಟ್ಟುಕೊಂಡರಷ್ಟೆ ನಮಗೆ ನಿಜ ಕಾಣಿಸಲು ಸಾಧ್ಯ. ಅಲ್ಲವೆ?