ಐಟಿ ಕ್ಷೇತ್ರಕ್ಕೆ ಬರಲಿದೆಯೆ ಕಷ್ಟದ ದಿನಗಳು?

This post was written by admin on March 20, 2008
Posted Under: Uncategorized

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಮಾರ್ಚ್ 28, 2008 ರ ಸಂಚಿಕೆಯಲ್ಲಿ ಈ ಲೇಖನ “ಐಟಿಗೆ ಬಂತು ಆಪತ್ತು” ಹೆಸರಿನಲ್ಲಿ ಪ್ರಕಟವಾಗಿದೆ.)

90 ರ ದಶಕದ ಆರಂಭದ ಸಮಯ ಅದು. ದೇಶದಲ್ಲಿ ಕಾಂಗ್ರೆಸ್ಸೇತರ ಸರ್ಕಾರಗಳ ಪ್ರಯೋಗ ಎರಡನೇ ಬಾರಿಗೂ ವಿಫಲವಾಗುತ್ತಿದ್ದ ಕಾಲಘಟ್ಟ. ಆ ಸಮಯದಲ್ಲಿ ಭಾರತ ಸರ್ಕಾರದ ಹಣಕಾಸು ಪರಿಸ್ಥಿತಿ ತೀರ ಹದಗೆಟ್ಟು ಚಂದ್ರಶೇಖರ್‌ರವರ ಸರ್ಕಾರ ಚಿನ್ನದ ರಿಸರ್ವ್ ಅನ್ನು ಅಡವಿಡಬೇಕಾಗಿ ಬಂತು. ಅದೇ ಸಮಯದಲ್ಲಿ ರಾಜಕೀಯ ಕಾರಣಗಳಿಗಾಗಿ ಆ ಸರ್ಕಾರ ಬಿದ್ದು ಹೋಯಿತು. ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ರಾಜೀವ್ ಗಾಂಧಿ ಶ್ರೀಲಂಕಾದ ತಮಿಳು ಭಯೋತ್ಪಾದಕರ ಬಾಂಬಿಗೆ ಬಲಿಯಾದರು. ಅದೇ ಅನುಕಂಪದ ಮೇಲೆ ಕಾಂಗ್ರೆಸ್ ಮೆಜಾರಿಟಿಯ ಹತ್ತಿರಕ್ಕೆ ತೆವಳಿಕೊಂಡಿತು. ಆಗ ಆಕಸ್ಮಿಕವಾಗಿ ಪ್ರಧಾನಿಯಾದವರು ನರಸಿಂಹರಾವ್. ಈಗಿನ ಪ್ರಧಾನಿ ಮನಮೋಹನ ಸಿಂಗರು ಆಗ ಭಾರತದ ಹಣಕಾಸು ಮಂತ್ರಿಯಾದರು. ದೇಶದ ಆರ್ಥಿಕ ಅಭಿವೃದ್ಧಿಗೆ ವಿದೇಶಿ ಸಹಾಯಮತ್ತು ವಿದೇಶಗಳ ಬಂಡವಾಳ ಬೇಕೆಬೇಕು ಎನ್ನುವ ಸ್ಥಿತಿಯಲ್ಲಿ ಮನಮೋಹನ ಸಿಂಗರು ಜಾಗತೀಕರಣದ ಪರವಾಗಿ ಸುಧಾರಣೆಗಳನ್ನು ತಂದರು. ವಿದೇಶಿ ಕಂಪನಿಗಳು ಭಾರತದಲ್ಲಿ ಕಾರ್ಖಾನೆಗಳನ್ನು ತೆರೆಯಲು, ವ್ಯವಹಾರ ಮಾಡಲು, ಮತ್ತಷ್ಟು ಸುಲಭವಾಗಿ ಭಾರತಕ್ಕೆ ಸಾಮಾನುಗಳನ್ನು ರಫ್ತು ಮಾಡಲು ಅನುವು ಮಾಡಿಕೊಟ್ಟರು. ಸಾಲ ಕೊಡುತ್ತಿದ್ದ ವಿಶ್ವಬ್ಯಾಂಕ್ ಆದೇಶದಂತೆ ನಷ್ಟದಲ್ಲಿದ್ದ ಅನೇಕ ಸಾರ್ವಜನಿಕ ಉದ್ದಿಮೆಗಳನ್ನು ಮುಚ್ಚಿದರು ಇಲ್ಲವೆ ಖರ್ಚು ಕಮ್ಮಿಯಾಗುವಂತೆ ನೋಡಿಕೊಂಡರು. ಒಟ್ಟಿನಲ್ಲಿ ದುಡ್ಡಿದ್ದ ಬೇರೆ ದೇಶದ ಶ್ರೀಮಂತರಿಗೆ ಮತ್ತು ಬಹುರಾಷ್ಟ್ರೀಯ ಕಂಪನಿಗಳಿಗೆ ಭಾರತದಲ್ಲಿ ದುಡ್ಡು ಹಾಕಿ ದುಡ್ಡು ತೆಗೆಯಲು ಸಾಧ್ಯವಿದೆ ಎನ್ನುವಂತಹ ವಾತಾವರಣ ನಿರ್ಮಿಸಿಕೊಟ್ಟರು.

ಮುಂದಿನ ಹಲವಾರು ವರ್ಷಗಳಲ್ಲಿ ಇಡೀ ದೇಶದ ಆರ್ಥಿಕ ಸ್ಥಿತಿಯೆ ಬದಲಾಗಿ ಹೋಯಿತು. ಲಕ್ಷಾಂತರ ಜನ ಇದ್ದ ಕೆಲಸ ಕಳೆದುಕೊಂಡರು. ಇನ್ನಷ್ಟು ಲಕ್ಷಾಂತರ ಜನಕ್ಕೆ ಹೊಸಹೊಸ ಉದ್ಯೋಗಗಳು ಸಿಕ್ಕವು. ಸಾಮಾನ್ಯ ರೈತರು ಕಂಗಾಲಾದರು. ಬುದ್ಧಿವಂತ ರೈತರು ಮತ್ತು ಸ್ಥಿತಿವಂತ ರೈತರು ರಫ್ತು ಮಾಡಬಹುದಾದ ವಾಣಿಜ್ಯ ಬೆಳೆಗಳಿಗೆ ಕೈಹಾಕಿ ಇನ್ನೂ ಸ್ಥಿತಿವಂತರಾದರು. ನೂರಾರು ಕಾರ್ಖಾನೆಗಳು, ಕಟ್ಟಡಗಳು ತಲೆಯೆತ್ತಿದವು. ಮೂಲಭೂತ ಸೌಕರ್ಯಗಳನ್ನು ಹೆಚ್ಚು ಮಾಡುವ ಈ ಕಾಮಗಾರಿಗಳಿಂದಾಗಿ ಲಕ್ಷಾಂತರ ನೇರ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾದವು. ಎಲ್ಲಾ ತರಹದ ಜನರಲ್ಲಿ ದುಡ್ಡು ಓಡಾಡಲಾರಂಭಿಸಿತು. ಶ್ರೀಮಂತರ ಕೈಯ್ಯಲ್ಲಿ ಇನ್ನೂ ಹೆಚ್ಚಿಗೆ ದುಡ್ಡು ಓಡಾಡಿತು. (ಆದರೆ ಭಾರತದ ಸಮಾಜ ಬಹಳ ದೊಡ್ಡ, ಸಂಕೀರ್ಣ ಸಮಾಜ. ಸಮಗ್ರವಾಗಿ, ಸಮತೋಲನವಾಗಿ, ಸಮಾನವಾಗಿ ಈ ಅಭಿವೃದ್ಧಿ ಆಗಲಿಲ್ಲ.)

ಆ ಸಮಯದಲ್ಲಿನ ಬೆಂಗಳೂರಿನ ಸುತ್ತಮುತ್ತಲ ಕತೆಯನ್ನೆ ತೆಗೆದುಕೊಳ್ಳೋಣ. ಉದಾರಿಕರಣದಿಂದಾಗಿ ಮತ್ತು ಆಗ ಭಾರತದಲ್ಲಿ ಬೆಳೆಯುತ್ತಿದ್ದ ಐಟಿ ಉದ್ಯಮದಿಂದಾಗಿ ಐಟಿ ಕಂಪನಿಗಳಿಗೆ ಬೆಂಗಳೂರಿನ ಸುತ್ತಮುತ್ತ ಎಲ್ಲೆಂದರಲ್ಲಿ ಕಟ್ಟಡಗಳು ಬೇಕಾಗಿದ್ದವು. ಅದು 1994 ರ ಸುಮಾರು. ಸಿಂಗಪುರ್ ಸರ್ಕಾರ ಮತ್ತು ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ವೈಟ್‌ಫೀಲ್ಡ್ ಹತ್ತಿರ ಐಟಿ ಪಾರ್ಕ್ ಕಟ್ಟಡದ ಕಾಮಗಾರಿ ಆರಂಭವಾಯಿತು. ಇನ್ನೂ ಅನೇಕ ಕಡೆ ಸ್ಥಳೀಯ ಶ್ರೀಮಂತರೆ ದೊಡ್ಡದೊಡ್ಡ ಕಟ್ಟಡಗಳನ್ನು ಕಟ್ಟಿ ಸಾಪ್ಟ್‌ವೇರ್ ಕಂಪನಿಗಳಿಗೆ ಬಾಡಿಗೆ ಕೊಡಲಾರಂಭಿಸಿದರು. ಶ್ರೀಮಂತರ ಕೈಯ್ಯಲ್ಲಿ ಮೊದಲೆ ಹೆಚ್ಚಿನ ದುಡ್ಡು ಓಡಾಡುತ್ತಿತ್ತು. ಆಗ ಇನ್ನೂ ಜಾಸ್ತಿಯಾಯಿತು. ಜೊತೆಗೆ ಆಗ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್‌ಗಳು ಜಾಸ್ತಿಯಾದರು. ಮನೆಗಳು, ಫ್ಲಾಟ್‌ಗಳು ಇನ್ನೂ ಹೆಚ್ಚಿಗೆ ಬೇಕಾಗಿ ಬಂತು. ಸರಿ, ಶುರುವಾಯಿತು ರಿಯಲ್ ಎಸ್ಟೇಟ್ ಎಂಬ “ಗೋಲ್ಡ್ ರಷ್.” ವೈಟ್‌ಫೀಲ್ಡ್‌ನ ಹತ್ತಿರ ಒಂದು ಎಕರೆ ಜಮೀನು ಕೋಟಿ ರೂಪಾಯಿಗೆ ಕಮ್ಮಿ ಇಲ್ಲದಂತೆ ಮಾರಾಟವಾಯಿತು. ಎಲೆಕ್ಟ್ರಾನಿಕ್ ಸಿಟಿಯ ಹತ್ತಿರ ಎಕರೆಗೆ ಒಂದೆರಡು ಲಕ್ಷ ಮಾತ್ರ ಇದ್ದ ಗದ್ದೆಗಳೆಲ್ಲ ರಾತ್ರೋರಾತ್ರಿ ನಾಲ್ಕೈದು ಲಕ್ಷಕ್ಕೆ ಏರಿಬಿಟ್ಟಿತು. ಇವೆಲ್ಲ ಕೈಬದಲಾಯಿಸಿಕೊಳ್ಳುವ ವ್ಯವಹಾರಗಳು. ಹಾಗಾಗಿ ಮುಂದಿನ ವರ್ಷದಷ್ಟೊತ್ತಿಗೆ ಬೆಂಗಳೂರಿನ ಸುತ್ತಮುತ್ತ ಎಕರೆಗೆ ಹತ್ತಿಪ್ಪತ್ತು ಲಕ್ಷ ಬೆಲೆಯಾಗಿಬಿಟ್ಟಿತು. ಬೆಂಗಳೂರಿನಲ್ಲಿ ಸೈಟುಗಳ ಕತೆಯೂ ಇದೇ ಆಯಿತು.

ಆಗ ಕರ್ನಾಟಕದಲ್ಲಿ ದೇವೆಗೌಡರು ಮುಖ್ಯಮಂತ್ರಿ. ಬೆಂಗಳೂರಿನಲ್ಲಿ ಎಲ್ಲಾ ತರಹದ ಆರ್ಥಿಕ ಚಟುವಟಿಕೆ ಉತ್ತುಂಗದಲ್ಲಿದ್ದ ಕಾಲ. ತಮ್ಮ ಅವಧಿ ಮುಗಿದ ನಂತರ ನಡೆದ 1996 ರ ಚುನಾವಣೆಯಲ್ಲಿ ನರಸಿಂಹ್‌ರಾವ್‌ರ ಸರ್ಕಾರ ಬಿದ್ದು ಹೋಯಿತು. ಕರ್ನಾಟಕದಲ್ಲಿ ಜನತಾದಳಕ್ಕೆ 16 ಲೋಕಸಭಾ ಸ್ಥಾನ ಗಳಿಸಿಕೊಟ್ಟ ದೇವೇಗೌಡರು ಆಕಸ್ಮಿಕವಾಗಿ ಎಂಬಂತೆ ದೇಶದ ಪ್ರಧಾನಿಯಾದರು. ಅದೇ ಸಮಯದಲ್ಲಿ ಮೇಲೆ ಹೋಗಿದ್ದು ಕೆಳಕ್ಕೆ ಬರಲೇಬೇಕು ಎಂಬಂತೆ ದೇಶದಲ್ಲಿನ ಆರ್ಥಿಕ ಚಟುವಟಿಕೆ ಕಮ್ಮಿಯಾಗಲಾರಂಭಿಸಿತು. ರಿಯಲ್ ಎಸ್ಟೇಟ್‌ನಲ್ಲಿ ದುಡ್ಡು ಹಾಕಿದ ಜನ ಭೀತಿಗೊಂಡು ಸಿಕ್ಕಷ್ಟು ಬೆಲೆಗೆ ಜಮೀನುಗಳನ್ನು ಕೈತೊಳೆದುಕೊಳ್ಳಲು ಆರಂಭಿಸಿಬಿಟ್ಟರು. ಹೀಗೆ ದುಡ್ಡು ಕಳೆದುಕೊಂಡ, ದಲ್ಲಾಳಿ ಕಮಿಷನ್ ಕಮ್ಮಿಯಾದ ಬೆಂಗಳೂರಿನ ಸುತ್ತಮುತ್ತಲಿನ ಒಂದಷ್ಟು ಜನ ಇದೆಲ್ಲ ದೇವೆಗೌಡರ ಕಾಲಗುಣ ಎಂದರು. ಸೀತಾರಾಮ್ ಕೇಸರಿ ದೇವೇಗೌಡರ ಸರ್ಕಾರಕ್ಕೆ ಬೆಂಬಲ ವಾಪಸು ಪಡೆದುಕೊಂಡ ದಿನ ನಾನು ಕೋಲಾರ ಜಿಲ್ಲೆಯ ಚಿಂತಾಮಣಿಯಲ್ಲಿದ್ದೆ. ಅಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಅಂದು ಅಕ್ಷರಶಃ ಹಬ್ಬ ಆಚರಿಸಿದರು. ಪಟಾಕಿ ಹೊಡೆದರು. “ನಾನು ಇಳಿದಾಗ ಇಲ್ಲಿಯ ಜನ ಚಪ್ಪಾಳೆ ತಟ್ಟಿದರು, ಹೊಟ್ಟೆಗೆ ಹಾಲು ಕುಡಿದರು,” ಎಂಬಂತೆ ಹೇಳುವ ದೇವೇಗೌಡರ ಮಾತಿನಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ. ಅಂದು ಆಗಿದ್ದು ಹಾಗೆಯೆ. ಆದರೆ ಅದಕ್ಕೆ ನಾನಾ ಮುಖಗಳಿವೆ. ಅಷ್ಟೊತ್ತಿಗೆ ರಾಜಕಾರಣಿಗಳು ರಿಯಲ್ ಎಸ್ಟೇಟ್ ದಲ್ಲಾಳಿಗಳೂ ಆಗಿದ್ದರು!

ಮುಂದಿನ ಮೂರ್ನಾಲ್ಕು ವರ್ಷಗಳ ಕಾಲ ಐಟಿ ಮತ್ತು ಗಾರ್ಮೆಂಟ್ ಇಂಡಸ್ಟ್ರಿ ಬಿಟ್ಟರೆ ಇನ್ಯಾವುದೂ ಬೆಂಗಳೂರಿನಲ್ಲಿ ಸರಿಯಾಗಿ ಬೆಳೆಯಲಿಲ್ಲ. ವೈಟ್‌ಫೀಲ್ಡ್ ಹತ್ತಿರ ಕೋಟಿಗೆ ಜಮೀನು ಕೊಂಡವರು ಐದುಹತ್ತು ಲಕ್ಷ ಸಿಕ್ಕರೂ ಸಾಕೆಂದು ಮಿಕಕ್ಕೆ ಬಲೆ ಹಾಕಿಕೊಂಡು ಕುಳಿತರು. ಮಾರಾಟದ ಅಗ್ರಿಮೆಂಟ್ ಬರೆದುಕೊಟ್ಟು ಅಡ್ವಾನ್ಸ್ ತೆಗೆದುಕೊಂಡ ರೈತನಿಗೆ ಜಮೀನೂ ಉಳಿಯಿತು. ಅಡ್ವಾನ್ಸೂ ಉಳಿಯಿತು. ರಿಜಿಸ್ಟ್ರೇಷನ್ ಮಾಡಿಕೊಳ್ಳಲು ಬೆಂಗಳೂರಿನ, ನಾರ್ಥ್ ಇಂಡಿಯಾದ, ಆಂಧ್ರದ ಶ್ರೀಮಂತರು ಅತ್ತಕಡೆ ತಲೆಯೇ ಹಾಕಲಿಲ್ಲ. ಒಳ್ಳೆಯ ದುಡ್ಡಿಗೆ ಮಾರಿಕೊಂಡ ರೈತ ಅದನ್ನು ಮತ್ತೆಲ್ಲೊ ಒಳ್ಳೆಯ ಕಡೆ ಹೂಡಿ ಬಚಾವಾದ. ಒಂದಷ್ಟು ಜನ ಚೆಂದದ ಮನೆ ಕಟ್ಟಿಕೊಂಡರು. ಮತ್ತೊಂದಷ್ಟು ಜನ ತಾವೆ ರಿಯಲ್ ಎಸ್ಟೇಟ್‌ಗೆ ಇಳಿದು ಎಲ್ಲವನ್ನೂ ಕಳೆದುಕೊಂಡರು. ಬಹಳಷ್ಟು ಮನೆಯ ಗಂಡುಮಕ್ಕಳು ಬೆಂಗಳೂರು ಮತ್ತು ಸುತ್ತಮುತ್ತಲ ಬಾರುಗಳನ್ನು, ಢಾಭಾಗಳನ್ನು ಉದ್ದಾರ ಮಾಡಿದರು! ಮದುವೆಗಳು ವೈಭವೋಪೇತವಾಗಿ ಮಾಡಲ್ಪಟ್ಟವು.

ಅದು 2000 ರ ಕೊನೆಕೊನೆಯ ತಿಂಗಳು. ನಾನಾಗ ಬೆಂಗಳೂರಿನ ಮೊಟೊರೊಲದಲ್ಲಿ ಸಾಪ್ಟ್‌ವೇರ್ ಇಂಜಿನಿಯರ್ ಆಗಿದ್ದೆ. ಆಗ ಮೊಟೊರೊಲದ ಒಟ್ಟು ಜಾಗತಿಕ ಉದ್ಯೋಗಿಗಳ ಸಂಖ್ಯೆ ಸುಮಾರು ಒಂದೂಕಾಲು ಲಕ್ಷ ಇತ್ತು. 2001 ರ ಶುರುವಿನಲ್ಲಿ ಅಮೆರಿಕದಲ್ಲಿ ಇಂಟರ್‌ನೆಟ್ ಕಂಪನಿಗಳ ಬಂಡವಾಳ ಬಯಲಾಗುತ್ತ ಹೋಗಿ ರಾತ್ರೋರಾತ್ರಿ ಕಂಪನಿಗಳು ಬಾಗಿಲು ಮುಚ್ಚಿಕೊಳ್ಳುವುದು ಆರಂಭವಾಯಿತು. ನನಗೆ ನೆನಪಿರುವಂತೆ ಬಹುಶಃ ಸುಮಾರು ಆರು ತಿಂಗಳ ಅವಧಿಯಲ್ಲಿಯೆ ಮೊಟೊರೊಲ ಸುಮಾರು 40 ಸಾವಿರ ಜನರನ್ನು ಕೆಲಸದಿಂದ ತೆಗೆಯಿತು. ಅಮೆರಿಕದ ಸಿಲಿಕಾನ್ ಕಣಿವೆಯಲ್ಲಿನ ಅನೇಕ ಜನ (ಎನ್ನಾರೈಗಳನ್ನೂ ಒಳಗೊಂಡು) ಕೆಲಸ ಕಳೆದುಕೊಂಡರು. ಷೇರುಮಾರುಕಟ್ಟೆಯಲ್ಲಿ ಹೂಡಿದ್ದ ತಮ್ಮ ಜೀವಮಾನದ ಸೇವಿಂಗ್ಸ್ ಕಳೆದುಕೊಂಡರು. ಕೆಲಸವಿಲ್ಲದೆ, ಆದಾಯವಿಲ್ಲದೆ, ಮನೆಯ ಸಾಲದ ಕಂತು ಕಟ್ಟಲಾರದೆ ಮನೆಗಳನ್ನು ಕಳೆದುಕೊಂಡರು. ಸಾವಿರಾರು ಎನ್ನಾರೈಗಳು ಬೆಂಗಳೂರಿನ ವಿಮಾನ ಹತ್ತಿದರು.

ಬೆಂಗಳೂರಿನ ರಿಯಲ್ ಎಸ್ಟೇಟ್ ಅಷ್ಟೆಲ್ಲ ಪ್ರಪಾತಕ್ಕೆ ಹೋಗುತ್ತಿದ್ದರೂ ಅಲ್ಲಿಯತನಕವೂ ಬೆಂಗಳೂರಿನ ಐಟಿ ಮುನ್ನುಗ್ಗುತ್ತಲೆ ಇತ್ತು. ಇನ್ಫೋಸಿಸ್, ವಿಪ್ರೊ, ಟಿಸಿಎಸ್, ಮುಂತಾದ ಅನೇಕ ಸಾಪ್ಟ್‌ವೇರ್ ಕಂಪನಿಗಳು ಪ್ರತಿದಿನ ಅಕ್ಷರಶಃ ಹತ್ತಿಪ್ಪತ್ತರಿಂದ ಹಿಡಿದು ನೂರರ ತನಕವೂ ಜನರನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತಿದ್ದರು. ಆದರೆ ಯಾವಾಗ ಅಮೆರಿಕದ ಸಿಲಿಕಾನ್ ಕಣಿವೆಯಲ್ಲಿ ಸಣ್ಣ ನೆಗಡಿ ಆಯಿತೊ ಇಲ್ಲಿ ಇವರು ಸೀನಲಾರಂಭಿಸಿದರು. 2001 ರ ಮೇ ತಿಂಗಳ ಸುಮಾರಿನಲ್ಲಿ ಬೆಂಗಳೂರಿನ ಒಂದೆರಡು ಅಮೆರಿಕದ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಬೆಳಿಗ್ಗೆ ಕೆಲಸಕ್ಕೆ ಹೋದ ಸಾಫ್ಟ್‌ವೇರ್ ಇಂಜಿನಿಯರ್‌ಗಳಿಗೆ ಒಳಗೆ ಕಾಲಿಡಲಾಗಲಿಲ್ಲ. ಅವರ ಬ್ಯಾಡ್ಜ್‌ಗಳು ಕೆಲಸ ಮಾಡಲಿಲ್ಲ. ಬಾಗಿಲು ತೆರೆಯಲಿಲ್ಲ. ಒಂದೆರಡು ಗಂಟೆಗಳಲ್ಲಿ ತಮ್ಮನ್ನು ಕೆಲಸದಿಂದ ತೆಗೆದಿರುವ ಪತ್ರ ಕೈಯ್ಯಲ್ಲಿ ಹಿಡಿದುಕೊಂಡು ಅವರು ಮನೆಯ ಕಡೆ ಹೊರಡಬೇಕಾಯಿತು. ಮೊಟ್ಟಮೊದಲ ಸಲ ಬೆಂಗಳೂರಿನ ಐಟಿ ಹುಡುಗರ ಎದೆಯಲ್ಲಿ ಭಯದ ಲಬ್‌ಡಬ್ ಆರಂಭವಾಯಿತು.

ಅದೇ ಸುಮಾರಿನಲ್ಲಿ ಕಾಲೇಜುಗಳ ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ‘ಇಂತಹ ದಿನಕ್ಕೆ ಬಂದು ನಮ್ಮಲ್ಲಿ ಕೆಲಸಕ್ಕೆ ಸೇರಿಕೊಳ್ಳಿ’ ಎಂಬ ಆಫರ್ ಲೆಟರ್ ಕೊಟ್ಟಿದ್ದ ವಿಪ್ರೊ, ಇನ್ಫೋಸಿಸ್ ಮುಂತಾದ ಕಂಪನಿಗಳು, ‘ಈಗ ಬೇಡ, ಇನ್ನೊಂದಾರು ತಿಂಗಳು ಬಿಟ್ಟುಕೊಂಡು ಬನ್ನಿ’ ಎಂದವು. ಮತ್ತೊಂದಷ್ಟು ಕಂಪನಿಗಳು, ‘ಅನಿವಾರ್ಯ ಕಾರಣಗಳಿಗಾಗಿ ನಿಮ್ಮನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗುತ್ತಿಲ್ಲ; ಆಫರ್ ಅನ್ನು ಹಿಂತೆಗೆದುಕೊಳ್ಳುತ್ತಿದ್ದೇವೆ’ ಎಂಬ ವಿಷಾದದ ಪತ್ರಗಳನ್ನು ಕಳುಹಿಸಿದವು. ಮತ್ತೊಂದಷ್ಟು ಕಂಪನಿಗಳು ವರ್ಷಕ್ಕೆ ನಾಲ್ಕು ಲಕ್ಷ ಕೊಡುತ್ತೇವೆ ಎಂದಿದ್ದ ಕಡೆ ಈಗ ಕೇವಲ ಐವತ್ತು ಸಾವಿರ ಸ್ಟೈಪೆಂಡ್ ಕೊಡುತ್ತೇವೆ ಎಂದವು.

ಆದರೆ, ಇವೆಲ್ಲ ಆದ ಆರೇಳು ತಿಂಗಳಿನಲ್ಲಿಯೆ ವರ್ಲ್ಡ್ ಟ್ರೇಡ್ ಸೆಂಟರ್ ಬಿತ್ತು. ಅಮೆರಿಕ ಸರ್ಕಾರ ತನ್ನ ಆರ್ಥಿಕ ವ್ಯವಸ್ಥೆ ಬೀಳದೆ ಇರಲೆಂದು ಲಕ್ಷಾಂತರ ಕೋಟಿಗಳ ದುಡ್ಡನ್ನು ಹರಿಯಬಿಟ್ಟಿತು. ಸಾಲದ ಮೇಲಿನ ಬಡ್ಡಿ ಕಮ್ಮಿ ಮಾಡಿತು. ತಮ್ಮ ಷೇರುಗಳ ಬೆಲೆ ಹೆಚ್ಚಾಗಲು ಅಮೆರಿಕದ ಕಂಪನಿಗಳು “ಖರ್ಚು ಕಮ್ಮಿ-ಲಾಭ ಹೆಚ್ಚು” ಎಂಬ ಮಂತ್ರದ ಹಾದಿ ಹಿಡಿದವು. ಆ ಮಂತ್ರದ ಒಂದು ತಂತ್ರವೆ ಕೆಲವಾರು ಖರ್ಚಿನ ಕೆಲಸಗಳನ್ನು ಹೊರಗುತ್ತಿಗೆ ನೀಡುವುದು. ಇನ್ನೂ ಹೆಚ್ಚಿನ ಸಾಫ್ಟ್‌ವೇರ್ ಕೆಲಸಗಳು ಭಾರತಕ್ಕೆ, ಹಾರ್ಡ್‌ವೇರ್ ಉತ್ಪಾದನೆ ಚೀನಾ-ತೈವಾನ್-ಮಲೇಷಿಯಕ್ಕೆ ಮುಖ ಮಾಡಿದವು. ಒಂದು ವರ್ಷಕ್ಕಿಂತ ಕಮ್ಮಿ ಅವಧಿಯಲ್ಲಿ ಮತ್ತೆ ಬೆಂಗಳೂರಿನ ಸಾಫ್ಟ್‌ವೇರ್ ಕಂಪನಿಗಳು ಲೇಯಾಫ್ ಎನ್ನುವ ಪದವನ್ನೆ ಮರೆತುಬಿಡುವಷ್ಟು ವೇಗವಾಗಿ ನೌಕರರನ್ನು ಕೆಲಸಕ್ಕೆ ತೆಗೆದುಕೊಳ್ಳಲು ಆರಂಭಿಸಿದವು. ಈ ಸಾರಿ ಕಾಲ್‌ಸೆಂಟರ್ ಉದ್ಯಮದಿಂದಾಗಿ ಇಂಗ್ಲಿಷ್ ಬಲ್ಲ ಇಂಜಿನಿಯರೇತರರಿಗೂ ಕೆಲಸಗಳು ತೆರೆದುಕೊಂಡವು. ಬೆಂಗಳೂರು ಎಂಬ ಒಂದೇ ನಗರ ಜಾಗತಿಕವಾಗಿ ಇಡೀ ಭಾರತದ ಇಮೇಜನ್ನೆ ಬದಲಾಯಿಸಿಬಿಟ್ಟಿತು.


ವಿಡಿಯೊ ಪ್ರಸ್ತುತಿ ಭಾಗ – 1

ಹೆಚ್ಚಿದ ಬೆಂಗಳೂರಿನ ಆಕರ್ಷಣೆ, ಕಮ್ಮಿಯಾದ ನಿರುದ್ಯೋಗ, ಮೊದಲಿಗಿಂತ ಹತ್ತಿಪ್ಪತ್ತು ಪಟ್ಟು ಹೆಚ್ಚಿಗೆ- ದಿನಕ್ಕೆ ಅಕ್ಷರಶಃ ನೂರಿನ್ನೂರು ಜನರನ್ನು ಕೆಲಸಕ್ಕೆ ತೆಗೆದುಕೊಳ್ಳಲಾರಂಭಿಸಿದ ಟಿಸಿಎಸ್, ವಿಪ್ರೊ, ಇನ್ಫೋಸಿಸ್, ಸತ್ಯಮ್, ಐಬಿಎಮ್, ಎಚ್‌ಪಿ, ಇಡಿಎಸ್, ಇತ್ಯಾದಿಗಳು, ಏರಿಏರಿ ಹೋದ ಷೇರು ಮಾರುಕಟ್ಟೆ, ರಾತ್ರೋರಾತ್ರಿ ಸಾವಿರ ಹಾಕಿ ಲಕ್ಷ ಮಾಡಿಕೊಂಡ ಜನ, ಮೊದಲೆಲ್ಲ ಸಂಬಳ ಕೊಡಲೆ ಒದ್ದಾಡುತ್ತಿದ್ದ ಸರ್ಕಾರ ದುಡ್ಡು ಹೆಚ್ಚಾಗಿ ಸಿಕ್ಕಸಿಕ್ಕ ಮಠಗಳಿಗೆಲ್ಲ ದಾನ ಮಾಡುವಷ್ಟು ಆದಾಯ, ಇತ್ಯಾದಿ ಇತ್ಯಾದಿಯಿಂದಾಗಿ ಬೆಂಗಳೂರಿನ ರಿಯಲ್ ಎಸ್ಟೇಟ್ ಕಳೆದ ನಾಲ್ಕೈದು ವರ್ಷಗಳಿಂದ ಮತ್ತೆ ಚಿಗಿತುಕೊಂಡು ಬಿಟ್ಟಿತು. ಒಂದೇ ವರ್ಷದಲ್ಲಿ ಡಬಲ್, ಟ್ರಿಪಲ್, ಮಲ್ಟಿಪಲ್ ಏರಿಕೆ! ನಾಲ್ಕು ವರ್ಷದ ಹಿಂದೆ ಐದು ಲಕ್ಷಕ್ಕೆ ಕೇಳುವವರಿಲ್ಲದ ಜಮೀನು ಈಗ ಎರಡು ಕೋಟಿಗೆ! ಬೆಂಗಳೂರಿನ ಎಚ್.ಎಸ್.ಆರ್. ಲೇಔಟಿನಲ್ಲಿ ಹದಿನೈದು ಲಕ್ಷಕ್ಕೆ ಮಾರಾಟವಾದ ಸೈಟು ನಾಲ್ಕೆ ವರ್ಷಗಳಲ್ಲಿ ಕೋಟಿಗೆ ಕಮ್ಮಿ ಇಲ್ಲ! ತಿಂಗಳಿಗೆ ಕೇವಲ ಹತ್ತು ಸಾವಿರ ಕಂತು ಕಟ್ಟಿ ತೆಗೆದುಕೊಂಡ ಅಪಾರ್ಟ್‌ಮೆಂಟ್ ಹತ್ತಿಪ್ಪತ್ತು ಕಂತು ಕಟ್ಟುವಷ್ಟರಲ್ಲಿ ಹತ್ತಿಪ್ಪತ್ತು ಲಕ್ಷ ರೂಪಾಯಿ ಲಾಭಕ್ಕೆ ಮಾರಾಟ! ಜನ ಮರುಳೊ, ಜಾತ್ರೆ ಮರುಳೊ? ಹೌದು ಮತ್ತು ಇಲ್ಲ. ಅಷ್ಟಿಷ್ಟು ದುಡ್ಡು ಕೂಡಿಟ್ಟುಕೊಂಡವರಿಗೆ ಮನೆ ಬೇಕು; ಇನ್ನೂ ಹೆಚ್ಚಿನ ದುಡ್ಡು ಇರುವವರಿಗೆ ತಮ್ಮ ದುಡ್ಡು ಇನ್ನಷ್ಟು ದುಡಿಯಬೇಕು. ಅದು ರಿಯಲ್ ಎಸ್ಟೇಟ್ ಆದರೂ ಆಗಿರಬಹುದು, ಷೇರು ಮಾರುಕಟ್ಟೆ ಆದರೂ ಆಗಿರಬಹುದು.

ಇತಿಹಾಸ ಪುನರಾವರ್ತನೆ ಆಗಲಿದೆ !?

ಈಗಿನ ಪರಿಸ್ಥಿತಿ ಹೇಗಿದೆ, ಅಂದಿರಾ? ರಿಯಲ್ ಎಸ್ಟೇಟ್ ಮಾರುಕಟ್ಟೆಯ ಏರಿಳಿತದಂತೆಯೆ ಮೇಲೆ ಏರುತ್ತಿದ್ದ ಭಾರತದ ಐಟಿ ಇಂಡಸ್ಟ್ರಿಯ ರೋಲರ್ ಕೋಸ್ಟರ್ ಇಷ್ಟರಲ್ಲಿಯೆ ಕೆಳಗೆ ಬರಲಿರುವ ಸೂಚನೆಗಳು ಕಾಣಿಸುತ್ತಿವೆ. ಭಾರತದ ಬಹುತೇಕ ಐಟಿ ಕಂಪನಿಗಳು ತಮ್ಮದೆ ಆದ ಉತ್ಪನ್ನಗಳನ್ನು ಹೊಂದಿಲ್ಲ. ಇನ್ನೊಬ್ಬರ ಉತ್ಪನ್ನ ಅಭಿವೃದ್ಧಿ ಪಡಿಸಲು ಬೇಕಾದ ಮಾನವ ಸಂಪನ್ಮೂಲ ಒದಗಿಸುವ ಒಂದು ರೀತಿಯ ದಲ್ಲಾಳಿ ಕೆಲಸ ಇವರದು. ಈಗ ಬೇಕಾದಷ್ಟು ಬೇಡಿಕೆ ಇರುವುದರಿಂದ ಬೇರೆಯವರು ಕೇಳಿದಾಗ ನಮ್ಮಲ್ಲಿ ಜನ ಇರಲಿ ಎಂದು ತಮ್ಮ ಅಗತ್ಯಕ್ಕಿಂತ ಹೆಚ್ಚಿನ ಜನರನ್ನು ಕೆಲಸಕ್ಕೆ ತೆಗೆದುಕೊಂಡಿರುತ್ತಾರೆ. ಟಿಸಿಎಸ್, ವಿಪ್ರೊ, ಇನ್ಫೋಸಿಸ್‌ನಲ್ಲಿ ಕೆಲಸ ಮಾಡುತ್ತಿರುವ ಎಲ್ಲರೂ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡುತ್ತಿರುತ್ತಾರೆ ಎನ್ನುವಂತಿಲ್ಲ. ಒಮ್ಮೊಮ್ಮೆ ಸುಮಾರು ಕಾಲುಭಾಗ ಇಂಜಿನಿಯರುಗಳು ಬರಲಿರುವ ಕೆಲಸಕ್ಕೆ ಕಾಯುತ್ತಿರುತ್ತಾರೆ. ಹಾಗೆ ಕಾಯುತ್ತಿರುವವರನ್ನು ಬೆಂಚ್ ಮೇಲೆ ಇರುವವರು ಎನ್ನುತ್ತಾರೆ. ಇಷ್ಟು ದಿನ ಎಲ್ಲವೂ ಚೆನ್ನಾಗಿಯೆ ನಡೆಯುತ್ತಿತ್ತು. ನೌಕರರು ಹೆಚ್ಚು ಇದ್ದಷ್ಟೂ ಅವರಿಗೆ ಬರಲಿರುವ ಆರ್ಡರ್‌ಗಳು ಮತ್ತು ಲಾಭಾಂಶ ಜಾಸ್ತಿಯೆ ಇರುತ್ತಿದ್ದವು. ಆದರೆ ಅಮೆರಿಕದಲ್ಲಿನ ಹಾಲಿ ಆರ್ಥಿಕ ಹಿಂಜರಿತ ಮತ್ತು ಡಾಲರ್ ಎದುರಿನ ರೂಪಾಯಿ ಬೆಲೆ ಏರಿಕೆ ಈ ಪರಿಸ್ಥಿತಿಯನ್ನು ಬದಲಾಯಿಸುತ್ತಿದೆ.

ಇದರ ಜೊತೆಗೆ ನಮ್ಮಲ್ಲಿನ ಸಾಪ್ಟ್‌ವೇರ್ ಕಂಪನಿಗಳ ಮೇಲೆ ಷೇರು ಮಾರುಕಟ್ಟೆಯ ಒತ್ತಡವೂ ಈಗ ಹೆಚ್ಚಾಗುತ್ತಿದೆ. ಇವತ್ತು ಇನ್ಫೋಸಿಸ್‌ನ ಷೇರು ಬೆಲೆ ಮೂರು ವರ್ಷದ ಹಿಂದೆ ಎಷ್ಟಿತ್ತೊ ಅಲ್ಲಿಗೆ ಹಿಮ್ಮುಖವಾಗಿ ಬಂದು ನಿಂತಿದೆ. ವಿಪ್ರೊದರ ಕತೆಯೂ ಅದೆ. ಟಿಸಿಎಸ್‌ನ ಕತೆಯೂ ಅದೆ. ಆದರೆ ಇದೇ ಸಮಯದಲ್ಲಿ ಭಾರತದ ಷೇರು ಮಾರುಕಟ್ಟೆ ಕಳೆದ ಆರು ತಿಂಗಳಿನಲ್ಲಿ ಎಷ್ಟೆಲ್ಲ “ರಕ್ತದೋಕುಳಿ” ಗಳನ್ನು ಕಂಡರೂ ಈಗಲೂ ಅದು ಆರು ತಿಂಗಳ ಹಿಂದೆ ಯಾವ ಏರುಮಟ್ಟದಲ್ಲಿತ್ತೊ ಅದೆ ಮಟ್ಟದಲ್ಲಿದೆ. ಅಂದರೆ, ಭಾರತದ ಷೇರು ಮಾರುಕಟ್ಟೆಯಲ್ಲಿ ಇವತ್ತು ಇತರೆ ಉದ್ದಿಮೆಗಳ ಸ್ಟಾಕ್‌ಗಳಷ್ಟು ಚೆನ್ನಾಗಿ ಐಟಿ ಕಂಪನಿಗಳ ಸ್ಟಾಕ್‌ಗಳು ಪರ್ಫಾರ್ಮ್ ಮಾಡುತ್ತಿಲ್ಲ. ಹಾಗಾಗಿ, ಅವುಗಳ ಮೇಲೆ ಬಂಡವಾಳ ಹೂಡಿರುವ Institutional investor ಗಳು ಆದಷ್ಟೂ “ಕಮ್ಮಿ ಖರ್ಚು-ಹೆಚ್ಚಿನ ಆದಾಯ-ಇನ್ನೂ ಹೆಚ್ಚಿನ ಲಾಭ” ತೋರಿಸಲು ಅವುಗಳ ಮೇಲೆ ಒತ್ತಡ ಹಾಕುತ್ತಿರುತ್ತಾರೆ. ಪ್ರತಿ ಷೇರಿಗೂ ಲಾಭದ ಪ್ರಮಾಣ ಪ್ರತಿ ತ್ರೈಮಾಸಿಕಕ್ಕೂ ಜಾಸ್ತಿ ಆದರೆ ಮಾತ್ರ ಈ ಕಂಪನಿಗಳ ಷೇರು ಬೆಲೆಯೂ ಜಾಸ್ತಿಯಾಗುತ್ತದೆ. ಕೇವಲ ಆದಾಯ ಹೆಚ್ಚಿ, “ವಾವ್” ಎನ್ನುವಷ್ಟು ಪ್ರಮಾಣದ ಲಾಭಾಂಶ ತೋರಿಸದಿದ್ದರೆ ಇವರು ಒಂದೇ ದಿನ ಲಕ್ಷಾಂತರ ಸ್ಟಾಕ್‌ಗಳನ್ನು ಡಂಪ್ ಮಾಡಿ, “ವಾವ್” ಎನ್ನುವಂತಹ ಮತ್ತಿನ್ನೆಂತಹುದೊ ಗೆಲ್ಲುವ ಎತ್ತಿನ ಬಾಲ ಹಿಡಿಯುತ್ತಾರೆ. ಇದು ವ್ಯವಹಾರ. ಯಾವುದೆ ನಿಷ್ಠೆ, ಭಾವನೆ, ಹುಸಿಆಶಾವಾದಗಳಿಗೆ ಇಲ್ಲಿ ಜಾಗವಿಲ್ಲ.

ಅಮೆರಿಕದಲ್ಲಿಯ ಗೃಹಸಾಲಗಳ ಫಜೀತಿ, ಇಳಿಯುತ್ತಿರುವ ಡಾಲರ್ ಮೌಲ್ಯ, ಹಿಂಜರಿಕೆಯಲ್ಲಿರುವ ಆರ್ಥಿಕ ಪರಿಸ್ಥಿತಿ, ಮುಂತಾದುವುಗಳಿಂದಾಗಿ ಇನ್ನು ಮೇಲೆ ಇಲ್ಲಿಂದ ಅಲ್ಲಿಗೆ ಬರಲಿರುವ ಆರ್ಡರ್‌ಗಳೂ ಕಮ್ಮಿಯಾಗಲಿವೆ. ಈಗಾಗಲೆ ಅಂತಹವು ಕೆಲವು ಆಗಿವೆ. ಈ ಪರಿಸ್ಥಿತಿಯಲ್ಲಿ ಭಾರತದ ಐಟಿ ಕಂಪನಿಗಳ ಆದಾಯ ಎರಡಂಕಿಯ ಪ್ರಗತಿ ಕಾಣುವುದು ಕಷ್ಟವಾಗಬಹುದು. ಹಾಗಾಗಿ ಈಗ ಅವರು ಮುಂಬಯಿಯ ದಲಾಲ್ ರಸ್ತೆಯನ್ನು ತೃಪ್ತಿಪಡಿಸಲು ಮಾಡಬಹುದಾದ ಕೆಲಸ ಎಂದರೆ ಆದಷ್ಟೂ ತಮ್ಮ ಖರ್ಚುಗಳನ್ನು ಕಮ್ಮಿ ಮಾಡಿಕೊಳ್ಳುವುದು. ಮೊದಲನೆಯದಾಗಿ, ನೌಕರರಿಗೆ ಕೊಡುತ್ತಿರುವ ಕೆಲವು ಸವಲತ್ತುಗಳನ್ನು ಮತ್ತು ಬೋನಸ್ ಅನ್ನು ಕಮ್ಮಿ ಮಾಡುವುದು. ಎರಡನೆಯದಾಗಿ, ಅಗತ್ಯವಿಲ್ಲದಾಗ ಜನರನ್ನು ಕೆಲಸಕ್ಕೆ ತೆಗೆದುಕೊಳ್ಳದೆ ಇರುವುದು. ಅಂತಿಮವಾಗಿ, ಬೆಂಚ್ ಮೇಲೆ ಇರುವವರನ್ನು ಲೇಯಾಫ್ ಮಾಡಿ ಮನೆಗೆ ಕಳಿಸುವುದು. (ಈಗಾಗಲೆ ಕಾಲೇಜು ಕ್ಯಾಂಪಸ್‌ಗಳ ಸಂದರ್ಶನ ಇಳಿಮುಖವಾಗಿದೆ. ಕೆಲವು ಕಂಪನಿಗಳು ಈ ವರ್ಷ ಒಂದೆರಡು ಐಐಟಿಗಳತ್ತ ತಲೆಯನ್ನೆ ಹಾಕಿಲ್ಲ. ಮತ್ತೆ ಕೆಲವು ಕಂಪನಿಗಳು ಎರಡು-ಮೂರು ತಿಂಗಳು ನಿಧಾನವಾಗಿ ಕೆಲಸಕ್ಕೆ ಸೇರಿ ಎನ್ನುತ್ತಿವೆಯಂತೆ.)

2002 ರಲ್ಲಿ ಕರ್ನಾಟಕ ಸರ್ಕಾರ ನಷ್ಟದಲ್ಲಿದ್ದ ತನ್ನ ಸಾರ್ವಜನಿಕ ಉದ್ದಿಮೆ NGEF ಅನ್ನು ಮುಚ್ಚಿದಾಗ ಅದರಲ್ಲಿ ಇದ್ದ ನೌಕರರ ಸಂಖ್ಯೆ ಕೇವಲ 2400. ಆದರೆ ಅದನ್ನು ಮುಚ್ಚುವಷ್ಟರಲ್ಲಿ ಸರ್ಕಾರಕ್ಕೆ ಸಾಕಾಗಿ ಹೋಗಿತ್ತು. ಸ್ಥಳೀಯವಾಗಿ ಪ್ರತಿಭಟನೆಗಳು ನಡೆದು ಬೆಂಗಳೂರಿನಿಂದ ಹಿಡಿದು ದಿಲ್ಲಿಯತನಕವೂ ದೂರು ದಾಖಲಾಗಿತ್ತು. ಇವತ್ತು ಭಾರತದ ಮೂರು ದೊಡ್ಡ ಐಟಿ ಕಂಪನಿಗಳಾದ ಟಿಸಿಎಸ್, ಇನ್ಫೋಸಿಸ್, ಮತ್ತು ವಿಪ್ರೊಗಳ ಒಟ್ಟು ನೌಕರರ ಸಂಖ್ಯೆ ಸುಮಾರು 2,80,000. ಇವರೇನಾದರೂ ಸುಮ್ಮನೆ ಸೀನಿದಂತೆ, ಬೆಂಚಿನ ಮೇಲೆ ಇರುವವರನ್ನು ಲೇಯಾಫ್ ಮಾಡಿಬಿಟ್ಟರೂ ಅರ್ಧ ಲಕ್ಷ ಜನ ಒಂದೆರಡು ತಿಂಗಳ ಅಂತರದಲ್ಲಿಯೆ ಕೆಲಸ ಕಳೆದುಕೊಂಡು ಬಿಡುತ್ತಾರೆ. ವಿಪರ್ಯಾಸ ಏನೆಂದರೆ ಇವರ ಪರವಾಗಿ ಯಾರೂ ರ್‍ಯಾಲಿ ತೆಗೆಯುವುದಿಲ್ಲ. ಪ್ರತಿಭಟನೆ ಮಾಡುವುದಿಲ್ಲ. ಅದಕ್ಕೆ ನಾನಾ ತರಹದ ಆರ್ಥಿಕ-ಸಾಮಾಜಿಕ-ರಾಜಕೀಯ ಕಾರಣಗಳಿವೆ. ಹಾಗೆಯೆ, ಹೀಗೆ ಕೆಲಸ ಕಳೆದುಕೊಂಡವರ ಜೀವನವೇನೂ ಹಳಬರ ರೀತಿ ಬೀದಿಗೆ ಬೀಳುವುದಿಲ್ಲ. ಮತ್ತು ಇವರ ನಿರುದ್ಯೋಗ ಧೀರ್ಘಕಾಲೀನವೂ ಆಗಿರುವುದಿಲ್ಲ. ಹಣದ ಯಂತ್ರ ಈಗ ಬಹುವೇಗವಾಗಿ ಚಲಿಸುತ್ತಿದೆ.

ಬರಲಿರುವ ದಿನಗಳಲ್ಲಿ ನಮ್ಮ ಐಟಿ ಉದ್ದಿಮೆ ಪ್ರತಿದಿನವೂ ಸಾವಿರಾರು ಜನರಿಗೆ ಉದ್ಯೋಗ ಸೃಷ್ಟಿ ಮಾಡದೆ ಇದ್ದರೂ ಅದು ಹಾಗೆಯೆ ಮಂದಗತಿಯಲ್ಲಿ ಇರುತ್ತದೆ ಎಂದು ಹೇಳುವ ಹಾಗೂ ಇಲ್ಲ. ಭಾರತದ ರೂಪಾಯಿ ಡಾಲರ್ ಎದುರು ಏರುತ್ತಿದೆ. ಆದರೆ ಯುರೊ ಎದುರು ಬೀಳುತ್ತಿದೆ. ಅಂದರೆ, ಅಮೆರಿಕಕ್ಕೆ ಭಾರತ ಮತ್ತು ಭಾರತದ ತಂತ್ರಜ್ಞರು ತುಟ್ಟಿ. ಯೂರೋಪಿಯನ್ನರಿಗೆ ನಮ್ಮ ವಸ್ತುಗಳು ಮತ್ತು ನಮ್ಮವರು ಮೊದಲಿಗಿಂತ ಅಗ್ಗ. (ಮೂರು ವರ್ಷದ ಹಿಂದೆ ಐದು ಸಾವಿರ ಯೂರೊಗೆ ಒಂದು ಮಾರುತಿ ಕಾರು ಕೊಳ್ಳಬಹುದಿತ್ತು ಎಂದುಕೊಂಡರೆ, ಇವತ್ತು ಕೇವಲ ನಾಲ್ಕು ಸಾವಿರ ಯೂರೊಗೆ ಅದನ್ನು ಕೊಳ್ಳಬಹುದು.) ಈ ಪರಿಸ್ಥಿತಿಯಲ್ಲಿ ತನ್ನ ಐಟಿ ಕೆಲಸಗಳಿಗೆ ಯೂರೋಪು ಭಾರತದತ್ತ ಹೆಚ್ಚಿನ ಮುಖ ಮಾಡಿದರೆ ಮತ್ತೆ ಇಲ್ಲಿ ಮೊದಲಿನ ಗಡಿಬಿಡಿ ಆರಂಭವಾಗಿಯೆ ಬಿಡುತ್ತದೆ. ಅದೇ ಸಮಯದಲ್ಲಿ ಅಮೆರಿಕ ಬೇಗ ಚೇತರಿಸಿಕೊಂಡರೂ ಬೇಡಿಕೆ ಹೆಚ್ಚುತ್ತದೆ. ಇನ್ನು ಭಾರತದೊಳಗಿನ ಆರ್ಥಿಕ ಅಭಿವೃದ್ಧಿ ಮತ್ತು ಅದರಿಂದ ಉದ್ಭವಿಸುವ ದೇಶೀಯ ಬೇಡಿಕೆಗಳು ಸಹ ಐಟಿ ಉದ್ದಿಮೆಗೆ ಒಳ್ಳೆಯ ದಿನಗಳನ್ನು ತರಬಹುದು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಮುಂದಿನ ಒಂದೆರಡು ವರ್ಷಗಳ ಕಾಲ ಪರಿಸ್ಥಿತಿ ಹೀಗೆಯೆ ಇರುತ್ತದೆ ಎಂದು ಹೇಳುವ ಹಾಗೆ ಇಲ್ಲ.

ಲೇಯಾಫ್ ಆದರೆ ಜೀವನ ಮುಗಿದೆ ಹೋಯಿತೆ?

ಈ ಆಧುನಿಕ ಅರ್ಥವ್ಯವಸ್ಥೆಯಲ್ಲಿ ಈ ಗೊಂದಲ, ಸಮಸ್ಯೆ, ಏರುಪೇರುಗಳೆಲ್ಲ ಇದ್ದದ್ದೆ. ನೂರು ವರ್ಷದ ಹಿಂದೆ ಈ ಲೇಯಾಫ್, ಲಾಕೌಟ್‌ಗಳೆಲ್ಲ ಎಲ್ಲಿದ್ದವು? ಅವು ಈಗಿನ ಅರ್ಥವ್ಯವಸ್ಥೆಯ ಕೊಡುಗೆ. ಇದು ಎಷ್ಟು ಸಂಕೀರ್ಣ ಎಂದರೆ ಒಮ್ಮೊಮ್ಮೆ ಯಾರು ಹೇಗೆ ದುಡ್ಡು ಮಾಡುತ್ತಾರೆ ಅಥವ ಕಳೆದುಕೊಳ್ಳುತ್ತಾರೆ ಎನ್ನುವುದಕ್ಕೆ ವಿವರಣೆಯೆ ಇರುವುದಿಲ್ಲ. ಹಾಗೆಯೆ ನೌಕರಿಯೂ ಸಹ. ಈಗಿನ ಕಾಲದ ಲೇಯಾಫುಗಳಿಗೆ ನೌಕರನ ಕಾರ್ಯಕ್ಷಮತೆಯೊಂದೆ ಕಾರಣವಲ್ಲ. ಬಹಳಷ್ಟು ಸಲ ಅದು ಗಣನೆಗೇ ಬರುವುದಿಲ್ಲ. ಕಂಪನಿ ಸಾಕಷ್ಟು ಲಾಭದಲ್ಲಿದೆಯೆ? ಆತ ಕೆಲಸ ಮಾಡುತ್ತಿರುವ ಗ್ರೂಪ್, ಡಿವಿಷನ್, ಯಾ ಉತ್ಪನ್ನಕ್ಕೆ ದುಡ್ಡು ಮಾಡುವ ಭವಿಷ್ಯ ಇದೆಯೆ? ಇದಷ್ಟೆ ಮುಖ್ಯವಾಗುವುದು. ಕೆಲಸ ಕಳೆದುಕೊಳ್ಳುವುದು ಯಾವುದೆ ಸಮಾಜದಲ್ಲಿ ಮುಜುಗರದ ವಿಷಯ. ಆದರೆ ಭಾರತದ ಸಮಾಜದಲ್ಲಿ ಅದು ಅವಮಾನದ ವಿಚಾರವೂ ಹೌದು. ಈ ಅರ್ಥವ್ಯವಸ್ಥೆಯಲ್ಲಿ ಕೆಲಸ ಕಳೆದುಕೊಂಡವರು ಮತ್ತು ಅವರನ್ನು ಸಂದೇಹದಿಂದ ನೋಡುವ ಜನ, ಇಬ್ಬರೂ ಬದಲಾಗಬೇಕಿದೆ.


ವಿಡಿಯೊ ಪ್ರಸ್ತುತಿ ಭಾಗ – 2

ಒಂದೇ ಸಲ ಬಹಳಷ್ಟು ಜನ ಲೇಯಾಫ್ ಆದಾಗ, ಲೇಯಾಫ್ ಆದವರಿಗೆಲ್ಲ ತಕ್ಷಣಕ್ಕೆ ಕೆಲಸ ಸಿಗದೆ ಹೋಗಬಹುದು. ನಿರುದ್ಯೋಗ ತಾವಂದುಕೊಂಡದ್ದಕ್ಕಿಂತ ಜಾಸ್ತಿ ದಿನ ಇದ್ದು ಬಿಡಬಹುದು. ಹಾಗಾದಲ್ಲಿ ಅವು ಬಹಳ ಕಠಿಣ ದಿನಗಳು. ಆ ದಿನಗಳನ್ನು ಸ್ವಾವಲಂಬಿ ಆಗಲು ಮತ್ತು ಹೊಸ ಕೌಶಲಗಳನ್ನು ಕಲಿಯಲು ಬಳಸಿಕೊಳ್ಳುವುದು, ಆದಾಯದ ಮಿತಿಯಲ್ಲಿ ಬದುಕುವುದು, ಸಿನಿಕರಾಗದಿರುವುದು, ನಿರಾಶಾವಾದಿಗಳಾಗದಿರುವುದು, ಮತ್ತು ಜೀವನಪ್ರೀತಿ ಹಾಗು ಸಾಹಸಪ್ರವೃತ್ತಿ ಉಳಿಸಿಕೊಳ್ಳುವುದು… ಇವು ಬಹಳ ಮುಖ್ಯ. ಹಾಗಿದ್ದಾಗ ಮಾತ್ರ ಮತ್ತೆ ಒಳ್ಳೆಯ ಸಮಯ ಬಂದಾಗ ಪರಿಸ್ಥಿತಿಯ ಸದುಪಯೋಗಪಡಿಸಿಕೊಳ್ಳಲು ಆಗುತ್ತದೆ. ಇಲ್ಲದಿದ್ದರೆ ಅದೇ ಗೋಳಿನ ಕಥೆ.

ಇದು ಕೇವಲ ಈಗಿನ, ಈ ಜನರೇಷನ್ನಿನ ಸವಾಲು ಮಾತ್ರವಲ್ಲ್ಲ. ಮುಂದಿನ ಹಲವಾರು ಶತಮಾನಗಳ ಕಾಲ ಭಾರತದ ಮನಸ್ಥಿತಿಯನ್ನು ಡಿಫೈನ್ ಮಾಡಲಿದೆ ಬರಲಿರುವ ಆರ್ಥಿಕ ಇಳಿಜಾರಿನ ಕಷ್ಟದ ದಿನಗಳಲ್ಲಿ ನಾವು ಗಳಿಸಲಿರುವ ಶಿಕ್ಷಣ ಮತ್ತು ಆಗಿನ ನಮ್ಮ Conduct….. ಯಾಕೆಂದರೆ, ಕೆಳಗೆ ಹೋಗಿದ್ದು ಮತ್ತೆ ಇನ್ನೊಂದು ರೂಪದಲ್ಲಿ ಮೇಲಕ್ಕೆ ಬಂದೇ ಬರಬೇಕು. ಬರುತ್ತದೆ. ಕಳೆದ ಶತಮಾನದಲ್ಲಿ ಇಂತಹುದು ಯೂರೋಪಿನಲ್ಲಿ ಮತ್ತು ಅಮೆರಿಕದಲ್ಲಿ ಒಮ್ಮೆಯಲ್ಲ, ಹಲವಾರು ಬಾರಿ ಆಗಿಹೋಗಿದೆ. ನಮಗಿದು ಹೊಸತಷ್ಟೆ! ಮತ್ತೊಂದು ತರಹದ ಆರ್ಥಿಕವ್ಯವಸ್ಥೆ ಬರುವ ತನಕ ಅಥವ ನಾವೆ ಸೃಷ್ಟಿಸಿಕೊಳ್ಳುವ ತನಕ, we should play by its rules and excel.


ಲೇಖನಕ್ಕೆ ಪೂರಕವಾಗಿ ಬ್ಲಾಗಿನಲ್ಲಿ ಹೆಚ್ಚುವರಿಯಾಗಿ ಸೇರಿಸಿರುವ ಟಿಪ್ಪಣಿ

ತಮ್ಮ ತಪ್ಪಿಲ್ಲದಿದ್ದರೂ ಲೇಯಾಫ್ ಆಗಿಬಿಡುವ ಸಂದರ್ಭ ಬಂದಾಗ ಮನುಷ್ಯ ಒಂದಷ್ಟು ಇತಿಹಾಸವನ್ನು ನೆನಪಿಸಿಕೊಳ್ಳುವುದು ಸೂಕ್ತ. ಇದು ಅಮೆರಿಕದ ರಾಯಿಟರ್ಸ್ ಸುದ್ದಿಸಂಸ್ಥೆಯ ಮುಖ್ಯಸ್ಥ ತನ್ನ ಕೆಲಸಗಾರರನ್ನು ಲೇಯಾಫ್ ಮಾಡಿದಾಗ ಅವರಿಗೆ ಬರೆದ ಪತ್ರ:
“ನಾನು ಬೆಳದದ್ದು ಕನೆಕ್ಟಿಕಟ್ ರಾಜ್ಯದ ನ್ಯೂ ಲಂಡನ್‌ನಲ್ಲಿ. 19 ನೆ ಶತಮಾನದಲ್ಲಿ ಅದು ತಿಮಿಂಗಲಗಳ ಮಾಂಸಸಂಸ್ಕರಣೆಯ ಮುಖ್ಯ ಕೇಂದ್ರಗಳಲ್ಲಿ ಒಂದಾಗಿತ್ತು. 1960-70 ರ ಸುಮಾರಿಗೆ ತಿಮಿಂಗಲಗಳ ಕಾಲ ಮುಗಿದು ಹೋಗಿ ಬಹಳ ವರ್ಷಗಳಾಗಿದ್ದವು. ಆ ಕಾಲದಲ್ಲಿ ಆ ಪ್ರಾಂತ್ಯದ ಮುಖ್ಯ ಉದ್ಯೋಗದಾತರಾದವರು ಮಿಲಿಟರಿ ಕ್ಷೇತ್ರಕ್ಕೆ ಸಂಬಂಧಿಸಿದ ಕಾರ್ಖಾನೆಗಳು. ಅದು ವಿಯಟ್ನಾಮ್ ಯುದ್ಧದ ಸಮಯ. ನನ್ನ ಸಹಪಾಠಿಗಳ ಪೋಷಕರು ನೌಕಾಪಡೆಯಲ್ಲಿ, ಕರಾವಳಿ ಕಾವಲುಪಡೆಯಲ್ಲಿ ಕೆಲಸ ಮಾಡುತ್ತಿದ್ದರು. ಯುದ್ಧದ ನಂತರ ಬಂದ ಶಾಂತಿಯ ಸಮಯ ಮತ್ತೆ ಆ ಪ್ರಾಂತ್ಯದ ನಕ್ಷೆಯನ್ನು ಬದಲಾಯಿಸಿತು. ಈಗ ಅದು ಜೂಜು ಕೆಸಿನೊಗಳಿಗೆ ಮತ್ತು ಫಾರ್ಮಸ್ಯೂಟಿಕಲ್ ರಿಸರ್ಚ್ ಕಂಪನಿಯಾದ ಫೈಜ಼ರ್‌ಗೆ ಹೆಸರುವಾಸಿ. ನೌಕರಿಗಳು ಹೋದವು; ನೌಕರಿಗಳು ಸೃಷ್ಟಿಯಾದವು. ಕಲಿತಿದ್ದ ಕೆಲಸ ಉಪಯೋಗಕ್ಕೆ ಬಾರದೆ ಹೋಯಿತು; ಹೊಸ ಕುಶಲತೆಗಳು ಬೇಕಾಗಿ ಬಂತು. ನಾಡು ಬದಲಾಯಿತು; ಜನ ಬದಲಾದರು. ಇದು ಕೇವಲ ನ್ಯೂ ಲಂಡನ್ನಿನ ವಿಷಯ ಮಾತ್ರವಲ್ಲ. ಎಷ್ಟೊಂದು ಬಟ್ಟೆಗಿರಣಿ ನಗರಗಳ ಗಿರಣಿಗಳು ಮುಚ್ಚಲಿಲ್ಲ; ಎಷ್ಟೊಂದು ಶೂಉತ್ಪಾದನಾ ನಗರಗಳ ಶೂಕಾರ್ಖಾನೆಗಳು ಬೇರೆಡೆಗೆ ಸ್ಥಳಾಂತರವಾಗಲಿಲ್ಲ; ಎಷ್ಟೊಂದು ಗಾರ್ಮೆಂಟ್ ಕಾರ್ಖಾನೆಗಳ ನಗರಗಳು ಈಗ ತಮ್ಮ ಉಡುಪುಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತಿಲ್ಲ? ಬದಲಾವಣೆ ಕಷ್ಟ. ಅಚಾನಕ್ಕಾಗಿ ತಕ್ಷಣವೆ ಬದಲಾಗಬೇಕಾಗಿ ಬಂದವರಿಗೆ ಅದು ಇನ್ನೂ ಕಷ್ಟ. ಹೊರಗುತ್ತಿಗೆಯ ಬಗ್ಗೆ ಈಗ ಬಹಳ ಬಿಸಿಯಾಗಿ ಚರ್ಚೆ ನಡೆಯುತ್ತಿದೆ. ಆದರೆ ಇಲ್ಲಿನ ಕೆಲಸಗಳು ಭಾರತಕ್ಕೆ, ಚೀನಾಗೆ, ಅಥವ ಮೆಕ್ಸಿಕೊ ದೇಶಕ್ಕೆ ಹೋಗುತ್ತಿರುವ ಬಗ್ಗೆ ನಡೆಯುತ್ತಿರುವ ಚರ್ಚೆ ಈ ಮೊದಲು ನಮ್ಮದೆ ದೇಶದೊಳಗೆ ಒಂದು ಪ್ರಾಂತ್ಯದ ಉದ್ಯೋಗಗಳು ಇನ್ನೊಂದು ಪ್ರಾಂತ್ಯಕ್ಕೆ ಹೋಗುತ್ತಿದ್ದಾಗ ಆಗುತ್ತಿದ್ದ ಚರ್ಚೆಗಿಂತ ಭಿನ್ನವೇನೂ ಅಲ್ಲ. ಎಲ್ಲಿ ಪರಿಣಾಮಕಾರಿಯಾಗಿ ಮತ್ತು ಸಮರ್ಥವಾಗಿ ಕೆಲಸ ಆಗುತ್ತದೆಯೊ ಅಲ್ಲಿ ಆ ಕೆಲಸ ಮಾಡಲ್ಪಡುತ್ತದೆ. ಅಂತಿಮವಾಗಿ ಅದು ಬೆಂಗಳೂರುಗಳಿಗೆ ಮತ್ತು ಶೇಂಜಿನ್ನುಗಳಿಗೆ ಸಹಾಯವಾಗುದಕ್ಕಿಂತ ಹೆಚ್ಚಾಗಿ ನ್ಯೂಲಂಡನ್ನಿಗೆ, ನ್ಯೂಬೆಡ್‌ಪೋರ್ಡ್ಸ್‌ಗೆ, ನ್ಯೂಯಾರ್ಕಿಗೆ ಸಹಾಯವಾಗುತ್ತದೆ. ಅದು ಹೇಗೆ ಸಹಾಯವಾಗುತ್ತದೆ ಅಂದರೆ ಈ ಸ್ಥಿತಿ ಜನರನ್ನು ಮತ್ತು ಬಂಡವಾಳವನ್ನು ಇದೆ ಕೆಲಸವನ್ನು ಬೇರೆ ತರಹ ಮಾಡಲು, ಇನ್ನೂ ಉತ್ತಮವಾದ ಕೆಲಸ ಮಾಡಲು ಸಾಧ್ಯವಾಗುವಂತೆ ಅನುವು ಮಾಡುತ್ತದೆ. ಅದು ಯಾಕೆ ಸಹಾಯ ಮಾಡುತ್ತದೆ ಅಂದರೆ ಅದು ಅಂತಿಮ ಉತ್ಪನ್ನವನ್ನು ಇನ್ನೂ ಕಡಿಮೆ ಬೆಲೆಗೆ ಉತ್ಪಾದಿಸುವುದಕ್ಕೆ ಅವಕಾಶ ಮಾಡಿಕೊಡುತ್ತದೆ. ಅದು ಕಂಪನಿಗಳಿಗೆ ಲಾಭ ಮಾಡಿಕೊಟ್ಟರೂ ಗ್ರಾಹಕರಿಗೂ ಆ ಲಾಭ ದೊರೆಯುತ್ತದೆ. ತಮ್ಮ ಕೆಲಸವನ್ನು ಇನ್ನೊಂದು ಕಡೆಗೆ, ತಮಗಿಂತ ಸಾವಿರಾರು ಡಾಲರ್ ಕಮ್ಮಿ ಸಂಬಳ ಪಡೆಯುವರಿಗೆ ಕಳೆದುಕೊಳ್ಳುವ ಜನಕ್ಕೆ ಇದು ನಿಜಕ್ಕೂ ಕಷ್ಟದ ಸಂದರ್ಭ. ಆದರೆ ಇದು ಹೊರಗುತ್ತಿಗೆಯ ಬಾಧ್ಯತೆಗಳು ಮತ್ತು ಅದರಿಂದ ಉದಿಸುವ ಅವಕಾಶಗಳ ಬಗ್ಗೆ ಯೋಚಿಸುವಂತೆಯೆ ಕೆಲಸ ಕಳೆದುಕೊಳ್ಳುವ ಬಾಧೆ ಮತ್ತು ಮುಂದೆ ತೆರೆದುಕೊಳ್ಳಲಿರುವ ಅವಕಾಶಗಳ ಬಗ್ಗೆಯೂ ಯೋಚಿಸಬೇಕಾದ ಸಮಯ. ಪ್ರತಿಯೊಂದು ಸಂಸ್ಥೆಯಂತೆಯೆ ಪ್ರತಿಯೊಬ್ಬ ಮನುಷ್ಯನೂ ನಮ್ಮ ಅಪ್ಪಂದಿರು ಮತ್ತು ತಾತಂದಿರು ಮಾಡಿದಂತೆ, ಶೂಕಾರ್ಖಾನೆಗಳು ಮತ್ತು ಬಟ್ಟೆಗಿರಣಿಗಳು ಮಾಡಿದಂತೆ, ತಮ್ಮ ಆರ್ಥಿಕ ಭವಿತವ್ಯದತ್ತ ನಡೆಯುತ್ತಿರಬೇಕು.

[ಇದನ್ನು ನಾವು ನಮ್ಮಲ್ಲಿಯೆ ಘಟಿಸಿದ ಕೆಲವು ಸಂದರ್ಭಗಳಿಗೆ ಹೋಲಿಸಿಕೊಳ್ಳಬಹುದು: ದಾವಣಗೆರೆಯ ಬಟ್ಟೆಗಿರಣಿಗಳು ಮುಚ್ಚಿಕೊಂಡವು. ಇನ್ಯಾವುದೊ ಮೂಲದಿಂದ ಬೆಂಗಳೂರಿನ ಸುತ್ತಮುತ್ತ ಲಕ್ಷಾಂತರ ಹೆಣ್ಣುಮಕ್ಕಳಿಗೆ ಗಾರ್ಮೆಂಟ್ ಉದ್ಯೋಗಗಳು ತೆರೆದುಕೊಂಡವು. ದಾವಣಗೆರೆ ಮತ್ತೊಂದು ರೀತಿಯಲ್ಲಿ ಮುನ್ನಡೆಯಿತು. ಇತ್ಯಾದಿ.]

Reader Comments

ನಾನು ಬೆಂಗಳೂರಿನ ಐ.ಟಿ. ಕಂಪನಿಯೊಂದರಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. 2002ರಲ್ಲಿ ಇಂಜಿನಿಯರಿಂಗ್ ಮುಗಿಸಿದಾಗ, ಕಲಸಕ್ಕಾಗಿ ಪರದಾಡಿದ “ಆ ದಿನಗಳ‌” ನೆನಪು ಎನ್ನೂ ಮಾಸಿಲ್ಲ. ಈಗ ಮತ್ತೊಂಮ್ಮೆ “ಸ್ಲೋ ಡೌನ್” ಎಂಬ ಭೂತ ದರ್ಶನ!
ನಿಮ್ಮ ಬರಹವನ್ನೋದಿ ಸ್ವಲ್ಪ ಧೈರ್ಯ ತಂದುಕೊಂಡೆ. ತುಂಬ ಧನ್ಯವಾದಗಳು.
ಆದರೆ ನನ್ನದೊಂದು ಪ್ರಶ್ನೆ – ಬ್ರಜಿಲ್, ಚೀನ, ರಷಿಯಾ ಮುಂತಾದ ರಾಷ್ಟ್ರಗಳು “ಹೊರ ಗುತ್ತಿಗೆ”ಯನ್ನು ಪಡೆಯುವುದರಲ್ಲಿ ಭಾರತದ ಜೊತೆ ಪೈಪೋಟಿ ನಡೆಸಿವೆ. ರಾಜಕೀಯವಾಗಿ ಭಾರತ್ತಕ್ಕಿಂತ ಬಲವಾಗಿರುವ ಇವು, ರಸ್ತೆ ಮುಂತಾದ ಸವಲತ್ತುಗಳನ್ನು ಬೆಂಗಳುರಿಗಿಂತ ಉತ್ತಮವಾಗಿ ನೀಡುತ್ತಿವೆ. ಹೀಗಿರುವಾಗ, ಐ.ಟಿ. ಹುದ್ದೆಗಳು ನಮಲ್ಲಿ ಕ್ರಮೇಣ ಕಡಿಮೆಯಾಗುವುದಿಲ್ಲವೇ? ಈಗ ಉತ್ತುಂಗದಲ್ಲಿರುವ ಐ.ಟಿ. ಮುಂದಿನ 5 ವರ್ಷಗಳಲ್ಲಿ ಇಳಿಮುಖವಾಗಿ, ನಶಿಸಿಹೋಗದಿದ್ದರರೂ ಕೂಡ, ಒoದು ಹಂತಕ್ಕೆ ಬಂದು stabilize ಆಗುತ್ತದೆ ಎಂದು ನನ್ನ ಭಾವನೆ. ನೀವೇನಂತೀರಿ?

#1 
Written By bachi on March 21st, 2008 @ 11:07 am

ನಮ್ಮ ದೇಶದ ದುರಾದೃಷ್ಟವೊ ಅಥವ ನಾವು ಎಲ್ಲ ಗೊತ್ತಿದ್ದು ಕಣ್ಮುಚ್ಚಿ ಕುಳಿತಿದ್ದಿವೊ ಗೊತ್ತಿಲ್ಲ. ನಾವು ಈ ಸಾಫ್ಟ್ ವೇರ ಕ್ಷೇತ್ರಕ್ಕೆ ಕೊಟ್ಟ ಪ್ರಾಮುಖ್ಯತೆಯ ಅರ್ಧದಷ್ಟಾದರು ನಮ್ಮ ಪಾರಂಪರಿಕ ಕ್ಷೇತ್ರಗಳಿಗೆ ನೀಡಿದ್ದರೆ ಇಂತ ಪರಿಸ್ಥಿಗಳನ್ನ ಇನ್ನೂ ಪರಿಣಾಮಕಾರಿಯಾಗಿ ನಿಭಾಯಿಸ ಬಹುದಿತ್ತು. ಕೃಷಿ ಮತ್ತು ಅದಕ್ಕೆ ಪೂರಕ ಉದ್ಯೋಗಗಳಲ್ಲಿನ ಸರಕಾರದ ಆಸಕ್ತಿ ಕೇವಲ ಚುನಾವಣ ಗಿಮಿಕ್ಕಾಗಿ ಉಳಿದಿದೆ ಹೊರತು ಅದರ ಬಗ್ಗೆ ಪ್ರಾಮಾಣಿಕ ಪ್ರಯತ್ನ ಕೂಡ ಆಗುತಿಲ್ಲ. ನಮ್ಮ ಸಮಾಜದ ದೋರಣೆ ಇದಕಿಂತ ವಿಭಿನ್ನವಗಿಲ್ಲ ಅನ್ನಿಸುತ್ತೆ ಇವತ್ತಿನಿ ಅತಿ ಲಾಭದಾಯಕ ಮತ್ತು ಕಡಿಮೆ ಸಮಯದಲ್ಲಿ ಹೆಚ್ಚು ಪರಿಶ್ರಮವಿಲ್ಲದೆ ಅಗಾಧವಾಗಿ ಗಳಿಸಬಲ್ಲ ಉದ್ಯೋಗದತ್ತ ಅವರ ಒಲವು ಇದ್ದೆ ಇದೆ. ಇದನ್ನ ತಪ್ಪು ಅಂತ ಹೇಳಲಾಗದು ಆದರೆ ನಮ್ಮ ಪಾರಂಪರಿಕ ಕ್ಷೇತ್ರಗಳಲ್ಲಿ ನಾವು ಪ್ರಭಲರಾಗಿದ್ದರೆ ಈಗಿನಂತ ಪರಿಸ್ಥಿಗಳು ನಮ್ಮ ಆರ್ಥಿಕ ವ್ಯವಸ್ಥೆಯ ಮೇಲೆ ಅಷ್ಟಾಗಿ ವ್ಯತಿರಿಕ್ತ ಪರಿಣಾಮ ಬೀರುತ್ತಿರಲ್ಲಿಲ್ಲ ಅನ್ನಿಸುತ್ತೆ.

-ಅಮರ

#2 
Written By ಅಮರ on March 25th, 2008 @ 5:56 am

ನಮಸ್ಕಾರಗಳು… ಮತ್ತೆ ವರುಷದ ನಂತರ ನಮ್ಮ ಸಂಭಾಷಣೆ… ನಿಮ್ಮ ಬ್ಲಾಗ್ ನೋಡಿದೆ. ಖುಷಿ ಆಯ್ತು. ಕಾಲಂ ಪ್ರತೀ ವಾರನೂ ಪತ್ರಿಕೇಲಿ ಓದುತ್ತಿರುತ್ತೇನೆ. ಹೇಗಿದ್ದೀರಾ… ಏನ್ ವಿಶೇಷ ಬಹಳ ದಿನವಾಯ್ತು ಮಾನತಾಡದೆ. http://www.saahityasanje.blogspot.com, http://www.adhurcartoons.blogspot.com, http://www.vaarenota.blogspot.com,www.idupreethi.blogspot.com ನನ್ನ ಬ್ಲಾಗುಗಳು. ಬಿಡುವಿದ್ದಾಗ ನೋಡಿ…
ವಂದನೆಗಳು,
ಗೆಳೆಯ ಹರೀಶ್ ಕೆ. ಆದೂರು,
ಮಂಗಳೂರಿನಿಂದ….
ಹ್ಹಾಂ ಮರೆತೆ…. ಊರಿಗೆ ಬಂದಾಗ ಮರೆಯದೆ ಬನ್ನಿ…

#3 
Written By ಸಾಹಿತ್ಯ ಸಂಜೆ... on March 28th, 2008 @ 10:31 am

Hi Ravi,

Thank you very much for posting this artical. This has given me more confidence now. As you said, it is always good to develop other skills paralally with our work skills.

#4 
Written By ಸುಧೇಶ್ ಶೆಟ್ಟಿ on April 3rd, 2008 @ 10:26 am

Add a Comment

required, use real name
required, will not be published
optional, your blog address