ವಿವೇಕಾನಂದರನ್ನು ಅಡಿಗಡಿಗೆ ಅವಮಾನಿಸಿದ ಯಡ್ಡಯೂರಪ್ಪ…

This post was written by admin on November 21, 2007
Posted Under: Uncategorized

(ವಿಕ್ರಾಂತ ಕರ್ನಾಟಕ – ನವೆಂಬರ್ 30, 2007 ರ ಸಂಚಿಕೆಯಲ್ಲಿನ ಬರಹ)

ಆಧುನಿಕ ಕನ್ನಡದ ಸರ್ವಶ್ರೇಷ್ಠ, ದಾರ್ಶನಿಕ ಮನಸ್ಸೊಂದು ಹೀಗೆ ದಾಖಲಿಸುತ್ತದೆ:
“ನಮ್ಮ ರಾಜಕೀಯವಲಯದಲ್ಲಿಯೋ ಭವಿಷ್ಯನಿರ್ಣಯ ಮಾಡುವ ಜ್ಯೋತಿಷಿಗಳಿಗೆ ಪರಮಾಧಿಕಾರ ಲಭಿಸಿದಂತಾಗಿದೆ. ಅಧಿಕಾರಿ ತನ್ನ ಮೇಲ್ಮೆಯನ್ನು ಸಾಧಿಸಲು ಸೇವಾನಿಷ್ಠೆಯನ್ನು ಅನುಸರಿಸುವ ಕ್ಲೇಷಕ್ಕೆ ಹೋಗುವುದಿಲ್ಲ; ಜ್ಯೋತಿಷಿಯನ್ನೋ ಮಾಂತ್ರಿಕನನ್ನೋ ಆಶ್ರಯಿಸುತ್ತಾನೆ. ಮಂತ್ರಿ ತನ್ನ ರಾಜಕೀಯ ಭದ್ರತೆಯನ್ನು ಪ್ರಜಾಸತ್ತೆಯ ಋಜುನಿಯಮಗಳಿಂದ ಸ್ಥಾಪಿಸಿಕೊಳ್ಳುವ ‘ಅಭದ್ರ ವಿಜ್ಞಾನ’ಕ್ಕೆ ಬಿಟ್ಟುಕೊಡದೆ ಜ್ಯೋತಿಷಿಯ ‘ಸುಭದ್ರ ಅಜ್ಞಾನ’ಕ್ಕೇ ಶರಣು ಹೋಗುತ್ತಾನೆ. ಮಂತ್ರಿತ್ವ ವಹಿಸಿಕೊಳ್ಳುವ ಕಾಲನಿರ್ಣಯ ಮಾಡುವವನು ಜ್ಯೋತಿಷಿ. ಕೊನೆಗೆ ವಿಮಾನ ಏರುವ ಮುಹೂರ್ತ ಇಟ್ಟುಕೊಡುವವನೂ ಜ್ಯೋತಿಷಿ; ಕೊನೆಗೆ ವಿಮಾನ ಹಾರುವ ಸಮಯ ಗೊತ್ತು ಮಾಡುವುದೂ ಇವನ ಕೈಲಿರದಿದ್ದರೆ, ಜೋಯಿಸನ ‘ನಿಮಿತ್ತ’ಕ್ಕೆ ಶರಣಾಗಿ, ತನ್ನ ನಿವಾಸದಿಂದಾದರೂ ಆ ಸುಮುಹೂರ್ತಕ್ಕೆ ಹೊರಡದಿದ್ದರೆ ಆತನ ಮನಸ್ಸಿಗೆ ನೆಮ್ಮದಿ ಇಲ್ಲ. ತನ್ನ ಅವಿವೇಕದಿಂದ ಏನಾದರೂ ಕೆಟ್ಟುದಾದರೆ, ಸರಿ, ಹೊರಟ ಗಳಿಗೆಯ ಮೇಲೆ ಹೊರೆ ಹೇರುತ್ತಾರೆ. ಅಧ್ಯಾಪಕ, ಅಧಿಕಾರಿ, ಮಂತ್ರಿ, ವ್ಯಾಪಾರಿ, ಮಠಾಧಿಪತಿ, ಶ್ರಮಜೀವಿ, ಕೂಲಿ, ಕೊನೆಗೆ ಕಳ್ಳ-ಎಲ್ಲರಲ್ಲಿಯೂ ಎಲ್ಲೆಲ್ಲಿಯೂ ಇಂತಹ ಅವೈಜ್ಞಾನಿಕತೆ ಮತ್ತು ಅವಿಚಾರತೆ ವ್ಯಾಪಿಸಿ ವರ್ಧಿಸುತ್ತಿರುವುದನ್ನು ಸಂಕಟದಿಂದ ನೋಡುತ್ತಿರಬೇಕಿದೆ.”

ನಿಮಗೆ ಈಗಾಗಲೆ ಗೊತ್ತಾಗಿರಬಹುದು, ಇದನ್ನು ಬರೆದವರು ಋಷಿಪ್ರಜ್ಞೆಯ ಕವಿ, ಸಾಹಿತಿ, ವಿಚಾರವಾದಿ, ಗುರು, ಚಿಂತಕ, ಎಲ್ಲವೂ ಆಗಿದ್ದ ಶ್ರೀ ಕುವೆಂಪುರವರು ಎಂದು. ಅವರು ಇದನ್ನು ಬರೆದದ್ದು ಸರಿಯಾಗಿ 43 ವರ್ಷಗಳ ಹಿಂದೆ; ದಿನಾಂಕ ಮೇ 5, 1963 ರಂದು; “ಆತ್ಮಶ್ರೀಗಾಗಿ ನಿರಂಕುಶ ಮತಿಗಳಾಗಿ” ಪುಸ್ತಕದ ಮುನ್ನುಡಿಯಲ್ಲಿ.

ಎಂತಹ ಘೋರ, ಅವಮಾನಕರ ಬೌದ್ಧಿಕ ಹಿನ್ನಡೆ ನೋಡಿ, ಕರ್ನಾಟಕಕ್ಕೆ… ಕಳೆದ ನಾಲ್ಕೈದು ದಶಕಗಳಲ್ಲಿ ರಾಜ್ಯದಲ್ಲಿ ಬೌದ್ಧಿಕ ಪ್ರಗತಿ ಆದಂತೆಯೇ ಇಲ್ಲ. ಇಷ್ಟೊತ್ತಿಗೆಲ್ಲ ಯಾವಯಾವ ಕೆಲಸಗಳು ಅವಮಾನಕರವೂ, ತುಚ್ಛವೂ, ಕೀಳುಮಟ್ಟದ್ದೂ ಆಗಬೇಕಿತ್ತೊ ಅವಕ್ಕೆಲ್ಲ ಈಗ “ರಾಜಕೀಯ ಅಧಿಕೃತತೆ” ಸಿಕ್ಕಿಬಿಟ್ಟಿದೆ. ಕಳೆದ ಹತ್ತು ವರ್ಷಗಳಿಂದ ಕರ್ನಾಟಕವನ್ನು ಆಳಿದ ದೇವೇಗೌಡ, ಎಸ್ಸೆಮ್ ಕೃಷ್ಣ, ಕುಮಾರಸ್ವಾಮಿ, ಯಡ್ಡಯೂರಪ್ಪ ಮುಂತಾದವರ ಮಾಟಮಂತ್ರಜ್ಯೋತಿಷ್ಯವಾಸ್ತುಗಳ ಪ್ರಚ್ಛನ್ನ ನಿರ್ಲಜ್ಜ ಆಚರಣೆ ಮತ್ತು ಪ್ರದರ್ಶನ ಕುವೆಂಪುರಂತಹವರು ಯಾವುದರ ವಿರುದ್ಧ ಹೋರಾಡಿದರೊ ಅದೆಲ್ಲವನ್ನೂ ಅಣಕ ಮಾಡುತ್ತಿದೆ. ಅದರಲ್ಲೂ ಹಿಂದೂ ಮತಾಂಧತೆಯನ್ನು ಉದ್ಧೀಪಿಸಿ “ಸಾತ್ ದಿನ್ ಕಾ ಸಾಮ್ರಾಟ್” ಆಗಿಹೋದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಂತೂ, ಕ್ಷಮಿಸಿ, ಯಡ್ಡಯೂರಪ್ಪನವರಂತೂ ಹಿಂದಿನ ಎಲ್ಲಾ ಮತಮೂಢ ಕಂದಾಚಾರಿ ರಾಜಕಾರಣಿಗಳಿಗಿಂತ ಮುಂದಕ್ಕೆ ಹೋಗಿಬಿಟ್ಟಿದ್ದಾರೆ; ಬಹಿರಂಗ ಆಚರಣೆಗೆ ಇಳಿದುಬಿಟ್ಟಿದ್ದಾರೆ. ಸುಂದರವಾದ, ಜೀವಪರವಾದ, ವಿಚಾರಪರವಾದ, ಆಧುನಿಕ ದೃಷ್ಟಿಕೋನದ ಪ್ರಜಾಪ್ರಭುತ್ವಕ್ಕೆ ಕಳಂಕವಾಗಿ ಕಾಡುತ್ತಿದ್ದಾರೆ.

ಲೇಖನದ ವಿಡಿಯೊ ಪ್ರಸ್ತುತಿ – ಭಾಗ 1

ಎಷ್ಟೊಂದು ಹೋಮಗಳು; ಯಜ್ಞಗಳು; ಯಾಗಗಳು; ಪೂಜೆಗಳು; ವ್ರತಗಳು; ಮೌನವ್ರತಗಳು; ಶಕುನಗಳು; ಆಶೀರ್ವಾದಗಳು; ದೇವಾಲಯ ಸಂದರ್ಶನಗಳು; ದೈವಕ್ಕೆ ಪೂಜೆ; ಯಾವುದಕ್ಕೂ ಇರಲೆಂದು ದೆವ್ವಕ್ಕೂ ಪೂಜೆ.. ಇವೆಲ್ಲವೂ ಏನಕ್ಕಾಗಿ? ಜನರ ಕ್ಷೇಮಕ್ಕಾಗಿ ಎನ್ನುತ್ತಾರಲ್ಲ ಈ ಎರಡು ನಾಲಿಗೆಯ ವಚನಭ್ರಷ್ಟರು! ತಮ್ಮ ವೈಯಕ್ತಿಕ ಅಧಿಕಾರ ಲಾಲಸೆಗಾಗಿ ಮಾಡಿದ ಈ ತುಚ್ಛ, ನಿರ್ಲಜ್ಜ ಕಂದಾಚಾರಗಳನ್ನು ಜನಸಾಮಾನ್ಯರ ಹಿತಕ್ಕಾಗಿ ಎನ್ನುತ್ತಾರಲ್ಲ, ಯಾವ ಸಂಸ್ಕೃತಿ ಇವರದು? ಇವೆಲ್ಲವನ್ನೂ ಜನರ ಕ್ಷೇಮಕ್ಕಾಗಿಯೇ ಮಾಡುವ ಹಾಗಿದ್ದರೆ, ಇದೆಲ್ಲವನ್ನೂ ಮಾಡಲು ಇಲ್ಲಿಯ ತನಕ ಕಾಯಬೇಕಿತ್ತೆ? ಮುಖ್ಯಮಂತ್ರಿ ಕೂಡುವ ಕುರ್ಚಿಗೆ ಅದ್ಯಾವನೊ ಅವಿವೇಕಿ ಮುಟ್ಠಾಳ ಪೂಜೆ ಮಾಡಿ, ‘ಇನ್ನು ಇಪ್ಪತ್ತು ವರ್ಷ ಈ ಕುರ್ಚಿ ನಿಮಗೇ ಸಿಗುವಂತಹ ಪೂಜೆ ಮಾಡಿದ್ದೇನೆ,’ ಎಂದನಂತೆ!! ಇದೇನು ಪ್ರಜಾಪ್ರಭುತ್ವವೊ, ಕಾಡುಮೃಗಗಳ ಸಾಮ್ರಾಜ್ಯವೊ? ಮಾರನೆಯ ದಿನ ಮತ್ಯಾವನೊ ಮುಖ್ಯಮಂತ್ರಿಯ ಬಾಯಿಗೆ ಏನನ್ನೋ ಹಾಕಿ, ‘ಅದನ್ನು ತೆಗೆದುಕೊಂಡು ಹೋಗಿ ಹಿಂದಿನ ದಿನ ಪೂಜೆ ಮಾಡಿದ್ದ ಅದೇ ಕುರ್ಚಿಗೆ ಹೋಗಿ ಉಗಿ,’ ಎಂದನಂತೆ! ಆಹಾ, ಕುರ್ಚಿಯ ಕರ್ಮವೆ! ಅಕಟಕಟಾ… ಕೊನೆಗೂ ಏನಾಯಿತು? ಕೇವಲ ತನ್ನ ಸ್ವಾರ್ಥಕ್ಕಾಗಿಯೇ ಮಾಡಿದ ಈ ಎಲ್ಲಾ ಯಜ್ಞಯಾಗಾದಿಗಳು, ವ್ರತಗಳು, ಪೂಜೆಪುನಸ್ಕಾರಗಳು ಗಳಿಸಿ ಕೊಟ್ಟ ಅಧಿಕಾರಾವಧಿ ಎಷ್ಟು ದಿನ? ಇನ್ನೊಂದು ಕೈಯ ಬೆರಳುಗಳಲ್ಲಿ ಎರಡು ಎಣಿಸುವಷ್ಟರಲ್ಲಿ ಎಲ್ಲಾ ಮುಗಿದೇ ಹೋಯಿತು. ರಾಮ್ ನಾಮ್ ಸತ್ಯ್ ಹೈ!!! ರಾಮ್ ನಾಮ್ ಸತ್ಯ್ ಹೈ!!! ರಾಮ್ ನಾಮ್ ಸತ್ಯ್ ಹೈ!!!

ನಮ್ಮ ದೇಶ ಮತ್ತು ಧರ್ಮಕ್ಕೆ ಕೀರ್ತಿಯ ಕಲಶವನ್ನಿಟ್ಟ” ಒಬ್ಬ ಸನ್ಯಾಸಿಯ ಬಗ್ಗೆ ಕುವೆಂಪು ಹೀಗೆ ಬರೆಯುತ್ತಾರೆ:
“(ದೇವರು, ಧರ್ಮ, ಭಕ್ತಿ, ಪೂಜೆ, ಇಹ, ಪರ ಮೊದಲಾದ) ವಿಚಾರಗಳನ್ನು ಬಹು ಸುಲಭವಾಗಿ ಲೋಕಕ್ಕೆ ತಿಳಿಸಿದ ಒಬ್ಬರು ಮಹಾತ್ಮರಿದ್ದಾರೆ. ಭಗವಾನ್ ಶ್ರೀರಾಮಕೃಷ್ಣ ಪರಮಹಂಸರು ಓದು ಬರೆಹ ಚೆನ್ನಾಗಿ ತಿಳಿದವರಲ್ಲ. ಆದರೂ ಪಾಶ್ಚಾತ್ಯ ದೇಶಗಳಿಂದ ಪಂಡಿತವರ್ಯರಾಗಿ ಬಂದವರೂ ಕೂಡ, ಅವರ ಪದತಲದಲ್ಲಿ, ನಿರಕ್ಷರಕುಕ್ಷಿಗಳಾದ ಸಾಮಾನ್ಯರೊಡನೆ ಕುಳಿತು, ಅವರ ಉಪದೇಶಾಮೃತವನ್ನು ಸವಿದರು. ಅವರ ಶಿಷ್ಯರಾದ ಸ್ವಾಮಿ ವಿವೇಕಾನಂದರು ಯೂರೋಪು ಅಮೆರಿಕಾಗಳಿಗೆ ಹೋಗಿ ವೇದಾಂತ ಬೋಧೆ ಮಾಡಿ ಜಗದ್ವಿಖ್ಯಾತ ರಾದುದಲ್ಲದೆ, ನಮ್ಮ ದೇಶ ಮತ್ತು ಧರ್ಮಗಳಿಗೆ ಕೀರ್ತಿಯ ಕಲಶವನ್ನಿಟ್ಟರು.”

ಸ್ವಾಮಿ ವಿವೇಕಾನಂದ ಎಂಬ ಸನ್ಯಾಸಿ ಹೇಳಿದ ವಿಚಾರಗಳಿಗೆ ಭದ್ರವಾಗಿ ಗೋರಿಯನ್ನು ಕಟ್ಟಿ, ಅಷ್ಟೇ ಭದ್ರವಾಗಿ ಆತನ ಆಕಾರವನ್ನು ಮಾತ್ರ ತಮ್ಮ ಅತ್ಯಮೂಲ್ಯ ಆಸ್ತಿಯನ್ನಾಗಿ ಮಾಡಿಕೊಂಡಿರುವವರು ಈಗಿನ ಮೂಢ ಹುಸಿಹಿಂದುತ್ವವಾದಿಗಳು. ಇವರು ಹೇಳುವ ಸುಳ್ಳುಗಳು ಏನೇ ಇರಲಿ, ವಿವೇಕಾನಂದರ ಬಗ್ಗೆ ಏಳೆಂಟು ದಶಕಗಳ ಹಿಂದೆಯೆ ಮತ್ತೊಬ್ಬ ಋಷಿಕವಿ ಠಾಗೂರರು “ನಿಮಗೆ ಭಾರತದ ಬಗ್ಗೆ ತಿಳಿದುಕೊಳ್ಳಬೇಕಿದ್ದರೆ ವಿವೇಕಾನಂದರನ್ನು ಅಭ್ಯಸಿಸಿ. ಅವರಲ್ಲಿ ಪ್ರತಿಯೊಂದೂ ಗುಣಾತ್ಮಕವೆ. ಋಣಾತ್ಮಕವಾದದ್ದು ಅವರಲ್ಲಿ ಯಾವುದೂ ಇಲ್ಲ,” ಎಂದಿದ್ದರು. ಭಾರತದಲ್ಲಿನ ಹಿಂದೂ ಸಮಾಜವನ್ನು ಸುಧಾರಿಸಲು ಮಹಾನ್ ಪ್ರಯತ್ನ ಮತ್ತು ಪ್ರಯೋಗಗಳನ್ನು ಮಾಡಿದ, ಭಾರತದ ಸರ್ವಶ್ರೇಷ್ಠ ಜಾತ್ಯತೀತನಾಗಿದ್ದ, ಆದರೆ ಹಿಂದೂ ಮತಾಂಧನಿಂದಲೆ ಹತನಾಗಿ ಹೋದ ಮಹಾತ್ಮ ಗಾಂಧಿ, “ನನ್ನ ದೇಶದ ಮೇಲಿನ ನನ್ನ ಪ್ರೀತಿ ವಿವೇಕಾನಂದರ ಪ್ರಭಾವದಿಂದಾಗಿ ಸಾವಿರಪಟ್ಟು ಹೆಚ್ಚಾಯಿತು,” ಎಂದಿದ್ದಾರೆ. ಗಾಂಧಿಯ ಅನುಯಾಯಿಯಾಗಿದ್ದ ಚಕ್ರವರ್ತಿ ರಾಜಗೋಪಾಲಚಾರಿಯವರಂತೂ “ವಿವೇಕಾನಂದರು ಹಿಂದೂಯಿಸಮ್ ಅನ್ನು ಕಾಪಾಡಿದರು,” ಎಂದಿದ್ದರೊಮ್ಮೆ.

ಕಳೆದ ನೂರು ವರ್ಷಗಳಿಂದ ಭಾರತದ ಹಲವಾರು ಶ್ರೇಷ್ಠ ಮನಸ್ಸುಗಳನ್ನು ಪ್ರಭಾವಿಸುತ್ತ ಬಂದಿರುವ, ಹಿಂದುತ್ವವವನ್ನು ಕಾಪಾಡಿದ ಸ್ವಾಮಿ ವಿವೇಕಾನಂದರು ಮೂಢನಂಬಿಕೆಗಳ ಬಗ್ಗೆ ಒಮ್ಮೆ ಹೀಗೆ ಹೇಳುತ್ತಾರೆ:

“ಶತಮಾನಗಳಿಂದ ನಾವು ಎದೆಗೊತ್ತಿಕೊಂಡು ಬಂದಿರುವ ಈ ಮೂಢನಂಬಿಕೆಗಳನ್ನು ಭಾರತದ ಮಣ್ಣಿನಿಂದ ಕಿತ್ತೆಸೆಯಬೇಕು. ಮತ್ತೆ ಅವು ಎಂದೂ ಬೆಳೆಯದಂತಹ ಕಡೆ, ಶಾಶ್ವತವಾಗಿ ನಿರ್ನಾಮವಾಗುವಂತಹ ಕಡೆ ಬಿಸಾಕಿಬಿಡಬೇಕು. ಹಿಂದೂ ಜನಾಂಗದ ಮತಿ ಕುಲಗೆಡುತ್ತ ಬಂದಿರುವುದಕ್ಕೆ ಈ ಮೂಢನಂಬಿಕೆಗಳೆ ಕಾರಣ. ಇವು ಮತಿ ದುರ್ಬಲವಾಗಲು ಪ್ರೇರೇಪಿಸುತ್ತವೆ. ಸ್ವಂತಿಕೆಯನ್ನು ಸಂಪೂರ್ಣವಾಗಿ ಕಳೆದುಕೊಂಡ, ಎಲ್ಲಾ ತರಹದ ತೇಜಸ್ಸನ್ನು ಕಳೆದುಕೊಂಡ, ಮಹತ್ತರವಾದದ್ದನ್ನು, ಅತ್ಯುತ್ತಮವಾದದ್ದನ್ನು ಯೋಚಿಸಲಾರದ ಮೆದುಳು ಧರ್ಮದ ಹೆಸರಿನಲ್ಲಿ ಕಾಣಿಸುವ ಎಲ್ಲಾ ತರಹದ ಸಣ್ಣಪುಟ್ಟ ಮೂಢನಂಬಿಕೆಗಳಿಂದ ತನ್ನನ್ನು ವಿಷಯುಕ್ತ ಗೊಳಿಸಿಕೊಳ್ಳುತ್ತಿರುತ್ತದೆ. ಹಾಗಾಗಿ ನಮಗೆ ಇದೆಲ್ಲ ತಿಳಿದಿರಬೇಕು.

“ಮೂಢನಂಬಿಕೆಗಳನ್ನು ನಂಬುವ ಮೂಢರಾಗುವುದರ ಬದಲು ನೀವು ಅತ್ಯುಗ್ರ ನಾಸ್ತಿಕರಾದರೂ ಆದರೆ ಅದರಿಂದ ನನಗೇನೂ ಬೇಜಾರಿಲ್ಲ. ಯಾಕೆಂದರೆ, ನಾಸ್ತಿಕ ಚೈತನ್ಯಶೀಲ; ಅವನನ್ನು ಎಂದಾದರೂ ಬದಲಾಯಿಸಬಹುದು. ಆದರೆ ಈ ಮೌಢ್ಯಗಳು ಆವರಿಸಿಕೊಂಡವೆಂದರೆ ಬುದ್ಧಿ ಹೊರಟೇ ಹೋಯಿತು; ಮತಿ ದುರ್ಬಲವಾಯಿತು; ಜೀವನವನ್ನು ಕೊಳೆಯುವಿಕೆ ಅಮರಿಕೊಂಡು ಕೊಳೆಸಲಾರಂಭಿಸಿಬಿಟ್ಟಿತು.

“ಓ ಧೀರನೆ, ಕೆಚ್ಚಿನ ಮನುಷ್ಯನೆ, ನಮಗೆ ಬೇಕಿರುವುದು ರಕ್ತದಲ್ಲಿ ಅಪರಿಮಿತವಾದ ಚೈತನ್ಯ, ನರಗಳಲ್ಲಿ ಭೀಮಬಲ, ಕಬ್ಬಿಣದ ಮಾಂಸಖಂಡಗಳು, ಮತ್ತು ಎಂದಿಗೂ ಎದೆಗುಂದದ ಉಕ್ಕಿನಂತಹ ಸ್ಥೈರ್ಯವೇ ಹೊರತು, ದುರ್ಬಲವಾದ, ತುಚ್ಛವಾದ ಆಲೋಚನೆಗಳಲ್ಲ. ಅಂತಹ ತುಚ್ಛ, ಕೀಳು ಆಲೋಚನಗಳನ್ನೆಲ್ಲವನ್ನೂ ನಿರಾಕರಿಸಿ. ಎಲ್ಲಾ ತರಹದ ಮೂಢನಂಬಿಕೆಗಳನ್ನು ನಿರಾಕರಿಸಿ. ಎಲ್ಲಾ ತರಹದ ಮೌಢ್ಯಗಳಿಂದ ಕಳಚಿಕೊಳ್ಳಿ. ಧೈರ್ಯವಂತರಾಗಿ; ಸ್ವತಂತ್ರರಾಗಿ.

“ಮೌಢ್ಯತೆ ಮಾನವನ ಅತಿ ದೊಡ್ಡ ಶತ್ರು. ಆದರೆ ಈ ಮತಾಂಧತೆ ಮತ್ತು ಅಸಹಿಷ್ಣುತೆ ಅದಕ್ಕಿಂದ ದೊಡ್ಡ ಶತ್ರು.”

ಹಿಂದೂ ಮತದ ಬಗ್ಗೆ, ಉಪನಿಷತ್ತುಗಳ ಬಗ್ಗೆ, ಭಾರತೀಯ ಜೀವನದರ್ಶನದ ಬಗ್ಗೆ ಅಪಾರ ಹೆಮ್ಮೆ ಹೊಂದಿದ್ದ ಕುವೆಂಪುರವರು ಮತ್ತು ವಿಶ್ವವಿಖ್ಯಾತ ಸನ್ಯಾಸಿ ವಿವೇಕಾನಂದರು ಹೇಳಿದ ಮಾತುಗಳ ಹಿನ್ನೆಲೆಯಲ್ಲಿ ಈಗ ಕರ್ನಾಟಕದ ವರ್ತಮಾನವನ್ನು ಗಮನಿಸೋಣ. ಆ ಮಹಾಪುರುಷರ ವಿಚಾರಗಳ್ಯಾವುವೂ ಈ ಮತಾಂಧರಿಗೆ, ಶಿಲಾಯುಗದ ಅವಿವೇಕಿಗಳಿಗೆ ಬೇಕಿಲ್ಲ. ಇವರಿಗೆ ಬೇಕಿರುವುದೆಲ್ಲ ವಿವೇಕಾನಂದರ ಧೀರೊದ್ಧಾತ್ತ ನಿಲುವಿನ ಒಂದು ವಿಗ್ರಹ; ಒಂದು ಕ್ಯಾಲೆಂಡರ್ ಪೋಟೊ; ಅವರು ಧಿಕ್ಕರಿಸಿದ ಮೌಢ್ಯ ಕಂದಾಚಾರಗಳು ಮಾತ್ರ. ಹಾಗೆಯೆ, ತಮ್ಮಂತಹುದೇ ಮತಭ್ರಾಂತರ ಪ್ಯಾಂಫ್ಲೆಟ್ ಸಾಹಿತ್ಯ.

ಮೌಢ್ಯತೆ ಮಾನವನ ಅತಿ ದೊಡ್ಡ ಶತ್ರು; ಮತಾಂಧತೆ ಅದಕ್ಕಿಂತ ದೊಡ್ಡ ಶತ್ರು, ಎಂದರು ಸ್ವಾಮಿ ವಿವೇಕಾನಂದ. ಕರ್ನಾಟಕದ ದುರ್ಗತಿ ನೋಡಿ… ಯಾವುದನ್ನು ಮಾನವನ ಎರಡು ಅತಿ ದೊಡ್ಡ ಶತ್ರುಗಳು ಎಂದು ವಿವೇಕಾನಂದರು ಹೇಳಿದರೊ, ಆ ಎರಡೂ ದುಷ್ಟಶತ್ರುಗಳ ಅಡಿಯಾಳಾಗಿ ಹೋಗಿರುವ ಯಡ್ಡಯೂರಪ್ಪ ಇವತ್ತು ಕರ್ನಾಟಕದ ಮುಖ್ಯಮಂತ್ರಿ; ಕ್ಷಮಿಸಿ. ಏಳೇ ದಿನಗಳಲ್ಲಿ ಮಾಜಿ ಮುಖ್ಯಮಂತ್ರಿ. ಹ್ಞಾಂ.. ಭಾಗ್ಯವೇ… “ಆವರಣ”ವೇ…

ಈಗ ವಿಚಾರ ಮಾಡೋಣ, ಹಿಂದುವಿನ ಸದ್ಯದ ನಿಜ ಶತ್ರು ಯಾರು? ಎಂದು. ತಮ್ಮ ಬಹಿರಂಗ ಕ್ರಿಯೆಗಳಿಂದ ಕರ್ನಾಟಕವನ್ನು ಅಧಿಕೃತವಾಗಿ ಮೌಢ್ಯಕ್ಕೆ ತಳ್ಳಲು ಯತ್ನಿಸಿದ, ಸ್ವಾಮಿ ವಿವೇಕಾನಂದರನ್ನು ಅಡಿಗಡಿಗೆ ಧಿಕ್ಕರಿಸಿದ, ಅವಮಾನಿಸಿದ ಈ ಯಡ್ಡರು ವಿಶ್ವಮಾನವನಾಗುವುದು ಇರಲಿ, ಕನಿಷ್ಠ ಒಳ್ಳೆಯ ಹಿಂದುವಾಗಲಾದರೂ ಯೋಗ್ಯರೆ?


ವಿವೇಕ ನುಡಿಯ ಹಿನ್ನೆಲೆಯಲ್ಲಿ…
ಸ್ವಾಮಿ ವಿವೇಕಾನಂದರು ಅಮೆರಿಕದಲ್ಲಿನ ವಿಶ್ವಧರ್ಮಸಂಸತ್‌ನಲ್ಲಿ ಪಾಲ್ಗೊಂಡದ್ದು 1893 ರಲ್ಲಿ. ಅಲ್ಲಿಗೆ ಹೋಗುವುದಕ್ಕಿಂತ ಮೊದಲು ಅವರು ಭಾರತದಾದ್ಯಂತ ಯಾತ್ರೆ ಕೈಗೊಂಡಿದ್ದರು. ಆ ಸಮಯದಲ್ಲಿ ಕರ್ನಾಟಕಕ್ಕೂ ಬಂದಿದ್ದರು. 1892 ರಲ್ಲಿ ಮೈಸೂರಿನಲ್ಲಿ ಅಂದಿನ ಮಹಾರಾಜರಾಗಿದ್ದ ಒಂಬತ್ತನೇ ಚಾಮರಾಜ ಒಡೆಯರ ಅತಿಥಿಯಾಗಿ ಒಂದೆರಡು ವಾರ ಇದ್ದರು. ಅದೇ ಪರಿಚಯದ ಮೇಲೆ, ಹೆಚ್ಚುಕಮ್ಮಿ ತಮ್ಮದೇ ವಯಸ್ಸಿನವರಾಗಿದ್ದ ಆ ಯುವ ಮಹಾರಾಜರಿಗೆ ಸ್ವಾಮಿ ವಿವೇಕಾನಂದರು 1894 ರಲ್ಲಿ ಅಮೆರಿಕಾದಿಂದಲೆ ಒಂದು ಕಾಗದ ಬರೆಯುತ್ತಾರೆ: “ಪ್ರತಿಯೊಂದು ದೇಶವೂ, ಪ್ರತಿಯೊಬ್ಬ ಗಂಡಸೂ, ಪ್ರತಿಯೊಬ್ಬ ಹೆಂಗಸೂ ತಮ್ಮ ಆತ್ಮೋದ್ಧಾರವನ್ನು ತಾವೇ ಸಂಪಾದಿಸಿಕೊಳ್ಳಬೇಕು. ಅವರಲ್ಲಿ ಆಲೋಚನೆಗಳನ್ನು ತುಂಬುವುದಷ್ಟೇ ಅವರಿಗೆ ನಾವು ಮಾಡಬೇಕಿರುವ ಸಹಾಯ. ಮಿಕ್ಕದ್ದು ತಾನೇ ತಾನಾಗಿ ಆಗುತ್ತದೆ. ಓ ನನ್ನ ಉದಾತ್ತ ಗುಣದ ರಾಜಕುಮಾರನೆ, ಈ ಜೀವನದ ಆಯಸ್ಸು ಬಹಳ ಕಮ್ಮಿ; ಈ ಪ್ರಪಂಚದ ದುರಹಂಕಾರ ಮತ್ತು ಒಣಪ್ರತಿಷ್ಠೆಗಳು ಬಹಳ ಅಸ್ಥಿರ, ಅಶಾಶ್ವತ. ಆದರೆ ಯಾರು ಇನ್ನೊಬ್ಬರಿಗಾಗಿ ಜೀವಿಸುತ್ತಾರೊ ಅವರು ಮಾತ್ರ ಬದುಕಿರುತ್ತಾರೆ. ಮಿಕ್ಕವರು ಬದುಕಿರುವುದಕ್ಕಿಂತ ಹೆಚ್ಚಾಗಿ ಸತ್ತೇ ಇರುತ್ತಾರೆ.”
ಲೇಖನದ ವಿಡಿಯೊ ಪ್ರಸ್ತುತಿ – ಭಾಗ 2

ಈಗಿನ ವಿರೋಧಾಭಾಸ ನೋಡಿ: ಏಳೇ ದಿನಗಳಲ್ಲಿ ಮಾಜಿಯಾಗಿಬಿಟ್ಟ ಕರ್ನಾಟಕದ ಇತ್ತೀಚಿನ ಮುಖ್ಯಮಂತ್ರಿ ತಮಗಾಗಿ ಬದುಕುತ್ತ, ತಮ್ಮ ಕುರ್ಚಿಗಾಗಿ ಹೋಮಹವನಗಳನ್ನು, ಪುರಾಣಗಳಲ್ಲಿನ ರಾಜರು ಮಾಡಿಸುತ್ತಿದ್ದಂತೆ ಯಜ್ಞಯಾಗಾದಿಗಳನ್ನು ಮಾಡಿಸಿದರು. ಇವರು ಜನರಲ್ಲಿ ಅಧಿಕೃತವಾಗಿ ತುಂಬಲು ಯತ್ನಿಸಿದ ಆಲೋಚನೆಗಳೆಲ್ಲ ಮೌಢ್ಯವನ್ನು ಹೆಚ್ಚಿಸುವ ಆಲೋಚನೆಗಳೆ. ಬದುಕುತ್ತಿರುವುದು ತಮಗಾಗಿ; ತುಂಬುತ್ತಿರುವುದು ತುಚ್ಛ ಆಲೋಚನೆಗಳು. ವಿವೇಕಾನಂದರಿಗೆ, ಅವರ ಪ್ರಭಾವಕ್ಕೊಳಗಾಗಿದ್ದ ಮೈಸೂರಿನ ಆ ಯುವ ಮಹಾರಾಜರಿಗೆ ಇವರು ಸಲ್ಲಿಸುತ್ತಿರುವ ಗೌರವವಾದರೂ ಎಂತಹುದು? ಒಂದು ಶ್ರೇಷ್ಠ ಪರಂಪರೆಗೆ ಇವರೆಂತಹ ಉತ್ತರಾಧಿಕಾರಿ? ಇದನ್ನು ಜನರಷ್ಟೇ ಅಲ್ಲ, ಇಂತಹವರ ಪ್ರಮಾಣವಚನ ಕಾರ್ಯಕ್ರಮಕ್ಕೆ ಸರ್ಕಾರ ಕಾರು ಕಳುಹಿಸಿತೆಂದು ಹೋಗುವ “ವಯೋ”ವೃದ್ಧರು ನಿಷ್ಠುರವಾಗಿ ತಮ್ಮ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಮಯ ಇದು.


ದುರ್ಜನಃ ಸಜ್ಜನೋ ಭೂಯಾತ್ ಸಜ್ಜನಃ ಶಾಂತಿಮಾಪ್ನುಯಾತ್
ಶಾಂತೋ ಮುಚ್ಯೇತ ಬಂಧೇಭ್ಯೋ ಮುಕ್ತಶ್ಚಾನ್ಯಾನ್ ವಿಮೋಚಯೇತ್||

(ದುರ್ಜನರು ಸಜ್ಜನರಾಗಲಿ, ಸಜ್ಜನರಿಗೆ ಶಾಂತಿ ಲಭಿಸಲಿ, ಶಾಂತರು ಬಂಧಮುಕ್ತರಾಗಲಿ, ಮುಕ್ತರು ಇತರರನ್ನೂ ಮುಕ್ತರನ್ನಾಗಿ ಮಾಡಲಿ.)

Reader Comments

ರವಿಯವರೇ,
ನಾನು ವಿವೇಕಾನಂದರ ಹೆಸರನ್ನು ಕುವೆಂಪು ಪುಸ್ತಕದಲ್ಲಿ, ಹಾಗು ತೇಜಸ್ವಿಯವರ ಅಂತಿಮಯಾತ್ರೆಯ ದಿನದಂದು ಅವರ ಮನೆಯಲ್ಲಿ ಪೋಟೋ ನೋಡದೇ ಹೋಗಿದ್ದರೆ, ನನಗೂ ಸಹ ವಿವೇಕಾನಂದರ ಗೋಡೆಯ ಮೇಲಿನ ಕ್ಯಾಲೆಂಡರ್ ಆಗಿಯೇ ಇರುತ್ತಿದ್ದರು, ಅಂದರೆ ಆಗಿಯೇ ಇದ್ದಾರೆ, ಏಕೆಂದರೆ ವಿವೇಕಾನಂದರ ಬಗ್ಗೆ ನನಗೆ ನಿಜವಾಗಿಯೂ ಏನೂ ಗೊತ್ತಿಲ್ಲ, ಅಂದರೆ ಗೊತ್ತಾಗುತ್ತಿಲ್ಲ. ಅವರ ಪುಸ್ತಕ ಒಂದೆರಡು ಬಾರಿ ಓದಿದೆ ಅವು ಸ್ಪಷ್ಟವಾಗಿ ಏನನ್ನೂ ಹೇಳುವುದಿಲ್ಲ. ಆಂದರೆ ಅವರು ಹೇಳುವುದೆಲ್ಲ ಜನರಲ್ ಮಾತುಗಳು, ಯುವಕರೇ ಏದ್ಡೇಳಿ, ಹೋರಾಡಿ,… ನಾನು ಸಣ್ಣವನಿರುವಾಗ ಆರ್.ಎಸ್.ಎಸ್ ಸಂಘದ ಮನೆಯ ವಿಚಿತ್ರ ಎನಿಸುವ ಘನವಂತ ಸಭೆಯೊಂದರಲ್ಲಿ ವಿವೇಕಾನಂದರ ಕುರಿತ ಭಾಷಣ ಕೇಳಿದ್ದೆ.. ಅದು ಅವರು ವಿದೇಶದಲ್ಲಿ ಜನರನ್ನು ಸಹೋದರರೇ ಸಹೋದರಿಯರೇ ಎಂದು ಸಂಭೋದಿಸಿದ್ದು ಆಗ ಇಡೀ ಜನರೇಲ್ಲ ಕಿವಿ ಗಡಚಿಕ್ಕುವಂತೆ ಚಪ್ಪಾಳೆ ತಟ್ಟಿದ್ದು [ನಿಜವಾಗಲು ತಟ್ಟಿದ್ದರೋ ಬಿಟ್ಟಿದ್ದರೋ ನಾವೆಲ್ಲ ಅದನ್ನೆ ಹೇಳಿಕೊಂಡು ಜೋರಾಗಿ ಚಪ್ಪಾಳೆ ತಟ್ಟಿಕೊಳ್ಳುತ್ತೇವೆ.][ಆದರೆ ಇನ್ನೋಂದು ಪುಸ್ತಕದಲ್ಲಿ ವಿವೇಕಾನಂದರು ಅಮೆರಿಕೆಯೊಬ್ಬಳು ಸಹೋದರಿ ಎಂದಾಗ ಆಕೆ ಪ್ರತಿರೋದಿಸುತ್ತಾಳೆ] ಇನ್ನೊಂದು ನಮ್ಮ ಆ ವಿದೇಶದ ಧಾರ್ಮಿಕ ಸಮಾರಂಭದಲ್ಲಿ ಭಗವದ್ಗೀತೆಯು ಎಲ್ಲಾ ಗ್ರಂಥಗಳ ಕೆಳಗಡೆ ಇದಲ್ಪಟ್ಟಿತ್ತಂತೆ ಆಗ ಅಮೆರಿಕದವನು ಬೈಬಲ್ ನೋಡಿ ಎಲ್ಲಾ ಗ್ರಂಥಗಳ ಮೇಲಿದೆ ಹಾಗೆಯೇ ಅದು ಕೂಡ ಎಲ್ಲಾ ಧರ್ಮಗಳಿಗಿಂತ ಮೇಲೆಂದನಂತೆ, ನಂತರ ವಿವೇಕಾನಂದರು ಕೆಳಗಿರುವ ನಮ್ಮ ಗೀತೆಯನ್ನುದ್ದೇಶಿಸಿ ನಮ್ಮ ಗೀತೆ ಎಲ್ಲಾ ಧರ್ಮಗಳ ಆಡಿಪಾಯ ಅದನ್ನು ತೆಗೆದರೆ ಎಲ್ಲವು ಉರುಳುತ್ತವೆಂದರಂತೆ ಆಗ ಮತ್ತೊಮ್ಮೆ ಚಪ್ಪಾಳೆ.. ಇವೆರಡೇ ನಾವು ನಮ್ಮ ಜೀವನದುದ್ದಕ್ಖೂ ಕೇಳುತ್ತ ಬಂದಿರುವುದು. ಯಾರಾದರೂ ವಿವೇಕಾನಂದರ ಬಗ್ಗೆ ನಿನಗಷ್ಟೆ ತಿಳಿದಿದ್ದರೆ ಅದು ನಿನ್ನ ಸಂಸ್ಕಾರ ಅಂದರೆ, ಕ್ಷಮಿಸಿ ಇದು ಬಹುತೇಕ ಭಾರತೀಯರಿಗೆ ಅನ್ವಯಿಸುತ್ತದೆ. ನಾನು ತಿಳಿಯಲಿಚ್ಚಿಸುವುದೇನೆಂದರೆ ವಿವೇಕಾನಂದರ ಬಗ್ಗೆ ಮೋದಲಿಂದಲೂ ಖಾವಿಯೊಂದನ್ನು ಬಿಟ್ಟು ಉಳಿದೆಲ್ಲಾ ವಿಚಾರ ವ್ಯ್ವವಸ್ಥಿತವಾಗಿ ಮುಚ್ಚಿಡಲ್ಪಟ್ಟಿದೆಯೋ ಹೇಗೆ, ಹಾಗಾದರೆ ಯಾವ ಪುಸ್ತಕ ಅವರನ್ನು ಸರಿಯಾಗಿ ಪರಿಚಯಿಸುತ್ತದೆ?? ಸ್ವಲ್ಪ ತಿಳಿಸಿಕೊಡಿ.

#2 
Written By venkven on March 10th, 2008 @ 11:07 am

ಆಂಧ್ರದ ಪುನರಾಯ್ಕೆಯಾದ ಮುಖ್ಯಮಂತ್ರಿ ರಾಜಶೇಖರ ರೆಡ್ದಿ( ಈತ ಕ್ರಿಶ್ಚಿಯನ್ ಆಗಿ ಮತಾಂತರಗೊಂಡು ಹಿಂದಿನ ಹೆಸರನ್ನೇ ಉಳಿಸಿಕೊಂಡ ಸಿಲ್ವೆಸ್ಟರ. ರಾಜಶೇಖರ ರೆಡ್ಡಿ ) ಕೋಲಾರದ ಜ್ಯೋತಿಷಿಗಳ ಸಲಹೆಯಂತೆ ಮುಂಜಾನೆಗೆ ನಿಗದಿಯಾಗಿದ್ದ ಪ್ರಮಾಣ ವಚನ ಕಾರ್ಯಕ್ರಮವನ್ನು ಸಂಜೆಗೆ ಬದಲಾಯಿಸಿದ ಬಗ್ಗೆ ಏನು ಹೇಳುತ್ತೀರಿ? . ಈತ ಹಿಂದುತ್ವವಾದಿಯಲ್ಲವಲ್ಲ?
http://www.prabhakarsays.blogspot.com

#3 
Written By prabhakarsk on June 2nd, 2009 @ 7:38 am

Add a Comment

required, use real name
required, will not be published
optional, your blog address