ಹತ್ತು ಸಾವಿರ ಜನರಲ್ಲಿ ಒಬ್ಬರೂ ಕೈಎತ್ತಿಲ್ಲ!!!
Posted Under: Uncategorized
(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಜೂನ್ 22, 2007 ರ ಸಂಚಿಕೆಯಲ್ಲಿನ ಲೇಖನ)
ಇತ್ತೀಚಿನ ದಿನಗಳಲ್ಲಿ ಬಹಳ ಚರ್ಚಿತವಾಗುತ್ತಿರುವ ಕನ್ನಡ ಪುಸ್ತಕಗಳಲ್ಲಿ ಡಾ. ಬಂಜಗೆರೆ ಜಯಪ್ರಕಾಶರ “ಆನು ದೇವಾ ಹೊರಗಣವನು” ಸಹ ಒಂದು. ಬಂಜಗೆರೆಯವರು “ಕನ್ನಡ ರಾಷ್ಟ್ರೀಯತೆ” ಎಂಬ ವಿಷಯಕ್ಕೆ ಹಂಪಿ ವಿಶ್ವವಿದ್ಯಾಲಯದಿಂದ ಡಿ.ಲಿಟ್. ಪಡೆದಿದ್ದಾರೆ. ಕರ್ನಾಟಕದಾದ್ಯಂತ ಅನೇಕ ಜನಪರ ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಇವರು ಕವಿಯೂ ಹೌದು. ಕಳೆದ ವರ್ಷವೆ ಒಂದು ಕವನ ಸಂಕಲನವನ್ನೂ ಬಿಡುಗಡೆ ಮಾಡಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ದಾವಣಗೆರೆ ಕಡೆಯವರಾದ ಬಂಜಗೆರೆ ನನ್ನ ಪಕ್ಕದ ತಾಲ್ಲೂಕಾದ ಕನಕಪುರವನ್ನು ತಮ್ಮ ಕರ್ಮಭೂಮಿಯನ್ನಾಗಿ ಮಾಡಿಕೊಂಡು, “ಆಸರೆ” ಎಂಬ ಸೇವಾಸಂಸ್ಥೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ನಾನು ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದಾಗ ಕನಕಪುರ ತಾಲ್ಲೂಕಿನ ಹಾರೋಹಳ್ಳಿಯ ಅವರ ಮನೆಯಲ್ಲಿ ಡಾ. ಬಂಜಗೆರೆಯವರನ್ನು ಮೊದಲ ಸಲ ಭೇಟಿಯಾಗಿದ್ದು. ನಮ್ಮ ಹಳ್ಳಿಗಳ ಬಡಜನರಿಗೆ ಎಂತಹ ಸಾಲ ಕೊಟ್ಟರೆ ಅವರು ಸಾಲ ತೀರಿಸಿಯೂ ಬಚಾವಾಗುತ್ತಾರೆ ಎಂಬ ವಿಷಯದ ಮೇಲೆ ಅಂದು ಅವರು ನನಗೆ ಅದ್ಭುತವಾದ ಪಾಠ ಮಾಡಿದ್ದರು.
ಒಂದೆಕೆರೆ, ಎರಡೆಕೆರೆಯ ಮಳೆಯಾಧಾರಿತ ಕೃಷಿ ಭೂಮಿ ಇರುವ ರೈತರಿಗೆ ಕೊಳವೆ ಬಾವಿ ಕೊರೆಸಲು ಇಪ್ಪತ್ತು-ಮುವ್ವತ್ತು ಸಾವಿರ ಸಾಲ ನೀಡಿ, ಅದರಲ್ಲಿ ನೀರು ಬರದಿದ್ದರೂ ಸಾಲ ತೀರಿಸಲೇಬೇಕು ಎಂದರೆ ಹೇಗೆ? ಆಗ ಅವನಿಗಿರುವ ಒಂದೇ ದಾರಿ ತನ್ನ ಜಮೀನನ್ನೂ ಮಾರುವುದು ಇಲ್ಲವೆ ನೇಣು ಹಾಕಿಕೊಳ್ಳುವುದು! ಅದರ ಬದಲಿಗೆ ಆತನಿಗೊ ಆತನ ಮನೆಯ ಹೆಣ್ಣುಮಕ್ಕಳಿಗೊ ನಾಲ್ಕೈದು ಕುರಿಮರಿ ತೆಗೆದುಕೊಳ್ಳಲೊ, ಇಲ್ಲಾ ಹಾಲು ಕರೆಯುವ ಹಸುವನ್ನು ಕೊಳ್ಳಲೊ, ಇಲ್ಲವೆ ಒಂದು ಹೊಲಿಗೆ ಯಂತ್ರ ತೆಗೆದುಕೊಳ್ಳಲೊ ಸಣ್ಣ ಮೊತ್ತದ ಸಾಲ ಕೊಟ್ಟರೆ, ಅವರ ಜೀವನ ಸಲೀಸಾಗಿ ನಡೆದುಬಿಡುತ್ತದೆ. ಅಂತಹ ಸಣ್ಣ ಮೊತ್ತದ ಸಾಲಕ್ಕೆ ಡಿಫ಼ಾಲ್ಟರ್‌ಗಳೂ ಕಮ್ಮಿಯಿರುತ್ತಾರೆ. ನಮ್ಮ ಎಷ್ಟೋ ಬಡ ಕುಟುಂಬಗಳ ಸಮಸ್ಯೆಗಳು ಕೇವಲ ಐದಾರು ಸಾವಿರ ರೂಪಾಯಿಗಳ ಸಾಲದಿಂದ ಪರಿಹಾರವಾಗಿ ಬಿಡುತ್ತವೆ. ಹೀಗಾಗಿಯೆ ನಮ್ಮ ಹಳ್ಳಿಗಳಿಗೆ ಮೈಕ್ರೊಫ಼ೈನಾನ್ಸ್ ಬಹಳ ಮುಖ್ಯ,
ಎಂದು ಬಂಜಗೆರೆಯವರು ಅಂದು ಹೇಳಿದರು.
ಕಳೆದ ನಾಲ್ಕೈದು ದಿನಗಳಿಂದ ಅವರು ಅಂದು ಹೇಳಿದ್ದ ಈ ಮೈಕ್ರೊಫ಼ೈನಾನ್ಸ್ ಕುರಿತೇ ಯೋಚಿಸುತ್ತಿದ್ದೆ. ಅದಕ್ಕೆ ಕಾರಣ, ಕೀವ ಎನ್ನುವ ಸಂಸ್ಥೆಯ ಬಗ್ಗೆ ಗೊತ್ತಾಗಿದ್ದು. ಕೀವ ಎನ್ನುವುದು 2005 ರಲ್ಲಿ ಇಲ್ಲಿಯೆ ಅಮೇರಿಕದಲ್ಲಿ ಜನ್ಮ ತಳೆದ ಒಂದು ಲಾಭರಹಿತ ಸಂಸ್ಥೆ. ನಮ್ಮ ದೇಶದ ಬಡಜನರಷ್ಟೆ ಅಲ್ಲ, ತೃತೀಯ ಜಗತ್ತಿನ ಬಹುಪಾಲು ಬಡಜನರಿಗೆ ಐದು-ಹತ್ತು ಸಾವಿರ ರೂಪಾಯಿ ಸಾಲ ಸಿಕ್ಕಿದರೆ ಸಾಕು, ಅವರು ತಮ್ಮ ಜೀವನಕ್ಕೆ ಏನೋ ಒಂದು ದಾರಿ ಮಾಡಿಕೊಂಡು ಬಿಡುತ್ತಾರೆ. ಇಂತಹ ಮೈಕ್ರೊಫ಼ೈನಾನ್ಸ್ ಮಾಡಲು ನೊಬೆಲ್ ಪ್ರಶಸಿ ಪಡೆದಿರುವ ಬಾಂಗ್ಲಾದ ಯೂನುಸ್‌ರು ಹುಟ್ಟಿ ಹಾಕಿರುವ ಗ್ರಾಮೀಣ ಬ್ಯಾಂಕಿನಿಂದ ಹಿಡಿದು ಅನೇಕ ಸಂಘ-ಸಂಸ್ಥೆಗಳು ವಿಶ್ವದಾದ್ಯಂತ ಇವೆ. ಇಂತಹ ಸಂಸ್ಥೆಗಳು ಕೀವ ವೆಬ್‌ಸೈಟಿನಲ್ಲಿ ತಮ್ಮಲ್ಲಿ ಸಾಲ ಕೇಳಿ ಬಂದ ಅರ್ಜಿದಾರರ ವಿವರಗಳನ್ನು ಹಾಕಿ ಹಣ ಸಂಗ್ರಹಿಸಬಹುದು. ಪ್ರಪಂಚದ ಯಾವ ಮೂಲೆಯಲ್ಲಿರುವವರೆ ಆಗಲಿ ಕೀವ ವೆಬ್‌ಸೈಟ್ ಮೂಲಕ ತಮಗಿಷ್ಟ ಬಂದವರಿಗೆ ತಮ್ಮ ಕೈಲಾದಷ್ಟು ಸಾಲ ಕೊಡಬಹುದು.
ಹೀಗೆ ಒಂದು ಉದಾಹರಣೆ: ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ಕದ್ರಿಪುರ ಗ್ರಾಮದ ಬಡರೈತ ಶಿವರಾಜು, ತನ್ನ ಹಳ್ಳಿಯಲ್ಲಿ ಕಿರಾಣಿ ಅಂಗಡಿ ತೆರೆಯಲು ತನಗೆ 12000 ರೂಪಾಯಿ ಸಾಲ ಬೇಕೆಂದು ಮುಳಬಾಗಿಲಿನ ಆಂಜನೇಯ ಗ್ರಾಮೀಣ ಸೇವಾಸಂಸ್ಥೆಗೆ ಅರ್ಜಿ ಸಲ್ಲಿಸುತ್ತಾನೆ. ಆ ಸಂಸ್ಥೆಯವರು ಆತನ ವಿವರಗಳನ್ನು ತೆಗೆದುಕೊಂಡು ಶಿವರಾಜುವಿಗೆ ಅಂಗಡಿ ಹಾಕಲು 300 ಡಾಲರ್ (ಅಂದರೆ 12000 ರೂಪಾಯಿ) ಸಾಲ ಬೇಕಾಗಿದೆ; ಆತನಿಗೆ ಹೆಂಡತಿ ಮತ್ತು ಇಬ್ಬರು ಮಕ್ಕಳಿದ್ದಾರೆ; ಸಾಲವನ್ನು 12-18 ತಿಂಗಳುಗಳಲ್ಲಿ ತೀರಿಸುತ್ತಾನೆ; ಎಂಬಂತಹ ವಿವರಗಳನ್ನು ಆತನ ಫೋಟೊ ಸಹಿತ ಕೀವ.ಆರ್ಗ್‌ನಲ್ಲಿ ಹಾಕುತ್ತಾರೆ. ಆಗ ಪ್ರಪಂಚದಲ್ಲಿಯ ಯಾರು ಬೇಕಾದರೂ ಇಂಟರ್‌ನೆಟ್ ಮೂಲಕ ನಮ್ಮ ಶಿವರಾಜುವಿಗೆ ಸಾಲ ಕೊಡಬಹುದು.
ಶಿವರಾಜುವಿನ ಪ್ರೊಫ಼ೈಲ್ ಅನ್ನು ಅಮೇರಿಕದಲ್ಲಿಯ ಬಿಲ್ ಜಾಬ್ಸ್ ನೋಡುತ್ತಾನೆ. ತಕ್ಷಣ ತನ್ನ ಕ್ರೆಡಿಟ್ ಕಾರ್ಡಿನಿಂದ 75 ಡಾಲರ್ ಸಾಲ ಕೊಡುತ್ತಾನೆ. ಒಂದಷ್ಟು ದಿನಗಳ ನಂತರ ಇಂಗ್ಲೆಂಡ್‌ನ ಡೇವಿಡ್ ಮತ್ತು ಕುವೈತ್‌ನ ನಾಸೆರ್ ತಲಾ 100 ಡಾಲರ್ ಸಾಲ ಕೊಡುತ್ತಾರೆ. ನಾಲ್ಕೈದು ದಿನಗಳ ನಂತರ ಇದನ್ನು ಗಮನಿಸಿದ ದೆಹಲಿಯಲ್ಲಿಯ ಪ್ರೇಮಲ್ ಅದ್ವಾನಿ ಉಳಿದ 25 ಡಾಲರ್ ಸಾಲ ಕೊಡುತ್ತಾನೆ. ಅಲ್ಲಿಗೆ ಒಟ್ಟು 300 ಡಾಲರ್ ಆಯಿತು. ಕೀವ ದವರು ಆ ಮೊತ್ತವನ್ನು ಮುಳಬಾಗಿಲಿನ ಸೇವಾಸಂಸ್ಥೆಗೆ ನೇರವಾಗಿ ಆನ್‌ಲೈನ್ ಪೇಮೆಂಟ್ ವ್ಯವಸ್ಥೆ ಇರುವ ಪೇಪ್ಯಾಲ್ ಅಕೌಂಟ್ ಮೂಲಕ ತಲುಪಿಸುತ್ತಾರೆ. ಮುಳಬಾಗಿಲಿನ ಸಂಸ್ಥೆ ಅದನ್ನು ಬಹಳ ಕಡಿಮೆ ಬಡ್ಡಿದರಕ್ಕೆ ಶಿವರಾಜುವಿಗೆ ನೀಡುತ್ತದೆ. ಪ್ರತಿ ತಿಂಗಳೂ ಶಿವರಾಜುವಿನಿಂದ ಸಾಲ ವಸೂಲು ಮಾಡುವ, ಅದನ್ನು ಕೀವ.ಆರ್ಗ್‌ಗೆ ತಲುಪಿಸುವ ಜವಾಬ್ದಾರಿ ಈ ಫ಼ೀಲ್ಡ್ ಪಾರ್ಟ್‌ನರ್ ಸಂಸ್ಥೆಯದೆ. ಮರುಪಾವತಿ ಆಗುತ್ತಿದ್ದ ಹಾಗೆ ಕೀವ ಅದನ್ನು ಸಾಲ ಕೊಟ್ಟವರಿಗೆ ತೀರಿಸುತ್ತ ಹೋಗುತ್ತದೆ. ಶಿವರಾಜು ಮತ್ತು ಮುಳಬಾಗಿಲಿನ ಸಂಸ್ಥೆಯ ಮಧ್ಯೆ ನಡೆಯುವ ವ್ಯವಹಾರದ ಹೊರತಾಗಿ ಮಿಕ್ಕೆಲ್ಲವೂ ಯಾರದೆ ಮಧ್ಯಸ್ಥಿಕೆ ಇಲ್ಲದೆ ಇಂಟರ್‌ನೆಟ್‌ನಲ್ಲಿಯೆ ನಡೆದು ಹೋಗಿಬಿಡುತ್ತದೆ.
ಸಾಲ ಕೊಡುವವರಿಗೆ ಇಲ್ಲಿ ಯಾವುದೆ ಬಡ್ಡಿ ನೀಡಲಾಗುವುದಿಲ್ಲ. ಸಾಲಗಾರ ಕೊಟ್ಟಾಗ ಮಾತ್ರ ಸಾಲವನ್ನು ತೀರಿಸಲಾಗುತ್ತದೆ. ಬಡವರಿಗೆ ಸಹಾಯವಾಗಲಿ ಎನ್ನುವುದಷ್ಟೆ ಇಲ್ಲಿ ಸಾಲ ನೀಡುವವರ ಸದಾಶಯವಾಗಿರುತ್ತದೆ. ಈ ಜನೋಪಯೊಗಿ ಯೋಜನೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಪೇಪ್ಯಾಲ್‌ನವರು ಯಾವುದೇ ರೀತಿಯ ಕಮಿಷನ್ ಅನ್ನು ಈ ಲೇವಾದೇವಿಯಲ್ಲಿ ಪಡೆಯುವುದಿಲ್ಲ. 100% ಹಣವನ್ನು ಕೀವದವರು ಅರ್ಜಿದಾರರಿಗೆ ಕೊಟ್ಟುಬಿಡುತ್ತಾರೆ. ಹಾಗಾದರೆ, ಕೀವ ಸಂಸ್ಥೆ ಮತ್ತು ಆ ವೆಬ್‌ಸೈಟ್ ಹೇಗೆ ನಡೆಯುತ್ತದೆ? ಸಾಲ ಕೊಟ್ಟವರು ಕೆಲವೊಮ್ಮೆ ಉದಾರ ಮನಸ್ಸಿನಿಂದ ಕೀವದವರು ಮಾಡುತ್ತಿರುವ ಕೆಲಸವನ್ನು ಮೆಚ್ಚಿಕೊಂಡು ಒಂದಿಷ್ಟು ಹಣವನ್ನು ದೇಣಿಗೆ ಕೊಡುತ್ತಾರೆ. ಹೀಗೆ ಅವರಿವರು ಕೊಡುವ ದೇಣಿಗೆಯಿಂದಲೆ ಈ ವೆಬ್‌ಸೈಟ್ ಮತ್ತು ಸಂಸ್ಥೆ ನಡೆಯುತ್ತಿದೆ. ಹಾಗಾಗಿ ಅದು ಒಂದೇ ಒಂದು ಪೈಸೆಯನ್ನು ಫ಼ೀಸ್ ಎಂದಾಗಲಿ, ಬಡ್ಡಿ ಎಂದಾಗಲಿ ಯಾರಿಂದಲೂ ಪಡೆಯುವುದಿಲ್ಲ.
ಪ್ರಾರಂಭವಾದ ಎರಡೇ ವರ್ಷಗಳಲ್ಲಿ ಪ್ರಪಂಚದಾದ್ಯಂತ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಜನರಿಗೆ ಕೀವ ವೆಬ್‌ಸೈಟ್ ಮುಖಾಂತರ ಈ ರೀತಿ ಮೈಕ್ರೊಸಾಲ ಒದಗಿಸಲಾಗಿದೆ. ಏಳೆಂಟು ಸಾವಿರದಿಂದ ಹಿಡಿದು 50 ಸಾವಿರದ ತನಕ ಸಾಲದ ಮೊತ್ತ ಇದೆ. ಕೊಟ್ಟವನು ಕೋಡಂಗಿ, ಈಸ್ಕೊಂಡೋನು ಈರಭದ್ರ ಎನ್ನುವ ಗಾದೆಯೆ ಇದೆಯಲ್ಲ? ಹಾಗಿದ್ದರೆ, ಎಷ್ಟು ಜನ ಸಾಲ ತೀರಿಸಲಾಗದೆ ಡೀಫ಼ಾಲ್ಟರ್‌ಗಳಾಗಿರಬಹುದು? ಎಷ್ಟು ಜನ ಕೈಯೆತ್ತಿ ಬಿಟ್ಟಿರಬಹುದು? ಇಲ್ಲಿಯತನಕ ಒಬ್ಬರೂ ಹಾಗೆ ಮಾಡಿಲ್ಲ ಎನ್ನುತ್ತದೆ ಅವರ ವೆಬ್‌ಸೈಟ್!!! To date, Kiva.org’s repayment rate is 100%.
ಅಂದ ಹಾಗೆ, ಕೀವ ದ ಆಡಳಿತ ಮಂಡಳಿಯಲ್ಲಿ ಹಲವರು ಭಾರತೀಯರೂ ಇದ್ದಾರೆ. ಸಂಸ್ಥೆಯ ಅಧ್ಯಕ್ಷ ಪ್ರೇಮಲ್ ಶಾ ಎಂಬ ಯುವ ಉದ್ಯಮಿ. ಭವಿಷ್ಯದ ದಿನಗಳಲ್ಲಿ ಕೀವ ಇನ್ನೂ ಬೆಳೆಯಲಿದೆ.