ಕೈಗೆಟುಕಲಿರುವ ಸಂಜೀವಿನಿಗಳು…
Posted Under: Uncategorized
(ವಿಕ್ರಾಂತ ಕರ್ನಾಟಕ – ಆಗಸ್ಟ್ 17, 2007ರ ಸಂಚಿಕೆಯಲ್ಲಿನ ಬರಹ)
ಎಲ್ಲೆಂದರಲ್ಲಿ ಕಾಲೆತ್ತಲು ಹೋಗುವ ಕಚ್ಚೆಹರುಕರಿಗಷ್ಟೆ ಏಡ್ಸ್ ಬರುವುದಿಲ್ಲ. ಒಬ್ಬ ಇಲ್ಲವೆ ಒಬ್ಬಳು ಈಗಾಗಲೆ ಏಡ್ಸ್ ಹೊಂದಿರುವವಳ/ನ ಬಳಿ ಯಾವುದೊ ಅನೈತಿಕ ಕೆಲಸ ಮಾಡಲು ಹೋಗಿ ಅಂಟಿಸಿಕೊಂಡು ಬಿಟ್ಟಿರಬಹುದು. ಆದರೆ, ಏಡ್ಸ್‌ಪೀಡಿತನಿಂದ ಅವನ ಮುಗ್ಧ ಹೆಂಡತಿಗೆ, ಏಡ್ಸ್‌ಪೀಡಿತೆಯಿಂದ ಅವಳ ಮುಗ್ಧ ಗಂಡನಿಗೆ, ದಾಂಪತ್ಯ ಜೀವನದಲ್ಲಿ ಸಹಜವಾದ ಅಸುರಕ್ಷಿತ (ಕಾಂಡೋಮ್ ಇಲ್ಲದ) ಲೈಂಗಿಕ ಸಂಪರ್ಕದಿಂದಲೂ ಅದು ಬಂದು ಬಿಡುತ್ತದೆ. ಇನ್ನು, ಗೊತ್ತಿದ್ದೊ ಗೊತ್ತಿಲ್ಲದೆಯೊ ಗರ್ಭಿಣಿಯಾಗುವ ಏಡ್ಸ್‌ಪೀಡಿತೆ, ತನ್ನ ನಿಷ್ಪಾಪಿ ಮಗುವಿಗೆ ಅದರ ಜನ್ಮದಿನದಂದೆ ಏಡ್ಸ್ ಅನ್ನು ದಯಪಾಲಿಸಿ ಬಿಟ್ಟಿರುತ್ತಾಳೆ. ಒಬ್ಬರು ಬಳಸಿದ ಸಿರಿಂಜ್ ಅನ್ನು ಇನ್ನೊಬ್ಬರು ಬಳಸಿಬಿಡುವ ಸಂದರ್ಭಗಳಲ್ಲೂ ಏಡ್ಸ್ ಅಂಟಬಹುದು. ಹೀಗೆ, ಇಂದು ಏಡ್ಸ್ ಎನ್ನುವುದು ಬಹುಜನರೊಂದಿಗೆ ಲೈಂಗಿಕ ಸಂಬಂಧ ಇಟ್ಟುಕೊಂಡವರಿಗೆ ಮಾತ್ರ ಅಂಟುವ, ಅಥವ ವೇಶ್ಯಾವೃತ್ತಿಯಲ್ಲಿ ತೊಡಗಿಕೊಂಡವರಿಗೆ ಮತ್ತು ಅವರ ಗಿರಾಕಿಗಳಿಗೆ ಮಾತ್ರ ಅಂಟುವ ಕಾಲೆಯಾಗಿ ಉಳಿದಿಲ್ಲ.
ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನೆ ಕೊಲ್ಲುವ, ಸಾಮಾನ್ಯ ಜ್ವರವನ್ನೂ ತಡೆದುಕೊಳ್ಳಲಾಗದಷ್ಟು ದೇಹವನ್ನು ದುರ್ಬಲ ಮಾಡಿಬಿಡುವ ಈ ಮಾರಿ ಆಫ್ರಿಕಾದ ಹಲವು ದೇಶಗಳಲ್ಲಿಯಂತೂ ಹೆಮ್ಮಾರಿಯಾಗಿ ಬಿಟ್ಟಿದೆ. ಇಂದು ಪ್ರಪಂಚದಲ್ಲಿನ ಸುಮಾರು 4 ಕೋಟಿ ಜನಕ್ಕೆ ಏಡ್ಸ್ ಇದೆ. ಕಳೆದ ವರ್ಷ ಇದನ್ನು ಅಂಟಿಸಿಕೊಂಡವರ ಸಂಖ್ಯೆ 43 ಲಕ್ಷವಂತೆ. ಈ ಕಾಯಿಲೆಯಿಂದ ಪ್ರತಿ ವರ್ಷ ಸಾಯುತ್ತಿರುವವರ ಸಂಖ್ಯೆಯೆ 30 ಲಕ್ಷ ಮುಟ್ಟುತ್ತಿದೆ. ಅಂದರೆ ದಿನಕ್ಕೆ 8000 ಜನ ಇದರಿಂದ ಸಾಯುತ್ತಿದ್ದಾರೆ. ಗಾಂಧಿ ಮೆಟ್ಟಿದ ದಕ್ಷಿಣ ಆಫ್ರಿಕಾದಲ್ಲಿ ಪ್ರತಿ ಐವರಲ್ಲಿ ಒಬ್ಬ ಏಡ್ಸ್ ಪೀಡಿತನಾಗಿದ್ದರೆ (ಅಲ್ಲಿ 55 ಲಕ್ಷ ಜನಕ್ಕೆ ಏಡ್ಸ್ ಇದೆ!), ಗಾಂಧಿ ಹುಟ್ಟಿದ ಭಾರತದಲ್ಲಿ 20 ರಿಂದ 36 ಲಕ್ಷ ಜನಕ್ಕೆ ಏಡ್ಸ್ ಇದೆ ಎಂದು ಅಂದಾಜು. ಏಡ್ಸ್‌ಪೀಡಿತರ ಸಂಖ್ಯೆಯ ದೃಷ್ಟಿಯಿಂದ ದಕ್ಷಿಣ ಆಫ್ರಿಕ ಬಿಟ್ಟರೆ ನಂತರದ ಸ್ಥಾನ ಭಾರತದ್ದೆ. ಈ ಕಾಯಿಲೆ ಅಂಟಿಸಿಕೊಂಡವರಲ್ಲಿ ದಕ್ಷಿಣ ಭಾರತದವರೆ ಹೆಚ್ಚು!
ಇನ್ನು ನಮ್ಮ ಕರ್ನಾಟಕವನ್ನೆ ತೆಗೆದುಕೊಂಡರೆ, ಜನಸಂಖ್ಯೆಯ ಶೇ. 1 ರಷ್ಟು ಜನರಿಗೆ ಏಡ್ಸ್ ಇದೆ ಎಂದು ಅಂದಾಜು. ಸಮೀಕ್ಷೆಯೊಂದರ ಪ್ರಕಾರ, ಕರ್ನಾಟಕದಲ್ಲಿನ ಪ್ರತಿ ಐದು ವೇಶ್ಯೆಯರಲ್ಲಿ ಒಬ್ಬಳಿಗೆ ಏಡ್ಸ್ ಇದೆಯಂತೆ!
ಹೀಗೆ, ಈ ಕಾಯಿಲೆ ಎಲ್ಲಾ ತರಹದ ಜನರಿಗೆ ಬರಬಹುದಾದ ಕಾಯಿಲೆ ಆಗಿಬಿಟ್ಟಿದೆ ಮತ್ತು ದಿನದಿನವೂ ಇದರ ಪರಿಣಾಮ ತೀವ್ರವಾಗುತ್ತ ಹೋಗುತ್ತಿದೆ. ಉಚಿತ ಕಾಂಡೋಮ್ ಹಂಚುವುದು ಮತ್ತು ಸುರಕ್ಷಿತ ಲೈಂಗಿಕತೆಯ ಬಗೆಗಿನ ಶಿಕ್ಷಣ ಕೊಡುವುದು ಈ ರೋಗ ಹೊಸಬರಿಗೆ ಅಂಟುವುದನ್ನು ಬಹುಮಟ್ಟಿಗೆ ತಡೆಯಬಹುದು ಇಲ್ಲವೆ ನಿಧಾನಿಸಬಹುದು. ಆದರೆ ಈಗ ಎಲ್ಲರ ಮುಂದಿರುವ ದೊಡ್ಡ ಪ್ರಶ್ನೆ, ಪ್ರತಿದಿನ 8000 ಜನರನ್ನು ಬಲಿತೆಗೆದುಕೊಳ್ಳುತ್ತಿರುವ, ಮದ್ದೇ ಇಲ್ಲದ ಕಾಯಿಲೆ ಎನ್ನಿಸಿಕೊಂಡಿರುವ ಇದಕ್ಕೆ ಪರಿಣಾಮಕಾರಿ ಮದ್ದು ಕಂಡು ಹಿಡಿಯುವುದು ಮತ್ತು ಈಗ ಇದ್ದಿರಬಹುದಾದ ಮದ್ದನ್ನು ಸಾಮಾನ್ಯರಿಗೂ ಸುಲಭವಾಗಿ ಎಟುಕುವಂತೆ ಮಾಡುವುದು.
ಭಾರತದ ಬಹುಸಂಖ್ಯಾತ ಬಡಜನತೆಗೆ ತಿಂಗಳಿಗೆ ಸಾವಿರ ರೂಪಾಯ ಆದಾಯವೂ ಇರುವುದಿಲ್ಲ. ಇನ್ನು, ಅದು ಹೇಗಾದರೂ ಇರಲಿ, ಈ ಕಾಯಿಲೆ ಅಂಟಿಕೊಂಡು ಬಿಟ್ಟರೆ, ಮೊದಲ ಹಂತದ ಔಷಧಿಗಳಿಗೇ ತಿಂಗಳಿಗೆ 3-4 ಸಾವಿರ ರೂಪಾಯಿ ಬೇಕು. ಕಾಯಿಲೆ ಏನಾದರೂ ಎರಡನೆ ಮತ್ತು ಮೂರನೆ ಹಂತಕ್ಕೆ ಹೋಗಿಬಿಟ್ಟರೆ ಔಷಧಿಯ ವೆಚ್ಚ ತಿಂಗಳಿಗೆ 5000 ದಿಂದ 30000 ದ ತನಕ ಏರುತ್ತದೆ. ಬಡಜನ ಹೇಗೆ ತಾನೆ ಇದನ್ನು ಭರಿಸಿಯಾರು? ಹಾಗಾಗಿಯೆ, ಭಾರತ, ಥಾಯ್‌ಲ್ಯಾಂಡ್, ಆಫ್ರಿಕಾ ಖಂಡ, ಬ್ರೆಜಿಲ್ ಮುಂತಾದ ತೃತೀಯ ಜಗತ್ತಿನ ದೇಶಗಳಲ್ಲಿ ಅಲ್ಲಿನ ಬಡಜನತೆಗೆ ಏಡ್ಸ್ ಔಷಧಿಯನ್ನು ಒದಗಿಸುವ ಕೆಲಸವನ್ನು ಸರ್ಕಾರಗಳೆ ಮಾಡುತ್ತಿವೆ. ಈಗ ಮೊದಲ ಹಂತದ ಔಷಧಿಗಳನ್ನು ಮಾತ್ರ ಕೆಲವು ಸರ್ಕಾರಗಳು ಉಚಿತವಾಗಿ ಒದಗಿಸುತ್ತಿವೆ. ಥಾಯ್‌ಲ್ಯಾಂಡ್ ಸರ್ಕಾರ ಈಗಾಗಲೆ ಪ್ರತಿವರ್ಷ ಸುಮಾರು 400 ಕೋಟಿ ರೂಪಾಯಿಗಳನ್ನು ಏಡ್ಸ್ ಔಷಧಿಗಳಿಗೆ ಖರ್ಚು ಮಾಡುತ್ತಿದೆ. ಇದೇ ಲೆಕ್ಕಾಚಾರದಲ್ಲಿ ಭಾರತ ಸರ್ಕಾರ ಸಹ ಬಹುಶಃ ನೂರಾರು ಕೋಟಿ ಖರ್ಚು ಮಾಡುತ್ತಿರಬಹುದು.
ಮೊದಲೆಲ್ಲ ಮದ್ದಿಲ್ಲದ ಕಾಲೆ ಎಂದೇ ಹೇಳಲಾಗುತ್ತಿದ್ದ ಏಡ್ಸ್‌ಗೆ ಈಗೀಗ ಕೆಲವು ಔಷಧಿಗಳು ಲಭ್ಯವಿವೆ. ಅಮೇರಿಕದ ಹಲವಾರು ಔಷಧ ಕಂಪನಿಗಳು ನೂರಾರು ಕೋಟಿಗಳನ್ನು ಸಂಶೋಧನೆಯಲ್ಲಿ ತೊಡಗಿಸಿ ಹಲವಾರು ಔಷಧಿಗಳನ್ನು ಕಂಡುಹಿಡಿದಿದ್ದಾರೆ. ಸಂಪೂರ್ಣವಾಗಿ ತಡೆಗಟ್ಟುತ್ತದೆ, ಇಲ್ಲವೆ ಸಂಪೂರ್ಣವಾಗಿ ವಾಸಿ ಮಾಡುತ್ತದೆ ಎನ್ನುವ ಔಷಧಿಯನ್ನು ಇನ್ನೂ ಅಭಿವೃದ್ಧಿಪಡಿಸಲಾಗದೆ ಇದ್ದರೂ, ಏಡ್ಸ್ ಕಾಲೆಯ ವಿರುದ್ದ ಹೋರಾಡಬಲ್ಲಂತ ಹತ್ತಾರು ಔಷಧಿಗಳು ಇಂದು ಮಾರುಕಟ್ಟೆಯಲ್ಲಿ ದೊರಕುತ್ತವೆ. ಆದರೆ ಇವು ಯಾವುವೂ ಅಗ್ಗ ಅಲ್ಲ. ಅಮೇರಿಕದಂತಹ ಶ್ರೀಮಂತ ದೇಶಗಳ ಜನರಿಗೂ ಈ ಔಷಧಿಗಳು ದುಬಾರಿ. ಕೇವಲ ಏಡ್ಸ್ ಔಷಧಗಳ ಮಾರುಕಟ್ಟೆಯೆ ಇಂದು 16000 ಕೋಟಿ ರೂಪಾಯಿ ದಾಟುತ್ತಿದೆ.
ಈ ಔಷಧಿಗಳು ಇನ್ನೂ ದುಬಾರಿಯಾಗಿಯೆ ಇರಲು ಮುಖ್ಯ ಕಾರಣ, ಅವುಗಳಿಗಿರುವ ಪೇಟೆಂಟ್‌ಗಳು. ಜನರಿಗೆ ಅಗತ್ಯವಾದ ಕೆಲವೊಂದು ಸಂಶೋಧನೆಗಳನ್ನು ಕೆಲವು ವ್ಯಕ್ತಿಗಳು ಯಾವುದೆ ಫಲಾಫಲ ಅಪೇಕ್ಷೆಯಿಲ್ಲದೆ ಮಾಡಬಲ್ಲರು. ಆದರೆ ದೊಡ್ಡದೊಡ್ಡ ವ್ಯವಹಾರಿಕ ಕಂಪನಿಗಳು ಸಂಶೋಧನೆ ಮಾಡುವುದು ತಮ್ಮ ಸಂಶೋಧನೆಗಳನ್ನು ಮಾರಾಟ ಮಾಡುವುದರಿಂದ ಅಪಾರ ಹಣ ಗಳಿಸಬಹುದು ಎಂಬ ಒಂದೆ ಕಾರಣಕ್ಕಾಗಿ. ಅದಕ್ಕಾಗಿಯೆ ಅವರು ನೂರಾರು ಕೋಟಿಗಳನ್ನು ಸಂಶೋಧನೆಯಲ್ಲಿ ತೊಡಗಿಸುತ್ತಾರೆ. ಕೆಲವೊಮ್ಮೆ ಆ ಸಂಶೋಧನೆಗಳಿಗೆ ಯಶಸ್ಸು ಸಿಕ್ಕಿದಾಗ ಕೂಡಲೆ ಅದನ್ನು ಪೇಟೆಂಟ್ ಮಾಡಿಕೊಳ್ಳುತ್ತಾರೆ. ಲೇಖನ, ಕತೆ, ಕವಿತೆ, ಕಾದಂಬರಿ, ಸಿನೆಮಾ, ಮುಂತಾದ ಸೃಜನಶೀಲ ಕಾರ್ಯಗಳಿಗೆ ಕಾಪಿರೈಟ್ ಇರುವಂತೆ ಸಂಶೋಧನೆಗಳಿಗೆ ಇರುವ ಕಾಪಿರೈಟ್ ಈ ಪೇಟೆಂಟ್‌ಗಳು. R&D ಗೆಂದು ನೂರಾರು ಕೋಟಿ ಖರ್ಚು ಮಾಡುವ ಸಂಸ್ಥೆಗಳ ಸಂಶೋಧನೆಯನ್ನು ಇನ್ನೊಬ್ಬರು ರಾತ್ರೋರಾತ್ರಿ ನಕಲು ಮಾಡಿ, ಆ ಮೂಲಕ ಮೂಲಕಂಪನಿ ದಿವಾಳಿ ಏಳದಂತೆ ನೋಡಿಕೊಳ್ಳಲು ಈ ಪೇಟೆಂಟ್ ಕಾನೂನುಗಳು ಸಹಾಯ ಮಾಡುತ್ತವೆ.
ಈ ಪೇಟೆಂಟ್ ರಕ್ಷಣೆ ಇಲ್ಲದಿದ್ದರೆ ಏನಾಗಬಹುದು ಎಂದು ನೋಡೋಣ: ನಮ್ಮ ದೇಶದಲ್ಲಿ ಮಾರುತಿ-800 ಈಗಲೂ ಬಹುಮಾರಾಟದ, ಅಗ್ಗ ಬೆಲೆಯ ಕಾರು. ಈಗ ಅದಕ್ಕೆ ಪ್ರತಿಸ್ಪರ್ಧಿಯಾಗಿ ಟಾಟಾ ರವರು ಲಕ್ಷ ರೂಪಾಯಿಯ ಕಾರನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಇದಕ್ಕಾಗಿ ಟಾಟಾ ರವರು ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ತಮ್ಮದೇ ಒಂದು ಸ್ವದೇಶಿ ಇಂಜಿನ್ ಅನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಟಾಟಾ ರವರು ಈ ಕಾರನ್ನು ಇನ್ನು ಒಂದೆರಡು ವರ್ಷದಲ್ಲಿ ಮಾರುಕಟ್ಟೆಗೆ ಬಿಡುತ್ತಾರೆ ಎಂದಿಟ್ಟುಕೊಳ್ಳೋಣ. ಅದು ಮಾರುಕಟ್ಟೆಗೆ ಬಂದ ದಿನವೇ ಮಾರುತಿ ಕಂಪನಿಯ ಇಂಜಿನಿಯರ್ ಒಬ್ಬ ಟಾಟಾದವರ ಕಾರನ್ನು ಬಿಚ್ಚಿ ಅದನ್ನು ಹೇಗೆ ಮಾಡಿದ್ದಾರೆ ಎಂದು ಅಧ್ಯಯನ ಮಾಡಿ, ಅವರೂ ಅಂತಹದೇ ಕಾರನ್ನು, ಅಷ್ಟೇ ಖರ್ಚಿನಲ್ಲಿ ತಯಾರಿಸಲು ಅಷ್ಟೇನೂ ಕಷ್ಟವಾಗುವುದಿಲ್ಲ. ಇದನ್ನು ರಿವರ್ಸ್ ಇಂಜಿನಿಯರಿಂಗ್ ಎನ್ನುತ್ತಾರೆ. ಆದರೆ ಟಾಟಾದವರಿಗೆ ತಮ್ಮ ಕಾರನ್ನು ತಮ್ಮ ಅನುಮತಿಯಿಲ್ಲದೆ ಬೇರೆ ಯಾರೂ ನಕಲಿ ಮಾಡಬಾರದು ಎಂಬಂತಹ ಕಾನೂನಿನ ರಕ್ಷಣೆ ಇಲ್ಲದೆ ಹೋದರೆ, ಮಾರುತಿಯವರು ಟಾಟಾದವರ ಕಾರನ್ನೆ ನಕಲು ಮಾಡಿ ಅವರಿಗೇ ಚಳ್ಳೆಹಣ್ಣು ತಿನ್ನಿಸಿಬಿಡಬಹುದು. ಆಗ ಟಾಟಾದವರು ಸಂಶೋಧನೆಗೆಂದು ಖರ್ಚು ಮಾಡಿದ ಹಣ ಎಂದಿಗೂ ವಾಪಸು ಬರುವುದಿಲ್ಲ. ಎಲ್ಲರೂ ಹೀಗೇ ಮಾಡಿಬಿಟ್ಟರೆ ಹೊಸಹೊಸ ಸಂಶೋಧನೆಗಳನ್ನು ಮಾಡಲು ಉತ್ತೇಜನದ ವಾತಾವರಣ ಇರುವುದಿಲ್ಲ ಎಂದೇ ಸರ್ಕಾರಗಳು ಈ ಪೇಟೆಂಟ್ ಕಾನೂನುಗಳನ್ನು ಜಾರಿಗೆ ತಂದಿರುವುದು. ಪೇಟೆಂಟ್ ಕಾನೂನು ಮೂಲಸಂಶೋಧಕರಿಗೆ 20 ವರ್ಷಗಳ ಕಾಲ ಹಕ್ಕುಸ್ವಾಮ್ಯ ನೀಡಿರುತ್ತದೆ. ಪೇಟೆಂಟ್ ಅವಧಿ ಮುಗಿದ ನಂತರ ಯಾರು ಬೇಕಾದರೂ ಅದನ್ನು ನಕಲಿ ಮಾಡಲು ಸ್ವತಂತ್ರರು. ಪೇಟೆಂಟ್ ಆದ ಸಂಶೋಧನೆಯ ಪ್ರತಿ ವಿವರವೂ ಸಾರ್ವಜನಿಕವಾಗಿ ಮೊದಲನೆ ದಿನದಿಂದಲೆ ಲಭ್ಯ ಇದ್ದರೂ, ಅವಧಿಗಿಂತ ಮೊದಲೆ ಅದನ್ನು ನಕಲು ಮಾಡಬೇಕೆಂದರೆ ಅದಕ್ಕೆ ಮೂಲ ಕಂಪನಿ/ವ್ಯಕ್ತಿಯ ಅನುಮತಿ ಬೇಕು. ಅಂತರರಾಷ್ಟ್ರೀಯ ವಾಣಿಜ್ಯ ಒಪ್ಪಂದಗಳ ಪ್ರಕಾರ, ಒಂದು ದೇಶದಲ್ಲಿ ಮಾಡಿಕೊಂಡ ಪೇಟೆಂಟ್‌ಗೆ ಬೇರೆ ದೇಶಗಳಲ್ಲೂ ರಕ್ಷಣೆ ಇರುತ್ತದೆ.
ಏಡ್ಸ್ ರೋಗದ ಔಷಧಿಗಳು ಈಗಲೂ ತುಟ್ಟಿಯಾಗಿಯೇ ಇರಲು ಈ ಪೇಟೆಂಟ್‌ಗಳೇ ಕಾರಣ. ಏಡ್ಸ್ ರೋಗಕ್ಕೆ ಅಗತ್ಯವಾದ ಮಾತ್ರೆಗಳನ್ನು ಅಮೇರಿಕದ ಫೈಜರ್, ಗ್ಲ್ಯಾಕ್ಸೊಸ್ಮಿತ್‌ಕ್ಲೈನ್, ಮರ್ಕ್ ಮುಂತಾದ ಕಂಪನಿಗಳು ಅಭಿವೃದ್ಧಿ ಪಡಿಸಿ, ಅವುಗಳನ್ನು ಪೇಟೆಂಟ್ ಮಾಡಿಸಿಕೊಂಡು, ಆ ಔಷಧಗಳನ್ನು ತಾವು ಮಾತ್ರ ತಯಾರಿಸುತ್ತ ತಮಗಿಷ್ಟ ಬಂದ ಬೆಲೆಗೆ ಮಾರುತ್ತಿದ್ದಾರೆ. ಆದರೆ ಭಾರತದ ರ್‍ಯಾನ್‌ಬಾಕ್ಸಿ, ರೆಡ್ಡಿ ಲ್ಯಾಬ್ಸ್‌ನಂತಹ ಫಾರ್ಮಸ್ಯೂಟಿಕಲ್ಸ್ ಕಂಪನಿಗಳು ಈ ಔಷಧಗಳನ್ನು ವಿದೇಶಿ ಕಂಪನಿಗಳ ಕಾಲು ಭಾಗದ ಬೆಲೆಗೆ ತಯಾರಿಸಬಹುದು! ಆದರೆ ಆ ಔಷಧಿಗಳ ಮೇಲಿನ ಪೇಟೆಂಟ್‌ಗಳಿಂದಾಗಿ ಇವರು ಹಾಗೆ ಮಾಡಲಾಗದು.
ಆದರೆ ಔಷಧಿ ಎನ್ನುವುದು ಕಾರಿನಂತಹ ಲಕ್ಷುರಿ ವಸ್ತು ಅಲ್ಲವಲ್ಲ? ಜೀವದ ಪ್ರಶ್ನೆ ಬಂದಾಗ ಪೇಟೆಂಟ್ ಅನ್ನು ಎಷ್ಟೆಂದು ಪಾಲಿಸುವುದು? ಇನ್ನು, ಏಡ್ಸ್ ಔಷಧಗಳು ಕಾಯಿಲೆಪೀಡಿತರ ಕೈಗೆಟುಕುವಂತೆ ಮಾಡುವಲ್ಲಿ ಸರ್ಕಾರಗಳೇ ನೇರ ಪಾತ್ರ ವಹಿಸುತ್ತಿವೆ. ಹಾಗಾಗಿಯೆ, ಥಾಯ್‌ಲ್ಯಾಂಡ್ ಮತ್ತು ಬ್ರೆಜಿಲ್ ದೇಶಗಳು ಇತ್ತೀಚೆಗೆ ತಾನೆ ಕೆಲವು ಏಡ್ಸ್ ಔಷಧಿಗಳ ಪೇಟೆಂಟ್ ಅನ್ನು ಅತಿಕ್ರಮಿಸಿ ಯಾರು ತಮಗೆ ಆ ಔಷಧಿಗಳನ್ನು ಅಗ್ಗವಾಗಿ ತಯಾರಿಸಿಕೊಡಬಲ್ಲರೊ ಅವರಿಂದ ಕೊಳ್ಳಲು ಆರಂಭಿಸುತ್ತಿವೆ. ಥಾಯ್‌ಲ್ಯಾಂಡ್ ತನ್ನ ದೇಶದ ಪಬ್ಲಿಕ್ ಸೆಕ್ಟರ್ ಕಂಪನಿಯಿಂದ ಈ ಔಷಧಿಯನ್ನು ಅರ್ಧ ಖರ್ಚಿನಲ್ಲಿ ತಯಾರಿಸಿಕೊಳ್ಳುವುದಾಗಿ ಘೋಷಿಸಿದೆ. ಬ್ರೆಜಿಲ್ ಈಗಾಗಲೆ ಭಾರತದ ರ್‍ಯಾನ್‌ಬಾಕ್ಸಿ ಫಾರ್ಮಸ್ಯೂಟಿಕಲ್ಸ್‌ನಿಂದ ಏಡ್ಸ್ ಔಷಧಿ ಗುಳಿಗೆಗಳನ್ನು ಕೊಳ್ಳುತ್ತಿದೆ.
ಈ ಸುದ್ದಿ ಮತ್ತು ಔಷಧ ಪ್ರಪಂಚದಲ್ಲಿನ ಇತ್ತೀಚಿನ ಕೆಲವು ಬೆಳವಣಿಗೆಗಳು ರ್‍ಯಾನ್‌ಬಾಕ್ಸಿ, ರೆಡ್ಡೀಸ್ ನಂತಹ ಭಾರತದ ದೊಡ್ಡ ಔಷಧ ತಯಾರಿಕಾ ಕಂಪನಿಗಳಿಗೆ ನಿಜಕ್ಕೂ ಆಶಾದಾಯಕವಾದವು. ಏಡ್ಸ್ ಹೆಮ್ಮಾರಿಯಿಂದಾಗಿ ಕೆಲವು ದೇಶಗಳು ತಾವು ಪೇಟೆಂಟ್‌ಗಳನ್ನು ಕೇರ್ ಮಾಡುವುದಿಲ್ಲ ಎಂದು ಹೇಳುತ್ತಿರುವುದು ಭಾರತದ ಈ ಕಂಪನಿಗಳಿಗೆ ಹೊಸಹೊಸ ಬಾಗಿಲುಗಳನ್ನು ತೆರೆಯಲಿದೆ. ಈಗಿನ ಸದ್ಯದ ಸ್ಥಿತಿಯಲ್ಲೂ ಈ ಕಂಪನಿಗಳೇನೂ ಸಣ್ಣಮಟ್ಟದ ಕಂಪನಿಗಳಲ್ಲ. ರ್‍ಯಾನ್‌ಬಾಕ್ಸಿಯ ಈ ವರ್ಷದ ಆದಾಯ 6536 ಕೋಟಿ ರೂಪಾಯಿ ಆಗಿದ್ದರೆ, ಡಾ|| ರೆಡ್ಡೀಸ್ ನವರದು 6313 ಕೋಟಿ! ವರ್ಷದಿಂದ ವರ್ಷಕ್ಕೆ ಇವುಗಳ ಆದಾಯ ಬೆಳೆಯುತ್ತಲೆ ಹೋಗುತ್ತಿದೆ. ಹಾಗೆಯೆ ಕೆಲವು ಅತಿ ಬೆಲೆಯ ಔಷಧಿಗಳ ಪೇಟೆಂಟ್ ಎಕ್ಸ್‌ಪೈರ್ ಆಗುತ್ತಿರುವುದು, ಜನರಿಕ್ ಡ್ರಗ್ಸ್ ತಯಾರಿಸುವ ಈ ಕಂಪನಿಗಳ ಭವಿಷ್ಯವನ್ನು ಇನ್ನೂ ಉಜ್ವಲಗೊಳಿಸಲಿದೆ.
ಅಮೇರಿಕದ ಜನತೆ ತಮ್ಮ ಔಷಧಗಳಿಗೆಂದು ಒಂದು ವರ್ಷದಲ್ಲಿ ಖರ್ಚು ಮಾಡುವ ಹಣ 11000 ಶತಕೋಟಿ ರೂಪಾಯಿಗಳು!!! (275 ಶತಕೋಟಿ ಡಾಲರ್‍ಗಳು.) ಇದರಲ್ಲಿನ ಬಹುಪಾಲು ದುಬಾರಿ ಬೆಲೆಯ ಪೇಟೆಂಟೆಡ್ ಔಷಧಿಗಳಿಗೇ ಹೋಗುತ್ತದೆ. ಐಟಿ ಕ್ಷೇತ್ರದಲ್ಲಿನ ಭಾರತದ ಕೊಡುಗೆಯಿಂದ ಹೆಚ್ಚಿನ ಲಾಭ ಪಡೆದುಕೊಳ್ಳುತ್ತಿರುವವರೇನೊ ಅಮೇರಿಕದ ದೊಡ್ಡ ದೊಡ್ಡ ಕಂಪನಿಗಳು. ಇಲ್ಲಿನ ಜನಸಾಮಾನ್ಯರಿಗೆ ಅದರ ನೇರ ಲಾಭ ಅಷ್ಟೇನೂ ಇಲ್ಲ. ಹೇಳಬೇಕೆಂದರೆ ಔಟ್‌ಸೋರ್ಸಿಂಗ್‌ನಿಂದಾಗಿ ಕೆಲವರು ತಮ್ಮ ಕೆಲಸಗಳನ್ನೆ ಕಳೆದುಕೊಂಡಿರಬೇಕು. ಹಾಗಾಗಿಯೆ ಇಲ್ಲಿನ ರಾಜಕಾರಣಿಗಳು ಭಾರತಕ್ಕೆ ಮಾಡುವ ಔಟ್‌ಸೋರ್ಸಿಂಗ್ ಅನ್ನು ಆಗಾಗ ಗುಮ್ಮನ ತರಹ ಮುಂದಕ್ಕೆ ಮಾಡುತ್ತಿರುತ್ತಾರೆ. ಆದರೆ, ಜನರಿಕ್ (ಮುಕ್ತವಾಗಿ ತಯಾರಿಸಬಹುದಾದ, ಹಕ್ಕುಸ್ವಾಮ್ಯವಿಲ್ಲದ) ಔಷಧಗಳನ್ನು ತಯಾರಿಸುವ ಭಾರತದ ಔಷಧ ಕಂಪನಿಗಳಿಂದ ನೇರ ಲಾಭ ಪಡೆಯುವವರು ಮಾತ್ರ ಅಮೇರಿಕದ ಸಾಮಾನ್ಯ ಜನತೆ!!
ಇದಕ್ಕೆ ಇಲ್ಲಿದೆ ನೋಡಿ ಒಂದು ಉದಾಹರಣೆ: ಆಂಬಿಯನ್ ಎನ್ನುವುದು ನಿದ್ರಾಹೀನತೆ ಇರುವವರು ತೆಗೆದುಕೊಳ್ಳುವ ಜನಪ್ರಿಯ ಔಷಧ ಗುಳಿಗೆ. ಅದರ ಒಂದು ತಿಂಗಳ ಪ್ರಿಸ್ಕ್ರಿಪ್ಷನ್‌ಗೆ ಈಗ ತಗಲುತ್ತಿರುವ ಖರ್ಚು 5000 ರೂಪಾಯಿಗಳು. ಆದರೆ ಇದರ ಪೇಟೆಂಟ್ ಈ ವರ್ಷಕ್ಕೇ ಕೊನೆಯಾಗಲಿದೆ. ಹಕ್ಕುಸ್ವಾಮ್ಯವಿಲ್ಲದ ಜನರಿಕ್ ಔಷಧವಾಗಿ ಈ ಗುಳಿಗೆ ಸಿಗಲು ಆರಂಭವಾದೊಡನೆ ಅದಕ್ಕೆ ತಗಲುವ ಮಾಸಿಕ ವೆಚ್ಚ 1800 ರೂಪಾಯಿಗೆ ಇಳಿಯಲಿದೆ! ಆಂಬಿಯನ್ ಜೊತೆಜೊತೆಗೆ ರಕ್ತದೊತ್ತಡದ ನಾಲ್ಕು ಔಷಧಗಳ ಮತ್ತು ಇನ್ನೂ ಹಲವು ಔಷಧಗಳ ಹಕ್ಕುಸ್ವಾಮ್ಯ ಇದೇ ವರ್ಷ ಕೊನೆಯಾಗಲಿದೆ. ಮುಂದಿನ ಐದು ವರ್ಷಗಳಲ್ಲಿ ಹೀಗೆ ಹಕ್ಕುಸ್ವಾಮ್ಯ ಕಳೆದುಕೊಂಡು ಜನರಿಕ್ ಔಷಧ ರೂಪದಲ್ಲಿ ಲಭ್ಯವಾಗಲಿರುವ ಔಷಧಗಳ ಸಂಖ್ಯೆ ಸುಮಾರು 65!
ಇನ್ನು, ಇದೆಲ್ಲದರಿಂದ ನಮಗೇನು ಲಾಭ, ಅಂತೀರ? ಔಷಧ ಕ್ಷೇತ್ರದಲ್ಲಿ ಅಷ್ಟೇನೂ ದೊಡ್ಡಮಟ್ಟದ ಸಂಶೋಧನೆಗಳನ್ನು ಮಾಡಿ ದೊಡ್ಡದೊಡ್ಡ ಔಷಧಗಳನ್ನು ಕಂಡುಹಿಡಿಯಲಾಗದೆ ಇದ್ದರೂ ಜನರಿಕ್ ಔಷಧಗಳನ್ನು ಅಗ್ಗದ ಬೆಲೆಯಲ್ಲಿ ತಯಾರಿಸಲು ನಮ್ಮ ಭಾರತದ ಔಷಧ ಕಂಪನಿಗಳು ಸಮರ್ಥರು. ಈ ಮೇಲಿನ ಬೆಳವಣಿಗೆಗಳಿಂದಾಗಿ ಇವರ ಉತ್ಪಾದನೆ, ಆದಾಯ ಮತ್ತು ಉದ್ಯೋಗಸೃಷ್ಟಿ ಜೊತೆಜೊತೆಗೆ ಬೆಳೆಯಲಿದೆ. ಆ ಲಾಭವನ್ನು ಅವರು ಬರಲಿರುವ ದಿನಗಳಲ್ಲಿ R&D ಗೂ ಹಾಕಬಹುದು. ಇನ್ನು, ಊರಿಗೆ ಬಂದವಳು ನೀರಿಗೆ ಬರದೆ ಇರುತ್ತಾಳಾ ಎನ್ನುವ ಹಳೆಯ ಕಾಲದ ಗಾದೆಯಂತೆ, ಅಮೇರಿಕದಲ್ಲಿ ಅಗ್ಗವಾದ ಪರಿಣಾಮಕಾರಿ, ಆಧುನಿಕ ಔಷಧಿಗಳು ನಮ್ಮ ದೇಶದ ಜನರಿಗೂ ಕೈಗೆಟುಕುವ ಬೆಲೆಗೆ ಸಿಗಬಹುದು.
ಈ ಔಷಧಿಗಳ ವಿಚಾರದಲ್ಲಿ ಹೇಗೆ ನೋಡಿದರೂ ನಮಗೆ ಲಾಭ ಇದೆ.
ಆದರೆ ಈ ಲಾಭವನ್ನು ನಮ್ಮ ಔಷಧ ಕಂಪನಿಗಳು ಮತ್ತೊಂದು ಎತ್ತರಕ್ಕೆ ಏರಿ ಹೋಗಲು ಬಳಸಿಕೊಳ್ಳುತ್ತವೊ ಅಥವ ಐಟಿ ಕ್ಷೇತ್ರದ ದೊಡ್ಡವರು R&D ಗೆ ಹೆಚ್ಚಿನ ದುಡ್ಡು ಹಾಕದೆ ದಿನತಳ್ಳುತ್ತಿರುವಂತೆ ಇವರೂ ರಿಸ್ಕ್ ತೆಗೆದುಕೊಳ್ಳದೆ ಹೋಗಿಬಿಡುತ್ತಾರೊ ಎನ್ನುವುದೆ ಮುಂದಿನ ಕುತೂಹಲ…