ತಿಮ್ಮಕ್ಕನಿಂದ ಕಲಿತಿದ್ದೇನು?
Posted Under: Uncategorized
(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಜುಲೈ 13, 2007 ರ ಸಂಚಿಕೆಯಲ್ಲಿನ ಲೇಖನ)
ಬಿಕ್ಕಲು ಚಿಕ್ಕಣ್ಣ ಮತ್ತು ತಿಮ್ಮಕ್ಕ ಎಂಬ ದಂಪತಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮಾಗಡಿ ತಾಲ್ಲ್ಲೂಕಿನ ಹುಲಿಕಲ್ ಗ್ರಾಮದಲ್ಲಿ ನೆಟ್ಟು ಬೆಳೆಸಿದ ಸಾಲು ಮರಗಳ ಬಗ್ಗೆ ಸುಮಾರು ಹದಿನೈದು-ಇಪ್ಪತ್ತು ವರ್ಷದ ಹಿಂದೆ ಪತ್ರಿಕೆಗಳ ಮೂಲಕ ಹೊರಪ್ರಪಂಚಕ್ಕೆ ತಿಳಿಯಲಾರಂಭಿಸಿದ್ದು. ಸಾರ್ವಜನಿಕ ಜೀವನದಲ್ಲಿ ನಿಸ್ವಾರ್ಥ ಎನ್ನುವುದೇ ಹುಸಿ ಆಗುತ್ತಿರುವ ಸದ್ಯದ ಭಾರತದಲ್ಲಿ ತಿಮ್ಮಕ್ಕ ಕಾಲಕ್ರಮೇಣ ನಿಸ್ವಾರ್ಥ ಸೇವೆಯ ಚಿಹ್ನೆಯಾಗಿ, ಸ್ಫೂರ್ತಿಯಾಗಿ, ಹೆಮ್ಮೆಯಾಗಿ ಬದಲಾಗುತ್ತ ಹೋದರು. ತಿಮ್ಮಕ್ಕನನ್ನು ನೆನೆಸಿಕೊಂಡಾಗ, ಸಾಲುಮರಗಳು ಮಾತುಕತೆಗೆ ನುಸುಳಿದಾಗ ಜನ ಇದ್ದಕ್ಕಿದ್ದಂತೆ ಒಳ್ಳೆಯವರಾಗಿ ಬಿಡುತ್ತಿದ್ದರು!!
ನನ್ನದೇ ಅವಿಭಜಿತ ಜಿಲ್ಲೆಗೆ ಸೇರಿದ್ದ ತಿಮ್ಮಕ್ಕನ ಬಗ್ಗೆ ನಾಲ್ಕು ವರ್ಷಗಳ ಹಿಂದೆ ಪತ್ರಿಕೆಗಳಲ್ಲಿ ಬಂದ ಸುದ್ದಿಯನ್ನು ಇಂಟರ್‌ನೆಟ್‌ನಲ್ಲಿ ಓದಿದ್ದೆ. ಅದು ಯಾವ ಕಾರಣಕ್ಕೂ ಸಂತಸ ಪಡಬಹುದಾದ, ಸಂಭ್ರಮಿಸಬಹುದಾದ ಸುದ್ದಿ ಆಗಿರಲಿಲ್ಲ. ಕೆಳಜಾತಿಗೆ ಸೇರಿದ್ದ ತಿಮ್ಮಕ್ಕ ಹುಲಿಕಲ್‌ನ ಬೇರೆ ಜಾತಿಯವರಿಗೆ ಸೇರಿದ್ದ ದೇವಸ್ಥಾನವನ್ನು ಪ್ರವೇಶಿಸಿಬಿಟ್ಟಿದ್ದಾಳೆ ಎಂದು ಆ ಊರಿನ ಮೇಲ್ಜಾತಿಯವರು ತಿಮ್ಮಕ್ಕನಿಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎನ್ನುವುದೆ ಆ ಸುದ್ದಿ. ಹಳ್ಳಿಯ ಇತರೆ ಜನರ ಅವಕೃಪೆಗೆ ಪಾತ್ರರಾದರೆ ಅಲ್ಲಿಯ ಜೀವನ ಎಷ್ಟು ಅಸಹನೀಯವಾಗಿರುತ್ತದೆ ಎನ್ನುವುದನ್ನು ಹಳ್ಳಿ ಜೀವನ ಕಂಡವರಿಗೆ ಹೇಳಬೇಕಾಗಿಯೇ ಇಲ್ಲ. ನಾನಂತೂ ಅದನ್ನು ಓದಿದ ಹಲವಾರು ದಿನಗಳ ಕಾಲ ಡಿಸ್ಟರ್ಬ್ ಆಗಿಬಿಟ್ಟಿದ್ದೆ.
ಇದಾದ ಎರಡು-ಮೂರು ತಿಂಗಳಿಗೆ ಬೆಂಗಳೂರಿಗೆ ನನ್ನ ಮದುವೆಗಾಗಿ ಬರಬೇಕಾಯಿತು. ಮದುವೆಯಾದ ಎರಡನೇ ದಿನಕ್ಕೆ ನಾನು ಕೈಗೊಂಡ ಮೊದಲ ತೀರ್ಥಯಾತ್ರೆ ಸಾಲುಮರದ ತಿಮ್ಮಕ್ಕನ ಹುಲಿಕಲ್‌ಗೆ. ತಿಮ್ಮಕ್ಕನೊಂದಿಗೆ ಕಳೆದ ಆ ಒಂದೆರೆಡು ಗಂಟೆಗಳ ಸಮಯ, ಈಗಲೂ ಹಚ್ಚಹಸಿರಾಗಿದೆ ಎನ್ನಬಹುದಾದ ನನ್ನ ಜೀವದ ಬೆರಳೆಣಿಕೆಯ ಘಟನೆಗಳಲ್ಲಿ ಒಂದು. ಆ ಸ್ವಾಭಿಮಾನಿ ತಿಮ್ಮಕ್ಕಳನ್ನು ಭೇಟಿಯಾದ ಮೇಲೆ ಆ ಅಜ್ಜಿಯೆಡೆಗಿನ ಗೌರವದ ಭಾವನೆ ಪ್ರೀತಿಗೂ, ಹೆಮ್ಮೆಗೂ ತಿರುಗಿತ್ತು.
ಅಂದು ತಿಮ್ಮಕ್ಕಳನ್ನು ನಾವು ಭೇಟಿಯಾದಾಗ ಅಜ್ಜಿ ಇನ್ನೂ ಹಳೆಯ ಮನೆಯಲ್ಲಿಯೆ ಇದ್ದಳು. ಆಕೆಗೆಂದು ಸರ್ಕಾರ ಕಟ್ಟಿಸುತ್ತಿದ್ದ ಮನೆಯ ಕಾಮಗಾರಿ ಇನ್ನೂ ನಡೆಯುತ್ತಿದ್ದು, ಕೆಲವು ಸಣ್ಣಪುಟ್ಟ ಕೆಲಸಗಳಷ್ಟೆ ಬಾಕಿ ಇದ್ದವು. ಹೆಚ್ಚೆಂದರೆ ಒಂದು ಇಲ್ಲವೆ ಎರಡು ತಿಂಗಳಿನ ಕೆಲಸ. ಆದರೆ ಬಹುಶಃ ವರ್ಷದ ನಂತರ ಇರಬೇಕು, ತಿಮ್ಮಕ್ಕ ಹೊಸ ಮನೆಗೆ ಹೋದ ಸುದ್ದಿ ಪತ್ರಿಕೆಗಳಲ್ಲಿ ಬಂತು. ಅಜ್ಜಿ ಅಂದು ಮನೆಯ ಪಕ್ಕವೆ ಪಾಯ ಹಾಕಿದ್ದ ಇನ್ನೊಂದು ಕಟ್ಟಡದ ಪಾಯ ತೋರಿಸಿ, ಇದು ಹೆರಿಗೆ ಆಸ್ಪತ್ರೆಗಾಗಿ ಎಂದಿದ್ದಳು. ಆದರೆ ಇವತ್ತದು ಹೆರಿಗೆ ಆಸ್ಪತ್ರೆ ಆಗಿಲ್ಲ; ಬದಲಿಗೆ ಕ್ವಾಟ್ರಸ್ ಆಗಿದೆಯಂತೆ!
ತಿಮ್ಮಕ್ಕನಿಗೆ ಎದುರಾದ, ಎದುರಾಗುತ್ತಿರುವ ತೊಂದರೆಗಳನ್ನು, ಆಕೆಯ ಹೆಸರಿನಲ್ಲಿಯೆ ಆಗಬೇಕಾಗಿದ್ದ ಹೆರಿಗೆ ಆಸ್ಪತ್ರೆ ಮತ್ತೇನೋ ಆಗಿರುವುದನ್ನು ಅರ್ಥ ಮಾಡಿಕೊಳ್ಳಬೇಕಾದರೆ ನಮಗೆ ನಮ್ಮ ಹಳ್ಳಿಗಳ ಸಾಮಾಜಿಕ, ರಾಜಕೀಯ ಪರಿಸ್ಥಿತಿಗಳ ಸ್ಪಷ್ಟ ಅರಿವಿರಬೇಕು. ತಿಮ್ಮಕ್ಕನಿಗೆ ಎಲ್ಲಾ ಕಡೆ ಹೆಸರಿರಬಹುದು. ಆದರೆ ತಿಮ್ಮಕ್ಕ ಶ್ರೀಮಂತಳಲ್ಲ. ಈ ದರಿದ್ರ ಜಾತಿವ್ಯವಸ್ಥೆಯಲ್ಲಿ ಆಕೆ ಮೇಲ್ಜಾತಿಯವಳೂ ಅಲ್ಲ. ಆಕೆಗೆ ಯಾವ ರಾಜಕೀಯ ಬಲವೂ ಇಲ್ಲ. ಇಲ್ಲಿಯ ತನಕ ತಾನಿರುವ ಪರಿಸರದಲ್ಲಿ ತಿಮ್ಮಕ್ಕನಿಗೆ ಗೌರವನೀಯ ಬದುಕು ಸಾಧ್ಯವಾಗಿದ್ದರೆ ಅದು ದೇಶಕ್ಕೆಲ್ಲ ತಿಮ್ಮಕ್ಕ ಗೊತ್ತಿರುವುದರಿಂದ. ಮಾಗಡಿಯ ಹಿಂದಿನ ಶಾಸಕ ರೇವಣ್ಣನವರಾಗಲಿ, ಈಗಿನ ಬಾಲಕೃಷ್ಣರಿಗಾಗಲಿ ತಿಮ್ಮಕ್ಕನಿಗೆ ನೈತಿಕ ಬೆಂಬಲ ಕೊಡುವುದು ನಿಜಕ್ಕೂ ಕಷ್ಟ. ನನ್ನ ತಿಳುವಳಿಕೆಯ ಪ್ರಕಾರ ಹುಲಿಕಲ್‌ನ ಹೆರಿಗೆ ಆಸ್ಪತ್ರೆಗೆ ತಿಮ್ಮಕ್ಕನ ಹೆಸರಿಡುವುದಾಗಲಿ, ತಿಮ್ಮಕ್ಕ ಹೇಳಿದಳೆಂದು ಅಲ್ಲಿ ಆಸ್ಪತ್ರೆ ಮಾಡುವುದಾಗಲಿ, ಇಲ್ಲವೆ ಅದಕ್ಕೆ ತಿಮ್ಮಕ್ಕನ ಹೆಸರಿಡುವುದಾಗಲಿ ಅಲ್ಲಿನ ಲೋಕಲ್ ಎಮ್.ಎಲ್.ಎ.ಗೆ ಓಟಿನ ಲೆಕ್ಕಾಚಾರದ ದೃಷ್ಟಿಯಿಂದ ಒಳ್ಳೆಯದಲ್ಲ. ಹಾಗಾಗಿಯೆ ಅದು ಇನ್ನೂ ಮುಂದಕ್ಕೆ ಹೋಗುತ್ತಿರುವುದು. ಜಾತಿಗಳಲ್ಲಿನ ಮತ್ತು ವ್ಯಕ್ತಿಗಳಲ್ಲಿನ ಒಳಗೊಳಗಿನ ಅಹಂ ಮತ್ತು ಹೊಟ್ಟೆಕಿಚ್ಚುಗಳೆ ಇವಕ್ಕೆ ಕಾರಣ ಎಂದು ನನ್ನ ಅಂದಾಜು.
ತಿಮ್ಮಕ್ಕ ಬೆಂಗಳೂರಿನ ವಿಕ್ಟೋರಿಯಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ, ಅದು ಪತ್ರಿಕೆಗಳಲ್ಲೆಲ್ಲ ಬಂದ ಮೇಲೆ ಕೆಲವು ಸೆಲೆಬ್ರೆಟಿಗಳೂ, ವಿಧಿಯಿಲ್ಲದೆ ಒಬ್ಬ ಮಂತ್ರಿಯೂ ಹೋಗಿ ಫೋಟೊ ತೆಗೆಸಿಕೊಂಡು ಬಂದಿದ್ದಾರೆ. ಆದರೆ ಇವರಿಗೆಲ್ಲ ತಿಮ್ಮಕ್ಕನ ಸ್ಫೂರ್ತಿ ಅರ್ಥವಾಗಿದೆಯೆ ಎನ್ನುವುದು ಸಂದೇಹ. ಇವತ್ತು ತಿಮ್ಮಕ್ಕನ ಊರು ಹೊಸದಾಗಿ ಸೃಷ್ಟಿಯಾಗುತ್ತಿರುವ ರಾಮನಗರ ಜಿಲ್ಲೆಗೆ ಒಳಪಡುತ್ತಿದೆ. ನಿಜವಾಗಲು ಸರ್ಕಾರಕ್ಕೆ ತಿಮ್ಮಕ್ಕ ಎಂಬ ವಿದ್ಯಮಾನ (phenomenon), ಸ್ಫೂರ್ತಿ ಅರ್ಥವಾಗಿದೆ ಎಂದಾದರೆ ತಿಮ್ಮಕ್ಕ ನೆಟ್ಟಂತಹ ಸಾಲುಮರಗಳನ್ನು ಇಡೀ ರಾಮನಗರ ಜಿಲ್ಲೆಯ ಪ್ರತಿಯೊಂದು ಗ್ರಾಮಪಂಚಾಯಿತಿಯೂ ಕೈಗೆತ್ತಿಕೊಳ್ಳಬೇಕು ಎಂಬ ಸಣ್ಣ ಸರ್ಕಾರಿ ಆದೇಶ ಹೊರಡಿಸಿದರೆ ಸಾಕು. ಐದಾರು ವರ್ಷಗಳಲ್ಲಿ ಆ ಜಿಲ್ಲೆಯ ಪ್ರತಿ ಊರಿನಲ್ಲಿ ಸಾಲುಮರಗಳು ನಲಿದಾಡುತ್ತಿರುತ್ತವೆ. ತಿಮ್ಮಕನ ಸಾಲುಮರದ ಕಾನ್ಸೆಪ್ಟ್ ಅನ್ನು ತಮ್ಮ ಅಜೆಂಡಾ ಆಗಿ ಗ್ರಾಮಪಂಚಾಯಿತಿಗಳು ಕೈಗೆತ್ತಿಕೊಳ್ಳುವುದೆ ಇವತ್ತು ನಾವು ತಿಮ್ಮಕ್ಕನಿಗೆ ತೊರಿಸಬಹುದಾದ ನಿಜವಾದ ಕೃತಜ್ಞತೆ. ತಿಮ್ಮಕ್ಕನ ಸ್ಫೂರ್ತಿಯನ್ನು ಮುಂದಕ್ಕೊಯ್ಯಬೇಕಾದದ್ದು ಸರ್ಕಾರದ, ಸಮಾಜದ ಕರ್ತವ್ಯ ಕೂಡ.
ತಿಮ್ಮಕ್ಕನಿಂದ ಹೇಗೆ ಸ್ಫೂರ್ತಿ ಪಡೆಯಬಹುದು ಎನ್ನುವುದು ನಮ್ಮ ರಾಜಕಾರಣಿಗಳಿಗೆ, ಅಧಿಕಾರಣಿಗಳಿಗೆ, ಗ್ರಾಮ ಪಂಚಾಯಿತಿಗಳಿಗೆ ಹೊಳೆಯದೆ ಇರುವಾಗ, ತಿಮ್ಮಕ್ಕ ಸಪ್ತಸಾಗರದಾಚೆಯ ಸಂಸ್ಥೆಯೊಂದಕ್ಕೆ ಒಂಬತ್ತು ವರ್ಷದ ಹಿಂದೆಯೆ ಸ್ಫೂರ್ತಿಯಾಗಿದ್ದಾಳೆ. “Thimmakka’s Resources for Environmental Education (TREE)” (ತಿಮ್ಮಕ್ಕ.ಆರ್ಗ್) ಎಂಬ ಈ ಲಾಭರಹಿತ ಸಂಸ್ಥೆಯನ್ನು ಅಮೇರಿಕದಲ್ಲಿ ರಿತು ಪ್ರೆಮಲಾನಿ ಎನ್ನುವವರು 1998 ರಲ್ಲಿಯೆ ಸ್ಥಾಪಿಸಿದ್ದಾರೆ. ಪರಿಸರಕ್ಕೆ ಸಂಬಂದಪಟ್ಟ ಸಮಸ್ಯೆಗಳಿಗೆ ಆರ್ಥಿಕವಾಗಿ ಸಾಧ್ಯವಾದ, ಕಾರ್ಯರೂಪಕ್ಕೆ ತರಬಹುದಾದ ಪರಿಹಾರಗಳ ಹುಡುಕಾಟದಲ್ಲಿ ತನ್ನನ್ನು ಇದು ತೊಡಗಿಸಿಕೊಂಡಿದೆ.