ಭೈರಪ್ಪನವರ ಬೈರಿಗೆ

This post was written by admin on September 10, 2006
Posted Under: Uncategorized

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಸೆಪ್ಟೆಂಬರ್ 22, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು)

ಸಮ್ಮೇಳನದಲ್ಲಿ ನಡೆದ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಇದ್ದಿದ್ದರಲ್ಲಿ ಪರವಾಗಿಲ್ಲ ಎಂಬಷ್ಟು ಜನ ಇದ್ದದ್ದು ಭೈರಪ್ಪನವರೊಂದಿಗೆ ಇದ್ದ ಸಂವಾದದ ಕಾರ್ಯಕ್ರಮದಲ್ಲಿ. ಅಮೇರಿಕಾದಲ್ಲಿನ ಕನ್ನಡ ಓದುಗರಲಿಯೂ ಭೈರಪ್ಪ ಜನಪ್ರಿಯ ಸಾಹಿತಿ. ಇದಕ್ಕೆ ಮುಖ್ಯ ಕಾರಣ, ತಮ್ಮ 20-30 ರ ವಯಸ್ಸಿನ ಆಸುಪಾಸಿನಲ್ಲಿ ಈ ದೇಶಕ್ಕೆ ಬಂದಿರುವ ಬಹುಪಾಲು ಕನ್ನಡಿಗರ ಕನ್ನಡ ಓದು ನಿಂತಿರುವುದು ಭೈರಪ್ಪನವರ ಕಾದಂಬರಿಗಳೊಂದಿಗೆ. ಅಲ್ಲಿಂದೀಚೆ ಬಂದ ಇತರ ಮಹತ್ವದ ಲೇಖಕರನ್ನಾಗಲಿ ಅಥವ ಕುವೆಂಪು, ಕಾರಂತ, ಅನಂತಮೂರ್ತಿ, ಲಂಕೇಶರನ್ನಾಗಲಿ ಬಹಳ ಜನ ಓದಿರುವುದು ಕಮ್ಮಿ. ಹೀಗಾಗಿ ಬಹಳಷ್ಟು ಜನರಿಗೆ ಭೈರಪ್ಪನವರ ಬಗ್ಗೆ ಪೂಜ್ಯ ಭಾವನೆ!

ಸಂವಾದದಲ್ಲಿ ಭೈರಪ್ಪನವರಿಗೆ ಕೇಳಿದ ಮೊದಲ ಎರಡು ಪ್ರಶ್ನೆಗಳಿಗೆ ಅವರು ಕೊಟ್ಟ ಉತ್ತರಗಳು ಕುತೂಹಲಕಾರಿಯಾಗಿದ್ದವು. ಮೊದಲನೆಯದು ಅವರ ಸಾಕ್ಷಿಕಾದಂಬರಿಯಲ್ಲಿ ಬರುವ ಮಂಜಯ್ಯ ಪಾತ್ರದ ಕುರಿತಾಗಿತ್ತು. “ಸಾಕ್ಷಿಯ ಮಂಜಯ್ಯನನ್ನೇ ನೋಡಿ. ಆತ ಸತ್ತು ಪ್ರೇತವಾಗಿ ಯಮನ ಬಳಿಗೆ ಹೋಗುತ್ತಾನೆ. ಅಲ್ಲಿ ಯಮನಿಗೆ ಚಿತ್ರಗುಪ್ತರಿಂದ ಸತ್ಯ ಏನೆಂದು ಮೊದಲೇ ಗೊತ್ತಿದ್ದರೂ, ಯಮ ಸಹ ನಂಬುವಂತಹ ಮಾತು ಮಂಜಯ್ಯ ನುಡಿಯುತ್ತಾನೆ. ಯಮನನ್ನೇ ನಂಬಿಸಿಬಿಡುತ್ತಾನೆ. ಬದುಕಿದ್ದಾಗಲೂ ಅವನು ಸುಳ್ಳೇ ಹೇಳುತ್ತಿದ್ದ. ಸತ್ತ ಮೇಲೂ ಅವನು ಸುಳ್ಳೇ ಹೇಳುತ್ತಾನೆ. ಸುಳ್ಳನ್ನು ಬಿಡುವುದೇ ಇಲ್ಲ. ಜೀವನದಲ್ಲಿ ಸುಳ್ಳು ಪ್ರತಿಸಲವೂ ವಿಜೃಂಭಿಸುತ್ತಿರುತ್ತೆ. ಈಗಿನ ಪ್ರಪಂಚವನ್ನೇ ನೋಡಿ. ಯಾವಾಗಲೂ ಸುಳ್ಳಿಗೇ ಜಯ.” ಭೈರಪ್ಪನವರು ಹೇಳುತ್ತಿರುವುದಾದರೂ ಏನು? ಹಾಗಾದರೆ ಅವರು ಹೇಳುತ್ತಿರುವುದೂ ಸುಳ್ಳಿರಬಹುದಲ್ಲ? ಎಂತಹ ಜೀವವಿರೋಧಿ ನಿರಾಶಾವಾದ? ಇವರು ಹೇಳುತ್ತಿರುವುದು ಒಂದು ರೀತಿ ನಿತ್ಯಪಾಪಿ ಸಿದ್ಧಾಂತವನ್ನಲ್ಲವೆ? ಆತ್ಮಗಳಲ್ಲಿ ಸಹ ಮೇಲು ಕೀಳುಗಳು ಉಂಟು ಎಂದಲ್ಲವೆ ಇವರು ಹೇಳುತ್ತಿರುವುದು? ಇದು ನಿಜವೆ? ಕೆಲವು ಮನುಷ್ಯರು ಪಾಪಿಯಾಗಿಯೆ ಹುಟ್ಟಿ ಪಾಪಿಗಳಾಗಿಯೇ ಸಾಯುತ್ತಾರೆಯೆ? ಅವರಿಗೆ ಮೋಕ್ಷವೇ ಇಲ್ಲವೆ?

ಇನ್ನೊಂದು ಪ್ರಶ್ನೆ, “ನೀವು ಮಹಾಭಾರತ ಆಧಾರಿತ ಪರ್ವ ಬರೆದಿರಿ. ರಾಮಾಯಣ ಆಧಾರಿತ ಕಾದಂಬರಿ ಇನ್ನೂ ಯಾಕೆ ಬರೆದಿಲ್ಲ.” ಅದಕ್ಕವರು, “ರಾಮಾಯಣದ ಪಾತ್ರಗಳು ಒಂದು ರೀತಿ ಪರಿಪೂರ್ಣ. ಅವು ನಮ್ಮ ಇಡೀ ಸಂಸ್ಕೃತಿಯ ಆದರ್ಶಗಳು. ಜೀವನದ ಸರ್ವಶ್ರೇಷ್ಠ ಮೌಲ್ಯಗಳ ಅರಕ ರಾಮಾಯಣ. ಅದನ್ನು ಮರುಸೃಷ್ಟಿ ಮಾಡೋದಕ್ಕೆ ಹೋದರೆ ಇಡೀ ಸಂಸ್ಕೃತಿಯನ್ನು, ಮೌಲ್ಯಗಳನ್ನು, ನಮ್ಮ ಪರಂಪರೆಯನ್ನು ನಾಶ ಮಾಡಿದ ಹಾಗೆ. ಅಂತಹ ಕೆಲಸ ನನಗಿಷ್ಟವಿಲ್ಲ.” ಅಂದರೆ ಭೈರಪ್ಪನವರ ಮಾತಿನ ಅರ್ಥ ರಾಮಾಯಣದ ಮರುಸೃಷ್ಟಿ ಮಾಡಿದವರೆಲ್ಲ ಕೆಟ್ಟವರು ಎಂದಲ್ಲವೆ? ಕುಮಾರವ್ಯಾಸ ಹೇಳಿದ ತಿಣುಕಿದನು ಫಣಿರಾಯ ರಾಮಾಯಣಗಳ ಭಾರದಲ್ಲಿ ಮಾತನ್ನು ನಂಬುವುದಾದರೆ, ಅದೆಷ್ಟು ಜನ ವಾಲ್ಮೀಕೇತರ ರಾಮಾಯಣ ಕತೃ ಪಾಪಿಗಳು ಭೂಮಿಯ ಮೇಲೆ ಇದ್ದಾರೆ, ಆಗಿ ಹೋಗಿದ್ದಾರೆ? ಹಿಂದೆ ಕುಳಿತಿದ್ದ ಸಾಹಿತಿಗಳೊಬ್ಬರು ಗೊಣಗುತ್ತಿದ್ದರು; “ಭೈರಪ್ಪನವರ ದೃಷ್ಟಿ ಕುವೆಂಪುರವರ ರಾಮಾಯಣ ದರ್ಶನಂ ಮೇಲಿದೆ,” ಎಂದು!

ಅದೇ ವೇದಿಕೆಯಲ್ಲಿ ಭೈರಪ್ಪನವರು ಹೇಳಿದ ಇನ್ನೊಂದು ಮಾತು, “ಸಾಹಿತ್ಯದಿಂದ ಸಮಾಜ ಸುಧಾರಣೆ ಆಗೋದೆಲ್ಲ ಸುಳ್ಳು. ಈ ಸುಧಾರಣೆ, ಬದಲಾವಣೆ ಇವೆಲ್ಲ ಮಾರ್ಕ್ಸಿಸ್ಟ್ ಪದಪುಂಜಗಳು. ಇವೆಲ್ಲಾ ಬಹಳ ಅಪಾಯಕಾರಿ ಟರ್ಮಿನಾಲಜಿಗಳು.” ಹಾಗಾದರೆ, ರಾಮಾಯಣವನ್ನು ಮರು ಸೃಷ್ಟಿಸಿದ ಮಾತ್ರಕ್ಕೆ ಸಮಾಜದಲ್ಲಿನ ಮೌಲ್ಯಗಳು ಕೆಟ್ಟುಹೋಗುತ್ತವಾ? ಸುಧಾರಣೆ ಸಾಧ್ಯವಿಲ್ಲವಾದರೆ ಕೆಡುಕೂ ಸಾಧ್ಯವಿಲ್ಲ ಅಲ್ಲವೆ? ಎಂತಹ ವಿರೋಧಾಭಾಸಗಳು ಮಾರಾಯ್ರೆ?

ಮಾಧ್ಯಮಗಳ ಭೂಗೋಳ ಜ್ಞಾನ!

ಕಾರ್ಯಕ್ರಮ ಮುಗಿಯುವುದಕ್ಕೆ ಇನ್ನೂ ೧೨ ಗಂಟೆಗಳ ಸಮಯ ಇದೆ ಎನ್ನುವಾಗಲೇ ಬೆಂಗಳೂರಿನಲ್ಲಿ ಕನ್ನಡ ದಿನಪತ್ರಿಕೆಗಳು “ಅಕ್ಕ ಸಮ್ಮೇಳನಕ್ಕೆ ತೆರೆ” ಎಂದು ಮುದ್ರಣಗೊಳ್ಳುತ್ತಿದ್ದವು. ಗುರುಕಿರಣರ ರಸಮಯ ಸಂಗೀತ ಕಾರ್ಯಕ್ರಮದೊಂದಿಗೆ ಸಮ್ಮೇಳನಕ್ಕೆ ತೆರೆ ಬಿತ್ತು ಎಂದು ಕರ್ನಾಟಕದಲ್ಲಿನ ಜನ ಬೆಳಿಗ್ಗೆಯ ಕಾಫಿಯೊಂದಿಗೆ ದಿನಪತ್ರಿಕೆಗಳಲ್ಲಿ ಓದುತ್ತಿದ್ದರೆ ಆ ಕಾರ್ಯಕ್ರಮ ಇಲ್ಲಿ ಇನ್ನೂ ಆರಂಭವೇ ಆಗಿರಲಿಲ್ಲ! ಕೊನೆಯ ದಿನದ ಕಾರ್ಯಕ್ರಮದ ಬೆಳ್ಳಂಬೆಳಗ್ಗೆ, ಬೆಂಗಳೂರಿನಿಂದ ಬಂದಿದ್ದ ಪತ್ರಕರ್ತರೊಬ್ಬರು ಇಲ್ಲಿಂದ ಅವರ ಪತ್ರಿಕೆಗೆ ವರದಿ ಮತ್ತು ಫೋಟೊಗಳನ್ನು ನನ್ನ ಲ್ಯಾಪ್‌ಟಾಪ್‌ನಿಂದಲೇ ಕಳುಹಿಸಿದರು. ಲೇಖನದಲ್ಲಿ ಏನಿತ್ತು ಎಂದು ನನಗೇನೂ ಗೊತ್ತಿರಲಿಲ್ಲ. ಮಾರನೆಯ ದಿನ ಆ ಪತ್ರಿಕೆಯ ವೆಬ್‌ಸೈಟ್ ತೆಗೆದು ನೋಡುತ್ತೇನೆ; ಇನ್ನೂ ಹದಿನೈದು ಗಂಟೆಗಳ ಕಾರ್ಯಕ್ರಮ ಇರುವಾಗಲೇ ಅಲ್ಲಿಗೆ ಬಂದಿದ್ದ ಕೆಲವರು ಅಳುತ್ತಾ ಭಾವಪೂರ್ಣ ವಿದಾಯ ತೆಗೆದುಕೊಂಡಿದ್ದರು! ಬೆಂಗಳೂರಿನಲ್ಲಿ ಸೋಮವಾರದ ಮುಂಜಾವು ಬಾಲ್ಟಿಮೋರ್‌ನಲ್ಲಿ ಇನ್ನೂ ಭಾನುವಾರದ ಮುಸ್ಸಂಜೆಯಾಗಿರುತ್ತದೆ ಎನ್ನುವ ಭೂಗೋಳದ ಸಾಮಾನ್ಯ ಜ್ಞಾನವೂ ಇಲ್ಲದಿದ್ದರೆ ಹೇಗೆ? ಇದನ್ನೆಲ್ಲ ಊಹಿಸಿಯೇ ಇರಬೇಕು ಅಮೇರಿಕದಿಂದ ನಮ್ಮ ಅಂತರ್ಜಾಲ ತಾಣಕ್ಕೆ ಇ-ಮೇಯ್ಲ್ ಕಳುಹಿಸಿದ್ದ ಓದುಗರೊಬ್ಬರು ಹೀಗೆ ಬರೆದಿದ್ದು:

“ಮಾನ್ಯ ಸಂಪಾದಕರಿಗೆ,

ಅಮೆರಿಕಾದ ಬಾಲ್ಟಿಮೋರಿನಲ್ಲಿ ನಡೆಯುತ್ತಿರುವ ವಿಶ್ವ ಕನ್ನಡ ಸಮ್ಮೇಳನದ ಬಗ್ಗೆ ನಿಮ್ಮ ಪತ್ರಿಕೆ ಸಂಯಮದಿಂದ ವರ್ತಿಸುತ್ತಿರುವುದು ಮೆಚ್ಚಿಗೆ ತಂದಿತು. ಇಲ್ಲಿ ನಡೆಯುತ್ತಿರುವ ವಿಶ್ವಕನ್ನಡ ಸಮ್ಮೇಳನ ಒಂದು ರೀತಿಯಲ್ಲಿ ಹೊಟ್ಟೆ ತುಂಬಿದವರ ಜಾತ್ರೆ. ಹೆಂಗಸರಿಗೆ ತಮ್ಮ ಅಲಂಕಾರ ಪ್ರದರ್ಶಿಸಲು ಒಂದು ಪಾರ್ಟಿ. ಎಂಟು ಕೋಟಿ ವೆಚ್ಚದಲ್ಲಿ ನಡೆಸುತ್ತಿರುವ ಈ ಸಮ್ಮೇಳನದಿಂದ ಕನ್ನಡ ಉದ್ಧಾರವಾಗುತ್ತದೆಂಬುದು ದೊಡ್ಡ ಭ್ರಮೆಯಲ್ಲದೆ ಬೇರೇನಿಲ್ಲ.

ಈ ಸಮ್ಮೇಳನವನ್ನು ವರದಿ ಮಾಡಲು ಸಂತೆ ನೆರೆಯುವ ಮುನ್ನ ನೆರೆದಿರುವ ಗಂಟುಕಳ್ಳರಂತೆ, ಕರ್ನಾಟಕದಿಂದ ಇಲ್ಲಿ ಬಂದು ಠಿಕಾಣಿ ಹೂಡಿರುವ ಸಂಪಾದಕರುಗಳನ್ನು ನೋಡಿ ನನಗೆ ನಗು ಬರುತ್ತಿದೆ. ಇವರು ಇದೇ ಉತ್ಸಾಹವನ್ನು ಕರ್ನಾಟಕದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಕ್ಕೂ ತೋರುವರೇ? ಅವರ ಜೊತೆಗೆ ಇಲ್ಲಿಯ ಕೆಲವು ಪ್ರಜ್ಞಾವಂತ ಬರಹಗಾರರೂ ಕೈಜೋಡಿಸಿ, ಅಕ್ಕ ಪದಾಧಿಕಾರಿಗಳನ್ನು ಹಾಡಿ ಹೊಗಳುತ್ತಿರುವುದು ಕಂಡು ವಿಷಾದವಾಗುತ್ತಿದೆ. “ಅಕ್ಕ”ದ ರೊಕ್ಕಸ್ಥರ ಅಧೀನರಾಗಿರುವ ಇವರು ಮಾಡುವ ವರದಿ ಎಷ್ಟರ ಮಟ್ಟಿಗೆ ವಸ್ತುನಿಷ್ಟವಾಗಿದ್ದೀತೋ ಆ ಕನ್ನಡಮ್ಮನೇ ಬಲ್ಲಳು!

ಯಾರ ಮೇಲೂ ದ್ವೇಷಾಸೂಯೆಗಳಿಲ್ಲದೆ, ನನ್ನ ಕಳಕಳಿಯನ್ನು ವ್ಯಕ್ತಪಡಿಸಲು ಮಾತ್ರ ಈ ಪತ್ರ ಬರೆದಿದ್ದೇನೆ.

ಸದಾಶಯ ಹೊತ್ತ ಕನ್ನಡಿಗ,

-ವಿನಯ್ ಅರಸೀಕೆರೆ, ಅಮೆರಿಕ”

Add a Comment

required, use real name
required, will not be published
optional, your blog address