ನೀವು ವರ್ಷಗಳ ಕಾಲ ಕಟ್ಟಿದ್ದು ರಾತ್ರೋರಾತ್ರಿ ಹಾಳುಗೆಡವಲ್ಪಡಬಹುದು.

ದುರದೃಷ್ಟವಶಾತ್, ಇಂತಹದ್ದು ಪ್ರತಿದಿನ ಆಗುತ್ತಲೆ ಇರುತ್ತದೆ. ಯಾವುದೊ ಒಂದು ಮನೆ ಸುಟ್ಟು ಹೋಗುತ್ತದೆ. ಒಂದು ವ್ಯವಹಾರ, ಕಂಪನಿ ಮುಳುಗುತ್ತದೆ. ಹಣ, ಆಸ್ತಿಯೆಲ್ಲ ಹೋಗಿಬಿಡುತ್ತದೆ. ಪ್ರವಾಹ ಒಂದು ಸಮುದಾಯವನ್ನೆ ನಾಶ ಮಾಡಿ ಬಿಡುತ್ತದೆ. ಪ್ರತಿದಿನವೂ ಏನೋ ಒಂದು ಅನಾಹುತ ಘಟಿಸುತ್ತಲೆ ಇರುತ್ತದೆ. ಜನ ವರ್ಷಗಟ್ಟಲೆ ದುಡಿದು ಕಟ್ಟಿದಂತಹವು ಇದ್ದಕ್ಕಿದ್ದಂತೆ ನಾಶವಾಗಿ ಬಿಡುತ್ತವೆ. ಇಂತಹ ದುರಂತಗಳಿಗೆ ಒಳಗಾಗಿ ಮತ್ತೆ ಅವನ್ನು ಧೈರ್ಯದಿಂದ ಎದುರಿಸುವ ಜನರ ಸ್ಥೈರ್ಯವನ್ನು ನಾವು ಮೆಚ್ಚುತ್ತೇವೆ. ಅವರಿಗಾಗಿ ನಮ್ಮ ಹೃದಯಗಳು ಮಿಡಿಯುತ್ತವೆ. ಅವರ ನೋವು ಆಳವಾದದ್ದು ಎಂದು ನಮಗೆ ಗೊತ್ತು.

ನೀವು ಕಟ್ಟಿದಂತಹವು ನಿಮ್ಮ ಕಣ್ಣಮುಂದೆಯೆ ನಾಶವಾಗಿ ಬಿಡುವುದು ನಿಜಕ್ಕೂ ಬಾಧಿಸುವಂತಹ ವಿಷಯ. ಕೆಲವನ್ನು ರಾತ್ರೋರಾತ್ರಿ ಕಳೆದುಕೊಳ್ಳಬಹುದು. ಇನ್ನು ಕೆಲವು ನೀವು ಬದುಕಿರುವ ತನಕ ಇದ್ದರೂ, ಕಾಲಕ್ರಮೇಣ ಅವೂ ನಾಶವಾಗಿಯೇ ತೀರುತ್ತವೆ.

ಅಷ್ಟಾದರೂ, ಅವು ಕಟ್ಟಲು ಯೋಗ್ಯ. ಕಟ್ಟುವ ಕೆಲಸ ಸಂತೋಷ ಮತ್ತು ತೃಪ್ತಿಯನ್ನು ಕೊಡುತ್ತದೆ.

ನಾಲ್ಕು ವರ್ಷದ ನಮ್ಮ ಮಗಳೊಡನೆ ಬೀಚಿನಲ್ಲಿ ಕಳೆದ ಒಂದು ದಿನ ನನ್ನ ಹೆಂಡತಿಯ ಮರೆಯಲಾಗದ ನೆನಪುಗಳಲ್ಲಿ ಒಂದು. ಮರಳಿನಲ್ಲಿ ಅರಮನೆ ಕಟ್ಟುವ ಬದಲು ನನ್ನ ಹೆಂಡತಿ ಮತ್ತು ಮಗಳು ಅಂದು ಮರಳಿನ ಆಮೆ ಮಾಡಲು ತೀರ್ಮಾನಿಸಿದರು. ಎದ್ದು ಕಾಣಿಸುವ ಚಿಪ್ಪು, ಅದರ ಸುಂದರ ಪುಟ್ಟಪಾದದ ಕಾಲುಗಳು, ಎಲ್ಲಾ ಗೊತ್ತಿದೆ ಎನ್ನುವಂಥ ಭಾವದ ಕಣ್ಣುಗಳು; ಇವೆಲ್ಲಾ ಸ್ಪಷ್ಟವಾಗಿ ಕಾಣಿಸುವಂತಹ ದೊಡ್ಡ ಆಮೆಯನ್ನೆ ಮಾಡಲಾರಂಭಿಸಿದರು. ಅವರು ಅದನ್ನು ಮಾಡುತ್ತ ಹೋದಂತೆ ಅತ್ತ ಸಮುದ್ರದ ಅಲೆಗಳು ಏರುತ್ತ ಹೋದವು. ಅವರು ಮರಳಿನ ಆಮೆಯನ್ನು ಸಂಪೂರ್ಣವಾಗಿ ಮಾಡಿದ ಮೇಲೆ ಏರುತ್ತ ಬಂದ ಅಲೆಯೊಂದು ಅದರ ಮೇಲೆ ಹರಿಯಿತು.

ಮರಳಿನ ಆಮೆ ನೀರಿನಲ್ಲಿ ಕರಗಿ ಕಣ್ಮರೆಯಾಗುತ್ತ ಹೋಗುತ್ತಿದ್ದಂತೆ, “ಬೈ-ಬೈ, ಆಮೆ,” ಎಂದ ನಮ್ಮ ಮಗಳು, “ಅದು ಸಮುದ್ರಕ್ಕೆ ವಾಪಸು ಹೋಯಿತು,” ಎಂದು ಅವರಮ್ಮನಿಗೆ ತಿಳಿಸಿದಳು. ಆಮೆ ಸಹಜವಾಗಿ ಸಮುದ್ರಕ್ಕೆ ವಾಪಸು ಹೋಗುವ ಕ್ರಿಯೆಯಂತೆ ನಮಗದು ಕಾಣಿಸಿತು.

ಬೀಚುಗಳಲ್ಲಿ ಮಕ್ಕಳೊಡನೆ, ಸ್ನೇಹಿತರೊಡನೆ ಮರಳಿನ ಪ್ರತಿಮೆಗಳನ್ನು ಮಾಡುವಾಗ ಏನೋ ಒಂದನ್ನು ಸೃಷ್ಟಿಸುತ್ತಿರುವ ಮತ್ತು ನಮ್ಮವರೊಡನೆ ಇರುವ ಸಂತೋಷ ನಮ್ಮದಾಗಿರುತ್ತದೆ. ಆ ಸಂತೋಷ ಮರಳಿನ ಪ್ರತಿಮೆಯ ಶಾಶ್ವತೆಯಿಂದಾಗಿ ಬರುವಂತಹುದಲ್ಲ. ಸಮುದ್ರದ ಅಲೆಗಳು ಮೇಲೇರುತ್ತವೆ ಮತ್ತು ಅವು ಮರಳಿನ ಪ್ರತಿಮೆಗಳನ್ನು ಕರಗಿಸುತ್ತವೆ ಎಂದು ನಮಗೆ ಗೊತ್ತಿರುತ್ತದೆ. ಆದರೆ ನಾವು ಕಳೆದ ಒಳ್ಳೆಯ ಸಮಯವನ್ನಾಗಲಿ, ಅಥವ ನೆನಪುಗಳನ್ನಾಗಲಿ ಅದು ಬದಲಾಯಿಸುವುದಿಲ್ಲ. ನಮ್ಮ ಆ ಸಂತೋಷ ಮತ್ತು ತೃಪ್ತಿ ಕಟ್ಟುವುದರಲ್ಲಿರುತ್ತದೆ.

ಅದೃಷ್ಟವಶಾತ್, ಬಹಳಷ್ಟು ಕೆಲಸಗಳು ಮರಳಿನ ಪ್ರತಿಮೆಗಳಿಗಿಂತ ಹೆಚ್ಚಿನ ಕಾಲ ಬಾಳುತ್ತವೆ. ಕೆಲವಂತೂ ಶತಮಾನಗಳ ಕಾಲ ಇರುತ್ತವೆ. ಮೈಕೆಲಾಂಜೆಲೊ ಐದು ನೂರು ವರ್ಷಗಳ ಹಿಂದೆ ಇದ್ದವನು. ಆದರೆ ಅವನು ಕೆತ್ತಿದ ಅಮೃತಶಿಲೆಯ ಅನೇಕ ಶಿಲ್ಪಗಳು ಹಾಗೂ ವರ್ಣಚಿತ್ರಗಳು ಇನ್ನೂ ಇವೆ ಹಾಗು ಇಂದಿಗೂ ನಮ್ಮ ಮನಸ್ಸಂತೋಷಪಡಿಸುತ್ತ, ನಮ್ಮ ಸಾಂಸ್ಕೃತಿಕ ಜ್ಞಾನವನ್ನು ಹೆಚ್ಚಿಸುತ್ತ ಇವೆ. ಎಂಟುನೂರು ವರ್ಷಗಳ ಹಿಂದಿನ ಯೂರೋಪಿನ ಚರ್ಚುಗಳನ್ನು, 1200 ವರ್ಷಗಳ ಹಿಂದಿನ ಜಪಾನಿನ ದೇವಾಲಯಗಳನ್ನು, 3000 ವರ್ಷಗಳ ಹಿಂದೆ ಕಟ್ಟಲ್ಪಟ್ಟಿರುವ ಈಜಿಪ್ಟಿನ ಪಿರಮಿಡ್ಡುಗಳನ್ನು ನಾವು ಈಗಲೂ ಸಂದರ್ಶಿಸಬಹುದು. ಹಾಗೆಯೆ, ಸಾವಿರಾರು ವರ್ಷಗಳ ಹಿಂದಿನ ಪುರಾತನ ಧಾರ್ಮಿಕ ಗ್ರಂಥಗಳು, ಸ್ಮೃತಿಗಳು, ನಿಯಮಾವಳಿಗಳು ಇಂದಿಗೂ ನಮ್ಮಲ್ಲಿವೆ. ಸಂಪೂರ್ಣವಾಗಿ ಲಭ್ಯವಿರುವ ಕಾನೂನು ಗ್ರಂಥಗಳಲ್ಲಿ ಅತಿ ಪ್ರಾಚೀನವಾದ ಹಮ್ಮುರಾಬಿಯ ನಿಯಮಾವಳಿ ಬ್ಯಾಬಿಲೋನಿನ ಕಾಲದಷ್ಟು, ಅಂದರೆ ಕ್ರಿಸ್ತಪೂರ್ವ 1750 ರಷ್ಟು ಹಿಂದಿನದು.

ಕೆಲವು ಶತಮಾನಗಳ ಕಾಲ ಬಾಳಿದರೆ, ನಾವು ಮಾಡುವ ಬಹಳಷ್ಟು ಕೆಲಸಗಳು ನಮ್ಮ ಜೀವಮಾನದ ಆಚೆಗೆ ಬಾಳುವುದಿಲ್ಲ. ಜ್ಞಾನಾಧಾರಿತ ಉದ್ಯಮದಲ್ಲಿ ನಾವು ಇಂದು ಏನನ್ನು ಸೃಷ್ಟಿಸುತ್ತೇವೆಯೊ ಅದು ಮುಂದಿನ ಅನ್ವೇಷಣೆಯಿಂದ, ಹೊಸ ಸತ್ಯದಿಂದ, ತಂತ್ರಜ್ಞಾನದ ಹೊಸ ಬೆಳವಣಿಗೆಯಿಂದ ಕೆಲವೆ ದಿನಗಳಲ್ಲಿ ಉಪಯೋಗಕ್ಕೆ ಬಾರದೆ ಹೋಗುತ್ತದೆ. ಸಂಘಸಂಸ್ಥೆಗಳಲ್ಲಂತೂ ನಮ್ಮ ಸಾಧನೆಗಳು ಬಹಳ ಬೇಗ ಮಸುಕಾಗಬಹುದು. ಅಲ್ಲಿ ಕೆಲಸ ಮಾಡುತ್ತಿದ್ದಾಗ ಎಲ್ಲರನ್ನೂ ಸೇರಿಸಿಕೊಂಡು, ಉತ್ತಮವಾಗಿ ಕಾರ್ಯನಿರ್ವಹಿಸುವ ತಂಡಗಳನ್ನು ತಯಾರು ಮಾಡಿ, ಒಂದು ನಿರ್ದಿಷ್ಟ ಗುರಿಯತ್ತ ಕಂಪನಿಯನ್ನು ಕೊಂಡೊಯ್ದಿರುತ್ತೇವೆ. ನಮ್ಮ ಸೇವಾವಧಿ ಮುಗಿದಾಗ ಕಂಪನಿಯ ಕಾರ್ಯಸಂಸ್ಕೃತಿಯಲ್ಲಿ ನಮ್ಮದೇ ಆದ ಪರಂಪರೆಯನ್ನು ಬಿಟ್ಟು ಹೋಗಿರುತ್ತೇವೆ. ಆದರೆ ವರ್ಷಗಳು ಉರುಳಿದಂತೆ, ಅವುಗಳಲ್ಲಿ ಕೆಲವೇ ಕೆಲವು ಪರಂಪರೆಗಳು ಮಾತ್ರ ಉಳಿದಿರುತ್ತವೆ. ಕೆಲವೊಮ್ಮೆ ಸಂದರ್ಭಗಳು ಹೇಗೆ ಬರುತ್ತವೆ ಅಂದರೆ ಎಲ್ಲವೂ ವರ್ಷಗಳ ಬದಲು ತಿಂಗಳುಗಳಲ್ಲಿಯೆ ಬದಲಾಗಿ ಬಿಡುತ್ತವೆ. ಆದರೆ, ನಮ್ಮದಾಗಿದ್ದ ಕಾಲದಲ್ಲಿ ಅರ್ಥಪೂರ್ಣವಾಗಿದ್ದನ್ನು ನಾವು ಮಾಡಿದ್ದೆವು ಎನ್ನುವುದಷ್ಟೆ ಆಗ ಮುಖ್ಯವಾಗುತ್ತದೆ.

ನೀವು ವರ್ಷಗಳ ಕಾಲ ಕಟ್ಟಿದ್ದು ರಾತ್ರೋರಾತ್ರಿ ಹಾಳುಗೆಡವಲ್ಪಡಬಹುದು. ಆದರೆ ನೀವು ಏನನ್ನು ಸಾಧಿಸಿದ್ದಿರೊ ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ನೀವು ಹೆಮ್ಮೆಯಿಂದ, ಸಂತೋಷದಿಂದ ನೆನಪಿಸಿಕೊಳ್ಳಬಹುದಾದ್ದನ್ನು ನೀವು ಮಾಡಿದ್ದೀರಿ.

ನೀವು ಕಟ್ಟಿದ್ದು ಭವಿಷ್ಯದಲ್ಲಿಯೂ ಅನೇಕ ಕಾಲ ಬಾಳಿದರೆ ಅದು ಖುಷಿ ಕೊಡುತ್ತದೆ ಎನ್ನುವುದೇನೊ ಸರಿ. ಆದರೆ, ಬಹಳ ಕಾಲ ಬರುವುದಿಲ್ಲ ಎಂದು ಕಟ್ಟುವುದನ್ನು ನಿಲ್ಲಿಸಬೇಡಿ. ಕಟ್ಟುವುದರಿಂದ ಸಿಗುವ ಅರ್ಥ ಮತ್ತು ಆನಂದ ಬಹಳ ಕಾಲ ಇರುತ್ತದೆ. ಅದು ಎಂದೆಂದಿಗೂ ನಿಮ್ಮದಾಗಿರುತ್ತದೆ.

ನೀವು ವರ್ಷಗಳ ಕಾಲ ಕಟ್ಟಿದ್ದು ರಾತ್ರೋರಾತ್ರಿ ಹಾಳುಗೆಡವಲ್ಪಡಬಹುದು.
ಏನೇ ಆಗ್ಲಿ, ಕಟ್ಟಿಯೇ ಕಟ್ಟಿ.


ಈ ಅಧ್ಯಾಯದ ಆಡಿಯೊವನ್ನು ಇಲ್ಲಿ ಕೇಳಬಹುದು:

 

Leave a Reply