ಸ್ವತಂತ್ರ, ನಿರಂಕುಶಮತಿಗಳು…

This post was written by admin on February 27, 2008
Posted Under: Uncategorized

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಮಾರ್ಚ್ 7, 2008 ರ ಸಂಚಿಕೆಯಲ್ಲಿನ ಲೇಖನ)

ಇತಿಹಾಸದಲ್ಲಿ ದಾಖಲಾದ ಅತಿದೊಡ್ಡ ಅಮಾನುಷ ಕೃತ್ಯಗಳಲ್ಲಿ ಹಾಲೊಕಾಸ್ಟ್ (ನರಮೇಧ) ಒಂದು. ದೇಶದೇಶಗಳ ನಡುವೆ ಯುದ್ಧಗಳಾಗಿವೆ. ಕ್ರೈಸ್ತ ಮತ್ತು ಮುಸಲ್ಮಾನ ಮತೀಯರ ನಡುವೆ ಜೆರೊಸಲೆಮ್ ಅನ್ನು ವಶಪಡಿಸಿಕೊಳ್ಳುವುದಕ್ಕೋಸ್ಕರ ಎರಡು ಶತಮಾನಗಳ ಕಾಲ ನಿರಂತರ ಕ್ರುಸೇಡ್ ಕದನಗಳಾಗಿವೆ. ಲಕ್ಷಲಕ್ಷ ಜನ ನೆಪೊಲಿಯನ್ನನ ಕಾಲದಲ್ಲಿ ಯುದ್ಧದಿಂದ ಸತ್ತಿದ್ದಾರೆ. ಆದರೆ, ಒಂದು ಮತಕ್ಕೆ ಸೇರಿದ ಇಡೀ ಜನಾಂಗವನ್ನು ತೊಡೆದುಹಾಕಲು ಇಷ್ಟು ವ್ಯವಸ್ಥಿತವಾಗಿ, ಕ್ರೂರವಾಗಿ ಈ ಮಟ್ಟದಲ್ಲಿ ಯಾರೂ ತೊಡಗಿಕೊಂಡಿರಲಿಲ್ಲ. ಜರ್ಮನಿಯ ಹಿಟ್ಲರ್ ತನ್ನ ಸೈನ್ಯ ನುಗ್ಗಿದ ಯೂರೋಪಿನ ಪ್ರತಿ ದೇಶದಲ್ಲಿ ಯಹೂದಿಗಳನ್ನು ಕಾನ್ಸಂಟ್ರೇಷನ್ ಕ್ಯಾಂಪ್‌ಗಳಲ್ಲಿಟ್ಟು, ಹೆಣ್ಣುಗಂಡು, ಹಿರಿಕಿರಿಯರೆನ್ನದೆ ಎಲ್ಲರನ್ನೂ ಕೋಣೆಗಳಲ್ಲಿ ಬೆತ್ತಲೆ ಕೂಡಿಹಾಕಿ ವಿಷಾನಿಲ ಬಿಟ್ಟು ಕೊಂದ. ಅವನ ಸೇನಾಧಿಕಾರಿಗಳು ಇದನ್ನು ಬಹಳ ವ್ಯವಸ್ಥಿತವಾಗಿ ತಾವು ಹೋದಲ್ಲೆಲ್ಲ ಮಾಡಿದರು. ಕೇವಲ ನಾಲ್ಕೈದು ವರ್ಷಗಳಲ್ಲಿ ಜರ್ಮನಿ, ಆಸ್ಟ್ರಿಯ, ಪೋಲೆಂಡ್, ಲ್ಯಾಟ್ವಿಯ, ಲಿಥುವೇನಿಯ, ಜೆಕೊಸ್ಲೊವಾಕಿಯ, ಗ್ರೀಸ್, ಹಾಲೆಂಡ್, ಯುಗೊಸ್ಲಾವಿಯಮ್ ರೊಮೇನಿಯ, ಫ್ರಾನ್ಸ್, ಸೇರಿದಂತೆ ಯೂರೋಪಿನಾದ್ಯಂತ ಸುಮಾರು 50-60 ಲಕ್ಷ ಯಹೂದಿಗಳನ್ನು ಮಾರಣಹೋಮ ಮಾಡಿಬಿಟ್ಟರು.

1991 ರಲ್ಲಿ ರಾಡ್ನಿ ಕಿಂಗ್ ಎನ್ನುವ ಕರಿಯನೊಬ್ಬ ಅಮೆರಿಕದ ಎರಡನೆ ಅತಿದೊಡ್ಡ ನಗರವಾದ ಲಾಸ್ ಏಂಜಲಿಸ್‌ನಲ್ಲಿ ಮಿತಿಗಿಂತ ವೇಗವಾಗಿ ಕಾರನ್ನು ಓಡಿಸಿಕೊಂಡು ಹೋಗುತ್ತಿದ್ದಾಗ ಪೋಲಿಸರಿಗೆ ಸಿಕ್ಕಿಬೀಳುತ್ತಾನೆ. ಪೋಲಿಸರು ಅವನನ್ನು ಅರೆಸ್ಟ್ ಮಾಡಲು ಹೋದರೆ ಅದನ್ನವನು ದೈಹಿಕವಾಗಿ ಪ್ರತಿಭಟಿಸುತ್ತಾನೆ. ಪರಿಸ್ಥಿತಿ ಕೈಮೀರಿ ಹೋಗುತ್ತದೆ. ಒಂದೆರಡು ನಿಮಿಷಗಳಲ್ಲಿ ನಾಲ್ವರು ಬಿಳಿಯ ಪೋಲಿಸ್ ಆಫಿಸರ್‌ಗಳು ರಾಡ್ನಿಯನ್ನು ಹಿಡಿದುಕೊಂಡು ಕೈಯ್ಯಿಂದ, ಬೆತ್ತದಿಂದ ಬಡಿಯಲು ಆರಂಭಿಸಿಬಿಡುತ್ತಾರೆ. ನೆಲಕ್ಕೆ ಬಿದ್ದವನನ್ನು ಕಾಲಿನಿಂದ ಒದೆಯುತ್ತಾರೆ. ಇದೆಲ್ಲ ಆಗುವಾಗ ಇತರೆ ನಾಲ್ಕೈದು ಪೋಲಿಸ್ ಆಫಿಸರ್‌ಗಳು ಸುಮ್ಮನೆ ನೋಡುತ್ತ ನಿಂತಿರುತ್ತಾರೆ. ಬಿಳಿಯ ಪೋಲಿಸರು ಒಬ್ಬ ಕರಿಯನನ್ನು ಹೀಗೆ ಹಿಗ್ಗಾಮುಗ್ಗಾ ಚಚ್ಚುತ್ತಿರುವುದು ಆ ಮಧ್ಯರಾತ್ರಿಯಲ್ಲೂ ಎಷ್ಟೊಂದು ಗಲಾಟೆ ಸೃಷ್ಟಿಸಿತೆಂದರೆ ಅದು ಅಕ್ಕಪಕ್ಕದ ಅಪಾರ್ಟ್‌ಮೆಂಟಿನವರನ್ನೆಲ್ಲ ಎಬ್ಬಿಸಿಬಿಡುತ್ತದೆ. ಹಾಗೆ ಎದ್ದು ಹೊರಗೆ ನೋಡಿದ ಒಬ್ಬಾತ ತಕ್ಷಣ ಹೋಗಿ ತನ್ನ ವಿಡಿಯೊ ಕ್ಯಾಮೆರ ತಂದು ತನ್ನ ಅಪಾರ್ಟ್‌ಮೆಂಟಿನ ಕಿಟಕಿಯಿಂದ ಅದನ್ನು ರೆಕಾರ್ಡ್ ಮಾಡಿಕೊಳ್ಳುತ್ತಾನೆ. ನಂತರ ಆತ ಆ ವಿಡಿಯೊವನ್ನು ಸ್ಥಳೀಯ ಟಿವಿ ಸ್ಟೇಷನ್ ಒಂದಕ್ಕೆ ತಲುಪಿಸುತ್ತಾನೆ. ಅಮೆರಿಕದಾದ್ಯಂತ ಅದು ಕರಿಯರ ಮೇಲೆ ಬಿಳಿಯರ ಜನಾಂಗೀಯದ್ವೇಷ ಮತ್ತು ದೌರ್ಜನ್ಯ ಎಂದು ಭಾರೀ ಸುದ್ದಿಯಾಗುತ್ತದೆ.

ಇದರಿಂದಾಗಿ ಲಾಸ್ ಏಂಜಲಿಸ್‌ನ ಜಿಲ್ಲಾ ಕಾನೂನು ಇಲಾಖೆ ಆ ಬಿಳಿಯ ಪೋಲಿಸರ ಮೇಲೆ ಕೇಸು ಹಾಕುತ್ತದೆ. ಲಾಸ್ ಏಂಜಲಿಸ್‌ನ ಕಪ್ಪು ಜನಾಂಗದವರಲ್ಲಿ ನಿರುದ್ಯೋಗ, ಬಡತನ, ಅಸಹನೆ, ಗ್ಯಾಂಗ್ ಹಿಂಸಾಚಾರಗಳು ಮತ್ತು ಬಿಳಿಯ-ಕರಿಯ-ಲ್ಯಾಟಿನ್-ಏಷ್ಯನ್ ಮೂಲದ ಜನರ ನಡುವೆ ಜನಾಂಗೀಯ ದ್ವೇಷ Los Angeles Riotಹೆಚ್ಚಿಗೆ ಇದ್ದ ಸಮಯ ಅದು. ಇಂತಹ ಸಮಯದಲ್ಲಿ ಕೋರ್ಟು ಈ ಕೇಸಿನಲ್ಲಿ ಪೋಲಿಸರದೇನೂ ತಪ್ಪಿಲ್ಲ ಎಂದು ತೀರ್ಪು ಕೊಟ್ಟುಬಿಡುತ್ತದೆ. ಹಾಗೆ ತೀರ್ಪು ಕೊಟ್ಟ ಜ್ಯೂರಿ ಮಂಡಳಿಯ 12 ಜನರಲ್ಲಿ ಹತ್ತು ಜನ ಬಿಳಿಯರು, ಒಬ್ಬ ಲ್ಯಾಟಿನ್ ಮೂಲದವ, ಮತ್ತೊಬ್ಬ ಏಷ್ಯನ್. ಒಬ್ಬನೂ ಕರಿಯನಿರಲಿಲ್ಲ. ಇದೆಲ್ಲವನ್ನೂ ಗಮನಿಸಿದ ಕಪ್ಪು ಜನರು ರೊಚ್ಚಿಗೆದ್ದು ಬಿಡುತ್ತಾರೆ. 1992 ರ ಏಪ್ರಿಲ್ 29 ಅದು. 3 ಗಂಟೆಗೆ ತೀರ್ಪು ಬಂದಿದ್ದು. ಸಾಯಂಕಾಲಕ್ಕೆಲ್ಲ ಇಡೀ ನಗರದಲ್ಲಿ ಗಲಭೆ, ದೊಂಬಿ, ಹಿಂಸಾಚಾರ ಶುರುವಾಗಿಬಿಡುತ್ತದೆ. ಕರಿಯರ ಹಿಂಸೆಗೆ ಪ್ರತಿಯಾಗಿ ಇನ್ನಿತರರೂ ಸಶಸ್ತ್ರ ಪ್ರತಿರೋಧ ಆರಂಭಿಸಿಬಿಡುತ್ತಾರೆ. ಮಾರನೆ ದಿನದಿಂದಲೆ ಕರ್ಪ್ಯೂ ಜಾರಿ ಮಾಡಲಾಗುತ್ತದೆ. ಆರು ದಿನಗಳ ನಂತರ ಪರಿಸ್ಥಿತಿ ತಹಬಂದಿಗೆ ಬರುತ್ತದೆ. ಅಷ್ಟರಲ್ಲಿ 52 ಜನ ಹಿಂಸಾಚಾರಕ್ಕೆ ಬಲಿಯಾಗಿರುತ್ತಾರೆ. ಇದಾದ ನಂತರವೂ ಪರಿಸ್ಥಿತಿ ಹೇಳಿಕೊಳ್ಳುವಷ್ಟು ಸುಧಾರಿಸುವುದಿಲ್ಲ. ಕೇವಲ 4 ಲಕ್ಷ ಜನಸಂಖ್ಯೆಯ ಲಾಂಗ್ ಬೀಚ್ ನಗರದ ಕರಿಯ-ಲ್ಯಾಟಿನ್-ಏಷ್ಯನ್ ಮಧ್ಯದ ಗ್ಯಾಂಗ್‌ವಾರ್‌ಗಳಿಗೆ ಒಂದೇ ತಿಂಗಳಿನಲ್ಲಿ 120 ಜನ ಬಲಿಯಾಗುತ್ತಾರೆ. ಮುಂದೆ ಹಲವಾರು ವರ್ಷಗಳ ಕಾಲ ಈ ಜನಾಂಗೀಯ ದ್ವೇಷ ಮುಂದುವರಿಯುತ್ತದೆ.

ಈ ಹಿಂಸಾಚಾರ ಆದ ಎರಡು ವರ್ಷಗಳ ನಂತರ ಎರಿನ್ ಗ್ರುವೆಲ್ ಎಂಬ 25 ವರ್ಷದ ಯುವತಿ ಲಾಂಗ್ ಬೀಚಿನ ಹೈಸ್ಕೂಲ್ ಒಂದಕ್ಕೆ ಅಧ್ಯಾಪಕಿಯಾಗಿ ಬರುತ್ತಾಳೆ. ಶಾಲೆಯ ಆಡಳಿತವರ್ಗ “unteachable” ಎಂದು ತೀರ್ಮಾನಿಸಿಬಿಟ್ಟಿದ್ದ ತರಗತಿಯೊಂದರ ಉಸ್ತುವಾರಿಯನ್ನು ಆಕೆಗೆ ಕೊಡಲಾಗುತ್ತದೆ. ಆ ತರಗತಿಯ 15-16 ವರ್ಷದ ಹುಡುಗಹುಡುಗಿಯರೆಲ್ಲ ಒಂದಲ್ಲ ಒಂದು ವಿಧದಲ್ಲಿ ಹಿಂಸಾಚಾರ ಕಂಡಿದ್ದವರು, ಅನುಭವಿಸಿದ್ದವರು. ಕೆಲವರಂತೂ ತಮ್ಮ ಮನೆಯವರನ್ನೆ ಗ್ಯಾಂಗ್ ಹಿಂಸಾಚಾರದಲ್ಲಿ ಕಳೆದುಕೊಂಡಿದ್ದವರು. ಬಹಳಷ್ಟು ವಿದ್ಯಾರ್ಥಿಗಳು ಇಡೀ ಸಮಾಜದ ಬಗ್ಗೆ ನಂಬಿಕೆ ಮತ್ತು ವಿಶ್ವಾಸವನ್ನು ಕಳೆದುಕೊಂಡು, ತಮ್ಮ ಬಣ್ಣದ, ತಮ್ಮ ಜನಾಂಗದ ಗ್ಯಾಂಗ್‌ಗಳಲ್ಲಿ ಗುರುತಿಸಿಕೊಂಡು ಏನೋ ಒಂದು ನೆಮ್ಮದಿ ಕಾಣುತ್ತಿದ್ದವರು. ಬಿಳಿಯರಿಗೆ ಎಲ್ಲವೂ ಸುಲಭ ಎಂದು ಭಾವಿಸಿದ್ದ ಅವರು ತಮ್ಮತಮ್ಮ ಗುಂಪುಗಳ ನಡುವೆ ತರಗತಿಯಲ್ಲಿ ಅಕ್ಷರಶಃ ಗಡಿ ನಿರ್ಮಿಸಿಕೊಂಡಿದ್ದವರು. ಒಂದಷ್ಟು ವಿದ್ಯಾರ್ಥಿಗಳು ಬಾಲಾಪರಾಧಿಗಳ ಜೈಲಿನಲ್ಲಿ ಇದ್ದು ಬಂದವರು. ಅಂತಹ ತರಗತಿಗೆ ಆದರ್ಶಗಳ ಕನಸು ಹೊತ್ತ ಬಿಳಿಯ ಯುವತಿ ಎರಿನ್ ಗ್ರುವೆಲ್ ಅಧ್ಯಾಪಕಿಯಾಗಿ ಬರುತ್ತಾಳೆ.

ಸ್ವಲ್ಪವೂ ಸಹಕಾರ ಕೊಡದ ವಿದ್ಯಾರ್ಥಿಗಳ ಜೊತೆ ಎರಿನ್ ಬಹಳ ಕಷ್ಟದಿಂದ, ಆದರೆ ಆಶಾವಾದದಿಂದ ಏಗುತ್ತಾ ಹೋಗುತ್ತಾಳೆ. ವಿದ್ಯಾರ್ಥಿಗಳು ಆಕೆಯಲ್ಲಿ ವಿಶ್ವಾಸ ತೋರುವುದಿಲ್ಲ. ಒಂದಲ್ಲ ಒಂದು ತರಲೆ ಮಾಡುತ್ತ ಆಕೆಯ ತಾಳ್ಮೆಯನ್ನು ಪರೀಕ್ಷಿಸುತ್ತ ಹೋಗುತ್ತಾರೆ. ಒಮ್ಮೆ ಆಕೆ ಪಾಠ ಮಾಡುತ್ತಿದ್ದಾಗ ಇಡೀ ತರಗತಿ ಮುಸುಮುಸನೆ, ಅಪಹಾಸ್ಯದ ನಗು ನಗಲು ಆರಂಭಿಸಿಬಿಡುತ್ತದೆ. ಎರಿನ್ ಏನೆಂದು ಗಮನಿಸಿದರೆ ತರಗತಿಯಲ್ಲಿನ ಒಬ್ಬ ಕಪ್ಪು ಹುಡುಗ ಕೈಯ್ಯಲ್ಲಿ ಒಂದು ಹಾಳೆ ಹಿಡಿದು ತಲೆಬಗ್ಗಿಸಿಕೊಂಡು ಬಿಕ್ಕುತ್ತಿರುವುದು ಕಾಣಿಸುತ್ತದೆ. ಎರಿನ್ ಆ ಹಾಳೆ ತೆಗೆದುಕೊಂಡು ನೋಡುತ್ತಾಳೆ. ಅದು, ಆ ಹುಡುಗನನ್ನು ಅಪಹಾಸ್ಯ ಮಾಡಿ ಸಹಪಾಠಿಯೊಬ್ಬ ಬರೆದಿದ್ದ ವ್ಯಂಗ್ಯಚಿತ್ರ. ಅದರಲ್ಲಿ ಆ ಕಪ್ಪುಹುಡುಗನ ದಪ್ಪತುಟಿಗಳನ್ನು ಎತ್ತಿತೋರಿಸಲಾಗಿರುತ್ತದೆ.

ಎರಡನೆ ವಿಶ್ವಯುದ್ಧದ ಸಮಯದಲ್ಲಿ ಹಿಟ್ಲರ್‌ನ ನಾಟ್ಜಿಗಳು ಯಹೂದಿಗಳನ್ನು ಮತ್ತು ಕರಿಯರನ್ನು ತುಂಬಾ ಕೀಳುಜನಾಂಗದವರು ಎಂಬಂತೆ ತಮ್ಮ ಪ್ರಚಾರ ಸಾಮಗ್ರ್ರಿಗಳಲ್ಲಿ ಸಾರುತ್ತಿದ್ದರು. ಅವುಗಳಲ್ಲಿ ಯಹೂದಿಗಳನ್ನು ದಪ್ಪ, ಇಲಿ ರೂಪದ ಮೂಗನ್ನು ಹೊಂದಿರುವವರು ಎನ್ನುವಂತೆ ವ್ಯಂಗ್ಯಚಿತ್ರಗಳ ಮೂಲಕ ಚಿತ್ರಿಸುತ್ತಿದ್ದರು. ಕರಿಯರನ್ನು ಅವರಲ್ಲಿ ಎದ್ದುಕಾಣುವ ದಪ್ಪತುಟಿಗಳ ಮೂಲಕ ಚಿತ್ರಿಸುತ್ತಿದ್ದರು. ತನ್ನ ತರಗತಿಯ ವಿದ್ಯಾರ್ಥಿಯೊಬ್ಬ ಇನ್ನೊಬ್ಬನನ್ನು ಇದೆ ತರಹ ಚಿತ್ರಿಸಿರುವುದನ್ನು ನೋಡಿದ ಎರಿನ್, ಇತಿಹಾಸದ ಅತಿದೊಡ್ಡ ಗ್ಯಾಂಗ್ ಆದ, ದೇಶದೇಶಗಳನ್ನೆ ಹತೋಟಿಗೆ ತೆಗೆದುಕೊಂಡು, ಒಂದಿಡೀ ಜನಾಂಗವನ್ನು ನಿರ್ನಾಮ ಮಾಡುವ ಪೈಶಾಚಿಕ ಕೃತ್ಯ ಹಾಲೊಕಾಸ್ಟ್‌ಗೆ ಕಾರಣವಾದ ನಾಟ್ಜಿಗಳೂ ಹೀಗೆಯೆ ಚಿತ್ರಿಸುತ್ತಿದ್ದರು ಎಂದು ಹೇಳಿದಳು. ಹಾಗೆ ಹೇಳುತ್ತ, ನಿಮ್ಮಲ್ಲಿ ಎಷ್ಟು ಜನಕ್ಕೆ ಹಾಲೊಕಾಸ್ಟ್ ಬಗ್ಗೆ ಗೊತ್ತಿದೆ ಎಂದು ಕೇಳಿದಳು. ಒಬ್ಬನೇ ಒಬ್ಬ ಕೈಎತ್ತುತ್ತಾನೆ.

ಅಲ್ಲಿಂದ ಮುಂದಿನ ದಿನಗಳಲ್ಲಿ ಗುರುಶಿಷ್ಯರ ಸಂಬಂಧವೆ ಬದಲಾಗಿಬಿಡುತ್ತದೆ. ಮಾರಣಹೋಮದ ಬಗ್ಗೆ ಹೇಳುತ್ತ, ತರಗತಿಯಲ್ಲಿನ ಹುಡುಗಹುಡುಗಿಯರಿಗೆ ಪ್ರಸ್ತುತವಾದ ಜನಾಂಗೀಯ ದ್ವೇಷ, ಗ್ಯಾಂಗ್‌ವಾರ್, ಮಾದಕದ್ರವ್ಯಗಳು, ಅವರ ನೆರೆಹೊರೆಯ ಸಮಾಜದಲ್ಲಿ ಕರಿಯನಾಗಿರುವದರ ಕಷ್ಟ, ಲ್ಯಾಟಿನ್ ಆಗಿರುವುದರ ಕಷ್ಟ, ಏಷ್ಯನ್ ಆಗಿರುವುದರ ಕಷ್ಟ, ಬಡತನದ ಕಷ್ಟ, ಮುಂತಾದ ಸಮಸ್ಯೆಗಳ ಬಗ್ಗೆ ಮಾತನಾಡಲು, ಚರ್ಚಿಸಲು ಆರಂಭಿಸುತ್ತಾಳೆ ಎರಿನ್. ಇಡೀ ತರಗತಿಯನ್ನು ತನ್ನ ದುಡ್ಡಿನಲ್ಲಿ ಹಾಲೊಕಾಸ್ಟ್ ಮೇಲಿನ ಮ್ಯೂಸಿಯಮ್ಮುಗಳಿಗೆ, “ಶಿಂಡ್ಲರ್ಸ್ ಲಿಸ್ಟ್” ಸಿನೆಮಾಗೆ ಕರೆದುಕೊಂಡು ಹೋಗುತ್ತಾಳೆ. ಅದಕ್ಕಾಗಿ ದುಡ್ಡುಹೊಂದಿಸಲು ಬೇರೆಬೇರೆ ಕಡೆ ಎರಡನೆ ನೌಕರಿ ಸಹ ಮಾಡುತ್ತಾಳೆ. ಇವಳ ಈ ಆದರ್ಶವನ್ನು ಮೊದಲೆಲ್ಲ ಬೆಂಬಲಿಸಿ ಸಹಾನುಭೂತಿ ತೋರಿಸುತ್ತಿದ್ದ ಗಂಡ ಕೊನೆಗೆ ಅವಳನ್ನು ವಿಚ್ಚೇದಿಸಿಬಿಡುತ್ತಾನೆ. ಆದರೂ ಎರಿನ್ ಗ್ರುವೆಲ್ ವಿದ್ಯಾರ್ಥಿಗಳನ್ನು ಹುರಿದುಂಬಿಸುತ್ತ, ಅವರು ಚೆನ್ನಾಗಿ ಓದುವಂತೆ, ಸ್ವತಂತ್ರವಾಗಿ ಯೋಚಿಸುವಂತೆ ಮಾಡುತ್ತಾ ಹೋಗುತ್ತಾಳೆ. ಮಾರಣಹೋಮದಲ್ಲಿ ಬದುಕುಳಿದವರ ಮತ್ತು ಆ ಕಷ್ಟದ ಸಮಯದಲ್ಲಿಯೂ ಯಹೂದಿಗಳಿಗೆ ಸಹಾಯ ಮಾಡಿದವರ ಪುಸ್ತಕಗಳನ್ನು ಓದಲು ಕೊಡುತ್ತಾಳೆ.

ಇದೇ ಸಮಯದಲ್ಲಿ ಆ ವಿದ್ಯಾರ್ಥಿಗಳಿಗೆಲ್ಲ ಅವರ ಪ್ರತಿದಿನದ ಜೀವನಹೋರಾಟದ ಬಗ್ಗೆ, ಸಮಸ್ಯೆಗಳ ಬಗ್ಗೆ, ತಮ್ಮ ನೆನಪುಗಳ ಬಗ್ಗೆ ಡೈರಿ ಬರೆಯಲು ಹೇಳುತ್ತಾಳೆ. ನಿಧಾನವಾಗಿ ಎಲ್ಲರೂ ಬರೆಯುತ್ತ ಹೋಗುತ್ತಾರೆ. ಆ ಬರಹದಲ್ಲಿ ತಮ್ಮನ್ನೆ ತಾವು ಹುಡುಕಿಕೊಳ್ಳುತ್ತ, ಸಹಿಷ್ಣುಗಳಾಗುತ್ತ, ಆಶಾವಾದಿಗಳಾಗುತ್ತ, ತಮ್ಮತಮ್ಮ ಕೃತ್ಯಗಳಿಗೆ ತಾವೆ ಜವಾಬ್ದಾರರಾಗುತ್ತ ಹೋಗುತ್ತಾರೆ. ಈ ಎಲ್ಲದರಿಂದಾಗಿ ಕೊನೆಕೊನೆಗೆ ಇಡೀ ತರಗತಿ ಪರೀಕ್ಷೆಗಳಲ್ಲಿಯೂ ಚೆನ್ನಾಗಿ ಮಾಡುತ್ತ ಅತ್ಯುತ್ತಮ ವಿದ್ಯಾರ್ಥಿಗಳ ತರಗತಿಯಾಗಿ ಬದಲಾಗಿಬಿಡುತ್ತದೆ. ಅಮೆರಿಕದ ಕರಿಯರ ನಾಗರಿಕ ಹಕ್ಕುಗಳ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ “Freedom Riders” ನ ನೆನಪಿನಲ್ಲಿ ತಮ್ಮನ್ನು ತಾವು “Freedom Writers” ಎಂದು ಕರೆದುಕೊಳ್ಳುತಾರೆ. ಅವರ ಮತ್ತು ತನ್ನ ಈ ಅನುಭವವನ್ನು 1999 ರಲ್ಲಿ ಎರಿನ್ ಗ್ರುವೆಲ್ “The Freedom Writers Diary” ಎಂಬ ಪುಸ್ತಕ ಬರೆಯುತ್ತಾಳೆ. ಕಳೆದ ವರ್ಷ ಇದು ಸಿನೆಮಾ ಕೂಡ ಆಗಿದೆ.

— X —

ಸಂಸ್ಕಾರದ ಬಗೆಗಿನ ಕೆಲವು ಮಡಿವಂತ ಅಧ್ಯಾಪಕರ ಇತ್ತೀಚಿನ ವಿವಾದದ ಬಗ್ಗೆ ಯೋಚಿಸುತ್ತಿದ್ದಾಗ ಎರಿನ್ ಹೀಗೆ ನೆನಪಾದಳು. ಉತ್ತಮ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಗಳನ್ನು ನಿರಂಕುಶಮತಿಗಳನ್ನಾಗಿ ಮಾಡಬೇಕು. ಆದರೆ ನಮ್ಮ ವ್ಯವಸ್ಥೆ ಇನ್ನೂ ನೋಟ್ಸ್ ಡಿಕ್ಟೇಟ್ ಮಾಡುತ್ತ, ನೂರಕ್ಕೆ 35 ಅಂಕಗಳನ್ನು ತೆಗೆದುಕೊಳ್ಳುವ ಬಗೆ ಹೇಗೆಂದು ಹೇಳಿಕೊಡುತ್ತಿದೆ. ಇನ್ನು ಕೆಲವು ಅಧ್ಯಾಪಕರಿಗೆ, ವಿಶೇಷವಾಗಿ ಕಾಲೇಜು ಅಧ್ಯಾಪಕರಿಗೆ ಪ್ರಪಂಚದ ಯಾವೊಂದು ವಿಷಯವೂ ಮುಖ್ಯವಲ್ಲ. ತಮ್ಮೂರಿನ ಯಾವೊಂದು ಜ್ವಲಂತ ಸಮಸ್ಯೆಯೂ ತರಗತಿಯಲ್ಲಿ ಚರ್ಚಿಸಲು ಅರ್ಹವಲ್ಲ. ಇವರ ಪರಮ ಕಾಳಜಿಗಳು, ಇಡೀ ವರ್ಷದಲ್ಲಿ ಯಾವುದೊ ಒಂದು ಪಿರಿಯಡ್‌ನಲ್ಲಿ ಮಾತ್ರ ಉಚ್ಚರಿಸಬೇಕಾದ “ಸ್ತನ”, “ಸಂಭೋಗ” ದಂತಹ ಪದಗಳು. ಇದಿಷ್ಟನ್ನೆ ಗಮನಿಸಿದರೆ ಸಾಕು, ನಮ್ಮ ಅಧ್ಯಾಪಕರುಗಳೂ ಸಹ ಎಂತಹ ಗತಿಗೆಟ್ಟ ಶಿಕ್ಷಣ ವ್ಯವಸ್ಥೆಯ ಉತ್ಪನ್ನಗಳು ಎನ್ನುವುದು ಅರಿವಾಗುತ್ತದೆ.

ನಮ್ಮ ಶಾಲಾಕಾಲೇಜುಗಳಲ್ಲಿ, ವಿಶೇಷವಾಗಿ ಕಾಲೇಜುಗಳಲ್ಲಿ ಚರ್ಚಿಸಲೇಬೇಕಾದ ಅನೇಕ ವಿಷಯಗಳಿವೆ. ಜಾತಿವಾದ, ಕೋಮುವಾದ, ಶೋಷಣೆ, ಮೀಸಲಾತಿ, ಭಯೋತ್ಪಾದನೆ, ನಕ್ಸಲ್‌ವಾದ, ಜಾಗತೀಕರಣ, ರಾಷ್ಟ್ರೀಯತೆ ಯಂತಹ ಹಲವಾರು ಜ್ವಲಂತ ಆರ್ಥಿಕ-ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಸಮಸ್ಯೆಗಳಿವೆ. ಇವುಗಳನ್ನು ವಿದ್ಯಾರ್ಥಿಗಳಿಂದ ಮುಚ್ಚಿಡುತ್ತ ಹೋಗುತ್ತಿದ್ದೇವೆ. ಚರ್ಚಿಸುವುದನ್ನು ಮತ್ತು ಪ್ರಶ್ನೆ ಎತ್ತುವುದನ್ನು ಪ್ರೋತ್ಸಾಹಿಸದ ನಮ್ಮ ಫ್ಯೂಡಲ್ ವ್ಯವಸ್ಥೆಯಿಂದಾಗಿ ವಿದ್ಯಾರ್ಥಿಗಳನ್ನು ಕೇಡಿಗರಿಗೆ ಗಾಳದಹುಳು ಮಾಡುತ್ತಿದೆ.

ನಮ್ಮಲ್ಲಿ ತತ್‌ಕ್ಷಣಕ್ಕೆ, ಅಮೂಲಾಗ್ರವಾಗಿ ಬದಲಾಗಬೇಕಾದ ಒಂದು ವ್ಯವಸ್ಥೆ ಇದ್ದರೆ ಅದು ಈ ಶಿಕ್ಷಣ ವ್ಯವಸ್ಥೆ ಮತ್ತು ಬೋಧನಾ ಕ್ರಮ. ಭಾರತದ ಸಮಾಜ ಅನಗತ್ಯ ಕಲ್ಪಿತ ಭಯಗಳನ್ನು ಮೀರಿ ಆರಂಭದಿಂದಲೆ ಮುಕ್ತವಾಗಿ ಚರ್ಚೆಯಲ್ಲಿ ತೊಡಗಿ ಕೊಳ್ಳಬೇಕಿದೆ. ಇಲ್ಲದಿದ್ದರೆ ಮೇಲಿನ ಸಮಸ್ಯೆಗಳಿಗೆ ಭೀಕರ ಅಗ್ನಿಪರ್ವತದ ಸ್ಫೋಟಕ ಶಕ್ತಿಯಿದೆ.

Reader Comments

very good blog congratulations
regard from Catalonia Spain
thank you

#1 
Written By Té la mà Maria - Reus on February 29th, 2008 @ 1:03 am

Add a Comment

required, use real name
required, will not be published
optional, your blog address