2018 ರ ವಿಧಾನಸಭಾ ಚುನಾವಣೆಯಲ್ಲಿ ಜಯನಗರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಅಧಿಕೃತವಾಗಿ ಘೋಷಣೆ

ಬಂಧುಗಳೇ,

ಈಗಾಗಲೇ ಮೂರು ಚುನಾವಣೆಗಳಲ್ಲಿ ಸ್ಪರ್ಧಿಸಿ, ನನ್ನ ಇತಿಮಿತಿಗಳಲ್ಲಿ ಚುನಾವಣಾ ರಾಜಕೀಯ ಹೋರಾಟವನ್ನು ಮಾಡಿದ್ದ ನಾನು, ಈ ಬಾರಿ ಸ್ಪರ್ಧಿಸಿದರೆ ಗೆಲ್ಲಲೇಬೇಕು ಮತ್ತು ಆ ಮೂಲಕ ಒಂದು ಮಾದರಿ ನಿರ್ಮಿಸಿ, ರಾಜ್ಯದ ಸಾವಿರಾರು ಜನರಿಗೆ ಸ್ವಚ್ಚ ಮತ್ತು ಮೌಲ್ಯಾಧಾರಿತ ಚುನಾವಣಾ ರಾಜಕಾರಣದ ಬಗ್ಗೆ ಸ್ಫೂರ್ತಿ ಮೂಡಿಸಬೇಕು ಎನ್ನುವ ತೀರ್ಮಾನವನ್ನು ಮೊದಲೇ ಮಾಡಿದ್ದೆ. ಆ ಹಿನ್ನೆಲೆಯಲ್ಲಿ ಜಯನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದರೆ, ಹಣ-ಹೆಂಡ ಹಂಚದೆ, ಯಾವುದೇ ಚುನಾವಣಾ ಅಕ್ರಮ ಎಸಗದೆ, ಸುಳ್ಳು ಆಶ್ವಾಸನೆಗಳನ್ನು ನೀಡದೆ, ಆಮಿಷಗಳನ್ನು ಒಡ್ಡದೆ, ಚುನಾವಣಾ ಆಯೋಗ ನಿಗದಿಪಡಿಸಿರುವ ವೆಚ್ಚದ ಮಿತಿಯೊಳಗೆ ಪ್ರಚಾರ ಮಾಡಿ ಗೆಲ್ಲಲು ಸಾಧ್ಯವೇ ಎಂದು ಕಳೆದ ನಾಲ್ಕೂವರೆ ತಿಂಗಳಿನಿಂದ (11-11-2017 ರಿಂದ) ಕ್ಷೇತ್ರಾದ್ಯಂತ ಮನೆಮನೆ, ಬೀದಿಬೀದಿ ಸುತ್ತಿ ಜನಾಭಿಪ್ರಾಯ ಸಂಗ್ರಹಿಸುತ್ತ ಬಂದಿದ್ದೇವೆ. ಆ ಸಂದರ್ಭದಲ್ಲಿ ಕ್ಷೇತ್ರದ ಹಲವು ಸಮಸ್ಯೆಗಳಿಗೆ ಪರಿಹಾರವೂ ಸಿಗುವಂತೆ ಮಾಡಿದ್ದೇವೆ.

ಈಗ ನನ್ನ ಮುಂದಿರುವ ಪ್ರಶ್ನೆ, ಇಲ್ಲಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಗೆಲ್ಲುವ ಅವಕಾಶ ಸಷ್ಟವಾಗಿ ಇದೆಯೇ? ಎನ್ನುವುದು.

ಕೆಲವು ಸಹಾಯ/ಬೆಂಬಲ ಸಿಕ್ಕರೆ ಖಂಡಿತ ಸಾಧ್ಯ ಎನ್ನುವ ವಿಶ್ವಾಸ ಈಗ ಬಂದಿದೆ.

ಎಂತಹ ಸಹಾಯಗಳು?
– ಕ್ಷೇತ್ರದವರಷ್ಟೇ ಅಲ್ಲ, ರಾಜ್ಯದ ವಿವಿಧ ಕಡೆಗಳಿಂದ ಕನಿಷ್ಟ ನೂರು ಜನರಾದರೂ ಸಮಾನಮನಸ್ಕರು ಬಂದು ಇಲ್ಲಿ ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು.
– ಚುನಾವಣಾ ಆಯೋಗ ನಿಗದಿಪಡಿಸಿರುವ ಚುನಾವಣಾ ವೆಚ್ಚದ ಮಿತಿ ರೂ.28 ಲಕ್ಷ. ಅಷ್ಟನ್ನೂ ನಾವು ಜನರಿಂದ ದೇಣಿಗೆ ರೂಪದಲ್ಲಿ ಸಂಗ್ರಹಿಸಲು ಸಾಧ್ಯವಾಗಬೇಕು, ಮತ್ತು ಅಷ್ಟನ್ನೂ ಪಾರದರ್ಶಕವಾಗಿ ಮತ್ತು ಪರಿಣಾಮಕಾರಿಯಾಗಿ ಪ್ರಚಾರಕ್ಕೆ ಬಳಸಬೇಕು.

ಮೇಲಿನ ಎರಡೂ ಸಾಧ್ಯವಾಗುತ್ತದೆ, ಹಾಗೂ ಕಳೆದ ನಾಲ್ಕೈದು ತಿಂಗಳಿನಿಂದ ನಾವು ಕ್ಷೇತ್ರದಲ್ಲಿ ಮಾಡಿರುವ ಕೆಲಸಗಳಿಂದ ಜಯನಗರದ ಮತದಾರರಿಗೂ ನಮ್ಮ ಬಗ್ಗೆ ಒಳ್ಳೆಯ ವಿಶ್ವಾಸ ಮೂಡಿದೆ ಎಂದು ನಮಗೆ ಈಗ ಪ್ರತಿದಿನವೂ ಅರಿವಾಗುತ್ತಿದೆ.

ಈ ಹಿನ್ನೆಲೆಯಲ್ಲಿ, ನಾನು ಈ ಬಾರಿ ನಿಮ್ಮೆಲ್ಲರ ಬೆಂಬಲ-ಸಹಾಯ-ಸಹಕಾರದಿಂದ ಜಯನಗರ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದೇನೆ ಎಂದು ಅಧಿಕೃತವಾಗಿ ಘೋಷಿಸುತ್ತಿದ್ದೇನೆ.

ಒಂದೆರಡು ದಿನಗಳಲ್ಲಿ ನಮ್ಮ ಅಭಿಯಾನ ಚುನಾವಣಾ ಪ್ರಚಾರವಾಗಿ ಬದಲಾಗಲಿದೆ ಮತ್ತು ಇನ್ನೂ ಹಲವು ರೂಪಗಳನ್ನು ಪಡೆಯಬೇಕಿದೆ.

ಹಾಗೆಯೇ ಮೂರ್ನಾಲ್ಕು ದಿನಗಳಲ್ಲಿ ಚುನಾವಣಾ ಸಂಬಂಧಿ ಬ್ಯಾಂಕ್ ಖಾತೆಯ ವಿವರಗಳನ್ನು ಸಹ ಹಂಚಿಕೊಳ್ಳಲಾಗುತ್ತದೆ.

ನಿಮ್ಮೆಲ್ಲರ ತನು-ಮನ-ಧನದ ಸಹಾಯದ ನಿರೀಕ್ಷೆಯಲ್ಲಿ…

ಬನ್ನಿ, ಸ್ವಚ್ಚ, ಸುಂದರ. ಸದೃಢ, ಸಮೃದ್ಧ. ಲಂಚಮುಕ್ತ, ಮಾದರಿ ಜಯನಗರ ನಿರ್ಮಿಸೋಣ. ನಾವೆಲ್ಲಾ ಸೇರಿ ಆ ಮೂಲಕ ಇತಿಹಾಸ ನಿರ್ಮಿಸೋಣ. ಜನಪರ, ಮೌಲ್ಯಾಧಾರಿತ ರಾಜಕಾರಣ ಕಟ್ಟೋಣ, ಪ್ರಜಾಪ್ರಭುತ್ವ ಬಲಪಡಿಸೋಣ.

ವಂದನೆಗಳೊಂದಿಗೆ,
ರವಿ ಕೃಷ್ಣಾರೆಡ್ಡಿ

31-03-2018.

ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ 40 ದಿನಗಳ ನಿರಂತರ ಮನೆಮನೆ ಭೇಟಿಯ ನಂತರ ಒಂದು ಟಿಪ್ಪಣಿ

ಬಂಧುಗಳೇ,

ಬರಲಿರುವ 2018 ರ ವಿಧಾನಸಭಾ ಚುನಾವಣೆಯಲ್ಲಿ ಜಯನಗರ ವಿಧಾನಸಭಾ ಕ್ಷೇತ್ರದಿಂದ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದರ ಕುರಿತಾಗಿ ಕಳೆದ 40 ದಿನಗಳಿಂದ (ನವೆಂಬರ್ 11, 2017 ರಂದು ಪ್ರಾರಂಭಿಸಿ) ಈ ಕ್ಷೇತ್ರದಲ್ಲಿ ನಿರಂತರವಾಗಿ ಮಾಡುತ್ತಿರುವ ಮನೆಮನೆ ಭೇಟಿ ಮತ್ತು ಜನಾಭಿಪ್ರಾಯ ಸಂಗ್ರಹಣೆ ಅಭಿಯಾನದ ಬಗ್ಗೆ ನಿಮಗೆ ಗೊತ್ತಿದೆ ಎಂದು ಭಾವಿಸುತ್ತೇನೆ. ಕಳೆದ 40 ದಿನಗಳಲ್ಲಿ ಕ್ಷೇತ್ರದ 50% ಕ್ಕೂ ಹೆಚ್ಚಿನ ಪ್ರದೇಶದಲ್ಲಿ ಬೀದಿಬೀದಿ ಮತ್ತು ಮನೆಮನೆಗೆ ಭೇಟಿ ನೀಡಿ ಮತದಾರರೊಂದಿಗೆ ಮಾತನಾಡಲಾಗಿದೆ. ಸಂಕ್ರಾಂತಿಯ ಒಳಗೆ ಕ್ಷೇತ್ರದ ಬಹುತೇಕ ಪ್ರದೇಶವನ್ನು ಸುತ್ತಿ ಈ ಕಾರ್ಯ ಸಂಪೂರ್ಣ ಮಾಡಲು ಆಯೋಜಿಸಲಾಗಿದೆ.

ಚುನಾವಣಾ ರಾಜಕಾರಣಕ್ಕೆ ಸಂಬಂಧಿಸಿದಂತೆ ನನಗೆ ಕೆಲವು ಆದರ್ಶ-ತತ್ವ-ಸಿದ್ಧಾಂತಗಳಿವೆ. ಮತದಾರರಿಗೆ ಹಣ-ಹೆಂಡ-ಲಂಚದ ಆಮಿಷ ಒಡ್ಡಿ ಓಟು ಪಡೆಯಬಾರದು, ಸುಳ್ಳು ಆಶ್ವಾಸನೆಗಳನ್ನು ನೀಡಬಾರದು, ಚುನಾವಣಾ ಆಯೋಗ ನಿಗದಿಪಡಿಸಿರುವ ಮಿತಿಗಿಂತ ಹೆಚ್ಚಿಗೆ ಖರ್ಚು ಮಾಡಬಾರದು; ಅಂದರೆ ಚುನಾವಣಾ ಅಕ್ರಮಗಳನ್ನು ಮಾಡಬಾರದು ಮತ್ತು ನೆಲದ ಕಾನೂನುಗಳನ್ನು ಮುರಿಯಬಾರದು. ಈ ತತ್ವಾದರ್ಶಗಳನ್ನು ಪಾಲಿಸುತ್ತಲೇ ನನ್ನ ಹಿಂದಿನ ಮೂರು ಚುನಾವಣೆಗಳನ್ನು ನಿಭಾಯಿಸಿದ್ದೇನೆ.

ಈ ಹಿನ್ನೆಲೆಯಲ್ಲಿ ನಮ್ಮಂತಹ ತತ್ವಾದರ್ಶಗಳಿರುವ ಮತ್ತು ಸೀಮಿತ ಸಂಪನ್ಮೂಲಗಳ ವ್ಯಕ್ತಿಗಳು ಎಲ್ಲೆಂದರಲ್ಲಿ ಸ್ಪರ್ಧಿಸಲಾಗುವುದಿಲ್ಲ. ಮತ್ತು ಸ್ಪರ್ಧಿಸಿ ಪ್ರತಿ ಸಲವೂ ಸೋಲುವುದರಲ್ಲಿ ಅಂತಹ ಅರ್ಥಗಳಿರುವುದಿಲ್ಲ. ನಾನು ಈ ಹಿಂದೆ ಸ್ಪರ್ಧಿಸಿದ್ದ ಪ್ರತಿ ಚುನಾವಣೆಗೂ ಒಂದು ಅರ್ಥ ಮತ್ತು ಉದ್ದೇಶ ಇತ್ತು. ಹಾಗಾಗಿ ಚುನಾವಣೆಯ ಸೋಲು ಸೋಲೆಂದು ನನಗೆಂದೂ ಅನ್ನಿಸಿಲ್ಲ.

ಆದರೆ ಈ ಸಲ ಹಾಗೆ ಇಲ್ಲ. ಗೆಲ್ಲಬೇಕೆಂದೇ ನಿಲ್ಲಬೇಕಿದೆ ಮತ್ತು ಅದೊಂದು ಮಾದರಿ/ಉದಾಹರಿಸುವ ಚುನಾವಣೆ ಆಗಬೇಕಿದೆ. ಅದಕ್ಕಾಗಿ ನಾನು ಕಂಡುಕೊಂಡಂತೆ ಜಯನಗರ ಕ್ಷೇತ್ರಕ್ಕಿಂತ ಉತ್ತಮವಾದ ಕ್ಷೇತ್ರ ನನಗೆ ಕಾಣಿಸುತ್ತಿಲ್ಲ. ಹತ್ತು ವರ್ಷಗಳ ಹಿಂದೆ ನಾನು ಸ್ಪರ್ಧಿಸಿದ್ದ ಮೊದಲ ಚುನಾವಣೆಯೂ ಇದೇ ಕ್ಷೇತ್ರದಿಂದಾಗಿತ್ತು.

ಈ ಕಳೆದ 40 ದಿನಗಳಲ್ಲಿ ಅಕ್ಷರಶಃ ಸಾವಿರಾರು ಜನರೊಂದಿಗೆ ಮಾತನಾಡಿದ್ದೇನೆ, ಕೈಕುಲುಕಿದ್ದೇನೆ, ಕೈಮುಗಿದಿದ್ದೇನೆ. ಬಹುತೇಕವಾಗಿ ಗೌರವಪೂರ್ವಕವಾಗಿ ಮತ್ತು ವಿನಯದಿಂದ ಸಂವಾದಿಸಿದ್ದೇವೆ. ಕೆಲವೇ ಕೆಲವು ಸಲ ತಕರಾರುಗಳೂ ಎದ್ದಿವೆ. ಕೆಲವರ ಪ್ರೀತಿ ಮತ್ತು ವಿಶ್ವಾಸವನ್ನು ಕಂಡು ನಿಜಕ್ಕೂ ದಂಗುಬಡಿದಿದ್ದೇನೆ. ಹಿಂದಿನ ಕೆಲಸ ಮತ್ತು ಸಾರ್ವಜನಿಕವಾಗಿ ಆಡುತ್ತಾ ಬಂದಿರುವ ಮಾತು ಹುಟ್ಟಿಸಿರುವ ವಿಶ್ವಾಸ ಮತ್ತು ನಂಬಿಕೆ ಅದು.

ಸವೆಯಬೇಕಾದ ಹಾದಿ ಇನ್ನೂ ಉದ್ದವಿದೆ. ನಲವತ್ತು ದಿನಗಳ ನಿರಂತರ ನಡಿಗೆ ಮತ್ತು ಮಾತು ಮುಂದಿನ ದಿನಗಳಿಗೂ ಸ್ಫೂರ್ತಿ ಮತ್ತು ಸ್ಥೈರ್ಯ ತುಂಬಿದೆ ಎಂದರೆ ನಮಗಾಗಿರಬಹುದಾದ ಸಕಾರಾತ್ಮಕ ಅನುಭವದ ಮಟ್ಟ ನಿಮಗರಿವಾಗಬಹುದು ಎಂದು ಭಾವಿಸುತ್ತೇನೆ.

ಒಟ್ಟಿನಲ್ಲಿ, ಒಳ್ಳೆಯ ದಿನಗಳು, ಆಶಾವಾದ ಹೆಚ್ಚಿಸುತ್ತಿರುವ ದಿನಗಳು.

ಈ ಅಭಿಯಾನಕ್ಕೆ ತಾವೂ ಕೈಜೋಡಿಸಬೇಕೆಂದು ಕೋರುತ್ತೇನೆ. ಇದರಲ್ಲಿ ಭಾಗಿಯಾಗಲು ತಮಗೆ ಆಸಕ್ತಿ ಇದ್ದಲ್ಲಿ ದಯವಿಟ್ಟು 7975625575 ಗೆ ಕರೆ ಮಾಡಿ.

ವಂದನೆಗಳೊಂದಿಗೆ,
ರವಿ ಕೃಷ್ಣಾರೆಡ್ಡಿ

21-12-2017.

Powered by WordPress