ಕೈಗಾರಿಕೆಗಳಿಗೆ ಕೃಷಿಜಮೀನು ಕೊಟ್ಟ ಹಳ್ಳಿಯ ಆರಂಭದ ದಿನಗಳು…

[ಮುಗಿದಿಲ್ಲದ, ಹೆಸರಿಟ್ಟಿಲ್ಲದ, ಪರಿಷ್ಕರಣಗೊಂಡಿಲ್ಲದ ಕತೆ-ಕಾದಂಬರಿಯೊಂದರ ಅಲ್ಲಲ್ಲಿಯ ಸಾಲುಗಳು.]

ಮೈಬಗ್ಗಿಸಿ ಕೆಲಸ ಮಾಡಲು ಗೊತ್ತಿಲ್ಲದ ಒಂದೆರಡು ಹಳೆಯ ಸ್ಥಿತಿವಂತ ಮನೆಗಳ ಹುಡುಗರು ಕಾರ್ಮಿಕ ಮುಖಂಡರಾಗಿ ಬೆಳೆದರು. ತಮ್ಮಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಲು ಕೆಲವು ಕಾರ್ಖಾನೆಗಳ ಮಾಲೀಕರು ಇವರ ಸೇವೆಯನ್ನು ಬಳಸಿಕೊಳ್ಳುತ್ತಿದ್ದರು. ಇವರು ತಮ್ಮ ಗೂಂಡಾಗಿರಿಯನ್ನು ಉರಿಗೆ ಹೊಸಬರಾಗಿದ್ದವರ ಮೇಲೆ ತೋರಿಸುತ್ತಿದ್ದರೆ ಹೊರತು ಊರಿನವರ ಮೇಲೆ ತೋರಿಸುತ್ತಿರಲಿಲ್ಲ. ಊರಿನ ಬಹುತೇಕ ವಿಚಾರಗಳಲ್ಲಿ ಇನ್ನೂ ಹಳಬರ ಮತ್ತು ಹಿರಿಯರ ಮಾತೇ ನಡೆಯುತ್ತಿತ್ತು. ಆದರೆ ಕಾರ್ಖಾನೆಗಳ ಕಡೆ ಓಡಾಡಿಕೊಂಡು ರೌಡಿಸಂ ಮಾಡುತ್ತಿದ್ದ, ಮಾಲೀಕರನ್ನು ಮತ್ತು ನೌಕರರನ್ನು ಅನುಕೂಲಕ್ಕೆ ತಕ್ಕಂತೆ ಹೆದರಿಸಿ, ಸುಲಿಗೆ ಮಾಡಿಕೊಂಡು ಓಡಾಡುತ್ತಿದ್ದ ಯುವಕರಲ್ಲಿ ಒಂದಿಬ್ಬರು ಆಗಾಗ ಬಾಡಿಗೆ ಮನೆಗಳಲ್ಲಿದ್ದ ಹೆಂಗಸರನ್ನು ಬಲಾತ್ಕಾರ ಮಾಡುವುದು ಗೊತ್ತೂ ಗೊತ್ತಾಗದಂತೆ ನಡೆಯುತ್ತಿತ್ತು. ಬಾಡಿಗೆ ಮನೆಗಳಲ್ಲಿದ್ದ ಅನೇಕ ಕಾರ್ಮಿಕರು ಶಿಫ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ದುದ್ದರಿಂದ ಹಲವರ ಮನೆಗಳಲ್ಲಿ ಗಂಡನಿಲ್ಲದ ರಾತ್ರಿಗಳನ್ನು ಹೆಂಗಸರು ಕಳೆಯಬೇಕಿತ್ತು. ಹಾಗಾಗಿ ಅವರನ್ನು ಬಲಾತ್ಕಾರ ಮಾಡುವುದು ಪಡ್ಡೆ ಹುಡುಗರಿಗೆ ಕಷ್ಟವೇನೂ ಆಗಿರಲಿಲ್ಲ. ಆ ರೀತಿಯ ಅತ್ಯಾಚಾರಗಳಿಗೆ ಒಳಗಾದವರು ತಮ್ಮ ಸ್ಥಿತಿಗತಿಗಳಿಗೆ ಅನುಗುಣವಾಗಿ ಊರು ಖಾಲಿ ಮಾಡಿಕೊಂಡು ಹೋಗುತ್ತಿದ್ದರು ಇಲ್ಲವೆ ಪರಿಸ್ಥಿತಿಗೆ ಹೊಂದಿಕೊಂಡು ಬಿಡುತ್ತಿದ್ದರು.

ಬಾಡಿಗೆ ಮನೆಗಳಲ್ಲಿದ್ದ ಹೊರಊರಿನ ಹೆಣ್ಣುಮಕ್ಕಳಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ಊರಿನ ಪುಂಡರಿಂದ ಅತ್ಯಾಚಾರಕ್ಕೆ ಒಳಗಾಗುತ್ತಿದ್ದ ಸಮಯದಲ್ಲಿ ಊರಿನ ಕೆಲವು ಬಡವರ ಹೆಣ್ಣುಮಕ್ಕಳ ಸ್ಥಿತಿಯೂ ಅಷ್ಟೇನು ಚೆನ್ನಾಗಿರಲಿಲ್ಲ. ಇದ್ದ ಸಣ್ಣಪುಟ್ಟ ಜಮೀನು ಕಳೆದುಕೊಂಡ ಸಣ್ಣ ರೈತರು ಒಂದೆರಡು ಎಮ್ಮೆ ಮತ್ತು ಹಸುಗಳಿಂದ ಜೀವನ ಮಾಡಬೇಕಿತ್ತು. ಹೊಲಗದ್ದೆಗಳು ಇಲ್ಲದ್ದರಿಂದ ಅವರು ತಮ್ಮ ಹಸುಗಳಿಗೆ ಪ್ರತಿದಿನವೂ ಹುಲ್ಲನ್ನು ಹೊಂದಿಸಬೇಕಿತ್ತು. ಒಂದು ಕಾಲದಲ್ಲಿ ಅವರದಾಗಿದ್ದ, ಆದರೆ ಇಂದು ಅವರದಲ್ಲದ ಜಮೀನುಗಳಲ್ಲಿ ಮಾತ್ರ ಹುಲ್ಲು ಧಂಡಿಯಾಗಿ ಬೆಳೆಯುತ್ತಿತ್ತು. ಕಾರ್ಖಾನೆಗಳ ಖಾಲಿ ಪ್ರದೇಶಗಳಲ್ಲಿ ಮಳೆಗಾಲದಲ್ಲಂತೂ ಹುಲ್ಲು ಆಳೆತ್ತರ ಬೆಳೆಯುತ್ತಿತ್ತು. ಆದರೆ ಕಾರ್ಖಾನೆಗಳಿಗೆಲ್ಲ ಮುಳ್ಳುತಂತಿಯ ಬೇಲಿಗಳಿದ್ದವು ಮತ್ತು ಪ್ರತಿ ಕಾರ್ಖಾನೆಗೂ ವಾಚ್‌ಮನ್‌ಗಳೆಂದು ಕರೆಸಿಕೊಳ್ಳುತ್ತಿದ್ದ ಕಾವಲುಗಾರರು ಇದ್ದರು. ಮನೆಗಳಲ್ಲಿ ಹಸುಗಳಿದ್ದ ಹೆಣ್ಣುಮಕ್ಕಳು ಇಂತಹ ಕಾರ್ಖಾನೆಗಳಿಗೆ ಬೆಳಿಗ್ಗೆ ನಸುಕಿನಲ್ಲೆ ಹುಲ್ಲು ಕೊಯ್ದುಕೊಂಡು ಬರಲು ಕುಡುಗೋಲಿನ ಸಮೇತ ಹೋಗುತ್ತಿದ್ದರು. ಕೆಲವು ವಾಚ್‌ಮನ್‌ಗಳು ಒಳ್ಳೆಯವರಿದ್ದು ಹುಲ್ಲು ಕೊಯ್ದುಕೊಳ್ಳಲು ಬಿಡುತ್ತಿದ್ದರೆ ಮತ್ತೆ ಕೆಲವರು ಬಿಟ್ಟಿಯಾಗಿ ಬಿಡುತ್ತಿರಲಿಲ್ಲ. ಹೆಣ್ಣುಮಕ್ಕಳ ದೇಹವನ್ನು ಆಗಾಗ ಶುಲ್ಕವಾಗಿ ಪಡೆಯುತ್ತಿದ್ದರು. ಹಲವಾರು ಮನೆಗಳಲ್ಲಿ ಅಪ್ಪಂದಿರಿಗೆ ಇದು ಗೊತ್ತಿತ್ತು. ಕೆಲವರು ಹೀಗಾಗದಂತೆ ಹುಷಾರಾಗಿ ನೋಡಿಕೊಂಡರು. ಮತ್ತೆ ಕೆಲವರು ಕುರುಡರಾದರು. ಅಭಿವೃದ್ಧಿಯ ಕಡೆ ಮುಖ ಮಾಡಿ ಬದಲಾಗುತ್ತಿರುವ ಹೊಸ ಪ್ರಪಂಚದಲ್ಲಿ ಅವರ ಜೀವನ ಈ ತಾಪತ್ರಯಗಳನ್ನು ಗಣಿಸುವ ಸ್ಥಿತಿಯಲ್ಲಿ ಇರಲಿಲ್ಲ. ಅನಾನುಕೂಲಿಗಳು ಮತ್ತು ಅಬಲರು ಎರಡೂ ಕಡೆ ಶೋಷಿಸಲ್ಪಡುತ್ತಿದ್ದರು.

ಜಮೀನು ಕಳೆದುಕೊಂಡ ವಿಧವೆಯರದು ಇನ್ನೊಂದು ಕತೆ. ಮಕ್ಕಳಿಲ್ಲದೆ ಒಬ್ಬಂಟಿಯಾಗಿದ್ದ ವಿಧವೆಯರಿಗೆ ಮತ್ತು ಇನ್ನೂ ಅಪ್ರಾಪ್ತ ವಯಸ್ಸಿನ ಮಕ್ಕಳಿದ್ದ ವಿಧವೆಯರಿಗೆ ಪರಿಹಾರ ಕೊಡಿಸಲು ಹಾಗು ಕೋರ್ಟು-ಬ್ಯಾಂಕಿಗೆ ಕರೆದುಕೊಂಡು ಹೋಗಲು ಮೂರ್ನಾಲ್ಕು ಗಂಡಸರು ಪೈಪೋಟಿಯಲ್ಲಿ ಮುಂದಕ್ಕೆ ಬಂದರು. ಒಂದಿಬ್ಬರು ತಮ್ಮ ಭಾವಂದಿರ ಮತ್ತು ರಕ್ತಸಂಬಂಧಿಕರ ಮಾತು ಕೇಳಿ ಬಚಾವಾದರು. ಒಂದಿಬ್ಬರು ಗೊತ್ತಾಗದೆ ದುಡ್ಡನ್ನೆಲ್ಲ ಈ ಮುಂಡಾಮೋಚು ಜನರಿಗೆ ಕಳೆದುಕೊಂಡರು. ಮತ್ತೊಂದಿಬ್ಬರು ಹಾಗೆ ಸಹಾಯ ಮಾಡಲು ಬಂದವರಿಗೆ ದೈಹಿಕವಾಗಿಯೂ ಒಪ್ಪಿಸಿಕೊಂಡು ಒಂದಿಷ್ಟು ದುಡ್ಡೂ ಉಳಿಸಿಕೊಂಡು ಏನೂ ಆಗಿಲ್ಲದಂತೆ ಜೀವನ ಮುಂದುವರೆಸಿದರು. ಕೆಲವರು ಇದ್ದಕ್ಕಿದ್ದಂತೆ ಮೈತುಂಬಿಕೊಂಡು, ಬಿರಿದ ಟೊಮೆಟೊ ಹಣ್ಣಿನಂತೆ ಸ್ಥೂಲಕಾಯರಾದರು.

ಜಮೀನು ಕಿತ್ತುಕೊಂಡ ಸರ್ಕಾರ ಮತ್ತು ಅದರ ಸೀಮಿತ ದೃಷ್ಟಿಕೋನದ ದಡ್ಡ ಅಧಿಕಾರಿಗಳು ಪರಿಹಾರದ ಹಣ ಕೊಡುವುದರೊಂದಿಗೆ ತಮ್ಮ ಜವಾಬ್ದಾರಿ ಮುಗಿಯಿತು ಎಂದುಕೊಂಡರು. ತಮ್ಮ ಪಾಲಿಗೆ ಬಂದ ದುಡ್ಡನ್ನು ಜನ ಬಳಸಬಹುದಾದ ರೀತಿಗಳನ್ನು ಮತ್ತು ಜೀವನೋಪಾಯಕ್ಕೆ ತೊಡಗಿಸಿಕೊಳ್ಳಲು ಇರಬಹುದಾದ ಮಾರ್ಗಗಳನ್ನು ಹಳ್ಳಿಯ ಮುಗ್ಧ ಜನತೆಗೆ ತಿಳಿಸುವ ಕಾರ್ಯವನ್ನು ಅವರು ಮಾಡಲಿಲ್ಲ.

ಯಾವುದು ನ್ಯಾಯ, ಯಾವುದು ಮೌಲ್ಯ, ಯಾವುದನ್ನು ಉಳಿಸಿಕೊಳ್ಳಬೇಕು, ಯಾವುದನ್ನು ತಡೆಯಬೇಕು, ಎನ್ನುವಂತಹ ಚಿಂತನೆ ಊರಿನ ಸಮಷ್ಟಿ ಮಾನಸದಲ್ಲಿ ಹುಟ್ಟಲಿಲ್ಲ. ಇದನ್ನೆಲ್ಲ ಯೋಚಿಸಿ ಮಾತನಾಡುವವರ ಮಾತಿಗೆ ಬೆಲೆ ಇಲ್ಲದ ಸಂದರ್ಭ ಅದು. ಊರಿನ ಅಧ:ಪತನವನ್ನು ಸಹಿಸಲಾಗದ ಹಲವು ಅನುಕೂಲಸ್ಥರು ತಮ್ಮ ಉಳಿದಿದ್ದ ಹೊಲದಲ್ಲಿ ಮನೆ ಮಾಡಿಕೊಂಡು ಊರಿನಿಂದ ಹೊರಗಾದರು.

ಹೀಗೊಬ್ಬ (ಮಾಜಿ) ನಿರಾಶ್ರಿತಳ ಕತೆ…

ಅದು ಹೇಗೋ ಈ ಲಿಂಕ್ ನೋಡಿದೆ. ತೆಲುಗಿನಲ್ಲಿದೆ. ಸುಮಲತರ ಟಿವಿ ಕಾರ್ಯಕ್ರಮ. ಇಂತಹ ಕಾರ್ಯಕ್ರಮಗಳಲ್ಲಿ ಇರಬಹುದಾದ ಅತಿರಂಜನೆಯಾಗಲಿ ಅಥವ ನಾಟಕೀಯತೆಯಾಗಲಿ ಇಲ್ಲಿ , ಈ ಎಪಿಸೋಡ್‌ನಲ್ಲಿ, ಕಾಣಿಸಲಿಲ್ಲ. ಭಾಷೆ ಅರ್ಥವಾಗದಿದ್ದರೂ ಭಾವಾರ್ಥ ಅರ್ಥವಾಗಬಹುದು ಎಂದು ಭಾವಿಸಿ ಇಲ್ಲಿ ಕೊಡುತ್ತಿದ್ದೇನೆ.

ಚಪ್ಪಲಿ ಹೊಲೆಯುವ ವೆಂಕಟೇಶ್ವರಲುರವರ ಮುಗ್ಧತೆ ಮತ್ತು ಸರಳ ಚಿಂತನೆ ನಮ್ಮ ನೆಲದ ಸಹಸ್ರಾರು ವರ್ಷಗಳ ನಾಗರಿಕತೆಯ ವಿಕಾಸದ ಮತ್ತು ಅದು ಸಾಗಿ ಬಂದ ದಾರಿಯ ಕುರುಹು ಎನ್ನಿಸುತ್ತದೆ. ಅವರ ತಾತ ಹೇಳುತ್ತಿದ್ದರಂತೆ: “ಬಿಸಿಲಿಗೆ ಹೋಗುವವರನ್ನು ನೆರಳಿಗೆ ತರಬೇಕಪ್ಪ. ಅವರಿಗೆ ಇಲ್ಲದಿದ್ದಾಗ ಹತ್ತಿರಕ್ಕೆ ಕರೆದು ನಮಗಿರುವುದರಲ್ಲೆ ಅವರಿಗೂ ಇಡಬೇಕಪ್ಪ.” ಸಾಮಾಜಿಕ-ಆರ್ಥಿಕ-ಬೌದ್ಧಿಕ ಇತಿಮಿತಿಗಳೇನೇ ಇರಲಿ, ಕಲುಷಿತವಾಗಲೊಲ್ಲದ ಮನಸ್ಸುಗಳು.

ಇತ್ತೀಚೆಗೆ ತಾನೆ ಬೆಂಗಳೂರಿನಲ್ಲಿ ಹಲವಾರು ನಿರಾಶ್ರಿತರು ಸಾವಿಗೀಡಾದರು….

ಗಾಂಜಾ ಬೆಳೆಯುವ ಲಿವರ್‌ಮೋರ್ ಮನೆಯ ಮೇಲೆ ದಾಳಿ

[ಮುಗಿದಿಲ್ಲದ, ಹೆಸರಿಟ್ಟಿಲ್ಲದ, ಪರಿಷ್ಕರಣಗೊಂಡಿಲ್ಲದ ಕತೆ-ಕಾದಂಬರಿಯೊಂದರ ಅಲ್ಲಲ್ಲಿಯ ಸಾಲುಗಳು.]

ತಡ ಮಾಡಿದರೆ ಅವಕಾಶ ಎಲ್ಲಿ ತಪ್ಪಿಹೋಗಿಬಿಡುತ್ತದೊ ಎಂದು ಕಿಮ್, ಕೊರಾನ್, ಮತ್ತು ಕೀಲೋ ಅಂದು ರಾತ್ರಿ ಮೂರು ಗಂಟೆಗೇ ಎದ್ದು ಒಬ್ಬೊಬ್ಬರೂ ಒಂದೊಂದು ರಿವಾಲ್ವರ್ ಅನ್ನು ಜೇಬಲ್ಲಿ ತುರಿಕಿಕೊಂಡು ಕಾರಿನಲ್ಲಿ ಓಕ್‌ಲ್ಯಾಂಡ್‌ನಿಂದ ಲಿವರ್‌ಮೋರ್‌ಗೆ ಹೊರಟರು. ಕೊರಾನ್‌ಗೆ ಆ ಮನೆಯ ವಿಳಾಸ ಗೊತ್ತಿತ್ತು. ಮುಂಜಾವು ನಾಲ್ಕೂವರೆಗೆಲ್ಲ ಗಾಂಜಾ ಬೆಳೆಯುತ್ತಿದ್ದವನ ಮನೆಯ ಮುಂದಿದ್ದರು. ಅದು ನಾಲ್ಕು ಬೆಡ್‌ರೂಮ್‌ಗಳ ದೊಡ್ಡ ಮನೆ. ರಸ್ತೆಯಲ್ಲಿ ಯಾರೊಬ್ಬರ ಸಂಚಾರವಾಗಲಿ ಸುಳಿವಾಗಲಿ ಕಾಣಿಸಲಿಲ್ಲ. ಕಾರು ಇಳಿದವರೆ ಮೂವರೂ ಸದ್ದಿಲ್ಲದೆ ಮನೆಯನ್ನು ಬಳಸಿ ಹಿಂಬದಿಯ ಹಿತ್ತಿಲಿಗೆ ನುಸುಳಿದರು. ಕೊರಾನ್ ತುದಿಯಲ್ಲಿ ಚಪ್ಪಟೆಯಾಗಿ ಸ್ವಲ್ಪ ಬಾಗಿದ್ದ ಕಬ್ಬಿಣದ ಕಾಗೆಕೊಕ್ಕಿನ ಸರಳನ್ನು ಜೊತೆಗೆ ಒಯ್ದಿದ್ದ. ಹಿಂಬದಿಯ ಬಾಗಿಲ ಪಕ್ಕದಲ್ಲಿದ್ದ ಕಿಟಕಿಯ ಅಂಚಿನಲ್ಲಿ ಆ ಸರಳನ್ನು ತೂರಿಸಿ ವಿರುದ್ಧ ದಿಕ್ಕಿನಲ್ಲಿ ಜೋರಾಗಿ ಎಳೆದ. ಕಿಟಕಿ ಬಾಗಿಲಿನ ಕೊಂಡಿ ಒಳಗೆ ಚಳ್‌ಪಳ್ ಎಂದು ಕಿತ್ತುಬಂತು. ಕೂಡಲೆ ಕಿಟಕಿಯನ್ನು ಪೂರ ಅಂಚಿಗೆ ಸರಿಸಿ ಮೂವರೂ ಒಳಗೆ ನುಗ್ಗಿದರು.

ಒಳಗೆ ತನ್ನ ೨೫ ವರ್ಷದ ಬಿಳಿಯ ಗರ್ಲ್‌ಫ್ರೆಂಡ್ ಮಿಸ್ಟಿ ಜೊತೆ ಮಲಗಿದ್ದ ೩೫ ವರ್ಷದ ಬಿಳಿಯ ಸೊನೆಪಸುಟ್‌ಗೆ ಇವರು ಮಾಡಿದ ಸದ್ದು ಅರೆಬರೆ ನಿದ್ದೆಯಲ್ಲೂ ಗೊತ್ತಾಯಿತು. ಮದುವೆ ಆಗಿಲ್ಲದಿದ್ದರೂ ಆತನಿಗೆ ತನ್ನ ಗರ್ಲ್‌ಫ್ರೆಂಡ್‌ನಿಂದ ಇಬ್ಬರು ಪುಟ್ಟಮಕ್ಕಳಿದ್ದರು. ದೊಡ್ದವನಿಗೆ ಎರಡೂವರೆ ವರ್ಷ ಮತ್ತು ಚಿಕ್ಕ ಮಗುವಿಗೆ ಇನ್ನೂ ಎಂಟು ತಿಂಗಳಷ್ಟೇ ಆಗಿತ್ತು. ಆ ಚಿಕ್ಕಮಗು ಆಗಾಗ ರಾತ್ರಿ ಹೊತ್ತು ಡೈಪರ್ ಒದ್ದೆ ಮಾಡಿಕೊಂಡರೆ ಅಳುತ್ತಿದ್ದಿದ್ದರಿಂದ ಅವರಿಬ್ಬರಿಗೂ ನಿದ್ದೆಯಲ್ಲೂ ಏಳುವುದು ಅಭ್ಯಾಸವಾಗಿತ್ತು. ಆ ಮಕ್ಕಳಿಬ್ಬರೂ ಇನ್ನೊಂದು ಕೋಣೆಯಲ್ಲಿ ಮಲಗಿದ್ದರು. ಇನ್ನೆರಡು ಕೋಣೆಯಲ್ಲಿ ಕುಂಡಗಳಲ್ಲಿದ್ದ ಗಾಂಜಾ ಗಿಡಗಳು ತಮ್ಮ ನಿರಂತರ ಬೆಳವಣಿಗೆಯಲ್ಲಿ ತೊಡಗಿದ್ದವು.

ಹೊರಗಿನ ಸದ್ದಿಗೆ ಎಚ್ಚರವಾಗಿ ಆ ಬಿಳಿಯ ಎದ್ದು ಹೊರಗೆ ಬಂದ. ಆತನ ಗರ್ಲ್‌ಫ್ರೆಂಡ್‌ಗೂ ಎಚ್ಚರವಾಗಿ ಅವಳೂ ಅವನ ಹಿಂದೆ ಬಂದಳು. ಇವರು ಲಿವಿಂಗ್‌ರೂಮಿಗೆ ಬರುವಷ್ಟರಲ್ಲಿ ಮೂವರು ಅಣ್ಣತಮ್ಮಂದಿರೂ ಅಲ್ಲಿದ್ದರು. ಅಷ್ಟೊತ್ತಿಗೆ ಮೂವರ ಕೈಯ್ಯಲ್ಲೂ ರಿವಲ್ವಾರ್‌ಗಳು ಸ್ಥಾಪಿತವಾಗಿದ್ದವು. ಅರೆಬರೆ ಬೆಳಕಿನಲ್ಲಿ ಇವರನ್ನು ಕಂಡ ಮನೆಯವರಿಬ್ಬರೂ ಸ್ಥಂಭಿತರಾಗಿ ನಿಂತುಬಿಟ್ಟರು. ದೊಡ್ದವ ಕಿಮ್ ಕಾಲ್ಸ್ಟನ್ ಅವರಿಗೆ ಮೊದಲ ಮಾತಿನಲ್ಲಿ ಎಚ್ಚರಿಕೆ ಕೊಟ್ಟ.
“ತಾಯ್ಗಂಡನೆ, ಕೈಮೇಲೆತ್ತು. ಏನೂ ತಂತ್ರ ಮಾಡ್ಬೇಡ. ನೀನೂ ಅಷ್ಟೆ, ಸೂಳೆ.”
ಮನೆಯವಳಿಗೆ ಮಕ್ಕಳ ಯೋಗಕ್ಷೇಮದ ಭಯ ಆಯಿತು.
“ದಯವಿಟ್ಟು ಏನೂ ಮಾಡಬೇಡಿ. ಮಕ್ಕಳು ನಿದ್ದೆ ಮಾಡ್ತಿದ್ದಾವೆ.”
“ಹಾಗಾದ್ರೆ ಕೇಳಿ. ಮನೇಲಿ ಎಷ್ಟು ಹಣ ಇದೆಯೋ ಎಲ್ಲಾ ತಂದುಕೊಡಿ. ಹಾಗೇನೆ ಮನೇಲಿರೋ ಗಾಂಜಾ ಕೂಡ.”
ಬಿಳಿಯನಿಗೆ ಅಷ್ಟು ಸುಲಭವಾಗಿ ಬಿಟ್ಟುಕೊಡಲು ಮನಸ್ಸಾಗಲಿಲ್ಲ.
“ಯಾವ ಗಾಂಜಾ? ನಿಮಗೆಲ್ಲೋ ತಪ್ಪು ಸಮಾಚಾರ ಸಿಕ್ಕಿದೆ.”
ಅದನ್ನು ಕೇಳಿ ಕೊರಾನ್‌ಗೆ ಕೋಪಬಂತು. ಬಿಳಿಯನ ಬಳಿ ಹೋಗಿ ಅವನ ಮೂತಿಗೆ ಒಂದು ಗುದ್ದಿದ. “ಸೂಳೆಮಗನೆ, ಸುಳ್ಳು ಹೇಳ್ತೀಯಾ? ನಾನು ಹಿಂದೊಮ್ಮೆ ಇಲ್ಲಿಗೆ ಬಂದಿದ್ದೆ.”
ಬಿಳಿಯನ ಮೂಗಿನಿಂದ ರಕ್ತ ಒಸರಲು ಆರಂಭವಾಯಿತು. ತನ್ನ ಗೆಳೆಯನ ಸ್ಥಿತಿ ನೋಡಿ ಆ ಬಿಳಿಯಳಿಗೆ ಭಯವಾಯಿತು. ಇವರು ಇನ್ನೇನು ಮಾಡುತ್ತಾರೋ ಎಂದು ಮಕ್ಕಳಿರುವ ಕೋಣೆಗೆ ಹೋಗಲು ಅತ್ತ ನುಗ್ಗಿದಳು. ಅದನ್ನು ನೋಡಿ ದೊಡ್ಡಣ್ಣ ಕಿಮ್ “ಸೂಳೆ, ಅಲ್ಲೇ ನಿಂತ್ಕೊ,” ಎಂದ. ಆತನ ಪಕ್ಕದಲ್ಲಿದ್ದ ೧೫ ವರ್ಷದ ಕೀಲೊ ಅವಳು ನಿಲ್ಲದ್ದನ್ನು ಕಂಡು ರಿವಾಲ್ವರ್‌ನ ಟ್ರಿಗರ್ ಅನ್ನು ಅವಸರದಲ್ಲಿ ಒತ್ತಿದ.ಅದು ಹೋಗಿ ಅವಳ ತೊಡೆಗೆ ಬಡಿಯಿತು. ಓ ಮೈ ಗಾಡ್ ಎಂದು ಕಿರುಚಿಕೊಂಡು ಮುಗ್ಗರಿಸಿ ಮಕ್ಕಳ ರೂಮಿನ ಬಾಗಿಲ ಬಳಿ ಬಿದ್ದಳು.

ಒಳಗೆ ಮಕ್ಕಳು ಇದ್ಯಾವುದರ ಪರಿವೆ ಇಲ್ಲದೆ ಇನ್ನೂ ಗಾಢನಿದ್ರೆಯಲ್ಲಿದ್ದರು.

….

ಲಿಂಗಾಯತ ಸಮಾವೇಶದಲ್ಲಿ ಆನು “ಹೊರಗಣವನು”

ನನ್ನ ಇನ್ನಿತರೆ ವ್ಯವಹಾರಗಳಲ್ಲಿ ವ್ಯಸ್ತನಾಗುವುದಕ್ಕಿಂತ ಮುಂಚೆ ಇದನ್ನು ಇಲ್ಲಿ ದಾಖಲಿಸೋಣ ಎಂದು ಬರೆಯುತ್ತಿದ್ದೇನೆ.

ಕಳೆದ ವಾರ (ಜುಲೈ 3-4, 2010) ಕೆನಡಾದ ಟೊರಾಂಟೋದಲ್ಲಿ ಲಿಂಗಾಯತ (ಮತ್ತು/ಅಥವ ವೀರಶೈವ) ಸಮುದಾಯದ ಸಮಾವೇಶ ನಡೆಯಿತು. “ಉತ್ತರ ಅಮೆರಿಕದ ವೀರಶೈವ ಸಮಾಜ” ವರ್ಷಕ್ಕೊಮ್ಮೆ ನಡೆಸುವ ಸಮಾವೇಶ ಅದು. ಯಾವುದೇ ಜಾತಿಯ ಸಮಾವೇಶ ಅಥವ ಸಭೆಗಳಲ್ಲಿ ಪಾಲ್ಗೊಳ್ಳುವುದು ಜಾತ್ಯತೀತ ಮತ್ತು ಪ್ರಗತಿಪರ ನಿಲುವಿನ ಮತ್ತು ಬದ್ಧತೆಯ ಯಾರೊಬ್ಬರಿಗೂ ಕಷ್ಟ. ಅದು ತಪ್ಪೂ ಕೂಡ. ಸಮಾನತೆ ಮತ್ತು ಸಹಬಾಳ್ವೆಗಾಗಿ ಹೋರಾಡುತ್ತ, 12ನೇ ಶತಮಾನದಲ್ಲಿಯೆ ಜಾತ್ಯತೀತವಾದ (casteless) ಸಮಾಜವೊಂದನ್ನು ಕಟ್ಟುತ್ತ ಬೆಳೆದ ಸಮುದಾಯದವರ ಈಗಿನ ತಲೆಮಾರಿನ ಜನರ ಸಮಾವೇಶದಲ್ಲಿ ಪಾಲ್ಗೊಳ್ಳಲು ಯಾವುದೇ ಹಿಂಜರಿಕೆ ಇರಕೂಡದು. ಆದರೆ ವಾಸ್ತವ ಹಾಗೆ ಇಲ್ಲ ಎಂದು ಎಲ್ಲರಿಗೂ ಗೊತ್ತು. ಲಿಂಗಾಯತ ಸಮುದಾಯ ಎನ್ನುವುದು ಬೇರೆಯದೇ ಮತವೋ ಅಥವ ಅದೂ ಒಂದು ಜಾತಿಯೋ ಎನ್ನುವುದೇ ಬಹುಸಂಖ್ಯಾತರಿಗೆ ಸ್ಪಷ್ಟವಾಗಿಲ್ಲ. ಬಸವಣ್ಣಾದಿ ಶರಣರ ಆದರ್ಶದ ಹಿನ್ನೆಲೆಯಿಂದ ನೋಡಿದರೆ ಅದು ಅವೆರಡೂ ಆಗಬಾರದು. ಅದೊಂದು ಜಾತ್ಯತೀತ ಮತ್ತು ಪ್ರಗತಿಪರ ಚಿಂತನೆಯ, ಆಚರಣೆಯಲ್ಲಿ ತೊಡಗಿಕೊಂಡ ಜನಸಮೂಹವಾಗಬೇಕು. ವಾಸ್ತವ ಮತ್ತೊಮ್ಮೆ ಎದುರು ನಿಲ್ಲುತ್ತದೆ. ಯಾರಿಗೆ ಅಲ್ಲದಿದ್ದರೂ ಕರ್ನಾಟಕದ ಜನತೆಗೆ ವೈಚಾರಿಕ ಮಾರ್ಗದರ್ಶನ ನೀಡಬಹುದಾಗಿದ್ದ ಸಮುದಾಯವೊಂದು ಅಂತಹ ಅವಕಾಶವನ್ನು ಕಳೆದುಕೊಂಡಿದ್ದು ಮತ್ತು ಜವಾಬ್ದಾರಿ ಮರೆತದ್ದು ಚಾರಿತ್ರಿಕ ವ್ಯಂಗ್ಯ. ವಿಶಾಲವಾಗಬೇಕಾಗಿದ್ದದ್ದು ಮನುಷ್ಯನ ಸ್ವಾರ್ಥ ಮತ್ತು ಸ್ವಹಿತಾಸಕ್ತಿಯ ಸಂಚಿಗೆ ಬಲಿಯಾಗಿ ಸಂಕುಚಿತವಾದದ್ದಂತೂ ಮೂಲಚಳವಳಿಗೆ ಮತ್ತು ಹಿರಿಯರಿಗೆ ಬಗೆದ ದ್ರೋಹ.

ಹೀಗಿದ್ದರೂ, ಒಂದಿಷ್ಟು ಆಗ್ರಹ ಮತ್ತು ಪ್ರೀತಿಗೆ, ಈ ಸಮುದಾಯದ ಕೆಲವರನ್ನಾದರೂ ಅನುಸಂಧಾನದಲ್ಲಿ ತೊಡಗಿಸಿಕೊಳ್ಳಬಹುದಾದ ಅವಕಾಶಕ್ಕಾಗಿ ಈ ಸಮಾವೇಶಕ್ಕೆ ಆಹ್ವಾನಿತನಾಗಿ ಹೋಗಿದ್ದೆ. ವಚನ ಸಾಹಿತ್ಯದ ವಿದ್ವಾಂಸರಲ್ಲೊಬ್ಬರಾದ ರಮ್ಜಾನ್ ದರ್ಗಾ ಮುಖ್ಯ ಭಾಷಣಕಾರರಾಗಿ ಬಂದಿದ್ದರು. ನಾಡಿನ ಕೆಲವೇ ಪ್ರಗತಿಪರ ಮಠಾಧೀಶರರಲ್ಲಿ ಒಬ್ಬರಾದ ಚಿತ್ರದುರ್ಗದ ಶಿವಮೂರ್ತಿ ಶರಣರಿದ್ದರು. ಪ್ರಸ್ತಾಪಿಸಲು ಅನೇಕ ವಿಷಯಗಳಿದ್ದವು. ಕೊಟ್ಟಿರುವ ಅವಧಿಯಲ್ಲಿ ಈ ಎಲ್ಲಾ ವಿಚಾರಗಳನ್ನು ಪ್ರಸ್ತಾಪಿಸಬೇಕಾಗಿದ್ದಿದ್ದರಿಂದ ಒಂದು ಸಣ್ಣ ಲೇಖನವನ್ನು ಬರೆದುಕೊಳ್ಳೋಣ ಎಂದುಕೊಂಡಿದ್ದೆ. ಆದರೆ ಸಮಯಾಭಾವ ಮತ್ತು ಅದರ ಹಿಂದಿನ ದಿನಗಳ ಜೆಟ್ ಲ್ಯಾಗ್‌ನಿಂದಾಗಿ ಸಾಧ್ಯವಾಗಲಿಲ್ಲ. ಅದು ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತು. ಒಂದೇ ವಿಷಯದ ಮೇಲೆ ಯಾವುದೆ ಸಂಕೋಚ ಮತ್ತು ಪೊಲಿಟಿಕಲಿ ಕರೆಕ್ಟ್ ಆಗಿರಬೇಕಾದ ಹಿಂಜರಿಕೆಗಳಿಲ್ಲದೆ ಮಾತನಾಡಿದೆ. ಯಾರೊಬ್ಬರ ಜಾತಿಅಹಂ ಅನ್ನು ತೃಪ್ತಿಪಡಿಸಲು ನಾನಲ್ಲಿ ಹೋಗಿರಲಿಲ್ಲ. ಹಾಗೇನಾದರೂ ಆಗಿದ್ದಲ್ಲಿ ನನ್ನನ್ನೇ ನಾನು ಕ್ಷಮಿಸಿಕೊಳ್ಳುವ ಹಾಗಿರಲಿಲ್ಲ. ನನ್ನ ಇತರೆ ಪ್ರಗತಿಪರ ಮಿತ್ರರಿಗೆ ನನ್ನ ಬಗ್ಗೆ ನಾಚಿಕೆ ಮತ್ತು ಅಸಹ್ಯ ಅಗದ ಹಾಗೆ ನಡೆದುಕೊಂಡೆ ಎಂದು ಹೇಳಿದರೆ ಎಲ್ಲವನ್ನೂ ಹೇಳಿದಂತಾಗುತ್ತದೆ ಎಂದು ಭಾವಿಸುತ್ತೇನೆ. ಒಂದೆರಡು ಸಲ ಸಣ್ಣಪುಟ್ಟ ವಿವರಣೆ ಮತ್ತು ಪ್ರತಿರೋಧ ಬಂದರೂ, ಒಟ್ಟಾರೆಯಾಗಿ ಬಹಳಷ್ಟು ಜನ ನನ್ನ ಮಾತಿನ ಅರ್ಥ ಮತ್ತು ವಾಸ್ತವವನ್ನು ಗಮನಿಸಿದ್ದು ಗೊತ್ತಾಯಿತು. ಹಲವಾರು ಅಂತರ್ಜಾತಿ, ಅಂತರ್ಮತೀಯ, ಅಂತರ್ಜನಾಂಗ ಮದುವೆಗಳಾಗಿದ್ದ ಜನ ಅಲ್ಲಿದ್ದರು. ಅವರಿಗೆ ಅಪಥ್ಯವಾಗುವಂತಹುದೇನನ್ನೂ ನಾನು ಹೇಳಲಿಲ್ಲ. (ಸಾಧ್ಯವಾದಾಗ ಅದರ ಆಡಿಯೊ ಹಾಕುತ್ತೇನೆ.)

ಪ್ರಜಾವಾಣಿಯ ವರದಿಗಾರರಾಗಿದ್ದ ಮತ್ತು ಈಗ ಟೊರಾಂಟೋದಲ್ಲಿಯೇ ವಾಸವಾಗಿದ್ದು ಅಲ್ಲಿಂದಲೇ ಸ್ಥಳೀಯ ಭಾರತೀಯ ಸಮುದಾಯದವರಿಗಾಗಿ ಒಂದು ಪತ್ರಿಕೆಯನ್ನೂ ಹೊರತರುತ್ತಿರುವ ನಾಗರಾಜ್ ಈ ಸಮಾವೇಶದ ಆಯೋಜಕರಿಗೆ ಕೆಲವೊಂದು ಸಲಹೆಗಳನ್ನು ಕೊಟ್ಟರು. ಬಸವಾನುಯಾಯಿಗಳು ಎಂದು ಎದೆತಟ್ಟಿ ಹೇಳಿಕೊಳ್ಳುವವರಿಗೆ ಬಹಳ ಸೂಕ್ತವಾದ ಮತ್ತು ಅವರು ಮಾಡಲೇಬೇಕಾದ ಸಲಹೆಗಳವು. ಅದನ್ನು ಅನುಮೋದಿಸುತ್ತ ನಾನೂ ಒಂದು ಮಾತು ಸೇರಿಸಿದೆ: ಬಾಗಿಲು ತೆರೆದಿಡಿ; ಮುಚ್ಚಿಡಬೇಡಿ. ಈ ಸಮುದಾಯ ಸಂಸ್ಥೆಯ ಮುಂದಿನ ನಡೆಗಳು ಗಮನಿಸಲು ಅರ್ಹ.

ಎದೆಯ ಕೂಗನು ಮೀರಿ… ಬಿಡುಗಡೆಯ ಚಿತ್ರಗಳು


ಒಂದಷ್ಟು ಸಂವಾದ, ಚರ್ಚೆ, ತಮಾಷೆ ಮತ್ತು ಖುಷಿಯ ನಡುವೆ “ಎದೆಯ ಕೂಗನು ಮೀರಿ” ಕಳೆದ ಭಾನುವಾರ ಮೈಸೂರಿನಲ್ಲಿ ಬಿಡುಗಡೆಯಾಯಿತು. ಈ ಕಾರ್ಯಕ್ರಮ ನಡೆಸಲು ಸಹಾಯ ಮಾಡಿದ ಮತ್ತು ನಡೆಸಿಕೊಟ್ಟ ಗೆಳೆಯ ಪೃಥ್ವಿ, ಅವರ ಮನೆಯವರು, ಪೃಥ್ವಿಯ ಬಾಲ್ಯದ ಗೆಳೆಯ ರಾಮಚಂದ್ರ ಗಂಗ, ಅಸಿತ ಮತ್ತು ಪ್ರಭುಶಂಕರ್‌ರವರಿಗೆ ನನ್ನ ಕೃತಜ್ಞತೆಗಳು.

ಅಂದ ಹಾಗೆ ಪುಸ್ತಕದ ಮುಖಪುಟ ವಿನ್ಯಾಸ ಬಸವರಾಜುರವರದು. ಬೆಂಗಳೂರಿನಲ್ಲಿಯ ಅವರ ಕೆಲಸದ ಒತ್ತಡದಿಂದ ಅವರಿಗೆ ಬರಲಾಗಿರಲಿಲ್ಲ. ಅವರಿಗೂ ನನ್ನ ಧನ್ಯವಾದಗಳು ಮತ್ತು ಕೃತಜ್ಞತೆಗಳು.

ಕಾರ್ಯಕ್ರಮದ ಕೆಲವು ಚಿತ್ರಗಳು ಇಲ್ಲಿವೆ. ಇವನ್ನು ತೆಗೆದ ಸತೀಶ್ ಶಿಲೆ ಮತ್ತು ಮೃತ್ಯುಂಜಯರವರಿಗೆ ಮತ್ತೊಮ್ಮೆ ಧನ್ಯವಾದಗಳು.

ಇದು ಪ್ರಜಾವಾಣಿಯಲ್ಲಿ ಬಂದ ವರದಿ:

ಎದೆಯ ಕೂಗನು ಮೀರಿ…: ಮೈಸೂರಿನಲ್ಲಿ ಬಿಡುಗಡೆ

ಸ್ನೇಹಿತರೆ,

ಮೊದಲು ದಟ್ಸ್‌ಕನ್ನಡದಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡು, ನಂತರ ವಿಕ್ರಾಂತ ಕರ್ನಾಟಕದಲ್ಲೂ ಧಾರಾವಾಹಿಯಾಗಿ ಪ್ರಕಟವಾಗಿದ್ದ ಅನುವಾದಿತ ಕಾದಂಬರಿ “ಎದೆಯ ಕೂಗನು ಮೀರಿ…” ಇದೇ ಭಾನುವಾರ ಸಂಜೆ ೫ ಗಂಟೆಗೆ ಮೈಸೂರಿನಲ್ಲಿ ಪುಸ್ತಕರೂಪದಲ್ಲಿ ಬಿಡುಗಡೆಯಾಗಲಿದೆ. ಕಾದಂಬರಿಯ ಮೂಲಕರ್ತೃ ಅಸಿತ ಪ್ರಭುಶಂಕರ ಸಹ ಅಂದಿನ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದ ವಿವರಗಳು ಹೀಗಿವೆ:

ಪುಸ್ತಕ ಬಿಡುಗಡೆ ಮತ್ತು ಅಧ್ಯಕ್ಷತೆ:
ಡಾ. ಇ. ರತಿರಾವ್ (ನಿವೃತ್ತ ವಿಜ್ಞಾನಿ)

ಪುಸ್ತಕದ ಕುರಿತು:
ಡಾ. ಆರ್. ಇಂದಿರಾ (ಸಮಾಜಶಾಸ್ತ್ರಜ್ಞೆ)

ಉಪಸ್ಥಿತಿ:
ಅಸಿತ ಪ್ರಭುಶಂಕರ (ಕಾದಂಬರಿಯ ಮೂಲಕರ್ತೃ)
ರವಿ ಕೃಷ್ಣಾ ರೆಡ್ಡಿ (ಅನುವಾದಕ)

ಸ್ಥಳ: ಮನೆಯಂಗಳ, ಕಲಾಮಂದಿರ, ಮೈಸೂರು
ದಿನಾಂಕ: 30-5-2010, ಭಾನುವಾರ
ಸಮಯ: ಸಂಜೆ 5 ಗಂಟೆಗೆ

ಪ್ರಕಾಶಕರು: ಮೌಲ್ಯಾಗ್ರಹ ಪ್ರಕಾಶನ, ಬೆಂಗಳೂರು – 99

ಈ ಕಾರ್ಯಕ್ರಮಕ್ಕೆ ತಮಗೆಲ್ಲ ಸ್ವಾಗತ.

ಹೆಚ್ಚಿನ ವಿವರಗಳು ಬೇಕಿದ್ದಲ್ಲಿ, ದಯವಿಟ್ಟು ಸಂಪರ್ಕಿಸಿ: ೯೬೮೬೦೮೦೦೦೫ (ಸದ್ಯಕ್ಕೆ ಬೆಂಗಳೂರಿನಲ್ಲಿದ್ದೇನೆ; ಇದು ನನ್ನ ಮೊಬೈಲ್ ಸಂಖ್ಯೆ.)