ಜೀವಜಲಕ್ಕಾಗಿ ೧೬ ದೇಶಗಳಲ್ಲಿ ಓಡುತ್ತಿರುವ ಕೋಲಾರದ ಸುನೀಲ್…
Posted Under: Uncategorized
(ವಿಕ್ರಾಂತ ಕರ್ನಾಟಕ – ಆಗಸ್ಟ್ 17, 2007ರ ಸಂಚಿಕೆಯಲ್ಲಿನ ಬರಹ)
- ನಾವು ನೀರಿನಂತೆ ಓಡುತ್ತೇವೆ. ನೀರಿಗಾಗಿ ಓಡುತ್ತೇವೆ.
- ನಮ್ಮ ಭೂಮಿಯ ಮೇಲಿನ ಪ್ರತಿ ಐವರಲ್ಲಿ ಒಬ್ಬರನ್ನು ಕಾಡುತ್ತಿರುವ ಸಮಸ್ಯೆಯ ತುರ್ತು-ಸಂದೇಶವನ್ನು ನಾವು ಸಾಗುತ್ತಿರುವ ಪ್ರತಿ ಊರಿನ ಪ್ರತಿಯೊಬ್ಬರಿಗೂ ತಲುಪಿಸಲು ನಾವು ಓಡುತ್ತಿದ್ದೇವೆ.
- ಶುದ್ಧ ಕುಡಿಯುವ ನೀರು ಇಲ್ಲದೆ ಪ್ರತಿದಿನವೂ ಸಾಯುತ್ತಿರುವ ಮಕ್ಕಳ, ಅಪ್ಪಅಮ್ಮಂದಿರ, 6000 ಮನುಷ್ಯರ ನೆನಪಿಗಾಗಿ ನಾವು ಓಡುತ್ತಿದ್ದೇವೆ.
- ನಾವು ಓಡುತ್ತಿರುವುದೇಕೆಂದರೆ, ನಮ್ಮ ಉಳಿವಿಗೆ ಅವಶ್ಯವಾದ ನೀರು, ಮತ್ತು ಸಮಯ, ನಮ್ಮ ಕೈಮೀರಿ ಹೋಗುತ್ತಿದೆ.
ಸಂಕಷ್ಟದೊಂದಿಗೆ ಆರಂಭವಾಗಿ ಭರವಸೆಯೊಂದಿಗೆ ಮುಗಿಯುವ ಕತೆ ಹೇಳಲು ನಾವು ಓಡುತ್ತಿದ್ದೇವೆ. - ಈ ಕತೆಯಲ್ಲಿ ನಿಮ್ಮನ್ನೂ ಸೇರಿಸಿಕೊಳ್ಳಲು ಓಡುತ್ತಿದ್ದೇವೆ. ಸಮಸ್ಯೆಗೆ ಪರಿಹಾರ ನೀವೇ ಆಗಿದ್ದೀರಿ. ಬದ್ಧತೆ ಒಂದೆ ನಮಗಿರುವ ಅಡ್ಡಿ.
- ಇಪ್ಪತ್ತು ವರ್ಷಗಳ ನಂತರ ವಿಶ್ವದ ಬೇರೆಬೇರೆ ಕಡೆಯ 20 ಕೋಟಿ ಜನರಿಗೆ ನೀರು ತರಲು, ಅಂದರೆ ಜೀವ ತರಲು, ನಾವು ಒಟ್ಟಾಗಿ ಕೈಜೋಡಿಸಿದ್ದೇವೆ; ಎಂಬಂತೆ ಮುಗಿಯುವ ಕತೆಯನ್ನು ಹೇಳಲು ನಾವು ಓಡುತ್ತೇವೆ.
- ನಾವು ನಮ್ಮೊಂದಿಗೆ ಒಯ್ಯುವ ಬಟಾನ್ ಮೇಲೆ ಬರೆದಿರುವ ಧನ್ಯವಾದಪೂರ್ವಕ ಪ್ರಾರ್ಥನೆ ಹೀಗಿದೆ: “ನೀರೆ ಜೀವ;” ಅದಕ್ಕಾಗಿ ನಾವು ಓಡುತ್ತಿದ್ದೇವೆ.
- “ನಮ್ಮ ಬಾಯಾರಿಕೆಯನ್ನು ತಣಿಸುವ ಮತ್ತು ನಮಗೆ ಶಕ್ತಿ ನೀಡುವ ವಿಶ್ವದ ಎಲ್ಲಾ ನೀರಿಗೂ ನಾವು ಧನ್ಯವಾದ ಅರ್ಪಿಸುತ್ತೇವೆ. ಮಳೆ ಮತ್ತು ಜಲಪಾತಗಳು, ಇಬ್ಬನಿ ಮತ್ತು ತೊರೆಗಳು, ನದಿಗಳು ಮತ್ತು ಸಾಗರಗಳು; ಹೀಗೆ ಅನೇಕ ರೂಪಗಳಲ್ಲಿರುವ ನೀರಿನ ಬಲ ನಮಗೆ ಗೊತ್ತು. ನೀರಿನ ಚೈತನ್ಯಕ್ಕೆ ಒಮ್ಮನಸ್ಸಿನಿಂದ ನಮ್ಮ ಶುಭಕಾಕಾಮನೆಗಳನ್ನು ಮತ್ತು ಧನ್ಯವಾದಗಳನ್ನು ಅರ್ಪಿಸುತ್ತೇವೆ.
- ಈಗ ನಮ್ಮ ಮನಸ್ಸುಗಳು ಒಂದಾಗಿದೆ.”
ರಾತ್ರಿ ಹಗಲೆನ್ನದೆ, ಪ್ರತಿ ಒಂದೆರಡು ಗಂಟೆಗಳಿಗೆ ತಮ್ಮ ಕೈಯಲ್ಲಿಯ ಬಟಾನ್ (ರಿಲೇ ಓಟದಲ್ಲಿ ಕೊಡುವ ದಂಡ) ಅನ್ನು ಇನ್ನೊಬ್ಬರಿಗೆ ದಾಟಿಸುತ್ತ, ಜನರ ಸಮ್ಮುಖದಲ್ಲಿ ಈ ಮೇಲಿನ ಸಂದೇಶವನ್ನು ಗಟ್ಟಿಯಾಗಿ ಹೇಳಿ, ಇಪ್ಪತ್ತು ಜನ ಓಟಗಾರರು ದಿನದ ಇಪ್ಪತ್ತನಾಲ್ಕು ಗಂಟೆಗಳೂ ಸರದಿಯ ಪ್ರಕಾರ ಓಡುತ್ತಿದ್ದಾರೆ. ಈ ಇಪ್ಪತ್ತು ಜನ ಓಟಗಾರರಲ್ಲಿ 23 ವರ್ಷದ ಅಮೇರಿಕನ್ ಹುಡುಗಿ ಎಲ್ಲರಿಗಿಂತ ಚಿಕ್ಕವಳು. ಆಕೆಯ ಸದ್ಯದ ಕರ್ಮಭೂಮಿ ಶ್ರೀಲಂಕ. 60 ವರ್ಷದ ಅಮೇರಿಕನ್ ಒಬ್ಬರು ತಂಡದಲ್ಲಿನ ಹಿರಿಯ ಓಟಗಾರ. 57 ವರ್ಷದ ಇಬ್ಬರು ಓಡುತ್ತಿದ್ದಾರೆ: ಒಬ್ಬರು ಅಮೇರಿಕನ್ ಮಹಿಳೆ ಮತ್ತು ಇನ್ನೊಬ್ಬರು ಹಾಲೆಂಡಿನ ವ್ಯಕ್ತಿ. ಮಿಕ್ಕವರೆಲ್ಲ 30 ರ ಅಸುಪಾಸಿನವರು.
ಒಟ್ಟು ಹನ್ನೆರಡು ದೇಶಗಳ ಇಪ್ಪತ್ತು ಓಟಗಾರರು, ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ತೊಡಗಿಸಿಕೊಂಡಿರುವ ಅಮೇರಿಕದಲ್ಲಿನ ಬ್ಲೂ ಪ್ಲಾನೆಟ್ ರನ್ ಫೌಂಡೇಷನ್ (blueplanetrun.org) ಆಯೋಜಿಸಿರುವ 95 ದಿಗಳ ನಿರಂತರ ನೀಲ ಗ್ರಹ ಓಟದಲ್ಲಿ ಓಡುತ್ತಿದ್ದಾರೆ. ತಂಡದಲ್ಲಿ ಒಬ್ಬ ಭಾರತೀಯನೂ ಇದ್ದಾನೆ. ಆತ ಕನ್ನಡಿಗನೆ. ನಮ್ಮ ಕೋಲಾರದ ಬಳಿಯ ಹೊಗರಿ ಗ್ರಾಮದ ಯುವಕ. ಹೇಳಬೇಕೆಂದರೆ, ಆತ ಇನ್ನೂ ಮದುವಣಿಗ! ಮದುವೆಯಾದ ಇಪ್ಪತ್ತು ದಿನಗಳಿಗೇ ಓಡಲು ಪ್ರಾರಂಭಿಸಿದ್ದಾನೆ, ಸುನೀಲ್ ಜಯರಾಜ್.
ಕುಡಿಯುವ ನೀರಿನ ಸಮಸ್ಯೆ, ವಿಶೇಷವಾಗಿ ಬಯಲುಸೀಮೆಗಳಲ್ಲಿ ಇವತ್ತಿನದಲ್ಲ. ಜನ ಹೆಚ್ಚಾದಷ್ಟೂ ಈ ಸಮಸ್ಯೆ ಹೆಚ್ಚಾಗುತ್ತದೆ. ಇಪ್ಪತ್ತು ವರ್ಷಗಳ ಹಿಂದೆ ನಮ್ಮ ಹಳ್ಳಿಯ ಕತೆಯನ್ನೇ ತೆಗೆದುಕೊಂಡರೆ, ಬೆಳಕು ಹರಿದ ತಕ್ಷಣ ನಮ್ಮ ಹಳ್ಳಿಯ ಹೆಣ್ಣುಮಕ್ಕಳು ಬಿಂದಿಗೆ ಹಿಡಿದುಕೊಂಡು ಊರಿನ ಹೊರವಲಯದಲ್ಲಿದ್ದ ಬಾವಿಯತ್ತ ಹೊರಡುತ್ತಿದ್ದರು. ಅದು ಕಲ್ಲುಕಟ್ಟಡದ ಬಾವಿ. ಅದಕ್ಕೆ ಮೆಟ್ಟಲುಗಳಿದ್ದವು. ಆ ಬಾವಿಯವರು ತೋಟ ಮಾಡುತ್ತಿದ್ದಿದ್ದರಿಂದ ಯಾವಾಗಲೂ ನೀರು ಇಪ್ಪತ್ತುಮುವ್ವತ್ತು ಅಡಿ ಕೆಳಗೇ ಇರುತ್ತಿತ್ತು. ಪ್ರತಿದಿನ ಮನೆಗೆ ಬೇಕಾದ ನೀರನ್ನು ಅಷ್ಟು ದೂರದಿಂದ ಎರಡು ಮೂರು ಸಲ ಹೋಗಿ ಹೊತ್ತು ತರುತ್ತಿದ್ದರು. ಇದು ಸವರ್ಣೀಯರ ಕತೆ. ಇನ್ನು ದಲಿತರದು ಬೇರೆಯದೇ ಬಾವಿ. ಒಮ್ಮೊಮ್ಮೆ ಈ ಬಾವಿಗಳಿಗೆ ಯಾರಾದರೂ ಹಾರಿ ಆತ್ಮಹತ್ಯೆ ಮಾಡಿಕೊಂಡರೆ ಆ ಬಾವಿಯ ನೀರನ್ನು ಕಾಲಿ ಮಾಡುವ ತನಕ ಇನ್ನೂ ದೂರದ ಬಾವಿಗಳತ್ತ ನೀರೆಯರ ಪಯಣ ಸಾಗುತ್ತಿತ್ತು.
ಈ ಪರಿಸ್ಥಿತಿ ಸುಧಾರಿಸಿದ್ದು ನಜೀರ್‌ಸಾಬ್ ಬೋರ್‌ವೆಲ್‌ಗಳು ಬಂದ ಮೇಲೆಯೆ. ಊರಿನ ಮಧ್ಯೆ ಬೋರ್‌ವೆಲ್ ಹಾಕಿಸಿದರು. ನೀರೇನೊ ಸಿಕ್ಕಿತು; ಆದರದು ಉಪ್ಪು ನೀರು. ಕುಡಿಯುವ ನೀರಿಗೆ ಹಳೆಯ ಪರಿರಿಸ್ಥಿತಿಯೆ ಮುಂದುವರೆಯಿತು. ಮತ್ತೆರಡು-ಮೂರು ವರ್ಷದ ನಂತರ ಇನ್ನೊಂದು ಕೊಳವೆ ಬಾವಿ ಕೊರೆಯಿಸಿ, ಕೈಪಂಪ್ ಹಾಕಿಸಿತು ಸರ್ಕಾರ. ಅದರಲ್ಲಿ ಸಿಹಿನೀರು ಸಿಕ್ಕಿತು. ಇದು ಸವರ್ಣಿಯರಿಗೆ ಮೀಸಲು. ವರ್ಷಗಳ ನಂತರ ದಲಿತರಿಗೆಂದೇ ಇನ್ನೊಂದು ಬೋರ್‌ವೆಲ್ ಹಾಕಿಸಿದರು.
ನಮ್ಮ ರಾಜ್ಯದಲ್ಲಿ ಕೆಲವು ಕಡೆ ಪರಿಸ್ಥಿತಿ ಸುಧಾರಿಸುತ್ತ ಹೋಗಿದ್ದಕ್ಕೆ ಉದಾಹರಣೆಯಾಗಿ ಹತ್ತಾರು ವರ್ಷಗಳ ಹಿಂದೆ ನಮ್ಮೂರಿಗೆ ಓವರ್‌ಹೆಡ್ ಟ್ಯಾಂಕ್ ಬಂತು. ದುಡ್ಡಿದ್ದವರು ಮನೆಗಳಿಗೇ ನಲ್ಲಿ ಹಾಕಿಸಿಕೊಂಡರು. ಮಿಕ್ಕವರು ಬೀದಿಯಲ್ಲಿನ ನಲ್ಲಿಗಳ ಮುಂದೆ ಸಾಲು ನಿಂತರು. ಈಗ ಬೋರ್‌ವೆಲ್ ಮೋಟಾರ್ ಕೆಟ್ಟರೂ, ಗ್ರಾಮ ಪಂಚಾಯಿತಿಯವರು ಟ್ಯಾಂಕ್‌ಗಳಲ್ಲಿ ನೀರು ತರಿಸಿ ಜನರ ದಾಹ ಮತ್ತು ಇತರ ಅಗತ್ಯಗಳನ್ನು ತಣಿಸುತ್ತಾರೆ. ನೀರಿನ ಸಮಸ್ಯೆ ಬಂತೆಂದರೆ, ಇತರ ಎಲ್ಲಾ ಸಮಸ್ಯೆಗಳ ಪ್ರಾಮುಖ್ಯತೆ ಕೆಳಗಿಳಿಯುತ್ತದೆ. ಆದರೆ ಕರ್ನಾಟಕದ ಎಲ್ಲಾ ಕಡೆಯೂ ಸ್ಥಿತಿ ಹೀಗೆ ಸುಧಾರಿಸಿಲ್ಲ. ಸಂಡೂರಿನ ತನ್ನ ಹಳ್ಳಿಯಲ್ಲಿ ಮೈಲು ದೂರದಿಂದ ನೀರು ಹೊತ್ತು ತರುತ್ತಿರುವ ನಾಡೋಜೆ, ಬುರ್ರಕಥ ಈರಮ್ಮನ ಚಿತ್ರ ಇತ್ತೀಚೆಗೆ ತಾನೆ ಪತ್ರಿಕೆಯೊಂದರಲ್ಲಿ ಬಂದಿತ್ತು!
ಬಹುಶಃ ಇಂತಹದೇ ಹಳ್ಳಿಯಿಂದ ಬಂದವರಿರಬೇಕು ಸುನೀಲ್ ಸಹ. ಬೆಂಗಳೂರಿನ ಆರ್.ವಿ. ಇಂಜಿನಿಯರಿಂಗ್ ಕಾಲೇಜಿನಿಂದ ಇಂಡಸ್ಟ್ರಿಯಲ್ ಇಂಜಿನಿಯರಿಂಗ್‍ನಲ್ಲಿ ಪದವಿ ಗಳಿಸಿರುವ ಇವರು, ಈಗ “ಜಲಸಂಪನ್ಮೂಲ ನಿರ್ವಹಣೆ” ವಿಷಯದ ಮೇಲೆ ಅಮೇರಿಕದ ಮಿಷಿಗನ ವಿಶ್ವವಿದ್ಯಾಲಯದಲ್ಲಿ ಪಿ.ಹೆಚ್.ಡಿ. ಮಾಡುತ್ತಿದ್ದಾರೆ. ಬಿಹಾರ್, ಬಾಂಗ್ಲಾದೇಶ, ನೇಪಾಳ; ಇವು ತಮ್ಮ ಥೀಸಿಸ್‌ಗಾಗಿ ಅವರು ಕೆಲಸ ಮಾಡುತ್ತಿರುವ ಸ್ಥಳಗಳು. ಹಾಗೆಯೆ ಕೋಲಾರದ “ಸಮಗ್ರ ಗ್ರಾಮೀಣ ಅಭ್ಯುದಯ ಕೇಂದ್ರ” (CFIRD) ದ ಸ್ಥಾಪಕ ಸದಸ್ಯರೊಬ್ಬರಾಗಿ, ಅದರ ಕೆಲಸಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.
ಈಗಾಗಲೆ ಮುಕ್ಕಾಲು ಪಾಲು ಓಟವನ್ನು ಪೂರೈಸಿರುವ ಬ್ಲೂ ಪ್ಲಾನೆಟ್ ರನ್ ತಂಡ, ಈಗ ಕಡೆಯ ದಿಗಳ ಓಟವನ್ನು ಅಮೇರಿಕದಲ್ಲಿ ಓಡುತ್ತಿದೆ. ಜೂನ್ 1 ರಂದು ನ್ಯೂಯಾರ್ಕಿನ ವಿಶ್ವಸಂಸ್ಥೆಯ ಕಟ್ಟಡದಿಂದ ಆರಂಭವಾದ ಓಟ, ನಂತರ ಐರ್‌ಲ್ಯಾಂಡ್, ಇಂಗ್ಲೆಂಡ್, ಫ್ರಾನ್ಸ್, ಬೆಲ್ಜಿಯಮ್, ಹಾಲೆಂಡ್, ಜರ್ಮನಿ, ಜೆಕ್ ರಿಪಬ್ಲಿಕ್, ಆಸ್ಟ್ರಿಯ, ಪೋಲೆಂಡ್, ರಷ್ಯ, ಮಂಗೋಲಿಯ, ಚೀನಾ, ಜಪಾನ್‍ಗಳನ್ನೆಲ್ಲ ಸುತ್ತಿಹಾಕಿಕೊಂಡು ಈಗ ಮತ್ತೆ ಅಮೇರಿಕಕ್ಕೆ ಮರಳಿದೆ. ಕೊನೆಯಾಗುವ ಮುಂಚೆ ಕೆನಡಾದಲ್ಲೂ ಓಡಲಿದ್ದಾರೆ. ಒಟ್ಟು 4 ಖಂಡಗಳ, 16 ದೇಶಗಳನ್ನು ಒಳಗೊಂಡ, 24000 ಕಿ.ಮೀ.ಗಳನ್ನು ಸೆಪ್ಟೆಂಬರ್ 4 ರಂದು ಈ ಓಟಗಾರರು ಪೂರೈಸಲಿದ್ದಾರೆ. ಈಗಾಗಲೆ ಸುಮಾರು 18 ಸಾವಿರ ಕಿ.ಮೀ. ಓಟ ಮುಗಿದಿದೆ. ಓಡುವ ದಾರಿಯಲ್ಲಿ ನೀರಿನ, ಅದರಲ್ಲೂ ಕುಡಿಯುವ ನೀರಿನ ಬಗ್ಗೆ ಜಾಗೃತಿ ಮತ್ತು ಹಣಸಂಗ್ರಹಣೆ ಮಾಡುವುದು ಓಟದ ಮುಖ್ಯ ಉದ್ದೇಶ. ಸುಮಾರು 200 ಕೋಟಿ ರೂಪಾಯಿಗಳನ್ನು ಈ 95 ದಿನಗಳ ಓಟದಿಂದ ಒಟ್ಟುಗೂಡಿಸಬೇಕು ಎನ್ನುವುದು ಫೌಂಡೇಷನ್‌ನ ಗುರಿ. ಕನ್ನಡಿಗರದೇ ಆದ ಅಮೇರಿಕದಲ್ಲಿನ ಡಾ ನಾಗರಾಜ್ ಫೌಂಡೇಷನ್‍ನವರು ಸುನೀಲ್ ಓಡಲಿರುವ ಪ್ರತಿ ಮೈಲಿಗೆ ಒಂದು ನೂರು ಡಾಲರ್‌ನಂತೆ, ಒಟ್ಟು 40 ಲಕ್ಷ ರೂಪಾಯಿಗಳನ್ನು ಈಗಾಗಲೆ ಪ್ರಾಯೋಜಿಸಿದ್ದಾರೆ. ವಾರದ ಹಿಂದೆ ಸಿಲಿಕಾನ್ ಕಣಿವೆಯಲ್ಲಿನ ಜೈನ ಮಂದಿರದಲ್ಲಿ ಆಯೋಜಿಸಲಾಗಿದ್ದ ಬಟಾನ್ ಎಕ್ಸ್‌ಚೇಂಜ್ ಕಾರ್ಯಕ್ರಮವೊಂದರಲ್ಲಿಯೆ ನಾಲ್ಕು ಲಕ್ಷ ರೂಪಾಯಿ ಸಂಗ್ರಹವಾಗಿತ್ತು.
ಈ ಓಟದ ವೈಶಿಷ್ಟ್ಯ, ಮೊದಲೆ ಹೇಳಿದಂತೆ ದಿನದ ಇಪ್ಪತ್ತನಾಲ್ಕು ಗಂಟೆಗಳೂ ಓಡುತ್ತಿರುವುದು. ಪ್ರತಿದಿನವೂ 16 ಓಟಗಾರರು ಸರದಿಯ ಪ್ರಕಾರ ಪಾಲ್ಗೊಳ್ಳುತ್ತಾರೆ. ಪ್ರತಿಯೊಬ್ಬರೂ ದಿನವೊಂದಕ್ಕೆ ಸರಾಸರಿ 15-20ಕಿ.ಮೀ. ಓಡುತ್ತಾರೆ; 24 ಗಂಟೆಗಳಲ್ಲಿ ತಂಡ ಸುಮಾರು 350 ಕಿ.ಮೀ. ಓಡಿರುತ್ತದೆ. ಸುನೀಲ್ ಹೇಳುವ ಪ್ರಕಾರ ಈ ಓಟವನ್ನು ಬಹಳ ವ್ಯವಸ್ಥಿತವಾಗಿ, ಯಾವುದೆ ಗೊಂದಲಗಳಿಗೆ ಎಡೆಯಿಲ್ಲದಂತೆ ಆಯೋಜಿಸಿದ್ದಾರೆ. ಅಂದ ಹಾಗೆ, ಈ ಓಟದಲ್ಲಿ ಪಾಲ್ಗೊಳ್ಳಲು ಸುಮಾರು 4000 ಜನ ಇಚ್ಚೆ ವ್ಯಕ್ತಪಡಿಸಿದ್ದರು. ವ್ಯಕ್ತಿಗಳ ಸಮುದಾಯ ಕೆಲಸ ಮತ್ತು ಇತರ ಆಸಕ್ತಿಗಳ ಆಧಾರದ ಮೇಲೆ ಅಂತಿಮವಾಗಿ 20 ಜನರನ್ನು ಆಯ್ಕೆ ಮಾಡಲಾಯಿತು. ಸುನೀಲ್‌ರವರು ಮಾಡುತ್ತಿರುವ ನೀರಿನ ಮೇಲಿನ ಅಧ್ಯಯನ ಮತ್ತು ಸಮಾಜಸೇವಾ ಕೆಲಸಗಳಿಂದಾಗಿ ಆ ಇಪ್ಪತ್ತು ಜನರಲ್ಲಿ ಇವರೂ ಒಬ್ಬರಾಗಲು ಸಾಧ್ಯವಾಯಿತು.
2004 ರಿಂದ ಇಲ್ಲಿಯವರೆಗೆ ಬ್ಲೂ ಪ್ಲಾನೆಟ್ ರನ್ ಫೌಂಡೇಷನ್ ಪ್ರಪಂಚದಾದ್ಯಂತದ 13 ದೇಶಗಳಲ್ಲಿನ ಹಲವಾರು ಎನ್.ಜಿ.ಒ.ಗಳಿಗೆ ಧನಸಹಾಯ ಮಾಡುತ್ತ, ಯೋಜನೆಗಳ ಉಸ್ತುವಾರಿಯನ್ನು ಗಮನಿಸುತ್ತ ಬಂದಿದೆ. ಆಫ್ರಿಕಾ, ದಕ್ಷಿಣ ಅಮೇರಿಕ, ಭಾರತದ ಒರಿಸ್ಸಾ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಇಲ್ಲೆಲ್ಲ, ಈ ಎನ್.ಜಿ.ಒ.ಗಳು 135 ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು, ಒಟ್ಟು ಲಕ್ಷಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಮಸ್ಯೆ ನೀಗಿಸಿವೆ. ಎಷ್ಟೋ ಕಡೆ ಒಂದೆರಡು ಲಕ್ಷ ರೂಪಾಯಿಗಳಿಗೆ ಜೀವಮಾನದ ಸಮಸ್ಯೆಗಳು ನಿವಾರಣೆಯಾಗುತ್ತಿವೆ.
ಆಗಸ್ಟ್ ಎರಡರಂದು ಜೈನ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುನೀಲ್ ಬಹಳ ಆಪ್ತವಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಅದರಲ್ಲಿ ತಮಾಷೆಯಾಗಿದ್ದದ್ದು ಏನೆಂದರೆ, ಓಟದ ಸಮಯದಲ್ಲಿ ಅವರಿಗೆ ಪ್ರಿಯವಾದ ಉಪ್ಪುಖಾರದ ಊಟಕ್ಕೆ ಖೋತಾ ಆಗಿಬಿಟ್ಟಿರುವುದು! ಕಳೆದ ಆರೇಳು ವರ್ಷಗಳಿಂದ ಪಕ್ಕಾ ಸಸ್ಯಾಹಾರಿಯಾಗಿ ಪರಿವರ್ತನೆಯಾಗಿರುವ ಸುನೀಲ್‌ಗೆ ರಷ್ಯಾದಲ್ಲಿ ಬಹಳ ಕಷ್ಟವಾಯಿತಂತೆ. “ಸಸ್ಯಾಹಾರ ಒದಗಿಸಲು ತೊಂದರೆಯೇನಿಲ್ಲ, ಮೀನು ಮತ್ತು ಕೋಳಿ ಆಗುತ್ತದಲ್ಲ?” ಎಂದರಂತೆ ರಷ್ಯನ್ನರು! ಅಲ್ಲಿ ಊಟ ಬಹಳ ಸಪ್ಪೆಯಾಗಿತ್ತು ಎಂದರು, ಸುನೀಲ್. ರಷ್ಯ, ಚೀನಾ, ಜಪಾನ್‌ನಿಂದ ಮತ್ತೆ ಅಮೇರಿಕಕ್ಕೆ ಮರಳಿದ ಸುನೀಲ್, ಸಿಲಿಕಾನ್ ಕಣಿವೆಯಲ್ಲಿನ ಅನ್ನಸಾಂಬಾರ್ ಹಾಗೂ ಚಪಾತಿಪಲ್ಯಗಳನ್ನು ಸವಿಯುತ್ತ ಖುಷಿಯಾಗಿದ್ದರು!
ಸಮಸ್ಯೆಗಳು ನೂರಾರು; ನೂರಾರು ತೆರನವು. ಕೆಲವುಗಳ ಪರಿಹಾರಕ್ಕಂತೂ ಸ್ವಾರ್ಥವನ್ನೆಲ್ಲ ತ್ಯಜಿಸಿ ಕೆಲಸ ಮಾಡಬೇಕಾಗುತ್ತದೆ. ನಮ್ಮ ಕರ್ನಾಟಕದ ಕತೆಯನ್ನೆ ತೆಗೆದುಕೊಂಡರೆ, ಬರಪೀಡಿತ ಪ್ರದೇಶದ ವಿಸ್ತೀರ್ಣದಲ್ಲಿ ರಾಜಸ್ಥಾನ ಬಿಟ್ಟರೆ ನಮಗೇ ನಂತರದ ಸ್ಥಾನ! ಬ್ಲೂ ಪ್ಲಾನೆಟ್ ಫೌಂಡೇಷನ್‌ನ ನಿರ್ದೇಶಕರಲ್ಲೊಬ್ಬರಾದ ರಾಜೇಶ್ ಷಾ ಹೇಳಿದಂತೆ, ಕುಡಿಯುವ ನೀರಿನ ಸಮಸ್ಯೆಯ ನಿವಾರಣೆಯಲ್ಲಿ ತೊಡಗಿಸಿಕೊಳ್ಳುವುದು ಗ್ಲಾಮರಸ್ ಅಲ್ಲ. ಇಂತಹ ಕೆಲಸದಲ್ಲಿ ತೊಡಗಿಸಿಕೊಂಡ ಸುನೀಲ್ ಮತ್ತು ಕರ್ನಾಟಕದಲ್ಲಿ ಹತ್ತಿಪ್ಪತ್ತು ವರ್ಷಗಳಿಂದ ಮಳೆಕೊಯ್ಲು, ಜಲಪೂರಣ, ಜಲಜಾಗೃತಿ ಮುಂತಾದವುಗಳಲ್ಲಿ ತೊಡಗಿಸಿಕೊಂಡಿರುವ ಶಿವಾನಂದ ಕಳವೆ, ಶ್ರೀ ಪಡ್ರೆ, ದೇವರಾಜ್ ರೆಡ್ಡಿ, ಬೆಂಗಳೂರಿನ ರೈನ್ ವಾಟರ್ ಕ್ಲಬ್‌ನ ವಿಶ್ವನಾಥ್, ತಿಪಟೂರಿನ ಬೈಫ್ ಸಂಸ್ಥೆಯ ಜಿ.ಎನ್.ಎಸ್. ರೆಡ್ಡಿ, ಸೂರಿನ CART ಕೇಂದ್ರದ ರವಿಕುಮಾರ್, ಹಾವೇರಿಯ ಚನ್ನಬಸಪ್ಪ ಕೊಂಬ್ಳಿ, ಮುಂತಾದವರೆಲ್ಲ ನಮ್ಮ ಹೆಮ್ಮೆ ಮಾತ್ರವಲ್ಲ, ಆದರ್ಶಗಳೂ ಆಗಬೇಕು.
ಇದೇ ಸಮಯದಲ್ಲಿ ಜವಾಬ್ದಾರಿಯುತ ಸರ್ಕಾರದ ಜವಾಬ್ದಾರಿಯೂ ಒಂದಿದೆ: ಮಳೆನೀರು ಕೊಯ್ಲು, ಜಲಪೂರಣ ಮುಂತಾದವುಗಳ ಬಗ್ಗೆ ವ್ಯವಸ್ಥಿತವಾಗಿ ಜನಜಾಗೃತಿ ಮೂಡಿಸುವ ಕೆಲಸ. ಯೋಗ್ಯರು ಆಡಳಿತ ನಡೆಸುವಾಗ ಹೀಗೆ ಬಯಸಿದರೆ ಹೆಚ್ಚಿಗೆ ಬಯಸಿದಂತೇನೂ ಆಗುವುದಿಲ್ಲ.
ಆದರೆ, ಈಗ?