ಕೆ.ಆರ್.ಎಸ್. ಡ್ಯಾಮ್ ಪ್ರೈವೇಟ್ ಲಿಮಿಟೆಡ್.

This post was written by admin on December 19, 2007
Posted Under: Uncategorized

(ವಿಕ್ರಾಂತ ಕರ್ನಾಟಕ – ಡಿಸೆಂಬರ್ 28, 2007 ರ ಸಂಚಿಕೆಯಲ್ಲಿನ ಬರಹ)

ಬೊಲಿವಿಯ ಎನ್ನುವುದು ದಕ್ಷಿಣ ಅಮೆರಿಕ ಖಂಡದಲ್ಲಿನ ಐದನೆ ದೊಡ್ಡ ದೇಶ. ಭೂವಿಸ್ತೀರ್ಣದಲ್ಲಿ ಕರ್ನಾಟಕದ ಎಂಟರಷ್ಟು ದೊಡ್ಡದಾದ ಈ ದೇಶದ ಜನಸಂಖ್ಯೆ ಸುಮಾರು 90 ಲಕ್ಷ. ಕಳೆದ ಶತಮಾನದಲ್ಲಿ ಮಿಲಿಟರಿಯ ನಿರಂಕುಶ ಆಡಳಿತ, ಭ್ರಷ್ಟಾಚಾರ ಮತ್ತು ಸಾಮ್ರಾಜ್ಯಶಾಹಿ ಪರಕೀಯರು ಅವಕಾಶ ಸಿಕ್ಕಿದಾಗಲೆಲ್ಲ ದೋಚಿದ ಪರಿಣಾಮವಾಗಿ ಈ ದೇಶ ದಕ್ಷಿಣ ಅಮೆರಿಕದಲ್ಲಿನ ಅತಿ ಬಡರಾಷ್ಟ್ರಗಳಲ್ಲಿ ಒಂದು. ಕಳೆದೆರಡು ದಶಕಗಳಿಂದ ಪ್ರಜಾಪ್ರಭುತ್ವ ಇದ್ದರೂ ಈಗಲೂ ಭ್ರಷ್ಟಾಚಾರ, ಹಿಂಸೆ, ಅರಾಜಕತೆ ಮುಂದುವರೆದಿದೆ. ಚಿನ್ನ, ಕಬ್ಬಿಣ, ಮ್ಯಾಗ್ನೇಷಿಯಮ್, ನೈಸರ್ಗಿಕ ಅನಿಲಗಳನ್ನೊಳಗೊಂಡಂತೆ ಬೇಕಾದಷ್ಟು ನೈಸರ್ಗಿಕ ಸಂಪನ್ಮೂಲಗಳಿದ್ದರೂ ಬಡವಾಗಿಯೆ ಇರುವ ಈ ದೇಶವನ್ನು ಆ ಕಾರಣಕ್ಕಾಗಿಯೆ “ಚಿನ್ನದ ಗಣಿಯ ಮೇಲೆ ಕುಳಿತಿರುವ ಕತ್ತೆ” ಎಂದೂ ಅನ್ನುತ್ತಾರೆ.

1982 ರಲ್ಲಿ ಮತ್ತೆ ಪ್ರಜಾಪ್ರಭುತ್ವಕ್ಕೆ ಮರಳಿದ ಈ ದೇಶ ಅಲ್ಲಿಂದೀಚೆಗೆ ವಿಶ್ವಬ್ಯಾಂಕ್‌ನ ಸಲಹೆಗಳ ಪ್ರಕಾರ ಅನೇಕ ಆರ್ಥಿಕ ಸುಧಾರಣೆಗಳನ್ನು ತಂದಿತು. “ಬಡದೇಶಗಳಲ್ಲಿ ಭ್ರಷ್ಟಾಚಾರ ಜಾಸ್ತಿ; ಅದರ ಜೊತೆಗೆ ಒಳ್ಳೆಯ ಸಾರ್ವಜನಿಕ ನೀರು ಸರಬರಾಜು ವ್ಯವಸ್ಥೆ ಮಾಡಲು ಅವರ ಬಳಿ ಸಾಕಷ್ಟು ಸಂಪನ್ಮೂಲಗಳಾಗಲಿ, ಕೌಶಲವಾಗಲಿ ಇರುವುದಿಲ್ಲ. ಹಾಗಾಗಿ ನೀರು ಸರಬರಾಜನ್ನು ಖಾಸಗೀಕರಣ ಮಾಡಿದರೆ ಅದರಿಂದ ಬಂಡವಾಳವೂ, ಉಸ್ತುವಾರಿ ಕೌಶಲವೂ ಹರಿದುಬರುತ್ತದೆ,” ಎಂಬ ತನ್ನ ನಂಬಿಕೆಯ ಆಧಾರದ ಮೇಲೆ ವಿಶ್ವಬ್ಯಾಂಕ್ 1999 ರಲ್ಲಿ ಬೊಲಿವಿಯ ಸರ್ಕಾರಕ್ಕೆ ಸುಮಾರು ಹತ್ತುಲಕ್ಷ ಜನಸಂಖ್ಯೆ ಇರುವ ಕೋಚಬಾಂಬ ನಗರದ ನೀರು ಸರಬರಾಜನ್ನು ಖಾಸಗೀಕರಣ ಮಡುವಂತೆ ಒತ್ತಾಯಿಸಿತು. ಮಾಡದೆ ಇದ್ದರೆ ಸುಮಾರು 100 ಕೋಟಿ ರೂಪಾಯಿಗಳ ಸಾಲವನ್ನು ನವೀಕರಿಸುವುದಿಲ್ಲ ಎಂದು ಹೇಳಿತು. ವಿದೇಶಿ ಸಹಾಯದ ಮೇಲೆಯೆ ಅವಲಂಬಿತವಾದ ಆ ದೇಶ ವಿಧಿಯಿಲ್ಲದೆ ಕೋಚಬಾಂಬ ನಗರದ ನೀರು ಸರಬರಾಜನ್ನು ಖಾಸಗೀಕರಣಗೊಳಿಸಿತು.

ಹಾಗೆ ಖಾಸಗೀಕರಣಗೊಂಡ ಆ ಜಲಯೋಜನೆ ಸಣ್ಣದೇನೂ ಅಗಿರಲಿಲ್ಲ. ಸುಮಾರು 10000 ಕೋಟಿ ರೂಪಾಯಿಗಳ ಆ ಯೋಜನೆಯನ್ನು ಇಂಗ್ಲೆಂಡ್-ಇಟಲಿ-ಅಮೆರಿಕ-ಸ್ಪೇನ್‌ಗಳ ನಾಲ್ಕು ಬೃಹತ್ ಬಹುರಾಷ್ಟ್ರೀಯ ಕಂಪನಿಗಳ ಒಕ್ಕೂಟವಾದ “ಅಂತರ್‌ರಾಷ್ಟ್ರೀಯ ಜಲ” ತನ್ನದಾಗಿಸಿಕೊಂಡಿತು. ಕೋಚಬಾಂಬ ನಗರಕ್ಕೆ ನೀರು ಸರಬರಾಜು ಮಾಡುವುದರ ಜೊತೆಗೆ ವಿದ್ಯುತ್ ಉತ್ಪಾದನೆ ಮತ್ತು ನೀರಾವರಿಗೂ ಆ ಯೋಜನೆ ವಿಸ್ತಾರಗೊಂಡಿತ್ತು.

ಖಾಸಗೀಕರಣಗೊಂಡದ್ದೆ, ಬಂತು ಆಪತ್ತು. ಆ ನಗರದಲ್ಲಿನ ಎಷ್ಟೋ ಬಡ ಜನರ ಮಾಸಿಕ ಆದಾಯವೆ 4-5 ಸಾವಿರ ರೂಪಾಯಿಯಾಗಿದ್ದರೆ, ಈಗವರು ತಿಂಗಳಿಗೆ ಕಟ್ಟಬೇಕಾದ ನೀರಿನ ಬಿಲ್ಲು ಸುಮಾರು ಸಾವಿರ ರೂಪಾಯಿಯ ತನಕ ಏರಿತು. ಬಡಜನರು ನೀರು ಅಥವ ಊಟದಲ್ಲಿ ಯಾವುದಾದರೂ ಒಂದನ್ನು ಮಾತ್ರ ಆರಿಸಿಕೊಳ್ಳುವ ಸ್ಥಿತಿಗೆ ಮುಟ್ಟಿಬಿಟ್ಟರು. ಈ ಬೆಲೆಏರಿಕೆ ತಾಳಲಾರದೆ ಕೆಲವೆ ತಿಂಗಳುಗಳಲ್ಲಿ ಜನಾಭಿಪ್ರಾಯ, “ಜೀವ ಮತ್ತು ಜಲ ಸಂರಕ್ಷಣಾ ಸಂಘಟನೆ” ಯಾಗಿ ರೂಪಪಡೆದು ಕೊಂಡಿತು. ಒಮ್ಮೆ ನಾಲ್ಕು ದಿನಗಳ ಕಾಲ ಆ ನಗರದಲ್ಲಿ ಸತತ ಬಂದ್ ನಡೆಯಿತು. ಇದಾದ ತಿಂಗಳಿನಲ್ಲಿಯೆ ಬೊಲಿವಿಯಾದ ಮೂಲೆಮೂಲೆಗಳಿಂದ ಲಕ್ಷಾಂತರ ಜನ ಕೋಚಬಾಂಬ ನಗರಕ್ಕೆ ಬಂದು ಮತ್ತೊಮ್ಮೆ ಹರತಾಳ ಮಾಡಿದರು. “ನೀರು ದೇವರ ಕೊಡುಗೆಯೆ ಹೊರತು ವ್ಯಾಪಾರದ ಸರಕಲ್ಲ”, “ಜಲವೆ ಜೀವ” ಎಂಬ ಘೋಷಣೆಗಳೊಂದಿಗೆ ನಗರದ ಇಡೀ ಸಾರಿಗೆ ವ್ಯವಸ್ಥೆಯನ್ನು ನಿಲ್ಲಿಸಿ ಬಿಟ್ಟರು.

ಮಾತುಕತೆಗಳ ನಡುವೆ ಹರತಾಳ ಮುಂದುವರೆಯಿತು. ಬೆಲೆಏರಿಕೆ ಇಳಿಸುತ್ತೇವೆ ಎಂದ ಸರ್ಕಾರ ಜಲ ಖಾಸಗೀಕರಣದಿಂದಾಗಿ ಏನೂ ಮಾಡಲಾಗಲಿಲ್ಲ. ನಿಲ್ಲದ ಪ್ರತಿಭಟನೆಯ ಬೆನ್ನುಮೂಳೆ ಮುರಿಯಲು ಸರ್ಕಾರ ಕರ್ಫ್ಯೂ ವಿಧಿಸಿತು. ಒಂದಷ್ಟು ಪ್ರತಿಭಟನಾಕಾರರು ಬಂಧನಕ್ಕೊಳಗಾದರು. ಬೀದಿಗಳು ರಣರಂಗವಾಗಿ ಬದಲಾದವು. ಕೊನೆಕೊನೆಗೆ ಪೋಲಿಸರೂ ಸರ್ಕಾರದ ವಿರುದ್ಧ ಬಂಡೆದ್ದರು. ಒಮ್ಮೆ ಪೋಲಿಸರು ಪರಿಸ್ಥಿತಿಯನ್ನು ಹತೋಟಿಗೆ ತರಲೆಂದು ಬಂದಿದ್ದ ಸೈನಿಕರ ಮೇಲೆಯೆ ಅಶ್ರುವಾಯು ಪ್ರಯೋಗಿಸಿದರು. ಒಟ್ಟು ಐದು ಜನ ಹಿಂಸಾಚಾರಕ್ಕೆ ಬಲಿಯಾದರು. ಬೇರೆಬೇರೆ ಕಾರಣಕ್ಕೆ ಸರ್ಕಾರದ ನೀತಿಗಳ ವಿರುದ್ಧ ಇದ್ದವರೆಲ್ಲ ಒಂದಾದರು. “ಕೋಚಬಾಂಬ ಜಲ ಕದನ” ಶುರುವಾದ ನಾಲ್ಕೇ ತಿಂಗಳಿನಲ್ಲಿ ಸರ್ಕಾರ ಇಡೀ ಒಪ್ಪಂದವನ್ನು ರದ್ದುಗೊಳಿಸಬೇಕಾಯಿತು. ಕೊನೆಗೂ ದೇಶವಾಸಿಗಳ ಕೈಗೆ ಮತ್ತೊಮ್ಮೆ ನೀರಿನ ಹಕ್ಕು ಮತ್ತು ಹತೋಟಿ ಬಂದಿತು.

—x—

ನೀರ ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿ ಪೂರ್ವಕ್ಕೆ ಹರಿಯುವ ನದಿ. ನಮ್ಮ ಕರ್ನಾಟಕದಲ್ಲಿಯೂ ಹರಿಯುವ ಭೀಮಾ ನದಿಯ ಉಪನದಿಗಳಲ್ಲಿ ಅದೂ ಒಂದು. ಭೀಮೆ ಕೃಷ್ಣೆಯ ಉಪನದಿ. “ಮಹಾರಾಷ್ಟ್ರ ಕೃಷ್ಣಾ ಕಣಿವೆ ಅಭಿವೃದ್ಧಿ ಮಂಡಳಿ” 1984 ರಲ್ಲಿ ನೀರಾ ನದಿಗೆ ದೇವಗಢ ಅಣೆಕಟ್ಟು ಕಟ್ಟಲು ಯೋಜನೆ ಹಾಕಿಕೊಂಡಿತು. ಶುರುವಿನಲ್ಲಿ ಕೇವಲ 62 ಕೋಟಿ ರೂಪಾಯಿಗಳ ಯೋಜನೆಯಾಗಿ ಪ್ರಾರಂಭವಾದ ಈ ಯೋಜನೆಗೆ ಇಲ್ಲಿಯ ತನಕ 450 ಕೋಟಿ ರೂಪಾಯಿಗಳನ್ನು ವ್ಯಯಿಸಲಾಗಿದೆ. ಇನ್ನು ಕೇವಲ ಶೇ. 5 ರಷ್ಟು ಅಣೆಕಟ್ಟಿನ ಕೆಲಸ ಬಾಕಿ ಇದೆ. ಆದರೆ ಇನ್ನೂ ಮುಗಿಯಬೇಕಾದ ಎಡದಂಡೆ/ಬಲದಂಡೆ ಕಾಲುವೆಗಳ ಕಾಮಗಾರಿ ಸಾಕಷ್ಟಿದೆ. ಉಳಿದ ಡ್ಯಾಮ್‌ಗೆ ಮತ್ತು ಇತರೆ ಕಾಮಗಾರಿಗಳಿಗೆ 1000 ಕೋಟಿ ರೂಪಾಯಿಯ ಅವಶ್ಯಕತೆ ಇದೆ ಎನ್ನುತ್ತಾರೆ ಅಲ್ಲಿಯ ನೀರಾವರಿ ಸಚಿವ ರಾಮರಾಜೆ ನಿಂಬಾಳ್ಕರ್.

ಇತ್ತೀಚಿನ ಸುದ್ದಿ ಏನೆಂದರೆ, ಆ 1000 ಕೋಟಿ ರೂಪಾಯಿಯನ್ನು ಒಟ್ಟುಗೂಡಿಸಲು ಅಲ್ಲಿಯ ಸರ್ಕಾರದ ಕೈಯಲ್ಲಿ ಸಾಧ್ಯವಿಲ್ಲವಂತೆ. ಹಾಗಾಗಿ ಯಾರು ಸಾವಿರ ಕೋಟಿ ಹೂಡಲು ಸಿದ್ಧರಿದ್ದಾರೊ ಅವರಿಗೆ ಆ ಅಣೆಕಟ್ಟು ಮತ್ತು ನದಿಯ ನೀರಿನ ಯಜಮಾನಿಕೆ ವಹಿಸಿಕೊಡಲು ಮಹಾರಾಷ್ಟ್ರದ ಸರ್ಕಾರ ಇದೆ ಸೆಪ್ಟೆಂಬರ್‌ನಲ್ಲಿ ತೀರ್ಮಾನಿಸಿತು. ಆಸಕ್ತರು ಸರ್ಕಾರವನ್ನು ಸಂಪರ್ಕಿಸಬೇಕೆಂದು ಕೋರಿತು. ಈಗ ಐದು ಕಂಪನಿಗಳು ನದಿಯನ್ನು ಕೊಳ್ಳಲು ಆಸಕ್ತಿ ತೋರಿಸಿವೆಯೆಂದು ಇಂಗ್ಲಿಷಿನ “ಔಟ್‌ಲುಕ್” ವಾರಪತ್ರಿಕೆ ಇತ್ತೀಚೆಗೆ ತಾನೆ ವರದಿ ಮಾಡಿದೆ. ಈ ಆಸಕ್ತಿ ಅಂತಿಮವಾಗಿ ಮಾರಾಟದಲ್ಲಿ ಕೊನೆಗೊಂಡರೆ, ಒಂದು ದೊಡ್ಡ ಅಣೆಕಟ್ಟು, 229 ಕಿ.ಮಿ. ಉದ್ದದ ಬಲದಂಡೆ ಮತ್ತು ಎಡದಂಡೆ ಕಾಲುವೆಗಳ ಒಂದು ಲಕ್ಷ ಎಕರೆಗೂ ಮೀರಿದ ನೀರಾವರಿಯ ಉಸ್ತುವಾರಿ ಖಾಸಗಿ ಕಂಪನಿಯ ಕೈಗೆ ಹೋಗುತ್ತದೆ.

ಭಾರತದ ಮುಂದುವರೆದ ರಾಜ್ಯಗಳಲ್ಲಿ ಮಹಾರಾಷ್ಟ್ರವೂ ಒಂದು. ಅಲ್ಲಿಯ ಆರ್ಥಿಕ ಸುಧಾರಣೆಗಳಿಂದಾಗಿ ಅದು ಇತರೆ ರಾಜ್ಯಗಳಿಗಿಂತ ಹೆಚ್ಚಾಗಿ ಕೈಗಾರಿಕೀಕರಣವಾಗಿದೆ. ಹಾಗೆಯೆ ನಗರೀಕರಣವೂ ಆಗಿದೆ. ಮಹಾರಾಷ್ಟ್ರ ಸರ್ಕಾರ 2007-2008 ರ ಹಣಕಾಸಿನ ವರ್ಷದಲ್ಲಿ ಸುಮಾರು 68300 ಕೋಟಿ ರೂಪಾಯಿಗಳ ಆದಾಯ ನಿರೀಕ್ಷಿಸುತ್ತಿದ್ದು ಸುಮಾರು 510 ಕೋಟಿ ರೂಪಾಯಿಗಳ ಉಳಿತಾಯದ ಬಜೆಟ್ ಮಂಡಿಸಿದೆ. ಇಷ್ಟು ದೊಡ್ಡ ಸರ್ಕಾರದ ಬಳಿ ದೇವಗಢ್ ಅಣೆಕಟ್ಟೆಯ ಯೋಜನೆಗಾಗಿ 1000 ಕೋಟಿ ಎತ್ತಿಡಲಾಗುವುದಿಲ್ಲ ಎಂದರೆ ಆ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ, ಇಲ್ಲವೆ ಆ ಯೋಜನೆಯಲ್ಲಿ ನಂಬಿಕೆಯಿಲ್ಲ, ಎಂದಾಗುವುದಿಲ್ಲವೆ?

ಲೇಖನದ ವಿಡಿಯೊ ಪ್ರಸ್ತುತಿ

ಈ ಅಣೆಕಟ್ಟಿನ ಖಾಸಗೀಕರಣದ ವಿಚಾರ ಮಹಾರಾಷ್ಟ್ರಕ್ಕೆ ಮಾತ್ರ ಸೀಮಿತವಾಗಿದ್ದರೂ ಅದರ ಪರಿಣಾಮ ಮತ್ತು ಪ್ರಭಾವ ಕ್ರಮೇಣ ಇಡೀ ದೇಶಕ್ಕೆ ವ್ಯಾಪಿಸುತ್ತದೆ. ಭಾರತದಂತಹ ಕೃಷಿಪ್ರಧಾನ, ಬಹುಸಂಖ್ಯಾತ ರೈತರ ದೇಶದಲ್ಲಿ ಒಂದು ನದಿಯನ್ನು, ಇಡೀ ಅಣೆಕಟ್ಟನ್ನು ಖಾಸಗೀಕರಣ ಮಾಡುವ ವಿಚಾರವೆ ಒಂದು ಕೆಟ್ಟ ಜೋಕು. ದಕ್ಷಿಣ ಅಮೆರಿಕದಲ್ಲಿಯೆ ಏನು ದಕ್ಷಿಣ ಭಾರತದಲ್ಲಿಯೂ ನೀರು ಜೀವನಾಧಾರವು ಹೌದು, ಭಾವನಾತ್ಮಕ ವಿಷಯವೂ ಹೌದು. ಕನ್ನಂಬಾಡಿಯಿಂದ ನೀರನ್ನು ಕಾವೇರಿ ನದಿಗೆ ಬಿಡಬೇಕೆ ಬೇಡವೆ ಎಂಬ ವಿಚಾರಕ್ಕೆ ಗದ್ದಲ ಎದ್ದರೆ ಕರ್ನಾಟಕ ಮತ್ತು ತಮಿಳುನಾಡಿನಲ್ಲಿನ ಸರ್ಕಾರಗಳೆ ಅದುರುತ್ತವೆ. ಆಂಧ್ರದ ರೈತರು ಅಲ್ಲಿಯ ಸರ್ಕಾರದ ಕಿವಿ ಹಿಂಡಿ ಪ್ರಶ್ನಿಸುತ್ತಿದ್ದರೆ ಇಲ್ಲಿ ಕರ್ನಾಟಕದ ಸರ್ಕಾರ ಆಲಮಟ್ಟಿಯ ಎತ್ತರದ ಬಗ್ಗೆ ಉತ್ತರ ಕೊಡುತ್ತಿರುತ್ತದೆ. ಇನ್ನು ಬೆಳೆದು ನಿಂತಿರುವ ಪೈರಿಗೆ ಸಮಯಕ್ಕೆ ಸರಿಯಾಗಿ ಡ್ಯಾಮಿನಿಂದ ನೀರು ಬಿಡದೆ ಇದ್ದರೆ ಈಗೀಗ ರೈತರು ಅದೇ ದಿನ ಡ್ಯಾಮಿಗೇ ದಾಳಿಯಿಡಲು ಪ್ರಾರಂಭಿಸಿ ಬಿಟ್ಟಿದ್ದಾರೆ. 2002 ರ ಸೆಪ್ಟೆಂಬರ್‌ನಲ್ಲಿ ಮೂರು ಸಾವಿರ ರೈತರು ಕನ್ನಂಬಾಡಿ ಅಣೆಕಟ್ಟೆಯ ಕಚೇರಿಗೆ ದಾಳಿ ಮಾಡಿ ಶಾಸಕರದೂ ಸೇರಿದಂತೆ ಏಳು ಸರ್ಕಾರಿ ಕಾರುಗಳನ್ನು ಜಖಂ ಗೊಳಿಸಿದ್ದರು. ಕೊನೆಗೆ ಪೋಲಿಸರು ಲಾಠಿಚಾರ್ಜ್ ಮಾಡಿ, ಅಶ್ರುವಾಯು ಪ್ರಯೋಗಿಸಿ ಪರಿಸ್ಥಿತಿಯನ್ನು ತಹಬಂದಿಗೆ ತರಬೇಕಾಯಿತು. ಕೇವಲ ಒಂದೂವರೆ ತಿಂಗಳಿನ ಹಿಂದೆ ಹಿರಾಕುಡ್ ಜಲಾಶಯದ ನೀರನ್ನು ಕೈಗಾರಿಕೆಗಳಿಗೆ ಬಿಡಬಾರದೆಂದು ಒರಿಸ್ಸಾದ ಸುಮಾರು ಹತ್ತು ಸಾವಿರ ರೈತರು ಆ ಜಲಾಶಯದ ಬಳಿ ಹೋಗಿ ಪ್ರತಿಭಟನೆ ನಡೆಸಿದ್ದರು.

ಖಾಸಗೀಕರಣ ಶಿಸ್ತನ್ನು ಮತ್ತು ಆರ್ಥಿಕ ಜವಾಬ್ದಾರಿಯನ್ನು (Fiscal Responsibility) ತರುತ್ತದೆ ಎನ್ನುವುದೇನೊ ನಿಜ. ಆದರೆ, ಕೆಲವೊಮ್ಮೆ ಲಾಭದ ಕಾರಣಕ್ಕಾಗಿ ಅದು ಸೂಕ್ಷ್ಮ ಸಂವೇದನೆಗಳನ್ನು ಕಳೆದುಕೊಳ್ಳುವ ಅಪಾಯ ಇರುತ್ತದೆ. ಲಾಭದ ದೃಷ್ಟಿಯಿಂದ ಇನ್ನೊಬ್ಬರು ತನ್ನ ಬೆಳೆಗೆ ನೀರು ಬಿಡದೆ ಚೆಲ್ಲಾಟವಾಡುತ್ತಿದ್ದಾರೆ ಎನ್ನುವುದನ್ನು ರೈತ, ಅದರಲ್ಲೂ ಪ್ರಜಾಪ್ರಭುತ್ವದ ಹಕ್ಕುಗಳನ್ನು ಮತ್ತು ಸ್ವಾತಂತ್ರ್ಯವನ್ನು ಅನುಭವಿಸಿರುವ ಭಾರತದ ರೈತ ಸಹಿಸಿಕೊಳ್ಳುವುದು ಅಸಾಧ್ಯ. ಹಾಗೆಯೆ ಹರಿಯುತ್ತಿರುವ ನದಿಯಲ್ಲಿ ಈಜಾಡಲು ದುಡ್ಡು, ಗಾಳ ಹಾಕಿ ಮೀನು ಹಿಡಿಯಲು ದುಡ್ಡು, ಬಟ್ಟೆಯೊಗೆಯಲು ದುಡ್ಡು, ಕೊನೆಗೆ ಬೊಗಸೆ ನೀರು ಕುಡಿಯಲೂ ದುಡ್ಡು ಎಂಬ ವಿಚಿತ್ರ ಕಾನೂನುಗಳೇನಾದರೂ ಬಂದುಬಿಟ್ಟರೆ ಅದು ಸಮಸ್ಯೆಯನ್ನು ಮೈಮೇಲೆ ಎಳೆದುಕೊಂಡಂತೆ.

ಒಳ್ಳೆಯ ಬೆಳೆ ಆಗಿಯೂ ಸೂಕ್ತ ಬೆಲೆ ಸಿಗದಿದ್ದರೆ ರೈತ ಸಹಿಸಿಕೊಳ್ಳಬಲ್ಲ. ಮಳೆಯಿಲ್ಲದೆ ಬೆಳೆ ಒಣಗಿ ಹೋದರೂ ರೈತ ಸಹಿಸಿಕೊಳ್ಳಬಲ್ಲ. ಆದರೆ, ಯಾವುದೊ ಕಾರಣಕ್ಕಾಗಿ ಇರುವ ನೀರನ್ನು ತನ್ನ ಗದ್ದೆಗೆ ಹನಿಸದೆ ಹೋದರೆ ರೈತ ಸಹಿಸಲಾರ. ಅಷ್ಟಕ್ಕೂ ಆತ ಏನೇ ಆಗಲಿ ಗೊಣಗಿಕೊಂಡೇ ಸುಮ್ಮನಾಗುವ, ಮನೆ ಬಿಟ್ಟು ಹೊರಬರದ ನಗರವಾಸಿ ಮಧ್ಯಮವರ್ಗದವನಲ್ಲ. ವಾತಾವರಣದಲ್ಲಿನ ಚಂಚಲತೆಯೆಂತೆ ಬದಲಾಗುವ ರೈತನ ಚಂಚಲ ಮನೋಭಾವದ, ಅಸ್ಥಿರ ಜೀವನದ, ಅವರ ಸಂಖ್ಯಾಬಲದ ಹಾಗೂ ಮನುಷ್ಯನ ಅಸಹಾಯಕತೆಯ ರೋಷದ ಪರಿಚಯ ಇಲ್ಲದ ಅವಿವೇಕಿ ರಾಜಕಾರಣಿಗಳು ಮತ್ತು ಅಧಿಕಾರಿಗಳು ಮಾತ್ರ ನದಿಯನ್ನು, ನೀರನ್ನು ಖಾಸಗೀಕರಣಗೊಳಿಸುತ್ತಾರೆ.

ಅವರಿಗಿಂತ ಅವಿವೇಕಿಗಳು, ಪ್ರಪಂಚದ ಇತರ ಕಡೆಗಳಲ್ಲಿ ನೀರಿನ ಸುದ್ದಿಗೆ ಹೋಗಿ ಕೈಸುಟ್ಟಕೊಂಡವರ ಕತೆಯ ಅರಿವಿಲ್ಲದ ತಿಳಿಗೇಡಿಗಳು ಮಾತ್ರ ಅಂತಹುದನ್ನು ಲಾಭದ ಆಸೆಯಲ್ಲಿ ಕೊಳ್ಳಲು ಮುಂದೆ ಬರುತ್ತಾರೆ.

ಮಹಾರಾಷ್ಟ್ರದಲ್ಲಿ ಆರಂಭವಾಗಿರುವ ಚಾಳಿ ಪಕ್ಕದ ರಾಜ್ಯಗಳಿಗೂ ಹಬ್ಬದೆ ಇರಲಿ ಎಂದು ಬಯಸೋಣ, ಅಲ್ಲವೆ? ಇಲ್ಲದಿದ್ದರೆ, ನಮ್ಮಲ್ಲಿಯ ಭ್ರಷ್ಟರು ಪೈಪೋಟಿಯ ಮೇಲೆ ಕೆ.ಆರ್.ಎಸ್. ಡ್ಯಾಮ್ ಪ್ರೈವೇಟ್ ಲಿಮಿಟೆಡ್, ಆಲಮಟ್ಟಿ ಡ್ಯಾಮ್ ಪ್ರೈವೇಟ್ ಲಿಮಿಟೆಡ್, ತುಂಗಭದ್ರ ಡ್ಯಾಮ್ ಪ್ರೈವೇಟ್ ಲಿಮಿಟೆಡ್‌ಗಳಿಗೆ ಅವೆಲ್ಲವನ್ನೂ ಮಾರಿಬಿಡುತ್ತಾರೆ; ಬೆಂಗಳೂರಿನ ಸುತ್ತಮುತ್ತಲ ಸರ್ಕಾರಿ ಜಮೀನನ್ನು ಹರಾಜು ಹಾಕಿದಂತೆ.

Add a Comment

required, use real name
required, will not be published
optional, your blog address