ವಿಶ್ವಕ್ಕೇ ನಾಯಕತ್ವ ಕೊಡಬಲ್ಲವನಿಗೆ ಕೊನೆಯ ಸ್ಥಾನ!!!

This post was written by admin on March 6, 2008
Posted Under: Uncategorized

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಮಾರ್ಚ್ 14, 2008 ರ ಸಂಚಿಕೆಯಲ್ಲಿನ ಲೇಖನ)

ನೀವು ಈ ಲೇಖನವನ್ನು ಓದುತ್ತಿರುವ ಹೊತ್ತಿಗೆ ಅಮೆರಿಕದ ಮುಂದಿನ ಅಧ್ಯಕ್ಷೀಯ ಚುನಾವಣೆಗೆ ಅಭ್ಯರ್ಥಿಗಳು ಯಾರು ಎನ್ನುವುದು ಹೆಚ್ಚೂಕಮ್ಮಿ ತೀರ್ಮಾನವಾಗಿ ಹೋಗಿರುತ್ತದೆ. ಈಗಾಗಲೆ ಇಬ್ಬರು ತೀರ್ಮಾನವಾಗಿದ್ದಾರೆ. ಒಬ್ಬಾತ ರಿಪಬ್ಲಿಕನ್ ಪಕ್ಷದ ಜಾನ್ ಮೆಕೈನ್. ಇನ್ನೊಬ್ಬಾತ ಗ್ರೀನ್ ಪಾರ್ಟಿಯ ಅಭ್ಯರ್ಥಿ ರಾಲ್ಫ್ ನೇಡರ್. ಸದ್ಯದ ಸ್ಥಿತಿಯಲ್ಲಿ ಡೆಮಾಕ್ರಾಟ್ ಪಕ್ಷದ ಹಿಲ್ಲರಿ ಕ್ಲಿಂಟನ್ ಅಥವ ಬರಾಕ್ ಒಬಾಮ, ರಾಲ್ಫ್ ನೇಡರ್‌ನನ್ನು ಕಣದಿಂದ ಹಿಂದೆ ಸರಿದು ತಮ್ಮನ್ನು ಬೆಂಬಲಿಸುವಂತೆ ಕೋರುವ ಮತ್ತು ಅದನ್ನು ನೇಡರ್ ಒಪ್ಪಿಕೊಳ್ಳುವ ಸಾಧ್ಯತೆಗಳು ಕಮ್ಮಿ. ರಾಲ್ಫ್ ನೇಡರ್ ಅಧ್ಯಕ್ಷನಾಗುವುದು ಅಸಾಧ್ಯ ಎನ್ನುವುದು ನೇಡರ್‌ಗೂ ಗೊತ್ತು. ಆದರೆ, ಆತ ಈ ಸಲವೂ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಅಮೆರಿಕದ ಅಧ್ಯಕ್ಷನಾಗುವಂತೆ ಮಾಡಿಬಿಡಬಲ್ಲನೆ ಎನ್ನುವುದೆ ಸದ್ಯದ ಕುತೂಹಲ. ಹೌದು, 2000 ದರ ಅಧ್ಯಕ್ಷೀಯ ಚುನಾವಣೆಯಲ್ಲಿ ಜಾರ್ಜ್ ಬುಷ್ ಅಮೆರಿಕದ ಅಧ್ಯಕ್ಷನಾಗಿ ಆಯ್ಕೆಯಾಗುವಲ್ಲಿರಾಲ್ಫ್ ನೇಡರ್‌ನ ದೊಡ್ಡ ಪಾತ್ರವೇ ಇತ್ತು.

ಲೆಬನಾನ್ ಸುಮಾರು 40 ಲಕ್ಷ ಜನಸಂಖ್ಯೆಯ ಸಣ್ಣ ದೇಶ. ಇಸ್ರೇಲಿನ ಉತ್ತರಕ್ಕಿದೆ. ಅರಬ್ ಮೂಲದ ಈ ದೇಶದ ಜನರಲ್ಲಿ ಶೇ. 60 ಮುಸಲ್ಮಾನರಾದರೆ, ಮಿಕ್ಕ ಶೇ. 40 ಕ್ರೈಸ್ತರು. ಅರಬ್ ದೇಶಗಳಲ್ಲೆಲ್ಲ ಇದ್ದುದರಲ್ಲಿ ಪ್ರಗತಿಪರ ದೇಶ. ಈ ದೇಶದಿಂದ ರೋಸ್ ಮತ್ತು ನಾಥ್ರಾ ನೇಡರ್ ಎನ್ನುವ ಅರಬ್ಬಿ ಮಾತನಾಡುವ ಯುವ ಕ್ರೈಸ್ತ ದಂಪತಿಗಳು ಬಹುಶಃ 1925 ರ ಸುಮಾರಿನಲ್ಲಿ ಅಮೆರಿಕಕ್ಕೆ ವಲಸೆ ಬರುತ್ತಾರೆ. ಗಂಡಹೆಂಡತಿ ಇಬ್ಬರೂ ಪ್ರಗತಿಪರ ನಿಲುವು ಹೊಂದಿದ್ದವರು. ಪ್ರಜಾಪ್ರಭುತ್ವದಲ್ಲಿ ಸಾರ್ವಜನಿಕರ ಸಕ್ರಿಯ ಆಸಕ್ತಿ ಇರಬೇಕು ಎನ್ನುವ ನಿಲುವಿದ್ದವರು. ಇಲ್ಲಿ ಇವರು ಒಂದು ರೆಸ್ಟಾರೆಂಟ್ ನಡೆಸುತ್ತಿದ್ದರು.

1955 ರಲ್ಲೊಮ್ಮೆ ಅವರು ವಾಸಿಸುತ್ತಿದ್ದ ಕನೆಕ್ಟಿಕಟ್ ರಾಜ್ಯದಲ್ಲಿ ಬಹುದೊಡ್ಡ ಪ್ರವಾಹ ಬಂದು ಅಪಾರ ಆಸ್ತಿಪಾಸ್ತಿ ನಷ್ಟವಾಗುತ್ತದೆ. ಆಗ ಆ ರಾಜ್ಯದ ಸೆನೆಟರ್ ಆಗಿದ್ದಾತ ಪ್ರೆಸ್ಕಾಟ್ ಬುಷ್. ಆತ ನೇಡರ್‌ರವರಿದ್ದ ಊರಿಗೆ ಪ್ರವಾಹದ ಬಗ್ಗೆ ಖುದ್ದು ತಿಳಿದುಕೊಳ್ಳಲು ಬರುತ್ತಾನೆ. ಆಗ ರೋಸ್ ನೇಡರ್‌ಳೂ ಆತನನ್ನು ಮಾತನಾಡಿಸಲು ಹೋಗುತ್ತಾಳೆ. ಆತ ಮಾಮೂಲಿ ಸೌಜನ್ಯದಂತೆ ಆಕೆಯ ಕೈಕುಲುಕಲು ಕೈ ನೀಡುತ್ತಾನೆ. ಕೈಕುಲುಕುತ್ತ ಕುಲುಕುತ್ತಾ ರೋಸ್ ಪ್ರವಾಹದ ಸ್ಥಿತಿಯನ್ನು, ಭವಿಷ್ಯದಲ್ಲಿ ಪ್ರವಾಹದ ಸಾಧ್ಯತೆಯನ್ನು ತಡೆಯಲು ಆ ನಗರದಲ್ಲಿ ನಿರ್ಮಿಸಬೇಕಾದ ಒಂದು ಒಣ-ಜಲಾಶಯದ ಅವಶ್ಯಕತೆಯನ್ನು ಹೇಳುತ್ತಾಳೆ. ಹಾಗೆಯೆ ಪ್ರೆಸ್ಕಾಟ್ ಬುಷ್ ಕೈ ಹಿಂದೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದರೂ, ಆತ ಆ ಜಲಾಶಯವನ್ನು ನಿರ್ಮಿಸಲು ವಾಗ್ದಾನ ಮಾಡುವಂತೆ ಕೋರುತ್ತಾಳೆ. ಹಾಗೂ ಅಲ್ಲಿಯ ತನಕ ಕೈಬಿಡುವುದಿಲ್ಲ ಎನ್ನುವುದನ್ನು ಸೂಚಿಸುತ್ತಾಳೆ ಎನ್ನಿಸುತ್ತದೆ. ಆಕೆಯ ಈ ಪರಿಯ ಕೋರಿಕೆಗೆ ಮಣಿದ ಸೆನೆಟರ್ ಬುಷ್ ಒಣ ಜಲಾಶಯ ನಿರ್ಮಿಸುವುದಾಗಿ ವಾಗ್ದಾನ ಕೊಡುತ್ತಾನೆ. ಮುಂದಕ್ಕೆ ಆತ ತನ್ನ ಮಾತನ್ನು ಉಳಿಸಿಕೊಳ್ಳುತ್ತಾನೆ. 1988 ರಲ್ಲಿ ಅಧ್ಯಕ್ಷನಾಗುವ ಜಾರ್ಜ್ ಬುಷ್ ಇದೇ ಪ್ರೆಸ್ಕಾಟ್ ಬುಷ್‌ನ ಮಗ. ಹಾಗೆಯೆ, ಆತನ ಮೊಮ್ಮಗ ಇನ್ನೊಬ್ಬ ಜಾರ್ಜ್ ಬುಷ್ ಅಧ್ಯಕ್ಷ ಚುನಾವಣೆಯಲ್ಲಿ ಕೂದಲೆಳೆಯ ಅಂತರದಲ್ಲಿ ಗೆಲ್ಲಲು ರೋಸ್ ನೇಡರ್‌ಳ ಮಗ ರಾಲ್ಫ್ ನೇಡರ್ ಹೆಚ್ಚೂಕಮ್ಮಿ ಕಾರಣವಾಗಿ ಬಿಡುತ್ತಾನೆ.

ರಾಲ್ಫ್ ನೇಡರ್ ಹಾರ್ವರ್ಡ್ ಕಾನೂನು ಕಾಲೇಜಿನ ಪದವೀಧರ. ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿ.ಸಿ.ಯಲ್ಲಿ ವಕೀಲ. ಈತನಿಗೆ ಯುವಕನಾಗಿದ್ದಾಗಿನಿಂದಲೂ ಆಟೊಮೊಬೈಲ್ ಇಂಡಸ್ಟ್ರಿಯ ಬಗ್ಗೆ ಮತ್ತು ಕಾರುಗಳಲ್ಲಿನ ಸುರಕ್ಷತೆಯ ಬಗ್ಗೆ ಆಸಕ್ತಿ. ಆ ಬಗ್ಗೆ ಸ್ಟಡಿ ಮಾಡುವ ನೇಡರ್ ತನ್ನ 31 ನೆ ವಯಸ್ಸಿನಲ್ಲಿ (1965) ಒಂದು ಪುಸ್ತಕ ಬರೆಯುತ್ತಾನೆ. ಅದರ ಹೆಸರು, “Unsafe at Any Speed.” ಅದರಲ್ಲಿ ಅಮೆರಿಕದ ಬಹುತೇಕ ಕಾರುಗಳು, ಅದರಲ್ಲೂ ಮುಖ್ಯವಾಗಿ ಜನರಲ್ ಮೋಟಾರ್ಸ್‌ರವರ “ಷೆವ್ರಲೆಟ್ ಕಾರ್ವೆರ್” ಕಾರು ಹೇಗೆ ಸುರಕ್ಷಿತವಲ್ಲ, ಸಣ್ಣಪುಟ್ಟ ಅಪಘಾತಕ್ಕೆಲ್ಲ ಹೇಗೆ ಸವಾರರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ, ಸರಿಯಾಗಿ ಡಿಸೈನ್ ಮಾಡದೆ ಇರುವುದರಿಂದ ಹೇಗೆ ಕಾರುಗಳು ಸುಲಭವಾಗಿ ಪಲ್ಟಿ ಹೊಡೆಯುತ್ತಿವೆ, ಮುಂತಾದುವುಗಳ ಬಗ್ಗೆ ಚರ್ಚಿಸಿರುತ್ತಾನೆ. ಇವೆಲ್ಲ ಗೊತ್ತಿದ್ದರೂ ಕಾರು ಕಂಪನಿಗಳು ಇವನ್ನೆಲ್ಲ ಕಡೆಗಣಿಸಿವೆ ಎಂದು ನಿರೂಪಿಸುತ್ತಾನೆ. ಈ ಪುಸ್ತಕ ಬಹಳ ಚರ್ಚೆಗೆ ದಾರಿ ಮಾಡಿಕೊಡುತ್ತದೆ. GM ಕಂಪನಿಯ ಮೇಲೆ ಅನೇಕರು ದಾವೆ ಹೂಡುತ್ತಾರೆ. ಅಮೆರಿಕದ ಸೆನೆಟ್ ಸಮಿತಿ ಕಾರುಸುರಕ್ಷತೆಯ ಬಗ್ಗೆ ತನಿಖೆ ಆರಂಭಿಸುತ್ತದೆ. ಆ ಸಮಿತಿಯ ಮುಂದೆ “GM ಕಂಪನಿಯವರು ಸುರಕ್ಷತೆಯ ಬಗ್ಗೆ ಹೇಗೆ ಕನಿಷ್ಠ ಕಾಳಜಿ ಹೊಂದಿದ್ದಾರೆ,” ಎಂದು ಉದಾಹರಣೆ ಸಹಿತ ರಾಲ್ಫ್ ನಿರೂಪಿಸುತ್ತ ಹೋಗುತ್ತಾನೆ.

ಇದರಿಂದೆಲ್ಲ ಭೀತಿಗೊಂಡ GM ಕಂಪನಿ ರಾಲ್ಫ್ ನೇಡರ್‌ನ ಮಾನಹಾನಿಗೆ ಪ್ರಯತ್ನ ಪಡುತ್ತದೆ. ಖಾಸಗಿ ಪತ್ತೆದಾರರನ್ನು ನೇಮಿಸುತ್ತದೆ. ಆತನ ಇತಿಹಾಸವನ್ನೆಲ್ಲ ಶೋಧಿಸುತ್ತದೆ. ಆತನ ಫೋನ್‌ಗಳನ್ನು ಕದ್ದಾಲಿಸುತ್ತದೆ. ಕೊನೆಗೆ ವೇಶ್ಯೆಯರಿಗೆ ದುಡ್ಡುಕೊಟ್ಟು ರಾಲ್ಫ್ ನೇಡರ್‌ನನ್ನು ಬಲೆಗೆ ಹಾಕಿಕೊಳ್ಳಲು ಸಂಚು ರೂಪಿಸುತ್ತದೆ. ಇಷ್ಟೆಲ್ಲ ಮಾಡಿಯೂ ಕೊನೆಗೆ GM ಕಂಪನಿಗೆ ತಿಳಿದುಬರುವುದೇನೆಂದರೆ, ‘ಇಡೀ ವಾಷಿಂಗ್‌ಟನ್ ಡಿ.ಸಿ. ಪ್ರದೇಶದಲ್ಲಿಯೆ ಸ್ವಚ್ಚ ಜೀವನವನ್ನು ನಡೆಸುತ್ತಿರುವ ಅತಿ ಮುಗ್ಧ ಯುವಕ ಅಂದರೆ ರಾಲ್ಫ್ ನೇಡರ್,’ ಎಂದು. ಇದೆಲ್ಲ ಆಗುತ್ತಿರುವಾಗ, ತನ್ನ ಖಾಸಗಿ ಜೀವನವನ್ನು ಈ ರೀತಿ ಅಕ್ರಮವಾಗಿ ಶೋಧಿಸುತ್ತಿರುವುದು ಹಾಗುಪತ್ತೆದಾರರು ತನ್ನನ್ನು ಹಿಂಬಾಲಿಸುತ್ತಿರುವುದು ರಾಲ್ಫ್‌ನ ಗಮನಕ್ಕೆ ಬರುತ್ತದೆ. ಆತ GM ಮೇಲೆ ತನ್ನ ಖಾಸಗಿ ಜೀವನದ ಮೇಲಿನ ದಾಳಿಯನ್ನು ಆರೋಪಿಸಿ ಮೊಕದ್ದಮೆ ಹೂಡುತ್ತಾನೆ. ಆ ಸಮಯದಲ್ಲಿ, ಅಂದರೆ 40 ವರ್ಷಗಳ ಹಿಂದೆಯೆ ವರ್ಷಕ್ಕೆ ಸುಮಾರು 7000 ಕೋಟಿ ರೂಪಾಯಿ (1.7 ಬಿಲಿಯನ್ ಡಾಲರ್) ನಿವ್ವಳ ಲಾಭ ಇದ್ದ ಸಂಸ್ಥೆ ಜನರಲ್ ಮೋಟಾರ್ಸ್. ಅದು ಈ ಕೇಸಿನಲ್ಲಿ ಸಿಕ್ಕಿಬೀಳುತ್ತದೆ. ಅಮೆರಿಕದ ಆ ಅತಿದೊಡ್ಡ ಕಂಪನಿಯ ಅಧ್ಯಕ್ಷ ಸಾರ್ವಜನಿಕವಾಗಿ ತಮ್ಮ ಕುಕೃತ್ಯಗಳಿಗೆ ಕ್ಷಮೆ ಯಾಚಿಸುತ್ತಾನೆ. ನೇಡರ್‌ಗೆ 2.9 ಲಕ್ಷ ಡಾಲರ್ ಪರಿಹಾರ ಸಿಗುತ್ತದೆ. ಆ ದುಡ್ಡನ್ನು ಸ್ವಂತಕ್ಕೆ ಬಳಸಿಕೊಳ್ಳದ ನೇಡರ್ ಗ್ರಾಹಕ ಹಿತರಕ್ಷಣೆಯ ಸಂಸ್ಥೆಯೊಂದನ್ನು ಆರಂಭಿಸುತ್ತಾನೆ. ಮುಂದಕ್ಕೆ ಅಮೆರಿಕದ್ದೆ ಏನು, ಇಡೀ ವಿಶ್ವದ ಕಾರುಗಳಲ್ಲಿನ ಸುರಕ್ಷಾ ವಿಧಾನಗಳೆಲ್ಲ ಬದಲಾಗಿ ಹೋಗುತ್ತವೆ. ಲಕ್ಷಾಂತರ ಜನರ ಪ್ರಾಣ ಉಳಿಯುತ್ತದೆ. ಇವತ್ತಿಗೂ ಉಳಿಯುತ್ತಿದೆ.

ಇಲ್ಲಿಂದ ಮುಂದಕ್ಕೆ ಆ ವಲಸೆ ಬಂದ ದಂಪತಿಗಳ ಮಗ ಅಮೆರಿಕದ ಸಮಾಜದ ಮೇಲೆ ಅಳಿಯದ ಪ್ರಭಾವ ಬೀರುತ್ತ ಹೋಗುತ್ತಾನೆ. ಅನೇಕ ನಾಗರಿಕ ಸಂಸ್ಥೆಗಳನ್ನು ಕಟ್ಟುತ್ತಾನೆ. ಈತನ ಕೆಲಸದಿಂದ ಪ್ರೇರೇಪಿತರಾದ ನೂರಾರು ಆದರ್ಶ ವಿದ್ಯಾರ್ಥಿಗಳು ಆತನ ಸಂಘಸಂಸ್ಥೆಗಳಲ್ಲಿ ತೊಡಗಿಕೊಳ್ಳಲು, ಕೆಲಸ ಮಾಡಲು, ಸ್ವಯಂಪ್ರೇರಣೆಯಿಂದ ಬರುತ್ತಾರೆ. ಆತನ ಮುಂದಾಳತ್ವದಲ್ಲಿ ಒಂದಿಡೀ ಗುಂಪು ಸ್ವಸ್ಥ ಸಮಾಜದ ನಿರ್ಮಾಣಕ್ಕೆ, ಅನೇಕ ಸಾಮಾಜಿಕ-ಆರ್ಥಿಕ-ರಾಜಕೀಯ ಬದಲಾವಣೆಗಳಿಗೆ ಕಾರಣವಾಗುತ್ತದೆ. ಆ ಆದರ್ಶವಂತ ಯುವಕರನ್ನು ವಾಷಿಂಗ್‌ಟನ್ ಪೋಸ್ಟ್ ಪತ್ರಿಕೆ “Nader’s Raiders” ಎಂದೇ ಕರೆಯುತ್ತದೆ. ವ್ಯವಸ್ಥೆಯಲ್ಲಿನ ಅನ್ಯಾಯಗಳಿಗೆ ಮತ್ತು ಅಕ್ರಮಗಳಿಗೆ ನ್ಯಾಯ ಪಡೆದುಕೊಳ್ಳಲು ಇಡೀ ಅಮೆರಿಕದ ಜನತೆ ದಿಟ್ಟಿಸಿ ನೋಡುವ ಏಕೈಕ ಅಮೆರಿಕನ್ ಅಂದರೆ ನೇಡರ್ ಎನ್ನುವಂತಾಗಿಬಿಡುತ್ತದೆ. ಅಮೆರಿಕದಲ್ಲಿ ಬಹುಶಃ ಬೀಟಲ್ಸ್‌ಗಳಿಗಿಂತ ಹೆಚ್ಚಿನ ಪತ್ರಗಳು ಈತನಿಗೆ ಬರೆಯಲ್ಪಡುತ್ತವೆ. ಟೈಮ್ ಮ್ಯಾಗಜೈನ್, ಲೈಫ್ ಮ್ಯಾಗಜೈನ್‌ನಂತಹ ಪತ್ರಿಕೆಗಳು ರ್‍ಯಾಲ್ಫ್ ನೇಡರ್‌ನನ್ನು ಅಮೆರಿಕದ ನೂರು ಅತಿಪ್ರಭಾವಿ ವ್ಯಕ್ತಿಗಳಲ್ಲಿ ಒಂದಾಗಿ ಗುರುತಿಸುತ್ತವೆ. ಆತನಿಗೆ ಇನ್ನೂ 38 ವರ್ಷವಾಗಿರುವಾಗಲೆ, ಯಾವುದೆ ಪಕ್ಷದೊಡನೆ ಗುರುತಿಸಿಕೊಳ್ಳದ ಆತನನ್ನು (ಆದರೂ ಆತನ ಐಡಿಯಾಲಜಿಗೆ ಡೆಮಾಕ್ರಾಟ್ ಪಕ್ಷವೆ ಹತ್ತಿರ) ಅಮೆರಿಕದ ಅಧ್ಯಕ್ಷನನ್ನಾಗಿ ಮಾಡಬೇಕೆಂಬ “Draft Nader” ಮೂವ್‌ಮೆಂಟ್ ಆರಂಭವಾಗುತ್ತದೆ. ಆಗಲೆ ಅನೇಕ ಟಿವಿ ಕಾರ್ಯಕ್ರಮಗಳಲ್ಲಿ ಸಂದರ್ಶಕರು ಆತನನ್ನು ಆ ಪ್ರಶ್ನೆ ಕೇಳುತ್ತಾರೆ. ಆ ಸಮಯದಲ್ಲಿ ಆತ ಅದಕ್ಕೆ ಒಲವು ತೋರಿಸುವುದಿಲ್ಲ. ವ್ಯವಸ್ಥೆಯನ್ನು ಸುಧಾರಿಸುವ ತನ್ನ ಕಾಯಕದಲ್ಲಿಯೆ ಮುಂದುವರೆಯುತ್ತಾನೆ. ಅಮೆರಿಕದ ಎಷ್ಟೊ ಅಭಿಷಿಕ್ತ ಅಧ್ಯಕ್ಷರಿಗೂ ಜನರಲ್ಲಿ ಇಲ್ಲದ ಪ್ರಭಾವ ಈತನಿಗಿರುತ್ತದೆ. ರೊನಾಲ್ಡ್ ರೇಗನ್ ಬರುವವರೆಗೂ ಬಹಳ ಪರಿಣಾಮಕಾರಿಯಾಗಿ ಅಮೆರಿಕದ ಜನತೆಯನ್ನು ಪ್ರಭಾವಿಸುತ್ತ, ತಮ್ಮ ನಾಗರಿಕ ಜವಾಬ್ದಾರಿಗಳನ್ನು ಹೊರುವಂತೆ ಪ್ರಚೋದಿಸುತ್ತ ಹೋಗುತ್ತಾನೆ.

ಯಾವಾಗ ರೇಗನ್ ಮತ್ತು ಮೊದಲ ಬುಷ್ ಅಮೆರಿಕವನ್ನು ಮತ್ತೆ ಕಾರ್ಪೊರೇಟ್ ಜಗತ್ತಿನ ಲಾಭಬಕಾಸುರತೆಗೆ ಅನುವು ಮಾಡಿಕೊಡುತ್ತಾರೊ, ಎರಡೂ ಪಕ್ಷಗಳ ರಾಜಕಾರಣದಲ್ಲಿ ಹಣದ ಪ್ರಭಾವ ಹೆಚ್ಚಾಗುತ್ತ್ತದೊ, ಆಗ, ಅಮೆರಿಕಕ್ಕೆ ಮೂರನೆ ಪಕ್ಷವೊಂದರ ಅವಶ್ಯಕತೆ ಇದೆ ಎಂದು ರ್‍ಯಾಲ್ಫ್ ತೀರ್ಮಾನಿಸುತ್ತಾನೆ. 2000 ನೆ ಇಸವಿಯಲ್ಲಿ ಅಧಿಕೃತವಾಗಿ ಗ್ರೀನ್ ಪಾರ್ಟಿಯ ಅಭ್ಯರ್ಥಿಯಾಗುತ್ತಾನೆ. ಆಗ ಈಗಿನ ಅಧ್ಯಕ್ಷ ಜಾರ್ಜ್ ಬುಷ್ ರಿಪಬ್ಲಿಕನ್ ಅಭ್ಯರ್ಥಿ. ಆಲ್ ಗೋರ್ ಡೆಮಾಕ್ರಾಟ್ ಅಭ್ಯರ್ಥಿ. ಆ ಚುನಾವಣೆಯಲ್ಲಿ 28 ಲಕ್ಷ ಜನ ನೇಡರ್‌ಗೆ ವೋಟು ಹಾಕುತ್ತಾರೆ. ದೇಶದಲ್ಲಿ ಚಲಾಯಿಸಲಾದ ಒಟ್ಟಾರೆ ಮತದಲ್ಲಿ ಜಾರ್ಜ್ ಬುಷ್ ಆಲ್ ಗೋರ್‌ಗಿಂತ ಕಮ್ಮಿ ಪಡೆಯುತ್ತಾನೆ. ಆದರೆ ಎಲೆಕ್ಟೊರಲ್ ವೋಟುಗಳ ಆಧಾರದ ಮೇಲೆ ಬುಷ್ ಗೆಲ್ಲುತ್ತಾನೆ. ಅದು ಸಾಧ್ಯವಾಗುವಂತೆ ಮಾಡಿದ್ದು ಆತನ ತಮ್ಮ ಗವರ್ನರ್ ಆಗಿದ್ದ ಫ್ಲೊರಿಡ ರಾಜ್ಯ. ಅಲ್ಲಿ ಅನೇಕ ಅವ್ಯವಹಾರಗಳ ಆರೋಪದ ಮಧ್ಯೆ ಕೇವಲ ಐದು ನೂರು ವೋಟುಗಳ ಅಂತರದಲ್ಲಿ ಬುಷ್ ಗೆಲ್ಲುತ್ತಾನೆ. ಆದರೆ ಅದೇ ರಾಜ್ಯದಲ್ಲಿ ಅಷ್ಟೇನೂ ಪ್ರಚಾರ ಮಾಡದಿದ್ದರೂ ನೇಡರ್ ಸುಮಾರು ಒಂದು ಲಕ್ಷ ಮತ ಪಡೆಯುತ್ತಾನೆ. ನೇಡರ್ ನಿಲ್ಲದೆ ಇದ್ದಿದ್ದರೆ ಆ ಮತಗಳೆಲ್ಲ ಗೋರ್‌ಗೇ ಬೀಳುತ್ತಿತ್ತು ಎನ್ನುವ ಡೆಮಾಕ್ರಾಟರು ಅದೇ ಕಾರಣಕ್ಕೆ ಇವತ್ತಿಗೂ ನೇಡರ್‌ನನ್ನು ಕ್ಷಮಿಸಿಲ್ಲ. ಆದರೆ, ನಿಷ್ಠುರ ಪ್ರಾಮಾಣಿಕನಾದ, ರಾಜಿಯಿಲ್ಲದ ನೈತಿಕವಾದಿ ನೇಡರ್ ಅವರನ್ನು ಕೇಳುತ್ತಿರುವುದು ಒಂದೇ ಪ್ರಶ್ನೆ, “ನೀವು ಹೇಗೆ ರಿಪಬ್ಲಿಕನ್ನರಿಗಿಂತ ಭಿನ್ನ?” ಅಧಿಕಾರ ಬಂದಾಗ ಹೆಚ್ಚುಕಮ್ಮಿ ಒಂದೆ ತರಹ ಮಾಡುವ ಅವರ ಬಳಿ ಆಗಲೂ ಉತ್ತರವಿಲ್ಲ. ಈಗಲೂ ಉತ್ತರವಿಲ್ಲ.

ಸೋಲುತ್ತೇನೆ ಎಂದು ಗೊತ್ತಿದ್ದರೂ, ಸಾರ್ವಜನಿಕ ಜೀವನದಲ್ಲಿ ಬದ್ಧತೆಯಿರಬೇಕು, ಹಣದ ಪ್ರಭಾವ ಇರಬಾರದು, ಕಾರ್ಪೊರೇಷನ್‌ಗಳಿಗಿಂತ ಜನರ ಹಿತಾಸಕ್ತಿ ಮುಖ್ಯ, ಹಾಗಾಗಿಯೆ ಆ ಬಗ್ಗೆ ಚರ್ಚೆಯಾಗುವುದೂ ಅಗತ್ಯ ಎಂದು ಮತ್ತೆ 2004 ರಲ್ಲೂ ನೇಡರ್ ಚುನಾವಣೆಗೆ ನಿಂತಿದ್ದ. ಮತ್ತೆ, ಈ ಸಲವೂ ನಿಲ್ಲುವುದಾಗಿ ಘೋಷಿಸಿದ್ದಾನೆ ಈ 74 ವರ್ಷದ “ಸಂತ.” ಹೌದು, ಒಂದರ್ಥದಲ್ಲಿ ಈತ ಸಂತನೆ. ಮದುವೆ ಆಗಿಲ್ಲ. ಈತ ಎಂದಾದರೂ ಪ್ರೇಮದಲ್ಲಿ ಬಿದ್ದಿದ್ದಾಗಲಿ, ಡೇಟ್ ಮಾಡಿದ್ದಾಗಲಿ, ಯಾರೂ ನೋಡಿಲ್ಲ. ನನಗೆ ಅದಕ್ಕೆಲ್ಲ ಬಿಡುವಿಲ್ಲ ಎನ್ನುತ್ತಲೆ, ಪ್ರತಿದಿನ ಮತ್ತು ಪ್ರತಿಕ್ಷಣ ವ್ಯವಸ್ಥೆಯ ಸುಧಾರಣೆಗೆ ಮೀಸಲಿಟ್ಟಿದ್ದಾನೆ.

ಇವತ್ತು ಅಮೆರಿಕದಲ್ಲಿ ಅಧ್ಯಕ್ಷನಾಗುವ ಯೋಗ್ಯತೆ ಇರುವವರಲ್ಲಿ ಮೊದಲ ಸ್ಥಾನ ನಿಸ್ಸಂಶಯವಾಗಿ ರಾಲ್ಫ್ ನೇಡರ್‌ದೆ. ಆದರೆ, ಈ ಪಕ್ಷ ವ್ಯವಸ್ಥೆ ಮತ್ತು ರಾಜಕೀಯ ಬಯಸುವ ರಾಜಿ-ವಶೀಲಿಗಳು, ಹಣದ ಮಹಿಮೆ ಮತ್ತು ಪ್ರಭಾವ, ಬದಲಾಗುವ ಸಂದರ್ಭಗಳು, ಮತ್ತು ಸುಲಭವಾಗಿ ಕುರಿಮಂದೆಯಾಗಿಬಿಡುವ ಬಹುಸಂಖ್ಯಾತ indifferent ಜನ ಅದನ್ನು ಸಾಧ್ಯವಾಗಿಸುವುದಿಲ್ಲ. ನೇಡರ್‌ನ ಸೋಲು ಅಮೆರಿಕದ ಸೋಲು. ಆದರೆ ಅದು ಕೇವಲ ಅಮೆರಿಕದ ನಷ್ಟವಲ್ಲ. “Maybe if we started talking about civic globalization instead of corporate globalization, the world will move forward.” ಎನ್ನುವ ನೇಡರ್‌ನ ಸೋಲು ಈ ಲಾಭಕೋರ, ಸ್ವಾರ್ಥ ಪ್ರಪಂಚದಲ್ಲಿ ವಿಶ್ವಕ್ಕೂ ಆಗುವ ನಷ್ಟ.


ರಾಲ್ಫ್ ನೇಡರ್ ನೇಡರ್ ಚಿಕ್ಕವನಿದ್ದಾಗ ಆತನ ಅಪ್ಪ ಮಗ ಶಾಲೆಯಿಂದ ಬಂದಾಗ ಒಂದು ಪ್ರಶ್ನೆ ಕೇಳುತ್ತಿದ್ದನಂತೆ: ಮಗಾ, ಇವತ್ತು ಶಾಲೆಯಲ್ಲಿ ಏನು ಕಲಿತೆ? ನಂಬಲು ಕಲಿತೆಯೊ, ಅಥವ ಯೋಚಿಸಲು ಕಲಿತೆಯೊ? (What did you learn today, Ralph? Did you learn to believe or did you learn to think?) ಜವಾಬ್ದಾರಿಯುತ ಸಮಾಜದಲ್ಲಿ ಒಂದಲ್ಲ ಒಂದು ಸಮಯದಲ್ಲಿ ಯಾರಾದರೂ ವಿದ್ಯಾರ್ಥಿಗಳನ್ನು ಕೇಳಲೇಬೇಕಾದ ಬಹುಮುಖ್ಯ ಪ್ರಶ್ನೆ ಇದೆ. ಯಾರೂ ಕೇಳದಿದ್ದರೂ ವಿದ್ಯಾರ್ಥಿಗಳು ತಮಗೆ ತಾವೆ ಹಾಕಿಕೊಳ್ಳಬೇಕಾದ ಪ್ರಶ್ನೆ ಇದು. “ಸಂಸ್ಕಾರ” ಆರಂಭವಾಗುವುದೆ ಇಂತಹ ಪ್ರಶ್ನೆಯ ಮೂಲಕ. ಅಲ್ಲವೆ?


Reader Comments

ಪ್ರೀಯ ರವಿಯವರಿಗೇ,

ನಮಸ್ಕಾರ ಹೇಗಿದ್ದೀರಿ?

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ‘ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, ‘ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ‘ಸಂಪದ’ದ ಹರಿಪ್ರಸಾದ್ ನಾಡಿಗ್, ‘ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ‘ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

- ಅಮರ

#1 
Written By ಅಮರ on March 7th, 2008 @ 10:53 am

ರವಿ ಸಾರ್,
ತುಂಬಾ knowledgefull ಆಗಿದೆ ಸರ್ ನಿಮ್ಮ ಈ article. ಇದು ನೆದಾರ್ ಕೆಂದ್ರೀಕೃತ ಅಂಕಣ . ಅದು ಸಂಪೂರ್ಣ ಮಾಹಿತಿ ಹೊತ್ತಿದೆ ಅನ್ನಿಸುತ್ತೆ .
ಆದರೆ ಅಮೇರಿಕೆಯ ಈ ಆದ್ಯಕ್ಷ ಚುನಾವಣೆಗೆ ಸಂಬಂದ ಪಟ್ಟಂತೆ , ಯಾವ ಅಭ್ಯರ್ತಿ ಆಯ್ಕೆಯಾದರೆ , ಅದರಿಂದ ಬಾರತ ಮೇಲಾಗುವ ಪರಿಣಾಮಗಳು , ಈ ಅಬ್ಯರ್ಥಿಗಳ ಬಾರತ ಸಂಬಂದಿ(outsourcing , nuclear etc) ನಿಲುವು ಗಳು , ಇವುಗಳನ್ನು ತಿಳಿದು ಕೊಳ್ಳುವಾಸೆ. ಅದು ನಿಮ್ಮಿಂದಲೇ .
ಅಂಥದ್ದೊಂಧು ಲೇಖನ ಕ್ಕಾಗಿ ನಿಮ್ಮಿಂದ ಅಪೇಕ್ಷೆ ಇದೆ.

secondly, instead of cribbing against the negatives of this world, ನಿಮ್ಮ ಪಾಲು ಲೇಖನ ಗಳು ಒಳ್ಳೆಯ ವ್ಯಕ್ತಿತ್ವ ಗಳನ್ನು, ಒಳ್ಳೆಯ ಸಂಗತಿಗಳನ್ನು ಪರಿಚಯಿಸುವತ್ತ ಮುಖ ಮಾಡಿರುತ್ತವೆ. ಬ್ರಷ್ಟರ , ಲಂಚಕೊರರ , ಕೊಲೆಗಡುಕರ ವಿಷಯಗಳನ್ನೇ ಓದಿ ತಲೆ ಹಲಗಿರುವ ನಮ್ಮಂತವರಿಗೆ ಇದೊಂದು ಒಳ್ಳೆಯ ತಾಣ.

ನಿಮ್ಮಿಂದ ಲೇಖನ ಗಳು ಹೀಗೆ ಬರಲಿ .

#2 
Written By ullas on March 9th, 2008 @ 8:09 am

ತಮ್ಮ ಬಗ್ಗೆ ಕೇಳಿದ್ದೆ. ಆದರೆ ಓದಿರಲಿಲ್ಲ. ನಿಮ್ಮ ಲೇಖನ ನಿಮ್ಮನ್ನು ಸಾಕಷ್ಟು ಹತ್ತಿರದಿಂದ ಪರಿಚಯಿಸಿತು. ಈ ಲೇಖನದಲ್ಲಿ ಒಂದು ಅಪರೂಪದ ಶಕ್ತಿಯಿದೆ. ಒಂದು ಸಂಪೂರ್ಣ ಪ್ಯಾಕೇಜ್ ಇದೆ. ಹೀಗೇ ಬರೆಯುತ್ತಿರಿ; ಸದಾ ಬೆರೆಯುತ್ತಿರಿ…

ನಿಮ್ಮವ

ಪೂರ್ಣ ವಿ-ರಾಮ

#3 
Written By ಪೂರ್ಣ ವಿ-ರಾಮ on March 10th, 2008 @ 12:01 am

Add a Comment

required, use real name
required, will not be published
optional, your blog address