ಎಂಥವರಿಂದ ಆಳಲ್ಪಡುತ್ತಿದ್ದೇವೆ…
Posted Under: Uncategorized
(ವಿಕ್ರಾಂತ ಕರ್ನಾಟಕ – ಆಗಸ್ಟ್ 1೦, ೨೦೦೭ರ ಸಂಚಿಕೆಯಲ್ಲಿನ ಬರಹ)
ನೂರಾರು ಜನ ಶಾಸಕರು ಕುಳಿತು ಕೇಳುತ್ತಿದ್ದಾರೆ. ಹತ್ತಾರು ಜನ ವಿರೋಧ ಪಕ್ಷದ ಶಾಸಕರು ಎದ್ದು ನಿಂತು ಗಲಭೆ ಮಾಡುತ್ತಿದ್ದಾರೆ. ಚರ್ಚೆಗೆ ಉತ್ತರ ಕೊಡಲು ಎದ್ದು ನಿಂತ ಮುಖ್ಯಮಂತ್ರಿ, ಬಲಗೈಯಲ್ಲಿ ಒಂದು ಕಾಗದ ಪತ್ರವನ್ನು ಹಿಡಿದು, ಎಡಗೈಯನ್ನು ಬೀಡುಬೀಸಾಗಿ ಎಸೆಯುತ್ತ, ಎಡಗೈ ತೋರುಬೆರಳು ತೋರಿಸುತ್ತ, ತಮ್ಮ ಒಂದು ನಿಮಿಷದ ಅಮೋಘ ಸಂಭಾಷಣೆಯನ್ನು, ಎದುರು ಪಾರ್ಟಿಯವರ ಅಡೆತಡೆಗಳ ಮಧ್ಯೆ, ಹೀಗೆ ಒಪ್ಪಿಸುತ್ತಾರೆ:
“ಈಗ ನಾನು ಮಾತ್ನಾಡ್ತಿರೋದು ಬರೀ ಪೀಠಿಕೆ ಮಾತ್ರ…
ಬಹಳ ಬಹಳ ಇದೆ ಮಾತಾಡೋದಿಕ್ಕೆ…
ನಾನು ಮಾತನಾಡುವುದನ್ನು ಪೂರ್ತಿ ಮಾಡಿದ ಮೇಲೆ ಚಂದ್ರಬಾಬು,
ಅಸಲಿಗೆ ನಿಮ್ಮ ತಾಯ ಹೊಟ್ಟೆಯಲ್ಲಿ ಅನಗತ್ಯವಾಗಿ ಹುಟ್ಟಿದೆನೇನೊ,
ಈ ಲೋಕಕ್ಕೆ ಬರದೆ ಇದ್ದಿದ್ದರೆ ಚೆನ್ನಾಗಿತ್ತೇನೊ, ಅಂತಂದುಕೊಳ್ತೀಯ ನೀನು…
ಏನಯ್ಯ ನೀನು ಮಾತನಾಡೋದು???
ಕೇಳು, ಕೇಳು, ತೊಳೆದಾಕ್ಬಿಡ್ತೀನಿ ಇವತ್ತು ನಿನ್ನ. ತೊಳೆದಾಕ್ಬಿಡ್ತೀನಿ ನಿನ್ನ.
ನಿಮ್ಮ ತಾಯ ಹೊಟ್ಟೆಯಲ್ಲಿ ಹುಟ್ಟದೆ ಹೋಗಿದ್ರೆ ಚೆನ್ನಾಗಿತ್ತು ಅಂತಂದುಕೊಳ್ತೀಯ, ನೀನು…”
ನಿಮಗೆ ಈಗಾಗಲೆ ಗೊತ್ತಾಗಿರಬಹುದು, ಇದು ಆಂಧ್ರಪ್ರದೇಶದ ಮುಖ್ಯಮಂತ್ರಿ ರಾಜಶೇಖರ ರೆಡ್ಡಿಯವರ ಉವಾಚ ಎಂದು. “ವಿರೋಧ ಪಕ್ಷದವರು ನೀಚಾತಿನೀಚ ಆರೋಪಗಳನ್ನು ಮಾಡಿದಾಗ ನಾವು ಪ್ರಜೆಗಳಿಗಾದರೂ ನಮ್ಮ ನೀತಿನಿಜಾಯಿತಿ ಹೇಳಿಕೊಳ್ಳುವ ಅಗತ್ಯ ಇದೆಯೊ ಇಲ್ಲವೊ?” ಎಂದು ಕೇಳುತ್ತ, ಆ ಅಗತ್ಯವನ್ನು ಪೂರ್ತಿ ಮಾಡುವುದಕ್ಕೋಸ್ಕರ ಜುಲೈ ೨೩ ರಂದು ಆಂಧ್ರದ ವಿಧಾನಸಭೆಯಲ್ಲಿ ಅಲ್ಲಿನ ಮುಖ್ಯಮಂತ್ರಿ ತಮ್ಮ ನೀತಿ ನಿಜಾಯಿತಿ ನಿರೂಪಿಸಿಕೊಂಡ ರೀತಿ ಈ ಮೇಲಿನದು!!! ಸದನದಲ್ಲಿ ಮಾಡಿದ ಭಾಷಣಕ್ಕೆ ಎಲ್ಲಿಯೂ ಬಹುವಚನವೆ ಇಲ್ಲ!!!
ಇದೆಲ್ಲ ಆಗಿದ್ದು, ಕರ್ನಾಟಕದ ಬಿ.ಜೆ.ಪಿ. ಎಂ.ಎಲ್.ಸಿ.ಯಾದ ಜನಾರ್ಧನ ರೆಡ್ಡಿಯವರ ಓಬಳಾಪುರಂ ಗಣಿಗೆ ಸಂಬಂಧಿಸಿದ ವಿವಾದದಿಂದಾಗಿ. ಓಬಳಾಪುರಂ ಗಣಿ ವಿಚಾರದಲ್ಲಿ ಮತ್ತು ಜನಾರ್ಧನ ರೆಡ್ಡಿಯವರು ಆಂಧ್ರದಲ್ಲಿ ನಿರ್ಮಿಸಲಿರುವ “ಬ್ರಹ್ಮಣಿ ಸ್ಟೀಲ್ಸ್ ಲಿಮಿಟೆಡ್” ಕಂಪನಿಗೆ ಜಮೀನು ನೀಡುವಲ್ಲಿ ಅವ್ಯವಹಾರಗಳು ನಡೆದಿವೆ ಎಂದು ಆಂಧ್ರದ ವಿರೋಧ ಪಕ್ಷದವರು ಆರೋಪಗಳನ್ನು ಮಾಡುತ್ತಿದ್ದಾರೆ. ಅವರ ಪ್ರಕಾರ ಜನಾರ್ಧನ ರೆಡ್ಡಿಯವರ ಸ್ಟೀಲ್ ಫ್ಯಾಕ್ಟರಿ ಅಲ್ಲಿನ ಮುಖ್ಯಮಂತ್ರಿಯ “ಬೇನಾಮಿ ಉದ್ದಿಮೆ.”
ಆಂಧ್ರದ ಮುಖ್ಯಮಂತ್ರಿ ಹೀಗೆ ವಿಧಾನ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಯನ್ನು ತೊಳೆದ (???) ಮಾರನೆಯ ದಿನ ಚಂದ್ರಬಾಬು ನಾಯ್ಡುವಿನ ತೆಲುಗುದೇಶಂ ಪಕ್ಷದ ವಿದ್ಯಾರ್ಥಿ (?) ಘಟಕ ಕರ್ನಾಟಕದ ಎಂ.ಎಲ್.ಸಿ. ಜನಾರ್ಧನ ರೆಡ್ಡಿಯ ಹೈದರಾಬಾದ್ ಮನೆಯ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳುತ್ತಾರೆ. ಆ ಸಮಯದಲ್ಲಿ ತೆಲುಗುದೇಶಂ ಕಾರ್ಯಕರ್ತರು ತಮ್ಮ ಮನೆಯ ಮೇಲೆ ಕಲ್ಲೆಸೆದರು ಎಂದು ರೆಡ್ಡಿ ಅಲ್ಲಿನ ಪೋಲಿಸರಿಗೆ ದೂರು ಕೊಡುತ್ತಾರೆ. ಅದೇ ಸಮಯದಲ್ಲಿ ಟಿವಿಯವರ ಮುಂದೆ ಜನಾರ್ಧನ ರೆಡ್ಡಿಯವರು ತೆಲುಗಿನಲ್ಲಿ ಒಪ್ಪಿಸುವ ಸಂಭಾಷಣೆಯ ಅಕ್ಷರಕ್ಷರ ರೂಪ ಇದು:
“ನಾನು ನೀತಿನಿಜಾಯಿತಿಂದ ಕೆಲಸಗಳನ್ನು ಮಾಡುತ್ತಿರುವಾಗ ನಿನಗೆ ಭಯಪಡುವ ಅಗತ್ಯ ಇಲ್ಲ.
ನನ್ನನ್ನು ಭಯಪಡಿಸುತ್ತಿದ್ದೀಯಾ, ನೀನು?
ಇಂಡಸ್ಟ್ರಿ ಮಾಡಬೇಕು ಅಂದುಕೊಂಡು ಬಂದ ನನ್ನನ್ನು ವಾಪಸು ಕಳಿಸಬೇಕು ಅಂದುಕೊಳ್ತೀಯ ನೀನು, ಚಂದ್ರಬಾಬು?
ನೀನು ದ್ರೋಹಿ, ನೀನು ಹಂತಕ, ಎಂದು ನಾನು ಹೇಳಿದೆ. ನಿನ್ನಲ್ಲಿ ಸ್ವಲ್ಪವಾದರೂ ನೀತಿನಿಜಾಯಿತಿ ಇದ್ದರೆ ನೀನು ನಿರಪರಾಧಿ ಎಂದು ಸಾಬೀತು ಪಡಿಸಿಕೊಳ್ಳಬೇಕು.
ನಾಚಿಕೆ ಇಲ್ಲದೀರ ಇವತ್ತು ಹೈದರಾಬಾದಿನಲ್ಲಿ ನನ್ನ ಮನೆಯ ಮೇಲೆ ಕಲ್ಲು ಹೊಡೆಸುತ್ತಿದ್ದೀಯ ಅಂದರೆ ನಾನು ನಿಜವಾಗಲೂ ಹೇಳ್ತಿದ್ದೀನಿ ಚಂದ್ರಬಾಬು, ನೀನು ಈ ರಾಜ್ಯದ ಖೋಜಾ ನಂಬರ್ ಒನ್ ಎಂದು ನಾನು ಹೇಳುತ್ತಿದ್ದೇನೆ.”
“ರಾಜ್ಯದ ಜನರೆಲ್ಲರೂ ನಿನಗೆ ಮತಿಭ್ರಮಣೆಯಾಗಿದೆ ಎಂದು ಅಂದುಕೊಳ್ಳುತ್ತಿದ್ದಾರೆ.
ನಿಜವಾಗಲೂ ಹೇಳುತ್ತಿದ್ದೇನೆ, ನಿನ್ನನ್ನು ರಾಜ್ಯದ ಪ್ರಜೆಗಳೆಲ್ಲರೂ ಕಲ್ಲಲ್ಲಿ ಹೊಡೆದು, ನಿನ್ನ ತೆಲುಗುದೇಶಂ ಪಕ್ಷವನ್ನು ಮತ್ತು ನಿನ್ನನ್ನು ಸರ್ವನಾಶ ಮಾಡಿ, ನಿನ್ನನ್ನು ಹಾಳು ಮಾಡುವ ತನಕ ನಾನು ಬಿಡುವುದಿಲ್ಲ.
ಇವತ್ತು ತಮಾಷೆ ಮಾಡ್ತಿದ್ದೀಯ, ನೀನು?
ನನ್ನ ಮನೆಯ ಮೇಲೆ ದಾಳಿ ಮಾಡ್ತೀಯ, ದುರ್ಮಾರ್ಗನೆ?
ಹೈದರಾಬಾದಿನ ನನ್ನ ಮನೆಯ ಮೇಲೆ ಕಲ್ಲು ಹೊಡೆಸ್ತೀಯ? ಕಲ್ಲಲ್ಲಿ ಹೊಡೆಸ್ತೀಯ? ಕೈಲಾಗದ ಖೋಜಾ ನೀನು…..”
ಉಫ್……….
ಇದೇನು ಸಿನೆಮಾನಾ? ನಾಟಕವೆ? ಇವರೇನು ಪೌರಾಣಿಕ ನಾಟಕದ ಪಾತ್ರಧಾರಿಗಳೊ, ಜನಸೇವಕರೊ, ರಾಜಕಾರಣಿಗಳೊ, ಉದ್ದಿಮೆದಾರರೊ, ಪಾಳೆಯಗಾರರೊ? ಇವರು ಮೊದಲು ಉದ್ದಿಮೆದಾರರೊ ಅಥವ ಜನಸೇವಕರೊ? ಮೊದಲು ಜನಸೇವಕರೊ ನಂತರ ಉದ್ದಿಮೆದಾರರೊ? ರಾಜಕಾರಣಕ್ಕೆ ಬಂದು ಉದ್ದಿಮೆದಾರರಾದರೊ ಅಥವ ತಮ್ಮ ಉದ್ದಿಮೆಗಳ ಹಿತರಕ್ಷಿಸಿಕೊಳ್ಳಲು ರಾಜಕಾರಣಕ್ಕೆ ಇಳಿದರೊ? ಜನ ವೋಟು ನೀಡುವ ಮುಂಚೆ ಏನನ್ನು ಯೊಚಿಸುತ್ತಾರೆ? ನಮ್ಮ ಪ್ರತಿನಿಧಿಗಳಲ್ಲಿ ಹಣವಂತರೆ ಯಾಕೆ ಬಹಳ ಜನ ಇದ್ದಾರೆ? ಕಾನೂನು ರಚಿಸಬೇಕಾದವರು, ತಿದ್ದಬೇಕಾದವರು ಮಾಡುತ್ತಿರುವ ಕೆಲಸಗಳೇನು?
೬೦ ವರ್ಷಗಳ ಹಿಂದೆ ನಮ್ಮ ಹಿರಿಯರು ಬ್ರಿಟಿಷರ ಆಳ್ವಿಕೆಯಿಂದ ದೇಶವನ್ನು ಬಿಡುಗಡೆ ಮಾಡಿ, ಬೇರೆ ಯಾವ ತರಹದ ಆಡಳಿತ ವ್ಯವಸ್ಥೆಗೂ ತಲೆಬಾಗದೆ, ನಮ್ಮನ್ನು ನಾವೆ ಆಳಿಕೊಳ್ಳುವ, ಸ್ವರಾಜ್ಯದ ನಿಜಾರ್ಥವಾದ “ಪ್ರಜಾಪ್ರಭುತ್ವ” ವ್ಯವಸ್ಥೆಯನ್ನು ನಮಗೆ ನೀಡಿದರು. ಆದರೆ, ಇವತ್ತು ಏನಾಗಿದೆ? ಪಕ್ಕದ ಆಂಧ್ರದ ಮಾತುಗಾರಿಕೆ ನೋಡಿ: ಅಲ್ಲಿ ಈ ಮಾತುಗಾರಿಕೆಗೆ ಮೊದಲ ಮೂಲಕಾರಣ ಹಣದ, ಅಧಿಕಾರದ ಮದ. ಅದೇ ಮದ ಕರ್ನಾಟಕವನ್ನೂ ಆವರಿಸಿಕೊಳ್ಳುತ್ತಿದೆ. ಇವತ್ತು ಕರ್ನಾಟಕದ ಪ್ರಮುಖ ಮೂರೂ ಪಕ್ಷಗಳಲ್ಲಿನ ಬಹುಪಾಲು ನಾಯಕರು ಮತ್ತು ಅವರ ಕುಟುಂಬಗಳು ಕೋಟ್ಯಾಂತರ ರೂ ಆಸ್ತಿಗಳಿಗೆ, ಉದ್ದಿಮೆಗಳಿಗೆ ಒಡೆಯರು. ಇವತ್ತು ಹಣವಿಲ್ಲದೆ ಯಾವ ನಾಯಕರೂ ರಾಜಕೀಯ ಮಾಡುತ್ತಿಲ್ಲ. ಹಣವಿಲ್ಲದೆಯೆ, ಯಾವುದೋ ಒಂದು ಅಲೆ ಅಥವ ವಿಷಯಾಧಾರಿತವಾಗಿ ಗೆಲ್ಲುವ ಒಬ್ಬರು ಇಬ್ಬರೂ ಸಹ ಮುಂದಿನ ಸಲದ ಚುನಾವಣೆಯನ್ನು ಹಣದಿಂದಲೆ ಗೆಲ್ಲುವ ಮಟ್ಟಕ್ಕೆ ಬದಲಾಗುತ್ತಿದ್ದಾರೆ. ಹಣದ ಆಧಾರದ ಮೇಲೆ ನಡೆಯುವ ಇಂತಹ ಅಧಿಕಾರಕ್ಕೆ ಪ್ರಜಾಪ್ರಭುತ್ವ ಎನ್ನಲು ಸಾಧ್ಯವೆ?
ಇನ್ನು, ನಮ್ಮ ನಾಡಿನ ಸರ್ವೋಚ್ಚ ನಾಯಕರಾದ ಮುಖ್ಯಮಂತ್ರಿಗಳಂತೂ ಜನಾದೇಶವಿಲ್ಲದೆ, ಪ್ರಜಾಪ್ರಭುತ್ವವನ್ನು ಅಣಕಿಸುವಂತೆ ನಮ್ಮ ಸರ್ವೋಚ್ಚ ನಾಯಕರಾಗುತ್ತಿದ್ದಾರೆ. ಯಾರಿಗೆ ಮುಖ್ಯಮಂತ್ರಿ ಆಗಬೇಕು ಎಂಬ ಜನಾದೇಶವಿಲ್ಲವೊ ಅವರೆಲ್ಲ ಹಣ ಚೆಲ್ಲಬಲ್ಲ ತಾಕತ್ತಿನಿಂದ ಇಲ್ಲವೆ ನಂಬರ್‌ಗೇಮ್‌ನಿಂದ ಮುಖ್ಯಮಂತ್ರಿ ಆಗುತ್ತ ಬರುತ್ತಿದ್ದಾರೆ. ಕಳೆದ ೩೦ ವರ್ಷಗಳ ನಮ್ಮ ಇತಿಹಾಸ ತೆಗೆದುಕೊಂಡರೆ, ೧೯೭೮ ರಲ್ಲಿ ದೇವರಾಜ್ ಅರಸ್, ೧೯೮೫ ರಲ್ಲಿ ಹೆಗಡೆ, ೧೯೮೯ ರಲ್ಲಿ ವೀರೇಂದ್ರ ಪಾಟೀಲ್, ೧೯೯೪ ರಲ್ಲಿ ದೇವೇಗೌಡ, ೧೯೯೯ ರಲ್ಲಿ ಎಸ್ಸೆಮ್ ಕೃಷ್ಣ ಬಿಟ್ಟರೆ, ಮಿಕ್ಕ ಅವಧಿಗಳಲ್ಲಿ ಮುಖ್ಯಮಂತ್ರಿಯಾದ ಯಾರಿಗೂ “ಇವರೇ ನಮ್ಮ ಮುಖ್ಯಮಂತ್ರಿಗಳಾಗಬೇಕು,” ಎಂಬ ನೇರ ಜನಾದೇಶ ಇರಲಿಲ್ಲ. ೧೯೮೦ ರಲ್ಲಿ ಗುಂಡೂರಾವ್, ೧೯೮೩ ರಲ್ಲಿ ರಾಮಕೃಷ್ಣ ಹೆಗಡೆ, ೧೯೮೮ ರಲ್ಲಿ ಬೊಮ್ಮಾಯಿ, ೧೯೯೦ ರಲ್ಲಿ ಬಂಗಾರಪ್ಪ, ೧೯೯೨ ರಲ್ಲಿ ವೀರಪ್ಪ ಮೊಲಿ, ೧೯೯೬ ರಲ್ಲಿ ಜೆ.ಎಚ್. ಪಟೇಲ್, ೨೦೦೪ ರಲ್ಲಿ ಧರಮ್ ಸಿಂಗ್, ೨೦೦೬ ರಲ್ಲಿ ಮುಖ್ಯಮಂತ್ರಿಯಾದ ಈಗಿನ ಮುಖ್ಯಮಂತ್ರಿ ಕುಮಾರಸ್ವಾಮಿ; ಇವರ್ಯಾರ ಮುಖಂಡತ್ವದಲ್ಲೂ ಅವರ ಪಕ್ಷಗಳಿಗೆ ಜನ ಬಹುಮತ ನೀಡಿಲ್ಲ. ಇವರೆಲ್ಲ ಮುಖ್ಯಮಂತ್ರಿಯಾದದ್ದು, ಇಲ್ಲವೆ ಹೈಕಮಾಂಡ್ ಕೃಪೆಂದಾಗಿ, ಇಲ್ಲವೆ ಜಾಗ ಖಾಲಿ ಬಿದ್ದಿದ್ದರಿಂದಾಗಿ, ಇಲ್ಲವೆ ರಾಜಕಾರಣದಲ್ಲಿಯಷ್ಟೆ ಸಾಧ್ಯವಾಗುವ ತಂತ್ರ-ಕುತಂತ್ರ-ಹಣ ಚೆಲ್ಲಾಟ-ಪ್ರಲೋಭನೆ-ದಾದಾಗಿರಿ-ಮ್ಯೂಸಿಕ್ ಛೇರ್ ಆಟ: ಮುಂತಾದ ಪ್ರಜಾಪ್ರಭುತ್ವ ಎಂದು ಹೇಳಲಿಕ್ಕೇ ಆಗದ ವಿಚಿತ್ರ ಸನ್ನಿವೇಶಗಳಿಂದಾಗಿ. ಇವರಲ್ಲಿ ಕೆಲವರಿಗೆ ತಮ್ಮ ಕೈಲಿ ಬಸಿರು ಮಾಡಲಾಗದಿದ್ದರೂ, ಇನ್ನೊಬ್ಬರು ಮಾಡಿದ ಬಸಿರನ್ನು ತಾವೆ ಮಾಡಿದ್ದು ಎಂದು ಯಾವ ನಾಚಿಕೆಲ್ಲದೆ ಹೇಳಿಕೊಂಡು, ಓಡಿ ಬಂದು ಕುರ್ಚಿ ಹಿಡಿದುಕೊಂಡ ಮಹಾಶಯರು!!!
ಇವುಗಳಿಂದಾಗಿ ಕಮರುತ್ತಿರುವುದು ರಾಜ್ಯದ ರಾಜಕೀಯ-ಸಾಮಾಜಿಕ-ಬೌದ್ಧಿಕ ಪ್ರಗತಿ ಮತ್ತು ಪ್ರಜಾಪ್ರಭುತ್ವದ ಆಶಯಗಳು.
ದೇಶ ಸ್ವತಂತ್ರಗೊಂಡಾಗ ನಮ್ಮ ಹಿರಿಯರು ರಾಷ್ಟ್ರದ ಪ್ರಜೆಗಳಿಗೆ ಕೊಟ್ಟ ಅಧಿಕಾರ ಇವತ್ತು ನಮ್ಮ ದೇಶದ ಮತ್ತು ನಮ್ಮ ರಾಜ್ಯದ ಬಹುಪಾಲು ಕಡೆಗಳಲ್ಲಿ ಹಣವಂತರ, ಶೋಷಕರ, ಜನರ ಸಂವೇದನೆಗಳನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುವವರ ಕೈಗೆ ಹೋಗಿಬಿಟ್ಟಿದೆ.
ಈಗ, ಸ್ವಾತಂತ್ರ್ಯದ ೬೦ ವರ್ಷಗಳ ನಂತರ, ಹೊಸ “ಸ್ವರಾಜ್ಯ”ದ ಬಗ್ಗೆ ಜನ ಯೋಚಿಸಬೇಕಿದೆ. People got to take back their state and the country. ಅದಕ್ಕೆ ಮಾಡಬೇಕಿರುವುದು ಇಷ್ಟೆ: ಅಧಿಕಾರವನ್ನು ಕೇವಲ ಹಣಚೆಲ್ಲಬಲ್ಲ ತಾಕತ್ತಿರುವವರ ಕೈಗೆ ಕೊಡದೆ, ತಮ್ಮಲ್ಲಿಯ ನೇರವಂತಿಕೆಯ, ಸಮಾಜಸೇವಾಗುಣದ ಜನರ ಕೈಗೆ ನೀಡುವ ಕೆಲಸ. ತಾವು ಮಾಡಿದ ತಪ್ಪಿಗೆ ತಮ್ಮ ಪ್ರತಿನಿಧಿಗಳೆನಿಸಿಕೊಂಡವರನ್ನು ಜನ ದೂರಬಾರದು. ಯಾಕೆಂದರೆ, ಅವರಿಗೆ ಅಧಿಕಾರ ಕೊಡುವವರೆ ಪ್ರಜೆಗಳು.
ಅದಾಗದಿದ್ದರೆ, ಆಂಧ್ರದ ಘಟನೆಗಳು ನಮ್ಮಲ್ಲೂ ಘಟಿಸಲು ಹೆಚ್ಚಿನ ಸಮಯ ಬೇಕಿಲ್ಲ.