ಅಗಾಧ ಸಾಧ್ಯತೆಗಳ ನ್ಯಾನೊ ಕಾರು
Posted Under: Uncategorized
(ವಿಕ್ರಾಂತ ಕರ್ನಾಟಕ – ಜನವರಿ 25, 2008 ರ ಸಂಚಿಕೆಯಲ್ಲಿನ ಬರಹ)
ಇಂತಹುದೊಂದು ಸಾಧನೆ ಕೇವಲ ಭಾರತಕ್ಕೇ ಅಲ್ಲ, ಪ್ರಪಂಚಕ್ಕೂ ಬೇಕಾಗಿತ್ತು. ಭಾರತದ ಬಹುಸಂಖ್ಯಾತ ಕೆಳಮಧ್ಯಮವರ್ಗದ ಬಡವರೂ ಕಾರು ಕೊಂಡುಕೊಳ್ಳಬಹುದಾದಷ್ಟು ಅಗ್ಗದ ಬೆಲೆಯಲ್ಲಿ ಕಾರನ್ನು ಒದಗಿಸಬೇಕು ಎಂದುಕೊಂಡ ರತನ್ ಟಾಟಾರ ಕನಸಿನಲ್ಲಿ ವ್ಯಾಪಾರ-ವಹಿವಾಟಿನ ಯೋಚನೆಯೆ ಮೂಲಯೋಚನೆ ಎಂದುಕೊಂಡರೂ, ಟಾಟಾರವರ ನ್ಯಾನೊ ಕಾರಿಗೆ ಅದನ್ನು ಮೀರಿದ ಸಾಧ್ಯತೆಗಳಿವೆ. ಇದು ನಿಜಕ್ಕೂ ಯಶಸ್ವಿಯಾಗಿ ಮಾರಾಟವಾದರೆ, ಜಾಗತಿಕ ಪರಿಸರ, ಭಾರತದ ಆರ್ಥಿಕತೆ, ಭಾರತೀಯರ ಇನ್ನೊವೇಷನ್ ಸ್ಪಿರಿಟ್, ವಿಶ್ವದಾದ್ಯಂತದ ಆಟೊಮೊಬೈಲ್ ಇಂಡಸ್ಟ್ರಿಯ ಸ್ಥಿತಿ ಮತ್ತು ಗತಿಗಳ ಮೇಲೆಲ್ಲ ಇದು ನೇರ ಪರಿಣಾಮ ಬೀರಲಿದೆ. ಇವತ್ತು ನ್ಯಾನೊ ಕಾರಿನ ಅಗ್ಗಳಿಕೆ ಅತಿ ಕಮ್ಮಿ ಬೆಲೆಯ, ಯಾರಿಂದಲೂ ಇಷ್ಟು ಅಗ್ಗದ ಬೆಲೆಗೆ ತಯಾರಿಸಲಾಗದ ಕಾರು ಎನ್ನುವುದಾಗಿದ್ದರೂ, ವಿಶ್ವದಾದ್ಯಂತದ ಜನ ಮತ್ತು ಮಾಧ್ಯಮಗಳು ಈ ಕಾರಿನತ್ತ ಹರಿಸಿದ ಗಮನ ಪರೋಕ್ಷವಾಗಿ ಅನೇಕ ಗಂಭೀರ ಪರಿಣಾಮಗಳನ್ನು (ripple effect) ಬೀರಲಿದೆ.
ಈ ಕಾರಿನ ಯಶಸ್ಸು ಜಾಗತಿಕವಾಗಿ ಬೀರಲಿರುವ ಪ್ರಭಾವ ಒಳ್ಳೆಯ ಪ್ರಭಾವವೇ ಆಗಲಿದೆ. ವಿಶ್ವದ ಎಲ್ಲಾ ದೇಶದವರಿಗಿಂತ ಹೆಚ್ಚಿನ ಕಾರುಗಳನ್ನು ಕೊಳ್ಳುವ ಅಮೆರಿಕದಂತಹ ದೇಶದಲ್ಲಿ ಬಹುಪಾಲು ಜನ ಓಡಿಸುವುದು ದೊಡ್ಡದೊಡ್ಡ ಕಾರುಗಳನ್ನು. ಇಪ್ಪತ್ತು ವರ್ಷಗಳ ಹಿಂದೆ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಇಳಿದಿದ್ದೆ, ಅಮೆರಿಕದ ಜನ ಮತ್ತು ಅಮೆರಿಕದ ದೈತ್ಯ ಕಾರು ಉತ್ಪಾದಕ ಕಂಪನಿಗಳು ಮೈಲೇಜಿನ ಬಗ್ಗೆ ತಲೆಯನ್ನೇ ಕೆಡಿಸಿಕೊಳ್ಳಲಿಲ್ಲ. ಬಲಶಾಲಿ ಇಂಜಿನ್ನಿನ ಹೆಸರಿನಲ್ಲಿ, ಅಪಘಾತವಾದರೂ ಕಮ್ಮಿ ಅಪಾಯವಾಗುತ್ತದೆ ಎನ್ನುವಂತಹ ಸುರಕ್ಷತೆಯ ಹೆಸರಿನಲ್ಲಿ, ಐಷಾರಾಮದ ಹೆಸರಿನಲ್ಲಿ, ದೈತ್ಯಗಾತ್ರದ ಎಸ್‌ಯುವಿಗಳನ್ನು ಇಲ್ಲವೆ ಸ್ಪೋರ್ಟ್ಸ್ ಕಾರುಗಳ ತರಹದ ಕಾರುಗಳನ್ನು ಇಲ್ಲಿಯ ಜನ ಕೊಳ್ಳಲು ಆರಂಭಿಸಿಬಿಟ್ಟರು. ಇಲ್ಲಿನ ಬಹುಪಾಲು ದೈತ್ಯ ಕಾರುಗಳ ಮೈಲೇಜು ಒಂದು ಲೀಟರ್ ಪೆಟ್ರೊಲಿಗೆ ಕೇವಲ 8-10 ಕಿ.ಮಿ. ಮಾತ್ರ. ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಪೆಟ್ರೊಲಿನ ಬೆಲೆ ಕಿರಿಕಿರಿಯಾಗುವಷ್ಟು ಹೆಚ್ಚಾಗುವ ತನಕವೂ, ಪರಿಸರ ಕಾಳಜಿಯಿರುವ ಅಲ್ಲೊಬ್ಬರು ಇಲ್ಲೊಬ್ಬರು ಎಲೆಕ್ಟ್ರಿಕ್ ಕಾರುಗಳನ್ನೊ ಇಲ್ಲವೆ ಹೈಬ್ರಿಡ್ ಕಾರುಗಳನ್ನೊ ಕೊಳ್ಳುತ್ತಿದ್ದರೆ ಹೊರತು ಹೆಚ್ಚಿಗೆ ಮೈಲೇಜು ಕೊಡುವ, ಪರಿಸರ ಸ್ನೇಹಿ ಕಾರುಗಳ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಇನ್ನು, ಅಮೇರಿಕದಲ್ಲಿ ಸಿಗುವ ಅತಿ ಕಡಿಮೆ ಬೆಲೆಯ ಕಾರಿನ ಬೆಲೆ 10300 ಡಾಲರ್! ಹಾಗಾಗಿಯೆ, ಭಾರತದಲ್ಲಿ ಕೇವಲ 2500 ಡಾಲರ್‌ಗಳಿಗೆ ಒಂದು ಸಣ್ಣ ಕಾರು, ಅದೂ ಲೀಟರ್‌ಗೆ 25 ಕಿ.ಮಿ. ಮೈಲೇಜು ಕೊಡುವ ಕಾರು ಸಾಧ್ಯ ಅಂತಾದರೆ, ಅಮೆರಿಕದಲ್ಲಿಯೆ ಏನು, ಯೂರೋಪು, ಏಷ್ಯಾಗಳ ಕಾರು ಉತ್ಪಾದಕರೆಲ್ಲ ಇಂತಹುದೇ ಕಾರುಗಳ ಉತ್ಪಾದನೆಯತ್ತ ಗಮನ ಕೊಡುವುದು ಇನ್ನು ತೀರಾ ಅಗತ್ಯವಾಗಿ ಬಿಡುತ್ತದೆ.
ಇವತ್ತಿನ ಜಾಗತಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಟಾಟಾದವರ ನ್ಯಾನೊ ಕಾರು ರಸ್ತೆಗೆ ಇಳಿಯಲು ಇದಕ್ಕಿಂತ ಪ್ರಶಸ್ತವಾದ ಸಮಯ ಹಿಂದೆ ಇರಲಿಲ್ಲ. ಕಚ್ಚಾತೈಲದ ಬೆಲೆ ವರ್ಷದಿಂದ ವರ್ಷಕ್ಕೆ ಏರುತ್ತಿದೆ. ಭಾರತ ಮತ್ತು ಚೀನಾ ದೇಶಗಳ ಅರ್ಥಿಕ ಅಭಿವೃದ್ಧಿ ಈ ಬೆಲೆಯೆರಿಕೆ ನಿಲ್ಲದ ರೀತಿ ನೋಡಿಕೊಳ್ಳುತ್ತಿದೆ. ಇಂದಿನ ಕಚ್ಚಾತೈಲದ 2/3 ಭಾಗದಷ್ಟು ಸರಬರಾಜು ಗಲ್ಫ್ ದೇಶಗಳಿಂದ ಆಗುತ್ತಿದೆ. ಅಲ್ಲಿನ ಬಹುಪಾಲು ದೇಶಗಳಲ್ಲಿ ಪ್ರಜಾಪ್ರಭುತ್ವವಾಗಲಿ, ಜವಾಬ್ದಾರಿಯುತ ಸರ್ಕಾರಗಳಾಗಲಿ ಇಲ್ಲದೇ ಇರುವುದರಿಂದ ಅಲ್ಲಿಗೆ ಹೋಗುವ ಈ ತೈಲದ ಹಣ ಒಮ್ಮೊಮ್ಮೆ ಇಸ್ಲಾಮ್ ಮತಾಂಧ ಭಯೋತ್ಪಾದಕರ ಕೈಗೂ ಸೇರುತ್ತಿದೆ. ಹಾಗೆಯೆ, ಪೆಟ್ರೋಲಿಯಮ್ ಉತ್ಪನ್ನಗಳನ್ನು ಉರಿಸುವುದರಿಂದ ಉತ್ಪತ್ತಿಯಾಗುವ ಇಂಗಾಲದ ಡೈಆಕ್ಸೈಡ್ ಅನಿಲ ಗ್ಲೋಬಲ್ ವಾರ್ಮಿಂಗ್‌ಗೆ ಮೂಲಕಾರಣವಾಗಿದೆ. ಹೀಗೆ, ಉತ್ತಮ ಮೈಲೇಜು ಇಲ್ಲದ, ಇಂಧನ-ಎಫಿಷಿಯೆಂಟ್ ಅಲ್ಲದ ವಾಹನಗಳು ನೇರವಾಗಿಯೆ ಕಚ್ಚಾ ತೈಲದ ಬೇಡಿಕೆ ಮತ್ತು ತನ್ಮೂಲಕ ಭಯೋತ್ಪಾದನೆ ಮತ್ತು ಪರಿಸರ ಹಾನಿಗೆ ಕಾಣಿಕೆ ನೀಡುತ್ತಿವೆ. ವಿಶ್ವದಾದ್ಯಂತದ ಜವಾಬ್ದಾರಿಯುತ ಜನ, ಸಂಘಸಂಸ್ಥೆಗಳು, ಮತ್ತು ಸರ್ಕಾರಗಳು ಈ ಕೊಂಡಿಯನ್ನು ಅರ್ಥ ಮಾಡಿಕೊಂಡು ಅದನ್ನು ಎದುರಿಸುವ ಮಾರ್ಗೋಪಾಯಗಳ ಹುಡುಕಾಟದಲ್ಲಿರುವಾಗಲೆ ಟಾಟಾದವರ ನ್ಯಾನೊ ಕಾರು ಮಾರುಕಟ್ಟೆಗೆ ಬಂದಿದೆ.
ಈಗ ನಮ್ಮ ಭಾರತದ್ದೆ ಉದಾಹರಣೆ ತೆಗೆದುಕೊಳ್ಳೋಣ. ಜಾಗತೀಕರಣವನ್ನು ಸಕಾರಣವಾಗಿಯೆ ವಿರೋಧಿಸುತ್ತಿರುವವರು ಏನೇ ಹೇಳಿದರೂ, ಬಹುಪಾಲು ಜನರ ಜೀವನ ರೀತಿ ಇಂದು ಬದಲಾಗಿದೆ. ಸೆಮಿನಾರುಗಳಲ್ಲಿ, ಸಣ್ಣಪುಟ್ಟ ಸಭೆಗಳಲ್ಲಿ, ಕೆಲವೊಂದು ಜವಾಬ್ದಾರಿಯುತ ಮಾಧ್ಯಮಗಳಲ್ಲಿ ಜನರಿಗೆ ಎಷ್ಟೇ ಆರ್ಥಿಕಸಂಬಂಧಿ ಸಂಯಮ ಬೋಧಿಸಿದರೂ ಬಹುಪಾಲು ಜನರಿಗೆ ಇದು ಮುಟ್ಟುವುದೇ ಇಲ್ಲ. ನ್ಯಾನೊ ಕಾರಿನಿಂದ ಪರಿಸರಕ್ಕೆ ಹಾನಿ, ಟ್ರಾಫಿಕ್ ಜಾಮ್ ಜಾಸ್ತಿ ಎಂದೆಲ್ಲ ಪರಿಸರವಾದಿಗಳು ಹೇಳಿಕೊಂಡು ಓಡಾಡಿದರೂ, ಕಾರು ಕೊಳ್ಳುವ ತಾಕತ್ತು ಬಂದ ತಕ್ಷಣ ಮಧ್ಯಮವರ್ಗದ ಮನುಷ್ಯ ಕಾರು ಕೊಂಡೇಕೊಳ್ಳುತ್ತಾನೆ. ಎಲ್ಲಾ ಸಮಯದಲ್ಲಿಯೂ ಅದು ಅವಶ್ಯಕ ಎಂದಲ್ಲ. ಆದರೂ ಕೊಳ್ಳುತ್ತಾನೆ. ಆತ ಮೊದಲು ಕೊಳ್ಳುವ ಕಾರು ಸೆಕೆಂಡ್ ಹ್ಯಾಂಡ್ ಕಾರು ಆಗಿರುತ್ತದೆ, ಇಲ್ಲವೆ ಮಾರುತಿ-800 ಆಗಿರುತ್ತದೆ. ನ್ಯಾನೊ ಬಂದ ಮೇಲೆ ಈ ವರ್ಗಕ್ಕೆ ಸೇರಿದ ಜನ ಕೊಳ್ಳುವ ಮೊದಲ ಕಾರು ನ್ಯಾನೊ ಕಾರೇ ಆಗಿರುತ್ತದೆ. ನ್ಯಾನೊ ಕಾರಿಗೆ ಮಾರುತಿ-800 ಗೆ ಬೇಕಾದಷ್ಟು ಕಬ್ಬಿಣ ಬೇಕಿಲ್ಲ; ಗಾಜು ಬೇಕಿಲ್ಲ; ರಬ್ಬರ್ ಬೇಕಿಲ್ಲ. ಯಾವುದೆ ಕಚ್ಚಾಸಾಮಗ್ರಿಯ ವಿಚಾರದಲ್ಲೂ ನ್ಯಾನೊ ಕಾರಿಗೆ ಇತರ ಇನ್ಯಾವ ಕಾರಿಗಿಂತಲೂ ಕಡಿಮೆ ವಸ್ತುವನ್ನು ಉಪಯೋಗಿಸಲಾಗಿರುತ್ತದೆ. ಇನ್ನು ಇದು ಮಾರುತಿ-800 ಕೊಡುವುದಕ್ಕಿಂತಲೂ ಹೆಚ್ಚಿನ ಮೈಲೇಜ್ ಕೊಡುವುದರಿಂದ, ಅಷ್ಟು ಮಾತ್ರದ ಪೆಟ್ರೋಲ್ ಬಳಕೆ ಮತ್ತು ಕಾರ್ಬನ್ ಡೈಆಕ್ಸೈಡ್ ಹೊರ ಚೆಲ್ಲುವಿಕೆ ಕಡಿಮೆಯಾಗುತ್ತದೆ. ಇವುಗಳ ಜೊತೆಗೇ, ಇದು ಸಂಪೂರ್ಣವಾಗಿ ಸ್ವದೇಶಿ ನಿರ್ಮಿತ ಕಾರು ಆಗಿರುವುದರಿಂದ ಇದಕ್ಕೆ ಕೊಡುವ ಪ್ರತಿಯೊಂದು ರೂಪಾಯಿಯೂ ಭಾರತದ ಒಳಗೆಯೇ ಚಲಾವಣೆ ಆಗುತ್ತದೆ. ಇದು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸೃಷ್ಟಿಸುವ ಪ್ರತಿಯೊಂದು ಉದ್ಯೋಗವೂ ಭಾರತೀಯನಿಗೇ ಸಿಗುತ್ತದೆ.
ಇದೇ ಸಮಯದಲ್ಲಿ, ಸಿಂಗೂರಿನ ರಕ್ತ ಈ ಕಾರಿಗೆ ಅಂಟಿಕೊಂಡಿದೆ ಎಂದು ಈಗಾಗಲೆ ಕೆಲವರು ಈ ಕಾರಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಒಂದು ಅರ್ಥದಲ್ಲಿ ಈ ವಿರೋಧ ಬಹಳ ಸಮಯೋಚಿತವಾದದ್ದು ಮತ್ತು ಉದ್ದೇಶರೀತ್ಯ ಸಕಾಲಿಕವಾದದ್ದು. ಟಾಟಾದಂತಹ ಬಲಿಷ್ಠ ಬಹುರಾಷ್ಟ್ರೀಯ ಕಂಪನಿಗಳು ಕಂಪನಿಯ ಆರ್ಥಿಕ ಹಿತವನ್ನೆ ಮುಖ್ಯವಾಗಿ ಭಾವಿಸಿಕೊಂಡು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಮರೆತಾಗಲೆಲ್ಲ ಇಂತಹದ್ದು ಆಗುತ್ತಿರುತ್ತದೆ. ಈಗಾಗಲೆ ಆಗಿರುವ ತಪ್ಪನ್ನು ಸರಿಪಡಿಸಿಕೊಳ್ಳುವುದಕ್ಕೆ ಮತ್ತು ಮುಂದೆ ಅಂತಹ ತಪ್ಪುಗಳನ್ನು ಮಾಡದೆ ಎಚ್ಚರವಾಗಿ ಇರುವುದಕ್ಕೆ ಈ ರೀತಿಯ ಪ್ರತಿಭಟನೆಗಳು ಸಹಕಾರಿ. ಎಲ್ಲೆಲ್ಲಿ ಬೇಜವಾಬ್ದಾರಿಯಾಗಿ ರೈತರನ್ನು ಒಕ್ಕಲೆಬ್ಬಿಸಿ, ಅವರ ಜಮೀನನ್ನು ವಶಪಡಿಸಿಕೊಂಡು ಅದನ್ನು ದೊಡ್ದದೊಡ್ಡ ಕಂಪನಿಗಳಿಗೆ ಕೊಡಲು ರಾಜ್ಯಸರ್ಕಾರಗಳು ಮುಂದಾಗುತ್ತಿವೆಯೊ ಅಲ್ಲೆಲ್ಲ ಈಗ ನ್ಯಾನೊ ಹೆಸರಿನಲ್ಲಿ ಕೇಳಿಬರುತ್ತಿರುವ ಪ್ರತಿಭಟನೆ ನೈತಿಕ ತಾಕತ್ತು ತುಂಬಲಿದೆ. ಆದರೆ, ಇದು ನ್ಯಾನೊ ಕಾರಿನ ಯಶಸ್ಸಿಗೆ ಅಥವ ಉತ್ಪಾದನೆಗೆ ತಡೆದುಕೊಳ್ಳ್ಳಲಾಗದಷ್ಟು ಪೆಟ್ಟು ಕೊಡುತ್ತದೆ ಎಂದು ಹೇಳಲಾಗದಿದ್ದರೂ, ಟಾಟಾದವರ ಇತರ ಯೋಜನೆಗಳಿಗೆ ಪಾಠವಂತೂ ಆಗುತ್ತದೆ. ಅಷ್ಟು ಮಾತ್ರಕ್ಕಾದರೂ ಈ ಪ್ರತಿಭಟನೆಗಳನ್ನು ಮತ್ತು ಅದರ ಟೈಮಿಂಗ್ ಅನ್ನು ಮೆಚ್ಚಲೆ ಬೇಕು.
ಪರಿಸರವಾದಿಗಳ Self-defeating ವಿರೋಧ:
ಈ ಕಾರಿಗೆ ಕೆಲವು ಪರಿಸರವಾದಿಗಳು ಒಡ್ಡುತ್ತಿರುವ ವಿರೋಧ ಮಾತ್ರ ವಾಸ್ತವವಾಗಿ ಅವರು ಹೋರಾಡುತ್ತಿರುವ ನೀತಿಯನ್ನೆ ವಿರೋಧಿಸುತ್ತಿದೆ. This is nothing but self-defeating. ನ್ಯಾನೊ ಕಾರು ಯಾವ ಕಾರಣಕ್ಕೂ ಈಗಾಗಲೆ ಮಾರುಕಟ್ಟೆಯಲ್ಲಿರುವ ಇತರ ಕಾರುಗಳಿಗಿಂತ ಹೆಚ್ಚಿನ ಗ್ರೀನ್‌ಹೌಸ್ ಅನಿಲಗಳನ್ನು ಹೊರಚೆಲ್ಲದಿರುವಂತೆ ನೋಡಿಕೊಳ್ಳುವುದರಲ್ಲಿ ಪರಿಸರದ ಹಿತಾಸಕ್ತಿ ಇದೆಯೆ ಹೊರತು ಈ ಕಾರನ್ನು ವಿರೋಧಿಸುವುದರಲ್ಲಿ ಅಲ್ಲ. ಏಕೆಂದರೆ, ಮೇಲೆ ಹೇಳಿದಂತೆ, ಬೇರೆಲ್ಲ ಕಾರುಗಳಿಗಿಂತ ಕಮ್ಮಿ ಕಚ್ಚಾ ಸಾಮಗ್ರಿ ಈ ಕಾರಿಗೆ ಬೇಕು; ಕಮ್ಮಿ ಪೆಟ್ರೋಲ್ ಕುಡಿಯುತ್ತದೆ; ಮತ್ತು ಕಾರು ಕೊಳ್ಳುವವರು ಪರಿಸರ-ಭಯೋತ್ಪಾದನೆ-ಆಮದು-ರಫ್ತು ಮುಂತಾದ ವಿಷಯಗಳ ಬಗ್ಗೆಯೆಲ್ಲ ಯೋಚನೆ ಮಾಡದೆ, ಯಾವ ಕಾರು ಕೊಡುವ ದುಡ್ಡಿಗೆ ಮೋಸವಿಲ್ಲವೊ ಅದನ್ನು ಕೊಳ್ಳುತ್ತಿರುತ್ತಾರೆ. ಹೀಗಿರುವಾಗ, ಈ ಕಾರಿನಿಂದಲೆ ಪರಿಸರಕ್ಕೆ ಹಾನಿ, ಈ ಕಾರನ್ನು ನಿಷೇಧಿಸಬೇಕು ಎನ್ನುವುದರಲ್ಲಿ ಅರ್ಥವಿಲ್ಲ. ಕೆಲವು ಪ್ರಾಮಾಣಿಕವಾದ ಕಾಳಜಿಗಳನ್ನು ಇಟ್ಟುಕೊಂಡು ಹೋರಾಡುವ ಪರಿಸರವಾದಿಗಳು ಈ ವಿಷಯದಲ್ಲಿ ತಮ್ಮ ಆಶಯಗಳನ್ನು ವಿರೋಧಿಸುವ ದುಷ್ಟಕೂಟದ ದಾಳಗಳಾಗುತ್ತಿದ್ದಾರೆನೊ ಎನ್ನಿಸುತ್ತದೆ.
ವಿಶ್ವದ ಅತಿದೊಡ್ಡ ಆಟೊಮೊಬೈಲ್ ಕಂಪನಿಯಾದ ಜನರಲ್ ಮೋಟಾರ್ಸ್‌ನವರು 1996 ರಲ್ಲಿ ಸಂಪೂರ್ಣವಾಗಿ ವಿದ್ಯುತ್‌ನಿಂದಲೆ ಓಡುವ EV1 ಎಂಬ ಎಲೆಕ್ಟ್ರಿಕ್ ಕಾರನ್ನು ಉತ್ಪಾದಿಸಿ ಆಯ್ದ ಜನರಿಗೆ ಲೀಸಿಗೆ ಕೊಟ್ಟಿದ್ದರು. ಅವುಗಳ ಒಟ್ಟು ಸಂಖ್ಯೆ ಕೇವಲ 1167 ಮಾತ್ರ ಆಗಿತ್ತು. ಅವು Zero-ಎಮಿಷನ್ ಕಾರುಗಳು. ಒಂದಿಷ್ಟೂ ಪೆಟ್ರೊಲ್ ಬಳಸದ, ಇಂಜಿನ್ ಇಲ್ಲದ ಕಾರು ಅದು. ಯಾವಾಗ ಅದು ಒಂದು ಮಟ್ಟದ ಯಶಸ್ಸು ಕಾಣಲಾರಂಭಿಸಿತೊ ಅಮೆರಿಕದ ತೈಲ ಕಂಪನಿಗಳಿಗೆ ಮತ್ತು ಸ್ವತಃ ಕಾರಿನ ಕಂಬಷ್ಚನ್ ಇಂಜಿನ್ ಮತ್ತು ಅದರ ರಿಪೇರಿಗಳಿಂದಲೆ ಅಪಾರ ಲಾಭ ಮಾಡುವ ಆಟೊಮೊಬೈಲ್ ಕಂಪನಿಗಳಿಗೆ ಭಯವಾಗಲು ಆರಂಭವಾಯಿತು. ಕೊನೆಗೆ ತೈಲಕಂಪನಿಗಳ ಮತ್ತು ಈ ಆಟೋಮೊಬೈಲ್ ಇಂಡಸ್ಟ್ರಿಯ ಲಾಬ್ಬಿ ಯಾವ ಮಟ್ಟಕ್ಕೆ ಹೋಯಿತೆಂದರೆ, ಸ್ವತಃ ಇಂತಹ ಕಾರುಗಳನ್ನು ಕಡ್ಡಾಯ ಮಾಡಲು ಪ್ರೋತ್ಸಾಹಿಸಬೇಕಿದ್ದ ಕ್ಯಾಲಿಫೋರ್ನಿಯ ಸರ್ಕಾರದ ವಾಯುಸಂಪನ್ಮೂಲ ಬೋರ್ಡ್ ದಾರಿ ತಪ್ಪಿಬಿಟ್ಟಿತು. ಕೊನೆಗೆ ಜಿಎಮ್ ಕಂಪನಿ ಬಳಕೆಯಲ್ಲಿದ್ದ ಪ್ರತಿಯೊಂದು EV1 ಕಾರನ್ನು ವಾಪಸು ತೆಗೆದುಕೊಂಡು, ಒಂದೆ ಒಂದು ಕಾರನ್ನು ಬಿಟ್ಟು ಮಿಕ್ಕೆಲ್ಲವನ್ನೂ ಕ್ರಷ್ ಮಾಡಿಬಿಟ್ಟಿತು. ಆಗ ತಾನೆ
ಕಣ್ಣುಬಿಡುತ್ತಿದ್ದ ತನ್ನದೆ ಕಂಪನಿಯ ಪರಿಸರಸ್ನೇಹಿ EV1 ಕಾರಿಗಾಗಿ ತನ್ನ ಇತರ ತೈಲಮೂಲದ ಹೆಚ್ಚು ಲಾಭದಾಯಕವಾದ ಕಾರುಗಳ ಉತ್ಪಾದನೆಗೆ ಪೆಟ್ಟುಕೊಟ್ಟುಕೊಳ್ಳಲು ಸ್ವತಃ ಜಿಎಮ್ ಬಯಸಲಿಲ್ಲ. ಆ ಕಾರುಗಳನ್ನು ಕೊಳ್ಳಲು ಹಗಲು ರಾತ್ರಿ ಕಾವಲು ಕಾಯ್ದ ಹಲವಾರು ಜನರ ವಿರೋಧವನ್ನೂ ಮೀರಿ ತನ್ನ ಕಾರನ್ನು ತಾನೆ ಕತ್ತು ಹಿಸುಕಿ ಕೊಂದುಬಿಟ್ಟಿತು. ಆ ಸಮಯದಲ್ಲಿ ಅವರಿಗೆ ಗೊತ್ತಿಲ್ಲದೆ ತಕ್ಕಮಟ್ಟಿಗೆ ಸಹಕರಿಸಿಬಿಟ್ಟವರು ಯಾರೆಂದರೆ ವಿದ್ಯುತ್‌ನಿಂದಲೂ ಪರಿಸರಕ್ಕೆ ಹಾನಿ ಎಂದ ಪರಿಸರವಾದಿಗಳು! ಅದಕ್ಕಾಗಿಯೆ ನ್ಯಾನೊ ವಿಚಾರದಲ್ಲಿಯೂ ಅಂತಹುದೊಂದು ಆಗದೆ ಇರಲಿ ಎಂದು ನಾವು ಬಯಸಬೇಕು.
ಸೆಕೆಂಡ್‌ಹ್ಯಾಂಡ್ ಕಾರುಗಳ ಮಾರಾಟ ಸೃಷ್ಟಿಸುವ ಹೊಸ ಕಾರುಗಳ ಬೇಡಿಕೆ:
ನ್ಯಾನೊ ಮಾರುಕಟ್ಟೆಗೆ ಬಂದ ಮೇಲೆ ಸೆಕೆಂಡ್‌ಹ್ಯಾಂಡ್ ಕಾರುಗಳ ಮಾರಾಟ, ಅದರಲ್ಲೂ ಭಾರತದಲ್ಲಿ ಬಹುಸಂಖ್ಯೆಯಲ್ಲಿರುವ ಸಣ್ಣಕಾರುಗಳ ಸೆಕೆಂಡ್‌ಹ್ಯಾಂಡ್ ಮಾರಾಟಗಳು ಕಮ್ಮಿ ಆಗಲಿವೆ. ಅದರಿಂದ ನೇರವಾಗಿ ಉಪಯೋಗವಾಗಲಿರುವುದು ಪರಿಸರಕ್ಕೆ. ಒಂದು ಸೆಕಂಡ್‌ಹ್ಯಾಂಡ್ ಕಾರಿನ ಮಾರಾಟ ಪರೋಕ್ಷವಾಗಿ ಮತ್ತೊಂದು ಹೊಸಕಾರಿನ ಕೊಳ್ಳುವಿಕೆಯಲ್ಲಿ ಮುಗಿಯುವ ಸಾಧ್ಯತೆಯೇ ಹೆಚ್ಚು. ಈಗಾಗಲೆ ತನ್ನ ಬಳಿ ಇರುವ ಮಾರುತಿ 800 ನಂತಹ ಕಾರನ್ನು ಮಾರುವ ಮಾಲೀಕ ನಂತರ ಕೊಳ್ಳುವುದು ಅದಕ್ಕಿಂದ ದುಬಾರಿಯಾದ, ಅದಕ್ಕಿಂತ ಕಡಿಮೆ ಮೈಲೇಜು ಕೊಡುವ, ಅದಕ್ಕಿಂತ ದೊಡ್ಡದಾದ ಐಷಾರಾಮಿ ಕಾರನ್ನು. ಇನ್ನು ಮೇಲೆ ಸೆಕೆಂಡ್‌ಹ್ಯಾಂಡ್ ಕಾರುಗಳ ಬೇಡಿಕೆ ಕಮ್ಮಿ ಆಗುವುದರಿಂದ, ತಮಗೆ ತೀರ ಅಗತ್ಯವಾಗಿಲ್ಲದ ಹೊರತು ಸಣ್ಣಕಾರುಗಳ ಹಾಲಿ ಮಾಲೀಕರು ಇನ್ನೊಂದು ದೊಡ್ಡ ಕಾರನ್ನು ಕೊಳ್ಳುವ ಕನ್ಸ್ಯೂಮರಿಸಮ್ ಕಾಯಿಲೆಯಿಂದ ಒಂದಷ್ಟು ದಿನ ಮುಕ್ತರಾಗಿರುತ್ತಾರೆ.