ಬಹಿರಂಗ ಕಾಮಕೇಳಿಯಲ್ಲಿ ಜನ ಮತ್ತು ರಾಜಕಾರಣಿಗಳು – ಛೇ… ಛೀ… ಥೂ… ಅಯ್ಯೋ…

This post was written by admin on October 23, 2007
Posted Under: Uncategorized

ಕಳೆದ ಹಲವಾರು ವಾರಗಳಿಂದ ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕಾರಣ ಕೇವಲ ಅರೆಮಬ್ಬಿನ ಕೋಣೆಯಲ್ಲಷ್ಟೆ ಕಾಣಸಿಗುವ ವಿಕೃತ ರಂಜನೆಯನ್ನು ಜನರಿಗೆ ಬಹಿರಂಗವಾಗಿ ನೀಡುತ್ತಿದೆ. ಆದರೆ ತಾವು ನೋಡುತ್ತಿರುವ ಈ ವ್ಯಭಿಚಾರದ ನಾಟಕ ತಾವೆ ಸೃಷ್ಟಿಸಿದ ಒಂದು ಅಂಕ ಮತ್ತು ಅದರಲ್ಲಿ ತಾವು, ತಮ್ಮ ಮನೆಯವರು, ತಮ್ಮ ಮುಂದಿನ ಪೀಳಿಗೆಯವರೂ ಪಾಲ್ಗೊಂಡಿದ್ದಾರೆ ಎನ್ನುವುದನ್ನು ಆ ಕ್ಷಣಿಕ ಉದ್ರೇಕೋನ್ಮತ್ತ ಸ್ಥಿತಿಯಲ್ಲಿ ಜನ ಮರೆತಿದ್ದಾರೆ.

ಯಾವ ಪಕ್ಷಕ್ಕೂ ಬಹುಮತ ನೀಡದೆ, “ನೀನು ನಮ್ಮ ರಾಜ್ಯದ ಮುಖ್ಯಮಂತ್ರಿಯಾಗಲು ಯೋಗ್ಯ” ಎಂಬ ಸಂದೇಶವನ್ನು ಜನ ಯಾವೊಬ್ಬನಿಗೂ ನೀಡದೆ ಇದ್ದಾಗ ಕರ್ನಾಟಕದ ಎಲ್ಲಾ ನಾಚಿಕೆಗೆಟ್ಟ ರಾಜಕಾರಣಿಗಳೆಲ್ಲ ತಾನೆ ಮುಖ್ಯಮಂತ್ರಿಯಾಗಲು ಯೋಗ್ಯ ಎಂದು ಮುಂದೆ ಬಂದುಬಿಟ್ಟರು. ಇಂತಹ ಬಹುಮತವಿಲ್ಲದ ಸ್ಥಿತಿಯಲ್ಲಿ ಮಂತ್ರಿಯೊ ಮುಖ್ಯಮಂತ್ರಿಯೊ ಆಗುವಾಗ ಇರಬೇಕಾದ ಕನಿಷ್ಠ ನಾಚಿಕೆಯೂ ಇಲ್ಲದೆ ಈ ಭಂಢರು ಎಗ್ಗುಸಿಗ್ಗಿಲ್ಲದೆ ಅದಕ್ಕೆ ಜನಾಭಿಪ್ರಾಯ, ಸಿದ್ಧಾಂತ ಅಂತೆಲ್ಲ ಘೋಷಿಸಿ ಬಿಟ್ಟರು. ಜನ ಸುಮ್ಮನೆ ನೋಡುತ್ತ ನಿಂತರು.

ಲೇಖನದ ವಿಡಿಯೊ ಪ್ರಸ್ತುತಿ – ಭಾಗ 1

ತನ್ನ ಕ್ಷೇತ್ರದ ಹೊರಗೆ ಮತ್ತೊಬ್ಬ ಕಾಂಗ್ರೆಸ್ಸಿಗನನ್ನು ಗೆಲ್ಲಿಸಲೂ ಯೋಗ್ಯತೆ ಇಲ್ಲದ ಕಾಂಗ್ರೆಸ್‌ನ ಅನೇಕ ಮುಖಂಡರು 224 ಶಾಸಕರನ್ನು ಪ್ರತಿನಿಧಿಸಬೇಕಾದ ಮುಖ್ಯಮಂತ್ರಿ ಹುದ್ದೆಯನ್ನು ಕೇವಲ ತಮ್ಮ ಸೀನಿಯಾರಿಟಿ ಮತ್ತು ಕಾಲು ನೆಕ್ಕುವ ನಿರ್ಲಜ್ಜ ಯೋಗ್ಯತೆಯ ಆಧಾರದ ಮೇಲೆ ತಮಗೂ ಹಕ್ಕಿದೆ ಎಂದು ಸಾಧಿಸುತ್ತಾರೆ. ಪಕ್ಷಾವಾರು ಲೆಕ್ಕಾಚಾರದಲ್ಲಿ ಜೆಡಿಎಸ್ ಶಾಸನಸಭೆಯಲ್ಲಿ ಮೂರನೇ ಸ್ಥಾನದಲ್ಲಿದ್ದರೂ ಅದರ ನಾಯಕನಿಗೆ ತಾನೆ ಮುಖ್ಯಮಂತ್ರಿಯಾಗಬೇಕು. ತನ್ನ ಪಕ್ಷ ಮೊದಲೆರಡು ಸ್ಥಾನದಲ್ಲಿ ಇಲ್ಲದಿದ್ದರೂ ಅವರ ಪ್ರಕಾರ ತನ್ನನ್ನು ಮುಖ್ಯಮಂತ್ರಿ ಮಾಡದ ಜನ ಮತ್ತು ಪಕ್ಷ ವಿಶ್ವಾಸದ್ರೋಹಿಗಳು. ಪಕ್ಷ ಬಿಟ್ಟ ಅವರ ಹಿಂದೆ ಹೋಗಿದ್ದು ಕೇವಲ ಏಳು ಜನ ಮಾತ್ರ. ನಲವತ್ತು ಶಾಸಕರನ್ನು ಬೆನ್ನ ಹಿಂದೆ ಇಟ್ಟುಕೊಂಡವರೆಲ್ಲ ಸಮಗ್ರ ಕರ್ನಾಟಕದ ಪರಮೋಚ್ಚ ಪ್ರತಿನಿಧಿ. ಜಾತ್ಯತೀತ, ಕೋಮುವಾದ, ಭ್ರಷ್ಟಾಚಾರ, ಪ್ರಜಾಪ್ರಭುತ್ವ ಇವೆಲ್ಲ ತಮಗೆ ಬೇಕೆಂದಾಗ ಬದಲಾಯಿಸಿಕೊಳ್ಳಬಲ್ಲ ಆಟದ ನಿಯಮಗಳು. ಕಾಮಾತುರದಲ್ಲಿ ಮೂತಿಮುಖ ನೋಡದೆ ಸಂಗ ಮಾಡಿಬಿಟ್ಟು, ತೀಟೆ ತೀರಿದ ನಂತರ, “ಅಯ್ಯೋ, ನೀನು ‘ಕುಂಕುಮ’ ಇಟ್ಟುಕೊಂಡ ಹೊಲಸು ಎಂದು ಗೊತ್ತೇ ಇರಲಿಲ್ಲ,” ಎಂದು ಹೇಳುವ ಸಮಯಸಾಧಕರೆಲ್ಲ “ಹಿಂದಿನ ಅರವತ್ತು ವರ್ಷಗಳಲ್ಲಿ ಯಾರೂ ಮಾಡಿರದಷ್ಟು ಕೆಲಸ ಮಾಡಿರುವ ಮಹಾನ್ ಸಾಧಕರು!” ನೈತಿಕತೆಯ ವಿಷಯಕ್ಕೆ ಬಂದರೆ, ಅದು ನಿಜವೆ.

ಅದು 1999 ರ ವಿಧಾನಸಭಾ ಚುನಾವಣೆಯ ಸಮಯ. ತಾನೆ ಮುಂದಿನ ಮುಖ್ಯಮಂತ್ರಿ ಎಂದು ಬಿಜೆಪಿಯ ಆ ಕುಂಕುಮಧಾರಿ ರಾಜ್ಯದಲ್ಲೆಲ್ಲ ತಮ್ಮನ್ನು ಬಿಂಬಿಸಿಕೊಂಡು ಬಂದರು. ವಿಶೇಷವಾದ ಸೂಟುಗಳನ್ನು ಸಹ ಹೊಲಿಸಿಕೊಂಡು ಬಿಟ್ಟಿದ್ದಾರೆ ಎಂಬ ಪುಕಾರಿತ್ತು. ನೋಡಿದರೆ ಅವರ ಕ್ಷೇತ್ರದ ಜನರೆ ಆ ಬಾರಿ ಅವರನ್ನು ಶಾಸಕರನ್ನಾಗಿ ಮಾಡಲಿಲ್ಲ. ಅವರ ಪಕ್ಷಕ್ಕೆ ಸಿಕ್ಕಿದ್ದು ಕೇವಲ 44 ಸ್ಥಾನಗಳು. 2004 ರ ಚುನಾವಣೆಯಲ್ಲಿ ಅವರ ಪಕ್ಷಕ್ಕೆ ಮೊದಲ ಸ್ಥಾನವೇನೊ ಬಂತು. ಆದರೆ ಅದು ಕೇವಲ ಮೂರನೆ ಒಂದು ಭಾಗದಷ್ಟು ಸ್ಥಾನಗಳು ಮಾತ್ರ. “ಮುಖ್ಯಮಂತ್ರಿ ಸ್ಥಾನ ಬೇಡ, ಕೊನೆಗೆ ಮಂತ್ರಿ ಸ್ಥಾನ ಕೊಟ್ಟರೂ ಪರವಾಗಿಲ್ಲ, ನಿಮ್ಮ ಪಕ್ಷಕ್ಕೆ ಬಂದುಬಿಡುತ್ತೇನೆ,” ಎಂದು ಕೇವಲ ಇಪ್ಪತ್ತು ತಿಂಗಳ ಹಿಂದಷ್ಟೆ ಕಾಂಗ್ರೆಸ್ ಮತ್ತು ಜನತಾದಳಗಳೆರಡರ ಕಾಲಿಗೂ ಬಿದ್ದಿದ್ದರು. ಈಗಲೂ ವಂಚನೆ, ವಚನಭ್ರಷ್ಟತೆ ಎಂದೆಲ್ಲ ಹಾರಾಡುತ್ತ ತುಮಕೂರಿನಲ್ಲಿ ಭಾಷಣ ಬಿಗಿಯಲು ಕುಳಿತಿದ್ದರು. “ನಿಮ್ಮನ್ನೆ ಮುಖ್ಯಮಂತ್ರಿ ಮಾಡುತ್ತೇವೆ, ಬನ್ನಿ” ಎಂದದ್ದೆ ಬೆಂಗಳೂರಿನಿಂದ ಕೇವಲ 70 ಕಿ.ಮಿ. ದೂರದಲ್ಲಿರುವ ತುಮಕೂರಿನಿಂದ ಹೆಲಿಕಾಪ್ಟರ್‌ನಲ್ಲಿ ಓಡೋಡಿ ಬಂದರು. ತಮ್ಮ ನಾಲಿಗೆಯಿಂದ ಹೊರಳಿದ ವಾಕ್ಯವನ್ನು ಕೇಳಿರುವ ಲಕ್ಷಾಂತರ ಜನರಿಗೆ “ನನ್ನ ಮಾತನ್ನು ಮಾಧ್ಯಮದವರು ತಿರುಚಿದ್ದಾರೆ, ನಾನು ಹಾಗೆ ಹೇಳಿಯೆ ಇಲ್ಲ,” ಎನ್ನುವವರಿಗೆಲ್ಲ ಇನ್ನೊಬ್ಬರ ವಚನಭ್ರಷ್ಟತೆಯ ಬಗ್ಗೆ, ವಿಶ್ವಾಸದ್ರೋಹದ ಬಗ್ಗೆ ಮಾತನಾಡುವಷ್ಟು ನಿರ್ಲಜ್ಜತೆ, ಅಹಂಕಾರ, ನೈತಿಕ ಹಕ್ಕು!

ಕ್ಷುದ್ರಮತಿಗಳ ಮತೀಯ ಸಂಘರ್ಷವನ್ನು ತಮ್ಮ ರಾಜಕಾರಣಕ್ಕೆ ಉಪಯೋಗಿಸುವ ಧರ್ಮಭ್ರಷ್ಟ ಪಕ್ಷದ ಬಗ್ಗೆ ಇನ್ನೊಂದು ಮಾತು. ಜನಾರ್ಧನ ರೆಡ್ಡಿಯನ್ನು ಅಮಾನತು ಮಾಡಿದ್ದೇವೆ ಅನ್ನುತ್ತಾರೆ; ಮೊನ್ನೆಯ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಳ್ಳಾರಿಯಲ್ಲಿ ಪಕ್ಷದ ಮುಖಂಡತ್ವ ರೆಡ್ಡಿಯದೆ. ತನ್ನ ವ್ಯಭಿಚಾರದಿಂದಾಗಿ ಟೀವಿ ನೋಡುವ ಕನ್ನಡನಾಡಿನ ಚಿಕ್ಕಮಕ್ಕಳಿಗೂ ತಾನು ನಟಿಸಿರುವ ಬ್ಲೂಫಿಲಂ ಚಿತ್ರಗಳನ್ನು ತೋರಿಸಿದ ರೇಣುಕಾಚಾರ್ಯ ಎಂಬ ಕಾಮುಕಾಚಾರ್ಯರನ್ನು ತಮ್ಮ ಧಾರ್ಮಿಕ ಪಕ್ಷದಿಂದ ಅಮಾನತು ಮಾಡಿದ್ದೇವೆ ಅಂದಿದ್ದರು; ಆದರೆ ವಾರದ ಹಿಂದೆ ಅಧಿಕಾರದಾಹಿ ಯಡಿಯೂರಪ್ಪ ನಿಮಿಷಕ್ಕೊಂದು ಮಾತು ಹೇಳುತ್ತ ಟೀವಿಯವರ ಮುಂದೆ ಕಾಣಿಸಿಕೊಳ್ಳುತ್ತಿದ್ದಾಗ ಪ್ರತಿಸಲವೂ ಅವರ ಹಿಂದೆ ಬಾಡಿಗಾರ್ಡ್ ತರಹ ಕಾಣಿಸಿಕೊಳ್ಳುತ್ತಿದ್ದದ್ದು ಅದೇ ರೇಣುಕಾಚಾರ್ಯ. ಐದೂವರೆ ಕೋಟಿ ಜನರಿಗೆ ಹೀಗೆ ಹಿಮಾಲಯ ಗಾತ್ರದ ವಚನವಂಚನೆ ಮಾಡುತ್ತಿರುವ, ಅದನ್ನು ಸಮರ್ಥಿಸಿಕೊಳ್ಳುತಿರುವ ಈ ಜನರಿಗೆ ರಾಮನ ಬಗ್ಗೆ, ಬಸವಣ್ಣನ ಬಗ್ಗೆ, ವಚನಪರಿಪಾಲನೆ ಬಗ್ಗೆ ಮಾತನಾಡುವ ಪ್ರಾಥಮಿಕ ಯೋಗ್ಯತೆ ಇದೆಯೆ?

ಕೊಳಕರಿಗೆಲ್ಲ ಆರತಿ ಎತ್ತುವ ಹೆಂಗಸರು:

ಕಳೆದ ಹತ್ತಿಪ್ಪತ್ತು ವರ್ಷಗಳಿಂದ ಹಿಂದೆಂದಿಗಿಂತಲೂ ಹೆಚ್ಚು ಹಣವನ್ನು ಕರ್ನಾಟಕದ ಜನ ನೋಡುತ್ತಿದ್ದಾರೆ. ಅದೇ ಮೂಲಕಾರಣವಾಗಿ, ಹಣದ ಹೊರತಾಗಿ ಮಿಕ್ಕ ಯಾವ ಯೋಗ್ಯತೆಯೂ ಇಲ್ಲದ ಸ್ಕೌಂಡ್ರಲ್‌ಗಳು, ರೋಗ್‌ಗಳೆಲ್ಲ ತಮ್ಮ ವೈಯಕ್ತಿಕ ಐಡೆಂಟಿಟಿಗಾಗಿ ಚುನಾವಣೆಗೆ ಇಳಿಯುತ್ತಿದ್ದಾರೆ. ಚುನಾವಣೆ ಬಂತು ಎಂದರೆ ಜನರಿಗೆ ಊರಹಬ್ಬ. ಅನೇಕರ ಮನೆಗಳು ಗುಂಡಿನ ಗಡಂಗುಗಳಾಗಿ ಬದಲಾಗಿ ಬಿಡುತ್ತವೆ. ಗಂಡಸರಿಗೆ ಯಥೇಚ್ಚವಾಗಿ ಗುಂಡು ತುಂಡಿನ ಸರಬರಾಜು. ಓಟಿನ ಭಿಕ್ಷೆ ಬೇಡುತ್ತ ಬರುವವನಿಗಾಗಿ ಕಾಯುತ್ತ ಕುಳಿತ ಗರತಿಯರು ಕೊಳಕರಿಗೆಲ್ಲ ಆರತಿ ಎತ್ತುತ್ತಾರೆ. ತಟ್ಟೆಯಲ್ಲಿ ಅವನು ಹಾಕಿದ ನೋಟು ನೂರು ರೂಪಾಯಿಯದೊ ಐದುನೂರು ರೂಪಾಯಿಯದೊ ಎಂಬ ಚಿಂತೆ ಈ ನಾರಿಯರಿಗೆ.
ತನ್ನ ಗಂಡ ರಾಜ್ಯದ ಮುಖ್ಯಮಂತ್ರಿಯಾಗಿದ್ದರೆ ನಡುಬೀದಿಯಲ್ಲಿ ಓಟು ಕೇಳುವ ಮತ್ತು ಆರತಿ ತಟ್ಟೆಗಳಿಗೆ ನೋಟು ಹಾಕುವ ತಲೆಹಿಡುಕ ಕೆಲಸ ರಾಜ್ಯದ ಮುಖ್ಯಮಂತ್ರಿಯ ಹೆಂಡತಿಯೆ ಮಾಡುತ್ತಿರುತ್ತಾಳೆ.

ಸುಮಾರು ನಲವತ್ತು ವರ್ಷದ ಹಿಂದೆ ಆಗಿದ್ದು ಇದು. ನನ್ನೂರಿನ ಆ ಹಿರಿಯರು ಸ್ವಾತಂತ್ರ್ಯದ ಸಮಯದಲ್ಲಿಯೆ ಕ್ರಿಯಾಶೀಲರಾಗಿದ್ದವರು. ತಮ್ಮ ಮುವ್ವತ್ತರ ವಯಸ್ಸಿಗೆಲ್ಲ ನಮ್ಮ ತಾಲ್ಲೂಕಿನಲ್ಲಿ ಹೆಸರುವಾಸಿಯಾಗಿದ್ದವರು. ಅವರಿಗೆ ಕೊಡಬೇಕಿದ್ದ ಎಂ.ಎಲ್.ಎ. ಸೀಟನ್ನು ಕಾಂಗ್ರೆಸ್ ಪಕ್ಷ ಪಕ್ಕದ ರಾಜ್ಯದ ಮುಖ್ಯಮಂತ್ರಿಯ ಅಳಿಯನಿಗೆ ಕೊಟ್ಟುಬಿಟ್ಟಿತು. ಇವರು ಪಕ್ಷೇತರರಾಗಿ ನಿಂತರು. ಜಿದ್ದಾಜಿದ್ದಿಯ ಚುನಾವಣೆ ಅದು. ಕಾಂಗ್ರೆಸ್‌ನಿಂದ ಏನನ್ನು ನಿಲ್ಲಿಸಿದರೂ ಗೆಲ್ಲುತ್ತಿದ್ದ ಆ ಸಮಯದಲ್ಲಿ ಇವರು ಕಾಂಗ್ರೆಸ್‌ಗೆ ಸೋತಿದ್ದು ಕೇವಲ ಮೂರಂಕಿಯ ಮತಗಳ ಅಂತರದಿಂದ. ಆಗ ಗೆದ್ದ ಅಭ್ಯರ್ಥಿ ನನ್ನ ಕ್ಷೇತ್ರದ ಜನರನ್ನು ಕುರಿತು ಒಂದು ಮಾತು ಹೇಳಿದನಂತೆ: “ಈ ಕ್ಷೇತ್ರದವರು ದುಡ್ಡು ಕೊಟ್ಟರೆ ಹೆಂಡತಿಯರನ್ನು ಬೇಕಾದರೂ ಕೊಟ್ಟುಬಿಡುತ್ತಾರೆ.”

ಹತ್ತು ತಿಂಗಳ ಹಿಂದೆ ಕರ್ನಾಟಕದಲ್ಲಿ ಒಂದು ಶಾಸಕ ಸ್ಥಾನಕ್ಕೆ ಚುನಾವಣೆ ಆಯಿತು. ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರ ಅದು. ಸಿದ್ಧರಾಮಯ್ಯ ಹಲವಾರು ವರ್ಷಗಳಿಂದ ರಾಜಕೀಯದಲ್ಲಿರುವವರು. ಶುರುವಿನಲ್ಲಿ ಇವರದು ಹೋರಾಟದ ರಾಜಕೀಯವೆ. ಮಂತ್ರಿಯಾಗಿ ಹಲವಾರು ವರ್ಷ “ಸೇವೆ”ಯನ್ನೂ ಸಲ್ಲಿಸಿದ್ದಾರೆ. ಒಂದು ವರ್ಷಕ್ಕೂ ಹೆಚ್ಚಿನ ಕಾಲ ಉಪಮುಖ್ಯಮಂತ್ರಿ ಆಗಿದ್ದವರು. ಕರ್ನಾಟಕದ ಶಾಸನಸಭೆಯಲ್ಲಿ ಇವರಿಗಿಂತ ನೀಚರೂ, ಭ್ರಷ್ಟರೂ, ದುಷ್ಟರೂ, ಅವಿವೇಕಿಗಳೂ, ಅಜ್ಞಾನಿಗಳೂ, ಅನರ್ಹರೂ ಶಾಸಕರಾಗಿರುವಾಗ ಇವರೂ ಒಬ್ಬ ಶಾಸಕರಾಗಿ ಅಲ್ಲಿದ್ದರೆ ನಾಡಿಗೆ ಸ್ವಲ್ಪಮಟ್ಟಿಗೆ ಕ್ಷೇಮವೆ. ಆದರೆ, ಕೇವಲ ಜಾತಿಬಲದಿಂದ, ದುಡ್ಡಿನ ಬಲದಿಂದ, ಅಧಿಕಾರಪಕ್ಷ ಬಲದಿಂದ ಇವರೆದುರು ಚುನಾವಣೆಗೆ ನಿಂತ ಶಿವಬಸಪ್ಪನವರಿಗೆ ಸಂವಿಧಾನದತ್ತ ಹಕ್ಕಿನ ಯೋಗ್ಯತೆ ಬಿಟ್ಟರೆ ಶಾಸಕರಾಗಲು ಸಿದ್ಧರಾಮಯ್ಯನವರಿಗಿಂತ ಇನ್ಯಾವ ತರಹದ ಹೆಚ್ಚಿನ ಯೋಗ್ಯತೆ ಇತ್ತು ಎನ್ನುವುದು ಉತ್ತರವಿಲ್ಲದ ಪ್ರಶ್ನೆ.

ಈ ಹಿನ್ನೆಲೆಯಲ್ಲಿ ನೋಡಿದಾಗ, ಹತ್ತಾರು ಕೋಟಿ ರೂಪಾಯಿಗೂ ಹೆಚ್ಚಿನ ಹಣ ಹರಿಯಿತು ಎನ್ನುವ ಆ ಉಪಚುನಾವಣೆಯಲ್ಲಿ ಸಿದ್ಧರಾಮಯ್ಯ ಕೇವಲ 257 ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದರೆ ಆ ಕ್ಷೇತ್ರದ ಜನ ಇನ್ನೆಂತಹ ಪ್ರಲೋಭನೆಗೆ, ನೈತಿಕ ಭ್ರಷ್ಟತೆಗೆ, ತಲೆಹಿಡುಕತನಕ್ಕೆ ಒಳಗಾಗಿರಬೇಡ? ಇಲ್ಲಿ ಸಿದ್ಧರಾಮಯ್ಯನವರೇನೂ ಕಮ್ಮಿ ಇಲ್ಲ. ಕಾಂಗ್ರೆಸ್‌ನಲ್ಲಿರುವ ಜಾತಿಬಲದ, ಹಣಬಲದ ಲೂಟಿಕೋರ ಭ್ರಷ್ಟರನ್ನೆಲ್ಲ ತಮ್ಮ ಕ್ಷೇತ್ರಕ್ಕೆ ಕರೆತಂದು ತಮ್ಮ ಪರ ಕೋಟ್ಯಾಂತರ ರೂಪಾಯಿ ಚೆಲ್ಲಲು ದಾರಿಮಾಡಿಕೊಡುತ್ತಾರೆ. ಕಾಂಗ್ರೆಸ್ಸಿನ ರಾಜ್ಯಘಟಕದ ಅಧ್ಯಕ್ಷರೆ ಕಾರಿನಲ್ಲಿ ಹತ್ತಾರು ಲಕ್ಷ ಕ್ಯಾಷ್‌ನೊಂದಿಗೆ ಸಿಕ್ಕಿ ಬೀಳುತ್ತಾರೆ. ವಾರೆವ್ಹಾ. ಜನರನ್ನು ಭ್ರಷ್ಟರನ್ನಾಗಿಸಲು ಸಮಬಲದ ಪೈಪೋಟಿ! ಅಷ್ಟೆಲ್ಲ ಕೋಟಿ ಹಣ ಆ ಒಂದೇ ಒಂದು ಕ್ಷೇತ್ರದಲ್ಲಿ ಹರಿಯಿತು ಅಂದರೆ ಆ ಕ್ಷೇತ್ರದ ಜನರಿಗೆ ಈ ತಲೆಹಿಡುಕರು ಎಷ್ಟೊಂದು ಸಲ ತಲೆ ನೀವಿರಬೇಡ? ಬಹುಶಃ ಅಲ್ಲಿ ಸೋತವರು ಕೊನೆಯಲ್ಲಿ ಹೀಗೆಯೂ ಹೇಳಿರಬಹುದಲ್ಲವೆ: “ಈ ಕ್ಷೇತ್ರದ ಜನ ತಮ್ಮ ಮನೆಯವರನ್ನು ಹರಾಜಿಗೆ ಇಟ್ಟು ಯಾರು ಹೆಚ್ಚಿಗೆ ದುಡ್ಡು ಕೊಡುತ್ತಾರೊ ಅವರಿಗೆ ಮಾತ್ರ ಕೊಡುತ್ತಾರೆ. ಮುಂದಿನ ಸಲ ಇನ್ನೂ ಹೆಚ್ಚಿನ ದುಡ್ಡಿನೊಂದಿಗೆ ಬಂದು ನಾವೆ ಮಜಾ ಮಾಡೋಣ!”

ಛೇ. ಇದನ್ನೆಲ್ಲ ನೋಡಿದರೆ ನಮ್ಮ ನಾಡಿನ ಅನೇಕ ಸಜ್ಜನರ ಮನೆಗಳು ಮನೆಯವರೆಲ್ಲ ವ್ಯಭಿಚಾರಕ್ಕೆ ಇಳಿದ ವೇಶ್ಯಾಗೃಹಗಳಾಗಿ ಪರಿವರ್ತನೆಯಾಗಿ ಬಿಟ್ಟಿವೆ ಎಂದರೆ ಅದು ಅಪಚಾರವೆ?

ಜೈಲಿಗೆ ಹೋಗದ ಗಣಿ ರೆಡ್ಡಿ ಅಂಡ್ ಕೊ ಅಥವ ಕುಮಾರಸ್ವಾಮಿ ಅಂಡ್ ಕೊ.:

ನಮ್ಮ ಪತ್ರಿಕೆಯ (ವಿಕ್ರಾಂತ ಕರ್ನಾಟಕ) ಸೆಪ್ಟೆಂಬರ್ 29, 2006 ರ ಸಂಚಿಕೆಯಲ್ಲಿನ ನನ್ನ ಅಂಕಣ ಲೇಖನದ ಶೀರ್ಷಿಕೆ, “ಗೃಹಖಾತೆ ಎನ್ನುವುದು ಒಂದಿದೆಯೆ?” ಅದರಲ್ಲಿ ಆಗ ತಾನೆ ಹೊರಗೆ ಬಂದಿದ್ದ ಗಣಿ ಹಗರಣವನ್ನು ಕುರಿತು ಹೀಗೆ ಬರೆದಿದ್ದೆ: “(ಗಣಿ ಹಗರಣದ ವಿಡಿಯೊ ಸೀಡಿಗಳಲ್ಲಿರುವುದು) ನಿಜವಾದ ವಿಡಿಯೊ ಚಿತ್ರವೊ ಇಲ್ಲಾ ಕೃತಕವಾಗಿ ತಯಾರಿಸಿದ್ದೊ ಎಂದು ನಮ್ಮ ಪೋಲಿಸ್ ಇಲಾಖೆ ಇಲ್ಲಿಯವರೆಗೆ ತಿಳಿದುಕೊಳ್ಳಲಾಗಲಿಲ್ಲ ಎಂದರೆ ಇಂತಹ ಅನಾದಿಕಾಲದ ತಂತ್ರಜ್ಞಾನ ಹೊಂದಿರುವವರ ಕೈಯಲ್ಲಿ ನಮ್ಮ ಭವಿಷ್ಯದ ಸುರಕ್ಷತೆಯನ್ನು ಕನಸುವುದಕ್ಕಿಂತ ಹಗಲು ಕನಸು ಬೇರೊಂದಿಲ್ಲ. ಅವು ಕೃತಕವೇ ಆಗಿರಲಿ, ಇಲ್ಲವೆ ನೈಜದ್ದೆ ಆಗಿರಲಿ, ಅವುಗಳ ಮೂಲ ಎಲ್ಲಿಯದು ಎನ್ನುವುದನ್ನು ಪೋಲಿಸ್ ಇಲಾಖೆ ಇಷ್ಟೊತ್ತಿಗೆ ಕಂಡು ಹಿಡಿದು ಜನಕ್ಕೆ ತಿಳಿಸಬೇಕಿತ್ತು. ಅದು ಕೃತಕವೇ ಆಗಿದ್ದಲ್ಲಿ ಈ ಸೀಡಿ ಪ್ರಕರಣ ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಕಂಡ ಅತಿ ದೊಡ್ಡ ವಂಚನೆ. ಹಾಗಿದ್ದ ಪಕ್ಷದಲ್ಲಿ ಜನಾರ್ಧನ ರೆಡ್ಡಿ ಬಳ್ಳಾರಿಯ ಮನೆಯಲ್ಲಲ್ಲ, ಅಲ್ಲಿನ ಜೈಲಿನಲ್ಲಿ ಕಂಬಿ ಎಣಿಸಬೇಕು. ಸೀಡಿಯಲ್ಲಿರುವುದು ನಿಜವೇ ಆಗಿದ್ದಲ್ಲಿ ಚೆನ್ನಿಗಪ್ಪ, ಪ್ರಕಾಶ್, ಕುಮಾರಸ್ವಾಮಿಯಾದಿಯಾಗಿ ಹತ್ತಾರು ಜನ ತಮ್ಮ ಭ್ರಷ್ಟಾಚಾರ ಹಾಗೂ ಅಧಿಕಾರ ದುರುಪಯೋಗದ ಪ್ರಯಕ್ತ ಬೆಂಗಳೂರಿನ ವಿಧಾನಸೌಧದಲ್ಲಲ್ಲ, ಪರಪ್ಪನ ಅಗ್ರಹಾರದ ಕಾರಾಗೃಹದ ಕತ್ತಲು ಕೋಣೆಯಲ್ಲಿ ತಮ್ಮ ಕೊನೆಗಾಲದ ತನಕ ಕಾಲ ತಳ್ಳಬೇಕು. ಇವೆರಡರಲ್ಲಿ ಒಂದು ಆಗಲೇಬೇಕು. ಇಲ್ಲದಿದ್ದಲ್ಲಿ ಕರ್ನಾಟಕದಲ್ಲಿ ಕಾನೂನು, ನ್ಯಾಯ, ಆಡಳಿತ, ನೈತಿಕತೆ ಸತ್ತಿದೆ ಎಂದೇ ಅರ್ಥ. ನೀವು ಈ ಮಾತಿಗೆ ನಗುತ್ತಿರುವಿರಿ ಎಂದಾದರೆ, ಇವೆಲ್ಲ ನಮ್ಮಲ್ಲಿ ಎಂದೋ ಸತ್ತಿವೆ ಮತ್ತು ನಮಗೆ ಅವುಗಳ ಅವಶ್ಯಕತೆಯಿಲ್ಲ ಹಾಗೂ ನಾನು ಅಸಾಧ್ಯವನ್ನು ಬಯಸುವ ಹಗಲುಗನಸಿನ ಆಶಾವಾದಿ ಎಂದರ್ಥ, ಅಲ್ಲವೆ?”

ಈ ಹಗರಣ ಬಯಲಿಗೆ ಬಂದು ಈಗ ಒಂದು ವರ್ಷಕ್ಕೂ ಮೇಲಾಗಿದೆ. ಕುಮಾರಸ್ವಾಮಿ/ಚೆನ್ನಿಗಪ್ಪ/ಪ್ರಕಾಶ್ ಗುಂಪಿನ ಯಾರೊಬ್ಬರಿಗೂ ಮತ್ತು ಜನಾರ್ಧನ ರೆಡ್ಡಿಯ ಗುಂಪಿನ ಯಾರೊಬ್ಬರೂ ಜೈಲಿನಲ್ಲಿಲ್ಲ. ಯಾವ ತರಹದ ಕಾನೂನು, ಧರ್ಮ ಮತ್ತು ನೈತಿಕತೆಯ ಪಾಠವನ್ನು ನಾವು ನಮ್ಮ ಮಕ್ಕಳಿಗೆ ಮಾಡುತ್ತಿದ್ದೇವೆ ಎಂಬ ಕಿಂಚಿತ್ ನೋವೂ ಜನಮಾನಸದಲ್ಲಿ ಇದ್ದಂತಿಲ್ಲ. ಇದ್ದರೂ ಅದು ಸಾಂಘಿಕವಾಗಿ ಪ್ರಕಟವಾಗಿಲ್ಲ.

ಮಠಾಧೀಶರಿಗೆ ಈ ಅಧಿಕಾರ ಕೊಟ್ಟವರು ಯಾರು?

ಕರ್ನಾಟಕದ ಯಾವೊಬ್ಬ ಮೇಲ್ಜಾತಿಯ ಮಠಾಧೀಶರಾಗಲಿ ಇಲ್ಲಿಯವರೆಗೂ ಓಟು ಹಾಕಿರುವುದು ಸಂಶಯದ ವಿಚಾರ. ಜನಾಡಳಿತದ ಮೂಲಭೂತ ಪ್ರಕ್ರಿಯೆಯಲ್ಲಿಯೇ ಪಾಲ್ಗೊಳ್ಳದ ಇವರಿಗೆ ಹಸ್ತಾಂತರದ ಬಗ್ಗೆ ಮಾತನಾಡಲು ಯಾವ ಹಕ್ಕಿದೆ? ಒಂದೆರಡು ಜಾತಿಗಳ ಜನರಲ್ಲಿ ಜನವಿರೋಧಿ ಜಾತಿಭಾವನೆ ಪೋಷಿಸುವ, ಜಾತಿಮೂಲ ಹಿಡಿದು ಜನವಿಭಜನೆ ಮಾಡುವ ಇವರಿಗೆ ಸಮಗ್ರ ರಾಜ್ಯದ ಮುಖ್ಯಮಂತ್ರಿ ಯಾರಾಗಬೇಕು ಎಂದು ಹೇಳುವ ಹಕ್ಕು ಬಂದಿದ್ದಾದರೂ ಹೇಗೆ? ಯಡಿಯೂರಪ್ಪನವರಿಗಾದ ಸ್ಥಿತಿ ಸಿದ್ಧರಾಮಯ್ಯನವರಿಗೊ, ಖರ್ಗೆಗೊ ಆಗಿದ್ದರೆ ಅವರು ಈ ರೀತಿ ಮಾತನಾಡುತ್ತಿದ್ದರೆ? “ನೀವು ಮಾಡಿದ್ದು ನನಗಿಷ್ಟವಾಗಿಲ್ಲ” ಎಂದು ನೇರವಾಗಿ ಹೇಳಲಾಗದ ಸಿದ್ಧಗಂಗಾ ಸ್ವಾಮಿಗಳು ಯಡಿಯೂರಪ್ಪನವರ ಸ್ಥಾನದಲ್ಲಿ ಕೆ.ಎಸ್. ಈಶ್ವರಪ್ಪ ಇದ್ದಿದ್ದರೆ ಧರ್ಮಯಾತ್ರೆ ಎಂಬ ಭೀಕರ ಜೋಕ್‌ಗೆ ಆಶೀರ್ವಾದ ಮಾಡುತ್ತಿದ್ದರೆ? ದಸರಾ ಉದ್ಘಾಟನೆಯನ್ನು ನಿರಾಕರಿಸುವುದಕ್ಕೆ ಈ ಶತಾಯುಷಿಗಳು ರಾಜಕಾರಣಿಗಳ ತರಹ ಆರೋಗ್ಯದ ಕಾರಣ ನೀಡುತ್ತಿದ್ದರೆ? ಕುಮಾರಸ್ವಾಮಿಯ ಬದಲಿಗೆ ಒಕ್ಕಲಿಗನಲ್ಲದ ಮತ್ತೊಬ್ಬ ಮುಖ್ಯಮಂತ್ರಿ ಆಗಿದ್ದಿದ್ದರೆ ಬಾಲಗಂಗಾಧರ ಸ್ವಾಮಿಗಳು ಇಷ್ಟೆಲ್ಲ ರಾದ್ಧಾಂತಗಳ ನಡುವೆ ದಸರಾ ಉದ್ಘಾಟನೆಗೆ ಒಪ್ಪಿಕೊಳ್ಳುತ್ತಿದ್ದರೆ?

ಕರ್ನಾಟಕದ ಜನಸಂಖ್ಯೆಯಲ್ಲಿ ಲಿಂಗಾಯತರ ಸಂಖ್ಯೆ ಮುಕ್ಕಾಲು ಕೋಟಿಯ ಆಸುಪಾಸು ಎನ್ನುತ್ತದೆ ಆಗೀಗ ಪ್ರಕಟಗೊಳ್ಳುವ ಜಾತಿವಾರು ಸಂಖ್ಯೆ. ಆದರೆ ಈ ಮಧ್ಯೆ ಕೆಲವು ಲಿಂಗಾಯತ ಮುಖಂಡರು ಎರಡೂವರೆ ಕೋಟಿ ಲಿಂಗಾಯತರಿಗೆ ಮೋಸ, ಮೂರೂವರೆ ಕೋಟಿ ಲಿಂಗಾಯತರಿಗೆ ಮೋಸ ಎನ್ನುತ್ತಿದ್ದಾರೆ. ಆ ಅಸಂಬದ್ಧ ಸುಳ್ಳುಹೇಳಿಕೆಗಳನ್ನು ಕೆಲವು ಪತ್ರಿಕೆಗಳು ಪ್ರಕಟಿಸಿಯೂ ಬಿಟ್ಟಿವೆ. ಜಾತಿಜಾತಿ ಎನ್ನುವ ಈ ಸಂಕುಚಿತ ಕೋಮುವಾದಿಗಳಿಗೆ ಕನಿಷ್ಟ ತಮ್ಮ ಜಾತಿಯ ಜನ ಈಗ ಎಷ್ಟಿದ್ದಾರೆ ಎನ್ನುವ ಸಾಮಾನ್ಯಜ್ಞಾನವೂ ಇಲ್ಲ. ಇನ್ನು ಇವರಿಗೆ ನಿಜಕ್ಕೂ 800 ವರ್ಷಗಳ ಹಿಂದಿನ ಬಸವಣ್ಣನ ಬಗ್ಗೆ ಗೊತ್ತಿದೆಯೆ? ಹೋಗಲಿ, “ಹುಸಿಯ ನುಡಿಯಲು ಬೇಡ” ಎಂದ ಆತನ ಬಗ್ಗೆ ಕನಿಷ್ಟ ಗೌರವವಾದರೂ ಈ ಬಸವದ್ರೋಹಿಗಳಿಗೆ ಇದೆಯೆ?

ಹೀನ ಸಂದರ್ಭದಲ್ಲಿ ನಾವು:

ಈಗ ಒಂದು ನಿಮಿಷ ಯೋಚನೆ ಮಾಡೋಣ. ಈ ಪರಿಸ್ಥಿತಿಯನ್ನು ಕೇವಲ ಕರ್ನಾಟಕಕ್ಕೆ ಸೀಮಿತಗೊಳಿಸಿಕೊಳ್ಳದೆ ಭಾರತದ ಹಿನ್ನೆಲೆಯಲ್ಲಿಯೇ ನೋಡೋಣ. ಪ್ರಜಾಪ್ರಭುತ್ವದ ಅರ್ಥವೇ ಗೊತ್ತಿಲ್ಲದ, ರಾಷ್ಟ್ರೀಯತೆಯ ಪರಿಕಲ್ಪನೆಯೇ ಇಲ್ಲದ, ಸ್ವರಾಜ್ಯದ ಹೊಣೆಯೇ ಬೇಕಿಲ್ಲದ ಬಹುಸಂಖ್ಯಾತ ಸ್ವಾರ್ಥ ಜಾತಿವಾದಿ ಜನಸಮೂಹ ನಮ್ಮದು ಎಂದರೆ ಅದು ತಪ್ಪಾಗುತ್ತದೆಯೆ? ಇಡೀ ಪ್ರಪಂಚದ ಯಾವ ಪ್ರಬುದ್ಧ ಪ್ರಜಾಪ್ರಭುತ್ವದಲ್ಲಿ ನಿಮಗೆ ಈ ಮಟ್ಟದ ನೀಚ, ಲಜ್ಜೆಗೇಡಿ, ನಿರ್ಲಜ್ಜ, ಸ್ವಾರ್ಥ, ಜವಾಬ್ದಾರಿಹೀನ, ಜಾತಿವಾದಿ, ಕೋಮುವಾದಿ ರಾಜಕಾರಣಿಗಳು ಮತ್ತು ಅವರನ್ನು ಚುನಾಯಿಸುವ ಜನರು ಕಾಣ ಸಿಗುತ್ತಾರೆ? ಹೌದು. ನಮಗಿಂತ ಕೆಟ್ಟ ವ್ಯವಸ್ಥೆಗಳು ಇವೆ. ಅನೇಕ ದೇಶಗಳಲ್ಲಿ ಈಗಲೂ ಸರ್ವಾಧಿಕಾರಗಳಿವೆ; ಮಿಲಿಟರಿ ಆಡಳಿತಗಳಿವೆ; ಕಮ್ಯುನಿಸ್ಟ್ ಆಡಳಿತಗಳಿವೆ; ರಾಜಸತ್ತೆಗಳು ಇವೆ. ಆದರೆ ಪ್ರಶ್ನೆ ಅವುಗಳ ಬಗ್ಗೆ ಅಲ್ಲ. ಬೆದರಿಕೆಯಿಲ್ಲದ, ತಮಗೆ ಬೇಕಾದವರನ್ನು ಮುಕ್ತವಾಗಿ ಚುನಾಯಿಸುವ ಸ್ವಾತಂತ್ರ್ಯ ಇರುವ ನಮ್ಮಂತಹ ಎಷ್ಟು ದೇಶಗಳಲ್ಲಿ ರಾಜಕಾರಣಿಗಳು ನಮ್ಮವರಂತೆ ನಿರ್ಲಜ್ಜರೂ, ಭ್ರಷ್ಟರೂ, ಅನೈತಿಕ ಕ್ರಿಮಿಗಳೂ ಆಗಿರುತ್ತಾರೆ?

ಲೇಖನದ ವಿಡಿಯೊ ಪ್ರಸ್ತುತಿ – ಭಾಗ 2

ಇನ್ನು ಕರ್ನಾಟಕದ ವಿಚಾರಕ್ಕೆ ಬಂದರೆ, ನಮ್ಮನ್ನು ನಾವು ಆಳಿಕೊಳ್ಳಲಾಗದ, ವಸಾಹುತುಶಾಹಿಯ ಸಂಕೇತವಾದ ರಾಷ್ಟ್ರಪತಿ ಆಳ್ವಿಕೆಗೆ ಕಳೆದ ಮುವ್ವತ್ತಾರು ವರ್ಷಗಳಲ್ಲಿ ನಾಲ್ಕು ಸಲ (1971/1977/1989/2007) ಕರ್ನಾಟಕ ಒಳಗಾಗಿದೆ. ಈ ಸತ್ಯ ನಾವು ನಿಜಕ್ಕೂ ಸ್ವರಾಜ್ಯಕ್ಕೆ ಅರ್ಹರೆ ಎನ್ನುವ ಪ್ರಶ್ನೆಯನ್ನು ಪದೆಪದೆ ಎತ್ತುತ್ತದೆ. ಇದರಷ್ಟೆ ಗಂಭೀರ ಸ್ಥಿತಿ ಇನ್ನೊಂದಿದೆ. ಅದು, ನಾವು ಆರಿಸಿ ಕಳುಹಿಸುವ ಜನರು ನೀಡುವ ಆಡಳಿತಕ್ಕಿಂತ ಅವರಿಲ್ಲದ ಈ ರಾಷ್ಟ್ರಪತಿ ಆಡಳಿತವೆ ಕಡಿಮೆ ಭ್ರಷ್ಟಾಚಾರದ, ಅಷ್ಟಿಷ್ಟು ಸಜ್ಜನಿಕೆ ಉಳ್ಳಆಡಳಿತ ಎನ್ನಿಸಿಕೊಳ್ಳುವ ಎಲ್ಲಾ ಸಾಧ್ಯತೆಗಳೂ ಇವೆ. ಹಾಗೆಯೆ, ಮುಂದಿನ ವರ್ಷದ ಚುನಾವಣೆಯಲ್ಲಿ ಜನರಿಗೆ ಉತ್ತಮ ಪರ್ಯಾಯವೂ ಇಲ್ಲ ಎಂದರೆ ಅದು ದುರ್ದೈವ ಮಾತ್ರವಲ್ಲ ವಾಸ್ತವವೂ ಹೌದು. ಛೇ. ಆಧುನಿಕ ಶಿಕ್ಷಣದ ಹಾಗೂ ಮುಂದುವರೆದ ಸಮಾಜ ಮತ್ತು ದೇಶಗಳ ಹಿನ್ನೆಲೆಯಲ್ಲಿ ಹೇಳುವುದಾದರೆ ನಾವು ನಿಜಕ್ಕೂ ಒಂದು ಹೀನ ಸಂದರ್ಭದಲ್ಲಿ ಬದುಕುತ್ತಿದ್ದೇವೆ ಮತ್ತು ಅದಕ್ಕೆ ನಾವೆ ಕಾರಣರು ಎಂದರೆ ಅದು ತಪ್ಪಾಗುತ್ತದೆಯೆ?

ದಕ್ಷಿಣ ಆಫ್ರಿಕಾದ ವರ್ಣಭೇದ ಸಮಾಜದ ಹಿನ್ನೆಲೆಯಲ್ಲಿ ರಚಿತವಾದ ಒಂದು ಅಸಾಮಾನ್ಯ ಕಾದಂಬರಿಯ ಹೆಸರು “Cry, The Beloved Country”. ಅದರದೆ ಗುಂಗಿನಲ್ಲಿರುವ ನನಗೆ ಈಗ ಅನ್ನಿಸುತ್ತಿರುವುದು, “Cry, The Beloved Karnataka”.

Reader Comments

Nice post – I always enjoy your writings. It’s a new low in our state politics. The scumbag Deve Gowda has single handedly caused more damage to our state than any other politician I could think of.

On the other hand, we all have to be brutally honest here. These politicians are part of our society. In Democracy, we get what deserve. Otherwise, how can I explain the silence from public, intellectuals and media even in the face of such a disgusting act by our leaders!! I wish there was some legislation to take legal action on these lowlife politicians. Well…it’s only a wish!

#1 
Written By nvittal on October 25th, 2007 @ 8:14 pm

Add a Comment

required, use real name
required, will not be published
optional, your blog address