ಗಲ್ಲಿ ಗೂಂಡಾಗಳೆಲ್ಲ ಬೆಂಗಳೂರಿನ ಮೇಯರ್‌ಗಳು…

This post was written by admin on January 30, 2008
Posted Under: Uncategorized

(ವಿಕ್ರಾಂತ ಕರ್ನಾಟಕ – ಫೆಬ್ರವರಿ 08, 2008 ರ ಸಂಚಿಕೆಯಲ್ಲಿನ ಬರಹ)

2002 ನೆ ಇಸವಿ; ಭಾರತದ ನಂಬರ್ 1 ಮುಖ್ಯಮಂತ್ರಿ ಎಂದು ಬಿರುದಾಂಕಿತರಾಗಿದ್ದ ಎಸ್.ಎಂ. ಕೃಷ್ಣರ ಕಾಲ. ಈಗಿನಂತೆಯೆ ಆಗಲೂ ಬೆಂಗಳೂರಿನ ಸುತ್ತಮುತ್ತ ಐಟಿ ಇಂಡಸ್ಟ್ರಿ ತೀವ್ರವಾಗಿ ಬೆಳೆಯುತ್ತಿತ್ತು. ತನ್ನ ಓರಗೆಯವರಿಗಿಂತ ವೇಗವಾಗಿ ಬೆಳೆಯುತ್ತಿದ್ದ ತನ್ನ ಉದ್ದಿಮೆಗೆ ಬೆಂಗಳೂರಿನಲ್ಲಿ 100 ಎಕರೆ ಜಾಗ ಬೇಕಿದೆ ಎಂದು ಇನ್ಫೋಸಿಸ್ ಸರ್ಕಾರವನ್ನು ಕೇಳಿಕೊಂಡಿತು. ತಕ್ಷಣ ಕರ್ನಾಟಕ ಸರ್ಕಾರದ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (KIADB) ವಿಧಾನಸೌಧದಿಂದ ಕೇವಲ ಹತ್ತು-ಹನ್ನೆರಡು ಕಿ.ಮಿ. ದೂರದಲ್ಲಿರುವ ಸರ್ಜಾಪುರ ರಸ್ತೆಯ ಬೆಳ್ಳಂದೂರು ಗ್ರಾಮದ ರೈತರ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವ ಆದೇಶ ಹೊರಡಿಸಿತು.

ಇವತ್ತು ಆ ಜಮೀನುಗಳ ಬೆಲೆ ಕನಿಷ್ಠವೆಂದರೂ ಎಕರೆಗೆ ನಾಲ್ಕೈದು ಕೋಟಿ ರೂಪಾಯಿ ಆಗುತ್ತದೆ. 2002 ರಲ್ಲಿ ಏನಿಲ್ಲವೆಂದರೂ 40 ಲಕ್ಷದಿಂದ ಒಂದೂವರೆ ಕೋಟಿ ಇತ್ತು. ಇನ್ನೂ ಎಷ್ಟೋ ಜನ ರೈತರು ತಮ್ಮ ಜಮೀನುಗಳಲ್ಲಿ ವ್ಯವಸಾಯ ಮಾಡುತ್ತಿದ್ದರು. ಅವರಿಗೆಲ್ಲ KIADB ಎಕರೆಗೆ ಕೇವಲ 9 ಲಕ್ಷ ರೂಪಾಯಿ ಮಾತ್ರ ಪರಿಹಾರ ಹಣ ನಿಗದಿಪಡಿಸಿತು. ಇದು ಯಾವ ದಿಕ್ಕಿನಿಂದ ನೋಡಿದರೂ ಅನ್ಯಾಯ. ಆ ಸಮಯದಲ್ಲಿ ಬೆಳ್ಳಂದೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿದ್ದವರು ಜಗನ್ನಾಥ್. ಇವರು ಅಭಿವೃದ್ಧಿಯ ವಿರೋಧಿಯಾಗಲಿ, ಐಟಿ ಇಂಡಸ್ಟ್ರಿಯ ವಿರುದ್ಧವಾಗಲಿ ಇರಲಿಲ್ಲ. ಇದಕ್ಕೆ ಕೊಡಬಹುದಾದ ಒಂದೆ ಒಂದು ಉದಾಹರಣೆ ಎಂದರೆ, ಇಡೀ ಕರ್ನಾಟಕದಲ್ಲಿ ಕಂಪ್ಯೂಟರೀಕರಣಗೊಂಡ ಪ್ರಪ್ರಥಮ ಗ್ರಾಮಪಂಚಾಯಿತಿ ಎಂದರೆ ಬೆಳ್ಳಂದೂರು ಗ್ರಾಮಪಂಚಾಯಿತಿ. ಆ ವಿಷಯದಲ್ಲಿ ಕರ್ನಾಟಕಕ್ಕೆ ಏನು ಇಡೀ ಭಾರತಕ್ಕೆ ಒಂದು ಮಾದರಿ ಗ್ರಾಮ ಪಂಚಾಯಿತಿ ಅದು. ದೇಶವಿದೇಶಗಳ ಅನೇಕರು ಈ ಗ್ರಾಮ ಪಂಚಾಯಿತಿಯನ್ನು ಕೇಸ್‌ಸ್ಟಡಿಯಾಗಿ ಸ್ವೀಕರಿಸಿ ಗ್ರಾಮೀಣ ಆಡಳಿತದಲ್ಲಿ ಮಾಹಿತಿ ತಂತ್ರಜ್ಞಾನದ ಸರಿಯಾದ ಬಳಕೆಯ ಬಗ್ಗೆ ಅಭ್ಯಾಸ ಮಾಡಿದ್ದಾರೆ. ಇದಕ್ಕೆಲ್ಲ ಮೂಲಕಾರಣ ಆಗಿನ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿದ್ದ ಕೆ. ಜಗನ್ನಾಥ್.

KIADB ಯವರು ಇಂತಹ ಗ್ರಾಮಪಂಚಾಯಿತಿಯ ರೈತರ ಜಮೀನನ್ನು ಅಗ್ಗದ ಬೆಲೆಗೆ ವಶಪಡಿಸಿಕೊಳ್ಳಲು ತೀರ್ಮಾನಿಸಿಬಿಟ್ಟರು. ಆ ಸಮಯದಲ್ಲಿ, ತನ್ನ ಜನರ ಮೇಲೆ ಆಗುತ್ತಿರುವ ಈ ಹಗಲುದರೋಡೆಯನ್ನು ತಡೆಯುವ ತೀರ್ಮಾನವನ್ನು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿದ್ದ ಜಗನ್ನಾಥ್ ತೆಗೆದುಕೊಂಡರು. “ಈ ಅನ್ಯಾಯದ ವಿರುದ್ಧ ನಾವು ಕೊನೆಯವರೆಗೂ ಹೋರಾಟ ನಡೆಸುತ್ತೇವೆ. ಐಟಿ ಉದ್ದಿಮೆಗಳು ಕರ್ನಾಟಕದ ಹಳ್ಳಿಗಳನ್ನು ನಾಶಪಡಿಸಲು ನಾವು ಬಿಡುವುದಿಲ್ಲ. ಒಂದು ಹಳ್ಳಿಯನ್ನು ಕಳೆದುಕೊಂಡರೆ ಅದು ರಾಜ್ಯದ ಆತ್ಮವನ್ನೆ ಕಳೆದುಕೊಂಡಂತೆ,” ಎಂದ ಜಗನ್ನಾಥ್ ಕದನವನ್ನು ನೇರವಾಗಿ ಇನ್ಫೋಸಿಸ್‌ನ ಅಂಗಳಕ್ಕೆ ತೆಗೆದುಕೊಂಡು ಹೋಗಿಬಿಟ್ಟರು. ಈ ಅನ್ಯಾಯದಲ್ಲಿ ಇನ್ಫೋಸಿಸ್‌ನವರದು ನೇರಪಾತ್ರ ಇಲ್ಲದಿದ್ದರೂ ಮಾರುಕಟ್ಟೆ ಬೆಲೆಗಿಂತ ಕಮ್ಮಿ ಬೆಲೆಗೆ ಕೊಂಡುಕೊಳ್ಳುವ ಅನ್ಯಾಯದ ಲಾಭ ಇನ್ಫೋಸಿಸ್‌ನವರದಾಗಿತ್ತು. “ಕೊಳ್ಳುವ ಹಾಗಿದ್ದರೆ ಇನ್ಫೋಸಿಸ್‌ನವರು ಮಾರುಕಟ್ಟೆ ಬೆಲೆಗೆ ನೇರವಾಗಿ ನಮ್ಮಿಂದಲೆ ಕೊಂಡುಕೊಳ್ಳಲಿ, ಈ ಸರ್ಕಾರಿ ಮಧ್ಯವರ್ತಿಗಳ ಅನ್ಯಾಯದ ಕಾನೂನಿನ ಶೋಷಣೆ ಯಾಕೆ?” ಎನ್ನುವ ವಾದ ಹಳ್ಳಿಗರದು. ಹಾಗಾಗಿ, ಇನ್ಫೋಸಿಸ್‌ನ ನಾರಾಯಣಮೂರ್ತಿಯವರು ಒಮ್ಮೆ ದೆಹಲಿಯ ಆರ್ಥಿಕ ಸಮ್ಮೇಳನವೊಂದರಲ್ಲಿ ಮಾತನಾಡುತ್ತಿರುವಾಗ ಅದೇ ಸಭೆಯಲ್ಲಿ ಇನ್ಫೋಸಿಸ್‌ನ ಅನ್ಯಾಯದ ನೆಲದೋಚುವಿಕೆ ವಿರುದ್ಧ ಬೆಳ್ಳಂದೂರು ಗ್ರಾಮದ ಜಗನ್ನಾಥ್ ಘೋಷಣೆ ಕೂಗಿದರು. ಜಗನ್ನಾಥರ ಈ ಪರಿಯ ಹಳ್ಳಿ-ದಿಲ್ಲಿಯ ಸಾತ್ವಿಕ ಹೋರಾಟಕ್ಕೆ ಮಣಿದ ಇನ್ಫೋಸಿಸ್ ಕೊನೆಗೂ ಮಾರುಕಟ್ಟೆ ಬೆಲೆಗಿಂತ ಕಮ್ಮಿಬೆಲೆಗೆ KIADB ಮುಖಾಂತರ ಜಮೀನು ಕೊಳ್ಳುವ ತನ್ನ ಯೋಜನೆಯನ್ನು ಸ್ಥಗಿತಗೊಳಿಸಿತು.

ಜಗನ್ನಾಥರ ಈ ಹೋರಾಟವನ್ನು ಮತ್ತು ಅವರ ಅವಧಿಯಲ್ಲಿ ಬೆಳ್ಳಂದೂರು ಗ್ರಾಮಪಂಚಾಯಿತಿಯ ಯಶಸ್ಸನ್ನು ನಾನು ಇಲ್ಲಿಂದಲೆ ಗಮನಿಸಿದ್ದೆ. ಆಗಾಗ ಬೆಳ್ಳಂದೂರು ಗ್ರಾಮಪಂಚಾಯಿತಿಗೆ ಅತ್ಯುತ್ತಮ ಗ್ರಾಮಪಂಚಾಯಿತಿ ಪ್ರಶಸ್ತಿಗಳು ಬರುವುದನ್ನು ಓದುತ್ತಿದ್ದೆ. ಹಾಗಾಗಿಯೆ ಜಗನ್ನಾಥರನ್ನು ಮತ್ತು ಬೆಳ್ಳಂದೂರು ಪಂಚಾಯಿತಿಯನ್ನು ಒಮ್ಮೆ ನೋಡಬೇಕು ಎಂದುಕೊಂಡು 2006 ರಲ್ಲಿ ಅವರನ್ನು ಭೇಟಿಯಾಗಲು ಹೋಗಿದ್ದೆ. ಆಗ ನಾನು ಅವರಿಗೆ “ಈಗಿನ ಗ್ರಾಮಪಂಚಾಯಿತಿ ವ್ಯವಸ್ಥೆಯ ದೊಡ್ಡ ದೋಷ ಏನಣ್ಣ?” ಎಂದು ಕೇಳಿದ್ದೆ. ಅದಕ್ಕವರು, “ಗ್ರಾಮಪಂಚಾಯಿತಿಗಳಲ್ಲಿ ರೊಟೇಷನಲ್ ಮೀಸಲಾತಿ ಇದೆ. ಅಂದರೆ ಒಂದು ವಾರ್ಡ್‌ನಲ್ಲಿ ಐದು ವರ್ಷಕ್ಕೊಮ್ಮೆ ಜಾತಿ ಅಥವ ಲಿಂಗ ಮೀಸಲಾತಿ ಬದಲಾಗುತ್ತದೆ. ಈ ವ್ಯವಸ್ಥೆಯಲ್ಲಿ ಹಾಲಿ ಸದಸ್ಯರು ಮುಂದಿನ ಚುನಾವಣೆಗೆ ನಿಲ್ಲಲು ಆಗುವುದೇ ಇಲ್ಲ. ಹಾಗಾಗಿಯೆ ಪಂಚಾಯಿತಿ ಸದಸ್ಯನಿಗೆ ತನ್ನ ಜವಾಬ್ದಾರಿ ನಿರ್ವಹಿಸಬೇಕಾದ ಅವಶ್ಯಕತೆಯಿಲ್ಲ. ಹೇಗಿದ್ದರೂ ತಾನು ಮುಂದಿನ ಚುನಾವಣೆಗೆ ನಿಲ್ಲಲಾಗುವುದಿಲ್ಲ, ಹಾಗಾಗಿ ಈ ಒಂದೆ ಅವಕಾಶದಲ್ಲಿ ಎಷ್ಟು ಭ್ರಷ್ಟಾಚಾರ ಮಾಡಬಹುದೊ ಅಷ್ಟೆಲ್ಲ ಮಾಡಿಬಿಡೋಣ ಎಂದು ಪ್ರತಿನಿಧಿಗಳು ಅಂದುಕೊಳ್ಳುವಂತೆ ಮಾಡಿಬಿಟ್ಟಿದೆ ಈ ವ್ಯವಸ್ಥೆ. ಪ್ರತಿ ಚುನಾವಣೆಗೂ ಬದಲಾಗುವ ಈ ವಾರ್ಡ್ ಮೀಸಲಾತಿ ಹೋಗಬೇಕು. ಬದಲಿಗೆ ಒಂದೆರಡು ಅವಧಿಗಾದರೂ ಈ ಜಾತಿ-ಲಿಂಗ ಮೀಸಲು ವ್ಯವಸ್ಥೆ ಬದಲಾಗಬಾರದು, ಒಳ್ಳೆಯವರು ತಮ್ಮ ಒಳ್ಳೆಯ ಕೆಲಸಗಳಿಗೆ ಪ್ರತಿಫಲ ಇದೆ ಎನ್ನುವಂತಹ ಆಶಾವಾದ ಇರಬೇಕು,” ಎಂದಿದ್ದರು.

ಅವರು ಹೇಳಿದ ಮಾತಿನ ಹಿನ್ನೆಲೆಯಲ್ಲಿಯೆ ನಾನು ಸುಮಾರು 60 ಲಕ್ಷ ಜನಸಂಖ್ಯೆಯ ಬೆಂಗಳೂರಿನ ಕಾರ್ಪೊರೇಷನ್ ವ್ಯವಸ್ಥೆಯನ್ನೂ ಗಮನಿಸುತ್ತಿದ್ದೆ. ಇಲ್ಲೂ ಅಷ್ಟೆ. ಜಾತಿವಾರು, ಲಿಂಗವಾರು ಮೀಸಲಾತಿಗಳು ಚುನಾವಣೆಯಿಂದ ಚುನಾವಣೆಗೆ ಬದಲಾಗುತ್ತಿರುತ್ತವೆ. ಮೇಯರ್‌ಗಳೂ ವರ್ಷಕ್ಕೊಮ್ಮೆ ಬದಲಾಗುತ್ತಿರುತ್ತಾರೆ. ಇದೊಂದು ದೊಡ್ಡ ಜೋಕು. ಯಾರೂ ಒಂದು ವರ್ಷಕ್ಕಿಂತ ಹೆಚ್ಚಿನ ಕಾಲ ಮೇಯರ್ ಆಗಿರಲು ಸಾಧ್ಯವಿಲ್ಲ. ಒಮ್ಮೆ ಮೇಯರ್ ಆದ ಮೇಲೆ ಮತ್ತೆ ಮೇಯರ್ ಆಗಲು ಸಾಧ್ಯವೇ ಇಲ್ಲದ ಸ್ಥಿತಿ. ಈ ವ್ಯವಸ್ಥೆಯಲ್ಲಿ ಮೇಯರ್ ಆಗಲು ಇರುವ ಕನಿಷ್ಠ ಯೋಗ್ಯತೆ ಅಂದರೆ ನಗರಪಾಲಿಕೆ ಸದಸ್ಯನಾಗಿರುವುದು ಮತ್ತು ಮೇಯರ್‌ಗಿರಿ ತನ್ನ ಜಾತಿ-ಲಿಂಗಕ್ಕೆ ಮೀಸಲಾಗಿರುವುದು. ಈ ಪರಿಸ್ಥಿತಿಯಿಂದಾಗಿ ಕಳೆದ ಹತ್ತಾರು ವರ್ಷಗಳಲ್ಲಿ ಎಂತೆಂತಹವರೆಲ್ಲ ಬೆಂಗಳೂರಿನ ಮೇಯರ್ ಆಗಿದ್ದಾರೆ ಎನ್ನುವುದನ್ನು ನೀವು ಗಮನಿಸಿದ್ದರೆ ನಿಮಗೆ ಈ ವ್ಯವಸ್ಥೆಯ ಭೀಕರತೆಯ ಅರಿವಾಗುತ್ತದೆ. ಕರ್ನಾಟಕದ ಮಾಜಿ ಮಂತ್ರಿ-ಮುಖ್ಯಮಂತ್ರಿಗಳ ಮನೆಯ ಗುಲಾಮರು, ಛೇಲಾಗಳು, ಇಲ್ಲವೆ ಆ ಛೇಲಾಗಳ ಹೆಂಡಂದಿರು, ಗಲ್ಲಿಯ ರೌಡಿಗಳು, ಅಯೋಗ್ಯರೆಲ್ಲ ಬೆಂಗಳೂರಿನ ಮೇಯರ್‌ಗಳಾಗಿ ಹೋಗಿದ್ದಾರೆ.

ಬೆಂಗಳೂರು ಮಹಾನಗರ ಪಾಲಿಕೆ ಇವತ್ತು ಯಾವ ದೃಷ್ಟಿಯಿಂದಲೂ ನಗಣ್ಯವಲ್ಲ. ಈ ಮಹಾನಗರ ಪಾಲಿಕೆಯ 2007-08 ರ ವಾರ್ಷಿಕ ಅಂದಾಜು ವರಮಾನ 3302 ಕೋಟಿ ರೂಪಾಯಿಗಳು. ಇದು ಗೋವಾ ರಾಜ್ಯಸರ್ಕಾರದ ವಾರ್ಷಿಕ ವರಮಾನಕ್ಕಿಂತ ಹೆಚ್ಚಿಗೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. (ಇದೇ ಅವಧಿಯಲ್ಲಿ ಗೋವಾ ರಾಜ್ಯದ ಅಂದಾಜು ವರಮಾನ 2263 ಕೋಟಿ ರೂಪಾಯಿಗಳು ಮಾತ್ರ.) ಕರ್ನಾಟಕದ ಸುಮಾರು ಶೇ. 15 ರಷ್ಟು ಜನ ಇಂತಿಪ್ಪ ಬೆಂಗಳೂರಿನಲ್ಲಿ ವಾಸಿಸುತ್ತಾರೆ. ಆದರೆ, ಇಷ್ಟು ದೊಡ್ಡ ನಗರವನ್ನು ಜೀವಿಸಲು ಯೋಗ್ಯ ತಾಣವಾಗಿ ಮಾಡಬೇಕಾದ, ಜನಪರ ಆಡಳಿತ ನೀಡಬೇಕಾದ, ನಗರದ ಪ್ರಜಾಮುಖ್ಯಸ್ಥನಾಗಬೇಕಾದ ಮೇಯರ್‌ಗೆ ಯಾವುದೇ ಜಾತಿ-ಲಿಂಗ-ವೋಟಿನ ಯೋಗ್ಯತೆ ಬಿಟ್ಟರೆ ಮಿಕ್ಕ ಇನ್ಯಾವ ಕನಿಷ್ಠ ಯೋಗ್ಯತೆಯೂ ಬೇಕಾಗಿಲ್ಲ.

ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರಿನಂತಹ ನಗರಗಳ ಮೇಯರ್‌ಗಳನ್ನು ಕಾರ್ಪೊರೇಟರ್‌ಗಳು ಚುನಾಯಿಸುವ ಪಾರ್ಲಿಮೆಂಟರಿ ವ್ಯವಸ್ಥೆಯೆ ಅಯೋಗ್ಯವಾದದ್ದು. ಇಲ್ಲೆಲ್ಲ ಕಾರ್ಪೊರೇಟರ್‌ಗಳ ಚುನಾವಣೆ ಜೊತೆಜೊತೆಗೆ ನೇರವಾಗಿ ಮೇಯರ್ ಅನ್ನೂ ಆಯ್ಕೆ ಮಾಡುವ ವ್ಯವಸ್ಥೆ ಬರಬೇಕು. ಕನಿಷ್ಠ ಆಗಲಾದರೂ ಯಾವುದೊ ಒಂದು ಗಲ್ಲಿಯ ರೌಡಿಯೊ, ಯಾರದೊ ಮನೆಯ ಗುಲಾಮನೊ, ಇನ್ನೆಂತಹ ಅಯೋಗ್ಯನೊ ಕಾರ್ಪೊರೇಟರ್ ಆಗಿ ನಂತರ ಒಂದು ವರ್ಷಕ್ಕೆ ನಗರದ ಮೇಯರ್ರೂ ಆಗಿಬಿಡುವ ಆಕಸ್ಮಿಕಗಳ ಬದಲು ಇಡೀ ನಗರದ ಜನರ ಒಪ್ಪಿಗೆಯಿಂದ ಒಬ್ಬ ಮೇಯರ್ ಆಗುವಂತೆ ಆಗುತ್ತದೆ. ಹೀಗೆ ಮೇಯರ್ ಆದವನು ಅಯೋಗ್ಯನಾಗಿದ್ದರೂ, ಅಯೋಗ್ಯನನ್ನು ಆರಿಸಿದ ಜವಾಬ್ದಾರಿ ಇಡೀ ನಗರದ ಜನತೆಯದಾಗಿರುತ್ತದೆ. ಈಗಿನಂತೆ ಜನ ಆಗ ಅಯೋಗ್ಯನನ್ನು ಆರಿಸಿದ ಇನ್ನೊಂದು ವಾರ್ಡಿನ ಜನರನ್ನು ಬೈದುಕೊಂಡು ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಅವಕಾಶ ಇರುವುದಿಲ್ಲ.

ಲೇಖನದ ವಿಡಿಯೊ ಪ್ರಸ್ತುತಿ

ನಮ್ಮ ದೇಶದಲ್ಲಿ ಪ್ರಧಾನಿಗೆ ಅಥವ ಮುಖ್ಯಮಂತ್ರಿಗೆ ನೇರಚುನಾವಣೆ ನಡೆದರೆ ಹಾಗೆ ಆಯ್ಕೆಯಾದವರು ಸರ್ವಾಧಿಕಾರಿಗಳಾಗಿಬಿಡುವ, ಒಂದಷ್ಟು ಜನರನ್ನು (ಭಾಷೆ-ಜಾತಿ-ಕೋಮು-ರಾಜ್ಯಗಳ ಆಧಾರದ ಮೇಲೆ) ಶಾಶ್ವತವಾಗಿ ಕಡೆಗಣಿಸುವ ಇಲ್ಲವೆ ಕೆಟ್ಟದಾಗಿ ನಡೆಸಿಕೊಳ್ಳುವ ಸಾಧ್ಯತೆಗಳು ಜಾಸ್ತಿ. ಯಾಕೆಂದರೆ ನಮ್ಮಲ್ಲಿ ಈ ಜಾತಿ-ಭಾಷೆ-ಕೋಮು-ಪ್ರಾಂತಾವಾರು ಮುಂತಾದವು ಜಂಗಮವಲ್ಲ, ಸ್ಥಾವರಗಳು. ಆದರೆ ಬೆಂಗಳೂರಿನಂತಹ ನಗರಗಳ ವಿಚಾರ ಹಾಗೆ ಅಲ್ಲ. ಇವು ಯಾವಾಗಲೂ ಚಲನಶೀಲ. ಮತ್ತು ಈ ಸ್ಥಳೀಯಸಂಸ್ಥೆಗಳ ಮುಖ್ಯಸ್ಥರು ಸರ್ವಾಧಿಕಾರಿಗಳಾಗದಂತೆ ನೋಡಿಕೊಳ್ಳಲು ಅವರ ಮೇಲೆ ರಾಜ್ಯ-ರಾಷ್ಟ್ರ ಸರ್ಕಾರಗಳು ಇರುತ್ತವೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಪ್ರಸ್ತುತ ನಗರಸಭೆ ಮೇಯರ್-ಉಪಮೇಯರ್ ಚುನಾವಣೆಯೆ ಅಯೋಗ್ಯವಾದದ್ದು. People in these cities definitely deserve better.

ತಮ್ಮ ಮೂಲಭೂತ ಜವಾಬ್ದಾರಿಯನ್ನು ನಿರ್ವಹಿಸದ ಕರ್ನಾಟಕದ ಅಯೋಗ್ಯ ಶಾಸಕರು

ಇವತ್ತಿನ ಕರ್ನಾಟಕದಲ್ಲಿ ಶೇ. 34 ಜನ ನಗರವಾಸಿಗಳು ಎನ್ನುತ್ತವೆ ಅಂಕಿಅಂಶಗಳು. ಅಂದರೆ ಹತ್ತಿರಹತ್ತಿರ ಎರಡು ಕೋಟಿ ಕನ್ನಡಿಗರು ಇವತ್ತು ನಗರ-ಪಟ್ಟಣಗಳಲ್ಲಿ ವಾಸಿಸುತ್ತಿದ್ದಾರೆ. ಈ ನಗರ-ಪಟ್ಟಣಗಳ ಸ್ಥಳೀಯ ಸಂಸ್ಥೆಗಳಿಗೆ (ಬೆಂಗಳೂರು ಹೊರತು ಪಡಿಸಿ) ಕಳೆದ ಸೆಪ್ಟೆಂಬರ್‌ನಲ್ಲಿ ಚುನಾವಣೆ ನಡೆದದ್ದು, ಅದರಲ್ಲಿ ಬಿಜೆಪಿಯನ್ನು ಹಿಂದಿಕ್ಕಿ ಗ್ರಾಮೀಣ ಮತದಾರರ ಪಕ್ಷ ಎಂತಲೆ ಗುರುತಾದ ಜೆಡಿಎಸ್ ಎರಡನೆ ಸ್ಥಾನಕ್ಕೆ ಬಂದಿದ್ದು, ಆ ಫಲಿತಾಂಶಗಳು ಹಸ್ತಾಂತರ ಎಂಬ ಪ್ರಹಸನದ ಮೇಲೆ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಪರಿಣಾಮ ಬೀರಿದ್ದು ನಿಮಗೆ ಗೊತ್ತ್ತಿರಬಹುದು.

ಕಳೆದ ಶತಮಾನದ ಆದಿಯಲ್ಲಿ ಭಾರತದ ಫ್ಯೂಡಲ್ ಸಮಾಜಕ್ಕೆ ಜಾತಿ-ಲಿಂಗ ಭೇದವಿಲ್ಲದೆ ಎಲ್ಲರೂ ಪಾಲ್ಗೊಳ್ಳಬಹುದಾದ ಪ್ರಜಾಪ್ರಭುತ್ವದ ಕಲ್ಪನೆಯೆ ಇರಲಿಲ್ಲ. ಇತ್ತೀಚಿನ ದಶಕಗಳಲ್ಲಿ ಬಂದ ಗ್ರಾಮಪಂಚಾಯಿತಿಗಳು ಮತ್ತು ನಗರಸಭೆಗಳು ಪ್ರಜಾಆಡಳಿತದಲ್ಲಿ ಬೇರುಮಟ್ಟದ ಪ್ರಜಾಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸಿದವು. ಸ್ಥಳೀಯರನ್ನು ಸ್ಥಳೀಯವಾಗಿಯೆ ಸ್ವಾವಲಂಬಿಯಾಗಿಸುವ, ಅವರ ಕೃತ್ಯಗಳಿಗೆ ಅವರನ್ನೆ ಜವಾಬ್ದಾರರನ್ನಾಗಿಸುವ ಈ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯ ಪರಿಣಾಮ ಬಹಳ ದೂರಗಾಮಿಯಾದದ್ದು; ಧನಾತ್ಮಕವಾದದ್ದು.

ಆದರೆ ಈ ಸ್ಥಳೀಯ ಸಂಸ್ಥೆಗಳ ಮೇಲೆ ರಾಜ್ಯ ಸರ್ಕಾರದ ಅಧಿಕಾರರೂಢ ಪಕ್ಷಗಳು ಮಾಡುವ ಅತ್ಯಾಚಾರಗಳಂತೂ ಇಡೀ ವ್ಯವಸ್ಥೆಯ, ಆಶಯದ ಶೀಲಹರಣ ಅಂತಲೆ ಹೇಳಬೇಕು. ಕರ್ನಾಟಕವನ್ನೆ ತೆಗೆದುಕೊಂಡರೆ, ನಾಲ್ಕು ತಿಂಗಳಿನ ಹಿಂದೆಯೆ, ಅಂದರೆ ಅಕ್ಟೋಬರ್ 3, 2007 ರ ಸುಮಾರಿನಲ್ಲಿಯೆ ತಮ್ಮ ಜವಾಬ್ದಾರಿಗಳನ್ನು ಸ್ವೀಕರಿಸಬೇಕಿದ್ದ ನಗರಪ್ರದೇಶದ 4920 ಜನಪ್ರತಿನಿಧಿಗಳು ಇಲ್ಲಿಯವರೆಗೂ ಅದನ್ನು ಸ್ವೀಕರಿಸಲಾಗಿಲ್ಲ. ಅದಕ್ಕೆ ಮೂಲಕಾರಣವಾಗಿದ್ದದ್ದು ಈ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷರಿಗೆ ಮೀಸಲು ನಿಗದಿ ಪಡಿಸಲಾಗದಿದ್ದದ್ದು. ಇದಕ್ಕೆ ಅನೇಕ ಕಾರಣಗಳನ್ನು ಕೊಡಬಹುದಾದರೂ, ಶಾಸನಸಭೆಯಲ್ಲಿ ತಮ್ಮ ಮೂಲಭೂತ ಜವಾಬ್ದಾರಿಯನ್ನು ನಿರ್ವಹಿಸಲಾಗದ ಕರ್ನಾಟಕದ ಅಪ್ರಯೋಜಕ-ಅಯೋಗ್ಯ ಶಾಸಕರು ಮತ್ತು ಮಂತ್ರಿಗಳೆ ಮೂಲಕಾರಣ. ಅಸಮರ್ಥ ಅಧಿಕಾರಿಗಳಿಂದ ಮತ್ತು ಭ್ರಷ್ಟ ರಾಜಕಾರಣಿಗಳಿಂದ ಒಂದು ವ್ಯವಸ್ಥೆಯನ್ನು ದುರುಪಯೋಗ ಪಡಿಸಿಕೊಳ್ಳಲಾಗದಂತಹ ಕಾನೂನುಗಳನ್ನು ಈ ಶಾಸಕರು ತಂದಿದ್ದರೆ ಈಗಿನ ಸ್ಥಿತಿ ಉದ್ಭವಿಸುತ್ತಿರಲಿಲ್ಲ.

Reader Comments

ರವಿ,

ಮೇಯರ್ ಅನ್ನು ಈ ರೀತಿ ಚುನಾಯಿಸುವುದೂ, ಪಂಚಾಯ್ತಿಯಲ್ಲಿ ಒಮ್ಮೆ ನಿಂತವರು ಮತ್ತೆ ನಿಲ್ಲಲಾಗದ್ದೂ ನನಗೆ ತಿಳಿದಿರಲಿಲ್ಲ. ಹೀಗೆ ಇರುವಾಗ, ಆದಷ್ಟೂ ತಿಂದು ಓಡಿಹೋಗುವ ಮನೋಭಾವ ಅವರಲ್ಲಿ ಬೆಳೆದರೆ ಅಚ್ಚರಿಯೇನಿದೆ :(

#1 
Written By ಹಂಸಾನಂದಿ Hamsanandi on January 31st, 2008 @ 10:42 am

“ಅಸಮರ್ಥ ಅಧಿಕಾರಿಗಳಿಂದ ಮತ್ತು ಭ್ರಷ್ಟ ರಾಜಕಾರಣಿಗಳಿಂದ ಒಂದು ವ್ಯವಸ್ಥೆಯನ್ನು ದುರುಪಯೋಗ ಪಡಿಸಿಕೊಳ್ಳಲಾಗದಂತಹ ಕಾನೂನುಗಳನ್ನು ಈ ಶಾಸಕರು ತಂದಿದ್ದರೆ ಈಗಿನ ಸ್ಥಿತಿ ಉದ್ಭವಿಸುತ್ತಿರಲಿಲ್ಲ.”
ಆಲೋಚಿಸಬೇಕಾದ ವಿಚಾರ. ಈಗೀಗ ಜನರು ಭ್ರಷ್ಠಾಚಾರವನ್ನು ತೀರಾ ಸಹಜವೆನ್ನುವಂತೆ ಭಾವಿಸುತ್ತಿರುವ ಬೆಳವಣಿಗೆಯೂ ಆತಂಕಕಾರಿಯಾದದ್ದು.

#2 
Written By ಸುಪ್ರೀತ್.ಕೆ.ಎಸ್. on February 5th, 2008 @ 9:17 am

Add a Comment

required, use real name
required, will not be published
optional, your blog address