ಕನ್ನಡ.ಒನ್‌ಇಂಡಿಯ.ಕಾಮ್‌ನಲ್ಲಿ ಪ್ರಕಟವಾದ ಸಂದರ್ಶನ

ಚುನಾವಣೆಗೆ ಸಂಬಂಧಿಸಿದಂತೆ ಕಳೆದ ವಾರ ಕನ್ನಡ.ಒನ್‌ಇಂಡಿಯ.ಕಾಮ್‌ನಲ್ಲಿ (ದಟ್ಸ್‌ಕನ್ನಡ.ಕಾಮ್) ನನ್ನ ಲಿಖಿತ ಸಂದರ್ಶನ ಮೂರು ಭಾಗಗಳಲ್ಲಿ ಪ್ರಕಟವಾಗಿತ್ತು. (ಭಾಗ-1, ಭಾಗ-2, ಭಾಗ-3) ಅದರ ಪೂರ್ಣ ಪಾಠ ಇಲ್ಲಿ ಕೊಡಲಾಗಿದೆ:

ಪ್ರಶ್ನೆ : ಚುನಾವಣೆಯಲ್ಲಿ ಸ್ಪರ್ಧಿಸಲು ಸ್ಫೂರ್ತಿ ಏನು?
ಉತ್ತರ : ಕಳೆದ ಒಂದು ದಶಕದಲ್ಲಿ ಕರ್ನಾಟಕ ಅತಿ ಕೆಟ್ಟ ರಾಜಕೀಯ ಪರಿಸ್ಥಿತಿಯನ್ನು ಕಂಡಿದೆ. ಸಾರ್ವಜನಿಕ ಜೀವನದಲ್ಲಿ ಮೌಲ್ಯಗಳ ಅಧಃಪತನವಾಗಿದೆ. ಈ ಕೊಳಕು ರಾಜಕೀಯ ಸಂಸ್ಕೃತಿಯನ್ನು, ಅನೀತಿಯುಕ್ತ ರಾಜಕಾರಣವನ್ನು ನಾವೆಲ್ಲ ಸೇರಿ ಬದಲಾಯಿಸಬೇಕಿದೆ. ಇಲ್ಲದಿದ್ದರೆ ದೇಶದಲ್ಲಿ ಪ್ರಜಾಪ್ರಭುತ್ವವಾಗಲಿ, ಶಾಂತಿ ಮತ್ತು ಘನತೆಯುಕ್ತ ಜೀವನವಾಗಲಿ ಸಾಧ್ಯವಾಗುವುದಿಲ್ಲ. ಪ್ರಜಾಪ್ರಭುತ್ವದ ಪರಿಕಲ್ಪನೆ ಇರುವ, ನ್ಯಾಯಾನ್ಯಾಯ ವಿವೇಚನೆ ಇರುವ ಯೋಗ್ಯರು ರಾಜಕೀಯ ಕ್ಷೇತ್ರಕ್ಕೆ ಬಂದು ಇಲ್ಲಿ ಒಂದು ಮೌಲ್ಯಾಧಾರಿತ ರಾಜಕೀಯ ಪರ್ಯಾಯ ನೀಡಬೇಕಿದೆ. ನಮ್ಮ ಇಂದಿನ ಬಹುತೇಕ ರಾಜಕಾರಣಿಗಳು ರಿಯಲ್ ಎಸ್ಟೇಟ್ ಮತ್ತು ಗಣಿ ಮಾಫಿಯಾದವರು, ಅನೈತಿಕ ಮಾರ್ಗಗಳಿಂದ ಮತ್ತು ಅಧಿಕಾರ ದುರುಪಯೋಗದಿಂದ ಹಣ ಮಾಡಿದ ಭ್ರಷ್ಟ ರಾಜಕಾರಣಿಗಳು, ಮತ್ತು ಅವರ ಕುಟುಂಬದವರೇ ಆಗಿದ್ದಾರೆ. ಅವರಿಗೆ ಪ್ರಜಾಪ್ರಭುತ್ವದ ಕಲ್ಪನೆಯಾಗಲಿ, ಜನರ ಕಲ್ಯಾಣದ ಕಾಳಜಿಗಳಾಗಲಿ ಇಲ್ಲ. ವಿದ್ಯಾವಂತ, ಯೋಗ್ಯ, ತಿಳಿವಳಿಕಸ್ಥ, ಸ್ವಚ್ಛ ಮತ್ತು ನೀತಿವಂತ ಸಮಾಜ ಬಯಸುವ ಜನ ಹೆಚ್ಚುಹೆಚ್ಚು ಸಂಖ್ಯೆಯಲ್ಲಿ ರಾಜಕಾರಣಕ್ಕೆ ಬಂದು ನಾಯಕತ್ವ ನೀಡಲು ಮುಂದಾದರೆ ಮಾತ್ರ ನಮ್ಮ ಈಗಿನ ಭ್ರಷ್ಟ ರಾಜಕೀಯ ವ್ಯವಸ್ಥೆ ಬದಲಾಗುತ್ತದೆ.

ಪ್ರ : ಚುನಾವಣೆಗೆ ಹಣ ಅಗತ್ಯವಿರುವುದರಿಂದ ನಿಮ್ಮ ಪ್ರಚಾರ ಹೇಗಿರುತ್ತದೆ?
ಉ : ಚುನಾವಣಾ ಆಯೋಗದ ಪ್ರಕಾರ ಒಬ್ಬ ಎಮ್‍ಎಲ್‍ಎ ಅಭ್ಯರ್ಥಿ ಕೇವಲ 16 ಲಕ್ಷ ರೂಪಾಯಿಯಲ್ಲಿ ತನ್ನ ಚುನಾವಣಾ ಖರ್ಚುಗಳನ್ನು ನಿಭಾಯಿಸಬೇಕು. ಆದರೆ ನಮ್ಮ ಬಹುತೇಕ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತ್ತು ಕೆಲವು ಪಕ್ಷೇತರ ಅಭ್ಯರ್ಥಿಗಳು ಹತ್ತಾರು ಕೋಟಿಗಳನ್ನು ಕಾನೂನು ಬಾಹಿರವಾಗಿ ಚುನಾವಣೆಗೆ ಖರ್ಚು ಮಾಡುವುದು ನಮಗೆಲ್ಲ ತಿಳಿದಿರುವ ವಿಷಯವೆ. ಅವರು ಈ ಹಣವನ್ನು ತಮ್ಮ ಮತ್ತು ತಮ್ಮ ಪಕ್ಷದ ಪ್ರಚಾರಕ್ಕೆಂದು ಬಳಸುವುದಿಲ್ಲ. ಬದಲಿಗೆ ಓಟು ಕೊಳ್ಳಲೆಂದು ಬಳಸುತ್ತಾರೆ. ಹಣ ನಿಡುವುದು, ಸೀರೆ-ಉಂಗುರ-ಹೆಂಡ ಹಂಚುವುದು, ಬಾಡೂಟ-ಭೋಜನಗಳನ್ನು ಏರ್ಪಡಿಸುವುದು, ಮತದಾರರನ್ನು ದೂರದ ಊರುಗಳಿಗೆ ಮೋಜಿನ ಪ್ರವಾಸ ಕರೆದುಕೊಂಡು ಹೋಗುವುದು, ಇತ್ಯಾದಿ ಅನೈತಿಕ ಆಮಿಷಗಳನ್ನು ಒಡ್ದಲು ಬಳಸುತ್ತಾರೆ. ಇವ್ಯಾವುದನ್ನೂ ಮಾಡದೆ ಕೇವಲ ಚುನಾವಣಾ ಪ್ರಚಾರ ಮಾಡಿದರೆ 16 ಲಕ್ಷ ರೂಪಾಯಿಯಲ್ಲಿಯೇ ಒಬ್ಬ ಅಭ್ಯರ್ಥಿ ಉತ್ತಮ ಪ್ರಚಾರ ಮಾಡಬಹುದು. ನಾನು ನನ್ನ ಚುನಾವಣಾ ಖರ್ಚುಗಳನ್ನು ಜನರ ದೇಣಿಗೆ ಮತ್ತು ಸಹಾಯದಿಂದ ನಡೆಸಲು ತೀರ್ಮಾನಿಸಿದ್ದೇನೆ. ಈಗಾಗಲೆ ಜನ ಹಣ ನೀಡಲು ಮುಂದೆ ಬರುತ್ತಿದ್ದಾರೆ ಮತ್ತು ನಾವು ಪ್ರತಿಯೊಂದು ದೇಣಿಗೆ ಮತ್ತು ಖರ್ಚುಗಳಿಗೆ ಲೆಕ್ಕ ಇಡುತ್ತೇವೆ ಹಾಗೂ ಆ ಎಲ್ಲಾ ವಿವರಗಳನ್ನು ನನ್ನ ವೆಬ್‌ಸೈಟ್‌ನಲ್ಲಿ (www.ravikrishnareddy.com) ಪ್ರಕಟಿಸಲಾಗುತ್ತದೆ. ಇಂತಹ ಪ್ರಯತ್ನದ ಮೂಲಕವೇ ನಾವು ಚುನಾವಣೆಯಲ್ಲಿ ಹಣದ ಪ್ರಾಬಲ್ಯವನ್ನು ನಿಲ್ಲಿಸಲು ಸಾಧ್ಯ ಎಂದು ನಾನು ನಂಬಿದ್ದೇನೆ.

ಪ್ರ : ಚುನಾವಣೆಯಲ್ಲಿ ನಗರದ ಮತದಾರರಿಗೆ ಆಸಕ್ತಿಯೇ ಇಲ್ಲ. ಪರಿಸ್ಥಿತಿ ಹೀಗಿರುವಾಗ ಜನರಲ್ಲಿ ಹೇಗೆ ಜಾಗೃತಿ ಬೆಳೆಸುತ್ತೀರಿ ಮತ್ತು ಮತದಾನದಲ್ಲಿ ಭಾಗವಹಿಸುವಂತೆ ಹೇಗೆ ಮಾಡುತ್ತೀರಿ?
ಉ : ಕಳೆದ ಒಂದೆರಡು ದಶಕಗಳಿಂದ ನಗರವಾಸಿ ಮತದಾರರಿಗೆ ಒಳ್ಳೆಯ ಆಯ್ಕೆಗಳೇ ಇರಲಿಲ್ಲ ಮತ್ತು ಇದು ಅವರು ಚುನಾವಣಾ ಪ್ರಕ್ರಿಯೆಯಿಂದ ದೂರ ಸರಿಯಲು ಒಂದು ಕಾರಣವಾಗಿತ್ತು. ಬಿಲ್ಡರ್ಸ್‌ಗಳು, ರಿಯಲ್ ಎಸ್ಟೇಟ್ ಡೆವಲಪರ್ಸ್‌ಗಳು, ಕಾಂಟ್ರಾಕ್ಟರುಗಳು, ಇಂತಹವರೇ ಪ್ರಮುಖ ರಾಜಕೀಯ ಪಕ್ಷಗಳಿಂದ ಸೀಟು ಕೊಂಡುಕೊಂಡು ಹಣದ ಆಧಾರದ ಮೇಲೆ ಚುನಾವಣೆಗೆ ನಿಲ್ಲುತ್ತಿದ್ದಾರೆ. ನಗರಗಳ ಪ್ರಜ್ಞಾವಂತ ಮತದಾರರಿಗೆ ಇಂತಹ ವ್ಯಕ್ತಿಗಳ ಮೇಲೆ ನಂಬಿಕೆಯಾಗಲಿ ಮತ್ತು ಅವರು ಪ್ರತಿನಿಧಿಸಲಿರುವ ಸ್ಥಾನಕ್ಕೆ ಅರ್ಹರೆಂದಾಗಲಿ ಅನಿಸುತ್ತಿರಲಿಲ್ಲ. ಈ ಬಾರಿ ಬೆಂಗಳೂರಿನ ಅನೇಕ ಕಡೆ ನಮ್ಮ ಲೋಕ್‌ಸತ್ತಾ ಪಕ್ಷದಿಂದ ಅರ್ಹ ಮತ್ತು ಸ್ವಚ್ಛ ಅಭ್ಯರ್ಥಿಗಳನ್ನು ನಾವು ಚುನಾವಣೆಗೆ ನಿಲ್ಲಿಸುತ್ತಿದ್ದೇವೆ. ಇದು ಈ ಬಾರಿ ಬೆಂಗಳೂರಿನ ನಿರಾಸಕ್ತ ಮತದಾರರಿಗೆ ಆಯ್ಕೆ ಮಾಡಿಕೊಳ್ಳುವ ಅವಕಾಶ ಕಲ್ಪಿಸುತ್ತಿದ್ದು, ರಾಜ್ಯದ ಅನೈತಿಕ ರಾಜಕಾರಣದಿಂದ ರೋಸತ್ತಿರುವ ಇವರು ಹೆಚ್ಚಿನ ಸಂಖ್ಯೆಯಲ್ಲಿ ಈ ಬಾರಿ ಮತ ಹಾಕುವ ವಿಶ್ವಾಸ ನಮಗಿದೆ.

ಪ್ರ : ಬೆಂಗಳೂರಿನ ಬಿಟಿಎಂಗಾಗಿ ಏನು ಕಾರ್ಯಕ್ರಮ ಹಾಕಿಕೊಂಡಿದ್ದೀರಿ?
ಉ : ಬೆಂಗಳೂರಿನಲ್ಲಿಯ ಅತಿಕೆಟ್ಟ ಟ್ರಾಫಿಕ್ ಬಿಟಿಎಂ ಲೇಔಟ್ ಕ್ಷೇತ್ರದಲ್ಲಿದೆ. ಹೀಗಿದ್ದರೂ, ಬೆಂಗಳೂರಿನಲ್ಲಿ ಮೆಟ್ರೊ ಸಂಚಾರ ಇಲ್ಲದ ಕೆಲವೇ ಕ್ಷೇತ್ರಗಳಲ್ಲಿ ಇದೂ ಒಂದು. ಸಿಲ್ಕ್ ಬೋರ್ಡ್, ಡೈರಿ ಸರ್ಕಲ್, ಫೋರಂ, ಬನ್ನೇರುಘಟ್ಟ ರಸ್ತೆ, ಜಯದೇವ ಆಸ್ಪತ್ರೆ, ಬಿಟಿಎಮ್ ಬಸ್ ನಿಲ್ದಾಣ, ಕೋರಮಂಗಲ, ಸರ್ಜಾಪುರ ರಸ್ತೆ; ಈ ಎಲ್ಲಾ ರಸ್ತೆಗಳು ಟ್ರಾಫಿಕ್ ಕಾರಣದಿಂದಾಗಿ ಕುಖ್ಯಾತಿ ಪಡೆದಿವೆ. ಇದು ಈ ಕ್ಷೇತ್ರದಲ್ಲಿ ವಾಸಿಸುವ ಜನರ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತಿದೆ. ಸ್ಥಳೀಯರಿಗೆ ಅಲರ್ಜಿಯಾಗುವುದು, ಕಣ್ಣುರಿ ಬರುವುದು, ಮಾಲಿನ್ಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿವೆ. ಈ ನಿಟ್ಟಿನಲ್ಲಿ ಈ ಭಾಗದಲ್ಲಿ ಮತ್ತು ಒಟ್ಟಾರೆ ನಗರದಲ್ಲಿ ಸಾರ್ವಜನಿಕೆ ಸಾರಿಗೆ ವ್ಯವಸ್ಥೆಯನ್ನು ಉತ್ತಮಪಡಿಸಬೇಕಿದೆ. ಸೂಕ್ತ ಸ್ಥಳಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿ ಐಟಿ ಪಾರ್ಕ್ ಮತ್ತು ಎಲೆಕ್ಟ್ರಾನಿಕ್ ಸಿಟಿ ಕಡೆ ಹೋಗುವ ಜನರಿಗೆ ವಿಶೇಷ ಬಸ್ ಸೌಲಭ್ಯ ಕಲ್ಪಿಸುವ ಅಗತ್ಯ ಇದೆ. ಶೇ.10-20ರಷ್ಟು ಟ್ರಾಫಿಕ್ ಕಡಿಮೆಯಾದರೂ ಇಲ್ಲಿಯ ಜನಜೀವನ ಸುಧಾರಿಸಲಿದೆ.

ಈ ಕ್ಷೇತ್ರದಲ್ಲಿರುವ ಮಡಿವಾಳ ಕೆರೆ ಬೆಂಗಳೂರಿನ ದೊಡ್ಡ ಕೆರೆಗಳಲ್ಲಿ ಒಂದು. ಆದರೆ ಈ ಕೆರೆಯನ್ನು ಅತಿ ಕೆಟ್ಟ ರೀತಿಯಲ್ಲಿ ನಿರ್ವಹಣೆ ಮಾಡಲಾಗುತ್ತಿದೆ. ಹಲವಾರು ವರ್ಷಗಳಿಂದ ಕೋಟ್ಯಾಂತರ ರೂಪಾಯಿಗಳನ್ನು ಈ ಕೆರೆಗೆ ಸುರಿಯಲಾಗಿದ್ದರೂ ಅದು ಒಳ್ಳೆಯ ಫಲಿತಾಂಶ ನೀಡಿಲ್ಲ. ಈ ಕೆರೆಗೆ ಬರುವ ತ್ಯಾಜ್ಯ ಮತ್ತು ಮಾಲಿನ್ಯದ ನೀರನ್ನು ಸಂಪೂರ್ಣವಾಗಿ ನಿಲ್ಲಿಸಬೇಕಿದೆ. ಕೆರೆಯಲ್ಲಿ ಆಗಿರುವ ಒತ್ತುವರಿಯನ್ನು ತೆರವುಗೊಳಿಸಬೇಕಿದೆ ಮತ್ತು ಅನಗತ್ಯ ಕಟ್ಟಡ ಕಾಮಗಾರಿಗಳನ್ನು ನಿಲ್ಲಿಸಬೇಕಿದೆ. ಈ ಕೆರೆ ಮತ್ತು ಇದರ ಅಂಗಳವನ್ನು ಸರಿಯಾಗಿ, ಪರಿಸರ ಸ್ನೇಹಿಯಾಗಿ ರೂಪಿಸಿದರೆ ಇದನ್ನು ನಗರದ ದಕ್ಷಿಣ ಭಾಗದ ಮಿನಿ-ಲಾಲ್‌ಬಾಗ್ ಆಗಿ ರೂಪಿಸಬಹುದಾಗಿದೆ. ಇಡೀ ಕೆರೆಯ ಸುತ್ತ ಉತ್ತಮ ಕಾಲ್ದಾರಿಯನ್ನು ನಿರ್ಮಿಸುವ ಮೂಲಕ ಅಕ್ರಮ ಒತ್ತುವರಿಯನ್ನು ನಿಲ್ಲಿಸಬಹುದು ಮತ್ತು ವ್ಯಾಯಾಮಕ್ಕಾಗಿ ನಾಲ್ಕಾರು ಕಿಮೀಗಳ ನಡಿಗೆ ಪಥವನ್ನೂ ನಿರ್ಮಿಸಬಹುದಾಗಿದೆ.

ಬೆಂಗಳೂರು ನಗರದಲ್ಲಿ ಗ್ರಂಥಾಲಯಗಳ ಸಂಖ್ಯೆ ಬಹಳ ಕಮ್ಮಿ ಇದೆ ಮತ್ತು ಅವು ಜನರ ಓದಿನ ಅಗತ್ಯವನ್ನು ಪೂರೈಸುತ್ತಿಲ್ಲ. ಪ್ರತಿ ವಾರ್ಡಿನಲ್ಲೂ ಹತ್ತು ಸಾವಿರ ಮತದಾರರಿಗೆ ಒಂದರಂತೆ ಕನಿಷ್ಟ ಮೂರು ಸಾರ್ವಜನಿಕ ಗ್ರಂಥಾಲಯಗಳನ್ನು ನಿರ್ಮಿಸಬೇಕಿದೆ ಮತ್ತು ಒಂದು ಸಮುದಾಯ ಭವನದ ಅಗತ್ಯ ಇದೆ. ಹಾಗೆಯೇ, ಬೆಂಗಳೂರು ನಗರದಲ್ಲಿ ಉತ್ತಮ ಸಾರ್ವಜನಿಕ ಟಾಯ್ಲೆಟ್ ಸೌಲಭ್ಯಗಳಿಲ್ಲ. ಹೆಚ್ಚು ಜನ ಓಡಾಡುವ ಮತ್ತು ಅಂಗಡಿ-ಸಮುಚ್ಚಯಗಳಿರುವ ರಸ್ತೆಗಳಲ್ಲಿ ಉತ್ತಮ ಟಾಯ್ಲೆಟ್‌ಗಳನ್ನು ಆದಷ್ಟು ಶೀಘ್ರದಲ್ಲಿ ನಿರ್ಮಿಸಬೇಕಿದೆ. ಎಲ್ಲಾ ಪಾರ್ಕ್‌ಗಳಲ್ಲಿ, ಬಸ್‌ನಿಲ್ದಾಣಗಳಲಿ, ಹೆಚ್ಚು ಜನ ಸೇರುವ ಸಾರ್ವಜನಿಕ ಸ್ಥಳಗಳಲ್ಲಿ ಈ ಸೌಲಭ್ಯ ಕಲ್ಪಿಸಬೇಕಿದೆ.

ನಮ್ಮ ಸರ್ಕಾರಿ ಶಾಲಾ-ಕಾಲೇಜು ವ್ಯವಸ್ಥೆಯನ್ನು ಸುಧಾರಿಸಬೇಕಿದೆ, ಈ ಕ್ಷೇತ್ರದಲ್ಲಿ ಯಾವುದೇ ಸರ್ಕಾರಿ ಕಾಲೇಜು ಇಲ್ಲ. ಬಡವರಿಗೆ ಮತ್ತು ಕೆಳಮಧ್ಯಮ ವರ್ಗದವರಿಗೆ ಶಿಕ್ಷಣ ಕೈಗೆಟುಕುವ ರೀತಿಯಲ್ಲಿ ಸೌಲಭ್ಯಗಳನ್ನು ಕಲ್ಪಿಸಬೇಕಿದೆ. ಹಾಗೆಯೇ, ಬಿಟಿಎಮ್ ಕ್ಷೇತ್ರದಲ್ಲಿ ಹಲವಾರು ಸ್ಲಮ್‌ಗಳಿವೆ ಮತ್ತು ಇಲ್ಲಿಯ ಬಡತನ ಕಣ್ಣಿಗೆ ರಾಚುವಂತಿದೆ, ಇದನ್ನು ಉತ್ತಮ ಶಿಕ್ಷಣ ಮತ್ತು ಒಳ್ಳೆಯ ಉದ್ಯೋಗ ಕಲ್ಪಿಸುವ ಮೂಲಕ ನಿವಾರಿಸಬೇಕಿದೆ, ಇಲ್ಲಿಯ ಜನ ಅನಿಶ್ಚಿತವಾದ ಮತ್ತು ಕಡಿಮೆ ಆದಾಯದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವರಿಗೆಲ್ಲ ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರಗಳನ್ನು ತೆರೆದು ಉತ್ತಮ ಉದ್ಯೋಗವಕಾಶಗಳನ್ನು ಕಲ್ಪಿಸಬೇಕಿದೆ. ಹಾಗೆಯೇ, ಈ ಕ್ಷೇತ್ರದಲ್ಲಿನ ಅತಿಬಡವರಿಗೆ ನಗರವಾಸಿ ಬಡವರಿಗೆಂದು ಇರುವ ವಸತಿ ಯೋಜನೆಗಳನ್ನು ಅನುಷ್ಟಾನಗೊಳಿಸಬೇಕಿದೆ.

ಪ್ರ : ಇದನ್ನೆಲ್ಲ ಹೇಗೆ ಸಾಧಿಸುತ್ತೀರಿ?
ಉ : ಸರ್ಕಾರದ ಮಟ್ಟದಲ್ಲಿ ಈಗಾಗಲೆ ಅನೇಕ ಯೋಜನೆಗಳಿದ್ದು ಅವುಗಳೆಲ್ಲ ಬಹುತೇಕ ಭ್ರಷ್ಟಾಚಾರದಿಂದ ಮತ್ತು ಕೆಟ್ಟ ಮೇಲ್ವಿಚಾರಣೆಯಿಂದ ಸರಿಯಾಗಿ ಅನುಷ್ಟಾನವಾಗುತ್ತಿಲ್ಲ. ನಾನು ಈ ಕ್ಷೇತ್ರದಲ್ಲಿ ಮೂಲಭೂತಸೌಲಭ್ಯಗಳಷ್ಟೇ ಅಲ್ಲದೆ, ಶಿಕ್ಷಣ, ಉದ್ಯೋಗ, ಮತ್ತು ಸುರಕ್ಷತೆಯ ಬಗ್ಗೆಯೂ ಗಮನ ನೀಡುತ್ತೇನೆ. ಬಿಬಿಎಂಪಿ ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿದ್ದು ನಮ್ಮ ನಗರಸಭಾ ಸದಸ್ಯರು ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡುವ ಅನಧಿಕೃತ ಅಧಿಕಾರಿಗಳಾಗಿಬಿಟ್ಟಿದ್ದಾರೆ. ಇದನ್ನೆಲ್ಲ ನಿಲ್ಲಿಸಬೇಕಿದೆ ಮತ್ತು ಆಡಳಿತ ಮತ್ತು ಕಾಮಗಾರಿ ವಿಚಾರದಲ್ಲಿ ಸಂಪೂರ್ಣ ಪಾರದರ್ಶಕತೆ ತರಬೇಕಿದೆ. ನಾಗರಿಕರನ್ನು ಕ್ಷೇತ್ರಕ್ಕೆ ಸಂಬಂಧಿಸಿದ ವಿಚಾರದಲ್ಲಿ ಹೆಚ್ಚುಹೆಚ್ಚು ಪಾಲ್ಗೊಳ್ಳುವಂತೆ ಪ್ರೇರೇಪಿಸಬೇಕಿದೆ. ಮುಂದಿನ ದಿನಗಳಲ್ಲಿ ನಗರಗಳಲ್ಲಿನ ಬಡತನ ಬಹುಮುಖ್ಯ ಸಮಸ್ಯೆಯಾಗಲಿದ್ದು ಅದನ್ನು ನಿವಾರಿಸಲು ಉತ್ತಮ ಯೋಜನೆಗಳನ್ನು ರೂಪಿಸಬೇಕಿದೆ. ಮಡಿವಾಳ ಕೆರೆಗೆ ಎಲ್ಲಾ ರೀತಿಯ ಕೊಳಚೆ ನೀರು ಬರುವುದನ್ನು ತಡೆಗಟ್ಟಿ ಕೆರೆಯ ಪರಿಸರವನ್ನು ಉತ್ತಮಗೊಳಿಸಬೇಕಿದೆ.

ಪ್ರ : ಈ ಚುನಾವಣಾ ಹೋರಾಟದಲ್ಲಿ ನಾಗರಿಕ ಸಮಾಜದ ಪಾತ್ರವೇನು?
ಉ : ಇತ್ತೀಚಿನ ದಿನಗಳ ನಮ್ಮ ಪ್ರಚಾರ ಕಾರ್ಯ ಬಿಟಿಎಮ್ ಕ್ಷೇತ್ರದ ಮೂಲೆಮೂಲೆಗೂ ತಲುಪಿದೆ. ನಾವು ಯಾಕಾಗಿ ಚುನಾವಣೆಗೆ ನಿಲ್ಲುತ್ತಿದ್ದೇವೆ ಮತ್ತು ಆ ಮೂಲಕ ಏನು ಹೇಳಲು ಪ್ರಯತ್ನಿಸುತ್ತಿದ್ದೇವೆ ಎನ್ನುವುದನ್ನು ಜನ ಗಮನಿಸಲು ಆರಂಭಿಸಿದ್ದಾರೆ. ಪ್ರತಿದಿನವೂ ಇಲ್ಲಿಯ ಮತದಾರರು ನಮ್ಮೊಡನೆ ಕೈಜೊಡಿಸಲು ಮುಂದೆ ಬರುತ್ತಿದ್ದಾರೆ. ಇದು ಬರಲಿರುವ ದಿನಗಳಲ್ಲಿ ಹೆಚ್ಚಾಗಲಿದೆಯೆ ಹೊರತು ಕಡಿಮೆಯಾಗುವುದಿಲ್ಲ ಎನ್ನುವ ವಿಶ್ವಾಸ ನಮಗಿದೆ. ಇಲ್ಲಿಯ ಸ್ಥಳೀಯ ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳಿಗೆ ನಾನು ಪತ್ರ ಬರೆಯುತ್ತಿದ್ದೇನೆ ಮತ್ತು ಅವರನ್ನು ಭೇಟಿ ಮಾಡಿ ಚರ್ಚಿಸಲಿದ್ದೇನೆ. ಇತ್ತೀಚಿನ ದಿನಗಳ ಕೆಟ್ಟ ರಾಜಕೀಯದಿಂದ ಮತ್ತು ಅನರ್ಹ ಜನಪ್ರತಿನಿಧಿಗಳಿಂದ ರೋಸತ್ತಿರುವ ನಾಗರಿಕ ಸಮಾಜ ನಮ್ಮ ಜೊತೆಗಿದೆ ಎನ್ನುವ ವಿಶ್ವಾಸ ನನಗಿದೆ.

ರವಿ ಕೃಷ್ಣಾರೆಡ್ಡಿ ಕುರಿತು :

ರವಿ ಕೃಷ್ಣಾರೆಡ್ಡಿ ವೃತ್ತಿಯಲ್ಲಿ ಸಾಪ್ಟ್‌ವೇರ್ ಇಂಜಿನಿಯರ್ ಮತ್ತು ಪ್ರವೃತ್ತಿಯಲ್ಲಿ ಲೇಖಕ, ಸಾಮಾಜಿಕ ಮತ್ತು ರಾಜಕೀಯ ಕಾರ್ಯಕರ್ತ. ಬೆಂಗಳೂರಿನ ಬಳಿಯ ಬೊಮ್ಮಸಂದ್ರ ಮೂಲದವರಾದ ರವಿ, ಕಳೆದ ಹದಿನೈದು ವರ್ಷಗಳಿಂದ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಉದ್ಯೋಗಿಯಾಗಿದ್ದು, ಅದರಲ್ಲಿ ಹತ್ತು ವರ್ಷ ಅಮೆರಿಕದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ತಮ್ಮ ಸಾಮಾಜಿಕ ಚಟುವಟಿಕೆಗಳನ್ನು ಮತ್ತು ಜವಾಬ್ದಾರಿಗಳನ್ನು ನಿರ್ವಹಿಸುವ ಸಲುವಾಗಿ ಇವರು ಎರಡು ವರ್ಷದ ಹಿಂದೆ ಅಮೆರಿಕದಿಂದ ವಾಪಸಾಗಿದ್ದು ಈಗ ಬೆಂಗಳೂರಿನ ಬಿಟಿಎಮ್ ಲೇಔಟ್‌ನಲ್ಲಿ ವಾಸಿಸುತ್ತಿದ್ದಾರೆ.

ರವಿಯವರು ಕನ್ನಡದಲ್ಲಿ ಹಲವಾರು ವಿಷಯಗಳ ಮೇಲೆ ಲೇಖನಗಳನ್ನು ಬರೆದಿದ್ದು, ಇವು ಪತ್ರಿಕೆಗಳಲ್ಲಿ, ವಾರಪತ್ರಿಕೆಯಲ್ಲಿ, ಅಂತರ್ಜಾಲದಲ್ಲಿ ಪ್ರಕಟಗೊಂಡಿವೆ. ಇಲ್ಲಿಯತನಕ ಇವರ ನಾಲ್ಕು ಪುಸ್ತಕಗಳು ಪ್ರಕಟವಾಗಿವೆ. ಒನ್ಇಂಡಿಯಾ ಕನ್ನಡದಲ್ಲಿ ಪ್ರಕಟವಾದ ಇವರ ಲೇಖನಗಳು ‘ಜಿಜ್ಞಾಸೆ ಗಂಗೆಯ ದಡದ ಕಾಲದಲ್ಲಿ’ ಪುಸ್ತಕ ರೂಪದಲ್ಲಿ ಹೊರಬಂದಿದೆ. 2006ರಲ್ಲಿ ಇವರು “ವಿಕ್ರಾಂತ ಕರ್ನಾಟಕ” ಎನ್ನುವ ಕನ್ನಡ ವಾರಪತ್ರಿಕೆಯನ್ನು ಆರಂಭಿಸಿದ್ದರು. ಪ್ರಸ್ತುತ ಅವರು www.vartamaana.com ಮತ್ತು www.vicharamantapa.net ಎಂಬ ಎರಡು ಅಂತರ್ಜಾಲ ಇ-ಮ್ಯಾಗಜೈನ್‌ಗಳ ಸಂಪಾದಕರಾಗಿದ್ದಾರೆ. ಕನ್ನಡದಲ್ಲಿ “ಭೂಮಿ ಹುಟ್ಟಿದ್ದು ಹೇಗೆ?” ಎಂಬ ವಿಡಿಯೋ ಸಾಕ್ಷ್ಯಚಿತ್ರ ಸಹ ನಿರ್ಮಿಸಿದ್ದಾರೆ.

2011 ರಲ್ಲಿ ರವಿಯವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಹಾಲಿ ಸಚಿವ ಸೋಮಣ್ಣನವರ ವಿರುದ್ಧ ಅಕ್ರಮ ಡಿನೋಟಿಫಿಕೇಷನ್‌ಗೆ ಸಂಬಂಧಿಸಿದಂತೆ ಲೋಕಾಯುಕ್ತ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದಾರೆ. ಈಗ ಆ ಮೊಕದ್ದಮೆ ವಿಚಾರಣೆ ಹಂತದಲ್ಲಿದೆ.

2008ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ತಮ್ಮ ಅಮೆರಿಕದಲ್ಲಿನ ಕೆಲಸದಿಂದ ಒಂದು ತಿಂಗಳು ರಜೆ ತೆಗೆದುಕೊಂಡು ಬಂದಿದ್ದ ರವಿಯವರು, ಕರ್ನಾಟಕದಲ್ಲಿಯ ರಾಜಕೀಯ ರಂಗ ಮೌಲ್ಯಗಳನ್ನು ಕಳೆದುಕೊಂಡಿದ್ದ ಹಿನ್ನೆಲೆಯಲ್ಲಿ “ಸಾರ್ವಜನಿಕ ಜೀವನದಲ್ಲಿ ಮೌಲ್ಯಗಳನ್ನು ಆಗ್ರಹಿಸಿ” ಮೂರು ದಿನಗಳ ಕಾಲ “ಮೌಲ್ಯಾಗ್ರಹ” ಎಂಬ ಉಪವಾಸ ಸತ್ಯಾಗ್ರಹ ಮಾಡಿದ್ದರು. ಆ ಸಂದರ್ಭದಲ್ಲಿ ಜನರಿಂದಲೇ ದೇಣಿಗೆ ಸಂಗ್ರಹಿಸಿ ಅವರು ಸಾಂಕೇತಿಕ ಪ್ರತಿಭಟನೆಯ ರೂಪದಲ್ಲಿ ನಗರದ ಜಯನಗರ ಕ್ಷೇತ್ರದಿಂದ ಚುನಾವಣೆಗೆ ನಿಂತಿದ್ದರು. ಜನರಿಂದ ಸಂಗ್ರಹಿಸಿದ 4.22 ಲಕ್ಷ ರೂಪಾಯಿ ಮೊತ್ತದಲ್ಲಿ ಚುನಾವಣೆ ನಡೆಸಿದ್ದ ಅವರು ತಮ್ಮ ಎಲ್ಲಾ ದೇಣಿಗೆ ಮತ್ತು ಖರ್ಚುವೆಚ್ಚದ ವಿವರಗಳನ್ನು ಅಂತರ್ಜಾಲದಲ್ಲಿ ಪ್ರಕಟಿಸಿದ್ದರು.

Both comments and pings are currently closed.

Comments are closed.

Powered by WordPress