ಚುನಾವಣೆ ಅಲರ್ಜಿಯಾದರೆ ಯಾರಿಗೆ ನಷ್ಟ?

[ಇದನ್ನು ನಾನು ಹನ್ನೊಂದು ವರ್ಷಗಳ ಹಿಂದೆ (13-03-2002) ಬರೆದದ್ದು, ದಟ್ಸ್‌ಕನ್ನಡ.ಕಾಮ್‌ನಲ್ಲಿ. ಹೆಚ್ಚೇನೂ ಬದಲಾಗಿಲ್ಲ. ಆದರೆ, 2013 ರ ವಿಧಾನಸಭಾ ಚುನಾವಣೆಯನ್ನು ಕರ್ನಾಟಕದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಗುಣಾತ್ಮಕ ತಿರುವಿನೆಡೆಗೆ ಚಲನೆ ಆರಂಭಿಸಿದ ವರ್ಷ ಎಂದು ನಿರೂಪಿಸುವ ಕ್ರಿಯೆಯಲ್ಲಿ ನನ್ನ ಎಲ್ಲಾ ಯುವಮಿತ್ರರನ್ನು, ನಾಗರಿಕರನ್ನು ಸಹಭಾಗಿಗಳಾಗಲು ಆಹ್ವಾನಿಸುತ್ತೇನೆ.    ರವಿ…]

– ರವಿ ಕೃಷ್ಣಾರೆಡ್ಡಿ

ಇದು ಚುನಾವಣೆ ಸಮಯ. ನಾಡಿನ ದಿಕ್ಕನ್ನು ಭವಿಷ್ಯವನ್ನು ನಿರ್ದೇಶಿಸುವ ಪರ್ವಕಾಲ. ಇದು ಅಕ್ಷರ ಶಿಕ್ಷಣ ಪಡೆರಿರುವ ಕೆಲವು ಜನರು ತಮ್ಮ ಸಿನಿಕತೆ ಮತ್ತು ಬೇಜವಾಬ್ದಾರಿತನವನ್ನು ಎಲ್ಲರ ಮುಂದೆ ಬಯಲುಗೊಳಿಸಿಕೊಳ್ಳುವ ಅಪ್ರಬುದ್ಧ ಸಮಯ ಸಹ.

ಪತ್ರಿಕೆಗಳ ಓದುಗರ ವಿಭಾಗಕ್ಕೆ ಪತ್ರ ಬರೆಯುವವರ ವಿದ್ಯಾರ್ಹತೆ ತಿಳಿದುಕೊಳ್ಳುವುದು ಕಷ್ಟವಾದರೂ ಅವರೆಲ್ಲ ಖಂಡಿತವಾಗಿ ಪ್ರತಿದಿನವೂ ಪತ್ರಿಕೆ ಓದುವವರು ಎನ್ನುವುದು ಅಷ್ಟೇನೂ ಸಂದೇಹಾಸ್ಪದವಲ್ಲ. ಹಾಗೆಯೇ ಇವರು ಕಾಲ-ದೇಶದ ಆಗುಹೋಗುಗಳನ್ನು ಗಮನಿಸುವವರು, ಅಕ್ಷರ ಜ್ಞಾನ ಉಳ್ಳವರು, ಚಿಂತಿಸಬಲ್ಲವರು, ಮತ್ತು ಕನಿಷ್ಠ ಒಂದು ಅಭಿಪ್ರಾಯ ಉಳ್ಳವರು ಎನ್ನುವುದನ್ನು ಸಹ ಒಪ್ಪಿಕೊಳ್ಳಲೇಬೇಕು. ಆದರೂ ಈ ವರ್ಗಕ್ಕೆ ಸೇರಿದ ಕೆಲವು ಜನರಿಂದ ಪ್ರತಿ ಚುನಾವಣೆ ಸಮಯದಲ್ಲಿಯೂ ಋಣಾತ್ಮಕ ಧೋರಣೆಯಲ್ಲಿ ಅನವಶ್ಯಕವಾದ ಚುನಾವಣೆ ಬಂತೆಂದೋ, ದುಡ್ಡು ದಂಡವೆಂತಲೊ, ಎಲ್ಲಾ ಪಕ್ಷದವರೂ ಅಭ್ಯರ್ಥಿಗಳೂ ಕಳ್ಳರು ಸುಳ್ಳರೆಂತಲೂ, ಯಾರು ಬಂದರೂ ರಾಗಿ ಬೀಸುವುದು ತಪ್ಪುವುದಿಲ್ಲ ಎನ್ನುವಂತಹ ನಿರಾಶಾವಾದದ ಸಿನಿಕತನದ ಸಿದ್ಧಪಡಿಸಿದ ಗಾದೆಗಳೇ ಬಿಳಿ ಪತ್ರಿಕೆಯ ಮೇಲೆ ಕಪ್ಪು ಬಣ್ಣದ ಚಿತ್ತಾರದಲ್ಲಿ ಅಕ್ಷರಗಳಾಗಿ ಮೂಡುತ್ತವೆ. ಇಂತಹ ಮಾತುಗಳೆ ನಾಲ್ಕು ಜನ ಸೇರಿದಲ್ಲಿ ಇಲ್ಲದ ಧೈರ್ಯಕ್ಕೆ ಗುರಾಣಿಯಾಗುತ್ತವೆ.

ಈ ರೀತಿ ಚುನಾವಣೆಗೆ ಬೆನ್ನು ತೋರಿಸುವ ಮಂದಿ ಬಯಸುವುದಾದರೂ ಏನನ್ನು? ಚುನಾವಣೆ ಬೇಡದಿದ್ದಲ್ಲಿ ನ್ಯಾಯಪಾಲನೆ ಮತ್ತು ಆಡಳಿತ ವ್ಯವಸ್ಥೆ ನೋಡಿಕೊಳ್ಳುವವರು ಯಾರು? ಅಧಿಕಾರ ಹಸ್ತಾಂತರವಾಗುವ ಬಗೆ ಹೇಗೆ? ಯಾರಿಗೆ ಹಸ್ತಾಂತರವಾಗಬೇಕು? ಜನರ ಪ್ರಾತಿನಿಧ್ಯವಿಲ್ಲದ, ಮಾತಿಲ್ಲದ ರಾಜ ಪರಂಪರೆ ಬೇಕೆ? ರಾಜ ಪ್ರತ್ಯಕ್ಷ ದೇವತಾ ಎಂದು ಒಪ್ಪಿಕೊಳ್ಳಬೇಕೆ? ವ್ಯಕ್ತಿಯ ಕ್ರಿಯಾ ಮತ್ತು ಚಿಂತನ ಶಕ್ತಿಗಿಂತ ಒಂದು ವಂಶದ ಕ್ರಿಯಾಶಕ್ತಿ ದೊಡ್ಡದೇ? ಎಲ್ಲಾ ಕಾಲಕ್ಕೂ ಮುಕ್ಕಾಗದೇ ಬೆಳೆಯುವಂತಹುದೇ? ಒಳ್ಳೆಯದೇ? ಅಥವಾ ತಾನು ಸಾಯುವ ತನಕ ಎಲ್ಲವೂ ತನ್ನ ಮೂಗಿನ ನೇರಕ್ಕೇ ಪ್ರಶ್ನಿಸದೇ ನಡೆಸಲ್ಪಡಬೇಕೆನ್ನುವ ಸರ್ವಾಧಿಕಾರಿ ಬೇಕೆ? ಆ ಒಬ್ಬನ ಕೈಯಲ್ಲಿ ಕೋಟ್ಯಾಂತರ ಜನರ ದಿನಚರಿ ಮೊದಲೇ ಬರೆಸಬೇಕೆ? ಪುಣ್ಯಕ್ಕೆ ಅವನಿಗೂ ಮರಣ ಉಂಟು. ಹಾಗೆ ಅವನು ಸತ್ತಾಗ ಮುಂದೆ ಆಳುವವರು ಯಾರು? ಈ ಮಧ್ಯೆ ಜನರ ನಾಗರೀಕ ಹಕ್ಕುಗಳ, ಸ್ವಾತಂತ್ರ್ಯದ, ಜೀವನ ರೀತಿಯ ಮೂಲಭೂತ ಹಕ್ಕುಗಳ ಗತಿಯೇನು? ಈಗಿರುವವರಿಗಿಂತ ಒಳ್ಳೆಯ ಆಡಳಿತ ಕೊಡಬಲ್ಲವರು ಇದ್ದಾರೆಯೇ? ಇಲ್ಲವೇ? ನೂರಾರು ಸುಸಂಬದ್ಧ ಅರ್ಥ ಸಿಗುವ ಪ್ರಶ್ನೆಗಳು.

ಈ ಮನುಷ್ಯ ತನ್ನ ದೇಶ ಒಡೆದು ಹೋಗದಂತೆ ಒಕ್ಕೂಟದಲ್ಲಿ ಎಲ್ಲಾ ರಾಜ್ಯಗಳು ಸಮಾನ ಹಕ್ಕುಗಳೊಂದಿಗೆ ಇರಲು ಅವಿಶ್ರಾಂತವಾಗಿ ಶ್ರಮಿಸಿದ. ಅಮೇರಿಕಾದ ಅಧ್ಯಕ್ಷನಾದ ಮೇಲೆ ಇಡೀ ದಕ್ಷಿಣ ರಾಜ್ಯಗಳ ಬಹುಸಂಖ್ಯಾತ ಜನರ ಅಸಮಾಧಾನಕ್ಕೆ ಕೋಪಕ್ಕೆ ಈಡಾಗಿ ಜನಪ್ರೀತಿ ಕಳೆದುಕೊಂಡ. ಆತ ಚುನಾವಣೆಗೆ ನಿಂತಿದ್ದಾಗ ಮತ ಚಲಾವಣೆಯ ಅಧಿಕಾರವಿದ್ದ ಆ ದಕ್ಷಿಣ ರಾಜ್ಯಗಳ ಬಿಳಿ ಜಮೀನುದಾರರು ಆತನಿಗೆ ಮತವನ್ನೇ ಹಾಕಲಿಲ್ಲ. ಈತ ಮತ್ತು ಈತನ ಪಕ್ಷ ಯಾರಿಗೆ ನ್ಯಾಯ ಕೊಡಿಸಬೇಕು ಎಂದುಕೊಂಡಿತೋ ಅವರಿಗೆ ವೋಟಿನ ಅಧಿಕಾರವಿರಲಿಲ್ಲ, ದುಡ್ಡಿನ ಬಲ ಇರಲಿಲ್ಲ, ಸ್ವಾತಂತ್ರ್ಯವಂತೂ ಮೊದಲಿಗೇ ಇರಲಿಲ್ಲ. ಈತ ತನ್ನ ಮತ್ತು ಆ ರಾಷ್ಟ್ರದ ಮೂಲಭೂತ ಸಿದ್ಧಾಂತ, ದೇಶಭಕ್ತಿ ಮತ್ತು ಮಾನವತೆಯೆಡೆಗಿನ ಕಾಳಜಿಯಾಂದಿಗೆ ರಾಜಿ ಮಾಡಿಕೊಂಡು ಸ್ವಾರ್ಥಿಯಾಗಿದ್ದಿದ್ದರೆ ಆತ ಅನುಭವಿಸಿದ ಕಷ್ಟ ಮತ್ತು ಅವಮಾನಗಳನ್ನೆಲ್ಲ ತಪ್ಪಿಸಿಕೊಳ್ಳಬಹುದಿತ್ತು. ಹತ್ಯೆಗೊಳಗಾಗದೆ ಇನ್ನಷ್ಟು ವರ್ಷ ಅಧಿಕಾರ ನಡೆಸಬಹುದಿತ್ತೇನೋ. ಹಾಗಾಗದೆ ವಾಷಿಂಗ್ಟನ್‌, ರೂಸ್‌ವೆಲ್ಟ್‌, ಕೆನ್ನೆಡಿಗಳಂತಲ್ಲದೆ ಅಮೇರಿಕಾದಾಚೆಗೂ ಸಜ್ಜನರ ಮನ್ನಣೆ ಗಳಿಸಿ ಬುದ್ಧ, ಗಾಂಧಿಯರಂತೆ ಸಂದವ ಅಬ್ರಹಾಂ ಲಿಂಕನ್. ಪ್ರಜಾಪ್ರಭುತ್ವವೆಂದರೆ ಜನರಿಂದ ಜನರಿಗಾಗಿ ಜನರೇ ನಡೆಸುವ ಸರ್ಕಾರ ಎಂಬ ಬೀಜಮಂತ್ರ ಕೊಟ್ಟವ. ಕಾಲಕ್ರಮೇಣ ಆತ ಸತ್ತ ನೂರು ವರ್ಷಗಳ ನಂತರ Abraham_Lincolnಲಿಂಕನ್‌ನನ್ನು ಕಾಯಾ ವಾಚಾ ಮನಸಾ ವಿರೋಧಿಸಿದ್ದ ಡೆಮೊಕ್ರಾಟ್‌ ಪಕ್ಷದವರು ಕೆನ್ನೆಡಿಯ ನೇತೃತ್ವದಲ್ಲಿ ಲಿಂಕನ್‌ನ ರಿಪಬ್ಲಿಕನ್‌ ಪಕ್ಷದವರಿಗಿಂತ ಸುಧಾರಣವಾದಿಗಳೂ ನಾಗರೀಕ ಹಕ್ಕುಗಳ ಹೋರಾಟಗಾರರಾಗಿಯೂ ಪರಿವರ್ತಿತರಾಗಿ ಆತ ನಂಬಿಕೊಂಡಿದ್ದ ತತ್ವಗಳನ್ನು ಹೊಸ ಶತಮಾನದಲ್ಲಿ ಸಮರ್ಥವಾಗಿ ನಡೆಸಿಕೊಟ್ಟರು. ಇದು ವಿರೋಧಿಗಳನ್ನು ತಮ್ಮ ನ್ಯಾಯನೀತಿಗಳಿಂದಾಗಿಯೇ ಗೆಲ್ಲುವ ಪರಿ.

ಲಿಂಕನ್‌ ಮಹಾಶಯ ಚುನಾವಣೆಯಲ್ಲಿ ಜನರ ಸಕ್ರಿಯ ಪಾಲ್ಗೊಳ್ಳುವಿಕೆಯ ಬಗೆಗೆ ಹೇಳಿದ ಮಾತನ್ನು ಈ ಸಿನಿಕ, ತಮ್ಮ ಹಿತಾಸಕ್ತಿಯನ್ನು ಮಾತ್ರವೇ ಗಮನಿಸುವ ಸ್ವಾರ್ಥಿಗಳು ನೆನಪಿಟ್ಟುಕೊಂಡರೆ ಎಲ್ಲರಿಗೂ ಒಳ್ಳೆಯದಾಗುತ್ತದೆ; “ಚುನಾವಣೆಗಳು ಜನರಿಗೆ ಒಳಪಟ್ಟಿದ್ದು. ಅದು ಅವರ ತೀರ್ಮಾನ. ಅವರು ಬೆಂಕಿಗೆ ಬೆನ್ನು ತಿರುಗಿಸಲು ತೀರ್ಮಾನಿಸಿ ತಮ್ಮ ಹಿಂಬದಿ ಸುಟ್ಟುಕೊಂಡರೆ ತಮ್ಮ ಸುಟ್ಟ ಗಾಯಗಳ ಮೇಲೆಯೇ ಕುಳಿತುಕೊಳ್ಳಬೇಕಾಗುತ್ತದೆ.”

ಚುನಾವಣೆಯಲ್ಲಿ ಪಾಲ್ಗೊಳ್ಳುವುದು ಎಂದರೆ ಮತ ಚಲಾಯಿಸುವುದು ಮಾತ್ರವಷ್ಟೇ ಅಲ್ಲ. ಅಸಲಿಗೆ ಪ್ರಶ್ನೆ ಇರುವುದು ಮತ ಚಲಾವಣೆಯಲ್ಲಿ ಅಲ್ಲವೇ ಅಲ್ಲ. ಬದಲಿಗೆ ನಾವು ಚುನಾವಣೆಯ ಪ್ರಕ್ರಿಯೆ ಮತ್ತು ಅಭ್ಯರ್ಥಿಗಳೆಡೆಗೆ ತೋರಿಸುವ ಆಸಕ್ತಿಯಲ್ಲಿ. ನಿರಾಸಕ್ತಿ , ಎಲ್ಲರೂ ಒಂದೇ, ದುಡ್ಡು ದಂಡ ಎಂಬಂತಹ ಸಿನಿಕತೆ ಒಂದು ಅರ್ಥಪೂರ್ಣ ಚರ್ಚೆ ಹುಟ್ಟಲು ಬಿಡುವುದಿಲ್ಲ. ಹಾಗೆಯೇ ನಡೆಯುತ್ತಿರುವ ಚರ್ಚೆಯನ್ನು ಮಧ್ಯದಲ್ಲಿಯೇ ದಾರಿ ತಪ್ಪಿಸಿ ಸಹಪೌರರು ಚುನಾವಣೆಗೆ ಬೆನ್ನು ತಿರುಗಿಸುವಂತೆ ಮಾಡುತ್ತದೆ. ಚರ್ಚೆ ಆಗದೆ ಅಭ್ಯರ್ಥಿಯ ಹಾಗೂ ಪಕ್ಷದ ಗೊತ್ತುಗುರಿ, ಯೋಗ್ಯತೆ, ಬದ್ಧತೆಗಳು ಎಲ್ಲರಿಗೂ ತಿಳಿಯುವುದಿಲ್ಲ. ಆಯ್ಕೆಗೆ ನಿರ್ದಿಷ್ಟ ಮಾನದಂಡವಿರುವುದಿಲ್ಲ. ಇವೆಲ್ಲವುಗಳ ಪರಿಣಾಮವಾಗಿ ವ್ಯವಸ್ಥೆಯಲ್ಲಿ ನಂಬಿಕೆ ಕಳೆದುಕೊಂಡವರು ನಿರಾಸಕ್ತರಾಗಿ ಮತ ಚಲಾಯಿಸುವುದಿಲ್ಲ; ಮತ ಚಲಾಯಿಸುವ ಬಹಳಷ್ಟು ಜನರಿಗೆ ಮತದ ಶಿಕ್ಕೆ ಒತ್ತುವುದು ಈ ಕ್ಯಾಸಿನೋಗಳ ಸ್ಲಾಟ್‌ ಯಂತ್ರಗಳಲ್ಲಿ ನಾಣ್ಯ ನೂಕಿ ಅದೃಷ್ಟದ ಮೇಲೆ ಭಾರ ಹಾಕಿ ಗುಂಡಿ ಒತ್ತುವ ಕ್ರಿಯೆಯಂತೆ ಕೇವಲ ಒಂದು ಮನರಂಜನೆಯ, ಸಮಯ ಕೊಲ್ಲುವ, ಕುತೂಹಲದ ಕಾರ್ಯ. ಇವರ ಆಸಕ್ತಿ ತಾನು ಒತ್ತಿದ ಚಿಹ್ನೆಯ ಅಭ್ಯರ್ಥಿ ಗೆದ್ದನೇ ಎಂದು ತಿಳಿದುಕೊಳ್ಳುವಲ್ಲಿಗೆ ಕೊನೆಯಾಗುತ್ತದೆ. ಈ ತರಹದ ಧೋರಣೆ ಶಿಲಾಯುಗದ ಮಂಗನ ಆಟದಂತೆ ಅಪ್ರಬುದ್ಧತೆಯ ಲಕ್ಷಣದ್ದು.

ಚುನಾವಣೆಯ ಸಮಯದಲ್ಲಿ ರಾಜಕಾರಣಿಗಳು ನಡೆದುಕೊಳ್ಳುವ ರೀತಿ, ಕೆಲವರು ಬಳಸುವ ಜಾತಿ-ಧರ್ಮದ ಹೂಟಗಳು, ಹಣದ ನಿರ್ಲಜ್ಜ ಪ್ರದರ್ಶನ, ಅಮಿಷ ಇವೆಲ್ಲವುಗಳು ಹೇಸಿಗೆ ಹುಟ್ಟಿಸುತ್ತವೆ ಎಂಬುದು ನಿಜವೆ. ಆದರೂ ಯಾವಾಗಲೂ ಜನ ಜಾತಿ ಲೆಕ್ಕಾಚಾರದ ಪ್ರಕಾರವೇ ಮತ ಚಲಾಯಿಸುತ್ತಾರೆ, ಅಮಿಷಕ್ಕೆ ಒಳಗಾಗುತ್ತಾರೆ ಎನ್ನುವುದು ಬಹುಸಂಖ್ಯಾತ ಜನರನ್ನು ಅನುಮಾನಿಸಿ ಅವಮಾನಿಸಿದಂತೆ. ಕೆಲವು ಸಮಯಗಳಲ್ಲಿ ಅಂತಹ ಆಯ್ಕೆ ನಡೆದರೂ ಅದು ಯಾವಾಗಲೂ ನಡೆಯಲು ಸಾಧ್ಯವಿಲ್ಲ. ಗೂಂಡಾಗಿರಿಗೆ ಹೆದರಿ ಜೈಲಿನಲ್ಲಿರುವವರನ್ನೂ ಸಹ ಆರಿಸಿದ್ದಾರೆ. ವಾಚು ಉಂಗುರಗಳ ದಾಕ್ಷಿಣ್ಯಕ್ಕೆ ಶ್ರೀಮಂತರನ್ನು ಆರಿಸಿದ್ದಾರೆ. ಹಾಗೆಯೇ ಮುಂದಿನ ಚುನಾವಣೆಗಳಲ್ಲಿ ಎಂತೆಂತಹ ಅಹಂಕಾರಿಗಳನ್ನು, ಶ್ರೀಮಂತರನ್ನು, ಉದ್ಧಟರನ್ನು ಠೇವಣಿ ಇಲ್ಲದಂತೆ ಮಲಗಿಸಿದ್ದಾರೆ. ನಿಷ್ಪ್ರಯೋಜಕನಾದರೂ ಸಜ್ಜನ ಎಂತಲೋ, ನಿಷ್ಠುರವಾದಿ ಎಂತಲೋ ಆರಿಸಿ ಕಳಿಸಿದ್ದಾರೆ. ಈಗಲೂ ವಿಧಾನಸಭೆ, ಲೋಕಸಭೆಗಳಲ್ಲಿ ಜನಪರ ಕಾಳಜಿ ವಹಿಸುವ, ನಿಷ್ಠುರ ನ್ಯಾಯಪಕ್ಷಪಾತಿಗಳು ಇಲ್ಲದಿಲ್ಲ. ಆದರೆ ಖಂಡಿತವಾಗಿಯೂ ಇವರ ಸಂಖ್ಯೆ ಹೆಚ್ಚಾಗುವಂತೆ ನೋಡಿಕೊಳ್ಳಬೇಕಾದದ್ದು ಎಲ್ಲರ ಕರ್ತವ್ಯ.

ಇದು ಸಾಧ್ಯವಾಗುವುದು ವಿಚಾರವಂತರ, ತಮ್ಮ ಮತ್ತು ತಮ್ಮ ಭವಿಷ್ಯದ ಜನಾಂಗದವರ ಕಾಳಜಿ ಹೊಂದಿರುವವರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಮಾತ್ರ. ಪ್ರಜಾಪ್ರಭುತ್ವದ ನೈಜ ಅರ್ಥ ಮತ್ತು ಚೈತನ್ಯವನ್ನು ಅರ್ಥ ಮಾಡಿಕೊಳ್ಳುವುದರಿಂದ. ಆಗಲೇ ತನ್ನ ಮಗನಿಗಾಗಿ ತನ್ನ ಗಂಡನ ಈ ಕ್ಷೇತ್ರವನ್ನು ಭದ್ರವಾಗಿ ಕಾಪಾಡಿಕೊಳ್ಳುತ್ತಿದ್ದೇನೆ ಎನ್ನುವ ಹೇಳಿಕೆ ಕೊಡುವವರನ್ನು, ಅಪ್ಪನ ನಂತರ ಚುನಾವಣೆಗೆ ನಿಲ್ಲುವವರನ್ನು ಜನ ನಿರ್ದಾಕ್ಷಿಣ್ಯವಾಗಿ ಯಾಕೆ ಈ ಕ್ಷೇತ್ರ ನಿಮ್ಮ ಮನೆಯವರ ಜಹಗೀರೇ ಎಂದು ಪ್ರಶ್ನಿಸುವುದು ಸಾಧ್ಯವಾಗುತ್ತದೆ.

ಬರಗಾಲವೋ, ಪ್ರಕೃತಿ ವೈಪರೀತ್ಯವೋ ಘಟಿಸಿದಾಗ ಮಂತ್ರಿ-ಮುಖ್ಯಮಂತ್ರಿಗಳ ಎದುರು ಪ್ರಬುದ್ಧವಾಗಿ ವಾದ ಮಂಡಿಸಿ ಕಾರ್ಯ ಮಾಡಿಸಿಕೊಡುವ ಛಾತಿ ಇವರಿಗಿದೆಯೇ, ಜನಪ್ರಿಯವಲ್ಲದಿದ್ದರೂ ಜನಪರವಾದ ತೀರ್ಮಾನಗಳನ್ನು ತೆಗೆದುಕೊಳ್ಳುವ ಧೈರ್ಯ ಇದೆಯೇ ಎಂದು ಪರೀಕ್ಷಿಸುವುದು ಅಭ್ಯರ್ಥಿಗಳನ್ನು ಸೂಕ್ಷ್ಮವಾಗಿ ಗಮನಿಸುವುದರಿಂದಲೇ ಹೊರತು ಕೇವಲ ಚುನಾವಣೆಯ ದಿನ ಮತ ಚಲಾಯಿಸದೇ ದೂರ ಉಳಿಯುವುದರಿಂದಾಗಲಿ, ಈ ಚಿಹ್ನೆ ಮುದ್ದಾಗಿದೆ ಎಂದು ಒತ್ತುವುದರಲ್ಲಾಗಲಿ ಅಲ್ಲ.

ಸ್ವಾತಂತ್ರ್ಯಪೂರ್ವದಲ್ಲಿ ಒಂದು ಜನಾಂಗ ತಮ್ಮೆಲ್ಲ ವೈಯುಕ್ತಿಕ, ಕೌಟುಂಬಿಕ ಸುಖಸಂಪತ್ತುಗಳನ್ನು ಕಳೆದುಕೊಂಡರೂ ನಿಸ್ವಾರ್ಥದಿಂದ ದೇಶಕ್ಕಾಗಿ ದುಡಿದರು. ಭವಿಷ್ಯ ಭಾರತದ ಬಗೆಗೆ ಅವರಿಗೆ ಕಾಳಜಿ ಇತ್ತೇ ವಿನಹ ತಮ್ಮ ವೈಯುಕ್ತಿಕ ಯಶಸ್ಸಿನಲ್ಲಿ ಅಲ್ಲ. ಅದು ಸಾಧ್ಯವಾಗಿದ್ದು ಮರಣಿಸದ ಆಶಾವಾದದಿಂದಾಗಿ, ತ್ಯಾಗದಿಂದಾಗಿ, ತತ್ವಗಳೊಂದಿಗೆ ರಾಜಿ ಮಾಡಿಕೊಳ್ಳದ ನಿಷ್ಠುರತೆಯಿಂದಾಗಿ. ಈಗಲೂ ವರ್ಷಕ್ಕೆ ಸಾವಿರಾರು ಸಮಾಜ ಸೇವಕರು, ಪೋಲೀಸರು, ಸೈನಿಕರು ದಂಗೆಗಳನ್ನು ಆರಿಸುವ ಕಾರ್ಯದಲ್ಲಿ ತೊಡಗಿರುವಾಗಲೋ, ಗಡಿ ಕಾಯುವ ಸಮಯದಲ್ಲಿಯೋ, ನಾಡಿನ ಜನರ ಜೀವನ ರೀತಿ ಮತ್ತು ಹಕ್ಕುಗಳನ್ನು ಉಳಿಸಿಕೊಡುವುದಕ್ಕಾಗಿಯೋ ತಮ್ಮ ಪ್ರಾಣ ನೀಡುತ್ತಾರೆ; ತಮ್ಮ ವಂಶದ ಹೆಸರೇ ಇಲ್ಲದಂತೆ ಕರ್ತವ್ಯ ಮಾರ್ಗದಲ್ಲಿ ಹೋಗಿಬಿಡುತ್ತಾರೆ. ಇಂತಹ ಪ್ರತಿಯೊಂದು ತ್ಯಾಗ ಬಲಿದಾನಗಳನ್ನು ನಾಡು ಸ್ಮರಿಸಿಕೊಳ್ಳುವುದು ಮಾತ್ರವಲ್ಲದೆ ಅವು ವ್ಯರ್ಥವಾಗದಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಪ್ರಜಾಪ್ರಭುತ್ವದ, ಅಧಿಕಾರದ ಚುಕ್ಕಾಣಿ ಯಾವಾಗಲೂ ಯೋಗ್ಯರ, ಸುಧಾರಣಾವಾದಿಗಳ, ನಿಸ್ವಾರ್ಥಿಗಳ ಕೈಯಲ್ಲಿ ಇರುವಂತೆ ಕಾಲಕಾಲಕ್ಕೆ ನೋಡಿಕೊಳ್ಳುತ್ತಿರಬೇಕು.

ತಾವೂ ಜನರೇ ಎಂದುಕೊಂಡವರು ಚುನಾವಣೆಯ ಪ್ರಕ್ರಿಯೆಯಲ್ಲಿ ಜವಾಬ್ದಾರಿತನದಿಂದ ಪಾಲ್ಗೊಳ್ಳಬೇಕು. ಅದು ನಮ್ಮ ಹುಟ್ಟಿದ, ಮದುವೆಯಾದ ದಿನಗಳ ಅಥವಾ ಮತ್ಯಾವುದೋ ಪ್ರತಿವರ್ಷವೂ ಬರುವ ಹಬ್ಬದಂತೆ ಒಂದು ನಿರ್ದಿಷ್ಟ ಆಚರಣೆಯಾಗಬೇಕು. ತಾವು ಜನಗಳಲ್ಲ ಮತ್ತೇನೋ ಎಂದು ಎಲ್ಲರೂ ಎಂದುಕೊಂಡು ಜನಾಡಳಿತಕ್ಕೆ ಬೆನ್ನು ತಿರುಗಿಸಿದರೆ ಬೆತ್ತ ತಿರುಗಿಸುವ ಗೋಪಾಲನ ಕೈಯಲ್ಲಿ ಬಾಸುಂಡೆ ತಿಂದು ಬೆಂಕಿಯುಂಡೆಯ ಮೇಲೆ ಕುಳಿತೆದ್ದು ಮತ್ತೆ ಸುಟ್ಟ ಗಾಯದ ಮೇಲೆ ಕೂರುವ ಸಮಯ ಬರುತ್ತದೆ.

Both comments and pings are currently closed.

Comments are closed.

Powered by WordPress