Press Release : ಜಯನಗರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ರವಿ ಕೃಷ್ಣಾರೆಡ್ಡಿಯವರನ್ನು ಬೆಂಬಲಿಸಿ ಯೋಗೇಂದ್ರ ಯಾದವ್‌ರಿಂದ ಪ್ರಚಾರ ಮತ್ತು “ಒಂದು ವೋಟು, ಒಂದು ನೋಟು” ಅಭಿಯಾನಕ್ಕೆ ಚಾಲನೆ

02-04-2018
ಬೆಂಗಳೂರು

ಮಾಧ್ಯಮ ಪ್ರಕಟಣೆ

ಜಯನಗರ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ರವಿ ಕೃಷ್ಣಾರೆಡ್ಡಿಯವರನ್ನು ಬೆಂಬಲಿಸಿ ಸ್ವರಾಜ್ ಇಂಡಿಯಾದ ಅಧ್ಯಕ್ಷರಾದ ಯೋಗೇಂದ್ರ ಯಾದವ್‌ರಿಂದ ಪ್ರಚಾರ ಮತ್ತು “ಒಂದು ವೋಟು, ಒಂದು ನೋಟು” ದೇಣಿಗೆ ಸಂಗ್ರಹ ಅಭಿಯಾನಕ್ಕೆ ಚಾಲನೆ

ಜಯನಗರ ವಿಧಾನಸಭಾ ಕ್ಷೇತ್ರದಿಂದ ಸಾಮಾಜಿಕ ಕಾರ್ಯಕರ್ತ ರವಿ ಕೃಷ್ಣಾರೆಡ್ಡಿಯವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಬಗ್ಗೆ ಈಗಾಗಲೆ ಘೋಷಣೆ ಮಾಡಿದ್ದಾರೆ ಮತ್ತು ಕಳೆದ ಐದು ತಿಂಗಳಿನಿಂದ ಇಡೀ ಕ್ಷೇತ್ರದಲ್ಲಿ ಮನೆಮನೆ ಭೇಟಿ ಅಭಿಯಾನ ಮಾಡಿ, ಸಾವಿರಾರು ಜನ ಮತದಾರರನ್ನು ಭೇಟಿ ಮಾಡಿ, ಕ್ಷೇತ್ರದ ಹಲವು ಸಮಸ್ಯೆಗಳ ಪರಿಹಾರಕ್ಕೂ ಕಾರಣರಾಗಿದ್ದಾರೆ.

ಇಂದು ಚುನಾವಣೆಗಳನ್ನು ಕೇವಲ ಹಣ, ಜಾತಿ, ಮತ್ತು ತೋಳ್ಬಲಗಳು ನಿರ್ಧರಿಸುತ್ತಿವೆ. ಎಲ್ಲಕ್ಕಿಂತ ಮುಖ್ಯವಾಗಿ ಅಕ್ರಮ ಮತ್ತು ಭ್ರಷ್ಟಾಚಾರದಿಂದ ಗಳಿಸಿರುವ ಕಪ್ಪುಹಣವೇ ಪ್ರಾಮುಖ್ಯತೆ ಪಡೆದಿದೆ ಮತ್ತು ಚುನಾವಣಾ ಆಯೋಗ ನಿಗದಿಪಡಿಸಿರುವ ವೆಚ್ಚದ ಮಿತಿಯ ಹತ್ತು-ನೂರು ಪಟ್ಟು ಹಣವನ್ನು ಅಭ್ಯರ್ಥಿಗಳು ಕಾನೂನುಬಾಹಿರವಾಗಿ ಖರ್ಚು ಮಾಡಿ ಚುನಾವಣೆಗಳನ್ನು ಕೊಳ್ಳುತ್ತಿದ್ದಾರೆ.

ನಮ್ಮ ರಾಜ್ಯದ ಪರಂಪರೆಯಲ್ಲಿ ಶಾಂತವೇರಿ ಗೋಪಾಲಗೌಡರಂತಹ ಆದರ್ಶವಾದಿ ಮತ್ತು ಜನಪರ ರಾಜಕಾರಣಿಗಳು ನಾಲ್ಕೈದು ದಶಕಗಳ ಹಿಂದೆಯೇ ಹಣವಂತರೇ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿರುತ್ತೇಜಿಸಲು “ಒಂದು ವೋಟು, ಒಂದು ನೋಟು” ಕಲ್ಪನೆಯನ್ನು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಯಶಸ್ವಿಯಾಗಿ ಹುಟ್ಟುಹಾಕಿ, ಜನರ ದೇಣಿಗೆ ಹಣದಿಂದಲೇ ನ್ಯಾಯಯುತವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿರುತ್ತಾರೆ. ಈ ಸಂದರ್ಭದಲ್ಲಿ ಅಂತಹುದೇ ಪರಿಕಲ್ಪನೆಯನ್ನು ನಾವು ಪ್ರಸ್ತುತ ಮಾಡಿಕೊಳ್ಳದಿದ್ದರೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ನೈಜ ಉದ್ದೇಶಗಳನ್ನು ಕಳೆದುಕೊಂಡು ತನ್ನ ಅರ್ಥವನ್ನೇ ಕಳೆದುಕೊಳ್ಳಲಿದೆ.

ಈ ಹಿನ್ನೆಲೆಯಲ್ಲಿ, ಜಯನಗರ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ರವಿ ಕೃಷ್ಣಾರೆಡ್ಡಿಯವರು ಶಾಂತವೇರಿ ಗೋಪಾಲಗೌಡರ ಆದರ್ಶವನ್ನು ಪಾಲಿಸುವುದರ ಭಾಗವಾಗಿ ಮತ್ತು ಚುನಾವಣೆಯಲ್ಲಿ ಜನರ ಪಾಲುದಾರಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಇದೇ ಬುಧವಾರ, 04-04-2018 ರಿಂದ “ಒಂದು ವೋಟು, ಒಂದು ನೋಟು” ಹೆಸರಿನಲ್ಲಿ ಜನರಿಂದ ದೇಣಿಗೆ ಸಂಗ್ರಹ ಅಭಿಯಾನವನ್ನು ಕೈಗೊಳ್ಳಲಿದ್ದಾರೆ. ಈ ಅಭಿಯಾನಕ್ಕೆ ಅಂದು ಚಾಲನೆ ನೀಡಲು ಸ್ವರಾಜ್ ಇಂಡಿಯಾ ಪಕ್ಷದ ರಾಷ್ಟ್ರಾಧ್ಯಕ್ಷ ಶ್ರೀ ಯೋಗೇಂದ್ರ ಯಾದವ್ ಆಗಮಿಸಲಿದ್ದಾರೆ. ಸ್ವರಾಜ್ ಇಂಡಿಯಾದ ಮುಖಂಡರಾದ ಹಿರಿಯ ಸಾಹಿತಿ ಶ್ರೀ ದೇವನೂರ ಮಹಾದೇವರವರು, ರಾಜ್ಯದ ಪ್ರಸಿದ್ಧ ಸಾಮಾಜಿಕ ಹೋರಾಟಗಾರ ಶ್ರೀ ಎಸ್.ಆರ್. ಹಿರೇಮಠರು ಸೇರಿದಂತೆ ಹಲವು ಗಣ್ಯರು ಅಂದಿನ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.

ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ “ಒಂದು ವೋಟು, ಒಂದು ನೋಟು” ಅಭಿಯಾನಕ್ಕೆ ಚಾಲನೆ
ದಿನಾಂಕ : 04-04-2018, ಬುಧವಾರ
ಸಮಯ : ಬೆಳಗ್ಗೆ 8:30
ಸ್ಥಳ : ಮೈಯ್ಯಾಸ್ ಹೋಟೆಲ್ ವೃತ್ತ, ಜಯನಗರ ನಾಲ್ಕನೇ ಬ್ಲಾಕ್, ಬೆಂಗಳೂರು.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 9449559451 / 7975625575.

ಪ್ರಕಟಣೆ:
ರವಿ ಕೃಷ್ಣಾರೆಡ್ಡಿ

Both comments and pings are currently closed.

Comments are closed.

Powered by WordPress