ಸ್ಲಮ್‌ಡಾಗ್ ಭಾರತವನ್ನು ಕೆಟ್ಟದಾಗಿ ಬಿಂಬಿಸಿದೆ, ಆ ಸಿನೆಮಾ ಸರಿ ಇಲ್ಲ ಅನ್ನುವವರು…

This post was written by admin on March 4, 2009
Posted Under: Uncategorized

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಮಾರ್ಚ್ 13, 09 ರ ಸಂಚಿಕೆಯಲ್ಲಿನ ಲೇಖನ.)

ಜೀವನಪ್ರೀತಿಯನ್ನು ನವೀಕರಿಸುತ್ತ ಆಶಾವಾದದಲ್ಲಿ ಮತ್ತು ಒಳ್ಳೆಯತನದಲ್ಲಿ ಕೊನೆಯಾಗುವ, ಈ ಆಸ್ಕರ್ ಪ್ರಶಸ್ತಿ ವಿಜೇತ ಸಿನೆಮಾವನ್ನು ಈ ಲೇಖನ ಬರೆಯುವುದಕ್ಕೆ ಸ್ವಲ್ಪ ಮುಂಚೆಯೆ ನೋಡಿದ್ದು. ಅದನ್ನು ನೋಡಿಕೊಂಡು ಹೊರಬರುತ್ತ, ಇಂತಹ ಒಳ್ಳೆಯ ಸಿನೆಮಾವನ್ನು “ಈ ಚಿತ್ರ ಭಾರತವನ್ನು ಕೆಟ್ಟದಾಗಿ ಬಿಂಬಿಸಿದೆ, ಅದು ಸರಿ ಇಲ್ಲ, ನಾವು ಹೇಗೆ ಇದ್ದರೂ ನಮ್ಮನ್ನು ಕೆಟ್ಟದಾಗಿ ತೋರಿಸಬಾರದು,” ಎಂದು ಹೇಳುತ್ತಿರುವವರ ಮನಸ್ಥಿತಿಯವರ ಕುರಿತು ಯೋಚಿಸುತ್ತಿದ್ದೆ. ಈ ಸಿನೆಮಾದ ಬಗ್ಗೆ ಈ ರೀತಿಯ ಆಕ್ಷೇಪಣೆ ಎತ್ತುವವರು ರೋಗಗ್ರಸ್ತ ಮನಸ್ಸಿನವರೂ, ಕೀಳರಿಮೆಯಿಂದ ನರಳುತ್ತಿರುವ ಅಹಂಕಾರಿಗಳೂ, ತಮಗಿಂತ ಕೀಳಾದವರು ತಮ್ಮ ಸೇವೆಯನ್ನು ಮಾಡಲಷ್ಟೆ ಲಾಯಕ್ಕು ಎನ್ನುವ ಮನೋಭಾವದವರೂ ಆಗಿರಲೇಬೇಕು ಎಂಬಂತಹ ಕಟು ಅಭಿಪ್ರಾಯ ನನ್ನಲ್ಲಿ ಸುಳಿಯಿತು.

ಈ ಸಿನೆಮಾದ ಬಗ್ಗೆ ಜನ ಮಾತನಾಡಲು ಆರಂಭಿಸಿದಾಗಿನಿಂದ ಅಂತರ್ಜಾಲದಲ್ಲಿ, ಭಾರತದ ಮಾಧ್ಯಮಗಳಲ್ಲಿ, ಕನ್ನಡದ ಪತ್ರಿಕೆಗಳಲ್ಲಿ ಅದರ ಬಗ್ಗೆ ಬಂದ ವಿಮರ್ಶೆ ಮತ್ತು ಅಭಿಪ್ರ್ರಾಯಗಳನ್ನು ಓದುತ್ತ ಬಂದಿದ್ದೇನೆ. ಯಾವ ಸಮುದಾಯ ಅಥವ ವರ್ಗದ ಭಾರತೀಯರಿಗೆ ವಿದೇಶಗಳಲ್ಲಿ ಅವಕಾಶಗಳಿರುತ್ತವೆಯೊ ಅಥವ ಭಾರತದ ನವ-ಆರ್ಥಿಕ ವ್ಯವಸ್ಥೆಯಲ್ಲಿ ಯಾವ ವರ್ಗಗಳಿಗೆ ಹೆಚ್ಚು ಲಾಭವಾಗುತ್ತದೊ ಅಂತಹವರೆ ಈ ಸಿನೆಮಾ ನಮ್ಮ ದೇಶದ ಮಾನ ಹರಾಜು ಹಾಕುತ್ತಿದೆ ಎಂದು ಬೊಬ್ಬೆಯಿಡುವವರಲ್ಲಿ ಮುಂಚೂಣಿಯಲ್ಲಿರುವವರು. ಸುಲಭವಾಗಿ ಗುರುತಿಸಬಹುದಾದ ಒಂದು ಆರ್ಥಿಕ ಮತ್ತು ಸಾಮಾಜಿಕ ವರ್ಗಕ್ಕೆ ಸೇರಿದ ಜನ ಇವರು. ವಾಸ್ತವವನ್ನು ಮುಚ್ಚಿಟ್ಟು ಭಾವೋದ್ರೇಕ ವಿಷಯಗಳ ಮೇಲೆ ಬುಡಕಟ್ಟು ಕಟ್ಟಬಯಸುವ, ಮಧ್ಯಕಾಲೀನ ಯುಗಕ್ಕೆ ಹೋಗಬಯಸುವ ಗುಂಪಿದು. ಇದಕ್ಕೆ ಮುಂಚೆ “ವೈಟ್ ಟೈಗರ್” ಕಾದಂಬರಿ ಭಾರತದ ಮಾನ ಕಳೆಯುತ್ತದೆ ಎಂದು ಟೀಕಿಸಿದ ಗುಂಪೂ ಇದೇನೆ. ಕರ್ನಾಟಕದ ಗೃಹ ಸಚಿವರ ಮಾತನ್ನೆ ನೋಡಿ: “ಸ್ಲಮ್‌ಡಾಗ್ ಮಿಲಿಯನೇರ್ ಭಾರತವನ್ನು ಕೆಟ್ಟರೀತಿಯಲ್ಲಿ ತೋರಿಸುತ್ತದೆ. ಅಡಿಗರ ವೈಟ್ ಟೈಗರ್ ಪುಸ್ತಕವೂ ಅಷ್ಟೆ.” ಸಮಾಜ ನಿರ್ಮಾಣದಲ್ಲಿ ಕಲೆ ಮತ್ತು ಸಾಹಿತ್ಯದ ಪ್ರಭಾವ ಮತ್ತು ಅದು ಹುಟ್ಟಿಸುವ ವೈಚಾರಿಕ ಸಂಘರ್ಷ ಮತ್ತು ನೈತಿಕತೆಯ ಮಹತ್ವ ಅರಿಯದ ಜನರಿವರು. ಸ್ವವಿಮರ್ಶೆಗೆ ಮತ್ತು ಬೇರೆಯವರ ವಿಮರ್ಶೆಗೆ ತೆರೆದುಕೊಳ್ಳದ, ಅಭದ್ರ ಮನಸ್ಥಿತಿಯ, ಆತ್ಮವಿಶ್ವಾಸವಿಲ್ಲದ ಗುಂಪು ಇದು.

ಈ ಚಿತ್ರವನ್ನು ಬಲಪಂಥೀಯ ಧೋರಣೆಯುಳ್ಳ ಎನ್ನಾರೈಗಳೂ ಬಲವಾಗಿ ವಿರೋಧಿಸಿರುವುದನ್ನು ನಾವು ಅಂತರ್ಜಾಲದಲ್ಲಿ ನೋಡಬಹುದು. ಈ ಸಿನೆಮಾ ನೋಡಿದ ವಿದೇಶಿಯರು (ಅಂದರೆ ಬಿಳಿಯರು) ಎಲ್ಲಿ ತಮ್ಮನ್ನು ಕೀಳಾಗಿ ಕಾಣಿಬಿಡುತ್ತಾರೊ ಎಂಬ ಭಯ ಮತ್ತು ಕೀಳರಿಮೆ ಇದನ್ನು ವಿರೋಧಿಸುವ ಎನ್ನಾರೈಗಳಿಗಿದ್ದಂತಿದೆ. ನಾನು ಚಿಕ್ಕವನಿದ್ದಾಗ ನನ್ನಮ್ಮ ಮತ್ತು ನನ್ನೂರಿನ ಇನ್ನೂ ಕೆಲವರು ನಮ್ಮ ಪಕ್ಕದ ಹಳ್ಳಿಯ ಶ್ರೀಮಂತ ಡಾಕ್ಟರೊಬ್ಬರ ಕತೆ ಹೇಳುತ್ತಿದ್ದರು. ಬೆಂಗಳೂರಿನಲ್ಲಿ ದೊಡ್ಡ ಡಾಕ್ಟರ್ ಆಗಿ ನೆಲೆಯಾದ ಆ ಮನುಷ್ಯ ತನ್ನ ಮನೆಗೆ ಬರುವ ಅತಿಥಿಗಳಿಗೆ ತನ್ನ ತಂದೆತಾಯಿಯರನ್ನು ತೋರಿಸಿ ಅವರು ನಮ್ಮ ಮನೆಯ ಆಳುಗಳು ಎಂದು ಹೇಳುತ್ತಿದ್ದರಂತೆ. ಬೇರೆಯವರ ಮುಂದೆ ಹಾಗೆಯೆ ನಡೆಸಿಕೊಳ್ಳುತ್ತಿದ್ದರಂತೆ. ಈ ಕತೆ ಎಷ್ಟು ನಿಜವೊ ಉತ್ಪ್ರೇಕ್ಷೆಯೋ ಗೊತ್ತಿಲ್ಲ. ಅದರೆ ಆರ್ಥಿಕ ಸ್ಥಿತಿಯಲ್ಲಿ ಮೇಲಕ್ಕೆ ಹೋದ ಒಂದಷ್ಟು ಜನರಲ್ಲಿ ಕಾಣುವ ಕೀಳರಿಮೆಯನ್ನೂ ಮತ್ತು ಅವರ ದುಷ್ಟತನಗಳನ್ನೂ ನೋಡಿರುವವರಿಗೆ ಈ ಕತೆ ಅವಾಸ್ತವ ಎನ್ನಿಸುವುದಿಲ್ಲ. ದೊಡ್ಡ ಮನುಷ್ಯನಾಗಿಬಿಡುವ ಆಸೆಗಾಗಿ ಶ್ರೀಮಂತರ ಮನೆಯ ಹೆಣ್ಣನ್ನು ಮದುವೆಯಾಗಿ ನಂತರ ತನ್ನ ಹೆತ್ತವರು ಮತ್ತು ಒಡಹುಟ್ಟಿದವರೊಂದಿಗೆ ಯಾವೊಂದು ಸಂಬಂಧವನ್ನೂ ಇಟ್ಟುಕೊಳ್ಳದೆ ಅವರನ್ನು Disown ಮಾಡಿರುವ ಅನೇಕ “ಪ್ರತಿಭಾವಂತ” ಜನ ನಮ್ಮ ಪಟ್ಟಣಗಳಲ್ಲಿ ಹೇರಳವಾಗಿ ಸಿಗುತ್ತಾರೆ. ಇನ್ನೊಬ್ಬರ ಮುಂದೆ ನಮ್ಮನ್ನು ದೊಡ್ಡದಾಗಿ ಬಿಂಬಿಸದ ಯಾವೊಂದೂ ನಮ್ಮದಲ್ಲ. ನಾವು ಅದೆಲ್ಲವನ್ನೂ ಮೀರಿದವರು. ನಾವು ಪರಿಶುದ್ಧರು. ಶ್ರೇಷ್ಠಕುಲ ಸಂಜಾತರು. ಆಗರ್ಭ ಶ್ರೀಮಂತರು! ಇಂತಹ ಮನಸ್ಥಿತಿಗಳ ಮುಂದುವರಿದ ಭಾಗವೆ “(ವಿದೇಶಿಯರು ನೋಡುವ) ಸ್ಲಮ್‌ಡಾಗ್‌ನಲ್ಲಿ ಅದೆಲ್ಲ ತೋರಿಸುವ ಅವಶ್ಯಕತೆ ಇತ್ತೆ?” ಎನ್ನುವುದು.

ಎಲ್.ಕೆ. ಅಡ್ವಾನಿ ಎನ್ನುವ ರಾಷ್ಟ್ರನಾಯಕ ಬೆಂಗಳೂರಿನಲ್ಲಿ ವಿದ್ಯಾರ್ಥಿಗಳನ್ನು ಕೂರಿಸಿಕೊಂಡು ಹೇಳಿದರೆನ್ನಲಾದ ಮಾತನ್ನು ಈ ಸಿನೆಮಾಗೆ ಹೋಗುವ ಸ್ವಲ್ಪ ಮುಂಚೆಯಷ್ಟೆ ನಾನು ಪತ್ರಿಕೆಗಳಲ್ಲಿ ಓದಿ ಹೋಗಿದ್ದೆ. “ಸಂಸತ್‌ಭವನದ ಮೇಲೆ ದಾಳಿ ಮಾಡಿದ ಉಗ್ರನ ಹೆಸರು ಅಫ್ಜಲ್ ಗುರು ಎಂದಿರದೆ ಆನಂದನೊ, ಮೋಹನನೊ ಆಗಿದ್ದರೆ, ಇಷ್ಟರಲ್ಲಾಗಲೆ ಆತ ನೇಣು ಕಂಡಾಗಿರುತ್ತಿತ್ತು,” ಎಂದಿದ್ದರು ಈ ನಮ್ಮ “ಉಕ್ಕಿನ” ರಾಷ್ಟ್ರನಾಯಕರು. ಎಂತಹ ಕೀಳು ಹೇಳಿಕೆ ಇದು? ದೇಶದ ಉಪ-ಪ್ರಧಾನಿಯಾಗಿದ್ದ ಒಬ್ಬ Statesman ಹೇಳುವ ಮಾತುಗಳಲ್ಲ ಇವು. ಅಧಿಕಾರ ದಾಹದಿಂದ ತನ್ನೆಲ್ಲ ಹಿರಿತನ ಮತ್ತು ಸಜ್ಜನಿಕೆಯನ್ನು ಕಳೆದುಕೊಂಡ ಹಿರಿಯನೊಬ್ಬನ ಹತಾಶ ಮಾತುಗಳಿವು. ಯುವಕರ ಮನಸ್ಸಿನಲ್ಲಿ ವಿಷ ಬಿತ್ತಿ, ಆ ಮೂಲಕ ದೇಶದ ಪ್ರಧಾನಿಯಾಗಬೇಕೆಂದು ಹಂಬಲಿಸುವ ಇಂತಹ ಮನಸ್ಥಿತಿಯ ಮನುಷ್ಯ ಭಾರತದ ಪ್ರಧಾನಿಯಾಗಿಬಿಟ್ಟರೆ ಭಾರತದ ಜನರ ಸ್ಥಿತಿ ಹಿಟ್ಲರ್‌ನ ಕಾಲದಲ್ಲಿ ಕೋಮುವಿಷವನ್ನು ಉಂಡ ಜರ್ಮನ್ನರ ಸ್ಥಿತಿಗಿಂತ ಬೇರೆ ಆಗುವುದಿಲ್ಲ. ಕೋಮುವಾದಿ ಪಕ್ಷದಿಂದ ಬಂದಿದ್ದರೂ ಸಹ ಅಧಿಕಾರದಾಹದೆಡೆಗೆ ಒಂದು ಮಟ್ಟದ ನಿರ್ಲಕ್ಷ್ಯವನ್ನು, ಕನಿಷ್ಠ ಸಜ್ಜನಿಕೆಯೊಂದನ್ನು, ಮತಸಹಿಷ್ಣುತೆಯನ್ನು ಮಾಜಿ ಪ್ರಧಾನಿ ವಾಜಪೇಯಿ ಹೊಂದಿದ್ದರು. ಆದರೆ, ಆ ಒಳ್ಳೆಯ ಗುಣಗಳ್ಯಾವುವೂ ಅಡ್ವಾನಿಯವರಲ್ಲಿ ಕಾಣಿಸುತ್ತಿಲ್ಲ.

ಸ್ಲಮ್‌ಡಾಗ್ ಸರಿ ಇಲ್ಲ ಎನ್ನುವ ಜನರಲ್ಲಿ ಬಹುಸಂಖ್ಯಾತ ಜನ ಭಾಜಪದ ಬೆಂಬಲಿಗರು ಎನ್ನುವುದಕ್ಕೆ ಯಾವುದೆ ಸಮೀಕ್ಷೆಯಾಗಲಿ, ಸಂಶೋಧನೆಯಾಗಲಿ ಮಾಡಬೇಕಿಲ್ಲ. ಇವರ ನಾಯಕ ಅಡ್ವಾನಿ ಹೇಳಿದ “ಅಫ್ಜಲ್, ಆನಂದ, ಮೋಹನ” ಥಿಯರಿಯನ್ನಿಟ್ಟುಕೊಂಡೆ ನಾವು ಸ್ಲಮ್‌ಡಾಗ್ ಅನ್ನು ವಿಶ್ಲೇಷಿಸಿದರೆ, ಆ ಜನಕ್ಕೆ ಈ ಸಿನೆಮಾ ಯಾಕೆ ಇಷ್ಟವಾಗಿಲ್ಲ ಎನ್ನುವುದಕ್ಕೆ ಇನ್ನೂ ಒಳ್ಳೆಯ ಕಾರಣ ಕೊಡಬಹುದು. ಅದು ಸಿನೆಮಾದ ನಾಯಕನ ಮತ. ಮೊದಲಿಗೆ ಸಿನೆಮಾದಲ್ಲಿ ಹಿಂದೂ ಕೋಮುವಾದಿಗಳು ಮುಸ್ಲಿಮರನ್ನು ಸಾಯಿಸುವ ಕೋಮುಗಲಭೆಯ ದೃಶ್ಯವಿದೆ. ಆ ದೃಶ್ಯದಲ್ಲಿ ಮುಸ್ಲಿಮ್ ತಾಯಿಯೊಬ್ಬಳನ್ನು ಆಕೆಯ ಮಕ್ಕಳ ಮುಂದೆಯೆ ಹಿಂದೂಗಳು ಕೊಲ್ಲುತ್ತಾರೆ. ಎಲ್ಲೂ ಮುಸಲ್ಮಾನ ದುಷ್ಟರು ಮುಗ್ಧ ಹಿಂದೂಗಳನ್ನು ಕೊಲ್ಲುವ ದೃಶ್ಯ ಇಲ್ಲ. ಭಾರತದಲ್ಲಿ ಮುಸಲ್ಮಾನರ ಮೇಲೆ ಹಿಂದೂಗಳು ಹಲ್ಲೆ ಮಾಡುವುದು ಈ ಚಿತ್ರದ ಮೂಲಕ ಪ್ರಪಂಚಕ್ಕೇ ಗೊತ್ತಾಗುತ್ತಿದೆಯೆ ಹೊರತು, ಮುಸಲ್ಮಾನರು ಹಿಂದೂಗಳನ್ನು ಸಾಯಿಸುವುದು ಪ್ರಪಂಚಕ್ಕೆ ಗೊತ್ತಾಗುತ್ತಿಲ್ಲ! ಎಂತಹ ಅಪಚಾರ ಮತ್ತು ಸುಳ್ಳಿನ ಪ್ರಚಾರ! ಈ ದೃಶ್ಯ ಹಾಳಾಗಿ ಹೋಗಲಿ ಅಂದರೆ, ಈ ಸಿನೆಮಾದ ಮುಸಲ್ಮಾನ ಹುಡುಗ ಕೊನೆಗೂ ಪಂದ್ಯ ಗೆದ್ದು ಬಿಡುತ್ತಾನೆ. ಸ್ಲಮ್ಮಿನಲ್ಲಿ ಬೆಳೆದ, ಯಾವೊಂದು ವಿದ್ಯೆಯೂ ಇಲ್ಲದ, ಕಾಲ್‌ಸೆಂಟರ್‌ನಲ್ಲಿ ಟೀ ಬಾಯ್ ಆದ ಹುಡುಗ ಪಂದ್ಯ ಗೆಲ್ಲುವುದೆಂದರೇನು? ಈ ಪಂದ್ಯ ಗೆದ್ದವನು ಹಿಂದೂವಾದರೂ ಆಗಿದ್ದರೆ ಅಷ್ಟು ಇಷ್ಟು ಸಹಿಸಿಕೊಳ್ಳಬಹುದಿತ್ತು. ಹೋಗಲಿ ಅಂದರೆ ಅವನು “ಆನಂದನೂ ಅಲ್ಲ, ಮೋಹನನೂ ಅಲ್ಲ. ಅವನ ಹೆಸರು ಜಮಾಲ್ ಮಲ್ಲಿಕ್.” ಹೌದು. ಹೀಗೆ ಯೋಚನೆ ಮಾಡುವುದೆ ಎಷ್ಟೊಂದು ಕೀಳು ಎನ್ನಿಸುತ್ತದೆ ನನಗೂ. ಅದರೆ, ಪ್ರಜ್ಞಾಪೂರ್ವಕವಾಗಿ ಅಥವ ಅಪ್ರಜ್ಞಾಪೂರ್ವಕವಾಗಿ ಕೆಲವು ಸಂಕುಚಿತ ಮನೋಭಾವದ ಜನ ಹೀಗೆಯೂ ಯೋಚಿಸಬಲ್ಲರು ಎನ್ನುವುದಕ್ಕೆ ಅಡ್ವಾನಿ ಬಹಿರಂಗವಾಗಿ ಹೇಳಿದ ಮಾತನ್ನೆ ನಾವು ಆಧಾರವಾಗಿಟ್ಟುಕೊಳ್ಳಬಹುದು.

1927 ರಲ್ಲಿ ಅಮೆರಿಕದ ಕ್ಯಾಥರಿನ್ ಮೇಯೊ ಎನ್ನುವ ಬರಹಗಾರ್ತಿ “ಮದರ್ ಇಂಡಿಯಾ” ಎನ್ನುವ ಪುಸ್ತಕ ಬರೆಯುತ್ತಾಳೆ. ಅದರಲ್ಲಿ ಭಾರತವನ್ನು ಮೋರಿ-ಚರಂಡಿಗಳ ದೇಶ ಎಂಬಂತೆ ಬಿಂಬಿಸುತ್ತಾಳೆ. ಭಾರತೀಯರು ತಮ್ಮನ್ನು ತಾವು ಆಳಲು ಅನರ್ಹರು, ಬ್ರಿಟಿಷರು ಅವರನ್ನು ಆಳುವುದೆ ಉತ್ತಮ ಎನ್ನುತ್ತ್ತಾಳೆ. ಆ ಪುಸ್ತಕಕ್ಕೆ ಗಾಂಧಿ ಯಂಗ್ ಇಂಡಿಯಾದಲ್ಲಿ ವಿಮರ್ಶೆ ಬರೆಯುತ್ತ ಹೇಳುತ್ತಾರೆ: “ಈ ಪುಸ್ತಕವನ್ನು ಬಹಳ ಬುದ್ಧಿವಂತಿಕೆಯಿಂದ, ಪರಿಣಾಮಕಾರಿಯಾಗಿ ಬರೆಯಲಾಗಿದೆ. ಈ ಪುಸ್ತಕದಲ್ಲಿನ ಹೇಳಿಕೆಗಳನ್ನು ಬಹಳ ಜಾಗರೂಕತೆಯಿಂದ ಆರಿಸಲಾಗಿದೆ. ಹಾಗಾಗಿ ಆ ಹೇಳಿಕೆಗಳು ಈ ಪುಸ್ತಕ ನಿಜಕ್ಕೂ ಸತ್ಯವನ್ನೆ ಹೇಳುತ್ತದೆ ಎಂಬ ತಪ್ಪು ಅಭಿಪ್ರಾಯ ಮೂಡಿಸುತ್ತವೆ. ಆದರೆ ಈ ಪುಸ್ತಕ ನನ್ನಲ್ಲಿ ಮೂಡಿಸುವ ಅಭಿಪ್ರಾಯ ಏನೆಂದರೆ, ಈ ಪುಸ್ತಕ ಒಂದು ದೇಶದ ಮೋರಿಗಳನ್ನು ತೆರೆದು, ಅವನ್ನು ಪರಿಶೀಲಿಸಿ ನೋಡುವ ಏಕೈಕ ಉದ್ದೇಶದಿಂದ ಕಳುಹಿಸಲಾದ ಚರಂಡಿ ಪರಿಶೀಲಕನೊಬ್ಬನ ವರದಿ.” ಹೀಗೆ ಹೇಳುವ ಗಾಂಧಿ ಇನ್ನೂ ಮುಂದಕ್ಕೆ ಹೋಗಿ ಭಾರತೀಯರಿಗೆ ಹೀಗೆ ಹೇಳುತ್ತಾರೆ: “ಪ್ರತಿಯೊಬ್ಬ ಭಾರತೀಯನೂ ಓದಬಹುದಾದ ಮತ್ತು ಆ ಮೂಲಕ ಒಂದಷ್ಟು ಲಾಭ ಮಾಡಿಕೊಳ್ಳಬಹುದಾದ ಪುಸ್ತಕ ಇದು. ಆಕೆ ಮಾಡಿರುವ ಅನೇಕ ಆರೋಪಗಳಲ್ಲಿ ಹುದುಗಿರುವ ಒಳಾರ್ಥವನ್ನು (ವಾಸ್ತವವನ್ನು) ನಾವು ಖಂಡಿತ ತಿರಸ್ಕರಿಸಲಾರೆವು. ಬೇರೆಯವರು ನಮ್ಮನ್ನು ಹೇಗೆ ನೋಡುತ್ತಾರೊ ಅದೇ ರೀತಿ ನಮ್ಮನ್ನು ನಾವು ನೋಡಿಕೊಳ್ಳುವುದು ಒಳ್ಳೆಯದೆ. ಆ ಪುಸ್ತಕವನ್ನು ಬರೆದ ಉದ್ದೇಶವನ್ನು ನಾವು ಪರೀಕ್ಷಿಸುವ ಅಗತ್ಯವಿಲ್ಲ. ಬದಲಿಗೆ ನಮ್ಮ ಸಮಾಜದೂಷಣೆಗೆ ಕಾರಣವಾದ ವಿಷಯಗಳನ್ನು ತೊಡೆದುಹಾಕಲು ನಾವು ಇನ್ನೂ ಹೆಚ್ಚಿನ ಮಟ್ಟದಲ್ಲಿ ಪ್ರಯತ್ನಿಸುವಂತೆ ಅದು ನಮ್ಮನ್ನು ಪ್ರಚೋದಿಸಬೇಕು.”

ಸ್ಲಮ್‌ಡಾಗ್ ಮಿಲಿಯನೇರ್ ಅನ್ನು ನಾವು ಯಾವ ಕೋನದಿಂದಲೂ “ಮದರ್ ಇಂಡಿಯಾ”ಗೆ ಹೋಲಿಸಲಾಗದು. ನಿಮಗೆ ಇಲ್ಲಿ ಒಬ್ಬ ಸಿನೆಮಾ ಪ್ರೇಮಿಯೊಬ್ಬನ, ಕಲಾವಿದನೊಬ್ಬನ ಕೃತಿ ಕಾಣಿಸುತ್ತದೆಯೆ ಹೊರತು “ಮೋರಿ ಪರಿಶೀಲಕನ” ಡಾಕ್ಯುಮೆಂಟರಿ ಅಲ್ಲ. ಭಾರತವನ್ನು ಕೆಟ್ಟದಾಗಿ ತೋರಿಸಬೇಕು ಎನ್ನುವ ಉದ್ದೇಶದಿಂದ ಈ ಚಿತ್ರ ನಿರ್ಮಿಸಲಾಗಿದೆ ಎಂದು ಹೇಳುವುದು ತೀರಾ ಬಾಲಿಶವಾದದ್ದು. ಆದರೂ, ಸಿನೆಮಾ ನೋಡುವ ಮನರಂಜನೆಯ ಹೊರತಾಗಿಯೂ ಈ ಸಿನೆಮಾ ನಮಗೆ ಒಂದಷ್ಟು ಕಲಿಸುತ್ತದೆ. ಹಾಲಿ ಮತ್ತು ಭಾವಿ ಭಾರತದ ಗಂಭೀರ ಸಮಸ್ಯೆಯೊಂದರ ಬಗ್ಗೆ ನಮ್ಮ ಗಮನ ಸೆಳೆಯುತ್ತದೆ. ಅದು Urban Poverty. ನಮ್ಮ ನಗರಗಳ ಕೊಳಚೆಪ್ರದೇಶಗಳಲ್ಲಿ ವಾಸಿಸುವವರ ಜೀವನ ಎಷ್ಟೋ ಸಲ ಹಳ್ಳಿಗಳಲ್ಲಿನ ದಲಿತರ ಜೀವನಕ್ಕಿಂತ ಕೆಟ್ಟದಾಗಿರುತ್ತದೆ. ದೊಡ್ಡದೊಡ್ಡ ನಗರಗಳಲ್ಲಿ ಬೇರೂರಿರುವ ಈ ಸ್ಲಮ್‌ಗಳು “breeding grounds for crime.” ರಾಜಕೀಯ ಪ್ರೇರಿತ ಪೂರ್ವಯೋಜಿತ ಕೋಮುಗಲಭೆಗಳು ಮೊದಲಿಗೆ ಹುಟ್ಟುವುದೆ ಈ ಸ್ಲಮ್ಮುಗಳಲ್ಲಿ. ಇಲ್ಲಿ ಜೀವದ ಬೆಲೆ ಬಹಳ ಅಗ್ಗ. ಈಗಲಾದರೂ ನಮ್ಮ ಪಾಲಿಸಿ ಮೇಕರ್‌ಗಳು ನಗರಗಳಲ್ಲಿನ ಬಡತನವನ್ನು ಒಂದು ಗಂಭೀರ ಸಮಸ್ಯೆ ಎಂದು ಪರಿಗಣಿಸಿ, ಸ್ಲಮ್ಮುಗಳಲ್ಲಿನ ಜನರನ್ನು ಮುಖ್ಯವಾಹಿನಿಗೆ ಸೇರಿಸಿಕೊಳ್ಳುವ, ಅವರಿಗೆ ಕನಿಷ್ಠ ಮೂಲಭೂತ ಸೌಕರ್ಯಗಳಿರುವ ಆರೋಗ್ಯವಂತ ಪರಿಸರ ನಿರ್ಮಿಸಿಕೊಡುವ, ಮತ್ತು ಅವರ ಬಡತನವನ್ನು ಕೊನೆಗೊಳಿಸುವ ದಿಕ್ಕಿನೆಡೆಗೆ ಚರ್ಚೆ ಮತ್ತು ಕೆಲಸಗಳನ್ನು ಆರಂಭಿಸುತ್ತಾರೆ ಎಂದು ಆಶಿಸೋಣ. ಸ್ಲಮ್‌ಡಾಗ್ ಮಿಲಿಯನೇರ್‌ನಿಂದ ನಮ್ಮ ಸಿನೆಮಾ ಜಗತ್ತು ಏನನ್ನು ಕಲಿಯತ್ತದೊ ಬಿಡುತ್ತದೊ, ಕನಿಷ್ಠ ನಮ್ಮ ಸಾಮಾಜಿಕ ಸಂದರ್ಭದಲ್ಲಾದರೂ ಅದು ನಗರಗಳಲ್ಲಿನ ಬಡತನದ ಬಗ್ಗೆ ಸಂವಾದ ಆರಂಭಿಸಿದರೆ ಅದೇ ಅದರ ದೊಡ್ಡ ಕೊಡುಗೆ. ನಮ್ಮವರು ಆರಂಭಿಸದಿದ್ದರೂ ವಿಶ್ವಸಂಸ್ಥೆಯ ಅಂಗಸಂಸ್ಥೆಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳಾದರೂ ಅದನ್ನು ಆರಂಭಿಸುತ್ತಾರೆ ಎನ್ನುವ ವಿಶ್ವಾಸ ನನಗಿದೆ.

Reader Comments

Add a Comment

required, use real name
required, will not be published
optional, your blog address