ಬಂಧುಗಳೇ,
ಎಲ್ಲರಿಗೂ ನಮಸ್ಕಾರ.
ತಡವಾಗಿ ಈ ವರದಿ ಒಪ್ಪಿಸುತ್ತಿರುವುದಕ್ಕೆ ಕ್ಷಮೆ ಇರಲಿ.
ಮೇ 12, 2018 ರಂದು ನಡೆಯಬೇಕಿದ್ದ ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಆಗಿನ ಶಾಸಕರೂ ಮತ್ತು ಈ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯೂ ಆಗಿದ್ದ ಬಿ.ಎನ್.ವಿಜಯಕುಮಾರರ ಅಕಾಲಿಕ ನಿಧನದಿಂದಾಗಿ ಜೂನ್ 11, 2018 ಕ್ಕೆ ಮುಂದೂಡಲ್ಪಟ್ಟಿತು. ಅಂದು ನಡೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನನಗೆ 1861 ಮತಗಳು ಬಂದವು. ಶೇ.2 ಕ್ಕಿಂತ ಕಮ್ಮಿ ಮತಗಳು. ನಮ್ಮ ಆಶಯವನ್ನು ಬೆಂಬಲಿಸಿ ಮತ ಚಲಾಯಿಸಿದ ಎಲ್ಲರಿಗೂ ಧನ್ಯವಾದಗಳು.
ಸುಮಾರು ಒಂದು ವರ್ಷದಿಂದ ಜಯನಗರದಲ್ಲಿ ಕಚೇರಿ ತೆರೆದು, ಒಂದಷ್ಟು ಸ್ಥಳೀಯ ಸಮಸ್ಯೆಗಳ ಬಗ್ಗೆಯೂ ಗಮನ ಹರಿಸುತ್ತ, ಒಂದಷ್ಟು ಒಳ್ಳೆಯ ಕೆಲಸಗಳನ್ನೂ ಮಾಡುತ್ತ, ನಾನು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ನಿಲ್ಲುವ ಬಗ್ಗೆ ನವೆಂಬರ್ 11, 2017 ರಿಂದ ಸತತವಾಗಿ ಪ್ರತಿದಿನವೂ ಜನಾಭಿಪ್ರಾಯವನ್ನೂ ಪಡೆಯುತ್ತ, ನಾವು ಹೇಳುವಂತಹ ಮತ್ತು ಬಯಸುವಂತಹ “ಸ್ವಚ್ಚ, ಪ್ರಾಮಾಣಿಕ, ಮತ್ತು ಮಾದರಿ ಚುನಾವಣೆ”ಗೆ ಜಯನಗರದಲ್ಲಿ ಅವಕಾಶವಿದೆ ಎಂದು ನಮ್ಮಲ್ಲಿ ಬಹುತೇಕರಿಗೆ ಅನ್ನಿಸಿದ ಮೇಲೆ ಮತ್ತು ನಾವೂ ಅದಕ್ಕೆ ಬೇಕಾದಷ್ಟು ಸಿದ್ದತೆ ಮಾಡಿಕೊಂಡಿದ್ದೇವೆ ಎಂದು ನಮಗೆ ಪ್ರಾಮಾಣಿಕವಾಗಿ ಅನಿಸಿದ ಮೇಲೆಯೇ ನಾನೂ ಚುನಾವಣೆಗೆ ನಿಲ್ಲಲು ತೀರ್ಮಾನಿಸಿದ್ದು. ನಿಲ್ಲಲೇಬೇಕು ಎನ್ನುವ ಹಠ ಇರಲಿಲ್ಲ. ಆದರೆ ನಿಂತರೆ ಈ ಮಾದರಿ ಗೆಲ್ಲುವ ಹಾಗೆ ಮಾಡಬೇಕು ಎನ್ನುವ ಹಠ ಇತ್ತು. ಅದೇ ಕಾರಣಕ್ಕಾಗಿಯೇ ಹಗಲು ರಾತ್ರಿ ನಾನು ಮತ್ತು ನನ್ನ ಸಂಗಾತಿಗಳು ದುಡಿದೆವು. ರಾಜ್ಯದ ನೂರಾರು ಜನ ನಮ್ಮ ಆಶಯವನ್ನು ಬೆಂಬಲಿಸಿ ತಮ್ಮ ಕೈಲಾದಷ್ಟು ತನು ಮತ್ತು ಧನದ ಬೆಂಬಲ ನೀಡಿದರು.
ಆದರೆ, ನಾವು ಪಡೆದ ಮತಗಳು ಮಾತ್ರ ಬಹಳ ಕನಿಷ್ಠ ಎನ್ನಿಸುವಷ್ಟು. ಬಹುತೇಕರು ಊಹಿಸಿರದಷ್ಟು ಕಮ್ಮಿ.
ಆದರೂ ನಮ್ಮ ಸಮಾಧಾನಕ್ಕೆ ಹೇಳಿಕೊಳ್ಳಬೇಕೆಂದರೆ, ಒಂದು ಒಳ್ಳೆಯ ಪ್ರಯತ್ನ ಮಾಡಿದೆವು; ಮನಃಪೂರ್ವಕವಾಗಿ ಮಾಡಿದೆವು; ಹಾಕಬಹುದಾದಷ್ಟು ದೈಹಿಕ ಶ್ರಮ ಹಾಕಿದೆವು; ಮನೆಮನೆಗೆ ನಮ್ಮ ವಿಚಾರ ತಲುಪುವ ಹಾಗೆ ಮಾಡಿದೆವು; ಉತ್ತಮ ಪ್ರಣಾಳಿಕೆ ಕೊಟ್ಟೆವು; ಚುನಾವಣಾ ಅಕ್ರಮಗಳನ್ನು ತಡೆಯಲು ಪ್ರಾಣಾಪಾಯದ ಭಯವನ್ನು ಬದಿಗಿಟ್ಟು ಸೆಣೆಸಿದೆವು; ರಾಜ್ಯದ ಯಾವುದೇ ಅಭ್ಯರ್ಥಿ ನೇರವಾಗಿ ಮತದಾರ/ಳನ್ನು ಭೇಟಿ ಮಾಡಿ ಮಾತನಾಡಿಸಿರಬಹುದಾದಕ್ಕಿಂತ ಹೆಚ್ಚಿನ ಸಂಖ್ಯೆಯ ಮತದಾರ/ಳನ್ನು ಮಾತನಾಡಿಸಿದೆವು. ಇಂದಿನ ವರ್ತಮಾನ ಸಂದರ್ಭದಲ್ಲಿ ನಮ್ಮ ಚುನಾವಣಾ ಹೋರಾಟ ಹಾಗೂ ನಾವು ಅದನ್ನು ನಡೆಸಿದ ರೀತಿ ಒಂದು ಐತಿಹಾಸಿಕ ಪ್ರಯತ್ನ ಮತ್ತು ಘಟನೆ ಎಂದೇ ನನ್ನ ಭಾವನೆ.
ನಾವು ಉತ್ತಮ ಅಂಕಗಳನ್ನು ಪಡೆದು ಪಾಸಾಗುವುದಕ್ಕಿಂತ ಚೆನ್ನಾಗಿ ಪರೀಕ್ಷೆ ಬರೆದೆವು. ಆದರೆ ಪರೀಕ್ಷೆ ನಡೆದ ವಿಧಾನ, ಅಲ್ಲಿ ನಡೆದ ಅಕ್ರಮಗಳು, ಮತ್ತು ಮೌಲ್ಯಮಾಪನದ ರೀತಿನೀತಿಗಳಿಂದಾಗಿ ಫಲಿತಾಂಶ ಬಂದಾಗ ನಾವು ಅನುತ್ತೀರ್ಣರಾಗಿದ್ದೇವೆಂದು ಘೋಷಣೆ ಮಾಡಲಾಯಿತು. ನಾವು ಸೋತಿಲ್ಲ ಮತ್ತು ಅದು ನಮ್ಮ ಸೋಲಲ್ಲ. ತಲೆತಗ್ಗಿಸುವಂತಹ ತಪ್ಪನ್ನಂತೂ ಮಾಡಲೇ ಇಲ್ಲ. ಅದೇ ಕಾರಣಕ್ಕಾಗಿಯೇ, ನನ್ನನ್ನೂ ಸೇರಿದಂತೆ, ತನು ಮತ್ತು ಧನದ ಮೂಲಕ ನಮ್ಮ ಆಶಯಗಳನ್ನು ಪ್ರಾಮಾಣಿಕವಾಗಿ ಬೆಂಬಲಿಸಿದ ಬಂಧುಗಳು ಈಗಲೂ ಹಸನ್ಮುಖಿಗಳಾಗಿದ್ದಾರೆ. ಆತ್ಮತೃಪ್ತಿ ಇದೆ. ವಿಷಾದವೇನಿದ್ದರೂ ಒಟ್ಟಾರೆ ಸಮಾಜದ ಮೌಲ್ಯ ಮತ್ತು ಸ್ಥಿತಿಯ ಕುರಿತೇ ಹೊರತು ನಮ್ಮ ವಿರುದ್ಧವಾಗಿ ಬಂದ ಜನಾದೇಶದ ಕುರಿತಲ್ಲ.
ಇನ್ನು ಚುನಾವಣೆಗೆ ಖರ್ಚು ಆದ ಹಣ. ಕಳೆದ ಒಂದು ವರ್ಷದಿಂದ ಕ್ಷೇತ್ರದಲ್ಲಿ ನಡೆಸಿದ ಜನಾಭಿಪ್ರಾಯ ಸಂಗ್ರಹಣೆ, ನಡೆಸಿದ ಕೆಲವು ಕಾರ್ಯಕ್ರಮಗಳು, ಕಚೇರಿ ನಿರ್ವಹಣೆ, ಕರಪತ್ರ/ಬ್ಯಾನರ್.ಪೋಸ್ಟರ್ ಮುದ್ರಣ, ಇತ್ಯಾದಿಗಳಿಗೆ ಸುಮಾರು ಏಳೆಂಟು ಲಕ್ಷ ರೂಪಾಯಿ ಖರ್ಚು ಆಗಿತ್ತು. ಅದರಲ್ಲಿ ಸುಮಾರು ಒಂದು ಲಕ್ಷ ರೂಪಾಯಿಯನ್ನು ನಮ್ಮ ಹಿತೈಷಿಗಳು ಮತ್ತು ಸಹಹೋರಾಟಗಾರರು ನೀಡಿದ್ದಿರಬಹುದು. ಮಿಕ್ಕದ್ದು ನನ್ನ ಸ್ವಂತ ಹಣ.
ಒಟ್ಟಾರೆಯಾಗಿ ನಮ್ಮ ಚುನಾವಣಾ ಸಂಬಂಧಿ ಬ್ಯಾಂಕ್ ಖಾತೆಗೆ 21,74,238 ಜಮೆ ಆಗಿದೆ. (ಇದರಲ್ಲಿ ನೂರಾರು ಜನ ಕೊಟ್ಟಿರುವ ದೇಣಿಗೆ ಸುಮಾರು 14.48 ಲಕ್ಷ ರೂಪಾಯಿಯಾದರೆ. ನನ್ನ ಮತ್ತು ಸುಪ್ರಿಯಾಳ ದೇಣಿಗೆ 7.26 ಲಕ್ಷ ರೂಪಾಯಿ.) ನಾಮಪತ್ರ ಸಲ್ಲಿಕೆಯ ದಿನದಿಂದ ಫಲಿತಾಂಶದ ದಿನದವರೆಗೆ ಸುಮಾರು 21,49,702 ರೂಪಾಯಿ ಖರ್ಚಾಗಿದೆ. ಕರಪತ್ರ, ಪ್ರಚಾರ ವಾಹನಗಳಿಗೆ ಬಾಡಿಗೆ, ಕಾರ್ಯಕರ್ತರಿಗೆ ಊಟ, ವಸತಿ, SMS ಮತ್ತು ವಾಟ್ಸ್ಯಾಪ್ ಖರ್ಚು, ಇತ್ಯಾದಿಗಳಿಗೆ ಈ ಹಣ ಖರ್ಚಾಗಿದೆ. ಬಹುಶಃ ರಾಜ್ಯದ ಯಾವೊಬ್ಬ ಅಭ್ಯರ್ಥಿಯೂ ಕೊಡದಷ್ಟು ಪಾರದರ್ಶಕವಾಗಿ ಮತ್ತು ಮಾದರಿಯಾಗಿ ಚುನಾವಣಾ ಆಯೋಗಕ್ಕೆ ನಮ್ಮ ಖರ್ಚುವೆಚ್ಚಗಳ ವಿವರಗಳನ್ನು ನೀಡಲಾಗಿದೆ.
ಹೀಗೆ, ನೂರಾರು ಬಂಧುಗಳ ಬೆಂಬಲದ ರೂಪವಾಗಿ 15+ ಲಕ್ಷ ಮತ್ತು ನನ್ನ ವೈಯಕ್ತಿಕ/ಕುಟುಂಬದ ಸ್ವದೇಣಿಗೆಯಾಗಿ 15+ ಲಕ್ಷ ರೂಪಾಯಿ ಕಳೆದ ಒಂದು ವರ್ಷದ ಸಮಯದಲ್ಲಿ ಒಟ್ಟಾರೆ ಪ್ರಚಾರಕ್ಕೆ ವಿನಿಯೋಗಿಸಲಾಗಿದೆ. ಈ ಒಟ್ಟಾರೆ ಲೆಕ್ಕದಲ್ಲಿ ಸುಮಾರು ಐವತ್ತು ಸಾವಿರ ರೂಪಾಯಿಯ ತನಕ ಸರಿಯಾಗಿ ಲೆಕ್ಕ ಸಿಗದೆ ಅಥವ ಸಣ್ಣಪುಟ್ಟ ಮೋಸ/ಸುಳ್ಳುಗಳ ಕಾರಣವಾಗಿ ಹೆಚ್ಚುಕಮ್ಮಿ ಆಗಿರುವುದನ್ನು ತಳ್ಳಿ ಹಾಕಲಾಗದು. ಒಬ್ಬರ ಮೇಲೆ ವಂಚನೆಯ ದೂರು ದಾಖಲಿಸುವ ಸಾಧ್ಯತೆಯೂ ಇದೆ. ಆದರೆ ಜನರಿಂದ ಸಂಗ್ರಹಿಸಿದ ಹಣವನ್ನು ಪೂರ್ತಿಯಾಗಿ ಮತ್ತು ನನ್ನ ಸ್ವಂತ ಹಣದ ಬಹುತೇಕವನ್ನು ನ್ಯಾಯವಾಗಿ ಮತ್ತು ಜವಾಬ್ದಾರಿಯಿಂದ ಖರ್ಚು ಮಾಡಲಾಗಿದೆ.
ಈ ಹೋರಾಟ ಮತ್ತು ಪ್ರಯತ್ನದಲ್ಲಿ ತನು-ಧನದ ಬೆಂಬಲ ನೀಡಿ ಬೆಂಬಲಿಸಿದ ಎಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು ಮತ್ತು ಕೃತಜ್ಞತೆಗಳು.
ಮುಂದಿನ ದಿನಗಳ ಸಾರ್ವಜನಿಕ ಬದುಕಿನ ಬಗ್ಗೆ ಈ ಕೆಳಗಿನ ಪ್ರಕಟಣೆಯನ್ನು ನಾನು ದಿ:29-06-2018 ರಂದು, ಅಂದರೆ ಫಲಿತಾಂಶ ಬಂದ ಎರಡು ವಾರದ ನಂತರ ಮಾಡಿದೆ:
ಬಂಧುಗಳೇ,
“ಒಬ್ಬ ಯೋಗ್ಯ, ಅರ್ಹ, ಸಾಮಾಜಿಕ ಕಾಳಜಿ ಮತ್ತು ಬದ್ಧತೆಯಿರುವ ಮತ್ತು ಅಂತಹ ಕೆಲಸ ಮಾಡಿರುವ ಇತಿಹಾಸ ಇರುವ ಯಾವುದೇ ವ್ಯಕ್ತಿ ಚುನಾವಣೆಗೆ ನಿಂತರೆ, ಯಾವುದೇ ಚುನಾವಣಾ ಅಕ್ರಮಗಳನ್ನು ಮಾಡದೆ, ಜನರ ತನು ಮತ್ತು ಧನದ ಸಹಾಯದಿಂದಲೇ ಪರಿಣಾಮಕಾರಿಯಾಗಿ ಪ್ರಚಾರ ಕೈಗೊಂಡರೆ ಅಂತಹ ವ್ಯಕ್ತಿಯನ್ನು ಜಾತಿ, ಮತ, ಮತ್ತು ಪಕ್ಷಾತೀತವಾಗಿ ಜನತೆ ಗೆಲ್ಲಿಸುತ್ತಾರೆ” ಎನ್ನುವುದನ್ನು ತೋರಿಸಬೇಕು ಎನ್ನುವ ಕನಸು ಮತ್ತು ಆದರ್ಶವನ್ನು ಸರಿಯಾಗಿ ಹತ್ತು ವರ್ಷಗಳಿಂದ ನಾನು ಪೋಷಿಸಿಕೊಂಡು ಬಂದಿದ್ದೆ. ಅದರ ಭಾಗವಾಗಿಯೇ ನನ್ನ ಇಲ್ಲಿಯ ತನಕದ ಚುನಾವಣಾ ಹೋರಾಟಗಳೂ ಇದ್ದವು.
ಈಗ ಆ ಕನಸಿಗೆ ಮತ್ತು ಅಂತಹ ಪ್ರಯತ್ನಗಳಿಗೆ “ತಿಲಾಂಜಲಿ” ಇಡುತ್ತಿದ್ದೇನೆ. (ತಾತ್ಕಾಲಿಕವಾಗಿ).
ಆದರೆ ಇಂತಹ ಪ್ರಯತ್ನ ಯಾರಾದರೂ ಮಾಡಿದರೆ ನನ್ನ ನೈತಿಕ ಬೆಂಬಲ ಇರುತ್ತದೆ ಮತ್ತು ಅವರಿಗೆ ಮತ್ತು ಅವರ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಎಂದು ಮನಃಪೂರ್ವಕವಾಗಿ ಹಾರೈಸುತ್ತೇನೆ.
ಎಲ್ಲರಿಗೂ ಒಳ್ಳೆಯದಾಗಲಿ.
ಪ್ರೀತಿ ಮತ್ತು ವಿಶ್ವಾಸದೊಂದಿಗೆ,
ರವಿ ಕೃಷ್ಣಾರೆಡ್ಡಿ
ಇದರರ್ಥ ನಾನು ಸಾರ್ವಜನಿಕ ಜೀವನದಿಂದ ಹಿಂದೆ ಸರಿಯುತ್ತೇನೆ ಎಂದಲ್ಲ. ಆ ಕನಸಿನ ಸಾಕಾರಕ್ಕೆ ದುಡಿಯುವುದನ್ನು ನಿಲ್ಲಿಸುತ್ತೇನೆ ಎಂದು. ಅದಕ್ಕೆ ಇದು ಸಮಯವಲ್ಲ. ಮಾಡಲು ಅನೇಕ ಒಳ್ಳೆಯ ಕೆಲಸಗಳಿವೆ. ಈ ಮಧ್ಯೆ ಮುಂದಿನ ರಾಜಕೀಯ ನಡೆಯ ಬಗ್ಗೆಯೂ ಯೋಚಿಸಬೇಕಿದೆ. ಪಕ್ಷ ರಾಜಕಾರಣವೋ (ಅಂದರೆ ಇರುವ ಪ್ರಮುಖ ಪಕ್ಷಗಳಲ್ಲಿ ಯಾವುದಾದರೂ ಒಂದು ಪಕ್ಷಕ್ಕೆ ಸೇರುವುದೋ ಅಥವ ನಾವೇ ಒಂದು ಪ್ರಾದೇಶಿಕ ಪಕ್ಷವನ್ನು ಸ್ಥಾಪಿಸುವುದೋ) ಅಥವ ಪಕ್ಷಾತೀತ ರಾಜಕಾರಣವೋ ಎನ್ನುವುದನ್ನು ಇನ್ನೂ ತೀರ್ಮಾನಿಸಬೇಕಿದೆ. ಕೆಟ್ಟ ಕೆಲಸ ಮಾಡುವ ಅಗತ್ಯವಾಗಲಿ ಅನಿವಾರ್ಯತೆಯಾಗಲಿ ನನಗಿಲ್ಲ. ಅದು ನನ್ನ ಧರ್ಮವೂ ಅಲ್ಲ. ಎಲ್ಲಿ ಇರುತ್ತೇವೆಯೋ ಅಲ್ಲಿ ಆತ್ಮತೃಪ್ತಿಯಾಗುವಂತಹ ಒಂದಷ್ಟು ಒಳ್ಳೆಯ ಮಾತು-ಕೆಲಸ ಮಾಡಬೇಕು. ಅದು ನನ್ನ ಧರ್ಮ. ಆ ಧರ್ಮವನ್ನು ಸದಾ ಪಾಲಿಸುತ್ತೇನೆ.
ಈ ಸುದೀರ್ಘ ಜೀವನಪಯಣದಲ್ಲಿ ನಿಮ್ಮ ಬೆಂಬಲ, ಸಹಕಾರ, ಸಲಹೆ, ಮಾರ್ಗದರ್ಶನ, (ನಾನು ಕೇಳಲಿ ಬಿಡಲಿ) ಎಲ್ಲಾ ಸಮಯದಲ್ಲೂ ಇರಲಿ ಎಂದು ಎಲ್ಲಾ ಮಹಾನುಭಾವರಲ್ಲಿ ಕೋರುತ್ತೇನೆ.
ಎಲ್ಲರಿಗೂ, ಸಕಲ ಜೀವರಾಶಿಗೂ, ಒಳ್ಳೆಯದಾಗಲಿ. ಮಂಗಳವಾಗಲಿ.
ಪ್ರೀತಿಯಿಂದ,
ರವಿ ಕೃಷ್ಣಾರೆಡ್ಡಿ
02-07-2018.
******
ಪೂರಕ ಮಾಹಿತಿ:
ಫಲಿತಾಂಶದ ದಿನ ಫಲಿತಾಂಶ ಸ್ಪಷ್ಟವಾದ ನಂತರ ಮಾತನಾಡಿದ ವಿಡಿಯೋ ಇಲ್ಲಿದೆ:
https://m.facebook.com/story.php?story_fbid=2099482993457688&id=100001880229123