ಗಂಡನ ಗೋರಿಯಿಂದ ಗದ್ದುಗೆಯತ್ತ…

This post was written by admin on February 13, 2008
Posted Under: Uncategorized

(ವಿಕ್ರಾಂತ ಕರ್ನಾಟಕ – ಫೆಬ್ರವರಿ 22, 2008 ರ ಸಂಚಿಕೆಯಲ್ಲಿನ ಬರಹ)

ಅಮೆರಿಕದ ರಾಜಕೀಯ ಈಗ ಇತಿಹಾಸ ನಿರ್ಮಾಣದ ಹೊಸ್ತಿಲಲ್ಲಿ ಬಂದು ನಿಂತಿದೆ. 2009 ರಲ್ಲಿ ಮೊದಲ ಬಾರಿಗೆ ಒಬ್ಬ ಕರಿಯ ಅಥವ ಒಬ್ಬ ಸ್ತ್ರೀ ಅಮೆರಿಕದ ಅಧ್ಯಕ್ಷರಾಗುವ ಐತಿಹಾಸಿಕ ಘಟನೆ ಆಗಿಯೆ ಆಗುತ್ತದೆ ಎಂದು ಖಚಿತವಾಗಿ ಹೇಳಲು ಈ ವರ್ಷದ ನವೆಂಬರ್ ತನಕ ಕಾಯಬೇಕಾದರೂ, ಒಬ್ಬ ನಾಯಕಿ ಅಥವ ಕಪ್ಪುಜನಾಂಗದ ನಾಯಕನೊಬ್ಬ ಇದೇ ಮೊದಲ ಬಾರಿಗೆ ಅಮೆರಿಕದ ಅಧ್ಯಕ್ಷ ಚುನಾವಣೆಗೆ ಪ್ರಮುಖ ಪಕ್ಷದ ಅಧಿಕೃತ ಅಭ್ಯರ್ಥಿಯಾಗುವ ಐತಿಹಾಸಿಕ ಘಟನೆಯಂತೂ ಖಚಿತ. ಇನ್ನು ಆಗಬೇಕಿರುವುದು ಏನಿದ್ದರೂ ಇವರಿಬ್ಬರಲ್ಲಿ ಯಾರು ಎನ್ನುವುದಷ್ಟೆ. ಯಾರೇ ಆದರೂ ಆ ಮಟ್ಟಿಗೆ ಅದು ಐತಿಹಾಸಿಕವೆ.

ಆರು ತಿಂಗಳ ಹಿಂದೆ ಎಲ್ಲರೂ ಅಂದುಕೊಂಡಿದ್ದದ್ದು ಡೆಮಾಕ್ರಾಟ್ ಪಕ್ಷದಿಂದ ಹಿಲ್ಲರಿ ಕ್ಲಿಂಟನ್ ಅಧ್ಯಕ್ಷ ಪದವಿಗೆ ನಾಮಕಾರಣವಾಗುವುದು ಖಚಿತ ಎಂದು. ಈಗ ನೋಡಿ, ಬರಾಕ್ ಒಬಾಮ ಎನ್ನುವ ಅಪರೂಪದ ಫಿನಾಮಿನ ಎಲ್ಲರ ಊಹೆ-ಖಚಿತತೆಗಳನ್ನೂ ಸುಳ್ಳು ಮಾಡಿ, ನಾಮಕರಣದತ್ತ ಮುನ್ನುಗ್ಗುತ್ತಿದೆ. ಡೆಮಾಕ್ರಾಟರಿಗೇ ಆಶ್ಚರ್ಯವಾಗುವ ರೀತಿಯಲ್ಲಿ ಡೆಮಾಕ್ರಾಟ್ ಪಕ್ಷದ ಅಧಿಕೃತ ಸದಸ್ಯರು ಮತ್ತು ಪಕ್ಷೇತರ ಮತದಾರರು ಈ ಅಂಡರ್‌ಡಾಗ್ ಅನ್ನು ಬೆಂಬಲಿಸುತ್ತಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ ಹಿಲ್ಲರಿ ಮತ್ತು ಬರಾಕ್ ಇಬ್ಬರೂ ತಮ್ಮ ಪಕ್ಷದಿಂದ ಸಮಾನವಾಗಿ ಬೆಂಬಲಮತಗಳನ್ನು ಗಳಿಸುತ್ತಿದ್ದಾರೆ. ಅದರೆ, ದಿನದಿಂದ ದಿನಕ್ಕೆ ಬರಾಕ್ ಬಲ ಹೆಚ್ಚುತ್ತಿರುವುದು ಮಾತ್ರ ಎಲ್ಲರಿಗೂ ಕಾಣಿಸುತ್ತಿದೆ.

ಅಮೆರಿಕದಲ್ಲಿ ಚುನಾವಣೆಗೆ ನಿಲ್ಲುವವರು ತಾವು ಖರ್ಚು ಮಾಡುವ ಹಣದ ಲೆಕ್ಕಾಚಾರವನ್ನು ಬಹಳ ಕಟ್ಟುನಿಟ್ಟಾಗಿ ನೀಡಬೇಕು. ಹಾಗೆಯೆ ಆ ಹಣದ ಮೂಲವನ್ನೂ ಒಪ್ಪಿಸಬೇಕು. ಇಲ್ಲಿ ಯಾವುದೆ ಸುಳ್ಳುಗಳು ನಡೆಯುವುದಿಲ್ಲ. ಇಲ್ಲಿಯ ಕೇಂದ್ರ ಚುನಾವಣಾ ಆಯೋಗ ಅದನ್ನೆಲ್ಲ ನೋಡಿಕೊಳ್ಳುತ್ತದೆ. ಭಾರತದಲ್ಲಿ ಹಣದ ಮತ್ತು ತೆರಿಗೆಯ ವಿಚಾರದಲ್ಲಿ ಅಷ್ಟೇನೂ ಇಲ್ಲದ ಕಟ್ಟುಪಾಡುಗಳ ಮತ್ತು ಪ್ರಾಮಾಣಿಕತೆಯ ಹಿನ್ನೆಲೆಯಲ್ಲಿ ಈ ಮಾತನ್ನು ಭಾರತೀಯ ಓದುಗರಿಗೆ ಅರ್ಥಮಾಡಿಸುವುದು ಬಹಳ ಕಷ್ಟವೆ. ಪ್ರತಿಯೊಂದು ಪೈಸೆಯ ಮೂಲವನ್ನೂ, ವಿಶೇಷವಾಗಿ ಚುನಾವಣೆಗೆ ನಿಂತವರದನ್ನು, ಸತ್ಯಸ್ಯಸತ್ಯವಾಗಿ ಇಲ್ಲಿ ಕಂಡುಕೊಳ್ಳಬಹುದು. ಯಾರು ಯಾರಿಗೆ ಕೊಟ್ಟಿದ್ದಾರೆ ಎನ್ನುವುದನ್ನು ಯಾರು ಬೇಕಾದರೂ ತಿಳಿದುಕೊಳ್ಳಬಹುದು. ನಾನು ಈಗ ತಾನೆ ಮಾಡಿದ ಒಂದು ಸಣ್ಣ ರಿಸರ್ಚ್ ಪ್ರಕಾರ ಪಟೇಲ್-ಸಿಂಗ್-ರೆಡ್ಡಿ ಎಂಬ ಕೇವಲ ಮೂರು ಭಾರತೀಯ ಮೂಲದ ಹೆಸರುಗಳುಳ್ಳ ಜನ ಇಲ್ಲಿಯವರೆಗೆ ಒಂದು ಮಿಲಿಯನ್ ಡಾಲರ್‌ಗಿಂತ (ಸುಮಾರು 4 ಕೋಟಿ ರೂಪಾಯಿಗಳನ್ನು) ಹೆಚ್ಚಿನ ಹಣವನ್ನು ಈ ವರ್ಷ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ದೇಣಿಗೆ ನೀಡಿದ್ದಾರೆ. ಈ ಎಲ್ಲಾ ವಿವರಗಳೂ ಇಂಟರ್ನೆಟ್‌ನಲ್ಲಿ ಸಾರ್ವಜನಿಕರಿಗೆ ಲಭ್ಯವಿವೆ. (www.opensecrets.org)

ಇಲ್ಲಿ ಚುನಾವಣೆಗೆ ನಿಲ್ಲುವವರು ತಮ್ಮ ಸ್ವಂತ ಹಣವನ್ನು ಖರ್ಚು ಮಾಡುವುದರ ಜೊತೆಗೆ ತಮ್ಮ ಬೆಂಬಲಿಗರಿಂದ ಮತ್ತು ಮತದಾರರಿಂದ ದೇಣಿಗೆ ಸಂಗ್ರಹಿಸಬಹುದು. ಆದರೆ ಒಬ್ಬರಿಂದ ಗರಿಷ್ಠ 2300 ಡಾಲರ್ ಮಾತ್ರ ತೆಗೆದುಕೊಳ್ಳಬಹುದು. ಈಗಾಗಲೆ ಬರಾಕ್ ಮತ್ತು ಹಿಲ್ಲರಿ ಇಬ್ಬರೂ ಕೇವಲ ಈ ಪ್ರಾಥಮಿಕ ಚುನಾವಣೆಗೆಂದೆ ತಲಾ ನೂರು ಮಿಲಿಯನ್ ಡಾಲರ್‌ಗಿಂತ ಹೆಚ್ಚಿಗೆ ದೇಣಿಗೆ ಸಂಗ್ರಹಿಸಿದ್ದಾರೆ. ಹಿಲ್ಲರಿ ಕ್ಲಿಂಟನ್ ಬರಾಕ್ ಒಬಾಮಗಿಂತ ಸ್ವಲ್ಪ ಹೆಚ್ಚಿಗೇ ಸಂಗ್ರಹಿಸಿದ್ದರೂ ಇಲ್ಲಿಯವರೆಗೂ ಅತಿ ಹೆಚ್ಚು ಜನ ಬರಾಕ್‌ಗೆ ದೇಣಿಗೆ ನೀಡಿದ್ದಾರೆ. ಹಿಲ್ಲರಿಗೆ ಕಮ್ಮಿ ಜನ ಗರಿಷ್ಠ ಮೊತ್ತ ನೀಡಿದ್ದರೆ ಬರಾಕ್‌ಗೆ ಕಮ್ಮಿ ಮೊತ್ತದ್ದದಾದರೂ ಹೆಚ್ಚು ಜನ ಕೊಟ್ಟಿದ್ದಾರೆ. ಈ ಬೇರುಮಟ್ಟದ ಪ್ರಚಾರ ಮತ್ತು ಜನಸಾಮಾನ್ಯರ ಬೆಂಬಲವೆ ಬರಾಕ್ ಒಬಾಮನನ್ನು ಒಂದು ಅಪರೂಪದ ರಾಜಕೀಯ ಘಟನೆಯಾಗಿ ಮಾಡಿದೆ. ಆದರೆ, ಇದು ಎಲ್ಲಿಯವರೆಗೆ ಹೋಗುತ್ತದೆ ಎನ್ನುವುದನ್ನು ಅಮೆರಿಕದ ಯಾವೊಬ್ಬ ರಾಜಕೀಯ ಪಂಡಿತನೂ ಖಡಾಖಂಡಿತವಾಗಿ ಹೇಳಲಾಗದೆ ಹೋಗುತ್ತಿದ್ದಾನೆ.

ಅಮೆರಿಕದಲ್ಲಿ ನಡೆಯುತ್ತಿರುವ ಈ ಚುನಾವಣೆಯಿಂದ ಭಾರತೀಯರು ಗಮನಿಸಬೇಕಾದದ್ದು ಮತ್ತು ಕಲಿಯಬೇಕಾದದ್ದು ಒಂದಿದೆ. ಅದು ಚುನಾವಣೆಗೆ ನಿಂತಾಗ ಅಭ್ಯರ್ಥಿಗಳು ಮತ್ತು ಆತನ/ಅವಳ ಮನೆಯವರು ನಡೆದುಕೊಳ್ಳಬೇಕಾದ ರೀತಿ. ಎಲ್ಲರಿಗೂ ಗೊತ್ತಿರುವ ಹಾಗೆ ಬಿಲ್ ಕ್ಲಿಂಟನ್ ಅಮೆರಿಕದ ಜನ ಇಷ್ಟಪಡುವ ಇತ್ತೀಚಿನ ಜನಪ್ರಿಯ ಅಧ್ಯಕ್ಷ. ಬಿಲ್ ಕ್ಲಿಂಟನ್‌ನ ಚಾರ್ಮ್ ಈಗಲೂ ಕೆಲಸ ಮಾಡುತ್ತದೆ. ಅಂತಹ ಬಿಲ್ ಕ್ಲಿಂಟನ್, ಅದು ಜನರಿಗೆ ಹೆದರಿಯಾದರೂ ಆಗಿರಲಿ ಅಥವ ತನ್ನ ಸೌಜನ್ಯದಿಂದಾದರೂ ಆಗಿರಲಿ, ಒಂದು ಮಿತಿಯಲ್ಲಿಯೆ ತನ್ನ ಹೆಂಡತಿಯನ್ನು ಬೆಂಬಲಿಸುತ್ತಿದ್ದಾನೆ ಎನ್ನಬೇಕು. ಬಿಲ್ ಕ್ಲಿಂಟನ್‌ನ ಸಾಧನೆ, ಬುದ್ಧಿವಂತಿಕೆ, ಮಹತ್ವಾಕಾಂಕ್ಷೆ, ಜನಪ್ರಿಯತೆಯಲ್ಲವನ್ನೂ ಬಲ್ಲ ಇಲ್ಲಿಯ ಪ್ರೌಢ ಪತ್ರಕರ್ತರು ಒಮ್ಮೊಮ್ಮೆ ಹಿಲ್ಲರಿ ಕ್ಲಿಂಟನ್‌ಳನ್ನು “ನೀನು ಬಿಲ್ ಕ್ಲಿಂಟನ್‌ನನ್ನು ನಿಯಂತ್ರಿಸಬಲ್ಲೆಯಾ?” ಎಂದು ನೇರವಾಗಿಯೇ ಕೇಳುತ್ತಿದ್ದಾರೆ. ಅದಕ್ಕೆ ಹಿಲ್ಲರಿ ಕ್ಲಿಂಟನ್ “ಇದು ನನ್ನ ಚುನಾವಣಾಪ್ರಚಾರ ಮತ್ತು ಇದು ನನ್ನ ಉಮೇದುವಾರಿಕೆ. ಈ ಚುನಾವಣಾ ಪ್ರಚಾರವನ್ನು ನಾನು ಈ ದೇಶಕ್ಕೆ ಯಾವ ತರಹದ ನಾಯಕತ್ವ ಕೊಡಬಲ್ಲೆ ಎನ್ನುವುದರ ಮೇಲೆ ಕೇಂದ್ರೀಕರಿಸಬೇಕು ಎನ್ನುವುದು ನನ್ನ ಉದ್ಧೇಶ,” ಎಂದಿದ್ದಾಳೆ. “ನೀವು ಬಿಲ್ ಕ್ಲಿಂಟನ್‌ನ ಅಭೂತಪೂರ್ವ ಸಾಧನೆ ನೋಡಿದ್ದೀರ, ನಾನು ಆತನ ಹೆಂಡತಿ, ಅದಕ್ಕೆ ನನಗೆ ಮತ ಕೊಡಿ, ನಮ್ಮ ವಂಶವನ್ನು ಆಶೀರ್ವದಿಸಿ,” ಎಂದು ಆಕೆ ಎಲ್ಲಿಯೂ ಒಮ್ಮೆಯೂ ಹೇಳಿಲ್ಲ. ಹೇಳುವುದೂ ಇಲ್ಲ. ಹೇಳಲು ಆಗುವುದೂ ಇಲ್ಲ. ಪ್ರಬುದ್ಧ ಜನರು ಗಣನೀಯವಾಗಿರುವ, ಪಕ್ವಗೊಂಡ ಪ್ರಜಾಪ್ರಭುತ್ವದ ರೀತಿ ಅದು. ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾಗಳಂತಹ ತೃತೀಯ ಜಗತ್ತಿನ ರಾಷ್ಟ್ರಗಳಲ್ಲಿ ಗಂಡನ ಗೋರಿಯ ಮೇಲೆ ನಿಂತು ಚುನಾವಣಾ ಪ್ರಚಾರ ಮಾಡುವ ಅಥವ ಅಪ್ಪ-ಅಮ್ಮನ ಹೆಣವನ್ನು ಮುಂದಿಟ್ಟುಕೊಂಡು ಓಟು ಕೇಳುವ ಪರಿಸ್ಥಿತಿಗೆ ಇದನ್ನು ನಾವು ಹೋಲಿಸಿಕೊಳ್ಳಬೇಕು.

ಗಂಡನ ಗೋರಿಯ ಮೇಲೆ ನಿಂತುಕೊಂಡು ಅಥವ ಅಪ್ಪ-ಆಮ್ಮನ ಹೆಣವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವುದಕ್ಕೂ ಹಿಲ್ಲರಿ ಇನ್ನೂ ಬದುಕಿರುವ ಗಂಡನ ಹೆಸರನ್ನು ಎತ್ತಿಕೊಂಡು ರಾಜಕೀಯ ಮಾಡದಿರುವುದಕ್ಕೂ ಏನು ಸಂಬಂಧ ಎಂದುಕೊಂಡಿರಾದರೆ ನಿಮ್ಮ ಪ್ರಶ್ನೆ ಸಹಜವಾದದ್ದೆ. ಕ್ಷಮಿಸಿ. ಮೊದಲ ಹಂತವನ್ನು ವಿವರಿಸದೆ ಎರಡನೆ ಹಂತಕ್ಕೆ ಹೋಗಿಬಿಟ್ಟೆ. ಬದುಕಿರುವ ಗಂಡನ ಅಥವ ಅಪ್ಪ-ಅಮ್ಮನ ಹೆಸರು ಹೇಳಿಕೊಂಡು ಓಟು ಕೇಳುವ ಸಂದರ್ಭ ಮೊದಲ ಹಂತ. ಈ ಹಂತದಲ್ಲಿ ನಮ್ಮ ರಾಜಕಾರಣ ಇನ್ನೂ ನೀಚವಾಗಿರುತ್ತದೆ. ಅಪ್ಪ-ಅಮ್ಮ-ಗಂಡ ಬದುಕಿರುವ ಸಂದರ್ಭದಲ್ಲಿ ಆ ಅಪ್ಪ-ಅಮ್ಮ-ಗಂಡ ಇನ್ನೊಂದು ಕ್ಷೇತ್ರದಿಂದ ಚುನಾವಣೆಗೆ ನಿಂತಿರುತ್ತಾರೆ ಇಲ್ಲವೆ ಈಗಾಗಲೆ ಯಾವುದಕ್ಕೊ ಸದಸ್ಯರಾಗಿ ಆಯ್ಕೆಯಾಗಿರುತ್ತಾರೆ. ಆಗ ಅಪ್ಪ-ಅಮ್ಮ-ಗಂಡ-ಹೆಂಡತಿ-ಮಕ್ಕಳಾದಿಯಾಗಿ ಎಲ್ಲರೂ ನಿಕೃಷ್ಟವಾಗಿ “ನಮ್ಮ ವಂಶಕ್ಕೆ ಮತ ಕೊಡಿ” ಎಂದು ಕೇಳುತ್ತಿರುತ್ತಾರೆ. ಇದರ ಜೊತೆಗೇ, ಸಾಯುವ ತನಕ ನಮ್ಮಲ್ಲಿ ರಾಜಕಾರಣಿಗಳು ನಿವೃತ್ತಿ ಆಗುವುದಿಲ್ಲ. ಇವರಿಗೆಲ್ಲ, “ನಾನು ಏನು ಎನ್ನುವುದನ್ನು ಮುಂದಿನ ಚುನಾವಣೆಯಲ್ಲಿ ತೋರಿಸುತ್ತೇನೆ,” ಎನ್ನುವ ಕೀಳರಿಮೆಯ ಅಹಂಕಾರ ಮುಖ್ಯವೆ ಹೊರತು, ದೇಶದ ಮುಂದಿನ ಪೀಳಿಗೆಗೆ ಮಾರ್ಗದರ್ಶನ ಮಾಡಬೇಕು ಎನ್ನುವ ಸದ್ಭಾವನೆ ಅಲ್ಲ. ಅದರ ಜೊತೆಗೆ ವಿದ್ಯಾವಂತ-ಅವಿದ್ಯಾವಂತರಾದಿಯಾಗಿ ಜನರೂ ಹಾಗೆಯೆ ಇದ್ದಾರೆ. ಯಾವುದೊ ಒಂದು ಭಕ್ತಿಗೆ ದಾಸರಾಗಿ ಹೋದ ಜೀನ್ಸ್‌ಗಳಿರುವ ಜನ “ಪ್ರಜಾಪ್ರಭುತ್ವದಲ್ಲಿ ಎಂತಹ ವಂಶಪಾರಂಪರ್ಯ?” ಎನ್ನುವುದನ್ನೆ ಕೇಳುವುದಿಲ್ಲ. ಅಲ್ಲೊಬ್ಬರು ಇಲ್ಲೊಬ್ಬರು ಕೇಳಿದರೂ ನಿರ್ಲಜ್ಜ ಜನಕ್ಕೆ ಅದರಿಂದ ನಾಚಿಕೆಯೂ ಆಗುವುದಿಲ್ಲ.


ಲೇಖನದ ವಿಡಿಯೊ ಪ್ರಸ್ತುತಿ

ನಾಲ್ಕು ತಿಂಗಳ ಹಿಂದೆ ವಿಸರ್ಜನೆಗೊಂಡ ನಮ್ಮ ಕರ್ನಾಟಕದ ವಿಧಾನಸಭಾ ಸದಸ್ಯರನ್ನೆ ತೆಗೆದುಕೊಂಡರೆ, ಅಪ್ಪನ ಹೆಸರು ಹೇಳಿಕೊಂಡು ಮತ್ತು ಗಂಡನ ಹೆಸರು ಹೇಳಿಕೊಂಡು ವಂಶಪಾರಂಪರ್ಯಕ್ಕೆ ಪ್ರಜಾಪ್ರಭುತ್ವದ ಮುದ್ರೆ ಹಾಕಿಸಿಕೊಂಡ ಜನರ ದೊಡ್ಡ ಪಟ್ಟಿಯೆ ಇದೆ. ಮಾಜಿ ಶಾಸಕಿಯರ ಪಟ್ಟಿಯಲ್ಲಿರುವ ಭಾಗಿರಥಿ ಮರುಳಸಿದ್ಧನಗೌಡ, ನಾಗಮಣಿ ನಾಗೇಗೌಡ, ವಿಜಯಲಕ್ಷ್ಮಮ್ಮ ಬಂಡಿಸಿದ್ಧೇಗೌಡ, ಪರಿಮಳ ನಾಗಪ್ಪ, ಸುನೀತ ವೀರಪ್ಪಗೌಡ, ಶಕುಂತಲ ಶೆಟ್ಟಿಗಳಲ್ಲಿ ಎಷ್ಟು ಹೆಂಗಸರು ತಮ್ಮ ಗಂಡನ ಹೆಸರಿಲ್ಲದೆ ಶಾಸಕಿಯರಾಗುತ್ತಿದ್ದರು? ಎಚ್.ಡಿ. ಕುಮಾರಸ್ವಾಮಿ, ಎಚ್.ಡಿ. ರೇವಣ್ಣ, ದಿನೇಶ್ ಗುಂಡೂರಾವ್, ಮಹಿಮಾ ಪಟೇಲ್, ಕುಮಾರ್ ಬಂಗಾರಪ್ಪ, ಕೃಷ್ಣ ಭೈರೇಗೌಡ, ಪ್ರಕಾಶ್ ಖಂಡ್ರೆ, ಸುಧಾಕರ್ ಚೌಡರೆಡ್ಡಿ, ತನ್ವೀರ್ ಸೇಠ್, ಯು.ಟಿ. ಖಾದರ್, ಇತ್ಯಾದಿಗಳಲ್ಲಿ ಎಷ್ಟು ಮಕ್ಕಳು ತಮ್ಮ ಅಪ್ಪ ಸಾಯದೆ ಇದ್ದಿದ್ದರೆ ಅಥವ ತಮ್ಮ ಅಪ್ಪ ಲೋಕಸಭೆಗೆ ನಿಲ್ಲದಿದ್ದರೆ ಶಾಸಕರಾಗುತ್ತಿದ್ದರು? ಇದನ್ನೆ ಭಾರತದ ರಾಜಕಾರಣಕ್ಕೂ ಅನ್ವಯಿಸಿದರೆ ಮತ್ತದೇ ಕಪ್ಪುಚುಕ್ಕೆಗಳು. ಅನುಕಂಪದ ಮೇಲೆ, ಹಣದ ಮೇಲೆ, ವಂಶದ ಹೆಸರಿನ ಮೇಲೆ ಚುನಾವಣೆಗೆ ನಿಲ್ಲುವವರನ್ನು ಅವರ ಯೋಗ್ಯತೆಯನ್ನು ಕಡೆಗಣಿಸಿ ಗೆಲ್ಲಿಸುವ ಜನ ಇಲ್ಲವಾಗುವ ತನಕ ನಮ್ಮಲ್ಲಿ ಪ್ರಜಾಪ್ರಭುತ್ವ ಪ್ರಬುದ್ಧವಾಗಿದೆ ಎನ್ನಲಾಗದು.

ಚುನಾವಣೆಯಲ್ಲಿ ಬರಾಕ್ ಒಬಾಮನ ಹೆಂಡತಿ ಮಿಷೆಲ್ ವಹಿಸುತ್ತಿರುವ ಪಾತ್ರದ ಹಿನ್ನೆಲೆಯಲ್ಲಿಯೂ ಒಂದು ಅವಲೋಕನ ಸಾಧ್ಯವಿದೆ. ಅದು ನಮ್ಮಲ್ಲಿ ಚುನಾವಣೆಗೆ ನಿಲ್ಲುವ ದೊಡ್ಡಮನುಷ್ಯರ ಹೆಂಡತಿಯರು ಮಾಡುವ ಕೆಲಸವನ್ನು ಕುರಿತು. ಓದಿನಿಂದ ಮಿಷೆಲ್ ಒಬಾಮ ಒಬ್ಬ ವಕೀಲೆ. ಸ್ವತಃ ಸ್ವಯಂಕೃಷಿ ಹೆಣ್ಣುಮಗಳು. ಅಧ್ಯಕ್ಷೀಯ ಚುನಾವಣೆಗೆ ನಿಂತಿರುವ ತನ್ನ ಗಂಡನ ಪರವಾಗಿ ಅನೇಕ ಕಡೆ ಕೆಲವೊಮ್ಮ ತಾನೊಬ್ಬಳೆ ಓಡಾಡಿ, ಗಂಭೀರವಾದ, ಮನಮುಟ್ಟುವಂತಹ ಭಾಷಣಗಳನ್ನು ಮಾಡುತ್ತಿದ್ದಾಳೆ. ಜನ ಯಾಕೆ ತನ್ನ ಗಂಡನನ್ನು ಬೆಂಬಲಿಸಬೇಕು ಎನ್ನುವುದಕ್ಕೆ ಕಾರಣಗಳನ್ನು ಕೊಡುತ್ತಿದ್ದಾಳೆ. ಅದೆ ನಮ್ಮಲ್ಲಿ ಹಾಲಿ/ಮಾಜಿ ಮುಖ್ಯಮಂತ್ರಿಗಳ ಹೆಂಡತಿಯರೂ ಚುನಾವಣಾ ಪ್ರಚಾರಕ್ಕೆ ಹೋಗುತ್ತಾರೆ, ಕೈಯಲ್ಲಿ ನೋಟು ಹಿಡಿದುಕೊಂಡು. ತನ್ನ ಗಂಡನಿಗೆ ನೀವು ಈ ಕಾರಣಕ್ಕಾಗಿ ಮತ ನೀಡಬೇಕು ಎಂದೇನೂ ಇವರು ಭಾಷಣ ಮಾಡುವುದಿಲ್ಲ. ಬದಲಿಗೆ ಇವರಿಗೆ ಆರತಿಯೆತ್ತುವ ಹೆಂಗಸರ ತಟ್ಟೆಗೆ ನೋಟು ಹಾಕುತ್ತಾರೆ. ಓಟು ಕೊಳ್ಳುತ್ತಾರೆ. ಐದಾರು ಕೋಟಿ ಜನರನ್ನು ಪ್ರತಿನಿಧಿಸುವ ಒಂದು ರಾಜ್ಯದ ಮುಖ್ಯಮಂತ್ರಿಯ ಹೆಂಡತಿಯರು ಮಾಡುವ ಘನಂದಾರಿ ಕೆಲಸ ಇದು. ನಾಚಿಕೆಗೇಡು ಎನ್ನುವ ಪದವೂ ಇಲ್ಲಿ ನಾಚುತ್ತದೆ.


ಡೆಮಾಕ್ರಾಟ್ ಪಕ್ಷದಿಂದ ಯಾರು ಅಭ್ಯರ್ಥಿ ಎನ್ನುವುದು ಇನ್ನೂ ತೀರ್ಮಾನವಾಗದೇ ಇದ್ದರೂ, ರಿಪಬ್ಲಿಕನ್ ಪಕ್ಷದಿಂದ ಜಾನ್ ಮೆಕೈನ್ ಎನ್ನುವುದು ಈಗ ಅನಧಿಕೃತವಾಗಿ ತೀರ್ಮಾನವಾಗಿ ಹೋಗಿದೆ ಎನ್ನಬಹುದು. ಜಾನ್ ಮೆಕೈನ್ ಒಬ್ಬ ಮಾಜಿ ಯುದ್ಧಖೈದಿ. ಬಿಳಿಯ ಕ್ರಿಶ್ಚಿಯನ್ ಸಂಪ್ರದಾಯವಾದಿಗಳಿಂದ ಮತ್ತು ಆರ್ಥಿಕ ವಿಚಾರಗಳಲ್ಲಿ ಸರ್ಕಾರದ ಪಾತ್ರ ಕಮ್ಮಿ ಇರಬೇಕು ಎನ್ನುವ ಕಡು-ಕ್ಯಾಪಿಟಲಿಸ್ಟ್‌ಗಳಿಂದ ತುಂಬಿರುವ ರಿಪಬ್ಲಿಕನ್ ಪಕ್ಷದಲ್ಲಿ ಜಾನ್ ಮೆಕೈನ್ ಒಬ್ಬ ಉದಾರವಾದಿ ನಾಯಕ. ಸದ್ಯದ ಪರಿಸ್ಥಿತಿಯಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಅಧ್ಯಕ್ಷನಾಗಿ ಚುನಾಯಿತನಾಗುವುದು ಸಂದೇಹವಾದರೂ, ಹಿಲ್ಲರಿಗೆ ಇಲ್ಲವೆ ಒಬಾಮಾಗೆ ಬೀಳುವ ನೆಗೆಟಿವ್ ಓಟುಗಳ ಮೇಲೆ ಆ ಸೋಲುಗೆಲುವು ನಿಂತಿದೆ. ಜೊತೆಗೆ ಗಂಭೀರವಾದ ಭಯೋತ್ಪಾದಕ ಕೃತ್ಯವೊ, ಆಕಸ್ಮಿಕ ಯುದ್ಧವೊ ಘಟಿಸಿಬಿಟ್ಟರೆ ರಿಪಬ್ಲಿಕನ್ನರತ್ತ ಜನಬೆಂಬಲ ತಿರುಗಿಬಿಡುತ್ತದೆ.

ಜಾನ್ ಮೆಕೈನ್ ಈಗ ತನ್ನ ಜೊತೆಗೆ ಉಪಾಧ್ಯಕ್ಷ ಸ್ಥಾನಕ್ಕೆ ಯಾರಾದರೂ ಒಬ್ಬನನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಇದ್ದುದುರಲ್ಲಿ ಉದಾರವಾದಿಯಾದ ಮೆಕೈನ್ ತನ್ನ ಪಕ್ಷದ ಸಂಪ್ರದಾಯವಾದಿಗಳನ್ನು ತೃಪ್ತಿ ಪಡಿಸಲು ಅಲ್ಟ್ರಾ ಕನ್ಸರ್ವೇಟಿವ್ ಒಬ್ಬನನ್ನು ಆರಿಸುವ ಸಾಧ್ಯತೆಗಳಿವೆ. ಇತ್ತೀಚಿನ ಊಹಾಪೋಹಗಳ ಪ್ರಕಾರ ಭಾರತೀಯ ಮೂಲದ ನವ-ಕ್ರೈಸ್ತ ಬಾಬ್ಬಿ ಜಿಂದಾಲ್ ಸೂಕ್ತ ಎಂದು ಮೆಕೈನ್‌ನನ್ನು ಇಷ್ಟಪಡದ ಅದರೆ ಬೇರೆ ವಿಧಿಯಿಲ್ಲದ ಕೆಲವು ರಿಪಬ್ಲಿಕನ್ನರು ಹೇಳುತ್ತಿದ್ದಾರೆ. ಬಾಬ್ಬಿ ಜಿಂದಾಲ್ ಒಂದಲ್ಲ ಒಂದು ದಿನ ಅಮೆರಿಕದ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ನಿಲ್ಲುವ ಅವಕಾಶಗಳಿವೆ ಎಂದು ನವೆಂಬರ್ 23, 2007 ರ ಅಂಕಣದಲ್ಲಿ ನಾನು ಪ್ರಸ್ತಾಪಿಸಿದ್ದೆ. ಆದರೆ ಈ ಚುನಾವಣೆಗೇ ಬಾಬ್ಬಿಯ ಹೆಸರನ್ನು ಯಾರಾದರೂ ತೇಲಿಬಿಡಬಹುದು ಎಂದು ನಾನು ಭಾವಿಸಿರಲಿಲ್ಲ. ಈ ಚುನಾವಣೆ ರಿಪಬ್ಲಿಕನ್ನರಿಗೆ ಅನಾನುಕೂಲವಾಗಿದ್ದರೂ, ಬರಾಕ್ ಒಬಾಮ ಏನಾದರೂ ಡೆಮಾಕ್ರಾಟ್ ಪಕ್ಷದ ಅಭ್ಯರ್ಥಿಯಾದರೆ ಬರಾಕ್‌ಗೆ ಚೆಕ್‌ಮೇಟ್ ಮಾಡಲು ರಿಪಬ್ಲಿಕನ್ನರಿಗೆ ಬಾಬ್ಬಿ ಸೂಕ್ತ ಉಪಾಧ್ಯಕ್ಷ ಅಭ್ಯರ್ಥಿ. ಯಾವುದು ಏನೇ ಆಗಲಿ, ಈ ಚುನಾವಣೆ ಅನೇಕ ಕಾರಣಗಳಿಗೆ ಅಮೆರಿಕಕ್ಕೆ ಮತ್ತು ವಿಶ್ವಕ್ಕೆ ಐತಿಹಾಸಿಕವಾಗುತ್ತದೆ ಎನ್ನುವುದನ್ನಂತೂ ಈಗಲೆ ಬರೆಯಬಹುದು.

Reader Comments

Sorry Ravi, I don’t agree with everything you have said. Elections are not so clean and transparent as you seem to imply in the US. The rules of the games may be different, but political games are played in US too just like India. Please read Hillary’s autobiography where she highlights how Bill’s political advisors indicated that Hillary should keep a low profile(read smiling, waving, kissing babies) in his Governor’s campaign. You see, Americans still can’t handle strong women in high posts. I have my own doubts about Hillary winning.

That aside, I don’t understand why you call it shameful that Indian CM-wives don’t give speeches. It may be for the simple fact that not everyone is comfortable addressing a crowd. Also, I definitely want to hear a candidate speak, NOT his wife or husband!

#1 
Written By Anonymous on February 19th, 2008 @ 5:53 pm

Add a Comment

required, use real name
required, will not be published
optional, your blog address